ಪ್ರತಿಕಾರರು : ಭಾಗವತ ಸಿದ್ಧೇಗೌಡರು

ಪ್ರತಿ ಮಾಡಿದ ದಿನಾಂಕ : ತಾರೀಕು 14-10-1942

 

ಕಥಾರಂಭ

(ಭಾಗವತರ ಮಾತು)

ಕೇಳಿರೈ ಸಭಾಜನರೇ ಪಾಂಡವರ ವಂಶ ತಾತ್ಪರ‌್ಯವೇನಂದರೆ, ಶಂತನು ಚಕ್ರವರ್ತಿಯೆಂಬ ವಬ್ಬ ರಾಜನಿದ್ದನು, ಅವನಿಗೆ ಜೇಷ್ಟಪುತ್ರನಾದ ಭೀಷ್ಮಾಚಾರಿಯು ಎರಡನೆಯವನಾದ ಚಿತ್ರ ವೀರ್ಯನು, ಮೂರನೆಯವನಾದ ವಿಚಿತ್ರವೀರ್ಯನು ಯೆಂಬ ಮೂರು ಜನ ಗಂಡು ಮಕ್ಕಳು. ಹಿರಿಯವನಾದ ಭೀಷ್ಮಾಚಾರಿಯು ಬಾಲಬ್ರಹ್ಮಚಾರಿಯಾದನು. ಚಿತ್ರವೀರ್ಯನಿಗೆ ಪಾಂಡುರಾಯನು ವಿಚಿತ್ರವೀರ್ಯನಿಗೆ ಧೃತರಾಷ್ಟ್ರನು ಹುಟ್ಟುವಂಥವರಾದರು. ಪಾಂಡುರಾಯನ ಸತಿಯ ವುದರದಲ್ಲಿ ಧರ್ಮರಾಯ, ಭೀಮ, ಅರ್ಜುನ, ನಕುಲ ಸಹದೇವರು ಹುಟ್ಟಿದರು. ಧೃತರಾಷ್ಟ್ರ ರಾಯನಿಗೆ ಕೌರವ ಮೊದಲಾಗಿ ನೂರೊಂದು ಜನ ಮಕ್ಕಳು ಹುಟ್ಟುವಂಥವರಾದರು. ಪಾಂಡವರಿಗೂ ಕೌರವರಿಗೂ ತರಳತನದಿಂದಲೇ ದ್ವೇಷವು ಹೆಚ್ಚುವಂತಾಯ್ತು. ಯುದ್ಧವು ತೊಡಕಿತು. ಅನಂತರ ಏಕಕಾಲದಲ್ಲಿ ಸಮಸಪ್ತಕ ರಣಾಗ್ರವು ತೊಡಕಲು ಸತ್ಯವಂತನಾದ ಧರ್ಮರಾಯನು ಚಕ್ರವ್ಯೂಹದ ಕೋಟೆಗೆ ರಣಾಗ್ರಕ್ಕೆ ಯಾರನ್ನು ಕಳುಹಿಸಲಿ ಯೆಂಬುದಾಗಿ ಚಿಂತೆಯನ್ನು ಮಾಡುತ್ತಿರುವ ಸಮಯದಲ್ಲಿ ಅರ್ಜುನನ ಮಗನಾದ ಅಭಿಮನ್ಯುವು ಬಂದು ದೊಡ್ಡ ತಂದೆಯಾದ ಧರ‌್ಮರಾಯನಿಗೆ ಸಾಷ್ಟಾಂಗ ವಂದನೆಯು ಮಾಡಿ, ಹೇ ತಂದೆಯೆ ಚಕ್ರವ್ಯೂಹದ ಕೋಟೆಯಲ್ಲಿ ನಾನೇ ರಣಾಗ್ರವನ್ನು ಮಾಡಿ ಬರುತ್ತೇನೆಂದು ಧರ್ಮರಾಯನಿಂದ ಅಪ್ಪಣೆಯನ್ನು ತೆಗೆದುಕೊಂಡು ಹೋಗಿ ಚಕ್ರವ್ಯೂಹದ ಕೋಟೆಯಲ್ಲಿ ಕಾಡಾಕಾಡಿ ಯುದ್ಧವಂ ಮಾಡಿ ಮಡಿದು ಹೋಗುವಂಥವನಾದ ನಂತರ ಈತನ ತಂದೆಯಾದ ಅರ್ಜುನನು ಸೈಂಧವನ ಶಿರಚ್ಛೇದನ ಮಾಡಿದನೆಂದು ಹೇಳಿದಂತೆ ವೈಶಂಪಾಯನ ರುಷಿಗಳಿಗೆ ಜನಮೇಜಯರಾಯನು ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಚಕ್ರವ್ಯೂಹಕ್ಕೆ ಹೊಕ್ಕ ಕಥೆಯನ್ನು ಯಾವ ಪ್ರಕಾರ ಹೇಳುತಿರ್ದಾರೆ॥

 

(ಕೌರವರ ಪ್ರವೇಶ)

ಕೌರವ : ಎಲೈ ಭಟಾಗ್ರಣ್ಯನೇ ಹೀಗೆ ಬಾ ಮತ್ತೂ ಹೀಗೆ ಬಾ. ಎಲೈ ತಟಘಟಿತ ಭಟ ಕಡಕ ಮೃದು ಮಧುತಿಲಕನೆಂದೆನಿಸಿದ ಭಟಾಗ್ರಣ್ಯನೇ ಶಹಬ್ಬಾಷ್, ಯೆನ್ನ ಮುಂದೆ ತಕ ತಕನೆ ಕುಣಿ ಕುಣಿದು ಧೀಂಕಿಟ್ಟು ಬೇಸರಗೊಂಡ ಮಯೂರದ ಮರಿಯಂತೆ ಯನ್ನ ಕಂಡು ಭಯಾರಸಚಿತ್ತನಾಗಿ ಯನ್ನನ್ನು ನೀವು ಧಾರು ಯೆಂದು ಕೇಳುವ ಮಾನುಷ್ಯ ನೀ ಧಾರೊ ಹೀಗೆ ಬಾರೋ॥

ಭಳಿ ಭಳಿರೇ ಸಾರಥಿ, ಸಾರಥಿಯೆಂಬ ಚಾರಕುಲ ಮಸ್ತಕದ ಮಣಿಯೆ ನಿನಗಾರು ಹೊಣೆಯೆ, ಎಲೈ ಸಾರಥಿ, ಹಸ್ತಿನಾವತಿಗೆ ಅರಸನಾದ ಕುರುಕುಲೇಂದ್ರ ಗುಣಸಾಂದ್ರ ಶ್ರೀಮದ್‌ಭೂಲೋಕೇಂದ್ರ ರಾಷ್ಟ್ರಾಧಿಪತಿಯಾದ ಕೌರವೇಶ್ವರನೆಂದು ತಿಳಿಯೋ ಸಾರಥಿ

ಎಲೈ ಸಾರಥಿ ಯೀ ಅಂದವಾದ ಆಸ್ಥಾನಕ್ಕೆ ಚಂದದಿಂದ ಬಂದ ಕಾರಣವೇನೆಂದರೆ ಯನ್ನ ಸೇನಾಧಿಪತಿಯಾದ ಕರ್ಣಭೂಪತಿಯನ್ನು ಆಸ್ಥಾನಕ್ಕೆ ಕರೆದುಕೊಂಡು ಬಾರೋ ಚಾರ ವರ ಫಣಿಹಾರ॥

ಕರ್ಣ : ಎಲೈ ಸಾರಥಿ ಹೀಗೆ ಬಾ ಮತತೂ ಹೀಗೆ ಬರುವಂಥವನಾಗು. ಎಲೈ ಮನುಷ್ಯನೆ ಈ ಸಭಾ ಮಧ್ಯದಲ್ಲಿ ಬಂದು ನಿಂತಿರುವರು ನೀವು ಧಾರೆಂದು ಗಡಗಡ ನಡುಗುತ್ತಾ ವಿನಯವಾದ ಮಾತಿನಿಂದ ಕೇಳುವ ಮನುಷ್ಯನು ನೀ ಧಾರೋ ಯನ್ನೊಳು ಸಾರೋ॥

ಎಲೈ ಸಾರಥಿ ಶಹಬ್ಬಾಷ್‌ಹಸ್ತಿನಾವತಿ ಪಟ್ಟಣವನ್ನು ಸಾಂದ್ರ ವೈಭವದಿಂದ ಪರಿಪಾಲಿಸುವ ದುಷ್ಟರನ್ನು ನಷ್ಟಪಡಿಸುವ ಸೃಷ್ಟಿಪತಿಯಾದ ಕೌರವೇಶ್ವರನ ಆಜ್ಞೆಯನ್ನು ಅನುಸರಿಸಿ ನಡೆಯುವ ಕರ್ಣಭೂಪತಿ ನಾನೇ ಅಲ್ಲವೇನೈ ಸಾರಥಿ॥

ಭಲೈ ಸಾರಥಿ ಯೀ ಅಂದವಾದ ಆಸ್ಥಾನಕ್ಕೆ ಬಂದ ಕಾರಣವೇನೆಂದರೆ ಕುರುಕುಲ ಶ್ರೇಷ್ಟನಾದ ಕೌರವ ಭೂಪತಿಯು ಕರೆಸಿದ ಕಾರಣ ಬಾಹೋಣವಾಯ್ತು. ಜಾಗ್ರತೆಯಿಂದ ತೋರಿಸುವಂಥವನಾಗು॥

ಕರ್ಣ : ನಮೋನ್ನಮೋ ಕುರುಕುಲೇಂದ್ರ ಅಷ್ಟೈಶ್ವರ್ಯಮಸ್ತು ॥ಹೇ ರಾಜ ಯನ್ನನ್ನು ಕರೆಯಿಸಿದ ಕಾರ್ಯಾರ್ಥವೇನು ಜಾಗ್ರತೆಯಿಂದ ಅಪ್ಪಣೆಯಾಗಬೇಕೈ ದೊರೆಯೆ ನಿನಗಾರು ಸರಿಯೆ॥

ಕೌರವ : ಬಾರೈಯ್ಯ ಕರ್ಣ ಭೂಪತಿ. ಅಯ್ಯ ರಾಧೇಯನೆ ನಿನ್ನಲ್ಲಿ ವಂದು ರಾಜಕಾರ‌್ಯವನ್ನು ಆಲೋಚಿಸುವಲೋಸುಗ ಕರೆಸಿದ್ದೇನಯ್ಯ ಕರ್ಣಭೂಪತಿ॥

ಕರ್ಣ : ಹೇ ರಾಜನೆ, ನಿಮ್ಮ ಮನಸ್ಸಿನಲ್ಲಿ ಯಾವ ಅಂತರವಾದ ವ್ಯಸನವಿದ್ದಾಗ್ಯೂ ವಂಚಿಸದೆ ಯೆನ್ನೋಳ್ ಪೇಳುವಂಥಾವನಾಗಯ್ಯ ಕುರುಕುಲೇಂದ್ರ॥

ಕೌರವ : ಆಹಾ ಶಂಭುವೆ ಲೋಕೋದ್ಧಾರಕ. ಯೆಮಗೆ ವೈರಿಗಳಾದ ಪಾಂಡವರನ್ನು ಯಾವ ಯತ್ನದಿಂದಲಾದರು ಸೋಲಿಸಿ ಯೀ ಭೂಮಿಯ ಮೇಲೆ ಅವರ ಹೆಸರಿಲ್ಲದಂತೆ ಅಡಗಿಸಬೇಕಾದರೆ ಶ್ರೀಕೃಷ್ಣನು ಅವರಿಗೆ ಸಾರಥಿಯಾಗಿ ಯನ್ನ ಪ್ರಯತ್ನ ಸಾಗುವುದಿಲ್ಲವಲ್ಲಾ ಹ್ಯಾಗೆ ಮಾಡಲಯ್ಯ ಕರ್ಣ. ಅಯ್ಯ ಕರ್ಣ ಹೇಳುತ್ತೇನೆ ಚೆನ್ನಾಗಿ ಲಾಲಿಸುವಂಥವನಾಗು॥

ಪದ

ಮೊದಲೊಂದು ಬಾರಿ ಕುಂಭದ ಕುವರಾನ ಕಟ್ಟಿದೊಡೆ
ಎದುರಾಗಿ ಯಮಜನ ಯೆದುಪತಿ ಬಿಡಿಸಿದನೂ॥

ಕೌರವ : ಎಲೈ ರಾಧೇಯನಾದ ಕರ್ಣನೆ ಲಾಲಿಸು. ಪೂರ್ವದಲ್ಲಿ ಗುರುಗಳಾದ ದ್ರೋಣಾಚಾರ್ಯರು ಆ ಧರ್ಮಜನನ್ನು ಸೆರೆಹಿಡಿಯುವಂಥವರಾಗಿದ್ದರು, ಆ ಕಾಲದಲ್ಲಿ ಶ್ರೀಕೃಷ್ಣನು ಬಂದು ಧರ್ಮರಾಯನನ್ನು ಬಿಡಿಸಿಕೊಂಡು ಹೋದನಲ್ಲಾ. ಮುಂದೆ ವೈರಿಗಳನ್ನು ಸಂಹಾರ ಮಾಡುವುದಕ್ಕೆ ಯಾವ ಯತ್ನ ಮಾಡಲಯ್ಯ ರಾಧೇಯನೆ ಮತ್ತೂ ಹೇಳುತ್ತೇನೆ ಕೇಳು-

ಪದ

ಬಲರಾಮನಿಹನೆಂದು ಬಹಳ ಧೈರ್ಯವ ತಾಳ್ದೆ
ಯಿಳೆಯೊಳೂ ಭೂಪ್ರದಕ್ಷಿಣೆಯಾಯ್ತು ಅವರ್ಗೆ

ಕೌರವ : ಆಹಾ ರಾಧೇಯನೆ. ಭಾವನವರಾದ ಬಲರಾಮದೇವರು ಯೆಮ್ಮಯ ಕಷ್ಟ ಕಾಲದಲ್ಲಿ ಬಲವಾಗಿರುತ್ತಾರೆಂಬುದಾಗಿ ಬಹಳ ಧೈರ್ಯದಿಂದ ನಂಬಿಕೊಂಡು ಯಿದ್ದದ್ದಕ್ಕೆ ಅವರಿಗೆ ಭೂಪ್ರದಕ್ಷಿಣೆಯು ವದಗುವಂಥಾಯಿತಲ್ಲ ಹ್ಯಾಗೆ ಮಾಡಲಯ್ಯ ಕರ್ಣ ಮತ್ತೂ ಹೇಳುತ್ತೇನೆ ಕೇಳು॥

ಪದ

ಛಲದಂಕ ಭೀಷ್ಮರಿಗೆ ಸರಳ ಮಂಚಗಳಾಯ್ತು
ಬಿಲ್ಮುರಿದು ವಿದುರನು ಮೊದಲೆ ಜಾರಿದನೂ॥

ಕೌರವ : ಐಶ್ವರ್ಯದಲ್ಲಿ ಸಂಪನ್ನನಾದ ಕರ್ಣನೆ. ಮುತ್ತೈಯನವರಾದ ಭೀಷ್ಮಾಚಾರ್ಯರು ಯಮಗೆ ಬೆಂಬಲವಾಗಿತ್ತಾರೆಂಬುದಾಗಿ ನಾನು ನಂಬಿಕೊಂಡು ಯಿದ್ದದ್ದಕ್ಕೆ ಅವರಿಗೆ ಸರಳ ಮಂಚವು ಪ್ರಾಪ್ತವಾಗುವಂಥಾಯಿತಲ್ಲ. ಎಲೈ ರಾಧೇಯನೆ ಹೇಳುತ್ತೇನೆ ಚೆನ್ನಾಗಿ ಲಾಲಿಸುವಂಥವನಾಗೂ॥

ಪದ

ಇದರ ಮೇಲಿನ್ನು ಯತ್ನವ ಕಾಣೆ ಪಾಂಡವರ ಕದನದಿ
ಗೆಲಿವಂಥ ಕಲಿಗಳ್ಯಾರುಂಟೂ॥

ಕೌರವ : ಎಲೈ ಮಂತ್ರಿ ಶ್ರೇಷ್ಟನಾದ ಕರ್ಣನೇ ಕೇಳು. ಭಂಡರಾದ ಪಾಂಡವರನ್ನು ಗೆಲ್ಲುವಂಥಾ ಪರಾಕ್ರಮಶಾಲಿಗಳು ಯಾರೂ ನಮ್ಮ ಸಮೂಹದಲ್ಲಿ ಕಾಣುವುದಿಲ್ಲವಲ್ಲಾ. ಅಯ್ಯ ಕರ್ಣ, ವೈರಿಗಳಲ್ಲಿ ಖಾಡಾ ಖಾಡಾ ಯುದ್ಧವನ್ನು ಮಾಡಿ ಯಾವ ಪ್ರಯತ್ನದಿಂದಲಾದರು ಮುಂದೆ ಶತ್ರುಶೇಷ ಇಲ್ಲದಂತೆ ಮಾಡುವ ವುಪಾಯವನ್ನು ಹೇಳುವಂಥವನಾಗಯ್ಯ ಕರ್ಣ ವೈರಿಗಳ ಚೆನ್ನ.

ಕರ್ಣ : ಹೇ ದೊರೆಯೆ. ಅಂಧಕಾರವಾದ ಕತ್ತಲೆಯಂತಿರುವ ಶತ್ರುಗಳಿಗೆ ಸೂರ್ಯನೋಪಾದಿಯಲ್ಲಿ ನಾನಿರಲಿಕ್ಕಾಗಿ ವ್ಯಸನವ್ಯಾತಕ್ಕೆ. ಚಿಂತೆಯನ್ನು ಬಿಟ್ಟು ಯೆನಗೆ ರಣಾಗ್ರಕ್ಕೆ ವೀಳ್ಯವಂ ಕೊಟ್ಟು ಕಳುಹಿಸುವಂಥವನಾಗಯ್ಯ ಕುರುಕುಲಶ್ರೇಷ್ಟನೆ

ಭಾಮಿನಿ

ಧರೆಯಧಿಪ ಕೇಳಿಂತು ಕೌರವ ಚಿಂತೆಯ ಭಾವದಲ್ಲಿ
ತರಹರಿಸುತಿರಲಾ ವ್ಯಾಳ್ಯದಲಿ ಕಲಶಜನು ನಡೆ ತಂದು ಅರುಹಿದನೂ

ಕೌರವ : ಅಯ್ಯ ಕರ್ಣ ಲಾಲಿಸು. ಪಾಂಡವರನ್ನು ಸೋಲಿಸಿ ಯೆನ್ನ ಆಸೆ ಪೂರ್ತಿ ಮಾಡಿಕೊಳ್ಳೋಣ ವೆಂದರೆ  ಆ ಶ್ರೀಕೃಷ್ಣನಿಂದ ನನ್ನ ಪ್ರಯತ್ನ ಯಾವುದೂ ಸಾಗುವುದಿಲ್ಲವಲ್ಲ ಏನು ಮಾಡಲೈಯ್ಯ ರವಿನಂದನ॥

ಕರ್ಣ : ಹೇ ದೊರೆಯೆ, ನಮಗೆ ಆಪ್ತರಾಗಿ ಸಂರಕ್ಷಣೆ ಮಾಡತಕ್ಕ ಗುರುಗಳಾದ ದ್ರೋಣಾಚಾರ್ಯರನ್ನು ಕರೆಸುತ್ತೇನೆ. ಅವರಲ್ಲಿ ಮುಂದಣ ಆಲೋಚನೆಯನ್ನು ಮಾಡುವುದಲ್ಲದೆ ಯೀ ಅಗಾಧವಾದ ಚಿಂತೆಯನ್ನು ಬಿಟ್ಟು ನಿಶ್ಚಿಂತನಾಗಿರಬೇಕೈ ದೊರೆಯೆ ಪೂರ್ಣಾಬ್ಧಿ ಸಿರಿಯೆ॥

ಕೌರವ : ಅಯ್ಯ ರವಿಪುತ್ರನೆ, ನಿನ್ನ ವಚನಾಮೃತವನ್ನು ಕೇಳಿ ಹಾಲಿಗೆ ತುಪ್ಪವನ್ನು ಬೆರಸಿದಂತೆ ಯನ್ನ ಮನಸ್ಸು ಆನಂದವಾಯ್ತು. ನಮ್ಮ ಗುರುಗಳಾದ ದ್ರೋಣಾಚಾರ್ಯರನ್ನು ಕರೆಸುವಂಥವ ನಾಗು॥

ಕರ್ಣ : ಎಲಾ ಚಾರವರ, ನಮ್ಮ ಗುರುಗಳಾದ ದ್ರೋಣಾಚಾರ್ಯರನ್ನು ಜಾಗ್ರತೆ ಬರಮಾಡು ವಂಥವನಾಗು॥

ಕಂದ

ಓಂನ್ನಮಶಿವಾಯ ಓಂನ್ನಮಶ್ಶಿವಾಯ ಓಂನ್ನಮಶ್ಶಿವಾಯ ಎನು ಮನವೇ
ವರ ಮಾರ್ಕಂಡೇಯನು ಕಾಲನ ಭರವನು ತಿಳಿದರೆ ಚಿಂತಿಸುತಾ
ಪುರಹರನೇ ಗತಿಯೆನ್ನುತ ನಂಬಲು ಹರ ಒಲಿದಿತ್ತನು ಗಣಪದವಾ॥

ಚಾರ : ಸ್ವಾಮಿ ತಾವ್ಯಾರು ತಮ್ಮ ನಾಮಾಂಕಿತವೇನು॥

ದ್ರೋಣ : ಎಲೈ ಚಾರಕ, ಹಸ್ತಿನಾವತಿಗೆ ಅರಸು ಧಾರೆಂಬುದಾಗಿ ಕೇಳಿಬಲ್ಲೆ॥

ಚಾರಕ : ಕೌರವರಾಜರೆಂದು ಕೇಳಿಬಲ್ಲೆ॥

ದ್ರೋಣ : ಎಲೈ ಚಾರಕ ಅಂತಪ್ಪ ಕೌರವನಿಗೆ ಗುರುಗಳಾದ ದ್ರೋಣಾಚಾರ್ಯರು ಯೆಂದು ಯೀ ಸಭೆಯೊಳ್ ಕಿತಾಪ್ ಮಾಡು॥

ಚಾರಕ : ಗೊತ್ತಾಯಿತು ತಾವು ಬಂದ ಕಾರ‌್ಯವೇನಯ್ಯ ದೇವಾ॥

ದ್ರೋಣಾಚಾರ‌್ಯ : ಎಲೈ ಚಾರಕ, ನಿಮ್ಮ ಅರಸನಾದ ಕೌರವೇಶ್ವರನಲ್ಲಿಗೆ ಹೋಗಿ ನಿಮ್ಮ ಗುರುಗಳಾದ ದ್ರೋಣಾಚಾರ‌್ಯರು ಬಂದು ಯಿದ್ದಾರೆಂದು ವರ್ತಮಾನ ಹೇಳುವಂಥವನಾಗೈ ಚಾರಕ॥

ಚಾರ : ಹೇ ಕೌರವೇಶ್ವರ, ನಿಮ್ಮ ಗುರುಗಳಾದ ದ್ರೋಣಾಚಾರ‌್ಯರು. ದಯ ಮಾಡಿಸಿರುತ್ತಾರೈ ರಾಜೇಂದ್ರನೆ

ಕೌರವ : ಚಾರಕ ಧಾವಲ್ಲಿರುತ್ತಾರೆ ಜಾಗ್ರತೆಯಿಂದ ತೋರಿಸುವಂಥವನಾಗು. ನಮೋನ್ನಮೋ ದ್ರೋಣಾಚಾರ‌್ಯರೆ.

ದ್ರೋಣಾಚಾರ‌್ಯ : ಐಶ್ವರ್ಯಮಸ್ತು ಬಾರೈ ಕೌರವೇಶ್ವರ, ಅಯ್ಯ ಕೌರವೇಶ್ವರಾ ನಿನ್ನ ಮುಖ ಎಂದು ನೋಡಿದರೂ ಸೂರ‌್ಯನೋಪಾದಿಯಲ್ಲಿ ಪ್ರಕಾಶಿಸುತ್ತಿತ್ತು. ಈ ದಿನ ನಿನ್ನ ಮುಖವು ಕಂದಿ ಕುಂದಿರುವುದಕ್ಕೆ ಕಾರಣವೇನು. ನಿನಗೆ ಬಂದಿರತಕ್ಕ ವೆಸನವ್ಯಾವುದು ಜಾಗ್ರತೆಯಿಂದ ಹೇಳುವಂಥವನಾಗು

ಕೌರವ : ಸ್ವಾಮಿ ದ್ರೋಣಾಚಾರ‌್ಯರೆ, ಯನಗೆ ಶತ್ರು ಭಯವನ್ನು ಹೇಳಲಸಾಧ್ಯ . ಹ್ಯಾಂಗೆ ಮಾಡಲಯ್ಯ ಸ್ವಾಮಿ ದ್ರೋಣಾಚಾರ‌್ಯರೆ॥

ದ್ರೋಣ : ಆಹಾ ಕೌರವೇಶ್ವರಾ, ಈ ಕಿಂಚಿತ್ ಮಾತ್ರ ಕಾರ‌್ಯಕ್ಕೆ ಈ ಪರಿ ಯೋಚನೆಯನ್ನು ಮಾಡುವರೆ ಹೇಳುತ್ತೇನೆ ಕೇಳುವಂಥವನಾಗೈ ಕೌರವೇಶ್ವರಾ.

ಕೌರವ : ಸ್ವಾಮಿ ದ್ರೋಣಾಚಾರ‌್ಯರೆ, ಶತ್ರು ಭಯ ನಿವಾರಣೆಗೋಸ್ಕರ ತಕ್ಕ ಉಪಾಯವನ್ನು ಅಪ್ಪಣೆ ಮಾಡಿದರೆ ನಾನು ಧನ್ಯನಾದೆನೈ ದೇವಾ ಕರುಣ ಪ್ರಭಾವ॥

ಪದ

ಕುರು ಕುಲಾಗ್ರಣಿಯೆ ಕೇಳಯ್ಯ ನಾಳೆ ಪರುಕಿಸಿ ನೋಡೆನ್ನ ಶೌರ‌್ಯದ ಬಗೆಯಾ॥
ಅರ್ಜುನನೋರ್ವ ತಪ್ಪಿದೊಡೆ ಧೂರ್ಝಟಿ ಮೊದಲಾದವರೆನಗಿದಿರೆ॥
ಪೂರಿತ ಚಕ್ರವ್ಯೂಹವನೆ ರಚಿಸಿ, ನಾಳೆ ಕಟ್ಟುವೆ ಧರ್ಮಪುತ್ರನನೂ॥

ದ್ರೋಣ : ಹೇ ಕುರುಕುಲಾಗ್ರಣಿಯಾದ ಕೌರವೇಶ್ವರನೇ ಕೇಳು, ನಾಳೆ ರಣಾಗ್ರಕ್ಕೆ ಚಕ್ರವ್ಯೂಹವನ್ನು ರಚಿಸಿ ನಿನಗೆ ಬಂದಿರತಕ್ಕ ಶತ್ರುಭಯವನ್ನು ತಪ್ಪಿಸುತ್ತೇನೆ. ಅರ್ಜುನ ಒಬ್ಬನನ್ನು ಮಾತ್ರ ನಾನು ರಚಿಸುವ ಚಕ್ರವ್ಯೂಹದ ಕೋಟೆಗೆ ರಣಾಗ್ರಕ್ಕೆ ಬಾರದ ಹಾಗೆ ನೀನು ತಪ್ಪಿಸಿದ್ದೇ ಆದರೆ ಆ ಸೃಷ್ಟಿತ್ರಯನಾದ ಶಂಕರನೇ ಬಂದಾಗ್ಯೂ ನಾನೇ ರಣಾಗ್ರದಿ ಜೈಸುತ್ತೇನೆ. ಅಧೈರ‌್ಯವನ್ನು ಬಿಟ್ಟು ಧೈರ್ಯದಿಂದಿರು ವಂಥವನಾಗೈಯ್ಯ ರಾಜನೆ.

ಪದ

ಉರಗ ಭೂಷಣನ ವರವುಂಟು ನಾಳೆ ಸೈಂಧವ ನೃಪತಿಗೆ
ನಾಲ್ವರನ್ನು ಕಾಯ್ದಿರುವನೂ ಚಕ್ರವ್ಯೂಹದ್ವಾರವನೂ॥

ದ್ರೋಣ : ಅಯ್ಯ ಕೌರವೇಶ್ವರಾ ಆ ಸೃಷ್ಟಿತ್ರಯನಾದ ಸಾಂಬನ ವರವಂ ಪಡೆದಿರುವ ಸೈಂಧವನನ್ನು ಚಕ್ರವ್ಯೂಹದ ದ್ವಾರದಲ್ಲಿ ಕಾವಲಿಟ್ಟರೆ, ಅರ್ಜುನ ಒಬ್ಬನನ್ನು ಬಿಟ್ಟು ಮಿಕ್ಕ ನಾಲ್ಕು ಜನಗಳನ್ನು ಲೆಕ್ಕಕ್ಕೆ ತಾರದೆ ಕಾಯ್ದಿರುತ್ತಾನೆ, ನಾನೇ ರಣಾಗ್ರಕ್ಕೆ ನಿಲ್ಲುತ್ತೇನೆ.

ಭಾಮಿನಿ

ಗರುಡಿಯಾಚಾರ‌್ಯನಿಂತೆಂದು ಘನ ಶೌರ‌್ಯವಂ ಕುರುರಾಯನೊಡೆನುಸುರಿಸಿದಾಕ್ಷಣವೆ,
ತರಿಸಿತಂ ಕರಿಘಟಿಗಳಂ ಶತ ಸಹಸ್ರಮಂ ರಥಗಳೈವತ್ತು ಸಾವಿರದೊಡನೆ॥

ದ್ರೋಣ : ಹೇ ಕುರುವಂಶಾಬ್ಧಿ ಚಂದ್ರನೆ, ಶತ್ರು ಭಯವನ್ನು ತಪ್ಪಿಸಿ ನಿನ್ನ ಮನಸ್ಸಿಗೆ ಸಂತೋಷ ಹುಟ್ಟಿಸುತ್ತೇನೆ ಚಿಂತೆಯಂ ಬಿಟ್ಟು ಅರಮನೆಗೆ ತೆರಳುವಂಥವನಾಗು.

ಕೌರವ : ಸ್ವಾಮಿ ಗುರುಗಳೇ, ಆನೆಯಂತಿರ್ಪ ಪಾಂಡವರ ಸಮೂಹಕ್ಕೆ ಸಿಂಹನೋಪಾದಿಯಲ್ಲಿ ತಾವಿರಲಿಕ್ಕಾಗಿ ನನಗೆ ಭಯ ತಾನೆ ಯಾತಕ್ಕೆ ಯಿಗೋ ತಮ್ಮ ಪಾದಕ್ಕೆ ಶರಣು ಬಂದೆನು.

ಭಾಮಿನಿ

ತುರಗವಕ್ಷೋಹಿಣಿ ಸಾಲು ಸಾಲಿನಿಂ ವರ ಪದಾತಿಗಳೈದು ಲಕ್ಷಮಂ
ಪಂಕ್ತಿ ಯೀ ಬಾಗಿಲೋಳ್ ಜಯದ್ರಥ ನಿಲ್ಲೆಂದನಾ ದ್ರೋಣಾ॥

ದ್ರೋಣ : ಎಲಾ ಚಾರಕ, ನಿನ್ನರಸನಾದ ಕೌರವೇಶ್ವರನಿಗೆ ಚಕ್ರವ್ಯೂಹವನ್ನು ರಚಿಸಿ ಶತ್ರುಭಯವನ್ನು ತಪ್ಪಿಸುತ್ತೇನೆಂದು ವಚನವನ್ನು ಕೊಟ್ಟಿದ್ದೇನೆ. ಆದ್ದರಿಂದ ಐವತ್ತು ಸಾವಿರ ಆನೆಗಳನ್ನು ತಂದು ಸಾಲಿಗೆ ಸರಿಯಾಗಿ ನಿಲ್ಲಿಸು ಮತ್ತು ವೇಗವಾಗಿ ಹೋಗತಕ್ಕ ಐವತ್ತಾರು ಸಾವಿರ ಕುದುರೆಗಳನ್ನು ಸಾಲಿಗೆ ಸರಿಯಾಗಿ ನಿಲ್ಲಿಸಿ, ಭಟರು ಸಮೇತರಾದ ರಥಗಳನ್ನು ತೆಗೆದುಕೊಂಡು ಬರುವಂಥವನಾಗು॥

ಚಾರ : ಅಪ್ಪಣೆಯಂತೆ ಸಿದ್ಧಮಾಡುತ್ತೇನೆ ಸ್ವಾಮಿ.

ದ್ರೋಣ : ಎಲಾ ಚಾರಕಾ, ಸಿಂಧೂ ದೇಶಕ್ಕೆ ಅಧಿಪತಿಯಾದ ಸೈಂಧವನನ್ನು ಜಾಗ್ರತೆ ಬರ ಮಾಡುವಂಥವನಾಗು

 

(ಸೈಂಧವನ ಬರುವಿಕೆ)

ಚಾರ : ಭಳಿರೇ ರಾಜಾಧಿರಾಜ ರಾಜ ಮಾರ್ತಾಂಡ.

ಸೈಂಧವ : ಬನ್ನಿರಯ್ಯಿ ಬನ್ನಿರಿ

ಚಾರ : ತಾವ್ಯಾರು ತಮ್ಮ ನಾಮಾಂಕಿತವೇನು ರಾಜಾ ಮಾರ್ತಾಂಡ ತೇಜ॥

ಸೈಂಧವ : ಎಲಾ ಚಾರಕಾ ಸಿಂಧೂದೇಶಕ್ಕೆ ಅಧಿಪತಿ ಯಾರೆಂಬುದಾಗಿ ಕೇಳಿಬಲ್ಲೆ

ಚಾರಕ : ಸೈಂಧವರಾಜನೆಂದು ಕೇಳಿಬಲ್ಲೆ ನೀವು ಬಂದ ಕಾರಣವೇನು ಅಪ್ಪಣೆಯಾಗಲಿ.

ಸೈಂಧವ : ಎಲೈ ಚಾರವರಾ ನಮ್ಮ ಗುರುಗಳಾದ ದ್ರೋಣಾಚಾರ‌್ಯರು ಧಾರಲ್ಲಿರುತ್ತಾರೆ ತೋರಿಸುವಂಥವನಾಗು.

ಚಾರ : ಆಸ್ಥಾನದಲ್ಲಿಯೇ ಇರುವರು ದಯಮಾಡಿಸಬಹುದು.

ಸೈಂಧವ : ಯಿದೇ ಶಿರ ಸಾಷ್ಟಾಂಗ ಬಿನ್ನಹವೈ ಸ್ವಾಮಿ ದ್ರೋಣಾಚಾರ‌್ಯರೇ.

ದ್ರೋಣ : ಐಶ್ವರ್ಯಮಸ್ತು ಬಾರೈ ಸೈಂಧವ ಭೂಪತಿ.

ಸೈಂಧವ : ಸ್ವಾಮಿ ಗುರುಗಳೇ, ಯನ್ನನ್ನು ಯಿಷ್ಟು ಜಾಗ್ರತೆಯಿಂದ ಬರಮಾಡಿಕೊಂಡ ಕಾರ‌್ಯಾರ್ಥವೇನು. ಜಾಗ್ರತೆಯಿಂದ ಪೇಳಿದರೆ ಶಿರಸಾವಹಿಸಿ ನಡೆದುಕೊಳ್ಳುತ್ತೇನೈ ಮಹಾಸ್ವಾಮಿ

ದ್ರೋಣ : ಎಲೈ ಸೈಂಧವ, ನಾನು ರಚಿಸಿರುವ ಚಕ್ರವ್ಯೂಹದ ದ್ವಾರದಲ್ಲಿ ಕಾಯ್ದುಕೊಂಡಿರುವುದಕ್ಕೆ ನೀನೇ ಬಹಳ ಸಾಮರ್ಥ್ಯವುಳ್ಳವನಾಗಿರುತ್ತೀಯಾ. ಆದ ಕಾರಣ ಕೋಟೆಯೊಳಕ್ಕೆ ಯಾರನ್ನು ಬಿಡದಂತೆ ಕಾವಲಾಗಿರುವಂಥವನಾಗು॥

ಸೈಂಧವ : ಭಲಾ ಭಲಾ, ಈ ಕೋಟೆವಳಗೆ ಯಾವ ವೀರಾಧಿವೀರರು ಬರುತ್ತಾರೊ ಬರಲಿ ಸ್ವಾಮಿ ದ್ರೋಣಾಚಾರ‌್ಯರೆ. ಯಾಕೆ ಸುಮ್ಮನೆ ನನ್ನ ಪೌರುಷವನ್ನು ಕೊಚ್ಚಿಕೊಳ್ಳಲಿ. ಕಾರ್ಯಮುಖೇನ ತಮ್ಮ ಮನಸ್ಸಿಗೆ ಗೊತ್ತಾಗುವುದು, ಆ ಸತ್ವಾತಿಶಯನಾದ ಪರಮೇಶ್ವರನೇ ಬಂದಾಗ್ಯೂ ನಾನು ಲಕ್ಷ್ಯಕ್ಕೆ ತಾರದೆ ಕೋಟೆ ವಳಕ್ಕೆ ಪ್ರವೇಶ ಮಾಡುವುದಕ್ಕೆ ಸ್ಥಳ ಕೊಡುವುದಿಲ್ಲಾ, ನನ್ನ ಪರಾಕ್ರಮವನ್ನು ನೋಡುವಂಥವರಾಗಿ॥

ಭಾಮಿನಿ

ಅವನಿಪತಿ ಕೇಳಿಂತು ಚಕ್ರವ್ಯೂಹವನು ರಚಿಸಲು
ಕಾಣುತಲಿ ಕೌರವನು ಬಳಿಕ ಸಮಸಪ್ತಕರ ಸಂಗರಕೇ ॥

ದ್ರೋಣ : ಎಲೈ ಕೌರವ ಚಕ್ರವ್ಯೂಹವನ್ನು ರಚಿಸಿದ್ದೇನೆ, ನೋಡುವಂಥವನಾಗು.

ಕೌರವ : ಸ್ವಾಮಿ ದ್ರೋಣಾಚಾರ್ಯರೇ. ನೀವು ರಚಿಸಿರುವ ಚಕ್ರವ್ಯೂಹವನ್ನು ನೋಡಿ ನನ್ನ ಮನಸ್ಸಿಗೆ ಸಂತೋಷ ಉಂಟಾಗುವಂಥಾದ್ದಾಯಿತು. ಮುಂದೆ ನನ್ನಿಂದಾಗತಕ್ಕ ಕಾರ್ಯಾರ್ಥಗಳೇನು ಅಪ್ಪಣೆಯಾಗಲಿ.

ದ್ರೋಣ : ಅಯ್ಯ ಕೌರವೇಶ್ವರಾ, ಈ ದಿವಸ ರಣಾಗ್ರಕ್ಕೆ ಅರ್ಜುನ ಒಬ್ಬನನ್ನು ಮಾತ್ರ ತಪ್ಪಿಸಬೇಕಾಗಿರುವುದರಿಂದ, ಆ ಪಾತಾಳ ಲೋಕಕ್ಕೆ ಅಧಿಪತಿಗಳಾದ ನಿವಾತ ಕವಚರ ಮಕ್ಕಳಾದ ಸಮಸಪ್ತಕರನ್ನು ಕರೆಸಿ, ಅರ್ಜುನನ ಮೇಲೆ ರಣಾಗ್ರಕ್ಕೆ ಕಳುಹಿಸುವಂಥವನಾಗಯ್ಯ ಕೌರವೇಶ್ವರ

ಕೌರವ : ಎಲಾ ಚಾರಕಾ, ಪಾತಾಳ ಲೋಕಕ್ಕೆ ಅಧಿಪತಿಯಾದ ನಿವಾತಕವಚರ ಮಗನಾದ ಸಮನನ್ನು ಜಾಗ್ರತೆಯಾಗಿ ಕರೆದುಕೊಂಡು ಬರುವಂಥವನಾಗು.

ಚಾರ : ಹೇ ರಾಜ ತಮ್ಮ ಅಪ್ಪಣೆಯಾದಂತೆ ಈ ಕ್ಷಣವೇ ಹೋಗಿ ಕರೆದುಕೊಂಡು ಬರುತ್ತೇನೆ.

 

(ಸಮನು ಬರುವಿಕೆ)

ಚಾರ  : ಭಳಿರೇ ರಾಜಾಧಿರಾಜ ರಾಜ ಮಾರ್ತಾಂಡ.

ಸಮ : ಬೇಗ ಬರುವನಾಗೈ ಚಾರವರಾ॥

ಚಾರ : ತಾವ್ಯಾರು ತಮ್ಮ ನಾಮಾಂಕಿತವೇನು.

ಸಮ : ಪಾತಾಳ ಲೋಕಕ್ಕೆ ಅಧಿಪತಿ ಯಾರೆಂಬದಾಗಿ ಕೇಳಿ ಬಲ್ಲೆ.

ಚಾರ : ಸಮದೈತ್ಯ ಶಿಖಾಮಣಿಯೆಂದು ಕೇಳಿಬಲ್ಲೆ. ಗೊತ್ತಾಯಿತು ನನ್ನಿಂದಾಗಬೇಕಾದ ಕಾರ್ಯವೇನೈ ಸ್ವಾಮಿ.

ಸಮ : ಎಲೈ ಚಾರವರ ಯಮ್ಮ ದೊರೆಯಾದ ಕೌರವೇಶ್ವರಾ, ಧಾವಲ್ಲಿರುತ್ತಾನೆ ತೋರಿಸುವಂಥವನಾಗೈ ಚಾರಕ.

ಸಮ : ನಮೋನ್ನಮೋ ಕೌರವ ಭೂಪತಿ.

ಕೌರವ : ಐಶ್ವರ್ಯಮಸ್ತು ಬಾರೈ ದೈತ್ಯ ಶಿಖಾಮಣಿ.

ಸಮ : ಹೇ ರಾಜ, ಯನ್ನನ್ನು ಯಿಷ್ಟು ಜಾಗ್ರತೆಯಿಂದ ಕರೆಯಿಸಿದ ಕಾರಣವೇನು, ಹೇಳುವಂಥವನಾಗು

ಕೌರವ : ಎಲೈ ದೈತ್ಯ ಶಿಖಾಮಣಿಯೆ, ಯಮ್ಮ ವೈರಿಗಳಾದ ಪಾಂಡವರನ್ನು ಯಾವ ವಿಧದಿಂದಲಾದರೂ ಸೋಲಿಸಿ ಈ ಭೂಮಿಯಲ್ಲಿ ಅವರ ಹೆಸರೇ ಇಲ್ಲದಂತೆ ಮಾಡಲೋಸುಗ ಗುರುಗಳಾದ ದ್ರೋಣಾಚಾರ‌್ಯರು ಚಕ್ರವ್ಯೂಹವನ್ನು ರಚಿಸಿಕೊಂಡು, ಆ ಸಿಂಧು ದೇಶಕ್ಕೆ ಅಧಿಪತಿಯಾದ, ಸೃಷ್ಟಿತ್ರಯನಾದ ಶಂಕರನ ವರವಂ ಪಡೆದಿರುವ ಸೈಂಧವನನ್ನು ಬಾಗಿಲಲ್ಲಿ ಕಾವಲಿಟ್ಟಿರುತ್ತಾರೆ. ಆದ ಪ್ರಯುಕ್ತ ಈ ದಿನ ರಣಾಗ್ರಕ್ಕೆ ಅರ್ಜುನ ಒಬ್ಬನನ್ನು ಮಾತ್ರ ತಪ್ಪಿಸಬೇಕಾಗಿರುವುದರಿಂದ ಆತನಲ್ಲಿ ನೀನು  ರಣಾಗ್ರಕ್ಕೆ ಹೋಗಲೋಸುಗ ಕರೆಸಿರುತ್ತೇನೈ ದೈತ್ಯ ಶಿಖಾಮಣಿ.

ಸಮ : ಹೇ ರಾಜಾ, ತಮ್ಮ ಅಪ್ಪಣೆಯಾದರೆ ಆ ಖೂಳನಾದ ಅರ್ಜುನನನ್ನು ಈಗಲೇ ಸಂಹಾರವನ್ನು ಮಾಡಿಕೊಂಡು ಬರುತ್ತೇನೆ. ಯಿದಕ್ಕಾಗಿ ಸರ್ವಥಾ ಯೋಚನೆಯನ್ನು ಮಾಡಬೇಡಿ ಮುಂದೆ ಹೇಳುತ್ತೇನೆ.

ಭಾಮಿನಿ

ದಿವಿಜಪತಿ ನಂದನನೊಡನೆ ಕಾದುವೆವು ನಾವೆಂದೆನುತ
ಘರ್ಜಿಸಲು ಸಮಸಪ್ತಕರಿಗಿತ್ತನು ನೃಪತಿ ವೀಳ್ಯವನೂ॥

ಸಮ : ನಿನ್ನಯ ಮಾತಿನಂತೆ ಆ ಧನಂಜಯನಲ್ಲಿ ರಣಾಗ್ರಕ್ಕೆ ಹೋಗಿ ಆ ಭಂಡನನ್ನು ಜೈಸಿಕೊಂಡು ಬರುತ್ತೇನೆ, ಚಿಂತೆಯನ್ನು ಬಿಟ್ಟು ಯನಗೆ ವೀಳ್ಯವನ್ನು ಕೊಟ್ಟು ಕಳುಹೈ ಕೌರವೇಶ್ವರಾ॥

ಪದ
ರಾಗ ಆದಿತಾಳ

ಭರದಿ ವೀಳ್ಯವಗೊಡುತ ಹೂಂಕರಿಸಿ ಪರಾಕ್ರಮವೆನುತಾ॥
ಕುರುರಾಯನಿಗರುಹಿದರೂ ಭೀಕರದಲಿ ಸಮಸಪ್ತಕರೂ
ಗೋಶ್ರಾರಿಯ ನಂದನನ ಮುಖವೆತ್ತಲು ಬಿಡವೈ ಕಡೆಗೆ
ಮತ್ತೆ ನಾಲ್ವರ ಗೆಲಿದು ನಿನ್ನ ಆರ್ಕೆಯ ಸಲಿಸುವೆ ವಲಿದೂ॥

ಸಮ : ಗೋಶ್ರಾರಿಯ ಪುತ್ರನಾದ ಅರ್ಜುನ ಈ ಸಮಯದಲ್ಲಿ ಚತುರ್ದಶ ಲೋಕಗಳನ್ನು ಹೊಕ್ಕರೂ ಯುದ್ಧದಲ್ಲಿ ಸಂಹರಿಸದೆ ಬಿಡೆವು. ಬಳಿಕ ಬಲಹೀನರಾದ ನಾಲ್ವರನ್ನು ಸುಲಭ ಕಲಹದಿಂದ ಜೈಸಿ, ಛಲವನ್ನು ಸಫಲಗೊಳಿಸೈ ಕುರುಕುಲ ತಿಲಕನೆ.

ಕೌರವ : ಎಲೈ ದಿತಿ ಸುತರಾದ ಅಸುರ ಶ್ರೇಷ್ಠರೆ, ಯಿಂದ್ರ ನಂದನನಲ್ಲಿ ಯುದ್ಧಮಾಡಲು ಮಂದಮತಿಗಳಾಗಿ ಮುಂದರಿಯುತ್ತಿರುವ ನಿಮಗೆ, ಅವನಿಂದ ಒದಗಿರುವ ದಂದುಗವೇನು ಒಂದನ್ನೂ ಮರೆ ಮಾಜದೆ ಅತಿಚಂದದಿಂದ ಉಸುರಬೇಕೈ ಸುಂದರಾಂಗ.

ಸಮ : ಹೇ ರಾಜ ಶ್ರೇಷ್ಠನೆ, ಮರೆಮಾಚದೆ ಹೇಳುತ್ತೇನೆ ಚೆನ್ನಾಗಿ ಲಾಲಿಸುವಂಥವನಾಗು.

ಪದ

ತಂದೆಯ ಕೊಂದಾತನು ಎಂದೆಂದಿಗೂ ಬಿಡೆವೈ ನಾವೂ
ಮುಂದಾಗುವ ಕಾರ್ಯವನೂ ಮಾಡೆಂದು ಕರೆದು ದೂತನನೂ

ಸಮ : ಎಲೈ ಕುರುಕುಲವರ್ಯನೆ, ಹಿಂದೆ ನಮ್ಮ ತಂದೆಯಾದ ಕಾಲಕೇಯ ನಿವಾತ ಕವಚರೆಂಬ ಪೆಸರಂ ಹೊಂದಿದ ಅಸುರಶ್ರೇಷ್ಠರನ್ನೂ ಪಶುಪತಿಯ ಸಹಾಯದಿಂದ ಪಡೆದ ಶರಮುಖದಿಂದ ವಸುಮತಿಯೊಳಿರದಂತೆ ಪೆಸರಂ ನಾಶಗೊಳಿಸಿರುವನು. ಆದ್ದರಿಂದ ಅಸಮಬಲನಾದ ಪಿಸುಣನನ್ನು ರಣರಂಗದಲ್ಲಿ ಗಣನೆಗೆ ತಾರದೆ ಹನನ ಮಾಡಿ ಬಣಗುಗಳ ಸಂಗಕ್ಕೆ ಸೇರಿಸುವೆವು. ಈ ಸಮಯದಲ್ಲಿ ತ್ರಿಣಯನೇ ಬಂದಾಗ್ಯು ಎಣಿಕೆಗೆ ತರಲಾರವೈ ಮಣಿ ಕಿರೀಟನೆ, ಈ ಕ್ಷಣವೇ ಅರ್ಜುನನನ್ನು ಕರೆಯಿಸುವುದಕ್ಕೆ ಚಾರಕನನ್ನು ಕಳುಹಿಸಿಕೊಡುತ್ತೇನೆ.