ಕೌರವ : ಹೇ ಸ್ವಾಮಿ. ನಾಳೆ ದಿವಸ ಸಂಹರಿಸದಿದ್ದರೆ ಆ ಖೂಳನಾದ ಪಾರ್ಥನು, ಅಗ್ನಿಯಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಳ್ಳುತ್ತೇನೆಂದು ಭಾಷೆಯನ್ನು ಮಾಡಿರುತ್ತಾನಲ್ಲಾ. ಸೈಂಧವನು ಭೂಮಿಯಲ್ಲಿ ಬಾಳುವುದು ಹೇಗೆ ಅವನು ಉಳಿಯಲುಪಾಯವನ್ನು ಮಾಡಿ ಕಾಪಾಡಬೇಕೂ ಸ್ವಾಮೀ॥

ದ್ರೋಣ : ಹೇ ಕೌರವ ಭೂಪಾಲ ಹೇಳುತ್ತೇನೆ ಕೇಳು.

ಪದ

ಬಿಡು ಬಿಡು ಕೇಳ್ ನಾಳೆ ಪದ್ಮವ್ಯೂಹವ ರಚಿಸಿ
ನಾ ಬಿಡದೆ ಕಾಯುವೆ ಸೈಂಧವನ ಮೃಢನು
ಬಂದರು ಬಿಡೆ ಲಾಲಿಸು ಕಡೆಯ ಮಾತಿದು ಕೌರವಾ॥

ದ್ರೋಣ : ಅಯ್ಯ ಕೌರವ, ಯಿಷ್ಟಕ್ಕೇನೆ ಹೀಗೆ ಭೀತಿಪಡಬಹುದೇ ಬಿಡು. ಬಿಡು ನಾಳೆ ಪದ್ಮಜ ವ್ಯೂಹವನ್ನು ರಚಿಸಿ ಆ ಸೈಂಧವನನ್ನು ಕಾಯುತ್ತೇನೆ. ಮೃಢನು ಬಂದರೂ ಅರ್ಜುನನ ಕೈಗೆ ಕೊಡೆನೂ. ಯಿದು ಕಡೆಯ ಮಾತೆಂದು ತಿಳಿ ತಡೆಯದೆ ಅರಮನೆಗೆ ನಡೆ॥

ಭಾಮಿನಿ

ಅರಸ ಕೇಳಿಂತೆಂದು ಕೌರವ ಅರಸನಂ ಸಂತೈಸಿ ನುಡಿದನು
ಧುರಕೆ ಬರಲು ಸಮಸ್ತ ಬಲ ಷಡು ರಥಾಧಿಗಳೂ
ಮರೆದು ಕಳೆಯೀ ಅಂಜಿಕೆಯೆನೆ, ಅರಸುತ್ತಲು ಸಭೆಯಂ
ಲಕ್ಷ್ಮೀವರನು ಪಾರ್ಥಗರುಹಿದನು ದ್ರೋಣನ ಪರಾಕ್ರಮವಾ॥

ದ್ರೋಣ : ಅಯ್ಯ ಕೌರವ ಭೂಪಾಲ. ನಾಳೆ ಯುದ್ಧಕ್ಕೆ ನಮ್ಮ ಬಲವೆಲ್ಲಾ ಸಿದ್ಧವಾಗಿರಲಿ. ಈ ಹೆದರಿಕೆಯನ್ನು ಬಿಟ್ಟು ನಡೆ॥

ಪದ

ಅರುಹುವೆ ಕೇಳೈ ತರಳ ವರದ ಕೌರವ ನೃಪಗೇ
ಭರದಿಂದ ಕಲಶಜ ಧುರದಿ ವ್ಯೂಹವ ಕಟ್ಟಿ
ಹರನು ಬಂದರು ಕೂಡೆ ನೃಪ ಸೈಂಧವನಾ॥

ಕೃಷ್ಣ : ಅಯ್ಯ ಕಿರೀಟಿ, ದ್ರೋಣಾಚಾರ್ಯನು ತರಳತನದಿಂದ ಕೌರವನೊಡನೆ ನಾಳೆ ಯುದ್ಧದಲ್ಲಿ ಪದ್ಮಜ ವ್ಯೂಹವನ್ನು ರಚಿಸಿ, ಮೃಢನು ಬಂದರೂ ಕೊಡದೆ ಸೈಂಧವನನ್ನು ಕಾದುಕೊಡುತ್ತೇನೆಂದು ಹೇಳಿರುತ್ತಾರೆ, ಆದ್ದರಿಂದ ನಾಳೆ ಯುದ್ಧವು ಅಸದಳವಲ್ಲವೇ ಫಲುಗುಣ

ಅರ್ಜುನ : ಸ್ವಾಮಿ ಅರಿಕೆ ಮಾಡಿಕೊಳ್ಳುವೆ ಲಾಲಿಸಿ॥

ಭಾಮಿನಿ

ಮುರಹರನ ನುಡಿಗೇಳಿ ಫಲುಗುಣನರುಹಿದನು ನಿನ್ನೊಲುಮೆಯಿರುತಿರೆ
ಧುರದಿ ಬಗೆವನೆ ದ್ರೋಣಾದಿ ಪದ್ಮವ್ಯೂಹಗಳಾ॥
ಪರಿಕಿಸೆನು ಆಯುಧದ ಶಾಲೆಗೆ ನರನು ಬಂದರ್ಚಿಸಿದನಾ
ಶಂಕರನ ಪಾಶುಪತಾದಿ ಶರಗಳ ಉಗ್ರಮಾತ್ರದಲೀ॥

ಅರ್ಜುನ : ಸ್ವಾಮಿ ಭಾವಯ್ಯ, ನಿನ್ನ ಕೃಪಾ ಕಟಾಕ್ಷವು ನನ್ನ ಮೇಲೆ ಸಂಪೂರ್ಣವಾಗಿದ್ದರೆ, ದ್ರೋಣಾಚಾರ‌್ಯನ ವ್ಯೂಹಗಳನ್ನು ಲಕ್ಷ್ಯ ಮಾಡೆನು. ಆಯುಧಶಾಲೆಗೆ ಹೋಗಿ ಪೂಜೆಯನ್ನು ಮಾಡಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬರುತ್ತೇನೆ.

ಭಾಮಿನಿ

ನೆರೆವ ನಾನಾ ವಾದ್ಯಘೋಷದಿ ಧುರಕೆ ಸನ್ನಹವಾಗುತಿರಲಾ
ಶರದ ಪಂಡಿತ ಬಲ್ಲಿದನಿತ್ತ ಪದ್ಮವ್ಯೂಹವನೂ.

ದ್ರೋಣ : ಆಹಾ ಕೌರವರಾಜನೆ, ನನ್ನಿಂದ ರಚಿಸಲ್ಪಟ್ಟಿರುವ ಪದ್ಮವ್ಯೂಹವನ್ನು ನಿನ್ನಕ್ಷಿದ್ವಯಗಳಿಂದ ಯೀಕ್ಷಿಸು. ಪಕ್ಷಿವಾಹನನಾದರೂ ಹೋಗಬಲ್ಲನೇನೋ ನೋಡು॥

ಕೌರವ : ಸ್ವಾಮಿ ಆಚಾರ್ಯರೆ. ತಮ್ಮ ಕೃಪೆಯು ನನ್ನ ಮೇಲೆ ಸಂಪೂರ್ಣವಾಗಿ ಯಿರಲಿಕ್ಕಾಗಿ ನನಗೆ ಬಂದಿರುವ ಭಯವೇನು ಸ್ವಾಮಿ ಮತ್ತೇನು ಅಪ್ಪಣೆಯಾಗಲಿ.

ದ್ರೋಣ : ಅಯ್ಯ ಕುರುಪತಿಯೆ ಹೇಳುವೆನು ಲಾಲಿಸು

ವಾರ್ಧಕ

ಸೋಮದತ್ತ ಸುದತ್ತ ಭೂರಿಶ್ರವಾದಿಗಳ ಕ್ಷೇಮ ಧೂರ್ತ
ಶಲ್ಯ ನೃಪ ಕೃತಾಯುಧ ಭೀಮ ವಿಕ್ರಮ
ದೀರ್ಘ ಬಾಹು ವೃಕ್ಷಸೇನ ಕೃಪ ಮುಖ್ಯರಾದ
ಆ ಪದ್ಮಸೂತ ವ್ಯೂಹದೊಳ್ ತಾ ಮುದದಿ ನೆಲಸಿ
ತನ್ಮಧ್ಯದೋಳ್ ಸಿಂಧು ಭೂಪತಿಯ
ಕಾಯ್ದುಕೊಂಡಿರ್ಪನೇನೆಂಬೆನದ್ಭುತವನೂ॥

ದ್ರೋಣ : ಅಯ್ಯ ಕೌರವ ಭೂಪತಿ ಪದ್ಮವ್ಯೂಹಕ್ಕೆ ಸೋಮದತ್ತ, ಸುದತ್ತ ಭೂರಿಶ್ರವ, ಶಲ್ಯನೇ ಮೊದಲಾದ ಅತಿರಥರನ್ನು ಒಲಿದು ಅದರ ಮಧ್ಯದಲ್ಲಿ ಪರಾಕ್ರಮಶಾಲಿಯಾದ ಸೈಂಧವ ರಾಜನನ್ನು ಯಿಟ್ಟುಕೊಂಡು ನಾನು ದ್ವಾರದಲ್ಲಿ ಕಾಯ್ದಿರುತ್ತೇನೆ ಬಲ್ಲೆಯಾ ಮತ್ತೂ ಹೇಳುವೆ॥

ಭಾಮಿನಿ

ಭೋರಿಡಲು ಬಹುವಾದ್ಯತತಿ ರಣಧೀರ ದ್ರೋಣನು
ಶಕಟವ್ಯೂಹ ದ್ವಾರದಲ್ಲಿ ಮಿಗೆ ಬಂದು ನಿಂದನೂ
ನೀತಿಸುತ ಚಾರಕನ ಅಟ್ಟಿದನು ಪಾರ್ಥನಿದ್ದೆಡೆಗೇ॥

ದ್ರೋಣ : ಅಯ್ಯ ಕೌರವ ಭೂಪತಿ, ವ್ಯೂಹವನ್ನು ಒಲಿದು ಷಡುರಥ ಮಹಾರಥರೊಂದಿಗೆ ಬಂಧಿಸಿ ನಿಂತಿದ್ದಾಯಿತಲ್ಲವೇ. ಶತೃಗಳಾದ ಪಾಂಡವರ ಬಳಿಗೆ ಯುದ್ಧಕ್ಕೆ ಬರುವಂತೆ ಚಾರಕನನ್ನು ಕಳುಹಿಸುವಂಥವನಾಗು

ಕೌರವ : ಎಲೈ ಚಾರಕ ಪಾಂಡವರ ಪಾಳಯಕ್ಕೆ ಹೋಗಿ ಆ ಮೂರ್ಖನಾದ ಅರ್ಜುನನನ್ನು ರಣಾಗ್ರಕ್ಕೆ ಕರೆದುಕೊಂಡು ಬಾ॥

ಚಾರ : ಅಗಡ್ ದೀನ್ ಸಲಾಂ ತಗೊಳಿ॥

ಅರ್ಜುನ : ಎಲಾ ಚಾರಕ ನೀನು ಧಾರು? ಎಲ್ಲಿಂದ ಬಂದೆ ಹೇಳುವಂಥವನಾಗು॥

ಚಾರ : ನಾನು ಕೌರವ ರಾಜನ ಹತ್ತಿರದಲ್ಲಿರತಕ್ಕ ಚಾರಕ, ಕುರುಕ್ಷೇತ್ರದಿಂದ ಬಂದೆ ತಮ್ಮನ್ನು ರಣಾಗ್ರಕ್ಕೆ ಕರೆಯುವುದ್ದಿಶ್ಯ.

ಅರ್ಜುನ : ಹೇ ಸ್ವಾಮಿ ಭಾವಯ್ಯ, ಧನುರ್ಬಾಣಗಳೊಡನೆ ಯೀ ನಮ್ಮ ಮಣಿಖಚಿತವಾದ ರಥಕ್ಕೆ ಕೂರುವೆ, ಧ್ವಜದಲ್ಲಿರುವ ಪ್ರಾಣದೇವರಿಗೂ ವಂದಿಸಿದೆನೂ, ಅಪ್ಪಣೆಯಾದರೆ ರಥಕ್ಕೆ ಕೂರುತ್ತೇನೆ.

ಕೃಷ್ಣ : ಅಯ್ಯ ಕಿರೀಟಿ ನಿನಗೆ ಶುಭಮುಹೂರ್ತವಾಗಿದೆ, ರಥಾರೋಹಣನಾಗು॥

ಭಾಮಿನಿ

ನಡೆದನು ಪಾರ್ಥ ಧುರಕೆ ಯೆಡ ಬಲದೊಳು
ತೇಜಿಯ ಗಡಣದೊಳು ನಡೆದುದು ಭರದೋಳ್‌
ಗುರುಗಳು ತಡೆದರು ರುದ್ರ ಕೋಪದಲೀ॥

ಅರ್ಜುನ : ಸ್ವಾಮಿ ಭಾವಯ್ಯ ನಮ್ಮ ಚತುರಂಗ ಬಲದೊಡನೆ ರಣಭೂಮಿಗೆ ಬಂದದ್ದಾಯಿತು. ವ್ಯೂಹದ ದ್ವಾರ ಬಾಗಿಲಲ್ಲಿ ದ್ರೋಣಾಚಾರ್ಯಯಿರುತ್ತಾರೆ, ಯಿನ್ನೊಂದು ಕಡೆ ಕೌರವನ ತಮ್ಮನಾದ, ದುಶ್ಶಾಸನ ಶಲ್ಯ ಮುಂತಾದ ಪಟುಭಟರು ನಿಂತಿರುತ್ತಾರೆ, ಹ್ಯಾಗೆ ಮಾಡುವುದು ಭಾವಯ್ಯ.

ಕೃಷ್ಣ : ಅಯ್ಯ ಸವ್ಯಸಾಚಿ ಗುರುಗಳು ಹೊರ್ತು ಮತ್ಯಾರನ್ನಾದರೂ ನಾವು ಸುಲಭವಾಗಿ ಗೆಲ್ಲಬಹುದು ಆದ್ದರಿಂದ ಗುರುಗಳ ಸಮೂಹಕ್ಕೆ ರಥವನ್ನು ಬಿಡುತ್ತೇನೆ ನಡೆ.

ಪದರಾಗರೂಪಕ

ನರನು ಬರುವ ಭರವ ಕಂಡು ದ್ರೋಣನಾಕ್ಷಣಾ
ತೆರಳಿ ನಿಂದು ತಡೆದು ಸರಳಮಳೆಯ ಕರೆದನೂ॥

ದ್ರೋಣ : ಎಲೈ ಅರ್ಜುನನೇ, ನಿನ್ನ ಭರವನ್ನು ನೋಡಿದರೆ ಸೈಂಧವನನ್ನು ಹುಡುಕಿಕೊಂಡು ಹೋಗುವಂತೆ ತೋರುತ್ತೆ. ಅವನನ್ನು ನೀನು ಯೆಂದಿಗೂ ಕಾಣಲಾರೆ. ನಾನು ಮೊದಲುಗೊಂಡು ಅನೇಕ ಮಾರ್ಬಲವನ್ನು ಗೆದ್ದು ಹೋಗುವುದು ಸಾಧ್ಯವಿಲ್ಲ ಕಂಡೆಯೋ. ಯಿಕೋ ತೀವ್ರವಾದ ಶರಗಳನ್ನು ಬಿಟ್ಟು ಯಿದ್ದೇನೆ, ತರಹರಿಸಿಕೊಳ್ಳುವನಾಗೂ.

ಪದ

ಬರುವ ಶರವ ನರನು ಕಂಡು ಆ ಕ್ಷಣಾ ಕೆಡಹುಗೊಡೆದು
ನೂರು ಶರವ ಬಿಟ್ಟ ಫಲುಗುಣಾ॥

ಅರ್ಜುನ : ಸ್ವಾಮಿ ಗುರುಗಳೇ, ನಿಮ್ಮಿಂದ ಬಿಡಲ್ಪಟ್ಟ ಶರಗಳನ್ನು ಕಡಿದು ಕ್ರೂರವಾದ ಬಾಣಗಳನ್ನು ಬಿಟ್ಟಿದ್ದೇನೆ, ತರಹರಿಸಿಕೊಳ್ಳಿ.

ದ್ರೋಣ : ಎಲಾ ಫಲುಗುಣ, ಯೆಲ್ಲಿಗೆ ನೀನೂ ಮುರಿದು ನುಗ್ಗಿ ಹೋಗುತ್ತೀಯ, ನನ್ನಲ್ಲಿ ಯುದ್ದವನ್ನು ಕೊಟ್ಟು ಮುಂದಕ್ಕೆ ಹೋಗಲಾರೆ ಹೇಡಿ.

ಅರ್ಜುನ : ಆಹಾ ಪರಮಾತ್ಮನೆ, ಹೇ ಭಾವಯ್ಯ ಈ ಭ್ರಷ್ಟನಾದ ದ್ರೋಣನು ವನಜ ವ್ಯೂಹವನ್ನು ರಚಿಸಿಕೊಂಡು ಮುಂದಕ್ಕೆ ಹೋಗುವುದಕ್ಕೆ ಬಿಡುವುದಿಲ್ಲ. ಹ್ಯಾಗೆ ಮಾಡಲೈ ಮಾಧವಾ ಮಧೂಸೂದನ॥

ಪದ

ಎಲವೋ ಪಾರ್ಥನೆ ಕೇಳು ನನಗೆ ದೈವ ಬಲವು
ಸಂಗಟಿಸಿದೆ ಎನುತ ಮನದಲಿ ಗರ್ವಿಸದಿರು ನಾಳೆ
ಸೈಂಧವನ ಸಂಗರದೊಳಗೆ ಸೀಳುವೆನೆನ್ನುವುದು
ದಿಟವೆ ಮನದುಬ್ಯಾಳುತನವಾ ತೋರಿಸು॥

ದ್ರೋಣ : ಎಲಾ ಅರ್ಜುನಾ, ನಿನಗೆ ದೈವ ಬಲವಿದೆಯೆಂದು ಗರ್ವದಿಂದ ನುಡಿಯಬೇಡ ಕಂಡ್ಯಾ. ಎಲಾ ಮೂರ್ಖ ಸೈಂಧವನನ್ನು ಸಂಹಾರ ಮಾಡುತ್ತೇನೆಂಬ ಮಾತು ದಿಟವೆ, ಹೇ ಮರುಳೆ ಹೇಳುತ್ತೇನೆ ಕೇಳು.

ಪದ

ಆಳಿ ಕೂಡಿದೆ ಚೂಣೆಯೊಳದರೊಂದಾಳ ಗೆಲಿದರೆ ಗೆಲವು ನೀನೋಡು॥

ದ್ರೋಣ : ಎಲಾ ಅರ್ಜುನ, ಸೈಂಧವನ ಸಂಹಾರ ಮಾಡುವೆನೆಂಬ ಮಾತಂತಿರಲಿ. ಈ ಸಮೂಹದಲ್ಲಿ ಒಂದು ಪ್ರಾಣಿಯನ್ನಾದರೂ ನೀನು ಸಂಹಾರ ಮಾಡಿದರೆ ಸೈಂಧವನ ಸಂಹಾರ ಮಾಡಿದಂತಾಗುತ್ತೆ. ಎಲಾ ಅರ್ಜುನ ನಿನ್ನ ಸಾಹಸವನ್ನು ನೋಡುವೆನು ಎದುರಾಗೂ॥

ಪದ

ಗುರುವಿನಸ್ತ್ರ ಸಂತತಿಯಾ ಸಂಹರಿಸುತ ಮರಳಿ
ಕಾಣಿಕೆಯ ಮಾಡಿ ಪೇಳಿದ ಸುರಸುಪತಾ॥

ಅರ್ಜುನ : ಎಲಾ ದ್ರೋಣ, ಗುರುದೋಷವು ಪ್ರಾಪ್ತವಾಗುವುದೆಂದು ಕೈ ತಡೆದಿದ್ದರೆ ಹೆಮ್ಮೆ ಪರಾಕ್ರಮದ ನುಡಿಗಳನ್ನು ನುಡಿಯುತ್ತೀಯ. ಛೇ ನತದೃಷ್ಟ, ನೀನು ಬಿಟ್ಟ ಬಾಣಗಳನ್ನು ಮಧ್ಯ ಮಾರ್ಗದಲ್ಲಿಯೇ ಖಂಡನೆಯಂ ಮಾಡಿ ಗುರುವಾದ ನಿನಗೆ ಪುನಃ ಬಾಣವನ್ನು ಹೂಡಿ ಕಾಣಿಕೆಯನ್ನು ನೀಡಿದ್ದೇನೆ ನೋಡುವಂಥವನಾಗೆಲಾ ದ್ರೋಣ॥

ಪದ

ಅಂಬಿಗಿಂಬಾನು ಕೊಡುವೇ ನೀವ್ ಗುರುಗಳೂ ಡೊಂಬಿನ ಮಾತ್ಯಾಕೆ
ಬಂದೆ ಸೈಂಧವನೆಂಬ ಖೂಳನ ತೋರಿಸೆಂದನಾ ಫಲುಗುಣನೂ॥

ಅರ್ಜುನ : ಎಲಾ ದ್ರೋಣ, ನೀನು ಬಿಟ್ಟ ಬಾಣಗಳಿಗೆಲ್ಲಾ ಸರಿಯಾದ ಬಾಣವನ್ನು ಹೂಡಿ ನಿನ್ನನ್ನು ಜೈಸದೆ ಯೆಂದಿಗೂ ಬಿಡಲಿಕ್ಕಿಲ್ಲ. ಸುಮ್ಮನೆ ಯಾತಕ್ಕೆ ಸಾಹಸವನ್ನು ಮಾಡುತ್ತೀಯ. ಜಾಗ್ರತೆಯಾಗಿ ಸೈಂಧವನನ್ನು ತೋರಿಸುವಂಥವನಾಗೆಲಾ ದ್ರೋಣ॥

ಪದ

ಮರುಳೆ ಕೇಳೆಮ್ಮ ಗೆಲಿದ ಮೇಲೆ ಆತನ ಶಿರವ ಕೊಡುವೆ
ಎನುತ ಗಾಂಡೀವವನು ಕಡಿದ ದ್ರೋಣನೂ॥

ದ್ರೋಣ : ಛೇ, ದುರುಳ ಸೈಂಧವನ ಸುದ್ಧಿ ಯಾತಕ್ಕೆ. ನನ್ನನ್ನು ಗೆದ್ದ ನಂತರ ಸೈಂಧವನು ದೊರೆಯುವನೇ ಹೊರ್ತು ಅಲ್ಲಿಯವರೆಗೆ ಆತನ ತಂಟೆ ನಿನಗ್ಯಾತಕ್ಕೆ. ನೀನು ಬಿಟ್ಟಿರತಕ್ಕ ಅಸ್ತ್ರವನ್ನು ಮಾರ್ಗ ಮಧ್ಯದಲ್ಲಿ ಖಂಡನೆಯಂ ಮಾಡಿದ್ದೇನೆ, ನಿನ್ನ ಸಾಹಸವನ್ನು ನೋಡುತ್ತೇನೆ ಎದುರಾಗೂ॥

ಭಾಮಿನಿ

ನರನು ಮಂತ್ರಾಸ್ತ್ರಗಳ ತೊಡುತಿರಲರಿತು ಅಚ್ಯುತನು ಪೇಳಿದನು
ಫಡ ಮರುಳೆ ಗುರುವನು ಗೆಲುವರುಂಟೆ ಬೇಡ
ಪದಕೆರಗಿ ಧುರವ ಜೈಸುವೆನೆನಲು ಧನುಶರವಿರಿಸಿ ರಥದಿಂದಿಳಿದು
ಶಿರವ ಚಾಚುತಲಾ ಧನಂಜಯ ನುಡಿದ ದ್ರೋಣಂಗೆ॥

ಕೃಷ್ಣ : ಆಹಾ ಎಲೈ ಫಲುಗುಣ, ಗುರುಗಳಾದ ದ್ರೋಣಾಚಾರ್ಯರನ್ನು ರಣಾಗ್ರದಲ್ಲಿ ಗೆಲ್ಲುವುದುಂಟೆ. ಜಾಗ್ರತೆಯಿಂದ ರಥದಿಂದಿಳಿದು ಗುರುಗಳ ಪಾದಕ್ಕೆ ಸಾಷ್ಟಾಂಗ ವಂದನೆಯಂ ಮಾಡಿ ಬೇಡಿಕೊಂಡರೆ ನಿನ್ನ ಕಾರ್ಯವು ಕೈಗೂಡುವುದು ಪಾರ್ಥ॥

ಭಾಮಿನಿ

ತಿಳಿಯಲೆ ನಿಮ್ಮಯ್ವರ ಜೀವನ ನಿಮ್ಮಿಂದಲೆ
ನಿನ್ನಣುಗರನ್ನು ಸಲಹಿ ಕೊಂಡರೂ ಲೇಸು
ಕೊಂದರು ಲೇಸು ಎಂದು ಫಲಗುಣನರುಹಿದನೂ

ಅರ್ಜುನ : ಹೇ ಸ್ವಾಮಿ ದ್ರೋಣಾಚಾರ್ಯರೆ, ಯಿಕ್ಕೋ ತಮ್ಮ ಪಾದಕ್ಕೆ ವಂದನೆಯಂ ಮಾಡಿರುವೆನೂ ಹೇ ದೇವ, ನಮ್ಮಯ್ವರ ಜೀವನ ಯಿಂದಾಗಬೇಕಾದ ಕಾರಣ ಮೆಚ್ಚು ಕಾಯ್ವವರೂ ನೀವೇ ಕೊಲ್ಲತಕ್ಕವರು ನೀವೇ. ಆದ ಕಾರಣ ನಮ್ಮನ್ನು ಕಾಪಾಡಬೇಕೈ ದೇವ ಮಹಾನುಭಾವ.

ಪದ

ಘಾಸಿಯಾದೆವು ಜೂಜಿನಿಂದ ಅರಣ್ಯದಿ ವಾಸ ಮಾಡಿದೆವೂ
ಭಾಷೆಯಿದೊಂದ ಕಾಯಬೇಕೆನುತಲಿ ದೇವೇಂದ್ರಸುತ ನುಡಿದಾ॥

ಅರ್ಜುನ : ಸ್ವಾಮಿ ದ್ರೋಣಾಚಾರ‌್ಯರೆ, ದುರುಳನಾದ ಕೌರವನು ಮೋಸದಿಂದ ಜೂಜನ್ನಾಡಿ ಯಮ್ಮನ್ನು ವನವಾಸ ಮಾಡಬೇಕೆಂದು, ಯಮ್ಮ ಸೀಮೆ ಭೂಮಿ ಗ್ರಾಮ ಜೂಜಿನಲ್ಲಿ ಗೆದ್ದುಕೊಂಡು ನಮ್ಮನ್ನು ಅರಣ್ಯವಾಸಿಗಳಾಗಿ ತಿರುಗಿಸಿದಾರಭ್ಯದಿಂದಲೂ ಬಹಳ ಶ್ರಮಪಟ್ಟು ಇರುವುದನ್ನು, ತಾವೇ ಕಣ್ಣಾರೆ ನೋಡಿ ತರಳರಾದ ಯಮ್ಮ ಮೇಲೆ ನೀವೇ ಯುದ್ಧಕ್ಕೆ ನಿಂತರೆ, ನಾವು ಬದುಕಬಲ್ಲವೆ ಮಹಾನುಭಾವನೆ ದಾರಿಯನ್ನು ಬಿಟ್ಟು ಕಾಪಾಡಬೇಕೈ ಶಿವನೇ॥

ಪದ

ನೀವು ಹೂಣೆಗರಾಗಿ ಕಾಯ್ದಿರ್ದೊಡೆ ನಾವು ನಿಲ್ಲುವೆವೆ ಧುರಕೇ
ಅರುಹುತ ಭಯವನೆನುತಲಾ ದ್ರೋಣನು ದೇವೇಂದ್ರ ಸುತಗಿಂತೆಂದಾ॥

ಅರ್ಜುನ : ಸ್ವಾಮಿ ದ್ರೋಣಾಚಾರ‌್ಯರೆ, ನೀವು ನೋಡಿದ ಹಾಗೆ, ಆ ದುರುಳನಾದ ಕೌರವ ನಮ್ಮಯ್ವರನ್ನು ಅರಗಿನ ಮನೆಯಲ್ಲಿ ಕೂಡಿ ಸುಟ್ಟು ಹೋಗಲಿಯೆಂದು ಬೆಂಕಿಯನ್ನು ಹಚ್ಚುವಂಥವನಾದ ಇದೂ ಅಲ್ಲದೆ ನೀವೇ ಯಮ್ಮ ಮೇಲೆ ಹೂಣಿಗರಾಗಿ ನಿಂತರೆ ನಾವು ತಡೆದುಕೊಳ್ಳುವುದಕ್ಕೆ ಸಮರ್ಥರೇ ದೇವ. ವೈರಿಯಾದ ಸೈಂಧವನ ಸಂಹಾರ ಮಾಡಲೋಸುಗವಾಗಿ ದಾರಿಯಂ ಬಿಟ್ಟು ಕಾಪಾಡಬೇಕೈ ದೇವ॥

ದ್ರೋಣ : ಆಹಾ ಮುಂದರಿಯದ ವ್ಯಸನಕ್ಕೆ ಸಿಕ್ಕಿ ನರಳಬೇಕಾಯಿತಲ್ಲಾ ಹ್ಯಾಂಗೆ ಮಾಡಲಿ. ಅರ್ಜುನನಿಗೆ ಈ ವೇಳೆಯಲ್ಲಿ ದಾರಿಯಂ ಬಿಟ್ಟರೆ ಅನ್ನವ ತಿಂದು ಅರಸನಿಗೆ ಎರಡು ಬಗೆದ ಹಾಗೆ ಹಾಗುತ್ತೆ, ಈತನಿಗೆ ದಾರಿಯಂ ಬಿಡದೆ ಹೋದರೆ ಹಿಂದೆ ಆ ದ್ರುಪದರಾಯನನ್ನು ತೆಗೆದುಕೊಂಡು ಬಂದು ಯೆನ್ನ ಮಂಚದ ಕಾಲಿಗೆ ಕಟ್ಟಿಸುತ್ತೇನೆಂದು ನಾನು ಶಪಥ ಮಾಡಿದ್ದೆನು ಆ ಕಾಲದಲ್ಲಿ ಈ ಕೌರವರೇ ಮೊದಲಾಗಿ ದ್ರುಪದನ ಹಿಡಿತರಲೋಸುಗ ಹೋಗಿ ಸೋತು ಮುಖಹೀನರಾಗಿ ಬರುವಂಥವರಾದರು, ಆ ಕಾಲದಲ್ಲಿ ದ್ರುಪದನ ಹಿಡಿತಂದು ಯೆಂಮ ಮಂಚದ ಕಾಲಿಗೆ ಕಟ್ಟಿಸಿದ ಪಂಥವು ಪೂರ್ತಿಗೊಳಿಸಿ ದವನೆ ಇವನಾದ್ದರಿಂದ, ಈ ಫಲುಗುಣನೆ ಯೆನಗೆ ಜೇಷ್ಟಪುತ್ರನೆಂದು ಭಾವಿಸಬೇಕಾಗಿರುವುದು. ಈ ಕಾಲದಲ್ಲಿ ಇವನಿಗೆ ದಾರಿ ಬಿಟ್ಟು ಕಾಪಾಡುವ ಭಾರ ಯಂನದೆ ಆಗಿರುವುದು. ಮುಂದಣ ಪ್ರಯತ್ನವನ್ನು ಮಾಡುತ್ತೇನೆ.

ಭಾಮಿನಿ

ಕಂದ ಅಶ್ವತ್ಥಾಮ ಪುಸಿ ನೀನೆ ಮೋಹದ ಕಂದ ಯೆನಗೆ ದಿಟವು ಇಂದುಮುನಿಯು

ದ್ರೋಣ : ಅಯ್ಯ ಫಲುಗುಣ, ಎನಗೆ ಜೇಷ್ಠ ಪುತ್ರನೆ ನೀನಾಗಿರುವುದರಿಂದ, ದಾರಿಯಂನು ಬಿಟ್ಟಿದ್ದೇನಲ್ಲದೆ ನಿನ್ನ ಕಾರ‌್ಯವು ಜಯವಾಗಲೆಂದು ಮನಃಪೂರ್ವಕವಾಗಿ ಆಶೀರ್ವಾದವನ್ನು ಮಾಡಿದ್ದೇನೆ ಕಂಡೆಯಾ, ಬಾಳೆಯ ವನಕೆ ಆನೆಯು ಹೊಕ್ಕಂತೆ ವೈರಿಗಳು ಸಂಹಾರವಾಗುವ ಕಾರಣ ಜಾಗ್ರತೆಯಾಗಿ ಹೋಗಿ, ನಿಂನ ಕಾರ‌್ಯವಂ ನೆರವೇರಿಸಿಕೊಳ್ಳುವಂಥವನಾಗಯ್ಯ ಫಲುಗುಣ॥

ಅರ್ಜುನ : ಹೇ ಮಹಾನುಭಾವನೆ, ಇಕೋ ನಿಂನ ಪಾದಕ್ಕೆ ವಂದನೆಯಂ ಮಾಡಿರುವೆನೂ. ಹೋಗಿ ಬರುವೆನೈ ದೇವ ಕರುಣ ಪ್ರಭಾವ॥

ದ್ರೋಣ : ನಿಂನ ಕಾರ‌್ಯವು ಜಯವಾಗಲಿ ಹೋಗಿ ಬಾರಯ್ಯ ಫಲುಗುಣ ॥

ಪದ

ತಂಮ ಬಾರಯ್ಯ ತವಕದಿಂದಲಿ ಒಮ್ಮೆ ಕೇಳಿದೂ ವದಗಿ ಮಾಳ್ಪುದೂ॥
ಹೆಂಮೆ ಇಂದಲಿ ಹಗೆಯ ಕೊಲ್ವೆನೆಂದೂ ರಣಕೆ ಹೋಗಿಪ ಫಲುಗುಣನೂ॥

ಧರ‌್ಮರಾಯ : ತಂಮನಾದ ಭೀಮಸೇನನೆ, ಅನುಜನಾದ ಫಲುಗುಣನು ಆ ಸೈಂಧವನನ್ನು ಸಂಹಾರ ಮಾಡದೆ ಹೋದರೆ ಅಗ್ನಿ ಪ್ರವೇಶವಾಗುತ್ತೇನೆಂದು ಹೆಮ್ಮೆಯ ನುಡಿಗಳನ್ನು ನುಡಿದಿರುವನಾದ ಕಾರಣ, ರಣಾಗ್ರಕ್ಕೆ ಹೋಗಿ ರಣಾಗ್ರದಲ್ಲಿ ಜಯ ಹೊಂದಿದನೆ ಅಥವಾ ಅಪಜಯ ಹೊಂದಿದನೊ. ಅನುಜ ಯಂನ ಮನಸ್ಸಿನಲ್ಲಿ ಬಹಳ ಸಂಕಟವಾಗುತ್ತಿರುವುದು. ಆದ ಕಾರಣ ಜಾಗ್ರತೆಯಾಗಿ ಹೋಗಿ ಅನುಜನ ಕ್ಷೇಮ ಲಾಭವನ್ನು ನೋಡಿಕೊಂಡು ಬರುವಂಥವನಾಗಯ್ಯ ತಂಮ ಭೀಮಸೇನ॥

ಭೀಮ : ಅಂಣಯ್ಯ ಧರ‌್ಮತನಯ, ನಿಂನ ಅಪ್ಪಣೆಯಂತೆ ಜಾಗ್ರತೆಯಾಗಿ ಹೋಗಿ ತಂಮನಾದ ಫಲುಗುಣನ ಕ್ಷೇಮ ಲಾಭವನ್ನು ನೋಡಿಕೊಂಡು ಬರುತ್ತೇನೆ, ಅಂಣ ಯೋಚನೆಯನ್ನು ಬಿಡುವಂಥವರಾಗಿ॥

ಪದ

ಯೆಲವೊ ಭೀಮ ನಿಲ್ಲು ಸಮರ್ಥನಹುದು ಪಾರ್ಥನಳಿದಂತೆ
ಪೋಗುತಿಹೆಯೊ ಬಲವ ತೊರೆಯೆ.

ದ್ರೋಣ : ಯಲಾ ಭೀಮ, ಯೆಲ್ಲಿಗೆ ಮೇಲ್ಪರಿದು ನುಗ್ಗಿ ಹೋಗುವೆ. ನಿಂನ ಅನುಜನಾದ ಫಲುಗುಣನು ನನಗೆ ಸಾಷ್ಟಾಂಗ ವಂದನೆಯಂ ಮಾಡಿ ಪದ್ಮಜ ವ್ಯೂಹಕ್ಕೆ ಹೋಗಿರುವನು. ಅವನಂತೆ ವಂದನೆಯಂ ಮಾಡಿ ಹೋಗುತ್ತೀಯೊ ಅಥವ ಯುದ್ಧಕ್ಕೆ ನಿಲ್ಲುತ್ತೀಯೊ ಜಾಗ್ರತೆ ಹೇಳುವಂಥವನಾಗೊ ಭೀಮ॥

ಪದ

ಧುರದಿ ತ್ರಾಹಿಯಂಬುದುಂಟೆ ಗುರುಗಳಾಗಿ
ನೋಡಿರೆನುತ ಮುರಿದು ಹೊಕ್ಕ ರಭಸದಿಂದ.

ಭೀಮ : ಯಲಾ ದ್ರೋಣ, ನನ್ನ ತಂಮನಾದ ಫಲುಗುಣನು ಸಣ್ಣವನಾದ್ದರಿಂದ ತಿಳಿಯದೆ ನಿನಗೆ ವಂದನೆ ಮಾಡಿ ಇರುವನು. ವೀರಾಧಿವೀರನಾದ ನಾನು ಈ ರಣಾಗ್ರದಲ್ಲಿ ನಿಂತುಕೊಂಡು ನಿನಗೆ ವಂದನೆಯನ್ನು ಮಾಡುವುದುಂಟೆ. ಯಂನ ಕರದಲ್ಲಿ ಇರುವ ಗಧಾದಂಡವರಿದು ನೋಡಿದೆಯ ಅಲ್ಲದೆ, ಹಿಂದೆ ನಿಂನ ಗರುಡಿಯಲ್ಲಿ ನಾನು ಇರುವಾಗ್ಗೆ ನಿನಗೆ ವಂದನೆ ಮಾಡಿರುವುದ ತಡೆದು, ಆ ವಂದನೆಯಂ ಈಗ ಯಂನ ಕರದೊಳಿರುವ ಗದೆಯಿಂದ ವದೆಯಂನು ಹೊಡೆದಿರುತ್ತೇನೆ ಆರ್ಕಾದಿಸಿಕೊಂಡು ಯದುರಾಗಲಾ ದ್ರೋಣ-

 

(ದ್ರೋಣ ಭೀಮರಯುದ್ಧ)

ಭಾಮಿನಿ

ಪೊಡವಿಪತಿ ಜನಮೇಜಯನೆ ಕೇಳ್ ಕೃಷ್ಣನು
ತಂನ ಭಕ್ತ ನುಡಿದ ಭಾಷೆಯು ಸಂದಿತೆಂದಾಗ ಸೈಂಧವನ
ಹಿಡಿಯಲಿಕ್ಕೆ ದಿನಮಣಿ ನಡೆದನೆಂದ॥

ಕೃಷ್ಣ : ಆಹಾ ಏನು ಮೋಸವಾಗುವಂತಾಯ್ತು. ಸೂರ‌್ಯನು ಅಸ್ತಮಯವಾಗುವ ಸಮಯವಾಗಲು ಯುದ್ಧ ಪೂರ್ತಿಯಾಗಲಿಲ್ಲವಲ್ಲ. ಫಲುಗುಣನ ಭಾಷೆಯ ನೆರವೇರಲಿಲ್ಲವಲ್ಲ, ಎಲ್ಲಿ ನೋಡಿದರು ಸೈಂಧವನ ತಲೆಯೇ ಕಾಣುವುದಿಲ್ಲವಲ್ಲಾ, ಪಾಂಡವ ಮಮಃ ಪ್ರಾಣವೆಂಬ ವಚನಕ್ಕೆ ನ್ಯೂನತೆಯು ವದಗಿದ ಹಾಗೆ ಕಾಣುವುದಲ್ಲಾ. ವಳ್ಳೇದು ಇರಲಿ ನಂನ ಕೈಯ್ಯಲ್ಲಿ ಇರುವ ಸುದರ್ಶನವನ್ನು ಅಲ್ಲಿ ಕಾಣುವ ರವಿಗೆ ಮರೆಮಾಡಿ ಆ ಭ್ರಷ್ಟನಾದ ಸೈಂಧವ ಯದುರಿಗೆ ಬರುವ ವುಪಾಯವನ್ನು ಮಾಡಿ, ಈಗಲೇ ಅವನ ಶಿರಸ್ಸನ್ನು ತೆಗೆಯಿಸಿ ಯನ್ನ ಭಕ್ತನ ಭಾಷೆಯು ಪೂರ್ತಿಯಾಗುವ ಪ್ರಯತ್ನ ಮಾಡುತ್ತೇನೆ ಈ ಕಾರ‌್ಯವನ್ನು ಈಗಲೇ ನೆರವೇರಿಸುತ್ತೇನೆ ನೋಡಿರಿ.

ಅರ್ಜುನ : ಆಹಾ ಪರಮಾತ್ಮನೆ, ನಾನು ಎಷ್ಟು ಸಾಹಸ ಮಾಡಿದಾಗ್ಯೂ ಯುದ್ಧವು ಪೂರ್ತಿಯಾಗಲಿಲ್ಲ. ಎಲ್ಲಿ ನೋಡಿದರು ಆ ಸೈಂಧವನ ಕಾಯವೆ ತೋರಲಿಲ್ಲವಲ್ಲ. ಸೂರ‌್ಯನು ಪಶ್ಚಿಮಾಂಜಲಿಯಲ್ಲಿ ಸೇರಿದನು, ಆ ಪಾಪಿಯು ಇಂದಿಗೆ ಬದುಕಿಕೊಂಡಂಥವನಾದ ನಾನು. ಮಾಡಿದ ಭಾಷೆಯೂ ನೆರವೇರಲಿಲ್ಲವೈ ಭಾವ. ಈ ಯನ್ನ ದೇಹವನ್ನು ಅಗ್ನಿದೇವರಿಗೆ ಸಮರ್ಪಿಸುವ ಪ್ರಯತ್ನವನ್ನು ಮಾಡುತ್ತೇನೆ ದೇವ ಕರುಣ ಪ್ರಭಾವ॥

ಪದ

ವನಜನೇತ್ರ ಕೇಳಯ್ಯ ವೈರಿ ಸೈಂಧವನ ಕಾಯವು ತೋರದು ಯುದ್ಧವು ತೀರದು॥

ಅರ್ಜುನ : ಸ್ವಾಮಿ ಜಲಜಾಕ್ಷನೆ, ನಾನೆಷ್ಟು ಸಾಹಸ ಮಾಡಿ ರಣಾಗ್ರವನ್ನು ಮಾಡಿದಾಗ್ಗೂ ವೈರಿಯಾದ ಸೈಂಧವನ ಕಾಯವು ನನಗೆ ಗೋಚರವಾಗದೆ, ಯುದ್ಧವು ತೀರುಗಡೆಯಾಗಲಿಲ್ಲ. ಹೇ ಮಾಧವ ಹೇಳುತ್ತೇನೆ ಕೇಳುವಂಥವನಾಗು॥

ಪದ

ರವಿಯು ಅಸ್ತಮಯವಾದನು ತವಕದಿ ಕೊಂಡವನ್ನು
ರಚಿಸುವೆನು ಯಂನ ತನುವ ನೀಡುವೆನು॥

ಅರ್ಜುನ : ಹೇ ಗೋವಿಂದನೆ. ಸೂರ‌್ಯನಾರಾಯಣನು ಪಶ್ಚಿಮಾಂಬುಧಿಯಲ್ಲಿ ಮುಳುಗವಂಥವನಾದ ಯಂನ ಭಾಷೆಯು ನೆರವೇರಲಿಲ್ಲವಾದ ಕಾರಣ ಯಂನ ದೇಹವಂನು ಯಜ್ಞೇಶ್ವರನಿಗೆ ವಪ್ಪಿಸುತ್ತೇನೆ ಅಪ್ಪಣೆಯಾಗಲೈ ದೇವಾ ಕರುಣಾ ಪ್ರಭಾವ॥

ಪದ

ಇಂತೆಂಬ ಪಾರ್ಥನನು ಕಂತುಪಿತನ ಕಾಣೆ ತೋರಿಸಿದ ಮಾಯವ ಬೀಸಿದನು.

ಕೃಷ್ಣ : ಈ ಸಮಯದಲ್ಲಿ ಯಾವ ಮಾತನಾಡುವುದಕ್ಕೂ ಸಮಯವಲ್ಲಾ. ಆದ ಕಾರಣ ಮಾಯಾಕಾರವಾದ ವಂದು ಮಾತನ್ನು ಈ ಫಲುಗುಣನಲ್ಲಿ ಆಡಿ ಮುಂದಿನ ಪ್ರಯತ್ನವನ್ನು ಮಾಡುವೆನು- ಆಹಾ ಫಲುಗುಣ ಪೂರ್ವ ಕರ್ಮಾನುಸಾರವಿದ್ದಂತೆ ಆಗಲಯ್ಯ ಮತ್ತೆ.

ಪದಸೌರಾಷ್ಟ್ರ ತಾಳ ತ್ರಿಪುಡೆ

ರಾಯ ಕೇಳೈ ಭರದಿ ನರನರಾಯಣನು ಮಾಡಿದಿಂದೆ ಕುರುರಾಯ ಹಿಗ್ಗಿಂದನಿಳಿದ॥

ಕೌರವ : ಆಹ ಶಂಭೊ ಈವತ್ತಿನ ಕಾಳಗದಲ್ಲಿ ಸೈಂಧವನು ವುಳಿದುಕೊಳ್ಳುವಂಥವನಾದ. ಯಲೈ ಸೈಂಧವಾ ನಿನಗೆ ವದಗಿದ ಕಂಟಕವು ಇಂದಿನ ದಿವಸಕ್ಕೆ ಪರಿಹಾರವಾಯ್ತು, ಇಂನು ಯೋಚನೆಯನ್ನು ಬಿಡುವಂಥವನಾಗಯ್ಯ ಸೈಂಧವ ರಾಜನೆ

ಸೈಂಧವ : ಹೇ ರಾಜನೆ, ತಂಮ ಪಾದ ಕೃಪಾಕಟಾಕ್ಷವು ಯನ್ನ ಮೇಲೆ ಸಂಪೂರ್ಣವಾಗಿ ಇರುವುದರಿಂದ ನಾನು ಬದುಕಿಕೊಳ್ಳುವಂಥವನಾದೆನಯ್ಯ ಕೌರವೇಶ್ವರಾ॥

ಕೌರವ : ಅಯ್ಯ ಸೈಂಧವ, ಯಮಗೆ ವೈರಿಯಾದ ಫಲುಗುಣನ ಭಾಷೆಯ ಪೂರ್ತಿಯಾಗಲಿಲ್ಲ. ಈಗ ಸೂರ‌್ಯನು ಅಸ್ತಂಗತನಾಗುವಂಥವನಾದ. ಆದುದರಿಂದ ಅರ್ಜುನನು ತಂನ ಪ್ರಾಣವನ್ನು ಯಜ್ಞೇಶ್ವರನಿಗೆ ವಪ್ಪಿಸುತ್ತಾನಯ್ಯ ಸೈಂಧವ ರಾಜನೆ॥

ಸೈಂಧವ : ಭಳಿರೆ ಶಹಬ್ಬಾಶ್ ಹೇ ಶಂಭೊ ಗೌರೀಪತೆ, ನಿಂಮ ಕರುಣ ಕಟಾಕ್ಷವು ಯಂನ ಮೇಲೆ ಸಂಪೂರ್ಣವಾಗಿ ಇದ್ದುದರಿಂದ ಇಂದಿನ ದಿವಸ ನಾನು ಬದುಕಿಕೊಂಡೆನೈ ದೇವಾ ಮಹಾನುಭಾವ ಮತ್ತೂ ಹೇಳುತ್ತೇನೆ॥