(ಭೀಮನ ಸೋಲು)

ಸೈಂಧವ : ಎಲಾ ಭೀಮಾ, ಈ ಸೈಂಧವನ ಕೈಗಾರಿಕೆ ಈಗ ಗೊತ್ತಾಗಿರಬಹುದು. ಅಯ್ಯ ಭಾಗವತರೆ ಈ ಭೀಮನೇ ಮೊದಲು ಯಿವನ ಬೆಂಬಲಕ್ಕೆ ಬಂದ ಘಟೋದ್ಗಜ ಕುಂತೀಭೋಜ ನಕುಲ ದ್ರುಷ್ಟದ್ಯುಮ್ನ ಸಹದೇವ ಇನ್ನೂ ಮೊದಲಾದ ವೀರರ ಪಾಡೇನಾಗಿರುತ್ತೆ ನೋಡುವಂಥವರಾಗಿರಿ.

ಭಾಮಿನಿ

ಅಕಟಕಟ ಕೈಗುಂದಿದೆನು ಇವನಿಂದಾಗಿ ಪ್ರಕಟಿಸಿತು
ಅಪಜಯವು ಮುಖವೆಂತು ತೋರಲಿ ಸತ್ಯಸಂಧನಿಗೇ.

ಭೀಮ : ಆಹಾ ದೈವವೇ, ಈವತ್ತಿನ ಸಮರದಲ್ಲಿ ಈ ಅಧಮನಿಂದ ಒದೆಯನ್ನು ತಿಂದು ವದನವನ್ನು ತೋರಿಸದೆ ಸದನಕ್ಕೆ ಹೋಗಬೇಕಾಗಿ ಬಂತು, ಶಿವಶಿವಾ ಶಂಭೋಫಾಲಾಕ್ಷ ದಿಗಂಬರಾ ಈ ದಿವಸ ನಿನ್ನ ಕರುಣವು ಕಡಿಮೆಯಾದ್ದರಿಂದ ನಿನ್ನ ಭಕ್ತನಾದ ಭೀಮನಿಗೆ ಅಪಜಯಕ್ಕೆ ಕಾರಣವಾಯಿತು. ಆದರೂ ಚಿಂತೆಯಿಲ್ಲ. ಈ ವಿಷಯವನ್ನು ಸತ್ಯಸಂಧ ಯುಧಿಷ್ಟರ ಅಣ್ಣನವರಿಗೆ ಅರಿಕೆ ಮಾಡಿಕೊಳ್ಳುತ್ತೇನೆ.

ಭೀಮ : ಸತ್ಯಸಂಧರಾದ ಅಣ್ಣಯ್ಯನವರ ಪಾದಕ್ಕೆ ತಮ್ಮನಾದ ಭೀಮನಿಂದ ನಮಸ್ಕಾರ ಬರುವುದೂ

ಧರ್ಮರಾಯ : ಬಾರಯ್ಯ ತಮ್ಮಾ ಭೀಮಸೇನ, ಮುಖ ಖಿನ್ನನಾಗಿ ತಲೆಯನ್ನು ಬಗ್ಗಿಸಿಕೊಂಡು ಬಂದಿರುವೆ. ಈ ದಿವಸ ಅಪಜಯಕ್ಕೆ ಕಾರಣವಾಯಿತೇನೊ.

ಪದ

ಸತ್ಯವಂತರೆ, ಕೇಳಿ ಈ ದಿನ ಆಧಮನೊಡೆದನು ರಥವ ನೋಡದೆ
ಬಾಣ ಹತಿಯಲಿ ಗೋಣ ಮುರಿದನು ಸದನಕೋಗೆಂದ
ತರಳ ನರಳಿಯೆ ಮರಳಿ ಬಂದೆನು ನಿನ್ನ ಪಾದವ ಕಾಣಲೋಸುಗ
ಪ್ರಾಣಮಾತ್ರದಿ ಬದುಕಿ ಬಂದುದ ಕೇಳೆಂದನಾ ಭೀಮಾ॥

ಭೀಮ : ಅಣ್ಣಯ್ಯ ಸತ್ಯವಂತರೆ, ಈ ದಿವಸ ವೃದ್ಧ ಕ್ಷತ್ರಿಪುತ್ರ ಶತ್ರು ಅಧಮನಾದ ಸೈಂಧವನು ದ್ವಾರಾಧ್ಯಕ್ಷನಾಗಿ ಕೋಟೆಯ ಒಳಕ್ಕೆ ಪ್ರವೇಶ ಮಾಡಲು ದಾರಿಯನ್ನು ಕೊಡದೆ ಕದನವನ್ನು ನೋಡದೆ ಸದನಕ್ಕೆ ಹೋಗೆಂದು ಅನೇಕ ಪೆಟ್ಟುಗಳಿಂದ ಅಟ್ಟಹಾಸದಿಂದ ಮಟ್ಟು ಮಾಡಿ ಓಡಿಸುವಂಥವನಾದ. ತರಳನಾದ ನಾನು, ಆ ಪೆಟ್ಟನ್ನು ತಿಂದು ನರಳಿಕೊಂಡು ತಮ್ಮ ಪಾದವನ್ನು ಕಂಡು ಪ್ರಾಣವನ್ನು ಉಳಿಸಿಕೊಂಡಿರುವುದೇ ಪ್ರಯಾಸವಾಯಿತೋ ಅಣ್ಣಾ ಧರ್ಮಜ, ನಾನು ಇನ್ನೇನು ಮಾಡಲಿ. ಈ ದಿವಸ ನನ್ನ ಸಾಹಸ ನಡೆಯಲಿಲ್ಲ ಮುಂದೆ ಪ್ರಯತ್ನವನ್ನು ನೀವೇ ಇಟ್ಟುಕೊಳ್ಳಬಹುದು. ನನ್ನ ಅಡ್ಡಿಯಿಲ್ಲವಲ್ಲಾ.

ಭಾಮಿನಿ

ಅನುಜನಾಡಿದ ನುಡಿಗೆ ಯಮಜನು ಪರಾಜಯವೆಂತಾಯ್ತೆನುತಲಿ
ಬೆರಳ ಮೂಗಿನೊಳಿಟ್ಟು ಘನಚಿಂತೆಯಂ ತಾಳಿ ತನ್ನೊಡನೆ ತಿಳಿದಿಂತೆಂದನು॥

ಧರ್ಮರಾಯ : ಆಹಾ ದೈವವೇ ಶಿವ ಶಿವಾ ಶಂಕರ ಹೇ ತಮ್ಮಾ ಭೀಮಸೇನಾ, ನಾನಾಗಿಯೇ ನಿನಗೀ ಸಂಕಟವನ್ನು ಕೊಟ್ಟಂತಾಯ್ತು, ಚಿಂತೆಯಿಲ್ಲಾ ಈ ಕಾಲದಲ್ಲಿ ನರ ನಾರಾಯಣರು ಪಾತಾಳಲೋಕಕ್ಕೆ ನಿವಾತ ಕವಚರ ಮಕ್ಕಳಾದ ಸಮಸಪ್ತಕರ ಮೇಲೆ ಯುದ್ಧಕ್ಕೆ ಸಿದ್ಧರಾಗಿ ಹೋಗಿರುತ್ತಾರೆ. ಇದನ್ನು ತಿಳಿದುಕೊಂಡು ಶಸ್ತ್ರಪಂಡಿತರು ರಚಿಸಿರುವ ಪದ್ಮವ್ಯೂ ಹಕ್ಕೆ ಹೋಗಲಾರದೆ ಪ್ರಥಮದಲ್ಲಿಯೇ ದಂತಭಗ್ನವಾದಂತೆ ಹೋದವರು ನೀವು, ದ್ವಾರದಲ್ಲಿದ್ದ ಸೈಂಧವನಿಂದ ಪೆಟ್ಟುತಿಂದು ಬಂದು ಇದ್ದೀರಲ್ಲಾ ನೀವು ಕೆಟ್ಟಿರಿ, ಶಿವ ಶಿವಾ ಶಂಕರಾ ಏನ ಹೇಳಲಿ. ನಾವು ಕ್ಷತ್ರಿಯರಾಗಿ ಈ ಅವನಿಯಲ್ಲಿ ಅವತರಿಸಿ ಮಂದಮತಿಗಳಾಗಿ ಈ ಅಪನಿಂದೆಗೆ ಗುರಿಯಾಗಬೇಕಲ್ಲಾ॥

ಭೀಮ : ಅಣ್ಣಯ್ಯ ಹೇ ಸತ್ಯವಂತ, ಒಳ್ಳೇದು ಚಿಂತೆಯಿಲ್ಲ, ಅಸ್ತ್ರ ಪಂಡಿತರಿಂದ ರಚಿಸಿರುವ ಪದ್ಮವ್ಯೂ ಹವನ್ನು ಒಳಹೊಕ್ಕು ಖಾಡಾಖಾಡಿ ಯುದ್ಧವನ್ನು ಮಾಡುವಂತಾದ್ದನ್ನು ಈ ಧಾರುಣಿಯಲ್ಲಿ ಧಾರು ಬಲ್ಲರೋ ಧರ್ಮಜಾ॥

ಧರ್ಮರಾಯ : ತಮ್ಮಾ ಭೀಮಸೇನ ಈ ಧಾರುಣಿಯಲ್ಲಿ ಧಾರು ಬಲ್ಲರೆಂದು ಕೇಳುತ್ತೀಯೇನು ಹಾಗಾದರೆ ಹೇಳುತ್ತೇನೆ ಕೇಳು.

ಭಾಮಿನಿ

ಕಾಮಪಿತನದ ಬಲ್ಲನಾ ಬಲರಾಮನರಿವನು ಪಾರ್ಥ
ತಿಳಿದವ ಭೂಮಿಯಲ್ಲಿ ಸುರಪತಿಯ ಮೊಮ್ಮಗನು ಬಲ್ಲ ಹೊಕ್ಕಲಿಕೆ॥

ಧರ್ಮರಾಯ : ತಮ್ಮಾ ಭೀಮಸೇನ, ಪದ್ಮವ್ಯೂ ಹಕ್ಕೆ ಪ್ರವೇಶಮಾಡಿ. ಖಾಡಾಖಾಡಿ ಯುದ್ಧವನ್ನು ಮಾಡುವಂಥದ್ದು ಕಾಮಪಿತನಾದ ಕೃಷ್ಣನಿಗೆ ಗೊತ್ತು ಮತ್ತು ಅವರ ಅಣ್ಣನಾದ ಬಲರಾಮನಿಗೆ ಗೊತ್ತು. ಇದು ಹೊರತು ಅಸಹಾಯ ಶೂರನಾದ ತಮ್ಮ ಅರ್ಜುನನಿಗೆ ಚೆನ್ನಾಗಿ ಗೊತ್ತು. ಶಿವಾಯಿ ದೇವೇಂದ್ರನಿಗೆ ಮೊಮ್ಮಗನಾಗಿ ಅರ್ಜುನನಿಗೆ ಮಗನಾಗಿ ಈ ಅವನಿಯಲ್ಲಿ ಅವತರಿಸಿರುವ ಅಭಿಮನ್ಯುವಿಗೆ ಮಾತ್ರ ಒಳಕ್ಕೆ ಹೋಗುವುದಕ್ಕೆ ಮಾತ್ರ ಗೊತ್ತಿರುವುದು.

ಭೀಮ : ಅಣ್ಣಯ್ಯ, ಅಸಹಾಯ ಶೂರನಾದ ಅಭಿಮನ್ಯುವಿಗೆ ಹೋಗುವುದಕ್ಕೆ ಮಾತ್ರ ಗೊತ್ತು ಪುನಃ ಹೋದವನು ಹಿಮ್ಮರಳಿ ಬರುವುದನ್ನು ಕಂಡಿಲ್ಲವೇ ಅಗ್ರಜಾ॥

ಭಾಮಿನಿ

ಕ್ಷೇಮದಲಿ ಬರಲರಿಯನವನೀ ಸೀಮೆಯಲಿ ಮಿಕ್ಕವರ ಕಾಣೆನು
ಹಾ ಮಹಾದೇವನೆನುತ, ಚಿಂತಿಸುತಿರ್ದನವನೀಶ॥

ಧರ್ಮರಾಯ : ತಮ್ಮಾ ಭೀಮಸೇನ, ಅಸಹಾಯಶೂರನಾದ ಅಭಿಮನ್ಯು ಪದ್ಮವ್ಯೂಹಕ್ಕೆ ಪ್ರವೇಶ ಮಾಡುವಂಥದ್ದನ್ನು ಪೂರಾ ಬಲ್ಲನು. ಆದರೆ ಈ ಪ್ರಕಾರ ಹೋದವನು ಕ್ಷೇಮದಿಂದ ಹಿಮ್ಮರಳುವುದನ್ನು ಕಂಡಿಲ್ಲವಲ್ಲ. ಹೀಗಿರುವಲ್ಲಿ ಅಸ್ತ್ರ ಪಂಡಿತರಿಂದ ರಚಿಸಿದ ಚಕ್ರವ್ಯೂಹವನ್ನು ಹಾಳುಮಾಡುತಕ್ಕವರು, ಈ ಧಾರುಣಿಯಲ್ಲಿ ಯಾರನ್ನು ಕಾಣಲಿಲ್ಲವಲ್ಲಾ ಶಿವನೇ ಮಹದೇವ, ಮೃತ್ಯುಂಜಯ ಮುಂದೇನು ಗತಿ.

ವಚನ : ಈ ಪ್ರಕಾರವಾಗಿ ಸತ್ಯವಂತನಾದ ಧರ್ಮರಾಯನು ವ್ಯಸನವನ್ನು ಮಾಡುವಂಥಾ ಕಾಲದಲ್ಲಿ ಈ ವಿಷಯವು, ಅಭಿಮನ್ಯುವಿಗೆ ಗೊತ್ತಾಗಿ ಅವನು ಧರ್ಮರಾಯನನ್ನು ಸಂತೈಸಿ ರಣಾಗ್ರಕ್ಕೆ ಹೋಗುವುದಕ್ಕೆ ಅಪ್ಪಣೆಯನ್ನು ಕೇಳಲು ಯಾವ ಪ್ರಕಾರ ಬಂದು ಒಡ್ಡೋಲಗಸ್ತನಾದ.

ಅಭಿಮನ್ಯು : ಭಳಿರೇ ರಾಜಾಧಿರಾಜ ರಾಜಕುಮಾರ ಕಂಠೀರವಾ ಅಭಿಮನ್ಯು ಬಲ್ಲಿರಯ್ಯ ಭಾಗವತರೇ.

ಭಾಗವತ : ತಾವು ಧಾರು ತಮ್ಮ ಸ್ಥಳ ನಾಮಾಂಕಿತವಾವುದು, ತಾವು ಧಾರ ಮಕ್ಕಳು.

ಅಭಿಮನ್ಯು : ಅಯ್ಯ ಭಾಗವತರೇ, ಈ ಅವನಿಯಲ್ಲಿ ಸ್ವರ್ಗ ಮೃತ್ಯು ಪಾತಾಳ ಈ ಮೂರು ಲೋಕದ ಗಂಡನೆಂದು ಬಿರುದಂ ಪಡೆದು ಭಂಡರ ಮಂಡೆಗಳಂ ಚಂಡಾಡಿ ದಂಡಧರನಿಗೆ ಕೊಡುವುದಕ್ಕೆ ಪ್ರಚಂಡನಾಗಿರುವನು॥

ಭಾಗವತ : ಅಸಹಾಯ ಶೂರನಾದ ಅರ್ಜುನ ದೇವರೆಂದು ತಿಳಿಯಬಲ್ಲೆವು.

ಅಭಿಮನ್ಯು : ಅಂತಪ್ಪಾ ಅಸಹಾಯಶೂರನಾದ ಅರ್ಜುನದೇವರ ಕುಮಾರ ವೀರ ಕಂಠೀರವ ಅಭಿಮನ್ಯು ಎಂಬುದಾಗಿ ತಿಳಿಯಬಹುದು.

ಭಾಗವತ : ತಿಳಿದುಕೊಂಡಾಯ್ತು ತಾವು ಬಂದ ಕಾರಣವೇನು.

ಅಭಿಮನ್ಯು : ಅಯ್ಯ ಭಾಗವತರೇ, ನಮ್ಮ ದೊಡ್ಡಪ್ಪನವರಾದ ಧರ್ಮರಾಯರ ಚಿಂತೆಯನ್ನು ಪರಿಹರಿಸಿ ಚಕ್ರವ್ಯೂಹದ ಕೋಟೆಗೆ ಪ್ರಸಿದ್ಧಿಯಿಂದ ಯುದ್ಧಕ್ಕೆ ಹೋಗಬೇಕೆಂದು ಬಂದು ಯಿದ್ದೇನೆ. ದೊಡ್ಡಪ್ಪನವರ ದರುಶನವನ್ನು ಮಾಡಿಸಿ, ಆಶೀರ್ವಾದವನ್ನು ಕೊಡಿಸುವಂಥವರಾಗಿರಿ॥

ಭಾಗವತ : ರಾಜಪುತ್ರನೇ, ಚಿಂತಾ ಸಾಗರದಲ್ಲಿ ಮುಳುಗಿ ಮಹಾದ್ವಾರದಲ್ಲಿ ಕೂತು ಇದ್ದಾರಲ್ಲಾ ನೋಡಬಾರದೆ॥

ಅಭಿಮನ್ಯು : ದೊಡ್ಡಪ್ಪನವರಾದ ಧರ್ಮರಾಯರ ಪಾದಕ್ಕೆ ನಮಸ್ಕಾರ ಬರುತ್ತೆ.

ಧರ್ಮರಾಯ : ಚಿರಂಜೀವಿಯಾಗಿ ಬದುಕಪ್ಪ ಕಂದ ಅಭಿಮನ್ಯು॥

ಅಭಿಮನ್ಯು : ಚಿಕ್ಕ ದೊಡ್ಡಪ್ಪನವರಾದ ಭೀಮಸೇನರ ಪಾದಕ್ಕೆ ನಮಸ್ಕಾರ ಬರುತ್ತೆ.

ಭೀಮ : ನಿನಗೆ ಮಂಗಳವಾಗಲೈ ಮಗನೇ, ಅಭಿಮನ್ಯು,, ಚಿರಂಜೀವಿಯಾಗಿ ಬದುಕುವಂಥವನಾಗು॥

ಪದ(ರಾಗಪರವಿಏಕತಾಳ)

ಯಿಂತು ಜೀವಿಸುವುದನರಿತಭಿಮನ್ಯು ಮಹಾಂತ ಪರಾಕ್ರಮದಿಂ॥
ನಿಂತು ಮುಂಗೈ ಸರಪಣಿಯನು ಸರಿಸುತ, ಪಂಥದಿ ಪಿತಗೆಂದನು॥

ಅಭಿಮನ್ಯು : ಆಹಾ ಸಭಿಕರೆ, ಈ ಬಾಲಕನ ವಿಜ್ಞಾಪನೆಯನ್ನು ಲಾಲಿಸಿರಿ. ಈ ಕಾಲದಲ್ಲಿ ನಮ್ಮ ದೊಡ್ಡಪ್ಪನವರಾದ ಧರ್ಮರಾಯರು ಚಕ್ರವ್ಯೂಹದ ಕೋಟೆಗೆ ರಣಾಗ್ರಕ್ಕೆ ಹೋಗಿ ಜಯಶೀಲರಾಗಿ ಬರತಕ್ಕವರು ಧಾರೂ ಇಲ್ಲವೆಂದೂ ಸಂಕಟಪಟ್ಟು ಚಿಂತೆಯನ್ನು ಮಾಡುತ್ತಾ ಇದ್ದಾರೆ. ಇವರ ಚಿಂತೆಯನ್ನು ಪರಿಹರಿಸಿ ಸಂತೋಷವನ್ನುಂಟು ಮಾಡಲು ಕಂಠೀರವನ ಮರಿಯಂತೆ ತಾನಿದ್ದು, ಪ್ರಯೋಜನವೇನು, ಈ ಕಾಲದಲ್ಲಿ ಇವರ ಮನಸ್ಸಿಗೆ ಸಂತೋಷಪಡಿಸಿ ಅಪ್ಪಣೆಯಂ ಪಡೆದು ಪ್ರಸಿದ್ಧಿಯಿಂದ ಯುದ್ಧಕ್ಕೆ ಹೋಗುತ್ತೇನೆ ನೋಡಿರಿ, ಹೇ ದೊಡ್ಡಪ್ಪ ಧರ್ಮಜಾ ನನ್ನ ವಿಜ್ಞಾಪನೆಯನ್ನು ಆಲಿಸಬೇಕೋ.

ಪದ

ಬೊಪ್ಪನೆ ಬಿಡು ಬಿಡು ಚಿಂತೆಯ ರಿಪುಗಳ ಸೊಪ್ಪರಿಸುವೆನು ಬಿಡದೇ
ತಪ್ಪದೆ ಚಕ್ರವ್ಯೂಹಕೆ ಹೊಕ್ಕು ಅಧಮರನೊಪ್ಪಿಸುವೆನು ನಿಮಗೇ.

ಅಭಿಮನ್ಯು : ಹೇ ದೊಡ್ಡಪ್ಪ ಚಿಂತೆಯನ್ನು ಬಿಡು ಬಿಡು. ಈ ದಿವಸ ನಾನು ಶಸ್ತ್ರ ಪಂಡಿತರಾದ ಮುದಿಹಾರುವ ದ್ರೋಣನಿಂದ ನಿರ್ಮಿಸಿರುವ ಪದ್ಮವ್ಯೂಹಕ್ಕೆ ಪ್ರವೇಶಮಾಡಿ ಅಲ್ಲಿರುವ ಪ್ರಮುಖರನ್ನು ಕಾಡಿನಲ್ಲಿರತಕ್ಕ ಸೊಪ್ಪುಸೆದೆಗಳನ್ನು ಕತ್ತಿಯಿಂದ ಹ್ಯಾಗೆ ಸವರುತ್ತಾರೋ, ಅದರಂತೆ ನನ್ನ ಕರಗತವಾದ ಕತ್ತಿಯಿಂದ ಸರ್ವರನ್ನು ಯಮಧರ್ಮರಾಯನ ಪಟ್ಟಣಕ್ಕೆ ಕಳುಹಿಸಿ ಕುರುಕ್ಷೇತ್ರದಲ್ಲಿ ಇರುವ ಜಯಸಿರಿಯೆಂಬ ಲಕ್ಷ್ಮಿಯನ್ನು ಮುಂದಲೆ ಹಿಡಿದು ಎಳೆದುಕೊಂಡು ಬಂದು ನಿನಗೆ ಸಂತೋಷವನ್ನುಂಟು ಮಾಡುತ್ತೇನೆ. ಧರ್ಮಜ ದೊಡ್ಡಪ್ಪ, ಹೀಗಿರುವಲ್ಲಿ ನನಗೆ ಈ ಕ್ಷಣವೇ ಅಪ್ಪಣೆಯನ್ನು ದಯಪಾಲಿಸಬೇಕು ಬೇಡುವೆ॥

ಧರ್ಮರಾಯ : ಕಂದ ಅಭಿಮನ್ಯು ನೀನು ಸಣ್ಣವನಾಗಿರುತ್ತೀಯ. ನೀನು ಚಕ್ರವ್ಯೂಹಕ್ಕೆ ಹೋಗಿ ಹೊಡೆದಾಡತಕ್ಕ ಚಮತ್ಕೃತಿಯನ್ನು ಬಲ್ಲೆಯೇನಪ್ಪಾ ಬಾಲ

ಪದ

ಬಲ್ಲೆನು ಚಕ್ರವ್ಯೂಹದಿ ಹೊಡೆದಾಡುವ ಎಲ್ಲಾ ಚಮಕೃತಿಯಾ
ನಿಲ್ಲಾದೆ ವೀಳ್ಯವನು ಎನಗಿತ್ತು ಕಳುಹಿಸು ತಲ್ಲಣಗೊಳ್ಳದೀಗ॥

ಅಭಿಮನ್ಯು : ಅಪ್ಪಾಜಿ ಹೇ ಧರ್ಮಜಾ, ಚಕ್ರವ್ಯೂಹಕ್ಕೆ ನುಗ್ಗಿ ಖಾಡಾಖಾಡಿ ರಣಾಗ್ರವನ್ನು ಮಾಡತಕ್ಕ ಎಲ್ಲಾ ಚಮತ್ಕಾರವನ್ನು ಕಂಡಿದ್ದೇನೆ, ಚಿಂತೆಯನ್ನು ಮಾಡದೆ ಸಂತೋಷದಿಂದ ವೀಳ್ಯವನ್ನು ಕೊಟ್ಟು ಕಳುಹಿಸುವಂಥವರಾಗಿರಿ.

ಧರ್ಮರಾಯ : ಕಳುಹಿಸುವುದು ಖರೆ, ಚಕ್ರವ್ಯೂಹಕ್ಕೆ ಹೋಗಿ ಏನು ಮಾಡುತ್ತೀಯೋ ಕಾಣೆನಲ್ಲಾ॥

ಪದ

ಮಾರಿಗೆ ಹಬ್ಬವ ಮಾಡುವೆ ಕೌರವ ವೀರರ ತಲೆ ಕಡಿದು
ಶಂಕೆಗೊಳ್ಳದೆ ನಿಮಿಷ ಮಾತ್ರದಿ ಹರುಷ ನೋಡೆಂದ.

ಅಭಿಮನ್ಯು : ಹೇ ದೊಡ್ಡಪ್ಪ, ಈ ದಿವಸ ವೀಳ್ಯವನ್ನು ಕೊಟ್ಟು ರಣಾಗ್ರಕ್ಕೆ ಕಳುಹಿಸಿದ್ದೆ ಖರೆಯಾದರೆ, ಪದ್ಮವ್ಯೂಹದಲ್ಲಿರತಕ್ಕ ಖೂಳರಾದ ಕೌರವಾದಿಗಳ ತಲೆಗಳನ್ನು ಅದೇ ಪದ್ಮವ್ಯೂಹಕ್ಕೆ ಮಾರಿಯ ಮುಂದೆ ಕುರಿಕೋಣಗಳ ಕಡಿವಂತೆ, ಮಾರಿಗೆ ಹಬ್ಬವನ್ನು ಮಾಡಿ ಈ ಧರಿತ್ರಿಯಲ್ಲಿರುವ ಶಾಕಿನಿ ಡಾಕಿನಿ ಮಾಲಿನಿ ಜ್ವಾಲಿನಿ ಎಂಬ ಭೂತ ಬಳಗಕ್ಕೆ ಬಲಿಯನ್ನು ಕೊಟ್ಟು ಬರುತ್ತೇನೆ, ಯಿಂಥಾ ಪರಾಕ್ರಮ ಯನಗಿರುವಲ್ಲಿ ನೀವು ನನ್ನನ್ನು ಕಳುಹಿಸಿ ಯಾತಕ್ಕೆ ಪರೀಕ್ಷೆ ಮಾಡಬಾರದು ದೊಡ್ಡಪ್ಪ-

ಭಾಮಿನಿ

ವಸುಧೆಪತಿ ಕೇಳಿಂತು ಧರ್ಮಜ ಸಲಿಸುವ ಚಿಂತೆಗಳ ಬಿಟ್ಟುಲ್ಲಾಸದಿ
ಮಗುವನು ತೆಗೆದು ಬಿಗಿಯಪ್ಪುತಲಿ ಮುದ್ದಾಡಿ॥

ಧರ್ಮರಾಯ : ಆಹಾ ಇದೇನು ಆಶ್ಚರ್ಯ. ಸಣ್ಣ ಮಗುವಿನ ಮಾತುಗಳನ್ನು ಕೇಳಿ ಕಣ್ಣೀರು ಹೋಗಿ ಸಂತೋಷದಿಂದ ಈ ಮಗುವನ್ನು ಮುದ್ದಾಡಬೇಕಾಗಿರುವುದು. ಮಗನೆ ಅಭಿಮನ್ಯು ಹೀಗೆ ಬಾರಪ್ಪ ಕಂದ ಹೇಳುತ್ತೇನೆ ಕೇಳು.

ಭಾಮಿನಿ

ಶಿಶುವು ನೀನೆಲೆ ಮಗನೆ ಸಂಗರಕಸದಳವು ಧುರಧೀರ
ಷಡುರಥರ ಬೇಗೆಯನ್ನು ನೀನೆಂತು ಸೈರಿಸುವೆ ಹೇಳೆಂದಾ॥

ಧರ್ಮರಾಯ : ಕಂದ ಅಭಿಮನ್ಯು, ಈ ಕಾಲದಲ್ಲಿ ಸಣ್ಣ ಪ್ರಾಯದ ಎಳೆಯ ಹುಡುಗ ಕಂದಯ್ಯ ಹೀಗಿರಲು ಸಮರಾಂಗಣದಲ್ಲಿ ಸಮರ್ಥರಾದ ಅತಿರಥ, ಷಡುರಥದೊಂದಿಗೆ ಹೆಣಗಾಡಿ ಅವರು ಬಿಡುವ ಬಾಣಗಳ ಘತಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯವು ನಿನಗುಂಟೇನಪ್ಪಾ ಕಂದ, ಹ್ಯಾಗೆ ಸೈರಿಸುವೆ ನನಗೆ ತಿಳಿಯದಲ್ಲ.

ಅಭಿಮನ್ಯು : ತಾತಯ್ಯ, ಅಂಥಾ ಸಾಮರ್ಥ್ಯವು ಇದ್ದದ್ದರಿಂದ ಬಂದು ಯಿದ್ದೇನೆ ಹೊರತು ಅನ್ಯಥಾ ಬರುತ್ತಿರಲಿಲ್ಲಾ, ಅಪ್ಪಣೆಯಾಗಲಿ.

ಪದತೋಡಿಆದಿತಾಳ

ಮಗನೆ ಕಾಲಾಗ್ನಿಯನು ಹೊಗಲಿಬಹುದು
ಅಹಿಫಣಿಯೊಳು ನಲಿದಾಡಬಹುದು.

ಧರ್ಮರಾಯ : ಮಗನೆ ಅಭಿಮನ್ಯು, ಕಾಲಾಗ್ನಿಯ ಮಧ್ಯಭಾಗದಲ್ಲಿ ಪ್ರವೇಶ ಮಾಡಿದರೂ ಮಾಡಬಹುದು, ಇದು ಹೊರತು ಕಾರ್ಕೋಟಕ ಅಂದರೆ ವಿಷಪುಂಜವಾದ ಸರ್ಪನ ಫಣೆಯಲ್ಲಿ ಕುಣಿದಾಡಬಹುದು. ಹೀಗಿರುವಲ್ಲಿ ರಣಾಗ್ರವು ನಿನ್ನಂಥವನಿಗೆ ಸಲ್ಲುವುದೇ ಸದ್ಯಕ್ಕೆ ಸಲ್ಲದ ಕಾಲದಲ್ಲಿ ಮತ್ತೂ ಹೇಳುತ್ತೇನೆ.

ಪದ

ವಿಗಡ ಮೃತ್ಯವಿನ ಬಾಯೊಳು ಹೊಕ್ಕು ಬರಬಹುದೂ
ಹೊಗುವುದು ಚಕ್ರವ್ಯೂಹವನೂ ಸಾಧ್ಯವೇ ಎಂತು ಪೋಗುವೆಯೊ
ಮಗುವೆ ಚಕ್ರವ್ಯೂಹಕಿನ್ನೆಂತು ಪೋಗುವೆಯೊ ಮಗುವೇ.

ಧರ್ಮರಾಯ : ಮಗನೆ ಅಭಿಮನ್ಯು, ಕ್ರೂರವಾದ ಮೃತ್ಯುವಿನ ಬಾಯಲ್ಲಿ ಹೊಕ್ಕು ಬಂದರೂ ಬರಬಹುದು. ಆದರೆ ಈ ಚಕ್ರವ್ಯೂಹಕ್ಕೆ ಹೊಗುವುದು ನಿನಗೆ ಅಸಾಧ್ಯವಾಗಿರುತ್ತೆ. ಹೀಗಿರುವ ಕಷ್ಟದಲ್ಲಿ ನೀನಾದರೆ ಹ್ಯಾಗೆ ಹೋಗಿ ಬದುಕುವೆಯೋ ಬಾಲ, ಬೇಡಪ್ಪ ಅತಿ ಕಷ್ಟವಿರುವುದು.

ಅಭಿಮನ್ಯು : ತಾತಯ್ಯ ನಿನಗೇನೊ ಅತಿ ಕಷ್ಟ ನನಗೆ॥

ಪದರಾಗಶಂಕರಾಭರಣಮಟ್ಟತಾಳ

ಬಿಡು ಬಿಡು ಮಹಾಸಿಂಹರಾಜನ ಕೂಡ ನರಿಗಳು ಬದುಕಬಲ್ಲವೇ
ತಡೆಯದೆನ್ನನು ಕಳುಹಿ ಪರುಕಿಸಿ ನೋಡೆನ್ನ ತಾತ॥

ಅಭಿಮನ್ಯು : ದೊಡ್ಡಪ್ಪ, ಚಿಕ್ಕ ಮಗನು ಚಕ್ರಬಿಂಬದ ಕೋಟೆಗೆ ಹ್ಯಾಗೆ ಹೋಗಬಲ್ಲ ಎಂಬ ಸಂಶಯವೇನೋ ನಿಮ್ಮ ಮನಸ್ಸಿಗೆ ಅಂಕುರಿಸಿರಬಹುದು. ಅದನ್ನು ಇಲ್ಲಿಗೆ ಮರೆತುಬಿಡಿ. ಸಿಂಹರಾಜನೊಂದಿಗೆ ಬಡ ನರಿಗಳು ಜಗಳವನ್ನು ಬೆಳೆಸಿದರೆ ಅವುಗಳು ಬದುಕಬಲ್ಲವೆ ಹೇಳಿರಿ. ಪರಂತು ತಡಮಾಡದೆ ನನ್ನನ್ನು ಕಳುಹಿಸಿದರೆ ಕಲಶೋದ್ಭವನಾದ ದ್ರೋಣನ ಚಕ್ರವ್ಯೂಹವೆಂಬ ಕುಟಿಲತಂತ್ರಕ್ಕೆ ಅಂಜುವ ಅರಸು ಮಗ ನಾನಲ್ಲ. ಅರ್ಜುನನ ಮಗ ಅಭಿಮನ್ಯುವಲ್ಲವೇ ದೊಡ್ಡಪ್ಪ ಅಪ್ಪಣೆಯಾಗಬೇಕು.

ಪದತೋಡಿಆದಿತಾಳ

ಕಂದ ಕೇಳ್ ಅಶ್ವತ್ಥಾಮ ಗುರುಕೃಪ ಆದಿತ್ಯಸುತರೊಂದಾಗಿರುವರು ನವಗ್ರಹದಂತೆ॥

ಧರ್ಮರಾಯ : ಕಂದ ಅಭಿಮನ್ಯು, ಕಲಶಜರಿಂದ ಕಟ್ಟಲ್ಪಟ್ಟ ನಳಿನವ್ಯೂಹದಲ್ಲಿ ಅಶ್ವತ್ಥಾಮ ಶಲ್ಯ ಕೃಪ ಶಸ್ತ್ರ ಪಂಡಿತ ಕರ್ಣನೆ ಮೊದಲಾದ ವೀರಾಧಿವೀರರು ನವಗ್ರಹದಂತೆ ಒಗ್ಗಟ್ಟಾಗಿರುತ್ತಾರೆ. ಈ ನಿನ್ನ ಸಾಹಸವಲ್ಲಿ ಸಂಧಿಸುವುದಿಲ್ಲ, ಸುಮ್ಮನಿರಬಾರದೇ॥

ಅಭಿಮನ್ಯು : ತಾತಯ್ಯ, ಇವರು ನವಗ್ರಹದಂತೆ ಒಗ್ಗಟ್ಟಾಗಿದ್ದರೆ ನಾನು ಯಿವರನ್ನು ತೆಗೆದುಕೊಳ್ಳುವುದಕ್ಕೆ ದಶ ನವಗ್ರಹವಲ್ಲವೇ ತಾತಯ್ಯ ಇದಕ್ಕೇನ ಹೇಳುವಿರಿ.

ಪದ

ಯಿಂದುಧರನು ಪೊಕ್ಕು ಜೀವಿಸಲರಿಯನು ಸಂದೇಹವಿದೆ ರಣ ಸಾಮಾನ್ಯವಲ್ಲ.

ಧರ್ಮರಾಯ : ಮಗನೆ ಅಭಿಮನ್ಯು, ಈ ದಿವಸ ರಚಿಸಿರುವ ಚಕ್ರವ್ಯೂಹವನ್ನು ಹೊಕ್ಕು ಜೈಸಿ ಬರತಕ್ಕದ್ದು ಇಂದುಧರನಾದ ಚಂದ್ರಮೌಳಿಗೂ ಅಸಾಧ್ಯವಾಗಿರುವಲ್ಲಿ, ನೀನು ಹೋಗಿ ಬರುವುದುಂಟೇನಪ್ಪಾ ಬಾಲ॥

ಅಭಿಮನ್ಯು : ತಾತಯ್ಯ, ಯಿಂದುಧರನಾದ ಚಂದ್ರಮೌಳಿಗೂ ಅಸಾಧ್ಯವೋ ಕಡೆಗೂ ನೀವು ದಾರಿಗೆ ಬರಲಿಲ್ಲವು ವೊಳ್ಳೇದು॥

ಪದಅಟ್ಟತಾಳ ರಾಗಶಂಕರಾಭರಣ

ಗಾಳಿ ಬೆದರುವುದುಂಟೆ ವಹ್ನಿಯ ಜ್ವಾಲೆ ತುಹಿನಕೆ
ಬೆದರಿ ಪೋಪುದೆ ಬಾಲನೆಂದೆಂಬ ಚಿಂತೆಯ
ಮಾಡದೆ ಕಾಳಗಕಿಂದು ಕಳುಹು ಬೇಗದಿ॥

ಅಭಿಮನ್ಯು : ದೊಡ್ಡಪ್ಪ, ವಹ್ನಿಗೆ ಗಾಳಿ ಬೆದರುವುದುಂಟೆ, ನನ್ನನ್ನು ಬಾಲನೆಂದು ಭಾವಿಸದೆ ಈ ಕ್ಷಣವೇ ವೀಳ್ಯವನ್ನು ಕೊಟ್ಟು ಕಳುಹಿಸಬಾರದೇ ತಾತಯ್ಯ.

ಪದರಾಗತೋಡಿಆದಿತಾಳ

ಮಾಣದೆ ಭೀಮ ನಕುಲ ಸಾತ್ಯಕಿಯರು ಪ್ರಾಣಮಾತ್ರದಿ ಬಿಟ್ಟರಾ ಭಯದಿಂದೆ॥

ಧರ್ಮರಾಯ : ಹೇ ಕಂದ ಅಭಿಮನ್ಯು, ನಿಮ್ಮ ದೊಡ್ಡಪ್ಪನಾದ ಭೀಮಸೇನನು ತನ್ನ ಬೆಂಬಲಕ್ಕೆ ಘಟೋದ್ಗಜ, ನಕುಲ, ಸಹದೇವ, ಕುಂತಿಭೋಜ ಮೊದಲಾದ ಪ್ರಮುಖರನ್ನು ಕರೆದುಕೊಂಡು ಹೋಗಿಯು ಕೂಡ ದ್ವಾರದಲ್ಲಿದ್ದ ಸೈಂಧವನಿಂದ ಒದೆಯನ್ನು ತಿಂದು, ಪ್ರಾಣಮಾತ್ರ ಬದುಕಿ ಬಂದಿರುವುದೇ ಪ್ರಯಾಸವಾಗಿರುತ್ತೆ ಮಗು. ಹೀಗಿರುವಲ್ಲಿ ನೀನು ಈ ಕಾರ್ಯವನ್ನು ಹ್ಯಾಗೆ ಸಾಗಿಸುವೆ ಮತ್ತೂ ಹೇಳುತ್ತೇನೆ.

ಪದ

ಪ್ರಾಣವುಳ್ಳ ವಿರಾಟ ದ್ರುಪದರಾಹವದೊಳಿಹ
ಕಾಣದೆ ಅಡಗಿಹರಿಂದು ನಡಿ ನಡಿ॥

ಧರ್ಮರಾಯ : ಹೇ ಬಾಲಕ, ನಮ್ಮ ಬಲದಲ್ಲಿ ಧೀರಾಗ್ರೇಸರರಾದ ವಿರಾಟ ದ್ರುಪದ ದುಷ್ಟದ್ಯುಮ್ನ, ಯಿವರು ಮೊದಲಾಗಿ ಹೋದವರು ವೈರಿಗಳಿಂದ ಪೆಟ್ಟು ತಿಂದು ನಾರಿಯಂತೆ ಮೋರೆಯನ್ನು ವಾರೆ ಮಾಡಿಕೊಂಡು ಕೂತಿರುವುದನ್ನು ಕಂಡೆಯೋ ನೋಡಪ್ಪಾ ಮಗುವೆ॥

ಅಭಿಮನ್ಯು : ಹೇ ತಂದೆಯೇ, ಯಿವರೆಲ್ಲ ಸೋತು ಬಂದರೆ ನಾನು ಸೋಲತಕ್ಕವನೆ, ಅಂಥ ಪಿಂಡವಲ್ಲ, ಪ್ರಚಂಡ ಹೇಳುತ್ತೇನೆ.

ಪದ

ಹಲವು ಪುಷ್ಪದ ವಾಸನೆಗಳನು ಕೊಳಲು ಸಂಪಿಗೆಯ ಪರಿಮಳ
ಅಂಕುರಪ್ಪುದು ವಿಹಿತವಪ್ಪುದೆ, ತಿಳಿಯದೆ ಕೆಣಕಿ ನೋಡಲಿ॥

ಅಭಿಮನ್ಯು : ಹೇ ತಂದೆಯೇ, ಜೇನುಹುಳುಗಳು ಅನೇಕ ಹೂವಿನ ವಾಸನೆಯನ್ನು ತೆಗೆದುಕೊಂಡು ಅದರಲ್ಲಿರುವ ಅಮೃತವನ್ನು ಸೇವಿಸತಕ್ಕದ್ದು ಸ್ವಾಭಾವಿಕ. ಇದರಂತೆ ಕೆಂಡ ಸಂಪಿಗೆ ಹೂವಿನ ವಾಸನೆ ಅಮೃತವನ್ನು ಸೇವಿಸುವುದಕ್ಕೆ ಎರಗಿದ ಆ ಜೇನು ಹುಳುಗಳು ಬದುಕುವುದುಂಟೆ ಬದುಕಲಾರವು. ಹೀಗಿರಲು ಕೌರವಾದಿಗಳು ನನ್ನನ್ನು ಕೆಣಕಿ ನೋಡಿದರೆ ಆವಾಗ್ಗೆ ನನ್ನ ಸಾಹಸವನ್ನು ತೋರೆನಲ್ಲಾ ತಡಮಾಡಬ್ಯಾಡಿ ಕಳುಹಿಸಿಬಿಡಿ॥

ಭಾಮಿನಿ

ಇಳೆಯರಸ ಕೇಳಿಂತು ಕುವರನ ಛಲದ ನುಡಿಗಳನೆ
ಹಿಗ್ಗುತಲೆ ಬೆಂಬಲಕೆ ಮೋಹರ ಸಹಿತ ಹರಸುತ್ತಾಗ ವೀಳೆಯವಾ॥

ಧರ್ಮರಾಯ : ಆಹಾ, ಈ ಮಗುವಾದ ಅಭಿಮನ್ಯುವಿನ ಪಂಥದ ಮಾತುಗಳ ಕೇಳಿ ಮನಸ್ಸು ಸಂತೋಷಾಬ್ಧಿಯಲ್ಲಿ ತೇಲಾಡುತ್ತಿದೆ. ವಂದು ವೇಳೆ ಕಳುಹಿಸದೆ ಯಿದ್ದರೂ ಕಂದನು ಹೋಗದೆ ಯಿರಲಾರನು. ಆದ್ದರಿಂದ ಯಿವನಿಗೆ ಬೆಂಬಲಕ್ಕೆ ಬೇಕಾದ ಸೇನೆಯನ್ನು ಕೊಟ್ಟು ಆಶೀರ್ವಾದವನ್ನು ಮಾಡಿ ಕಳುಹಿಸಿ ಕೊಡುತ್ತೇನೆ, ಅಭಿಮನ್ಯು ಬಾರಯ್ಯ ಹೀಗೆ॥

ಭಾಮಿನಿ

ಚಿಂತೆ ಯಾತಕೆ ಜೀಯ ರಿಪುಕುಲಕೆ ಅಂತಕನು ನಾನಾಗಿರುವೆ
ಕುರುಕುಲವೈರಿಯನು ಗೆಲುವುದಕೆ ವೀಳೆಯವ ತನಗೆಂದಾ॥

ಅಭಿಮನ್ಯು : ದೊಡ್ಡಯ್ಯ, ಏತಕ್ಕೆ ಚಿಂತೆಯನ್ನು ಮಾಡುತ್ತೀಯ. ಕುರುಕುಲವೈರಿಯನ್ನು ಗೆಲ್ಲುವುದಕ್ಕೆ ವೀಳೆಯವನ್ನು ತರಿಸಿ ಕೊಡುವಂಥವರಾಗಿರಿ

ಭಾಮಿನಿ

ಹುಲಿಯ ಗರ್ಭದಿ ಹುಲ್ಲೆ ಜನಿಸುವುದುಂಟೇ ನೀನೆಲೆ ಮಗನೆ
ಕುರುಕುಲ ಸಂತತಿಯ ಗೆಲುವುದಕ್ಕೆ ಕೊಳ್ಳಯ್ಯ ವೀಳೆಯವಾ॥

ಧರ್ಮರಾಯ : ಆಹಾ ಸಭಿಕರೆ, ಹುಲಿಯ ಹೊಟ್ಟೆಯಲ್ಲಿ ಹುಲಿಮರಿ ಹುಟ್ಟೀತೆ ಹೊರ್ತು ಹುಲ್ಲೇ ಕರುವು ಹುಟ್ಟುವುದಿಲ್ಲ. ಕಂದ ಅಭಿಮನ್ಯು, ಕುರುಕುಲ ಸಂತತಿಯ ಬೇರನ್ನು ಕೀಳುವುದಕ್ಕ ಕೊಳ್ಳಪ್ಪಾ ವೀಳೆಯವನ್ನು ಜಯಶೀಲನಾಗಿ ಬರುವಂಥವನಾಗಯ್ಯ ಬಾಲಕ॥

ಅಭಿಮನ್ಯು : ನೀವು ಕೊಟ್ಟ ವೀಳೆಯವನ್ನು ನಯವಿನಯ ಭಕ್ತಿಯಿಂದ ತೆಗೆದುಕೊಂಡಿರುತ್ತೇನೆ. ಅಪ್ಪಣೆಯಾದರೆ  ಯೀಗಲೆ ರಣ ಸನ್ನದ್ಧನಾಗಿರುತ್ತೇನೆ.

ಧರ್ಮರಾಯ : ಕಂದ ಅಭಿಮನ್ಯು, ರಣಾಗ್ರಕ್ಕೆ ಹೋಗುವಾಗ ನಿಮ್ಮಯ ತಾಯಿಯಾದ ಸುಭದ್ರಾದೇವಿಗೆ ನಮಸ್ಕಾರವನ್ನು ಮಾಡಿ ಆಶೀರ್ವಾದವನ್ನು ಪಡೆದು ಹೊರಟು ಹೋಗಬಹುದಯ್ಯ ಬಾಲಾ॥

ಅಭಿಮನ್ಯು : ಜನಕ ಅಪ್ಪಣೆ. ಎಲೈ ಚಾರಕ ನೀನು ಯೀಕ್ಷಣವೆ ಅಂಬಾ ವಿಲಾಸಕ್ಕೆ ಹೋಗಿ ಯಮ್ಮ ಹೆತ್ತವ್ವನನ್ನು ಕರೆದುಕೊಂಡು ಬರುವಂಥವನಾಗು॥

ದ್ವಿಪದಿ

ಮಗನಿರವ ತಾ ಕೇಳಿ ಮನದಿ ಹರುಷವ ತಾಳಿ
ಅತಿ ಕ್ಲೇಶದಿಂದ ಅಂಗನೆ ಸೌಭದ್ರೆ
ಆಭರಣವಿಟ್ಟು ರಂಗುಳದ ಸೀರೆಯನು ರಮಣಿ ತಾನುಟ್ಟು.

ರಾಗದರುವುಆದಿತಾಳ

ಸರಸಿಜನಯನೆ ಯನ್ನ ಕಂದನ ತೋರಿಸಮ್ಮ
ರಾಜೀವನೇತ್ರೆ ಯನ್ನ ಪುತ್ರಾನ ತೋರಿಸಮ್ಮಾ॥