(ಧರ್ಮರಾಯನ ಪ್ರವೇಶ)

ರಾಗಭೈರವಿತಾಳಜಂಪೆ

ಇತ್ತಲಭಿಮನ್ಯು ಷಡುರಥರೊಡನೆ ಕಾದುತ್ತಿರಲಿತ್ತ ಧರ್ಮಜ
ಮನದಿ ಚಿಂತಿಸುತಲೆಂದಾ ಪುತ್ರನೊಬ್ಬನೆ ಪೋದಾನೇನಾದನೋ
ಕಾಣೆ ಸತ್ವಾತಿಶಯ ಭೀಮ ಹೋಗಿ ಬಾ ರಣಕೇ॥

ಧರ್ಮರಾಯ : ಆಹಾ ಸಭಿಕರೆ, ಸಣ್ಣ ಮಗುವಾದ ಅಭಿಮನ್ಯುವು ಚಕ್ರವ್ಯೂಹದ ಕೋಟೆಗೆ ಯುದ್ಧಕ್ಕೆ ಹೋಗಿ ಬಹಳ ಹೊತ್ತಾಯಿತು. ಮನಸ್ಸಿಗೆ ಯಾಕೋ ಸಂದೇಹ ತೋರುವುದು, ಬೆಂಬಲಕ್ಕೆ ಧಾರೂಯಿಲ್ಲ ಸತ್ವಾತಿಶಯನಾದ ಭೀಮನೆ, ಹೇ ತಮ್ಮಾ ಬಾಯಿಲ್ಲಿ ನೀನು ಯೀ ಕ್ಷಣವೆ, ನಿನ್ನ ಬೆಂಬಲಕ್ಕೆ ನಕುಲ ದೃಷ್ಟದ್ಯುಮ್ನ, ಸಹದೇವ, ದೃಪದ, ವಿರಾಟ, ಸಾತ್ಯಕಿ ಮೊದಲಾದ ಶೂರ ಭಟರನ್ನು ಕರೆದುಕೊಂಡು ಕುರುಕ್ಷೇತ್ರದಲ್ಲಿ ನಿರ್ಮಿಸಿರುವ ಚಕ್ರವ್ಯೂಹದ ಕೋಟೆಗೆ ತೆರಳಿ ಸುಕುಮಾರನನ್ನು ನೋಡಿ ಬರುವಂಥವನಾಗೋ.

ಭೀಮ : ಅಗ್ರಜಾ ತಮ್ಮ ಅಪ್ಪಣೆಯನ್ನು ಶಿರಸಾವಹಿಸುವೆನು. ಯೀ ಕ್ಷಣವೇ ನಾವುಗಳೆಲ್ಲರೂ ಸಾಲಾಗಿ ವಂದಿಸಿ, ದಿಗ್ದೆಸೆ ಭೇದಿಸುವ ವಾದ್ಯರವಗಳಿಂದ ಚಕ್ರವ್ಯೂಹದ ಕೋಟೆಗೆ ತೆರಳಿ ಮಗುವಿನ ಸ್ಥಿತಿಯನ್ನು ನೋಡಿಕೊಂಡು ಬರುತ್ತೇನೆ, ಯಲೈ ಚಾರಕ ಅಣ್ಣನವರ ಅಪ್ಪಣೆಯಾಯ್ತು ಜಾಗ್ರತೆಯಿಂದ ಹೊರಡು ಚಕ್ರವ್ಯೂಹದ ಕೋಟೆಗೆ ಹೋಗೋಣ.

ಪದರಾಗಸೌರಾಷ್ಟ್ರತಾಳತ್ರಿಪುಡೆ

ಗದೆಯ ತಿರುಹುತ ಸಿಂಹನಾದದೋಳ್
ವದರಿ ಮಗನ ಫಡ ಫಡೆನುತಲೀ ಕದನ ಕಲಿಗಳ
ದೇವ ಭೀಮನೂ ಮೋದದೀ ನಡೆದಾ॥

ಭೀಮ : ಪಟು ಭಟರೋಳ್ ಚಟಿಲತರಮಾದ ಭಟ ಕುಟುಂಬಿಯೆ, ಚಕ್ರವ್ಯೂಹದ ಕೋಟೆಯಲ್ಲಿ ಯಿರುವ ಮಗುವಾದ ಅಭಿಮನ್ಯುವನ್ನು ನೋಡಿಕೊಂಡು ಬರುವುದಕ್ಕೋಸ್ಕರವಾಗಿ ಯಿಗೋ ಗದಾ ದಂಡವನ್ನು ತೆಗೆದುಕೊಂಡು ಯಿರುತ್ತೇನೆ. ಸಿಂಹ ಘರ್ಜನೆಯೊಂದಿಗೆ ಶಿಶುವಿನ ಬಳಿಗೆ ಹೋಗೋಣ ನಡೆ.

ಪದ

ಪೃಥ್ವಿ ಕಂಪಿಸೆ ಭೀಮಸೇನನ ರಥಧ ಹೊಯ್ಲಿಗೆ ಬಂದ
ಬಾಗಿಲೊಳತಿರಥರ ತಡೆದನು ಜಯದ್ರಥ ಖತಿಯೊಳಿರದೇ॥

ಭೀಮ : ಎಲೈ ಭಟನೆ, ಅತಿರಥರೊಂದಿಗೆ ಕೂಡಿಬರುವ ನಮ್ಮ ರಥಧ ರಭಸಕ್ಕೆ ಭೂಮಿಯು ಬಿರುಕು ಹೋಗುತ್ತಿರುವುದೂ, ಕಂಡ್ಯಾ ಯೆಲ್ಲಿಗೆ ಬಂದು ಯಿರುತ್ತೆ ರಥ ನೋಡುವಂಥವನಾಗು॥

ಸಾರಥಿ : ಭೀಮಪ್ಪನೋರೆ ಮೊದಲು ಬಂದು ಮುಖಕ್ಕೆ ಹೊಡೆಸಿಕೊಂಡು ಹೋದೆವಲ್ಲಾ ಆ ಬಾಗಿಲ ಬಳಿಗೆ ಬಂದಿರುತ್ತೆ॥

ಭೀಮ : ತಲಬಾಗಿಲಲ್ಲಿ ಯಾರಿದ್ದಾರೆ ನೋಡು.

ಸಾರಥಿ : ಅಪ್ಪೋ ಭೀಮಪ್ಪ ಮೊದಲು ಯಿದ್ದೋನು ಗಣೆ ಭೇತಾಳಪ್ಪ. ಮೂವತ್ತೈದು ಅಡಿ ಎತ್ತರದೋನು ಸೈಂಧವಪ್ಪ॥

ಭೀಮ : ಒಳ್ಳೇದು ದಾರಿಗೆ ಬಾ. ಯೀಗಲಾದರೂ ವಳ್ಳೆ ಮಾತಿನಲ್ಲಿ ನಾವು ಒಳಗೆ ಹೋಗುವುದಕ್ಕೆ ದಾರಿಯನ್ನು ಬಿಟ್ಟು ಕೊಡುತ್ತಾನೊ ಯಿಲ್ಲವೊಕೇಳೋಣ. ಎಲಾ ಸೈಂಧವ ನಾವು ವಳಗೆ ಹೋಗುವುದಕ್ಕೆ ದಾರಿಯನ್ನು ಬಿಡುವಂಥವನಾಗೆಲಾ ಅಯೋಗ್ಯಾ.

ಸೈಂಧವ : ಎಲಾ ಭೀಮ, ಯೀ ಹೊತ್ತಿನ ಮಟ್ಟಿಗೆ ಹರನ ವರಪ್ರಧಾನವು ನನ್ನಲ್ಲಿ ಯಿರಲು ನಿನಗೆ ದಾರಿಯನ್ನು ಬಿಡುವ ಮಾತುಂಟೇನೋ ತಬ್ಬಲಿ. ದುಸ್ರ ಮಾತನಾಡಿದರೆ ಹೊರಗೆ ತಳ್ಳಿಸಿ ಬಿಡುತ್ತೇನೆ ನೋಡು॥

ಭೀಮ : ಎಲಾ ಸೈಂಧವ. ಅಭಿಮನ್ಯುವಿನ ಕ್ಷೇಮ ಸಮಾಚಾರವನ್ನು ತಿಳಿದುಕೊಂಡು ಬರುತ್ತೇನೆ, ಸ್ವಲ್ಪ ಹೊತ್ತು ವಳಕ್ಕೆ ಬಿಡುವಂಥವನಾಗೆಲಾ ಅಯೋಗ್ಯ॥

ಪದ

ಖೂಳ ನಿನಗೀ ಗರ್ವವ್ಯಾಕೆಲೊ ಕೊಳುಗೈದುವ ನರಿಯೆ
ತೊಲಗೆಂದಾಳು ಬಿಂಕದಿ ಕೊಟ್ಟ ಬಹುತರ ಕಾಳಗವನೂ॥

ಸೈಂಧವ : ಎಲಾ ಭೀಮ ಅಭಿಮನ್ಯುವನ್ನು ಯಿಲ್ಲಿಗೆ ಮರೆತು ಬಿಡೂ. ಯೀ ದಿವಸ ಶಂಕರನ ಕರುಣಾರಸವು ನನ್ನ ಮೇಲೆ ಯಿರುವುದರಿಂದ ನಿನ್ನ ಗಣನೆಯಿಲ್ಲ ಛೇ ಪಾಪಿ ಅಯೋಗ್ಯ ಅಹಂಕಾರವನ್ನು ಬಿಡು ಹಿಂದೆ ಹೊಡೆದ ಪೆಟ್ಟುಗಳು ಮಾದು ಯಿದ್ದಾವೊ, ಯಿದುವರಿತು ಈ ದಿವಸದ ಮಟ್ಟಿಗೆ॥

ಪದ

ನರ ಹೊರತು ನಿಮ್ಮೀಗ ನಾಲ್ವರ ಸರಕು ಮಾಡುವನಲ್ಲಾ
ಹೋಗೆಂದು ಕರಾಸ್ತ್ರದಿ ಕಾದನಿಲಜನಂತು ನುಡಿದಾ॥

ಸೈಂಧವ : ಎಲಾ ವಾಯುಪುತ್ರನೆ, ಯೀ ದಿವಸ ಅರ್ಜುನನ ಹೊರ್ತು ನೀವು ನಾಲ್ಕು ಮಂದಿಯೂ ನನ್ನ ಕೈಗೆ ಸಾಲಾಗಿ ಮೇಲ್ವರಿದು ಬಂದರೆ ನಿಮ್ಮ ಪ್ರಾಣದೊಂದಿಗೆ ಬಿಡಲಾರೆನು ಕೇಳು ಮತ್ತೆ ನೀನು ಮುಂದಕ್ಕೆ ಹೋಗುವನೆ ಹಿಂದಕ್ಕೆ ಹೋಗುವನೆ॥

ಭೀಮ : ಆಹಾ ದೈವವೆ. ಯೀ ದಿವಸ ಯೀ ಜಯದ್ರಥನು ಶಿವನ ವರಬಲದಿಂದ ಬಹಳ ಗರ್ವಿಯಾಗಿರುತ್ತಾನೆ. ಯಿರಲಿ ವಂದು ರಾತ್ರೆ ಎಲಾ ಸೈಂಧವ ಸಾರಿ ಹೇಳಿದ್ದೇನೆ, ದಾರಿಯನ್ನು ಕೊಡಬೇಡ, ನಾಳಿನ ಫಲವನ್ನು ಹೇಳುತ್ತೇನೆ ಮರೆಯಬೇಡ ಗಂಟು ಹೂಡಿಕೊ. ಎಲೆ ಜಯದ್ರಥನೆ ನಾಳೆ ದಿವಸ ನಿನ್ನ ತಲೆಯು ನನ್ನ ತಮ್ಮನಾದ, ಅರ್ಜುನನಿಂದ ಬೀಳುವುದೂ ಖಂಡಿತ. ತಿಳಿದುಕೊಂಡಿರುವನಾದರೆ ಹಿಂದಿರುಗಿ ಹೋಗುತ್ತೇನೆ.

ಸೈಂಧವ : ಎಲಾ ಭೀಮ, ನೀನುಹೋದರೆಷ್ಟುಬಂದರೆಷ್ಟು ಯಿದ್ದರೆಷ್ಟು ಹೊರಟು ಹೋಗೆಲಾ ಅಯೋಗ್ಯಾ ನೋಡಿಕೊಳ್ಳುತ್ತೇನೆ.

ಭೀಮ : ಅಣ್ಣಯ್ಯನವರ ಪಾದಕ್ಕೆ ನಮಸ್ಕಾರ.

ಧರ್ಮರಾಯ : ಸಕಲೈಶ್ವರ್ಯಮಸ್ತು ಬಾರಯ್ಯ ಭೀಮಸೇನ, ನೀನು ಹೋದ ಸಮಾಚಾರವೇನು.

ಭೀಮ : ಅಣ್ಣಯ್ಯ ಧರ್ಮಜ, ಮೊದಲಿನಂತೆ ಸೈಂಧವನು ಬಾಗಿಲಲ್ಲಿ ಅಡ್ಡಲಾಗಿ ವಳಕ್ಕೆ ಬಿಡದೆ ಹೋದನು, ಯೀ ದಿವಸ ನಾನು ಅವನನ್ನು ಕೆಣಕಿ ಬದುಕುತ್ತಿರಲಿಲ್ಲಾ. ಆದ್ದರಿಂದ ಹಿಂದಕ್ಕೆ ಬಂದೆನೋ ಅಗ್ರಜಾ.

ಧರ್ಮರಾಯ : ಭೀಮಸೇನ, ಮಗನಾದ ಅಭಿಮನ್ಯು ಪ್ರಾಣಮಾತ್ರ ಕ್ಷೇಮದಲ್ಲಿದ್ದಾನೋ ಹ್ಯಾಗೆ॥

ಭೀಮ : ಅಣ್ಣಯ್ಯ ಯೀವತ್ತಿನವರೆಗೆ ಜಯಶೀಲನಾಗಿ ಪ್ರಾಣದೊಂದಿಗೆ ಮಾತ್ರ ಯಿರುವಂತೆ ತಿಳಿಯುತ್ತೆ. ಮುಂದೆ ಯಿವನಾಯುಷ್ಯವನ್ನು ಹ್ಯಾಗೆ ಹೇಳಲಿ॥

ಧರ್ಮರಾಯ : ತಮ್ಮಾ ಭೀಮಸೇನಾ, ಶ್ರೀಹರಿಯ ಕೃಪೆಯಿದ್ದಂತೆ ಆಗಲಿ. ವಳ್ಳೇದು ಮುಂದಿನ ವಿಚಾರದಲ್ಲಿ ತಿಳಿಯುತ್ತಾ ಯಿರಬೇಕಲ್ಲವೆ ನಡಿ ಹೋಗುವ॥

ವಚನ : ಈ ಪ್ರಕಾರವಾಗಿ ಧರ್ಮರಾಯನು ಭೀಮನಲ್ಲಿ ಹೇಳಲು, ಯಿತ್ತ ಪದ್ಮವ್ಯೂಹದಲ್ಲಿ ಕೌರವಾದಿಗಳಿಂದ ಸೋತು ಮಲಗಿದ್ದ ಅಭಿಮನ್ಯು ಸುಧಾರಿಸಿಕೊಂಡು ಎದ್ದು ಯೇನೆನ್ನುತಿರ್ಪನು॥

ಅಭಿಮನ್ಯು : ಎಲಾ ಕೌರವ, ಅಭಿಮನ್ಯು ಸತ್ತು ಹೋದನೆಂಬದಾಗಿ ಆಗಲೆ ಆನಂದವಾಗಿತ್ತಲ್ಲವೆ. ಹೇ ಮಂದಮತಿ ಅಂಧಕನನುಜ. ನಿನ್ನ ಮಕ್ಕಳು ನೂರು ಜನಗಳ ತಲೆಯನ್ನು ತೆಗೆದು ಈ ನನ್ನ ತಲೆಯನ್ನು ಕೊಟ್ಟೇನೆ ವಿನಹ ಈ ಮಧ್ಯೆ ಕೊಡಲಾರೆ ಸದ್ಯದಲ್ಲಿ ನಿನ್ನ ಮಕ್ಕಳು ಬಂದು ನನ್ನಲ್ಲಿ ಜಯಲಾಭವನ್ನು ಹೊಂದಲಿ ಕಳುಹಿಸಿಕೊಡುವಂಥವನಾಗು

 

(ಲಕ್ಷ್ಮಣನ ಪ್ರವೇಶ)

ಭಾಮಿನಿ

ಸುರಪತಿಯ ಪೌತ್ರನಾಡಿದ ನುಡಿಗೆ ಅಕ್ಷಿಯೋಳ್ ಕಿಡಿಗೊಂಡ
ಲಕ್ಷಣಾದಿಗಳೆಲ್ಲಾ ಅಕ್ಷಿಯನು ಕುಣಿಸುತ್ತ ಮೋಕ್ಷವನು
ಪಡೆವುದಕೆ ಕುರುಪತಿಯ ಪದಕೆರಗಿ ಬೇಡಿದರು ಅಪ್ಪಣೆಯಾ॥

ಲಕ್ಷ್ಮಣ : ಹೇ ಜನಕನೆ, ಯೀ ಸುರಪತಿಯ ಮೊಮ್ಮಗನಾದ ಅಭಿಮನ್ಯು ಆಡಿದ ಮಾತನ್ನು ಕೇಳಿದಿರೊ. ನಾವು ಯಿದ್ದರೇನೂ ಸತ್ತರೇನೂ. ಏಕಕಾಲದಲ್ಲಿ ನಾವು ನೂರು ಜನ ನಿನ್ನ ಮಕ್ಕಳೊಂದಾಗಿ ಯೀ ತಬ್ಬಲಿಯನ್ನು ಛೇದಿಸಿ ಪಾದಕ್ಕೆ ವಪ್ಪಿಸುತ್ತೇವೆ ಅಪ್ಪಣೆಯನ್ನು ಕೊಡುವಂಥವರಾಗಿ॥

ಕೌರವ : ಹೇ ಮಕ್ಕಳಿರಾ ಭಲಾ ನನಗೆ ಸಂತೋಷವಾಯ್ತು. ನಿಮ್ಮ ಸಾಹಸವನ್ನು ನೋಡುತ್ತೇನೆ, ಸಮರದಲ್ಲಿ ಜಯಲಾಭವನ್ನು ಹೊಂದಿ ಬರುವಂಥವರಾಗಿರಿ॥

ಲಕ್ಷ್ಮಣ : ಎಲಾ ಅಭಿಮನ್ಯು ನರನ ಹುಡುಗ, ಯೇಕ ಕಾಲದಲ್ಲಿ ನಾವು ನೂರು ಜನ ಬಂದಿರುತ್ತೇವೆ. ನಿನ್ನ ಪಾಡೇನಾಗುವುದು, ಕಡೆಗೆ ನೋಡಿಕೊಳ್ಳುವಂಥವನಾಗು॥

ಅಭಿಮನ್ಯು : ಎಲಾ ಲಕ್ಷಣಾದ್ಯರೆ, ಕೌರವನ ಹುಡುಗರೆ ನೀವು ನೂರು ಜನ ನಾನು ವಬ್ಬ ವಳ್ಳೇದು. ಯೇಕ ಕಾಲದಲ್ಲಿ ಯೆಲ್ಲರೂ ಯದುರಾಗಿ ವಂದು ಕೈ ನೋಡುತ್ತೇನೆ

(ಕೌರವನ ಮಕ್ಕಳು ನೂರು ಜನ ಬೀಳುವರು

ಅಭಿಮನ್ಯು : ಎಲೋ ಕೌರವನ ಮಕ್ಕಳೇ ನಿಮ್ಮ ಪಾಡೇನಾಯ್ತು ಹದ್ದು ಕಾಗೆಗಳಿಗೆ ಯೀಡಾಗಲಿಲ್ಲವೆ ಯೆಲಾ ಚಾರಕ ಬಾಯಿಲ್ಲಿ ಯೆಷ್ಟು ಬುರುಡೆ ಚೆಲ್ಲಾಡಿರುತ್ತವೆ, ಲೆಕ್ಕ ಮಾಡಿಕೊಂಡು ಕೌರವನಿಗೆ ಹೇಳು॥

ಸಾರಥಿ : ಬುದ್ಧಿ ಅಪ್ಪಣೆ. ವಂದು, ಎರಡೂ ಮೂರೂ, ನಾಲ್ಕು, ಐದು, ಆರು, ಏಳು, ಎಂಟು ವಂಭತ್ತು, ಹತ್ತು ಆಗೋದಿಲ್ಲವಪ್ಪ ಅಪಾರ ಯಿದ್ದಾವೆ. ಹೊತ್ತಾಗುತ್ತೆ, ಹತ್ತು ಹತ್ತು ಇಪ್ಪತ್ತು, ಯಿಪ್ಪತ್ತು ಹತ್ತು ಮೂವತ್ತು ಇದೂ ತಡ ಮೂವತ್ತು ಮೂವತ್ತು ಅರುವತ್ತು, ಅರುವತ್ತು ಮೂವತ್ತು ತೊಂಭತ್ತು ತೊಂಬತ್ತು ಹತ್ತು ನೂರು, ಅಪ್ಪೋ ಲೆಕ್ಕಾ ಮಾಡಿದೆ, ನೂರು ಬುರುಡೆ ಬಿದ್ದಿರುತ್ತವೆ, ಅಪ್ಪಾ ಯಿವರೆಲ್ಲಾ ಯಾರಪ್ಪಾ॥

ಅಭಿಮನ್ಯು : ಎಲಾ ಚಾರಕ, ಯಿವರು ನೂರು ಜನವೂ ನನಗೆ ಕಂಟಕರಾದ ಕೌರವರ ಮಕ್ಕಳಲ್ಲವೇನೋ

ಸಾರಥಿ : ಏನಿರಪ್ಪ ಹಾಗಾದರೆ ಯಿವರ ಹೆಂಡಿರೆಲ್ಲಾ ಸಾಲು ಮುಂಡೇರಾದರು ತಾನೇ. ಯಿನ್ನು ಮೇಲೆ ನಮ್ಮ ಭಂಡಾರಿ ಸಾಂಬ ಮಾವ ಯಿವರ ಹೆಂಡರನೆಲ್ಲಾ ಬೋಳಿಸಿಕೊಂಡು ಹೋಗೋದು ತಾನೇ॥

ಅಭಿಮನ್ಯು : ಛೇ ಬೇಕೂಫ್ ಹೀಗೆಂದರೆ ಯೆಂಥಾ ಮಾತೋ॥

ಸಾರಥಿ : ಅಲ್ಲ ಕಾಣಿರಪ್ಪ. ನಿಮ್ಮ ಜಾತಿಯೊಳಗೆ ಗಂಡ ಸತ್ತು ಮುಂಡೇರಾದ ಮೇಲೆ ಬೋಳ್ಸಾಕಿಲ್ಲವೇನಿರಪ್ಪಾ ತಲೆಯಾ॥

ಅಭಿಮನ್ಯು : ಛೇ ತಬ್ಬಲಿ ತಲೆಯೆಲ್ಲಾ ಹರಟೆ ಬಿಟ್ಟು ಕೌರವನಿಗೆ ವರದಿ ಕೊಡು॥

ಸಾರಥಿ : ಅಪ್ಪಣೆ ಅಗಡ್‌ದೀನ್ ಬುದ್ಧಿ ಸಲಾಂ ತಗೋಳಿ॥

ಕೌರವ : ಎಲಾ ಚಾರವರನೆ ಯೇನು ವಿಶೇಷ ಬಂದ ಸಂಗತಿ॥

ಸಾರಥಿ : ಬುದ್ಧೀರ ವೋಟು ಮೂರು ಹೆಜ್ಜೆ ರಣಭೂಮಿಗೆ ದಯಮಾಡಿಸಬೇಕೂ ತೋರಿಸುತ್ತೇನೆ॥

ಕೌರವ : ಹಾಗಾದರೆ ತೋರಿಸು ನಡೆ॥

ಸಾರಥಿ : ಯಿಲ್ಲಿ ವಯಿಕ್ ಅಂದು ಯಿರೋರು ಯಾರು ನೋಡಪ್ಪಾ॥

ಕೌರವ : ಆಹಾ, ಯಿವರು ನೂರು ಜನ ನನ್ನ ಮಕ್ಕಳಾದ ಲಕ್ಷಣಾದಿಗಳಲ್ಲವೆ ಶಿವಾಶಿವಾ ಶಂಕರ, ಅಯ್ಯೋ ವಿಧಿಯೆ ನನ್ನ ಗತಿ ಹೀಗಾಯಿತೆ॥

ಭಾಮಿನಿ

ಪರಮ ಪ್ರಿಯ ಸುತರೆ ಮಡದಿಯರ ಪೊರೆವರ‌್ಯಾರಿನ್ನು
ಪಾಪಿಯೆನುತ ಕೌರವನು ಕರದಿಂದ ಕಡಿದ ತಲೆಗಳ
ತುಂಡುಗೂಡಿಸಿ ಹೊರಳಿದನು ನರಳಿದನು
ಬಳಲಿದನು ತೊಳಲಿದನು ರಣದೊಳಗೆ

ಕೌರವ : ಆಹಾ ಮಕ್ಕಳಿರಾ, ನಾನಾಗಿ ಯೀ ಕೋಟೆಯನ್ನು ನಿರ್ಮಿಸಿ ಇದಕ್ಕೆ ನಿಮ್ಮನ್ನು  ಬಲಿಗೊಡಿಸಿದಂತೆ ಆಯಿತಲ್ಲಾ ಅಯ್ಯೋ ನನ್ನ ಪ್ರಾರಬ್ಧವೇ.

ಪದರಾಗಶೋಕರಸ

ಅಯ್ಯೋ ವಿಧಿಯೇ ಮಕ್ಕಳಿರಾ ಪಾಪಿಯಾದೆನೆ
ನಿಮ್ಮ ತಾಯಿ ಭಾನುಮತಿಗೆ ಯೇನ ಹೇಳಲಿ
ನೂರ‌್ವರನ್ನು ನಾನೇ ಕೊಂದೇ ಯೆಂದು ಹೇಳಲೆ
ಪಾಪಿ ಜನ್ಮ ಪೃಥ್ವಿಯ ಮೇಲೆ ಪುಟ್ಟಬಾರದು
ಅಯ್ಯೋ ವಿಧಿಯೇ ಮಕ್ಕಳಿರಾ॥

ಕೌರವ : ಅಯ್ಯೋ ವಿಧಿಯೇ ಹೇ ಮಕ್ಕಳಿರಾ, ವುಕ್ಕುವ ಶೋಕಕ್ಕೆ ಹಕ್ಕುದಾರಿಕೆಯನ್ನು ಕೊಟ್ಟು ದಿಕ್ಕಿಲ್ಲದಂತೆ ಮಾಡಿದಿರಾ, ಯೀ ತಬ್ಬಲಿಯು ನಿಮಗೆಲ್ಲಿ ಹೆಬ್ಬುಲಿಯಾದನಪ್ಪಾ ಬಾಲಯ್ಯಗಳಿರಾ. ಈ ಹೊತ್ತಿಗೆ ನಾನು ಪಾಪಿಯಾದೆ. ನಿಮ್ಮ ತಾಯಿಯಾದ ಭಾನುಮತಿಗೆ ಯೇನು ಹೇಳಲಿ. ನಿಮ್ಮ ನೂರು ಜನ ಮಕ್ಕಳನ್ನು ನಾನೇ ಕೊಂದೆನೆಂದು ಹೇಳಲೆ. ಮಕ್ಕಳಿರಾ ವಂದು ವಿನಯವಾದ ಮಾತನ್ನಾಡಬಾರದೆ॥

ಸಾರಥಿ : ಅಪ್ಪೋ ಬಿಕ್ಕಳಿಸಿಕೊಂಡು ಬಿಕ್ಕಳಿಸಿಕೊಂಡು ಯಾಕೆ ಅಳುತ್ತೀರಪ್ಪೋ॥

ಕೌರವ : ಎಲಾ ಚಾರಕ, ಕಾಣದವನಂತೆ ಕೇಳಿ ನನ್ನ ಹೊಟ್ಟೆಗೆ ಮತ್ತಷ್ಟು ಬೆಂಕಿಯನ್ನು ತೋರುವೆಯಲ್ಲೊ ಪಾಪಿ.

ಸಾರಥಿ : ಅಪ್ಪೋ ಕೌರವಪ್ಪಾ ನಾನಲ್ಲ ಪಾಪಿ. ನೀನು ಅಳಬೇಡ. ಆಗಲೇ ನಾನು ಹೇಳಿದ್ದನ್ನು ಮರೆತು ಬಿಟ್ಟಿಯೋ ಯಂಗಪ್ಪ.

ಕೌರವ : ಎಲಾ ಹನುಮನಾಯ್ಕ, ಅದೇನು ದುಃಖಕಾಲ ಮರೆತು ಯಿರಬಹುದು. ಅದೇನು ನೀನೇ ಹೇಳಪ್ಪ ನೋಡುವ॥

ಸಾರಥಿ : ಅಪ್ಪಾ ಯೀಗ ಹಾಲು ಯೆಷ್ಟುಚಂಬು ಕುಡಿದೀರಾ, ಸಕ್ಕರೆ ಯೆಷ್ಟು ಬಂದೀತು. ಯೀ ಪಟ್ಟಣದ ಸಂದಿಗೊಂದಿಗಳಲ್ಲಿ ಬೀರಬೇಕು. ಯಿದಕ್ಕೆ ಜವಾಬು ಹೇಳಿ ಮುಂದಕ್ಕೆ ಯೋಚನೆ ಮಾಡಬೇಕು.

ಕೌರವ : ಅಯ್ಯೋ ವಿಧಿಯೇ, ನಾನು ಬದುಕಿದ್ದು ನನ್ನ ಮನೆಯಲ್ಲಿ ಕೂಳಿಗೆ ಸೇರಿದ ಆಳಿನಿಂದಲೂ ಮೂಳನಾಗಿ ಕೇಳಬೇಕಾಗಿ ಬಂದಿತೆ. ಯೇನು ಮಾಡಲಿ ಶಿವ ಶಿವಾ ಶಂಕರ. ಅತಿರಥ, ಮಹಾರಥರು ಷಡುರಥರು ಮುಂತಾದ ವೀರಭಟರೂ ಇದ್ದರೂ ನೂರು ಜನ ನನ್ನ ಮಕ್ಕಳನ್ನು ವೈರಿಯಾದ ಆ ಅಭಿಮನ್ಯುವಿನ ದಿವ್ಯಾಸ್ತ್ರಕ್ಕೆ ಬಲಿಯಾಗಿ ಮೋರೆಗಳನ್ನು ವೋರೆ ಮಾಡಿಕೊಂಡು, ವಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತಿರುವರಲ್ಲಾ. ಮೃತ್ಯುವಾಗಿರುವ ಯೀ ಶತೃವನ್ನು ಸಂಹರಿಸತಕ್ಕ ಹದನವನ್ನು ಮಾಡಿ ಕದನದಲ್ಲಿ ಇವನ ವದನವನ್ನು ನೋಡದೆ ಸದೆ ಬಡಿದು ಸದನಕ್ಕೆ ತೆರಳುವುದಿಲ್ಲವೇನಯ್ಯ ಶಸ್ತ್ರ ಪಂಡಿತರೆ-

ದ್ರೋಣ : ಅಯ್ಯ ಕೌರವೇಶ್ವರ ಹಾಗಾದರೆ ಹೇಳುತ್ತೇನೆ ಲಾಲಿಸು॥

ಭಾಮಿನಿ

ಕುರುಪತಿಯೆ ನೀ ಕೇಳ್ ನರಸುತನೋಳ್ ಪರಿಯಂಕ
ಕಾದಿದರು ಗೆಲುವಿಲ್ಲೆಂದನಾ ದ್ರೋಣಾ॥

ದ್ರೋಣ : ಮಹಾರಾಜನೆ, ಯೀ ಹುಡುಗನಲ್ಲಿ ಈ ದ್ವಾಪರ ಮೊದಲು ಕಲಿಯುಗ ಕಡೆಯವರೆಗೂ ಕಾದಿದ್ದಾಗ್ಯೂ ನಮಗೆ ಜಯಲಾಭ ಬರಲಿಕ್ಕಿಲ್ಲವಯ್ಯಿ ಕೌರವೇಶ್ವರ.

ಕೌರವ : ಸ್ವಾಮಿ ಗುರುಗಳೇ ಹಾಗಾದರೆ ರಣಕಂದನಾದ ಕಾಲಾಂತಕನನ್ನು ಜಯಿಸಿ ಪಾರಾಗುವ ಬಗೆ ಯಾವುದು॥

ದ್ರೋಣ : ಅಯ್ಯ ಕೌರವೇಶ್ವರಾ, ಯೀ ಹುಡುಗನ ಕರ ಚಮತ್ಕಾರ ಚೆನ್ನಾಗಿ ನಡೆಯುತ್ತೆ. ಆದ್ದರಿಂದಯಾವ ಬಗೆಯಿಂದಲಾದರೂ ಮೋಸದಿಂದ ಹಿಂದೆ ನಿಂತು ಯಿವನ ಕೈಗಳನ್ನು ಕತ್ತರಿಸಿದರೆ ಬಲಹೀನನಾಗುವನು. ನಂತರ ನಾವೆಲ್ಲಾ ವಗ್ಗಟ್ಟಾಗಿ ಯೀ ತಬ್ಬಲಿಯನ್ನು ಕೊಂದು ಹಾಕಿ ಬಿಡಬಹುದು॥

ಕೌರವ : ಸ್ವಾಮಿ ಗುರುಗಳೇ ನೀವು ಹೇಳುವ ಮಾತು ವಾಸ್ತವ. ಆದರೆ ಮುಂದೆ ನಿಂತು ಮಾಡುವ ಕೆಲಸವಲ್ಲಾ. ಹಿಂದೆ ನಿಂತು ಕೊರಳನ್ನು ಕತ್ತರಿಸುವುದು ಮೋಸವಲ್ಲವೊ. ಈ ಕೆಲಸವನ್ನು ಕೈಗೆ ಬಳೆಯನ್ನು ತೊಟ್ಟುಕೊಂಡಿರುವ ಹೆಂಗಸಾದರೂ ಮಾಡುವುದುಂಟೆ, ಕ್ಷತ್ರಿಯರ ಧರ್ಮವಲ್ಲ ಯೋಚನೆ ಮಾಡಿರಿ.

ದ್ರೋಣ : ಅಯ್ಯ ಕೌರವೇಶ್ವರಾ ನೀನು ಹೀಗೆ ಹೇಳತಕ್ಕ ಭಾಗದಲ್ಲಿ ನನ್ನ ಯತ್ನವೇನು? ನಿನ್ನ ಅಪಾಯದಿಂದ ಪರಿಹರಿಸಿಕೊಳ್ಳಬೇಕು॥

ಕೌರವ : ಸ್ವಾಮಿ ಪೂಜ್ಯರೇ, ಹಾಗಾದರೆ ಹಿಂದೆ ನಿಂತು ಕರಗಳನ್ನು ಕತ್ತರಿಸುವುದಕ್ಕೆ ನಮ್ಮವರ ಪೈಕಿ ಯಾರು ಯಿರುತ್ತಾರೆ॥

ದ್ರೋಣ : ಪರಮ ಮಿತ್ರನಾದ ಕರ್ಣ ಭೂಪತಿ ವಿನಹ ಯಿನ್ಯಾರಿಂದಲೂ ಆಗುವುದಿಲ್ಲ. ಕರ್ಣನನ್ನು ಕೇಳು. ಯೀ ಕೆಲಸವನ್ನು ಮಾಡುವುದಕ್ಕೆ ವಪ್ಪುತ್ತಾನೋ ಯಿಲ್ಲವೋ ಅವನ ಸಮಾಧಾನವನ್ನು ತಿಳಿಯುವಂಥವನಾಗು॥

ಕೌರವ : ಅಯ್ಯ ಕರ್ಣ, ದ್ರೋಣಾಚಾರ‌್ಯರು ಹೇಳಿದ ಮಾತನ್ನು ಕೇಳಿದೆಯಲ್ಲಾ. ಇದರಂತೆ ನೀನು ವೊಬ್ಬ ಯೀ ಕಾರ್ಯವನ್ನು ಮಾಡಿ ನನಗೆ ಕೀರ್ತಿಯನ್ನು ವುಂಟು ಮಾಡುವುದಿಲ್ಲವೇನಯ್ಯ ಕಲಿ ಕರ್ಣ॥

ಕರ್ಣ : ಮಹಾರಾಜನೆ, ನೀನು ಹೇಳತಕ್ಕ ಮಾತು ವಾಸ್ತವ. ಆದರೆ ಪಾಪ ಭೀತಿಗೆ ಅಂಜದೆ ಯೀ ಕಾರ್ಯವನ್ನು ಮಾಡಬೇಕೆಂದು ದ್ರೋಣರು ಹೇಳಿದ ಮಾತ್ರವೇ ಗಮನಕೊಟ್ಟು ಹೇಳುತ್ತಿರುವಿರಲ್ಲಾ. ನಾನು ಚೋರನಂತೆ ಹಿಂದೆ ನಿಂತು ಈ ಕಂದನ ಕರಗಳನ್ನು ಕತ್ತರಿಸಬಹುದೇ ಯೋಚಿಸಬೇಕು॥

ಕೌರವ : ಸ್ವಾಮಿ ಪೂಜ್ಯರೇ, ಈ ಮಾತಿಗೆ ಕರ್ಣನಿಗೆ ಸರಿಯಾದ ಜವಾಬು ಹೇಳಿರಿ ಮತ್ತೆ॥

ದ್ರೋಣ : ಅಯ್ಯ ಕೌರವ ಹೇಳುತ್ತೇನೆ ನೋಡು. ಅಯ್ಯ ಕರ್ಣ ನೀನು ಹೀಗೆ ಯೋಚನೆ ಮಾಡುವ ಭಾಗದಲ್ಲಿ ನಾನೂ ನೀನೂ ಯೀ ಕೌರವನ ಬಳಿಯಲ್ಲಿ ಸೇರಿಕೊಂಡಿದ್ದಕ್ಕೆ ಸಾರ್ಥಕವೇನೂ. ಪರಂತು ಧಣಿಯ ವುಪ್ಪನ್ನು ತಿಂದು, ಅವಗೆರಡು ಬಗೆಯಬಾರದು. ಮುಖ್ಯವಾಗಿ ನಾವೂ ಜಯಶೀಲರಾಗತಕ್ಕದ್ದು, ನಮ್ಮ ಕಾರ್ಯವಲ್ಲವೇನಯ್ಯ ಕರ್ಣ ಭೂಪತಿ॥

ಕರ್ಣ : ಸ್ವಾಮಿ ಗುರುಗಳೇ, ಈ ವಿಷಯದಲ್ಲಿ ಮುಂದೆ ಪಾಪ ಪುಣ್ಯಕ್ಕೆ ನಿಮ್ಮನ್ನೇ ಗುರಿಮಾಡುತ್ತೇನೆ. ಈಗ ನಾನು ಮಾಡತಕ್ಕ ಸನ್ನಾಹವೇನು ಮುಂದಿನ ಪ್ರಯತ್ನವನ್ನು ಹಿಡಿಯಿರಿ ಮತ್ತೆ.

ದ್ರೋಣ : ಅಯ್ಯ ಕರ್ಣ ಯೀ ದುಶ್ಶಾಸನ ಕೃಪ ಶಕುನಿ, ಅಶ್ವತ್ಥಾಮ ನಾನು ಮೊದಲಾಗಿ ಯೀ ಅತಿರಥ ಮಹಾರಥರನ್ನು ವತ್ತರಿಸಿಕೊಂಡು ಮುತ್ತಿಗೆ ಹಾಕಿ ಮಧ್ಯಕ್ಕೆ ಕೂಡಿಕೊಂಡು, ಯೆದುರಿಗೆ ನಿಂತು ಈ ಅಭಿಮನ್ಯುವಿನಲ್ಲಿ ಯುದ್ಧವನ್ನು ಮಾಡುತ್ತ ಯಿರುತ್ತೇವೆ, ನೀವು ವೈರಿಗೆ ಕಾಣಿಸಿಕೊಳ್ಳದಂತೆ ಮೋಸದಿಂದ ಹಿಂದೆ ನಿಂತು ಬಾಣಗಳನ್ನು ತುಂಡು ತುಂಡಿಗೆ ಕಡಿಯುವಂಥವನಾಗೂ. ಅಲ್ಲಿಗೆ ಅರ್ಧಾ ಬಲಹೋಗಿ ತನ್ನ ಶೌರ‌್ಯ ಪರಾಕ್ರಮವು ದುಃಖದಲ್ಲಿ ಯಿರುವಾಗ ಯಿಲ್ಲಿಗೆ ಖಂಡ್ರಿಸಿ ಬಿಡು. ಅಲ್ಲಿಗೆ ಬಲಹೋಗಿ ಬಲಹೀನನಾಗುತ್ತಾನೆ, ಆ ಕ್ಷಣವೇ ನಾವುಗಳೆಲ್ಲರೂ ಸೇರಿ ಶರಸಂಧಾನಗಳಿಂದ ಬಂಧಿಸಿ ಯೀ ಕರಾಳನ ಕೊಂದು ಬಿಡುತ್ತೇವಯ್ಯ ಕರ್ಣ ಭೂಪತಿ॥

ಕರ್ಣ : ಸ್ವಾಮಿ ಗುರುಗಳೇ, ಹಾಗಾದರೆ ಆಖೈರು ಯುದ್ಧ ಯಿದೇ ತಾನೇ. ಪ್ರಾರಂಭ ಮಾಡಿರಿ ನನ್ನ ಕೆಲಸವನ್ನು ಮಾಡುತ್ತೇನೆ.

ಭಾಮಿನಿ

ಹಿಂದೆ ಗುರು ಸುತಗುರು ಕೃಪಾನುಜರು ವಂದು ಕಡೆಯಲಿ ಕಾಡಿದರು
ಮಿಗೆ ಮುಂದೆ ದ್ರೋಣನ ಸುತ ಸಹಿತಂ ಅಭಿಮನ್ಯುವಂ ಕೆಣಕಿದರು॥

ದ್ರೋಣ : ಕರ್ಣ ಹಿಂಭಾಗದಲ್ಲಿ ನೀನೂ ನಾನು ಕೃಪಾಚಾರ‌್ಯರೇ ಮೊದಲಾದವರು ನಿಲ್ಲಬೇಕು. ಮುಂಭಾಗದಲ್ಲಿ ಅಶ್ವತ್ಥಾಮ ಶಕುನಿ, ದುಶ್ವಾಸನ ಮೊದಲಾದವರು ತರುಬಬೇಕು. ಯೀ ರೀತಿ ಸನ್ನಾಹದಿಂದಿರಬೇಕಲ್ಲಾ॥

ಕರ್ಣ : ಶಸ್ತ್ರ ಪಂಡಿತರೆ ಯಾಕಾಗಬಾರದು ಆಗಲಿ ಸ್ವಾಮಿ.

ದ್ರೋಣ : ಎಲಾ ಅಭಿಮನ್ಯು, ನಿನಗೆ ಕಡೆಗಾಲ ಕೂಡಿ ಬಂತು. ನಿನ್ನ ತಾಯಿ ತಂದೆಗಳಿಗೆ ಕೈ ಮುಗಿದು ಯುದ್ಧಕ್ಕೆ ನಿಲ್ಲಬಹುದು.

ಅಭಿಮನ್ಯು : ಎಲಾ ದ್ರೋಣನೆ ಹಾಗಾದರೆ ನಿಲ್ಲು॥

ಕರ್ಣ : ಎಲಾ ಅಭಿಮನ್ಯು ನಿನ್ನ ಕೈಯಲ್ಲಿದ್ದ ಬಾಣಗಳೇನಾಗಿರುತ್ತೆ ನೋಡಿರು.

ಭಾಮಿನಿ

ನಿಂದು ದಿವ್ಯಾಸ್ತ್ರದಲಿ, ಚಾಪವನೆಂದು ಮುಕ್ಕಡಿಯಾಗಿ ಕಡಿಯಲು
ಮಂದಹಾಸದಿ ತಿರುಗಿ ಕರ್ಣನಂ ಕಂಡನಭಿಮನ್ಯು॥

ಅಭಿಮನ್ಯು : ಆಹಾ ಯೀ ಬಾಣವನ್ನು ಯೀ ಮಂದಮತಿಯಾದ ಕರ್ಣನೆ ಕಡಿದು ಹಾಕಿರಬೇಕೂ ಛೇ ಕರ್ಣನೆ ಬಾಣವನ್ನು ಕಡಿದು ಹಾಕಿದೆಯಾ ಶಹಬ್ಬಾಷ್ ಹೇ ಕಳ್ಳಾ ಹೇಳುತ್ತೇನೆ ಕೇಳೂ॥

ಪದರಾಗದರುವುಅಷ್ಟತಾಳ

ಚೋರನಂದದಿ ಹಿಂದೆ ನಿಂತು ರೂಪುದೋರದೆ
ಬಾಣವನಾಂತೂ ಮರೆಯೊಳು ಶರನ ಖಂಡ್ರಿಸಿದಾ
ಯೀ ವಿದ್ಯವ ನೀನೆಲ್ಲಿ ಕಲಿತೇ

ಅಭಿಮನ್ಯು : ಎಲಾ ಕರ್ಣನೇ, ನೀನು ಕಳ್ಳನೋಪಾದಿಯಲ್ಲಿ ಹಿಂದೆ ನಿಂತು ಶರೀರವನ್ನು ಮರೆ ಮಾಡಿಕೊಂಡು ವಾರೆಯಿಂದ, ಧೀರನ ಬಾಣವನ್ನು ತುಂಡು ಮಾಡಿದ ಯೀ ಘನವಾದ ಕಳ್ಳ ವಿದ್ಯೆಯನ್ನು ಯಾವ ಚೋರ ಶಿಖಾಮಣಿ ಕಲಿಸಿದನು. ನಿನ್ನ ಗುರು ಪರಶುರಾಮನು ಯಿನ್ನೆಷ್ಟು ಘಟ್ಟಿಗನೊ ಯೀ ಲೋಕದಲ್ಲಿ ಸೂರ‌್ಯಚಂದ್ರಾದಿಗಳು ಯಿರುವವರೆಗೂ ನಿನ್ನ ಹೆಸರಿಗೆ ಯೀ ಕೀರ್ತಿ ತಪ್ಪಿದ್ದಲ್ಲ ಛೇ ಅಯೋಗ್ಯ, ಮುಟ್ಟಾಳ ಬೇಕೂಫ, ಹೇಳುತ್ತೇನೆ ಕೇಳೂ॥

ಪದ

ಕರದ ಚಾಪವು ಪೋದರೇನೂ
ಖಡ್ಗ ಶೌರ್ಯವು ಯಿರಲು ನೋಡು ನೀನೂ
ಶಿರವ ಚೆಂಡಾಡುವೆನೀಗ
ನಿನ್ನ ಗೋಣ ನಾ ಮುರಿವೆನೂ ಯೀಗ॥

ಅಭಿಮನ್ಯು : ಎಲಾ ಕರ್ಣ ಅಯೋಗ್ಯ ನನ್ನ ಕೈಯಲ್ಲಿದ್ದ ಬಾಣವನ್ನು ಕಡಿದೆನೆಂಬ ಗರ್ವವನ್ನು ಬಿಡು. ನನ್ನ ಶೌರ್ಯಕ್ಕೆ ಕುಂದಕ ಬರಲಿಲ್ಲ. ಪ್ರತಿ ಶರಗಳನ್ನು ತೆಗೆದುಕೊಂಡು ನಿನ್ನ ಶಿರವನ್ನು ಕಡಿದು, ಅದರಿಂದ ಸುರಿದ ರಕ್ತವನ್ನು ಶಾಕಿನಿ, ಡಾಕಿನಿ, ಜ್ವಾಲಿನಿ, ಮಾಲಿನಿ ಮುಂತಾದ ರಣ ಭೂತಗಳಿಗೆ ಕುಡಿಸಿ ನಿಮ್ಮ ಗರ್ಭಗಳನ್ನು ಹೆಬ್ಬುಲಿಯಂತೆ ಸೀಳಿ ಹಬ್ಬವನ್ನು ಮಾಡಿಸಿ, ತದನಂತರ ಯೀ ಅತಿರಥ ಮಹಾರಥ ಷಡುರಥರನ್ನು ಯಮನ ಪಟ್ಟಣಕ್ಕೆ ಕಳುಹಿಸಿ ಬಿಡುತ್ತೇನೆ, ನನ್ನ ಪರಾಕ್ರಮವನ್ನು ಯೀಗಲೇ ನೋಡು ತಬ್ಬಲಿ.

ದ್ರೋಣ : ಎಲಾ ಅಭಿಮನ್ಯು ಅಲ್ಲೇನು ಕೊಚ್ಚಿಕೊಳ್ಳುತ್ತೀಯಾ, ಹುಚ್ಚನೆ ರಣಾಗ್ರವನ್ನು ಮಾಡು ಅಯ್ಯ ಕರ್ಣ ಹುಷಾರ್ ವಂದು, ಯೆರಡು, ಮೂರು ತುಕ್ಕಡ, ಕಾಲ ಕೂಡಿರುತ್ತೆ, ಬಲಹೀನನಾಗಿರುತ್ತಾನೆ॥

ಕರ್ಣ : ಸ್ವಾಮಿ ಗುರುಗಳೇ ಗೊತ್ತು. ಎಲಾ ತರಳನೆ ಯಿಲ್ಲಿಗೆ  ನಿನ್ನ ಆದ್ಯಂತ ಪುಣ್ಯ ಕಾಲವೆಲ್ಲಾ ಪೂರೈಸಿತು. ಯೇನಾಯಿತು ನಿನ್ನ ಗತಿ ನೋಡಿಕೊಳ್ಳುವಂಥವನಾಗು॥

ಭಾಮಿನಿ

ಸುರಿವ ರಕ್ತವಂ ಕಂಡು ತರಳನು, ಕರಗಳೋದವೆ
ಕರ್ಣನಿಂದಲಿ ಮುಂದೆ ಕಾದುವರುಂಟೆ ಬಂತು
ಕಾಲಗತಿ ಶಿವ ಶಿವಾ ಮಹಾದೇವಾ ಶಂಕರಾ,
ರಕ್ತವು ಕೋಡಿಯಂತೆ ಹೋಗುತ್ತಿದೆ
ತಾಳಲಾರೆನು ಬಾಧೆಯನ್ನು ಯನಗೆ ಯಾರು
ದಿಕ್ಕಿಲ್ಲವಲ್ಲಾ ಅಯ್ಯೋ ಶಿವಶಿವಾ॥

ಅಭಿಮನ್ಯು : ಅಯ್ಯೋ ಶಿವ ಶಿವಾ ಶಂಕರ ಮಹಾದೇವ ಮೃತ್ಯುಂಜಯ, ಈ ಕರ್ಣನು ನನ್ನ ಕೈಗಳನ್ನು ಕತ್ತರಿಸಿದನಲ್ಲಾ, ಕಾಲುವೆಯ ನೀರು ಹರಿಯುವಂತೆ ರಕ್ತವು ಹರಿದು ಹೋಗುತ್ತಿದೆ. ಕಣ್ಣಿನಿಂದ ನೋಡುವುದಕ್ಕೆ ಆಗುವುದಿಲ್ಲ. ಮಣ್ಣು ಪಾಲಾಗಿ ಹೋಗುವೆನಲ್ಲಾ ನನಗೆ ಯಾರೂ ದಿಕ್ಕಿಲ್ಲವೇ. ಅಯ್ಯೋ ದೊಡ್ಡಪ್ಪ ಧರ್ಮ ಸತ್ಯವಂತ ಎಲ್ಲಿದ್ದೀಯಾ ಬಾರೊ, ಚಿಕ್ಕ ದೊಡ್ಡಪ್ಪ ಭೀಮ ಬಾರೊ ಅಪ್ಪಾ ಅರ್ಜುನ ನೀನೆಲ್ಲಿ ಇದ್ದೀಯಾ ಬಾರೊ, ಚಿಕ್ಕಪ್ಪನವರಾದ ನಕುಲ ಸಹದೇವರೇ ನೀವೆಲ್ಲಿ ಇರುತ್ತೀರಾ  ಬನ್ನಿರೋ. ಆಹಾ ಒಬ್ಬರಲ್ಲದೆ ಐದು ಜನ ತಂದೆಗಳಿದ್ದು ದಿಕ್ಕಿಲ್ಲದಂತೆ ಆಯಿತೆ ನನಗೆ. ಅಯ್ಯೋ ಶ್ರೀ ಹರಿ. ನನ್ನನ್ನು ಕೊಲ್ಲಿಸುವುದಕ್ಕಾಗಿ ನಮ್ಮ ಅಪ್ಪನನ್ನು ಕರೆದುಕೊಂಡು ಹೋಗಿರುತ್ತೀಯೇನೋ. ನಾನು ಈ ಪಾಪಿಗಳ ಕೈಲಿ ಸಿಕ್ಕಿ ಬದುಕುತ್ತೇನೆ, ಎಲಾ ಕರ್ಣ ತಡೆಯೋ ಹೊಡೆಯಬೇಡ. ತಂದೆಗಳ ಸ್ತೋತ್ರ ತಾಯಿಗಳ ಸ್ತೋತ್ರ ಮಾಡುತ್ತೇನೆ ನಿಧಾನಿಸು. ದೊಡ್ಡವ್ವ ದ್ರೌಪದಿ ಹಡೆದವ್ವ ಸೌಭದ್ರೆ ಪಟ್ಟದ ರಾಣಿಯೇ ಕನಕಾಂಗಿ ಉತ್ತರೆ ಹೇ ದೊಡ್ಡವ್ವ ಹೈಡಿಂಬಿಯೇ ಅಣ್ಣ ಘಟೋದ್ಗಜ, ನೀವುಗಳು ಇದ್ದು ನನಗಿಂತ ಕಾಲಗತಿ ಕೂಡಿತು. ಆಹಾ ದೈವವೇ ಈ ಪಾಪಿಗಳಿಂದ ಬಂದಿರತಕ್ಕ ಬಂಧಗಳನ್ನು ತಪ್ಪಿಸಿಕೊಂಡು ಹೋದೇನು, ಹೋದರೆ ಪ್ರಯೋಜನವೇನು.

ಪದ

ಅಂಗಹೀನನಾಗಿ ನಾನು ಅಂಗನೆಯರ ಸದನಕ್ಹೋಗಿ
ವದನವನ್ನು ಹ್ಯಾಗೆ ತೋರಲಿ॥ಪಾಪಿ ಜನ್ಮ
ಪೃಥ್ವಿಯಲ್ಲಿ ಹುಟ್ಟಬಾರದೂ॥ಧೀರನಾಗಿ ಮೀರಿ
ಬಂದು ನಾರಿಯಾದೆನೇ ಅಂಗ ಹೀನನಾಗಿ॥

ಅಭಿಮನ್ಯು : ಆಹಾ ದೈವವೇ, ನನ್ನನ್ನು ಬಲಿ ತೆಗೆದುಕೊಳ್ಳಬೇಕೆಂದು ಯೀ ಕೋಟೆಗೆ ಸಾಟಿಯಿಲ್ಲವೆಂದೂ ನೀಟಾಗಿ ರಣಾಗ್ರಕ್ಕೆ ಬರುವಾಗ ನನ್ನ ಹೆಂಡತಿ ಬೇಡ ಬೇಡವೆಂದು ಸಾರಿ ಹೇಳಿದರೂ ಕೇಳದೆ ಮೀರಿ ಬಂದು ಶೂರತನವನ್ನು ಕಳೆದುಕೊಂಡು ನಾರಿಯಂತೆ ಗೋಳಾಡುವುದಕ್ಕೆ ದಾರಿಯಾಯಿತಲ್ಲಾ. ನಾನು ಅಂಗಹೀನನಾಗಿ ಹೋಗಿ ಮಂಗನಂತೆ ಮುಖವನ್ನು ತೋರಿಸಬಹುದೇ ನನ್ನಂಥ ಪಾಪಿಯು ಯೀ ಧರಣಿಯಲ್ಲಿ ಹುಟ್ಟಬಹುದೇ ಶಿವ ಶಿವಾ ಸರ್ವಥಾ ಹುಟ್ಟಬಾರದು॥

ಪದ

ಸತ್ಯವಂತ ದೊಡ್ಡ ತಂದೆ ಪೋಗಬ್ಯಾಡೆಂದು ಪೇಳಿದಾರೂ
ಹೆಮ್ಮೆಯಿಂದ ಬಂದೆ ನಾನಿಂದು
ಹೆತ್ತ ತಾಯಿ ಸೌಭದ್ರೆಯು ಗಲ್ಲಾ ಪಿಡಿದು
ಬಾಲ ಪೋಗಬೇಡವೆಂದೂ ಸಾರಿ ಹೇಳಿದರೂ ಮೀರಿ ಬಂದು
ಕರಗಳನ್ನು ಕಳೆದುಕೊಂಡೆನು ಪಾಪಿ ಜನ್ಮ ಯಾತಕ್ಕಿಂತು

ಅಭಿಮನ್ಯು : ಅಯ್ಯ ವಿಧಿಯೇ, ನಾನು ಯುದ್ಧಕ್ಕೆ ಬರುವಾಗ ನಮ್ಮ ದೊಡ್ಡಪ್ಪ ಸತ್ಯವಂತ ಧರ್ಮರಾಯನು ಬೇಡವೆಂದು ಹೇಳಿದರೂ, ಹೆತ್ತ ತಾಯಿಯಾದ ಸೌಭದ್ರೆಯು ಗಲ್ಲವನ್ನು ಹಿಡಿದುಕೊಂಡು ಅವಳು ಉಟ್ಟ ಸೀರೆಯ ಸೆರಗನ್ನು ವೊಡ್ಡಿ ಯಿಲ್ಲಿಗೆ ಹೋಗಕೂಡದೆಂದು ಅಡ್ಡಿಯನ್ನು ಹಾಕಿದರೂ, ಅದನ್ನು ಮೀರಿ ಬಂದು ಯೀ ಕಷ್ಟಕ್ಕೆ ಗುರಿಯಾದೆನಲ್ಲಾ. ಯೀ ಲೋಕದಲ್ಲಿ ತಂದೆ ತಾಯಿಗಳ ಮಾತು ಮೀರಿದವರಿಗೆಲ್ಲಾ ನನ್ನ ಪಾಡೇ ಬರುವುದರಲ್ಲಿ ಸಂದೇಹವಿಲ್ಲ. ಶಿವನೇ ಶಂಕರಾ, ಮಹಾದೇವ, ಮೃತ್ಯುಂಜಯ, ಕಿಂಕರನ ಕೈ ಬಿಟ್ಟೆಯಾ ವಳ್ಳೆಯದು. ಧೈರ್ಯಂ ಸರ್ವತ್ರ ಸಾಧನಂ. ನನ್ನ ಕರಗಳು ಹೋದಾಗ್ಯೂ ಯೀ ಪ್ರಾಣ ಹೋಗುವವರೆಗೂ ಯೀ ಪಾಪಿಗಳ ಸಂಗಡ ಕಾದಾಡಿ ಕಡೆಗೆ ನನ್ನ ತಲೆಯನ್ನು ಕೊಟ್ಟೇನೆ ಹೊರ್ತು ಯೀ ಮಧ್ಯೆ ಕೊಡಲಾರೆ. ಎಲಾ ಕರ್ಣ, ಕೌರವ, ದುಶ್ಶಾಸನ, ದ್ರೋಣ ಅಶ್ವತ್ಥಾಮ ಹೇಳಿರೋ ನಿಮ್ಮ ಪರಾಕ್ರಮ, ನೀವುಗಳು ಯಿಷ್ಟು ಜನ ನಾನು ವೋರ್ವ ಸಣ್ಣ ಹುಡುಗ, ನನ್ನ ಕರಗಳು ಕತ್ತರಿಸಿದಾಗ್ಯೂ ಯೀ ಮೊಂಡ ಕೈಗಳಿಗೆ ಯೀ ರಥದಲ್ಲಿರತಕ್ಕ ಚಕ್ರಗಳನ್ನು ಸಿಗೆ ಹಾಕಿಕೊಂಡು ನಿಮ್ಮ ಪಾಡೇನು ಮಾಡುತ್ತೇನೆ ನೋಡುತ್ತಾ ಯಿರಿ॥