ಪದ್ಯರಾಗ

ಎಲವೊ ಕರ್ಣನೇ ಕಳ್ಳತನದಲಿ ಯೆನ್ನ ಕರವನೂ
ಕಡಿದೆ ಶರದಲೀ ಕಡಿದೆ ಶರದಲೀ ಯೆನ್ನ ಕರವನೂ॥
ಕಳ್ಳತನದಲೀ ಎಲವೊ ಕರ್ಣನೇ ನಿಮ್ಮ ಮಂಡೆಯಾ
ಪ್ರಚಂಡನಾಗಿಯೇ ಧಂಡ ಧರನಿಗೇ ವಿಕ್ರಮವ ಗೈಯ್ವೆನೊ
ದಂಡಧರನಿಗೇ ಪ್ರಚಂಡನಾಗಿಯೇ ನಿಮ್ಮ  ಮಂಡೆಯಾ॥

ಕೊಚ್ಚಿ ಬಿಡುವೆನೂ ಯೀ ಮಚ್ಚಿನಿಂದಲಿ ಯೆಚ್ಚರಿಲ್ಲದೆ ಕೊಚ್ಚಿ ಬಿಡುವೆನೂ॥

ಅಭಿಮನ್ಯು : ಎಲಾ ಕರ್ಣ ಕೌರವ ದುಶ್ಶಾಸನ ದ್ರೋಣ ಅಶ್ವತ್ಥಾಮ, ಕಳ್ಳತನದಿಂದ ನನ್ನ ಕರಗಳನ್ನು ಶರಗಳಿಂದ ಕಡಿಯುವಂಥವರಾದಿರಿ. ಅದಕ್ಕೋಸ್ಕರ ಯೀ ಮಂಡಲದಲ್ಲಿ ಪ್ರಚಂಡರಾಗಿ ಭಂಡರಾದ ನಿಮ್ಮ ಮಂಡೆಗಳನ್ನು ದಂಡಧರನಿಗೆ ಕ್ರಯಕ್ಕೆ ಕೊಡುವುದಲ್ಲದೆ, ಯೀ ಅಚ್ಚುತ ಅಳಿಯನು ತುಚ್ಚ ಕೆಲಸವನ್ನು ಮಾಡಿದ ಹುಚ್ಚರಾದ ನಿಮ್ಮನ್ನು ಮಚ್ಚಿನಿಂದ ಕೊಚ್ಚಿ ಬಿಡುತ್ತೇನೆ. ಯೆಚ್ಚರದಲ್ಲಿ ಯಿರುವಂಥವರಾಗಿರಿ॥

ಕರ್ಣ : ಎಲೈ ದುಶ್ಶಾಸನ ಪುತ್ರನೆ, ನಮಗೆ ಮೃತ್ಯುವಾದ ಶತೃವಿನ ಕೈಗಾರಿಕೆಯು ನಾಲ್ಕರಲ್ಲಿ ವಂದು ಪಾಲು ವುಳಿದಿರುತ್ತೆ ಕೈಗುಂದಿರುವ ಈ ಮಂದಮತಿಯನ್ನು ಕೊಂದು ಬಾರಯ್ಯ ದುಶ್ಶಾಸನ ಪುತ್ರನೆ॥

ದುಶ್ವಾಸನನ ಮಗ : ಹೇ ತಂದೆಯೇ, ಯೀ ಮಂದಮತಿಯನ್ನು ಇಂದಿನಾ ದಿವಸವೇ ಕೊಂದು ವಂದನೆಯಂ ಮಾಡದಿದ್ದರೆ ದುಶ್ಶಾಸನನ ಪುತ್ರನಲ್ಲಾ. ಮೃತ್ಯುವಾಗಿರುವ ಶತ್ರುವಿನ ಪಾಡೇನು ಮಾಡುತ್ತೇನೆ ನೋಡುವಂಥವರಾಗಿ॥

ದುಶ್ಶಾಸನನ ಮಗ : ಎಲಾ ಅಭಿಮನ್ಯುವೆ, ನಿನಗೆ ಕಡೆಗಾಲ ಕೂಡಿ ಬಂತು, ರಣಾಗ್ರಕ್ಕೆ ಯೆದುರಾಗೂ ಹೇಳುತ್ತೇನೆ ಕೇಳು.

ಪದರಾಗಏಕತಾಳ

ಎಲವೊ ನರನ ಸುತನೆ ಕೇಳೂ ಸರಸವಲ್ಲ ಸಮರವಿನ್ನು
ನಿನ್ನ ಪಡೆದ ಜನನಿ ಜನಕರನ್ನು ಸ್ಮರಿಸು ಮನದಲೀ॥

ದುಶ್ಶಾಸನ ಮಗ : ಎಲಾ ಅಭಿಮನ್ಯು, ಯೆಮ್ಮ ಸಮರ ನಿನಗೆ ಸರಸವಾಗಿದೆಯಲ್ಲವೆ, ಯೀ ಮಮಕಾರವನ್ನು ಬಿಟ್ಟು ನಿನ್ನ ಜನನೀ ಜನಕರನ್ನು ಬೇಗ ಸ್ಮರಣೆ ಮಾಡಿಕೊಳ್ಳುವನಾಗೂ

ಪದ

ತಡವು ಯಾತಕೆಲವೊ ನಿನ್ನ ವಡಲಿಗಿದೆ ಶರ ನೋಡು,
ಫಡ ಫಡೆನುತ ಹೊಡೆದನಾಗ ಧನುಜ ಕುವರನಾ॥

ಅಭಿಮನ್ಯು : ಎಲೊ ಕುನ್ನಿ, ನಿನ್ನ ಕೊಲ್ಲಲು ಯಾಕೆ ತಾನೇ ತಡ ಮಾಡಬೇಕೂ, ಯಿತ್ತ ನೋಡಲಾ ಅಧಮಾ, ಯೀ ಆಯುಧದಿಂದ ನಾನಸುವನ್ನು ತೆಗೆಯದೆ ಬಿಡೆನೊ ಧಗಡಿ-

 

(ಅಭಿಮನ್ಯುವಿನ ಮೂರ್ಛೆ)

ಭಾಮಿನಿ

ತೋಳು ತಲೆ ಅಂಬಿನಲಿ ಕೈದುಗಳೋಳಿಗಳ ಹಾಸಿನಲಿ
ತನ್ನಯ ಕಾಲ ದೆಸೆಯಲಿ ಕೆಡೆದ ಕೌರವ
ಸುತರನೂರ್ವ ಬಾಲಕನು ಬಳಲಿದ
ಧನು ಸಮರದ ಲೀಲೆಯಲಿ ಕುಣಿದಾಡಿ ಬಸವಳಿದಾಳುಗಳ
ದೇವನೂ ಮಹಾ ಆಹವದೊಳಗೆ ಪವಡಿಸಿದಾ॥

ಪದ ಆದಿತಾಳ

ಸಂತೋಷ ಹೊಂದಿದರೂ, ಕುರುಬಲದಲ್ಲಿ ಸಂತೋಷ ಹೊಂದಿದರೂ॥
ಮೂರು ಲೋಕದ ಗಂಡವೀರ ಪಾರ್ಥನ ಪುತ್ರ ದಂಡಧರನ ಪುರಗಂಡು
ಪೋದನು ಯೆಂದು, ಸಂತೋಷ ಹೊಂದಿದರೂ॥

ಕೌರವ : ಸ್ವಾಮಿ, ಮಹನೀಯರೆ, ಯೀ ಕಾಲದಲ್ಲಿ ತಮ್ಮ ಮನಸ್ಸು ಹ್ಯಾಗಿರಬಹುದು॥

ದ್ರೋಣ : ಮಹಾರಾಜನೆ ಸರ್ವರಿಗೂ ಮೃತ್ಯುವಾಗಿದ್ದ ಶತೃ ಹೋದದ್ದರಿಂದ ಸಂತೋಷವಾಗಿರುವುದು.

ಕೌರವ : ನಿನ್ನಿಂದ ಜಯವಾಯ್ತು. ಭಳಿರೆ ನಿನ್ನ ಭಕ್ತಿಗೆ ಮೆಚ್ಚಿದೆ. ಕರ್ಣನೇ ಯೀ ದಿವಸ, ನಿನ್ನಿಂದ ಯೀ ಗೆಲುವು ವುಂಟಾಯಿತು, ಸರ್ವರೂ ಸಮರ ಶ್ರಮವನ್ನು ಪರಿಹರಿಸಿಕೊಳ್ಳುವುದಕ್ಕೆ ಅರಮನೆಗೆ ನಡೆಯಿರಿ ಹೋಗೋಣ॥

ಕರ್ಣ : ಮಹಾರಾಜನೆ ಅಪ್ಪಣೆ ಆಗಬಹುದು, ನಡೆಯಿರಿ ಹೋಗೋಣ.

ಭಾಗವತ ಪ್ರಸ್ತಾಪ : ಆಹಾ ಕುರುಬಲದಲ್ಲಿ ಕೃತ್ರಿಮಿಯಾದ ಕೌರವನು ಘನಸನ್ನಾಹದಿಂದ ಹದಿನಾಲ್ಕು ವರುಷದ ಹಸುಳೆಯಾದ ಅಭಿಮನ್ಯುವನ್ನು ಅಂತಕನ ಆಲಯಕ್ಕೆ ಅಟ್ಟಿದೆವೆಂದು ಹರುಷವಂ ಪಟ್ಟು ಹೋದನಲ್ಲಾ॥ಅವನಿಗೆ ಯಿದು ಯಾವ ಪ್ರಮಾದದ ಕೆಲಸ ಯೀ ಭಾಗದಲ್ಲಿ ಕೊಂಚ ಅರಿಕೆ ಮಾಡಿಕೊಳ್ಳುತ್ತೇನೆ.

ಭಾಗವತರ ಪದರಾಗ ಸೌರಾಷ್ಟ್ರತ್ರಿವುಡೆ

ಹಲವು ಗಜ ವಂದಾಗಿ ಸಿಂಹದ ಮರಿಯ
ಕೊಂದಂತೆ ಹಾವಿನ ಬಳಗ ಗರುಡನ
ಮರಿಯ ನಿಂದಾವೂ ಯೆಂದಂತೆಯಾಯ್ತು.

ಭಾಗವತ : ಅಯ್ಯ ಅಕಟಕಟ ಕೌರವನು, ಅಭಿಮನ್ಯುವನ್ನು ಕೊಲ್ಲಿಸಿದ್ದು ಹ್ಯಾಗಾಯಿತೆಂದರೆ ಮದವೇರಿದ ಸಾವಿರಾರು ಆನೆಗಳು ವಂದಾಗಿ ಮೊಲೆಯನ್ನು ಕುಡಿಯುವ ಸಿಂಹದ ಮರಿಯನ್ನು ಕೊಂದಂತೆಯೂ, ವಿಷ ಪುಂಜದಿಂದಿರುವ ಸಾವಿರಾರು ಘಟ ಸರ್ಪಗಳು ವಂದಾಗಿ, ಗರುಡನ ಮರಿಯನ್ನು ಕೊಂದಂತೆಯಾಯ್ತು. ಯೀ ರೀತಿಯಲ್ಲಿ ಮೃತಪಟ್ಟ ಮಗುವಿಗೆ ದೇವಲೋಕದಲ್ಲಿ ಸರ್ವರೂ ಸಂಕಟಪಟ್ಟು ದೇವೇಂದ್ರನು ತನ್ನ ಸಭೆಯಲ್ಲಿ ಯಿದ್ದ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮ, ಮಂಜು ಘೋಷಿಣಿ, ಸುಕೇಶಿ ಮುಂತಾದ ಅಪ್ಸರ ಸ್ತ್ರೀಯರನ್ನು ಭೂತಳದಲ್ಲಿ ರಣಭೂಮಿಗೆ ಕಳುಹಿಸಿ ಮಗುವನ್ನು ತನ್ನ ಆಸ್ಥಾನದಲ್ಲಿ ಕೂಡಿಸಿಕೊಳ್ಳುವಂಥವನಾದ. ಯಿತ್ತ ಯೀ, ವರ್ತಮಾನವನ್ನು ಸತ್ಯಸಂಧನಾದ ಧರ್ಮರಾಯನು ಕೇಳಿ ಯಾವ ಪ್ರಕಾರ ಚಿಂತಿಸುತ್ತಿದ್ದನು॥

 

(ಧರ್ಮರಾಯನ ಪ್ರವೇಶ)

ಸಾರಥಿ : ಅಗದ್‌ದೀನ್ ಸಲಾಮು ಬರುತ್ತೆ.

ಧರ್ಮರಾಯ : ಎಲಾ ಸಾರಥಿ ಬಹು ದುಃಖದಿಂದ ಬಂದಿದ್ದೀಯಾ ಯೇನು ವರ್ತಮಾನ.

ಸಾರಥಿ : ಸ್ವಾಮಿ ಧರ್ಮರಾಯರೆ, ನಿಮ್ಮ ಮಗನಾದ ಅಭಿಮನ್ಯು ಚಕ್ರವ್ಯೂಹದ ಕೋಟೆಯಲ್ಲಿ ಅತಿರಥ ಮಹಾರಥ ಷಡುರಥದೊಂದಿಗೆ ಖಡಾ ಖಡಾ ಯುದ್ಧವನ್ನು ಮಾಡಿ ಕಡೆಗೆ ದುಶ್ಶಾಸನನ ಪುತ್ರನಿಂದ ಸುರಪುರವನ್ನು ಸೇರಿದರಯ್ಯ ದೊರೆಯೆ.

ಧರ್ಮರಾಯ : ಆಹಾ ದೈವವೆ ಅಭಿಮನ್ಯು ಸುರಪುರವನ್ನು ಸೇರಿದನೆ

ಭಾಮಿನಿ

ಹರಿ ಮಹೇಶ ಕಠಾರಧೀರನು ವರ ಕಿರೀಟಿ ಕುಮಾರ ರಣದಲಿ
ಸುರನಗರಿಗೆ ನಡೆಯೆ ಹಲುಬಿದ ನೊಂದು ಯಮಸೂನೂ

ಧರ್ಮರಾಯ : ತಮ್ಮಾ ಭೀಮಸೇನ ಕಂದನಗಲಿದ ಸುದ್ಧಿಯನ್ನು ಕೇಳಿದೆಯಾ.

ಭೀಮ : ಹೇ ಧರ್ಮಜಾ ಸತ್ಯಸಂಧ ಯೇಳ ಬೇಕಾದ್ದಿಲ್ಲವಲ್ಲಾ॥

ಧರ್ಮರಾಯ : ಆದರೂ ಕೊಂಚ ಹೇಳುತ್ತೇನೆ ಕೇಳು.

ಪದ

ಏನೆಂದು ಪೇಳಲಯ್ಯ ಹೇ ಬಕವೈರಿ ಕಂದನಳಿದ ಸುದ್ಧಿಯಾ
ಮಂದಮತಿಗಳಿಂದ ಕುಂದು ಬಂದೊದಗೀತೂ ನಿಂದೇಗೆ ಗುರಿಯಾದೆವೈ॥

ಧರ್ಮರಾಯ : ತಮ್ಮಾ ಭೀಮಸೇನ ಮಂದಮತಿಗಳಿಂದ ಕಂದನಳಿದ ಯೀ ಅಪನಿಂದೆಗೆ ನಾವೈವರೂ ಪೂರ್ಣಭಾಗಿಗಳಾಗಿ ಗುರಿಯಾದೆವಲ್ಲಾ ಪರಿಹಾರವೇನೂ॥

ಭೀಮ : ಹೇ ಅಗ್ರಜನೆ ಲಾಲಿಸಿರಿ. ಯೀ ಲೋಕದಲ್ಲಿ ಹರಿಯಾಗಲಿ ಹರನಾಗಲಿ ಬ್ರಹ್ಮನಾಗಲಿ ಹುಟ್ಟಿದಾಗ ಹಣೆಯಲ್ಲಿ ಬರೆದ ಬರಹವನ್ನು ಮೀರುವುದಕ್ಕೆ ಆಗುವುದಿಲ್ಲ, ಹೀಗಿರಲು ನಮ್ಮಗಳ ಪಾಡೇನು ಇದಕ್ಕೆ ವುತ್ತರವನ್ನು ಹೇಳಿರಿ॥

ಧರ್ಮರಾಯ : ಭೀಮಸೇನನೇ ಯಿದು ಸತ್ಯವಾದುದು. ಆದರೆ ಯೀ ವರ್ತಮಾನವನ್ನು ನಾದಿನಿಯಾದ ಸೌಭದ್ರೆಗೆ ತಿಳಿಸಬೇಕಲ್ಲವೆ॥

ಭೀಮ : ಅಗ್ರಜಾ ತಿಳಿಸಬೇಕಾದ್ದು ಅವಶ್ಯಕ ಆಗಬಹುದು. ಎಲಾ ಚಾರಕ, ಯೀ ಕ್ಷಣವೆ ಸೌಭದ್ರೆಯನ್ನು ಬರಮಾಡು.

ಸೌಭದ್ರೆ : ದೊಡ್ಡ ಭಾವಯ್ಯನವರ ಪಾದಕ್ಕೆ ನಮಸ್ಕಾರ ಮಾಡುವೆ॥

ಧರ್ಮರಾಯ : ಬಾರಮ್ಮಾ ಮಂಗಳಾಂಗಿ.

ಸೌಭದ್ರೆ : ಚಿಕ್ಕ ಭಾವಯ್ಯನವರ ಪಾದಕ್ಕೆ ನಮಸ್ಕಾರ ಮಾಡುವೆ॥

ಭೀಮ : ಸೌಭದ್ರಾ ಮಂಗಳಾಂಗಿ ಹೀಗೆ ಬಾರಮ್ಮಾ॥

ಪದ

ಭಾವನವರೇ ನೀವು ಬಳಲೂವದೇನಿದು ಬಾಲಾನು
ಬರಲಿಲ್ಲವೇ ಯನ್ನ ಕಂದಾನು ಬರಲಿಲ್ಲವೆ
ಪದ್ಮವ್ಯೂಹಕ್ಕೆ ಹೋದ ಪುತ್ರಾನು ಯೇನಾದ ಭಾವನವರೆ
ನೀವು ಭಾವನವರೆ ನೀವು ಬಳಲುವದೇನೂ

ಸೌಭದ್ರೆ : ಭಾವನವರೇ, ನೀವಿಬ್ಬರೂ ಅಪಾರವಾದ ದುಃಖದಿಂದ ಮಾತನಾಡುವುದನ್ನು ನೋಡಿದರೆ ಪ್ರೀತಿ ವಸ್ತುವನ್ನು ನಷ್ಟಪಡಿಸಿಕೊಂಡಂತೆ ಯನ್ನ ಮನಸ್ಸಿಗೆ ಹೊಳೆಯುವುದು. ಚಕ್ರವ್ಯೂಹಕ್ಕೆ ಹೋದ ಪುತ್ರನೆಲ್ಲಿ, ವಂಚನೆಯಿಲ್ಲದೆ ಕೊಂಚ ಹೇಳಬಾರದೆ ಭಾವಯ್ಯನವರೇ॥

ಧರ್ಮರಾಯ : ಅಮ್ಮಾ ಸೌಭದ್ರೆ ಚಕ್ರವ್ಯೂಹಕ್ಕೆ ಹೋದ ಪುತ್ರನಿಗೆ ಮೃತ್ಯು ವದಗಿ ಶತೃಗಳಿಂದ ಕತ್ತರಿಸಲ್ಪಟ್ಟು ಸುರಪುರವನ್ನು ಸೇರಿದನಮ್ಮಾ ಸೌಭದ್ರೆ॥

ಭಾಮಿನಿ

ಪುತ್ರನಳಿದುದ ಕೇಳಿ ನಾರಿಯೂ ಹಡೆದೊಡಲು ಹಾಳಾಯ್ತೆ
ಯೆನುತಲಿ ನೆಲಕೆ ದೊಪ್ಪನೆ ಕೆಡೆದು, ಕಂದನ ಗುಣಗಳನು
ನೆನೆನೆನೆದು ಪೇಳ್ದಳು ಬಿಕ್ಕಿ ಬಿರಿದಳು ತಾ॥

ಸೌಭದ್ರೆ : ಆಹಾ ಭಾವನವರೆ, ಯೀ ಹೊತ್ತಿಗೆ ನಿಮ್ಮ ಯಿಷ್ಪ ಪೂರ್ತಿಯಾಯಿತೆ, ಮಗನ ಹಡೆದ ಒಡಲು ಹಾಳಾಯ್ತೆ ಶಿವ ಶಿವಾ, ಪುತ್ರಶೋಕವನ್ನು ಯಿನ್ಯಾವ ಕಾಲಕ್ಕೆ ಮರೆಯಲಿ, ಅಣ್ಣಯ್ಯ, ಶ್ರೀಹರಿ ಕಂದನ ಕೈ ಬಿಡುವಂಥವರಾದಿರಿ ಸ್ವಾಮಿ॥

ಭಾಮಿನಿ

ಧುರಕೆ ಹೋಗತಕ್ಕವನೆ ಚಿಕ್ಕವ, ನಿಟಿಲಾಪತಿ ಬಹಳ ಮರಳಿದು
ಧರೆಯ ವೈಭವಕೆ ಕಳುಹಿಸಿದಿರೆನ್ನ ಕಂದನನೂ
ಯುಧಿಷ್ಠಿರ ನೃಪತಿ ಲೋಕದಿ ಕರುಣಿಯೆಂಬರು ನಿನ್ನ ಮುನಿಗಳು
ಕೊರಳಗೊಯ್ವರೆಂದಳು ಫಲುಗುಣನ ರಾಣಿ.

ಸೌಭದ್ರೆ : ಆಹಾ ಭಾವನವರೇ, ನನ್ನ ಮಗು ಚಿಕ್ಕವನಲ್ಲವೆ. ಧುರವ ಹೊಕ್ಕು ಷಡುರಥ ಮಹಾರಥರನ್ನು ಇರಿಯಲಾಪನೆ, ಅಂಥಾ ಸಮರ್ಥರೆ ಮರಳಿ ಬಂದರಲ್ಲಾ, ಯೀ ಧರೆಯ ವೈಭವಕ್ಕೆ ಯಿವನೇ ಭಾಗಿಯಾದನಲ್ಲಾ,. ಯೆಂದು ಹಸುಳೆಯನ್ನು ಅಟ್ಟಿದಿರಾ. ಹೇ ಭಾವನವರೇ ನೀವೂ ಕೊರಳು ಗುಯ್ವರೆಂದು ಅರಿಯದೆ ಲೋಕದಲ್ಲಿ ಕರುಣಿಯೆಂದು ಹೊಗಳುತ್ತಾರೆಯೆಲ್ಲಾ. ಛೀ ಛೀ ನಾನೇನ ಹೇಳಲಿ.

ಭಾಮಿನಿ

ಅರಸ ಜನಮೇಜಯನೆ ಕೇಳು ಬಿಸುಜನೇತ್ರೆಯ ವಚನ
ಶಸ್ತ್ರಗಳಿರದೆ ಕೊಂದವು ಭೂಪನಂಗವನೇನೆಂಬೆನದ್ಧುತವನೂ

ಧರ್ಮರಾಯ : ಆಹಾ ವಿಧಿಯೆ ಅಮ್ಮಾ ಸೌಭದ್ರೆ, ನಿನ್ನ ಕಠಿಣವಾದ ವಚನದ ಶಸ್ತ್ರಗಳು ನನ್ನ ಶರೀರದಲ್ಲಿ ನಾಂಟಿ ಮನೋವ್ಯಥೆಯನ್ನು ವುಂಟು ಮಾಡುತ್ತಾಯಿದೆ ಮತ್ತೂ ಶಸ್ತ್ರ ಗಾಯಗಳನ್ನು ತಕ್ಕ ಔಷಧಿಗಳಿಂದ ಮಾಯಿಸಿಕೊಳ್ಳಬಹುದೂ. ಅಮ್ಮಾ ಸೌಭದ್ರಾ ನಿನ್ನ ವಚನದ ಶಸ್ತ್ರ ಗಾಯವು ಪೂರಾ ವ್ಯಸನಕ್ಕೆ ಪ್ರಾಪ್ತವಾಯಿತಲ್ಲಾ. ಅಮ್ಮಾ ನಾದಿನಿ ಶಿವ ಶಿವಾ ಯೇನು ಮಾಡಲಿ.

ಭಾಮಿನಿ

ಹರಿ ಕಿರೀಟಿಗಳತ್ತ ಶಿಬಿರಕೆ ತಿರುಗಲಾಲಿತ್ತ ಸುತಶೋಕ ಸೂಚನೆ
ನರನ ಚಿತ್ತದೊಳಾವೆಂದುರವಣಿಸಿತು ಪರಿತಾಪ॥
ಕೊರಳಸೆರೆ ಹಿಗ್ಗಿದುವು ಕಂಬನಿ ಸುರಿಯಲಾಯ್ತುರಿ
ಮನ ಜಠರದೊಳುಭಯವಾಯ್ತು ಪಾರ್ಥಂಗೆ॥

ಭಾಗವತರ ಪ್ರಸ್ತಾಪ : ಅತ್ತ ಪಾತಾಳ ಲೋಕದಲ್ಲಿ, ಸಮಸಪ್ತಕರೊಡನೆ ಯುದ್ಧ ಮಾಡುತ್ತಿದ್ದ ಅರ್ಜುನನಿಗೆ ಪುತ್ರನ ಮರಣ ಶೋಕದ ಸೂಚನೆ ಅಂಕುರಿಸಲು ಕಣ್ಣೀರು ತಂದು ಶ್ರೀ ಹರಿಯೊಡನೆ ಯಿಂತೆಂದನೂ॥

ಪದರಾಗಅಟ್ಟತಾಳ

ಕೇಳೋ ಮುರರಿಪೂ ಕಮಲಲೋಚನಾ ಪೆರ್ಚದುರಿಯನೂ ತಾಳಲಾರೆನೂ॥
ನುಡಿಯೋ ಮಾಧವಾ ಕಂದನಿರವನೂ ಕಡುಪರಾಕ್ರಮಿ ಖೂಳ ಕೌರವಾ
ಯೇನ ಗೈದನೆ॥ಯನ್ನ ಕಂದನಾ ದೀನರಕ್ಷಕಾ ಪೇಳೂ ಶೀಘ್ರದೀ॥

ಅರ್ಜುನ : ಹೇ ಮುರರಿಪು, ಕಮಲಲೋಚನಾ, ಮುಕುಂದ ಜನಾರ್ಧನ ಭಾವಯ್ಯ ಯಾಕೆ ಯನ್ನನ್ನು ಬಳಲಿಸುತ್ತೀಯಾ. ಯೀ ದಿವಸ ನನ್ನ ಹೊಟ್ಟೆಯಲ್ಲಿ ಶೋಕಜ್ವಾಲೆ ವುದ್ಭವಿಸಿ, ವುರಿಯ ತಾಪ ಹೆಚ್ಚಿ. ಬೆಂದು ಹೋಗುತ್ತಿರುವುದು. ನಾವು ಬರುವಾಗ್ಗೆ ಚಕ್ರವ್ಯೂಹದ ಕೋಟೆಗೆ ತೆರಳಿದ ತರಳನ ಗತಿಯೇನಾಯಿತೊ॥ಕಡು ಪರಾಕ್ರಮಿಗಳಾದ ಕೌರವರಿಂದ ಮಗನಿಗೆ ಕಂಟಕ ಬಂದಿರುವುದು ಸಹಜವಾಗಿ ತೋರುತ್ತಿದೆ. ಯಿದರ ನಿಜಸ್ಥಿತಿಯನ್ನು ವಂಚನೆಯಿಲ್ಲದೆ ಹೇಳಬೇಕೈ, ಭಾವ ನೀ ಸಂಜೀವಾ॥

ಕೃಷ್ಣ : ವಂಚನೆಯಿಲ್ಲದೆ ಹೇಳುತ್ತೇನೆ ಕೇಳಯ್ಯ ಕಿರೀಟಿ. (ಸ್ವಗತ) ಆಹಾ ಅಭಿಮನ್ಯು ಚಕ್ರವ್ಯೂಹದಲ್ಲಿ ಮೃತಿಯನ್ನು ಹೊಂದಿರುವುದೇನೊ ಸಹಜ. ಆದರೆ ಯೀ ಸಂಗತಿಯನ್ನು ಅರ್ಜುನನಿಗೆ ಹೇಳುವುದರಿಂದ ನಾನೇ ಮತ್ತಷ್ಟು ದುಃಖವನ್ನು ಹೆಚ್ಚಿಸಿದಂತಾಗುವುದು, ಆದ್ದರಿಂದ ಪ್ರಕೃತದಲ್ಲಿ ದುಃಖವನ್ನು ಕೊಂಚ ಸಮಾಧಾನವಾಗುವಂತೆ ಮಾತನಾಡಿ ನಂತರ ಮಗನ ವಾರ್ತೆಯನ್ನು ತಿಳಿಸಬೇಕು. ಅಲ್ಲದೆ ಹೀಗೆ ಮಾಡುವುದೇ ವುತ್ತಮ. ಅಯ್ಯ ಕಿರೀಟಿ, ಚಕ್ರವ್ಯೂಹದ ಕೋಟೆಯಲ್ಲಿ ಷಡುರಥರನ್ನು ಗೆದ್ದುಯಿರುವುದೇ ಹೊರ್ತು ಮತ್ತೇನೂ ತೋರಿ ಬರುವುದಿಲ್ಲ. ನೀನು ಚಿಂತೆಯನ್ನು ಬಿಟ್ಟು ನಿರ್ಮಲಚಿತ್ತನಾಗೂ॥

ಅರ್ಜುನ : ಭಾವಯ್ಯ ನಿನ್ನ ಮಾತಿನಲ್ಲಿ ನನಗೆ ಸಂದೇಹವುಂಟಾಗುವುದಲ್ಲಾ॥

ಕೃಷ್ಣ : ಏಕಯ್ಯ ಸಂದೇಹ ಬಿಡು ಬಿಡು ಹೇಳುತ್ತೇನೆ ಕೇಳೂ

ಭಾಮಿನಿ

ಕಾಳಗವ ತೆಗೆಸಿದರು ಕೌರವರೊಳು ಫಲುಗುಣ ಯೆನುತ ಲಕ್ಷ್ಮೀಲೋಲ
ವಾಗಟಿಯ ಮರಳಿಸಿದನಾಗವ ಮೇಳೈಸಿ॥

ಕೃಷ್ಣ : ಅಯ್ಯ ಪಾರ್ಥ, ಸಮಸಪ್ತಕರು ಪಾಳೆಯಕ್ಕೆ ತಿರುಗಿದರು, ಅತ್ತಲಾಗಿ ಕೌರವನು ಕಾಳಗವನ್ನು ತೆಗೆಸಿದಂತೆ ತೋರಿ ಬರುತ್ತೆ. ನಾವುಗಳು ಶಿಬಿರಕ್ಕೆ ಹೋಗೋಣ ನಡೆ॥

ಅರ್ಜುನ : ಹಾಗೇ ಆಗಲಿ ನಡೆಯಿರಿ ಹೋಗೋಣ.

ಭಾಮಿನಿ

ಅಳಿಯನಳುವನು ಹೇಳಬಾರದೂ ತಿಳಿಯಲರಿದೆಂದೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ಘನ ಸರೋವರವಾ॥

ಕೃಷ್ಣ : ಅಯ್ಯ ಫಲುಗುಣ, ಯೀ ಅರಣ್ಯದಲ್ಲಿ ಕಾಣುವ ಯೀ ಸರೋವರವನ್ನು ನೋಡಿದೇನಯ್ಯ ಯೇನು ಆನಂದವಾಗಿದೆ ಮುಂದೆ ಹೇಳುತ್ತೇನೆ॥

ಭಾಮಿನಿ

ಇಳಿದು ರಥವನು ರಣ ಪರಿಶ್ರಮಗಳೆನುತ ಕಿರೀಟ ಸಹಿತಲೆ
ಕೊಳನ ಹೊಕ್ಕನು ಜಗದ ಲೀಲಾವತಾರಕನೂ॥

ಕೃಷ್ಣ : ಎಲಾ ಅರ್ಜುನ ಯಿಲ್ಲಿ ರಥವನ್ನು ನಿಲ್ಲಿಸಿ ಯಿಳಿದು ಯೀ ಸರೋವರದಲ್ಲಿ ರಣಶ್ರಮವನ್ನು ಪರಿಹಾರ ಮಾಡಿಕೊಂಡು ಹೋಗೋಣ ಅಲ್ಲವೆ॥

ಅರ್ಜುನ : ಏಕಾಗಬಾರದೂ ಭಾವಯ್ಯ ಹಾಗೆ ಮಾಡೋಣ ಯಿಳಿಯಿರಿ ಮತ್ತೆ.

ಕೃಷ್ಣ : ಅಯ್ಯ ಅರ್ಜುನ, ಯೀ ನೀರಿನಲ್ಲಿ ಮುಳುಗಿ ಯಾರು ಹೆಚ್ಚಾಗಿ ವುಸಿರು ಕಟ್ಟಿ ಬಹಳ ಹೊತ್ತು ಯಿರುತ್ತಾರೆ ನೋಡೋಣ॥

ಅರ್ಜುನ : ನಾನು ಮುಳುಗುತ್ತೇನೆ ನೋಡಿರಿ॥

ಭಾಮಿನಿ

ಧುರದ ಕೋಳಾಹಳದಡಿಗೆ ಧಾವರಿಸಿ ಬಳಲಿ
ಧನಂಜಯನೂ ನಿಜ ಸರಸಿಯೊಳು ಹೊತ್ತಿರಲು
ಹರಿ ನೆನದೊಂದುಪಾಯವನೂ॥

ಕೃಷ್ಣ : ಆಹಾ ಯೀಗ ತಾನೆ ಅರ್ಜುನನು ಧುರದ ಆಯಾಸದಿಂದ ನೀರಿನಲ್ಲಿ ಮುಳುಗಿರುವನು ಯೀಗ ವಂದುಪಾಯವನ್ನು ಮಾಡುತ್ತೇನೆ.

ಭಾಮಿನಿ

ಎಲೆ ಸುರೇಂದ್ರ ಕುಮಾರ ಕೇಳು
ನಿನ್ನೊಲುಮೆಯಣುಗನು
ರಣದೊಳಗೆ ರಿಪುಬಲವ ತೊತ್ತಳದುಳಿದು
ಕೌರವ ಸುಕುಮಾರ ನೂರ‌್ವರನೂ ತಡಿಯನೀಡಾಡಿ
ತಾ ಸುರಲಲನೆಯರ ಚಲುವಿಂಗೆ ಕಾಮನ ವಲಿದು
ಹಾಯ್ದನೆನುತ ಹರನರಗರುಹಿ॥ಮುಳುಗಿದನೂ॥

ಕೃಷ್ಣ : ಈಗ ಅರ್ಜುನನಿಗೆ ಮರಣ ವಾರ್ತೆಯನ್ನು ತಿಳಿಸುವುದೇ ವುಪಾಯ ಅಲ್ಲವೆ ಎಂದು, ಎಲೈ ಸವ್ಯಸಾಚಿ ನಿನ್ನ ಮಗನು ರಣದೊಳಗೆ ಅನೇಕ ಮಾರ್ಬಲವನ್ನು ಸಂಹರಿಸಿ ಸ್ವರ್ಗಲೋಕದ ಸ್ತ್ರೀಯ ರೂಪಿಗೆ ಮೋಹಿಸಿ ಸುರಪುರಕ್ಕೆ ತೆರಳುವಂಥವನಾದ.

ಅರ್ಜುನ : ಆಹಾ ಭಾವಯ್ಯ ಯಿದೇನಾಶ್ಚರ್ಯ ಹೇಳುತ್ತೇನೆ ಲಾಲಿಸಿರಿ॥

ಪದರಾಗಅಟ್ಟತಾಳ

ತನಯನಳಿದನೆಂತೆಂಬುದ ಕೇಳಿದೆ ದೇವ ದೇವ॥
ಮನಸಿಜಪಿತ ಕೇಳ್ ಧರ್ಮದೇವತೆ ವಾಕ್ಯ ದೇವ ದೇವಾ॥

ಅರ್ಜುನ : ಆಹಾ ಭಾವಯ್ಯ, ಇಂದಿನ ದಿವಸದಲ್ಲಿ ಮಗನಾದ ಅಭಿಮನ್ಯು ಮಡಿದು ಹೋದ ವಾರ್ತೆಯನ್ನು ಗಗನದೇವತೆಯು ನುಡಿದಳು. ನೀವು ಕೇಳಲಿಲ್ಲವೆ ಸ್ವಾಮಿ. ಕರ್ಣಕಠೋರವಾಗಿದೆಯಲ್ಲಾ. ಮಗನಿರವು ಯಂತೋ ಭಾವಯ್ಯ ಜಾಗ್ರತೆ ಪಾಳೆಯಕ್ಕೆ ತೆರಳೋಣ ನಡೆಯಿರಿ.

ಕೃಷ್ಣ : ಅಯ್ಯ ಫಲುಗುಣ, ದುಃಖಪಡಬೇಡ ಸಮಾಧಾನ ಮಾಡಿಕೋ ತೆರಳೋಣ.

ಅರ್ಜುನ : ಹೇ ಭಾವಯ್ಯ, ಪಾಳೆಯದಲ್ಲಿ ಮಗನನ್ನು ಕಾಣುತ್ತೇನೊ ಅಲ್ಲದೆ ಮರಣ ವಾರ್ತೆಯನ್ನು ಕೇಳುತ್ತೇನೊ ಸ್ವಾಮಿ. ನನ್ನನ್ನು ಯಾಕೆ ಬಳಲಿಸುತ್ತೀಯೊ ಮುರಾರಿ ನಿಶ್ಚಯವನ್ನು ಹೇಳೊ ಶೌರಿ॥

ಪದ

ಸುರಪ ಜಾತನೆ ನಿನ್ನ ಸುತನನ್ನು ಕಾಣುವೆ ಬಾ ಪಾರ್ಥ ಕೇಳೈ
ತೆರಳಿ ಬಂದುದು ರಥ ಶಿಬಿರದ ಹೊರಗಾಗಿ ಪಾರ್ಥ ಕೇಳೈ॥

ಕೃಷ್ಣ : ಅಯ್ಯ ಫಲುಗುಣ ವೃಥಾ ಮನೋವ್ಯಥೆಯನ್ನು ವುಂಟುಮಾಡಿಕೊಳ್ಳಬ್ಯಾಡ. ಮಗನ ಕಾಣುವುದು ನಿಶ್ಚಯ. ಯೀ ನಮ್ಮ ರಥವು ಶಿಬಿರ ಸಮೀಪಕ್ಕೆ ಬಂತು. ಯಿಳಿದು ವಳಗೆ ಹೋದರೆ ಯಾವುದೂ ಗೊತ್ತಾಗುವುದು॥

ಅರ್ಜುನ : ಆಹಾ ಭಾವಯ್ಯ, ನಿಮ್ಮ ಮಾತುಗಳು ಯೆನ್ನ ಮನಸ್ಸಿಗೆ ಬಹಳ ಸಂದೇಹವುಂಟಾಗುತ್ತಲ್ಲಾ ಯಾಕೆ॥

ಕೃಷ್ಣ : ಅಯ್ಯ ಅರ್ಜುನ ಅನುಮಾನವನ್ನು ಬಿಡು ಅರಮನೆ ಪ್ರವೇಶಿಸೂ॥

ಭಾಮಿನಿ

ಹರಿ ರಥವಿಳಿದಂತೆ ಪಾರ್ಥನು ಭರದಿ ಕೋಪವಗೊಂಡು
ನಿಜ ಮಂದಿರಕೆ ಮೆಲ್ಲನೆ ಜರುಗಿದನು ಯಾದವರ ಗಡಣದಲೀ

ಕೃಷ್ಣ : ಆಹಾ ಅರ್ಜುನನಿಗೆ ಮಗನ ಮರಣ ವಾರ್ತೆಯಿಂದುಂಟಾದ ಶೋಕವೆಂಬ ಶಿಖೆಗೆ ಯಾರು ತಾನೆ ಯೀಡಾಗುತ್ತಿದ್ದರೂ ಆಹಾ ಅವನನ್ನು ವುಪಾಯಾಂತರದಿಂದ ಅರಮನೆಗೆ ಕಳುಹಿಸಿದ್ದೇ ಸರ್ವೋತ್ತಮವಾಯಿತು. ಯಿಲ್ಲದಿದ್ದರೆ ಶೋಕಾಗ್ನಿಯಿಂದ ಹುಚ್ಚನಂತೆ ಯೆಚ್ಚರ ತಪ್ಪಿ, ಏನು ಅನಾಹುತವನ್ನು ಮಾಡುತ್ತಿದ್ದನೋ ತಿಳಿಯದೂ. ಯೀಗ ನಾನು ನಮ್ಮ ಅರಮನೆಗೆ ಪ್ರವೇಶಿಸುವೆನೂ॥