ಪದ

ಪೇಳಿರೊ ಭಟರರ್ಜುನಗೆ ನೀವು ಕೇಳಿರೊ ಸಂಗರದೊಳಗೇ
ನೀಲಾಂಬರ ಬಿಟ್ಟೀಗ ಶಶಿಮೌಳಿಯ ಕರಸಿಕೊ ಬೇಗಾ॥

ಸಮ : ಚಟುವಟಿಕೆಯುಳ್ಳ ಭಟಶ್ರೇಷ್ಠನೆ, ಯಿಂದ್ರ ಪುತ್ರನಾದ ಅರ್ಜುನನ ಬಳಿಗೆ ಈ ಕ್ಷಣವೇ ಹೋಗಿ ಯಿಂದಿನ ದಿವಸ ಯುದ್ಧಕ್ಕೆ ಬರಲು ಮಂದಮತಿಯಾದ ಆ ಗೋವಳನನ್ನು ಬಿಟ್ಟು ಚಂದ್ರಚೂಡನ ಸಹಾಯಕ್ಕೆ ಕರೆಸಿಕೊಳ್ಳುವಂತೆ ವರದಿಯನ್ನು ಕೊಟ್ಟುಬರಬೇಕಲ್ಲಾ॥

ಚಾರ : ಅಪ್ಪೊಂದೇ ವರದಿಯನ್ನು ಕೊಟ್ಟು ಬರುವುದೇನೊ ಸಮ, ಕೊಟ್ಟು ಬಾರದೆ ಹೋದರೆ ಏನು ಮಾಡುವುದು.

ಪದ

ಯಂದಾತನ ಮುಂದೆ ನುಡಿದು ನೀವು ಕುಂದದೆ ಶೆರಗನು ಪಿಡಿದು
ಮೂದಲಿಸಿ ಬನ್ನಿರೆನುತ ಬಾಹು ಮಂದಮತಿಗಳಿರಲಿತ್ತ.

ಸಮ : ಎಲೈ ಚಾರಕ, ಛಲೋ ಮಾತಿನಿಂದ ಆ ಅರ್ಜುನನು ಬಂದರೇನೋ ಸರಿಯೇ. ಹಾಗೆ ಬಾರದೆ ನಿನ್ನಲ್ಲಿ ಗರುವ ಮಾಡಿದರೆ ತಕ್ಷಣವೇ ಅವನ ಮುಖವನ್ನು ನೋಡದೆ ಮುಂಜೆರಗು ಹಿಡಿದುಕೊಂಡು ಧರಧರನೆ ಎಳೆದುಕೊಂಡು ಬಂದು ಯನ್ನ ಆಸ್ಥಾನದಲ್ಲಿ ನಿಲಿಸುವಂಥವನಾಗು.

ಚಾರ : ಅಪ್ಪೊಂದೆ ಹಾಗಾದರೆ ವೀಳೆಯವನ್ನು ಕೊಡು

ಸಮ : ಯಿಕ್ಕೋ ವೀಳೆಯವನ್ನು ಕೊಡುತ್ತೇನೆ ಜಾಗ್ರತೆ ಹೋಗಿ ಕರೆದುಕೊಂಡು ಬರುವಂಥವನಾಗು.

ಕೌರವ : ಅಯ್ಯ ಸಮಸಪ್ತಕರೆ, ಅಪರೂಪವಾಗಿ ಬಂದದ್ದರಿಂದ ಯನಗೆ ಆನಂದವಾಗಿರುವುದು, ವಿಶ್ರಾಂತಿಗಾಗಿ ಅರಮನೆಗೆ ಹೋಗೋಣ ನಡೆಯಿರಿ.

ಸಮ : ಕೌರವೇಶ್ವರಾ ಏಕಾಗಬಾರದು.

ಭಾಗವತರ ಪ್ರಸ್ತಾಪವು : ಈ ಪ್ರಕಾರವಾಗಿ ಕುರುಕ್ಷೇತ್ರದಲ್ಲಿ ಕೌರವೇಶ್ವರನು ಪಾಂಡವರನ್ನು ನಾಶಪಡಿಸುವದಕ್ಕೆ ಸರ್ವ ಸನ್ನಾಹವನ್ನು ಮಾಡಿಕೊಂಡು ಯಿರಲ್ ಯಿತ್ತ ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ ಯಿವರೈವರೂ, ಯಾವ ಪ್ರಕಾರ ವಡ್ಡೋಲಗಸ್ತರಾದರೂ.

 

(ಪಾಂಡವರ ಸಭೆ)

ಭಾಗವತ : ತಾವು ಧಾರು ತಮ್ಮ ಸ್ಥಳ ನಾಮಾಂಕಿತವ್ಯಾವುದು.

ಪಾಂಡವರು : ಈ ಮಂಡಲದಿ ಪಾಂಡುಚಕ್ರವರ್ತಿಗೆ ಕುಮಾರರು ಧಾರೆಂಬುದಾಗಿ ಕೇಳಬಲ್ಲಿರಿ.

ಭಾಗವತ : ಸತ್ಯಸಂಧರಾದ ಧರ‌್ಮರಾಯ, ಭೀಮ, ಅರ್ಜುನ, ನಕುಲ, ಸಹದೇವರೆಂಬುದ ಕೇಳಿಬಲ್ಲೆವು.

ಪಾಂಡವರು : ಹಾಗೆಂದುಕೊಳ್ಳಬಹುದು.

ಭಾಗವತ : ಬಂದಂತಾ ಕಾರಣವೇನು.

ಪಾಂಡವರು : ಬಹಳ ಬಹಳವುಂಟು.

ಭಾಗವತ : ನಮ್ಮಿಂದೇನಾಗಬೇಕು.

ಪಾಂಡವರು : ನಮ್ಮ ಪರಿಚಾರಕರನನ್ನು ಕರೆಸಿಕೊಡುವಂಥವರಾಗಿರಿ.

ಚಾರ : ಅಗದ್‌ದೀನ್ ಬುದ್ಧಿ ಸಲಾಮು ತಗೋಳಿ.

ಪಾಂಡವರು : ಎಲೈ ಚಾರಕ ಆದರೂ ಚಿಂತೆಯಿಲ್ಲ. ನೀನು ಈ ಕ್ಷಣವೇ ಈ ನಮ್ಮ ಆಸ್ಥಾನಕ್ಕೆ ನಮ್ಮ ಭಾವಯ್ಯನವರಾದ ಶ್ರೀಕೃಷ್ಣ ದೇವರನ್ನು ಕರೆದುಕೊಂಡು ಬರುವಂಥವನಾಗು॥

ಚಾರ : ಅಪ್ಪಣೆ ಕರೆದುಕೊಂಡು ಬರುತ್ತೇನೆ.

 

(ಕೃಷ್ಣ ಪ್ರವೇಶ)

ಭಾಗವತ : ಭಳಿರೇ ರಾಜಾಧಿರಾಜ ಕೀರ್ತಿ ಮನೋಹರಾ॥

ಕೃಷ್ಣ : ನೀವು ಬನ್ನಿರಯ್ಯಿ ಭಾಗವತರೆ.

ಭಾಗವತ : ತಾವು ಧಾರು ತಮ್ಮ ಸ್ಥಳ ನಾಮಾಂಕಿತವು ಧಾವುದು

ಕೃಷ್ಣ : ಶಿಂಧುರಂಗದೊಳಿರುವ ಅಂದವಾದ ದ್ವಾರಕಾವತಿಗೆ ಅರಸನ್ಯಾರೆಂಬುದಾಗಿ ಕೇಳಬಲ್ಲಿರಿ.

ಭಾಗವತ : ಕೃಷ್ಣ ದೇವರೆಂದು ಕೇಳಿಬಲ್ಲೆ.

ಕೃಷ್ಣ : ಹಾಗೆಂದುಕೊಳ್ಳಬಹುದು

ಭಾಗವತ : ಈ ರಂಗಸ್ಥಳಕ್ಕೆ ಬಂದ ಕಾರ್ಯಾರ್ಥವೇನೊ ಅಪ್ಪಣೆಯಾಗಲಿ.

ಕೃಷ್ಣ : ಅಯ್ಯ ಭಾಗವತರೇ, ಸತ್ಯಸಂಧರಾದ ಪಾಂಡವರು ಧಾವಲ್ಲಿರುವರು. ಯನಗೆ ಭೇಟಿ ಮಾಡಿಸು

ಧರ್ಮರಾಯ : ಭಾವಯ್ಯನವರ ಪಾದಕ್ಕೆ ನಮಸ್ಕಾರ ಬರುತ್ತೆ.

ಕೃಷ್ಣ : ನಿನಗೆ ಮಂಗಳವಾಗಲಿ ಸಕಲೈಶ್ವರ‌್ಯಮಸ್ತು ಬಾರೈ ಧರ್ಮಜ, ಭೀಮ, ಅರ್ಜುನ, ನಕುಲ, ಸಹದೇವ ನೀವೆಲ್ಲರು ಕ್ಷೇಮವೊ

ಧರ್ಮರಾಯ : ಭಾವಯ್ಯ ಶ್ರೀಹರಿ ಲಕ್ಷ್ಮೀಕಾಂತನೇ, ತಮ್ಮ ಕೃಪಾಕಟಾಕ್ಷದಿಂದ ನಮ್ಮೆಲ್ಲರಿಗೂ ಸುಕ್ಷೇಮವೇ, ತಮ್ಮ ಪೂರ್ಣವಾದ ಕರುಣವಿರುವವರೆಗೂ ನಮಗೇನು ಭಯ. ನಾನಿಟ್ಟಿರುವ ಸಿಂಹಪೀಠವನ್ನು ಅಲಂಕರಿಸಬೇಕೂ॥

ಕೃಷ್ಣ : ಧರ್ಮಜ ಚಿಂತೆಯಿಲ್ಲ. ಆಗಲಿ ಸದ್ಯಕ್ಕೆ ನನ್ನನ್ನು ಬರಮಾಡಿಕೊಂಡ ಸಂಗತಿಯೇನು.

ಧರ್ಮರಾಯ : ಎಲೈ ದೇವಾಧಿದೇವನಾದ ಭಾವಜನಯ್ಯನೆ, ಕುರುಪತಿಯಾದ ಕೌರವನು ಕಪಟದ್ಯೂತದಿಂ ಸೋಲಿಸಿ ಕಷ್ಟಪಡಿಸಿದ್ದೂ ಸಾಲದೆ, ಕಲಹವಂ ಮಾಡಿ ಕಾದಬೇಕೆಂದು ಕಪಟ ವ್ಯೂ  ವ್ಯೂ ಹವಂ ರಚಿಸಿರುವಂತೆ ವರ್ತಮಾನವಾಗಿರುತ್ತೆ! ದುರ್ಗಮವಾದ ಯುದ್ಧಗಳಲ್ಲಿ ನಿಗ್ರಹಿಸಲು ಯತ್ನ ತೋರದೆ ಸರ‌್ವಜ್ಞ ಚಿತ್ತಕ್ಕೆ ಶ್ರುತಪಡಿಸಬೇಕೆಂದು ಕರೆಯಿಸಿದ್ದೇನೈ ಯಾದವಾಗ್ರಣಿ.

ಕೃಷ್ಣ : ಅಯ್ಯ ಧರ್ಮಜನೆ, ಪುಂಡರಾದ ಕೌರವ ಮಾಂಡಲೀಕರನ್ನು ಗಂಡುಗಲಿಗಳಾದ ಭೀಮಾರ್ಜುನರು ಗಾಂಢೀವ ಮೊದಲಾದ ಆಯುಧಗಳಿಂದ ದಿಂಡುವರಿಯದೆ ಬಿಡರು. ಹೀಗಿರುವಲ್ಲಿ ಯೆನ್ನಿಂದ ಆಗಬೇಕಾಗಿರುವ ಕಾರ್ಯವೇನೈ ಮಂಡಲಾಧಿಪತಿ॥

ಧರ್ಮರಾಯ : ಎಲೈ ಭಾವ ದೇವಕಿ ಪುತ್ರನೆ, ನೀವು ಭಾವನವರೆಂದು ಭಾವಿಸಿಕೊಂಡು ಯಿರುವುದಲ್ಲದೆ ಪಾಂಡವ ಸ್ಥಾಪನಾಚಾರ್ಯನೆಂಬ ಬಿರುದಂ ಹೊಂದಲು ಭರವಸೆಯಂ ಕೊಡಬೇಕೈ ಪರಮಪಾವನನೆ.

ಕೃಷ್ಣ : ಅಯ್ಯ ಧರ್ಮಜ, ಪೂರ‌್ವದಲ್ಲಿ ಅತ್ತೆಮ್ಮನವರಾದ ಕುಂತಿದೇವಿಯವರು, ನಂದನರೈವರನ್ನು ಕಾಯಬೇಕೆಂದು ನಂಬಿಕೆಯಂ ತೆಗೆದುಕೊಂಡಿರುವಳು. ಮಂದಮತಿಗಳಾದ ಕೌರವರಿಂದ ಬಂದದ್ದೆಲ್ಲಾ ಬರಲಿ ದಂದುಗವೇತಕಯ್ಯ ಯಮನಂದನನೆ.

ಧರ್ಮರಾಯ : ಮಹಾನುಭಾವನೆ, ತಮ್ಮ ವಾಕ್ಯವೆಂಬ ಅಮೃತರಸದಿಂದ ಆನಂದರಾದೆವು. ಮಾರ್ಗಾಯಾಸವಂ ಕಳೆಯಲು ಮಂದಿರಕ್ಕೆ ದಯಮಾಡಿಸಬೇಕೈ ಅರವಿಂದಾಕ್ಷನೆ.

ಚಾರ : ಅಯ್ಯ ಭಾಗವತರೆ, ಯಮ್ಮ ದೊರೆಗಳಾದ ಸಮಸಪ್ತಕರು ಕೊಟ್ಟಿರುವ ಅಪ್ಪಣೆಯಂತೆ ಈ ಕ್ಷಣವೆ ಅಸಮಬಲ ಪರಾಕ್ರಮಿಯಾದಅರ್ಜುನನ ಹತ್ತಿರಕ್ಕೆ ಹೋಗಿ ಅಂಜಿಕೆಯಿಲ್ಲದೆ ಯುದ್ಧಕ್ಕೆ ಬರಬೇಕೆಂದು ಸಿದ್ಧಪಡಿಸುತ್ತೇನೆ.

ಚಾರ : ಅಗದ್‌ದೀನ್ ಬುದ್ಧಿ ಸಲಾಮ್ ತಗೊಳಿ.

ಅರ್ಜುನ : ಎಲೈ ಚಾರವರಾ ನೀನು ಧಾರು, ಧಾವಲ್ಲಿಂದ ಬರುವಂಥವನಾದೆ, ಧಾರ ಕಡೆಯವ ನಿನ್ನ ಹೆಸರೇನು.

ಚಾರ : ಅರೇ ಮಿಯಾ, ನನ್ನ ಹೆಸರ‌್ಗೆ ಕೇಳಿದಿರಾ ನನ್ನ ಹೆಸರು ಬಿಟ್ಟರೆ ಸಿಕ್ಕ. ಸಮಸಪ್ತಕರ ಕಡೆಯವ, ಕುರುಕ್ಷೇತ್ರದಿಂದ ಬಂದಂಥವನಾದೆ ತಮ್ಮ ಹತ್ತಿರಕ್ಕೆ.

ಅರ್ಜುನ : ಕುರುಕ್ಷೇತ್ರದಿಂದ ನಮ್ಮ ಹತ್ತಿರಕ್ಕೆ ಬಂದ ಸಂಗತಿಯೇನು.

ಚಾರ : ಅರೆ ಸಾಮಿ ಅರ್ಜುನಪ್ಪ ಹಾಗಾದರೆ ಹೇಳುತ್ತೇನೆ ಕೇಳಬೇಕು.

ಪದ

ಲಾಲಿಸಿ ಕೇಳಿಂದ್ರಜಾತ ನಾ ಹೇಳುವ ಮಾತ
ಲಾಲಿಸಿ ಲಾಲಿಸಿ ಕೇಳಿಂದ್ರ ಜಾತ ಆಲಸ್ಯವ
ಮಾಡದೆ ಬೇಗೇಳು ಸಂಗರಕೀಗ ವಲಿಪುಶ
ಮೈದುನ ಕಲಿಯಾಗು ನಡೆ ಲಾಲಿಸಿ ಕೇಳಿಂದ್ರ ಸಂಜಾತ॥

ಚಾರ : “”ಅರೆ ಸಾಮಿ ಅರ್ಜುನಪ್ಪ ನಮ್ಮ ದೊರಿ ಸಮಸಪ್ತಕರು ನಿಮಗೆ ಹೇಳಿ ರಣಕೆ ಕರಕೊಂಡು ಬರಬೇಕಂತ ಹುಕುಂ ಕೊಟ್ಟಿರುತ್ತಾರೆ. ಯೆಹ ದೇಕೊ ಯೆಹ ರಾಜ್ ಇಲ್ಲಿ ನೋಡು’’

ಅರ್ಜುನ : ಎಲೈ ಚಾರವರ ಯಿರಲಿ ನೋಡಿದೆ, ಯಾವ ರೀತಿಯಲ್ಲಿ ಬರಬೇಕು.

ಪದ

ನಂದಗೋಪನ ಬಿಟ್ಟೀಗ ಕರೆಸಿಕೊ ಬೇಗ ಇಂದುಮೌಳಿಯ
ರಥಕೀಗ ಯಿಂದು ರಣಾಗ್ರದಿ ಬದುಕಿದೆಯಾದರೆ
ನಿನಗೆಂದೆಂದಿಗೂ ಸಾವಿಲ್ಲವೋ॥ಕೇಳಿಂದ್ರಜಾತ॥

ಚಾರ : ಅರ್ಜುನಪ್ಪ, ನಿಮ್ದು ನೋಡಿ ಬೊಪ್ಪು ಕೃಷ್ಣಪ್ಪ ಮೂರು ನಾಮ. ಇವನಿಗೆ  ಬಿಟ್ಟು ನಮ್ಮ ಅಚ್ಚಪ್ಪ ಈಶ್ವರ ಮಹಾದೇವರ ಬೆಂಬಲಕ್ಕೆ ಕರೆದುಕೊಂಡು ಬರಬೇಕು. ಆವತ್ತಿನ ಕುಸ್ತಿ ಹ್ಯಾಂಗಯ್ತಾ ಹಪ್ಪಳ ಹುಳಿಯನ್ನ ಚಲ್ಲಾಡಿ ಹೋಗುತ್ತೆ ನಾನು ಕಾಣೆಪ್ಪಾ ಕಾಣೆ.

ಅರ್ಜುನ : ಎಲೈ ಚಾರವರಾ, ಅದ್ಯಾಕೊ ಹೀಗೆ ಹಾಸ್ಯ ಮಾಡಿ ಜರಿದು ಮಾತಾಡುತ್ತಿದ್ದಿ. ನನಗೆ ಎಂಥಾವರ ಸಹಾಯವಿರುತ್ತೆ ಗೊತ್ತಿಲ್ಲವೊ॥

ಚಾರ : ಅರ್ಜುನಪ್ಪ ಅದು ಗೊತ್ತೈತೆ ಹೇಳ್ತೇನೆ ಕೇಳು.

ಪದ

ಗೋಪಾಲ ಸಾರಥಿ ನಿನ್ನ ರಥಕ್ಕೆ ಗೋಪಾಲ ಕೇಳೋ
ನೀಲಜ ನಿನ್ನ ಧ್ವಜಕ್ಕೆ ಈ ಪರಿ ಬವಣೆಯೊಳಿರುವೆ
ನೀನಂದಿನ ಆಪತ್ತು ಒದಗುವುದೇ ಸಹಜ॥ಲಾಲಿಸಿ ಕೇಳಿಂದ್ರಜಾತ

ಚಾರ : ಅರ್ಜುನಪ್ಪ ನಿನ್ನ ರಥಕ್ಕೆ ಕೃಷ್ಣಪ್ಪ ಐತಲ್ಲಾ ಅವನೊಬ್ಬ ಸಾರಥಿ ದನ ಕಾಯೋನು. ಕೋಡಗ ಹನುಮಂತಪ್ಪ ಒಬ್ಬ ನಿಂದು ನಿಷಾನಿಯೊಳಗೆ ರಕ್ ಪುಕ್. ಇದನ್ನು ನೋಡಿದರೆ ನನಗೆ ನಗು ಬರುವುದು, ಈವತ್ತಿನ ಲಡಾಯದೊಳಗೆ ನೀನು ಬದುಕಿದರೆ ತಾಯಿ ಹಡೆದ ಮಗನೇ ಸರಿ ಜಾಗ್ರತೆ ಬರ‌್ತೀಯೊ ಇಲ್ಲವೋ ಹೇಳು.

ಅರ್ಜುನ : ಭಲಾ ಚಾರಕ ಜಾಗ್ರತೆಯಿಂದ ಬಂದರೆ ಸರಿ. ಬಾರದೆ ಹೋದರೆ ನೀನು ಮಾಡುವುದು.

ಚಾರ : ನಾನು ಮಾಡೋದು ಕೇಳು. ಛಲೋ ಮಾತಿನಲ್ಲಿ ಬಂದರೆ ಸರಿ ಹಾಗೆ ನೀನು ಬಾರದೆ ಇದ್ದರೆ ನಿನ್ನ ಸೆರಗಿನೊಡ್ಡಿ ಯಿಡ್ಕೊಂಡು ನಮ್ಮ ದೊರಿ ಬಳ್ಗೆ ಧರಾಧರಾಧರಾ  ಎಳಕೊಂಡು ಛಲೋಗಯೆ

ಭಾಮಿನಿ

ಚಾರನ ನುಡಿಯನು ಕೇಳ್ದು ನಗುತಲೆ ನರನು
ಪೇಳ್ದನುನೊಲವಿನಿಂದಲೆ ಬರುವೆನೈ ಸಂಗರಕೆ ಬೇಕಾದವರನೊಡಗೊಂಡು॥

ಅರ್ಜುನ : ಎಲಾ ಚಾರಕ ನೀನು ಹೇಳಿದ ಈ ಮಾತನ್ನು ಕೇಳಿ ನನ್ನ ಮನಸ್ಸಿಗೆ ಬಹಳ ಸಂತೋಷವಾಯಿತು. ಸದ್ಯದಲ್ಲಿ ಯೆನಗೆ ಬೇಕಾದ ಸನ್ನಾಹಗಳನ್ನು ಮಾಡಿಕೊಂಡು ರಣಾಗ್ರಕ್ಕೆ ಹೊರಟು ಬರುತ್ತೇನೆ, ಇದೇ ಪ್ರಕಾರವಾಗಿ ಹೋಗಿ ನಿಮ್ಮ ದೊರೆಗಳಾದ ಸಮಸಪ್ತಕರ ಸಂಗಡ ಹೇಳುವಂಥವನಾಗು. ನಡಿ ನಡಿ ನಿಲ್ಲಬೇಡ ಹುಷಾರ್.

ಚಾರ : ಮಹಾರಾಯ ನೀನೆಂದಾರು ಬಾ, ನಮ್ಮಪ್ಪನ ಮನೆಗಂಟೇನು ಹೋಗಬೇಕು. ಇಗೋ ಸಲಾಮ್ ತಗೊ ಒಂದು, ಎರಡು, ಮೂರು, ನಾಲ್ಕು.

ಪದ (ರಾಗ  : ಕಲ್ಯಾಣಿ ಅಷ್ಟತಾಳ)

ಕೇಳು ಧರ್ಮಾನುಜಾತ ಸಂಗರಕೆ ನೀನೇಳೊ ಮೂರ‌್ಲೋಕ ಖ್ಯಾತ॥
ಕಲಿಘಟೋದ್ಗಜರಿಗಿದು ಭೀಮನಿಗಸದಳವಾಗಿ ತೋರುವುದೂ
ಒಳ ಹೋಗಲರಿಯ ಮಾದ್ರೇಯಗಿಂದಿನ ನಳಿನವ್ಯೂ ಹದ ಕೋಟೆಯ ಬಲುಸೇನೆಯು॥

ಚಾರ : ಅರ್ಜುನಪ್ಪ, ಈ ದಿವಸ ಶಸ್ತ್ರ ಪಂಡಿತರಿಂದ ಅನೇಕ ಸೈನಿಕರ ಬಲದೊಡನೆ, ರಚಿಸಲ್ಪಟ್ಟಿರುವ ಚಕ್ರವ್ಯೂ ಹದ ಕೋಟೆಗೆ ಹೋಗುವುದಕ್ಕೆ ಧರ್ಮರಾಯ, ಭೀಮ, ಘಟೋದ್ಗಜ ಇವರಿಂದ ಕಾದುವುದಕ್ಕೆ ಆಗುವುದಿಲ್ಲ, ನಕುಲ ಸಹದೇವರಿಂದ ಮೊದಲೇ ಆಗುವುದಿಲ್ಲ, ಇದಕ್ಕೆ ಮಾಡುವುದು ಏನು ಹೇಳ್ತೀಯಾ ಹೇಳು॥

ಅರ್ಜುನ : ಎಲಾ ಚಾರಕ ಹಾಗಾದರೆ ನೀನೇ ಕೊಂಚ ಈವತ್ತಿನ ರಣಾಗ್ರಕ್ಕೆ ಹ್ಯಾಗೆ ಬರಬೇಕು ಹೇಳಬಾರದೆ.

ಪದ

ಶಿವನೋಳ್ ಬೇಡಿದ ಶರವನೀತಗೆ ಗಾಂಢೀವ ಕುಲದೈವವಾ
ತವಕದಿ ಬೇಡಿಕೊ ಅವರಿವರಂತೆಲ್ಲ ಅವಘಡಿಸಲು
ಗುರುವಿಂಗಿದಿರ‌್ಯಾರುಂಟು ಕೇಳೋ ಧರ್ಮಾನುಜಾತ॥

ಚಾರ : ಅರೆಸಾಮಿ ಅರ್ಜುನಪ್ಪ, ಈ ದಿವಸ ನೀನು ಲಡಾಯಕ್ಕೆ ಬರಬೇಕಾಯ್ತು. ಪರಮೇಶ್ವರನಿಂದ ಬೇಡಿ ಇರತಕ್ಕ ಪಾಶುಪತಾಸ್ತ್ರ ಮುಂತಾದ ದಿವ್ಯಾಸ್ತ್ರಗಳನ್ನು ತೆಗೆದುಕೊಂಡು ರಣದೇವತೆಯನ್ನು ಚೆನ್ನಾಗಿ ಪೂಜಿಸಿ ಬರಬೇಕಾಗಿರುವುದು, ಈ ದಿವಸ ನಮ್ದು ಗುರು ದ್ರೋಣಪ್ಪನೊಳ್ಗೆ ಗೆದ್ದು ಬಿಟ್ರೆ ದೇವೇಂದ್ರನ ಮಗ. ಅರ್ಜುನನೆ ಇದಕ್ಕೆ ಏನು ಜವಾಬ್.

ಅರ್ಜುನ : ಎಲಾ ಚಾರಕ ಒಳ್ಳೇದು ಇರಲಿ. ಒಂದು ಕೈ ನೋಡೋಣ. ಕಾರ‌್ಯ ಮುಖೇನ ನನ್ನ ಪರಾಕ್ರಮವು ನಿನಗೆ ಗೊತ್ತಾಗುವುದು. ಚಿಂತೆಯಿಲ್ಲ ನನಗೆ ಬೇಕಾದ ಸನ್ನಾಹಗಳನ್ನು ಮಾಡಿಕೊಂಡು ನಿನ್ನ ಹಿಂದೆಯೇ ನಾನು ಬರುವುದು ಖಂಡಿತ. ಇದೇ ಪ್ರಕಾರ ಗುರುಗಳಾದ ದ್ರೋಣಾಚಾರ್ಯರಲ್ಲಿ ಹೋಗಿ ಹೇಳುವಂಥವನಾಗು, ನಡಿ ನಡಿ ನಿಲ್ಲಬೇಡ.

ಚಾರ : ಅಪ್ಪೋಂದೆ ಹಾಗಾದರೆ ಖಂಡಿತ ಬರಬೇಕು, ಇಗೋ ಕೈಮುಗಿದೆ ನಾನು ಹೊರಟು ಹೋಗುತ್ತೇನೆ.

ಭಾಮಿನಿ

ಅರಸ ಕೇಳರ್ಜನಗೆ ದೂತರು ಜರಿದು ನುಡಿಯಲವರ
ಕಳುಹೆಂದೆನುತ ಕರ ಮುಗಿದು ಧರ್ಮಜಗೆರಗಿ ಭಕ್ತಿಯಲಿ॥

ಅರ್ಜುನ : ಹೇ ಅಣ್ಣಯ್ಯ ಧರ್ಮಜನೆ, ಈವತ್ತಿನ ದಿವಸ ಕುರುಕ್ಷೇತ್ರದಿಂದ ಪಾತಾಳಲೋಕಕ್ಕೆ ಸಮಸಪ್ತಕರೆಂಬ ದೈತ್ಯರು ರಣಾಗ್ರಕ್ಕೆ ಬರಬೇಕೆಂದು ವರ್ತಮಾನ ಕೊಟ್ಟು ಆಳು ಕಳುಹಿಸಿದ್ದಾರೆ. ಹೀಗಿರೋಣ ನಾನು ಯಾರ ಮೇಲೆ ಯುದ್ಧಕ್ಕೆ ಹೋಗೋಣ ಅಪ್ಪಣೆಯಾಗಲಿ.

ಧರ್ಮರಾಯ : ತಮ್ಮಾ ಅರ್ಜುನ, ನನ್ನನ್ನು ಕೇಳಿದರೆ ನಾನು ಏನು ಹೇಳಲಿ. ನಿಮ್ಮ ಭಾವಯ್ಯನವರಾದ ಕೃಷ್ಣ ದೇವರನ್ನು ಕೇಳಿಕೊಂಡು ಮುಂದಿನ ಯುದ್ಧಕ್ಕೆ ಸನ್ನದ್ಧನಾಗಿ ಜಯಸಿರಿಯನ್ನೂ ಹಿಡಿಯಬಹುದೂ॥

ಅರ್ಜುನ : ಭಾವಯ್ಯ ಶ್ರೀಹರಿ ಲಕ್ಷ್ಮೀಲೋಲನೆ, ಅಣ್ಣಯ್ಯನವರಲ್ಲಿ ಹೇಳಿಕೊಂಡ ಮಾತು ತಿಳಿಯಿತಷ್ಟೆ. ಏಕಕಾಲದಲ್ಲಿ ಎರಡು ಕಡೆ ರಣಾಗ್ರಕ್ಕೆ ಹೋಗಬೇಕಾದ ಸಂದರ್ಭ ಯಿರುತ್ತೆ, ಯಾವ ಯಾವ ಕಡೆಗೆ ಯಾರ‌್ಯಾರು ಹೋಗಬೇಕು ಅಪ್ಪಣೆಯಾಗಲಿ.

ಕೃಷ್ಣ : ಅಯ್ಯ ಚಿಂತೆಯಿಲ್ಲ ಸಂತೋಷಪಡಬೇಡ, ಆಲೋಚಿಸಿ ಹೇಳಬೇಕಾಗಿರುವುದು ಕೊಂಚ ಸೈರಿಸುವನಾಗು. (ಮುಂದಕ್ಕೆ ಬಂದು) ಆಹಾ ನನ್ನ ಮನೋದ್ಗತವು ನೆರವೇರುವ ಕಾಲ ಕೂಡಿರುವುದು. ಶತೃವಾಗಿ ಮೃತ್ಯುವಾಗಿದ್ದ ಅಭಿಮನ್ಯುವನ್ನು ಕೊಲ್ಲುವುದಕ್ಕೆ ಯಿದು ಸಮಯವಲ್ಲವೆ, ರೋಗಿ ಬಯಸಿದ್ದು ಹಾಲು ಅನ್ನ, ಪಂಡಿತ ಹೇಳಿದ್ದು ಹಾಲು ಅನ್ನ ಎಂಬಂತೆ, ಯನಗನುಕೂಲವಾಯ್ತು, ಶತ್ರು ಶೇಷವಿದ್ದರೆ ಮೃತ್ಯುವೇ ಸರಿ. ತಕ್ಕ ಪ್ರಯತ್ನವನ್ನು ಈಗಲೇ ಮಾಡುತ್ತೇನೆ, ಖಂಡಿತ ಬಿಡುವುದಿಲ್ಲ. ಅಯ್ಯ ಅರ್ಜುನ ಈವತ್ತಿನ ಯುದ್ಧವು ಸಾಮಾನ್ಯವಾಗಿಲ್ಲ, ನಿನ್ನ ಮಗನಾದ ಅಭಿಮನ್ಯು, ಭೀಮ, ಘಟೋದ್ಗಜ, ನಕುಲ, ಸಹದೇವ ಇವರನ್ನು ಸಹಾಯಕ್ಕೆ ಕರೆದುಕೊಂಡು ಚಕ್ರವ್ಯೂ ಹದ ಕೋಟೆಗೆ ಯುದ್ಧಕ್ಕೆ ಹೋಗಲಿ. ನಾವಿಬ್ಬರೂ ಅತ್ತ ಪಾತಾಳಲೋಕಕ್ಕೆ ಕಾಲಕೇಯ ನಿವಾತ ಕವಚರ ಮಕ್ಕಳಾದ, ಸಮಸಪ್ತಕರ ಮೇಲೆ ಸಂಗರಕ್ಕೆ ಹೋಗೋಣ. ಈ ಕ್ಷಣವೇ ಹೊರಡುವಂಥವನಾಗಯ್ಯ ಅರ್ಜುನ.

ಅರ್ಜುನ : ಭಾವಯ್ಯ ಅಸ್ತ್ರಶಸ್ತ್ರಗಳನ್ನು ತೆಗೆದುಕೊಂಡು ರಥದ ಮೇಲೆ ಸಿದ್ಧವಾಗಿ ಕೂತಿದ್ದೇನೆ, ರಥವನ್ನು ಹಾರಿಸುವಂಥವರಾಗಿ ಮತ್ತೆ.

ಕೃಷ್ಣ : ಅರ್ಜುನ ಯಿಗೋ ರಥವನ್ನು ಹೊಡೆಯುತ್ತೇನೆ ನೋಡುವಂಥವನಾಗು.

ಭಾಮಿನಿ

ಹರಿ ಧನಂಜಯರತ್ತ ಪೋಗಲು ಯಿತ್ತ ಧರ್ಮಜ
ಪವನಜನನು ಕರೆದು ಧುರಕೆ ದ್ರುಷ್ಟದ್ಯುಮ್ನ, ಕಲಿ ಘಟೋದ್ಗಜ ನಕುಲ
ಧುರ ವಿಜಯನಾ ಸಹದೇವ ಕುಂತೀಭೋಜ ಯಿವರ್ಗೇ ನೇಮಿಸಿದಾ॥

ಧರ್ಮರಾಯ : ತಮ್ಮಾ ಭೀಮಸೇನ ಬಾಯಿಲ್ಲಿ. ನೀನು ಈ ಕ್ಷಣವೇ ನಿನ್ನ ಬೆಂಬಲಕ್ಕೆ ನಿನ್ನ ಮಗನಾದ ಘಟೋದ್ಗಜ ದ್ರುಷ್ಟದ್ಯುಮ್ನ ನಕುಲ, ಸಹದೇವ, ಕುಂತಿಭೋಜ ಮೊದಲಾದ ಪ್ರಮುಖರನ್ನು ಕರೆದುಕೊಂಡು ದ್ರೋಣಾಚಾರ್ಯರು ನಿರ್ಮಿಸಿರುವ ಚಕ್ರವ್ಯೂ ಹಕ್ಕೆ ಹೋಗಿ ಅಲ್ಲಿರುವ ಪಟುಭಟರನ್ನು ಧಾಮಧೂಮ ನಿರ್ಧೂಮವನ್ನು ಮಾಡಿಕೊಂಡು ಬಾರಯ್ಯ ಭೀಮಸೇನಾ.

ಭೀಮ : ಅಣ್ಣಯ್ಯ ತಮ್ಮ ಅಪ್ಪಣೆ ಪ್ರಕಾರ ಬೆಂಬಲಕ್ಕೆ ತೆಗೆದುಕೊಂಡು ಹೋಗಿ ಗುರುಗಳಿಂದ ನಿರ್ಮಿತವಾಗಿರತಕ್ಕ ಚಕ್ರವ್ಯೂ ಹದ ಕೋಟೆಯನ್ನು ಹಾಳುಮಾಡಿಕೊಂಡು ಬರುತ್ತೇನೆ.

ಧರ್ಮರಾಯ : ಹಾಗೆ ಮಾಡಯ್ಯ ತಮ್ಮಾ ಭೀಮಸೇನ.

(ರಾಗ, ಶಂಕರಾಭರಣ ಏಕತಾಳ)

ಧರ್ಮಜನಪ್ಪಣೆಗೊಂಡು ಮರುತಜ ತಾ ಖತಿಗೊಂಡು,
ಪದ್ಮವ್ಯೂ ಹವ ಕಂಡು ಪಂಥದೊಳೆರಗಿದ ನೆಂದೂ॥

ಭೀಮ : ಅಯ್ಯ ಭಾಗವತರೇ, ಈವತ್ತಿನ ದಿವಸ ನಮ್ಮ  ಅಣ್ಣನಾದ ಧರ್ಮರಾಯರ ಅಪ್ಪಣೆಯಂತೆ ಈ ಕುರುಕ್ಷೇತ್ರದಲ್ಲಿ ಮುದಿಹಾರುವ ದ್ರೋಣ ನಿರ್ಮಿತವಾದ ಪದ್ಮವ್ಯೂ ಹವನ್ನು ಕಂಡಂಥವನಾದೆ, ದ್ವಾರದಲ್ಲಿರುವ ಸೈಂಧವನನ್ನು ಬಲಿ ಕೊಟ್ಟು ಒಳ ಹೊಕ್ಕು ಅಲ್ಲಿರತಕ್ಕ ಪಟುಭಟರ ಪಾಡೇನು ಮಾಡುತ್ತೇನೆ, ನನ್ನ ಭುಜಬಲ ಪರಾಕ್ರಮವನ್ನು ನೋಡುವಂಥವರಾಗಿರಿ.

ಭಾಮಿನಿ

ಎಲವೋ ಸೈಂಧವ ಕೇಳು ನಿನ್ನಯ ಗೋಣ ಮುರಿಯಲು ಚಾಣ
ಬಂದಿಹೆ ಕೋಣನಂದದಿ, ಸೆಣಸದೆನ್ನೊಳು ದ್ವಾರವನು ಬಿಡುಯೆಂದಾ॥

ಭೀಮ : ಎಲಾ ಸೈಂಧವಾ, ದ್ರೋಣನಿಂದ ನಿರ್ಮಿತವಾಗಿರುವ ಈ ಪದ್ಮವ್ಯೂ ಹವನ್ನು ಧ್ವಂಸಮಾಡಲು ನಾನು ಬಂದಿರುತ್ತೇನೆ. ಭೀಮಾ ನಿಮ್ಮ ಭಾವ ಧಗಡಿ, ದ್ವಾರಪಾಲಕನಾಗಿ ಚಾಣನಾಗದೆ ಕೋಣನಂತೆ ಎರಡೂವರೆ ಆಳುದ್ದಕ್ಕೆ ನಿಂತು ಯಿರುತ್ತೀಯೆ. ಒಳ್ಳೆಯ ಮಾತಿನಲ್ಲಿ ದ್ವಾರವನ್ನು ಬಿಟ್ಟು ಹೋಗಬಾರದೇ.

ಸೈಂಧವ : ಯಲಾ ಭೀಮಾ, ಯಿನ್ನೂ ಒಂದು ಗಳಿಗೆಯಲ್ಲಿ ಈ ಸ್ಥಳವನ್ನು ಬಿಟ್ಟು ನೀನು ಓಡುತ್ತೀಯೋ, ನಾನು ಓಡುತ್ತೇನೊ, ಸದ್ಯದಲ್ಲಿ ಸಭಿಕರಿಗೆ ಗೊತ್ತಾಗುತ್ತೇ. ಧಗಡಿ ಈವತ್ತಿನ ಮಟ್ಟಿಗೆ ನಿನ್ನ ಸಾಹಸ ನನ್ನಲ್ಲಿ ನಡೆಯುವುದಿಲ್ಲ. ಸನ್ನಿ ಹಿಡಿದು ಬಂದು ಯಿದ್ದೀಯಾ, ಖುಲ್ಲಾ ಹೇಳುತ್ತೇನೆ ಕೇಳುವಂಥವನಾಗು.

ಭಾಮಿನಿ

ಖುಲ್ಲ ನಿನ್ನಯ ಸೊಲ್ಲ  ಮರಸಿ ನಾಂ ಮಲ್ಲನಂದದಿ ಹಲ್ಲ ಕೀಳುವೆ
ಸಲ್ಲದೆನ್ನೊಳು ಬೊಗಳಬ್ಯಾಡವೊ ಖೂಳ ಶ್ವಾನನಂದದಲಿ.

ಸೈಂಧವ : ಎಲಾ ಖುಲ್ಲನೆ, ಈವತ್ತಿನ ಯುದ್ಧದಲ್ಲಿ ಮಲ್ಲನಂತೆ ನಿನ್ನ ಸೊಲ್ಲನ್ನು ಅಡಗಿಸಿ, ಹಲ್ಲು ಕೀಳಿಸಿ ನಿಮ್ಮಣ್ಣನ ಹತ್ತಿರಕ್ಕೆ ಕಳುಹಿಸುವದು ಖಂಡಿತ. ಕಳ್ಳನೆ ನಾಯಿ ಬೊಗಳಿದಂತೆ ಬೊಗಳಬ್ಯಾಡ. ಎಲ್ಲಿ ಹಾಗಾದರೆ ಯುದ್ಧಕ್ಕೆ ಎದುರಾಗು ನೋಡುವ.