ಅನ್ಯಮನಸ್ಕನಾಗಿ ಬೆಳಗಿನ ಝಾವ
ಗೇಟ್‌ ತೆರೆದು ಎಂದಿನಂತೆ ಒಳಬರುವಾಗ
ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ
ಸುಸ್ತಾದ ಹೆಂಡತಿ
ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ

ಫುಟ್‌ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು
ರಗ್ಗಿಗೆ ಪಾದ ಜುಲುಮೆಯಲ್ಲಿ ಗೊರಸಾಗುವುದು
ಮುಂಗಾಲು ಕೆರೆದು ಜಗಳಕ್ಕೆ ಹೊಂಚುವುದು
ಅಡುಗೆಮನೆಯಿಂದ ಕಾಫಿ ವಾಸನೆ ಬರುವುದು
ಕಾಂಪೌಂಡಿನ ಮೇಲೆ ಗೊತ್ತಿರುವ ಬೆಕ್ಕೇ ಕುತೂಹಲದಿಂದ
ಯಾರನ್ನೊ ಎಂಬಂತೆ ನನ್ನನ್ನು ನೋಡುವುದು
ಎತ್ತಣಿಂದೆತ್ತಿನ ಸಂಬಂಧ?
ಹೀಗೆ ಏನೇನೊ ಸುಖಾಸುಮ್ಮನೆ ಅಂದುಕೊಳ್ಳುವಾಗ

ಇನ್ನೇನೊ ಹೊಳೆದಂತಾಗಿ
ಮುಖತೊಳೆದು ಪೇಪರ್ ಓದುತ್ತ ಆರಾಮಾಗಿ ಕೂತವನು
ಓದುತ್ತ ಹೋದದ್ದನ್ನು ಓದುತ್ತಲೇ ಮರೆಯುತ್ತ
ಮೈಮುರಿಯುತ್ತ ಎದ್ದು ನಿಲ್ಲುವಾಗ
ಏನದು ಮತ್ತೆ ಹೊಳೆದಂತಾಗುತ್ತದೆ?
ಹೇಳಲು ಬಾಯಿ ಬರುವುದಿಲ್ಲ

ಮತ್ತೆ ಕೂತು ಹೀಗೆ ಬರೆದುಕೊಳ್ಳುವಾಗ
ಗೊತ್ತಿರುವ ಮಾತಿನಲ್ಲಿ
ಗೊತ್ತಾಗದಂತೆ ಹೊಳೆದದ್ದನ್ನು
ಹಿಮ್ಮುಖಿಯಾಗಿ ಹೊಳೆಯಿಸಿಕೊಳ್ಳಲೆಂದು
ಈ ಮಾತುಗಳು.