(ಕೌರವನ ಮೂರ್ಛೆ)

ಪದ

ಕ್ಷೋಣಿಪತಿಗೆ ಗಾಯವಾಗಿ ಕ್ಷೀಣವಾಯ್ತು ರಥವು ಧುರದಿ
ಪ್ರಾಣಗುಂದಿ, ಪರೀಕ್ಷಿಸಿದನು ದ್ರೋಣ ನೃಪನನೂ॥

ಕೌರವ : ಆಹಾ ದೈವವೆ, ಯೀ ದಿವಸ ನನಗೀ ಬಾಲಕನು ಹೊಡೆದ ಅಸ್ತ್ರಗಳಿಂದ ಶರೀರ ಯಾವತ್ತು ಗಾಯವಾಗಿ ನನ್ನ ರಥ ಮುರಿದು ಪ್ರಾಣಗುಂದಿ ನಿತ್ರಾಣನಾದಂಥವನಾದೆ, ಗುರುಗಳೇ ನೀರು ಬಿಡು ಬನ್ನಿ ಬಾಯಿಗೆ, ತಲೆ ತಿರುಗುವುದು. ಕರ್ಣ ಯಿಗೋ ಬಿದ್ದೆ ॥

ಕರ್ಣ : ಪೂಜ್ಯರೆ ಮಹಾರಾಜನ ಗತಿ ಹೀಗಾಯ್ತಲ್ಲ, ಧಣಿ ಉಪ್ಪು ತಿಂದು, ದೊರೆಗೆ ಎರಡು ಬಗೆಯ ಬಾರದು. ಯೆದ್ದು ಬನ್ನಿ ಜಾಗ್ರತೆ ತಕ್ಕ ಸಲಕರಣೆಯನ್ನು ಮಾಡೋಣ ॥

ಭಾಮಿನಿ

ಅರಸ ಸಿಕ್ಕಿದನಕಟಕಟ, ಬಾಬಾ ತರಣಿಸುತ ಸೌಬಲತುಪಾದ್ಯರು,
ಧರಿಸಿ ಶಸ್ತ್ರಾಸ್ತ್ರಗಳೆಲ್ಲವ ತೋರಿದನು ದ್ರೋಣ
ಕರೆವುದತಿರಾಕ್ಷಣದ ಕುರುವರನ ತೊಲಗಿಸಿ ಕಿರೀಟಿಯ
ತರಳನನು ಸರಳಿಂದೊಸಗಿ ಮುಸುಗುತ್ತಾ ದ್ರೋಣಸುತನಿಂತೆಂದಾ॥

ಅಶ್ವತ್ಥಾಮ : ಆಹಾ ನಮ್ಮ ಅರಸನಾದ ಕೌರವೇಶ್ವರನು ಈ ಅಭಿಮನ್ಯುವಿನ ರಣಾಗ್ರದಲ್ಲಿ ಸಿಕ್ಕಿ ನರಳುತ್ತಿರುವನು, ಅಯ್ಯ ಕರ್ಣ ಶಕುನಿ ಕೃಪ ಅತಿರಥ ಮಹಾರಥರು ಷಡುರಥರು ಮುಂತಾದ ಪ್ರಮುಖ ನಾಯಕರೆಲ್ಲ ಕೂಡಿ ಯೀ ಬಾಲಕನ ಬಲಿಯನ್ನು ಕೊಡೋಣ. ಸುತ್ತಲೂ ಮುತ್ತಿಗೆ ಹಾಕಿ. ಎಲಾ ತರಳನೆ ದಿವ್ಯಾಸ್ತ್ರ ಮುಖದಿಂದ ನಿನ್ನ ಮುಚ್ಚಿ ಬಿಡುತ್ತೇವೆ, ಮೂದೇವಿ ಮುಂಚಿತವಾಗಿ ಯುದ್ಧಕ್ಕೆ ನಿಲ್ಲು ಬಾ.

ಅಭಿಮನ್ಯು : ಎಲಾ ಅಶ್ವತ್ಥಾಮ, ಕೌರವನ ಗತಿಯೇ ನಿನಗೂ ಆಗಬೇಕಲ್ಲವೇ. ಚಿಂತೆಯಿಲ್ಲ ನೋಡು ಹಾಗಾದರೆ ಅದನ್ನು ತೋರಿಸುತ್ತೇನೆ.

ಅಶ್ವತ್ಥಾಮ : ಎಲಾ ತರಳನೆ, ಯೀ ದಿವಸ ಶಿಶುವಿನ ಮೇಲೆ ನಮ್ಮ ಸಾಹಸವನ್ನು ತೋರಿಸಿದರೆ, ಪಾಪ ಬಂದೀತೆಂಬ ಭೀತಿಯಿಂದ ಕೈ ತಡೆದರೆ ಇಷ್ಟು ಅನಾಹುತಕ್ಕೆ ಕಾರಣವಾಯ್ತು. ಛೇ ತಬ್ಬಲಿ, ಆದರೂ ಚಿಂತೆಯಿಲ್ಲ. ಇಕ್ಕೊ ಯೀ ಮಹಾಶರಸಮೂಹಗಳಿಂದ ನಿನಗೆ ಯೀಗಲೆ ಬುದ್ಧಿ ಕಲಿಸಿಬಿಡುತ್ತೇನೆ ನೋಡು.

ಅಭಿಮನ್ಯು : ಎಲಾ ಅಶ್ವತ್ಥಾಮ, ನಾನು ಶಿಶುವೊ ಸಣ್ಣ ಕೂಸೊ ಯೀ ವಯಸ್ಸಿನಲ್ಲಿ ಮಾಡಿರತಕ್ಕವರ ಸಾಹಸವನ್ನು ಕೇಳು॥

ಪದ

ಶಿಶುತನದಲಿ ಶಂಬರಾಸುರನ ಅಸುಗೊಳ್ಳನೇ ಸ್ಮರನೂ
ಶಶಿಧರಸುತನು ತಾರಕ ದೈತ್ಯನನಸು ತೊಲಗಿಸಲಿಲ್ಲವೇ.

ಅಭಿಮನ್ಯು : ಎಲಾ ಮುದಿ ಹಾರುವನೆ ನಾನು ತರಳನೊ ಆದರೇನಾಯ್ತು ಹಿಂದೆ ಒಂದಾನೊಂದು ಕಾಲದಲ್ಲಿ ಬಾಲಕನಾದ ಮನ್ಮಥನು ಶಂಬರಾಸುರನೆಂಬ ನಿನ್ನಂಥ ಮುದಿಯನನ್ನು ಮರ್ಧಿಸಲಿಲ್ಲವೆ ಮತ್ತು ಮುಕ್ಕಣೇಶ್ವರನ ಮಗನಾದ ಶಣ್ಮುಖನು ತಾರಕಾಸುರನೆಂಬ ದೈತ್ಯನನ್ನು ಕೊಲ್ಲಲಿಲ್ಲವೇನೊ ಖುಲ್ಲಾ, ಸುರಿಸುವೆನು ನಿನ್ನ ಹಲ್ಲ ರಣಾಗ್ರಕ್ಕೆ ಯದುರಾಗುವಂಥವನಾಗು॥

 

(ಅಶ್ವತ್ಥಾಮ ಮೂರ್ಛೆ)

ಅಭಿಮನ್ಯು : ಎಲಾ ಗುರು ಸುತನೆ ಅಶ್ವತ್ಥಾಮ, ಆಯ್ತು ನಿನ್ನ ಗತಿ. ಚೇತರಿಸಿಕೊಳ್ಳುವಂಥವನಾಗು

ವಾರ್ಧಿಕ್ಯಾ

ಗುರುಸುತನ ನೋಯಿಸಿ ರಣಾಗ್ರದೋಳ್ ಶಲ್ಯನಂ
ಮುರಿದೆಚ್ಚಿ ಕೃಪನನುಗ್ರಹ ನಿಲಿಸಿ
ಕೃತವರ್ಮನುರವಣಿಯೊಳೆಸೆದು ದುಶ್ಶಾಸನನ
ಗರ್ವವಂ ಮುರಿಯುತ್ತ ದುರುಳ ಬಾಹ್ಲೀಕ
ಸೋಮದತ್ತರಂ ಸದೆಬಡಿದು ಧುರದೋಳ್ ಮಹಾರಥರನೊಬ್ಬನೆ
ಶಿಶು ಗೆಲಿದ ಅರರೆ ಕೌತುಕವೆಂದು ಕರ್ಣಂ ಬಂದು ತಡೆದನಾ ಬಾಲಕನನೂ.

ಕರ್ಣ : ಆಹಾ ಯಿದೇನಾಶ್ಚರ್ಯ, ಯೀ ಶಿಶುವು ಯೀ ಹುಡುಗ ಅಶ್ವತ್ಥಾಮಾಚಾರ್ಯರನ್ನು ನೋಯಿಸಿ, ಶಲ್ಯನನ್ನು ಸದೆಬಡಿದು ಕೃಪನ ಪರಾಕ್ರಮವನ್ನು ಹಿಂಗಿಸಿ, ದುಶ್ಶಾಸನನ ಗರ್ವವಂ ಭಂಗಿಸಿ ದುರುಳರಾದ ಬಾಹ್ಲೀಕ ಸೋಮದತ್ತ ಮುಂತಾದವರನ್ನು ಸದೆಬಡಿದು, ಯಿವರು ಮೊದಲಾಗಿ ಮಹಾರಥರುಗಳನ್ನು ವಬ್ಬನೇ ಗೆದ್ದವನಾದ ಆಹಾ ಆಶ್ಚರ್ಯವಲ್ಲವೆ, ನಾನಾದರೂ ಕೆಣಕಿ ನೋಡುತ್ತೇನೆ, ಶಹಬ್ಬಾಷ್ ಬಾಲಕನೆ ಕರ್ಣನು ಯೆದುರಾಗಿದ್ದೇನೆ ನೋಡು.

ಅಭಿಮನ್ಯು : ಎಲಾ ಕರ್ಣ ನೋಡಿದೆ ಮುಂದಕ್ಕೆ ಬೊಗುಳು.

ಪದರಾಗಭೈರವಿಅಷ್ಟತಾಳ

ಎಲವೊ ಬಾಲಕನೆ ಕೇಳು ನಮ್ಮಯ ಕುರುಬಲವನ್ನು
ಸಮರಾಂಗಣದಲ್ಲಿ ಜೈಸಿದೆನೆಂದು ಹಿಗ್ಗಬೇಡ
ಯೀಗಲಾದರೂ ಬಿಟ್ಟಿರತಕ್ಕಂತ ದಿವ್ಯಾಸ್ತ್ರಗಳನ್ನು
ತಡೆದುಕೊಳ್ಳುವಂಥವನಾಗೋ ಕಪ್ಪಬ್ಬಲಿ ನಿಶಾಚರನೆ

ಪದ

ನಾನು ಬಾಲಕನಹುದೂ ನನ್ನಸ್ತ್ರವ ನೀನೆ ಜೀವಿಸಿಕೊಂಬುದೂ
ಠೀವಿಯ ನೋಡು ಕರ್ಣ ನಾ ಬಾಣವ ಬಿಡುವೆ ಸಂಪೂರ್ಣ.

ಅಭಿಮನ್ಯು : ಎಲಾ ಕರ್ಣ ನಾನು ಬಾಲಕನೆ ಹೌದು. ಆದಾಗ್ಯೂ ಈ ನನ್ನ ಹಸ್ತಗತವಾದ ಅಸ್ತ್ರಗಳು ಶಸ್ತ್ರಗಳಾಗಿರುತ್ತವೆ, ಇವುಗಳನ್ನು ಪ್ರಯೋಗ ಮಾಡಿದರೆ ತರಹರಿಸಿಕೊಳ್ಳುವುದು ತಿಣ್ಣವಾಗಿರುವುದು. ಕಣ್ಣಿನಿಂದ ನೋಡಿ ಮಣ್ಣು ಪಾಲಾಗಬೇಡ, ಮೂದೇವಿ ಮೂರು ಬಾಣಗಳನ್ನು ಬಿಟ್ಟು ಯಿರುತ್ತೇನೆ, ಹೇ ಪಾಪಿ ಅಯೋಗ್ಯ ಯುದ್ಧಕ್ಕೆ ಸನ್ನದ್ಧನಾಗು॥

 

(ಕರ್ಣನ ಮೂರ್ಛೆ)

ಅಭಿಮನ್ಯು : ಎಲಾ ಕರ್ಣ ತಬ್ಬಲಿಗಾ ಬೆಸ್ತ ಸಮುದ್ರಕ್ಕೆ ಬಲೆಯನ್ನು ತೆಗೆದುಕೊಂಡು ಹೋಗಿ ಮೀನು ಹಿಡಿದುಕೊಂಡು ಬಂದು ಬಜಾರದಲ್ಲಿ ಬಿಕರಿ ಮಾಡಿ ಹೊಟ್ಟೆ ಹೊರೆದುಕೊಳ್ಳಲಾರದೆ, ಯುದ್ಧರಂಗಕ್ಕೆ ಬಂದ ನಿನ್ನ ಮೋಡಿಯೇನಾಯ್ತು ಹೇಡಿ. ನಾಡಿನವರು ಆಡಿಕೊಳ್ಳುವಂತೆ ಆಗಲಿಲ್ಲವೆ ನಿನ್ನಗತಿ. ನಿನ್ನ ಮಲತಾಯಿಯ ಪಾಲಾಗಲಿಲ್ಲವೇನೋ ಪಾಪಿ, ಚೇತರಿಸಿಕೊಳ್ಳುವಂಥವನಾಗೂ॥

ದ್ರೋಣ : ಆಹಾ ಮಹನೀಯರೆ, ಈ ಮಗುವಿನ ಸಾಹಸ ಹ್ಯಾಗಿರುವುದು. ಮೂರು ಕಣ್ಣುಳ್ಳ ಪರಮೇಶ್ವರನಲ್ಲವೆ ಯೀ ಮಗು ಭಳಿರೆ ಬಾಲಕ ಭಳಿರೆ

ರಾಗಅಷ್ಟತಾಳ

ಗರುಡಿಯಾಚಾರ್ಯನ ನುಡಿ ಕೇಳಿ ಕೌರವ ಕಿಡಿಯನ್ನು
ಯೆಸಗುತ್ತಲೀ ಯೆಬ್ಬಿಸಿ ಕರ್ಣಗೆ ಹೇಳುತ್ತಲಿರ್ಪನೂ

ಕೌರವ : ಪರಮಮಿತ್ರನಾದ ಕರ್ಣನೆ ಮೇಲಕ್ಕೆ ಯೇಳು ಯೇಳು ಚೇತರಿಸಿಕೊ ॥ಈ ಗುರುಗಳು ಆಡಿದ ಮಾತನ್ನು ಕೇಳಿದೆಯಾ. ಇವರು ಯುದ್ಧ ಬಾಹಿರರಲ್ಲವೆ ನೋಡು ಯೋಚಿಸು

ಕರ್ಣ : ಮಹಾರಾಜನೆ ನೀವಾಗಿ ಗುರುಗಳನ್ನು ನಿಂದಿಸತಕ್ಕದ್ದು ಏಕೆ ಹೇಳಿರಿ ಮತ್ತೆ॥

ಕೌರವ : ಕರ್ಣ ನೀನು ಮತ್ತೆ ನನಗೆ ಸಿಟ್ಟು ಹತ್ತುವಂತೆ ಮಾತನಾಡಬೇಡ. ಕೇಳು ಯೀ ದ್ರೋಣನ ಮುಖ ನೋಡು. ಯೆಷ್ಟು ದಪ್ಪಯಿರುವುದು. ನಮ್ಮ ಸೈನ್ಯವು ಪುನಃ ಭೀತಿಪಡುವಂತೆ ನಮಗೆ ಮೃತ್ಯುವಾಗಿರತಕ್ಕ ಶತೃವನ್ನು ನಾಯಿ ಬೊಗಳಿದಂತೆ ಹೊಗಳುತ್ತಿರುವನಲ್ಲ, ಯಿವನ ನಾಲಿಗೆಯಿಂದ ಈ ಮಾತು ಹೊರಟರೆ ನನ್ನ ಪ್ರಾರಬ್ಧವಲ್ಲವೆ ಮುಖ್ಯವಾಗಿ ನಾನು ಈ ಹಾರುವನ ನಂಬಿ ಕೆಟ್ಟಂಥವನಾದೆ॥

ದ್ರೋಣ : ಕೌರವ ತಾನೆಡವಿದ ನೆಲವನ್ನು ಬೈದಂತೆ ನನ್ನನ್ನು ವೃಥಾ ಹೀಯಾಳಿಸುತ್ತಿ. ನನ್ನ ನಂಬಿ ಕೆಡಲಿಲ್ಲ. ನಿನ್ನ ಆ ಪುರಾಣವನ್ನು ಈ ಮಹನೀಯರು ಕೇಳುವಂತೆ ಹೇಳಲೊ॥

ಕೌರವ : ಎಲಾ ಅದೇನು ಹೇಳಿ ಬಿಡು.

ದ್ರೋಣ : ಎಲಾ ಕೌರವನೆ, ನೀನು ಕೆಟ್ಟಿದ್ದು ಯಾವಾಗೆಂದರೆ ಮೊದಲು ಭೀಮನಿಗೆ ವಿಷದ ಕಜ್ಜಾಯವನ್ನು ಮಾಡಿಸಿ ತಿನ್ನಿಸಿದೆಯಲ್ಲಾ ಆಗ ಕೆಟ್ಟೆ. ಅದೂ ಯಿರಲಿ, ಅರಗಿನ ಮನೆಯನ್ನು ಮಾಡಿಸಿ ಪಾಂಡವರನ್ನು ಭೂಮಂಡಲದಲ್ಲಿ ಯಿರಿಸಕೂಡದೆಂದು ಮೋಸದಿಂದ ಅದಕ್ಕೆ ನುಗ್ಗಿಸಿ ಅದರ ಹಿಂದೆ ಬೆಂಕಿಯನ್ನು ಹಚ್ಚಿಸಿದಾಗಲೆ ಕೆಟ್ಟೆ. ಮಹಾಪತಿವ್ರತೆಯಾದ ದ್ರೌಪದಿಯ ಸೀರೆಯನ್ನು ರಾಜಸಭೆಯಲ್ಲಿ ಹುಚ್ಚನಾಗಿ ಯೆಚ್ಚರಿಕೆಯಿಲ್ಲದೆ ಬಿಚ್ಚಿಸಿದಾಗಲೇ ಕೆಟ್ಟೆ ವನವಾಸದಲ್ಲಿ ಪಾಂಡವರು ಯಿದ್ದಾಗ್ಯೆ ನಿನ್ನ ಭಾಮೈದ ಸೈಂಧವನಿಂದ ದ್ರೌಪದಿಯನ್ನು ಎಳೆ ತರಿಸಿದಾಗಲೆ ಕೆಟ್ಟೆ. ಆರನೆಯದು ಆ ಕಾಲದಲ್ಲಿ ದೂರ್ವಾಸ ಮುನಿಗಳನ್ನು ವೂಟಕ್ಕೆ ಕಳುಹಿಸಿ ಸತ್ಯವಂತನಾದ ಧರ್ಮರಾಯನಿಗೆ, ಧರ್ಮ ಕಂಟಕನಾದಾಗಲೆ ಕೆಟ್ಟೆ. ಯೇಳನೆಯದು ನೀನು ವನವಿಹಾರಕ್ಕೆ ಹೋದಾಗ ಚಿತ್ರಸೇನನು ಹೆಡಕಟ್ಟಿನಿಂದ ಮಹಾಪತಿವ್ರತೆಯಾದ ದ್ರೌಪದಿಯ ಎಡಗಾಲಿನ ಕಾಲಿನಿಂದ ಒದಿಸಿ ಗಂಟು ಬಿಚ್ಚಿದಾಗಲೇ ಕೆಟ್ಟೆ. ಯೆಂಟನೆಯದೂ ವಿರಾಟರಾಯನ ತುರುಗಳನ್ನು ಶೆರೆ ಹಿಡಿಸಿದಾಗ ಕೆಟ್ಟೆ, ಮಹಾವಿಷ್ಣು ಕೃಷ್ಣ, ಅನುಸಂಧಾನಕ್ಕೆ ಬಂದಾಗ್ಗೆ ಆತನ ಹೆಡಕಟ್ಟು ಹಾಕಿಸಿದಾಗಲೆ ಕೆಟ್ಟೆ, ನಾನು ಕೆಡಿಸಲಿಲ್ಲ ನಾನು ಕೆಡಿಸಿದ್ದು ಲೋಕ ಬಲ್ಲದು. ನಿನ್ನ ದುರ್ಬುದ್ಧಿಯಿಂದ ನಮಗೀ ದುರವಸ್ಥೆ ಬಂದಿರುತ್ತೆ. ಇದು ಹೊರ್ತು ಯೀ ಅಭಿಮನ್ಯು ಹುಡುಗನೆಂದು ತಿಳಿಯಬೇಡ, ಅರ್ಜುನನಿಗೆ ಸರಿಸಮಾನ ಮೂರುಲೋಕದ ಗಂಡನೆಂದು ಹೊಗಳಿಸಿಕೊಳ್ಳುತ್ತಾನೆ, ನಿನ್ನ ಕುರವಂಶದ ಬೇರನ್ನು ಕಿತ್ತು ನಿರ್ಮೂಲ ಮಾಡುವುದು ನಿಶ್ಚಯ, ಕೌರವ ಇಷ್ಟರ ಮೇಲೆ ನನಗೇನು ಹೇಳುತ್ತೀಯಾ ಹೇಳು॥

ಕೌರವ : ಅಯ್ಯೋ ದೈವವೆ, ಬಲಗೈ ಮುಟ್ಟಿ ಭಾಷೆಯನ್ನು ಕೊಟ್ಟು ಯೀ ಬ್ರಾಹ್ಮಣನು ಹೀಗೆ ಹೇಳಿದನಲ್ಲಾ ಯೇನು ಮಾಡಲಿ॥

ದುಶ್ಶಾಸನ : ಅಣ್ಣಯ್ಯ, ಈ ನಿನ್ನ ಮಾತುಗಳನ್ನು ಕೇಳಿ ನನಗೆ ಬಹಳ ಸಂಕಟವಾಗಿರುವುದು. ಯೀ ಹಾರುವರ ನಡೆಯು ಹೀಗೆಯೇ ಸರಿ. ಯೀಗ ನನ್ನನ್ನಾದರೂ ಯೀ ರಣಾಗ್ರಕ್ಕೆ ಬಿಟ್ಟು ನೋಡು. ಅಪ್ಪಣೆಯನ್ನು ದಯಪಾಲಿಸು ಮತ್ತೆ ಹೇಳುತ್ತೇನೆ.

ಕೌರವ : ಭಲೈ ತಮ್ಮನಾದ ದುಶ್ಶಾಸನನೆ, ವಿಶ್ವಾಸದಿಂದ ನೀನಾಡಿದ ನುಡಿಗೆ ಸಂತೋಷವಾಯ್ತು, ನೀನಾದರೆ ಯೀ ದಿವಸ ಯುದ್ಧವನ್ನು ಹ್ಯಾಗೆ ಮಾಡುವೆ॥

ದುಶ್ಶಾಸನ : ಅಗ್ರಜನೆ, ಯೀ ದಿವಸ ನಾನು ದೇವತೆಗಳಿಂದಲೂ ದಾನವರಿಂದಲೂ ಸಹ ತೀರದಂಥ ಮಹಾ ಯುದ್ಧವನ್ನು ಮಾಡಿ ವುಕ್ಕುವ ಶೋಕಕ್ಕೆ ದಾರಿಯನ್ನು ಕೊಟ್ಟು ಯಿರುವ ಯೀ ವೈರಿಭಟನನ್ನು ಯಿಡಿದು ಸಟೆಯನ್ನೇಳದೆ, ದಿಟವಾಗಿಯೂ ಕೊಂದು ಬರುತ್ತೇನೆ, ತದ ನಂತರ ಆ ನನ್ನ ಠೀವಿಯನ್ನು ನೋಡಿ ಬಿಡು ಯಿದಕ್ಕೇನು ಅಪ್ಪಣೆ ವೀಳಯವನ್ನು ಕೊಡಿರಿ॥

ಕೌರವ : ಭಲಾ ತಮ್ಮನಾದ ದುಶ್ಶಾಸನನೇ ಕೇಳೂ, ತಗೋ ವೀಳ್ಯ ಬಿಡು ಪಾಳ್ಯ, ಲೋಲನಾಗಿ ಜಯಶೀಲನಾಗಿ ಬಾ॥

ದುಶ್ಶಾಸನ : ಅಗ್ರಜ ಅಪ್ಪಣೆ.

ಪದರಾಗ ಸೌರಾಷ್ಟ್ರತಾಳತ್ರಿಪುಡೆ

ಭೇರಿ ಡಂಕನಗಾರಿಗಳು ಮಿಗೆ ಭೋರ್ಗರಿಸಿ ನಾಲ್ದೆಸೆಯು ಕಂಪಿಸಿ
ಭೂರಿ ಬಿರುದುಗಳಿಂದ ಹೊರಟನು ಧಾರ ಭಟನೂ॥

ದುಶ್ಶಾಸನ : ಎಲೈ ಚಾರಕ, ವೈರಿಗಳೊಂದಿಗೆ ರಣಾಗ್ರಕ್ಕೆ ಹೋಗುವಾಗ, ಆರ್ಭಟೆಯಿಂದ ಅಹಿತ ರೆದೆ ಜರ್ಝರಿತವಾಗಬೇಕಾಗಿದೆ. ಆದ್ದರಿಂದ ಭೇರಿ ಡಂಕ ನಗಾರಿ ಕಹಳೆ ಕಲರವದಿಂದ ನಾಲ್ಕು ದಿಕ್ಕುಗಳು ಕಂಪಿಸುವಂತೆ ಆರ್ಭಟೆಯಿಂದ ಹೋಗಬೇಕಾಗಿದೆ. ಡಂಗುರವನ್ನು ಹೊಡೆಸಿ ರಣಭೂಮಿಗೆ ರಥವನ್ನು ಬಿಡುವಂಥವನಾಗು॥

ಪದ

ಭೂರಿ ಸಹಬಲ ಬರಲಿಕಿತ್ತಲು ಸಾರಥಿಗೆ ಸೂಚಿಸಿದನಾ
ರಣಧೀರ ಪಾರ್ಥಜ ಧನುವನೊದರಿಸಿ ಧಾರು ಭಟರೆ॥

ಅಭಿಮನ್ಯು : ಎಲಾ ಚಾರಕ, ನೋಡು ಬಾಯಿಲ್ಲಿ ಹೆದರಬೇಡ, ನಾನಿದ್ದೇನೆ ಕುರುಕ್ಷೇತ್ರದಿಂದ ಯಾವನೊಬ್ಬನು ಹಿಂದೆ ಹೊಡೆದ ಪೆಟ್ಟುಗಳನ್ನು ಮಾಯಿಸಿಕೊಂಡು ಆರ್ಭಟೆಯಿಂದ ಬಂದು ಯಿರುತ್ತಾನೆ. ನಿನ್ನ ಕಣ್ಣೆದುರಿಗೆ ಅವರಿಗಾಗುವ ಪಾಡು ನೋಡುತ್ತೀಯೊ ಕಾಡುಪಾಲು ಮಾಡುತ್ತೇನೆ.

ಸಾರಥಿ : ಅಪ್ಪ ಹಂಗಾದರೆ ಅವನಗತಿ ಯೇನು ಮಾಡುತ್ತೀಯಪ್ಪಾ॥

ಪದ

ಕೇಳು ಸಾರಥಿ ಯೆರಡು ಶರದಲ್ಲಿ ಸೀಳಿ ಬೆನ್ನಲಿ ಕರುಳ ತೆಗೆವೆನೊ
ಖೂಳ ನೀನು ನೋಡು ನಮ್ಮ ಕಟ್ಟಾಳುತನವಾ॥

ಅಭಿಮನ್ಯು : ಎಲಾ ಸಾರಥಿ, ಯೀಗ ಬರತಕ್ಕವರ ಪರಾಕ್ರಮವನ್ನು ರಣಾಗ್ರದಲ್ಲಿ ಯೆರಡು ಬಾಣಗಳಿಂದ ಗೋಣು ಮುರಿದು ಪ್ರಾಣವನ್ನು ಕಳೆದು ಯೆದೆಯನ್ನು ಸೀಳಿ, ಯೀ ತರಳನ ಸರಳಿನಿಂದ ನರಳಿಸಿ ಕರುಳುಗಳನ್ನು ತೆಗೆದು, ಯೀ ಚಕ್ರವ್ಯೂಹದ ತಲಿಬಾಗಿಲಿಗೆ ತೋರಣವನ್ನು ಕಟ್ಟಿಸಿ ಮರಣವನ್ನು ಮಾಡಿಸುತ್ತೇನೆ. ಭಂಗಪಡಬೇಡ ಕೊನೆಗೆ ನನ್ನ ಪರಾಕ್ರಮವನ್ನು ನೋಡುತ್ತಾ ಇರು॥

ಸಾರಥಿ : ಅಪ್ಪಾ ವೀರಾಧಿವೀರರಾದ ತಾವಿರುವಾಗ ನನಗೆ ಬಂದಿರುವ ಭಯವೇನು॥

ಪದ

ಎನುತ ಕೊನೆ ಮೀಸೆಗಳ ತಿರುಹುತ ಧನುವ ಝೇಂಕರಿಸಲು
ಜಗತ್ರಯ ಘನ ಪರಾಕ್ರಮಿ ಕರೆದು ಕೌರವನನುಜಗೆಂದಾ॥

ಅಭಿಮನ್ಯು : ಎಲೈ ಸಾರಥಿ, ಎದುರಾಗಿ ಬರುವ ವೈರಿಗೆ ಎದೆ ಬಿಚ್ಚುವಂತೆ ಧನುಸ್ಸನ್ನು ಝೇಂಕಾರ ಮಾಡಿದ್ದಾಯ್ತು. ಎಲೋ ವೀರನಾದ ದುಶ್ಶಾಸನನೆ ರಣಾಗ್ರಕ್ಕೆ ಬಂದಿರುತ್ತೀಯೊ ಧಗಡಿ ಯೀ ದಿವಸ ನಿನ್ನ ಗತಿ ಯೇನಾಗುವುದು ನೋಡು

ದುಶ್ಶಾಸನ : ಎಲೋ ಅಭಿಮನ್ಯು, ಇಂದಿನ ರಣಾಗ್ರದಲ್ಲಿ ನನ್ನನ್ನು ಗೆಲ್ಲದೆ ಹೋದರೆ ನಿನ್ನ ಸಾಹಸವೇನು ನಿನ್ನ ಪಂಥವೇನು॥

ಅಭಿಮನ್ಯು : ಎಲಾ ದುಶ್ಶಾಸನ, ಯೀವತ್ತಿನ ರಣಾಗ್ರದಲ್ಲಿ ನಿನ್ನನ್ನು ಕೊಲ್ಲದೆ ಹೋದರೆ ನನ್ನ ಪಂಥವನ್ನು ಕೇಳುವೆಯೋ, ಮುಂದೆ ಯೆನಗೆ ಶರಸನ್ಯಾಸವಲ್ಲದೆ ಬೇರೆ ಗತಿಯುಂಟೇನೊ ತಬ್ಬಲಿ.

ಪದರಾಗಶಂಕರಾಭರಣಮಟ್ಟತಾಳ

ಎಂದ ಮಾತಿಗೆ ಕೌರವನನುಜಾ ನಿಂದು
ನೂರು ಶರವನೆಚ್ಚ ಅಂದು ತನುಜನಾ

ದುಶ್ಶಾಸನ : ಎಲೈ ಅಭಿಮನ್ಯುವೆ, ಹೇ ಅಚ್ಚುತನಳಿಯ ನಿನ್ನ ಮಾತಿಗೆ ಮೆಚ್ಚುವಂಥವನಾದೆ, ಹುಚ್ಚನೆ ಯೆಚ್ಚರವಾಗಿರು. ನಿನ್ನ ಮೇಲೆ ಲೆಕ್ಕವನ್ನು ಮಾಡಿಕೊಂಡು ನಿನ್ನ ಗೋಣು ಮುರಿಯುವುದಕ್ಕೆ ನೂರು ಬಾಣಗಳನ್ನು ಬಿಟ್ಟು ಯಿರುತ್ತೇನೆ ತರಹರಿಸಿಕೊಳ್ಳುವಂಥವನಾಗು॥

ಅಭಿಮನ್ಯು : ಎಲಾ ದುಶ್ಶಾಸನ, ಯೇಕ ಕಾಲದಲ್ಲಿ ನೀನು ಬಿಟ್ಟ ಬಾಣಗಳನ್ನು ತುಂಡು ತುಂಡಿಗೆ ಕಡಿದು ದಿಂಡುಗೆಡಸಿರುತ್ತೇನೆ, ಪುಂಡನೆ ಲಂಡನೆ, ಭಂಡನೆ, ಷಂಡನೆ ಯಿನ್ನೇನಿರುವುದು, ನಿನ್ನ ಸಾಹಸ ಬೊಗುಳೊ॥

ದುಶ್ಶಾಸನ : ಎಲಾ ಅಭಿಮನ್ಯು, ಸಮಯವಲ್ಲ ಅಥವಾ ನನ್ನ ಸಾಹಸವನ್ನು ನಿನ್ನಲ್ಲಿ ತೋರಲು ನನಗೆ ಯೆರಡೂ ಸಮಪಾಟಿಯಾಗಿಲ್ಲವಲ್ಲಾ ಯೇನು ಮಾಡಲಿ.

ಅಭಿಮನ್ಯು : ಎಲಾ ದುಶ್ಶಾಸನ ಹಾಗಾದರೆ ನಿನಗೆ ಸಮಪಾಟಿಗಳು ಯೀ ಧರಣಿಯಲ್ಲಿ ಯಾರಿದ್ದಾರೆ॥

ಪದ

ಭೀಮ ಫಲುಗುಣರಾದರವರೊಳು
ಸಂಗ್ರಾಮ ಕೊಡುವೆನೊ ನೀನು ಚಿಕ್ಕ ಹುಡುಗನೂ॥

ದುಶ್ಶಾಸನ : ಎಲಾ ಅಭಿಮನ್ಯು, ತಕ್ಕ ಮಟ್ಟಿಗೆ ಯುದ್ಧವನ್ನು ಮಾಡಬೇಕೆಂದರೆ ಚಿಕ್ಕವನಾಗಿದ್ದೀಯೆ. ಉಕ್ಕುವ ಶೋಕಕ್ಕೆ ಹಕ್ಕುದಾರಿಕೆಯನ್ನು ಕೊಟ್ಟು ದಿಕ್ಕಿಲ್ಲದಂತೆ ಮಾಡಬೇಕಾಗಿ ಬಂದೀತು. ಹೇ ಮಗುವೇ ನಿಮ್ಮ ದೊಡ್ಡಪ್ಪನಾದ ಭೀಮ ನಿಮ್ಮಪ್ಪನಾದ ಅರ್ಜುನ, ಅವರಿಬ್ಬರೂ ನನಗೆ ಸಮಪಾಟಿಯು. ಎಲವೊ ಹುಡುಗನೆ ತರಳನೆಂದು ಸರಳುಗಳನ್ನು ಬಿಡುವುದಕ್ಕೆ ಕರಗಳು ಬರುವುದಿಲ್ಲವೊ ಮರುಳು ಹುಡುಗನೆ॥

ಪದ
ಕೊಳಚೆ ನೀರನು ದಾಂಟಲರಿಯದೇ
ಬಲದಿ ಕಾಲ ಹೊಳೆಯಿತೆಂಬ ಶೌರ್ಯವೇತಕೆ
ಭೀಮ ಪಾರ್ಥರ ಗೊಡವೆಯಾತಕೆ ನೀನು
ಮೊದಲು ಸೆಣಸಿ ಜೀವಿಸೆಮ್ಮ ಕೈಲೀ॥

ಅಭಿಮನ್ಯು : ಎಲಾ ಶೂರನೆ, ಸಣ್ಣ ಕಾಲುವೆಯ ನೀರನ್ನು ಹಾರದೆ ಯಿರತಕ್ಕವನಿಗೆ ಸಮುದ್ರದ ಹೊಳೆಯಿವೆರಡನ್ನು ಹಾರುತ್ತೇನೆಂಬ ಅಹಂಕಾರವ್ಯಾಕೆ, ಯೀ ಸಮರದಲ್ಲಿ ನನ್ನ ಗೆದ್ದರೆ ನಂತರ ನಮ್ಮಪ್ಪಂದಿರಾದ ಭೀಮ ಅರ್ಜುನರು ಬರುವುದು ಖರೆ. ಮೊದಲು ನನ್ನನ್ನು ಗೆದ್ದು ಜಯ ಲಾಭವನ್ನು ಹೊಂದಲಾ ಭ್ರಷ್ಟ ಮತ್ತೂ ಹೇಳುತ್ತೇನೆ॥

ಪದ

ಎನುತಲೇಳು ಬಾಣಗಳನು ಬಿಟ್ಟ ಬಾಲನೂ
ಕವಿದವೆಂಟುದೆಸೆಯು ಕಾಣದಿರ್ದುದೂ॥

ಅಭಿಮನ್ಯು : ಎಲಾ ದುರುಳನೆ, ನಿನ್ನನ್ನು ಅಷ್ಟ ದಿಕ್ಕಿಗೂ ಹರಡಿಕೊಳ್ಳುವಂತೆ ಯಿಗೋ ನೋಡು ನೀನು ದೆಸೆಗೆಡುವಂತೆ ಯೇಳು ಬಾಣಗಳನ್ನು ಅಭಿಮಂತ್ರಿಸಿ ಬಿಟ್ಟಿರುತ್ತೇನೆ, ನತದೃಷ್ಟ ಯಿದರಿಂದ ನಿನ್ನ ಬಲವು ನಷ್ಟವಾಗಿ ಕಷ್ಟಕ್ಕೆ ಗುರಿಯಾಗುವುದೂ, ಭ್ರಷ್ಟ ಹ್ಯಾಗಿದೆಯೊ ನಿನ್ನ ಅದೃಷ್ಟ. ರಣಾಗ್ರಕ್ಕೆ ಯೆದುರಾಗುವಂಥವನಾಗಲಾ ಪಾಪಿಷ್ಠ.

ದುಶ್ಶಾಸನ : ಎಲಾ ತರಳನೆ ಹಾಗಾದರೆ ಯದುರಾಗೂ॥

ವಾರ್ಧಿಕ್ಯ

ಅಭಿಮನ್ಯು ಬಿಟ್ಟ ಪ್ರತಿಕೂಲ ಶರಜಾಲವಂ ರಿಪುಭಟನ
ಶಸ್ತ್ರಾಸ್ತ್ರದಿಂದ ತಡೆಗಡೆದೆಸೆದು ಸುಭಟನ ಕರಿತುರಗ
ರಥ ಕಾಲಾಳುಗಳಂ ಸವರಿದಂ ಸೈನಿಕರನು ರಭಸದಿಂದೆದ್ದಾಗ
ಕೊಚ್ಚಿದುವು ಮುಚ್ಚಿದವು ಅಭಿನವೋದ್ಭಾಸದಿಂ
ಚೀರಿದುವು ಬೀರಿದುವು ನಭಕಡರುವಂದದಿ
ವರೂಥಗಳಯುಗಳನಾಶ್ಚರ್ಯವೇನೆಂಬೆನೂ॥

ಅಭಿಮನ್ಯು : ಎಲಾ ಚಾರಕ, ಯೀ ದುಶ್ಶಾಸನನ ಗತಿ ಏನಾಗಿರುತ್ತೆ ನೋಡು ಬಾ॥

ಸಾರಥಿ : ಅಪ್ಪೋ ನೋಡಿದೆ, ಆಗಲೊ, ಯೀಗಲೊ ಎಲ್ಲೊ ಸ್ವಲ್ಪ ರವೋಟು ಕುಂಟು ಜೀವ ಸಿಗೆಹಾಕಿಕೊಂಡು ಇದೆ.

ಅಭಿಮನ್ಯು : ಎಲೈ ಚಾರವರನೆ ಹಾಗಾದರೆ ಯಿವನ ಶಿರಶ್ಚೇದವನ್ನು ಮಾಡುತ್ತೇನೆ ನೋಡು

ಭಾಮಿನಿ

ರಾಯ ಕೇಳಭಿಮನ್ಯು ಬಾಣನೆ ಕಾಯುವನು ಸದೆಬಡಿದು
ಬಹುತರ ಸಾಯಕವ ಬಿಡರಿದನು ಖಂಡಿಸಿ ಪಾರ್ಥ ಸುತನೆಂದಾ॥

ಅಭಿಮನ್ಯು : ಎಲಾ ದುಶ್ಶಾಸನ ರಣ ಹೇಡಿ, ಆದರೆ ನಿನ್ನನ್ನು ಯೀಗಲೆ ಕೊಂದು ಬಿಡುತ್ತಾಯಿದ್ದೆ, ಮುಂದಕ್ಕೆ ಬಿಡುತ್ತಾ ಯಿರಲಿಲ್ಲ, ಹೇ ತಬ್ಬಲಿ ಯೀಗ ಜ್ಞಾಪಕ ಬಂತು ಅದೇನೆಂದರೆ॥

ಭಾಮಿನಿ

ತಾಯಿಗಪಮಾನವನು ಮಾಡಿದ ನಾಯಿ ನಿನ್ನನ್ನು ಕೊಲ್ವೆನೆಂದರೆ
ವಾಯುಪುತ್ರನ ಬಾಧೆಗಂಜುವೆನೆಂದನಭಿಮನ್ಯೂ॥

ಅಭಿಮನ್ಯು : ಎಲಾ ದುಶ್ಶಾಸನ, ನೀನಾದರೆ ಪೂರ್ವದಲ್ಲಿ ರಾಜಾಸ್ಥಾನದೋಳ್ ನಮ್ಮ ತಾಯಿಯಾದ ದ್ರೌಪದಿಯುಟ್ಟಿದ್ದ ಸೀರೆಯನ್ನು ಬಿಚ್ಚಿಸಿ ಮಾನಭಂಗವನ್ನು ಮಾಡಿ ಯಿರುತ್ತೀಯಾ. ಯೀಗ ನಾನೇ ನಿನ್ನನ್ನು ಮುಂದಕ್ಕೆ ಮೂರು ಹೆಜ್ಜೆ ಯಿರಿಸುತ್ತಿರಲಿಲ್ಲ ಬಲಿಯನ್ನು ಕೊಡುತ್ತಿದ್ದೆ ಬಲ್ಲೆಯಾ. ಏನು ಮಾಡಲಿ. ನಮ್ಮ ದೊಡ್ಡಪ್ಪನವರಾದ ಭೀಮಸೇನರು ಮಾಡಿರುವ ಪಂಥಕ್ಕೋಸ್ಕರ ಅದಕ್ಕೆ ಅಡ್ಡಿಯಾಯ್ತು.   ಅಧಮಾ ನಿನ್ನನ್ನು ಜೀವದೊಂದಿಗೆ ಬಿಟ್ಟಿರುತ್ತೇನೆ. ಇಗೋ ನನ್ನ ಯಡಗಾಲಿನಿಂದ ವದ್ದು ಇರುತ್ತೇನೆ. ನನ್ನ ಹೆಸರು ಹೇಳಿಕೊಂಡು ಜೀವಿಸಿಕೊಳ್ಳುವಂಥವನಾಗೊ ಕುನ್ನಿ॥

ಕೌರವ : ಎಲಾ ರವಿನಂದನ ಸ್ವಾಮಿ ಗುರುಗಳೆ ನನ್ನ ತಮ್ಮನಾದ ದುಶ್ವಾಸನನಿಗಾದ ಪರಿಬವಣೆಯನ್ನು ನೋಡಿ ಸುಮ್ಮನಿರುವಿರಲ್ಲಾ. ಅತಿರಥರು ಮಹಾರಥರು ಷಡುರಥರು ಎಲ್ಲರು ವಂದಾಗಿ ಯೀ ತಬ್ಬಲಿಯನ್ನು ತೆಗೆದುಕೊಳ್ಳಬಾರದೆ. ಸುತ್ತಲು ಮುತ್ತಿಗೆಯನ್ನು ಹಾಕಿ ಶರದ ಮಳೆಯನ್ನು ಸುರಿಸುವಂಥವರಾಗಿರಿ॥

ಅಭಿಮನ್ಯು : ಎಲಾ ಕೌರವ, ಹಾಗಾದರೆ ಯೆಲ್ಲರೂ ಸುತ್ತಲೂ ಮುತ್ತಿಗೆಯನ್ನು ಹಾಕಿ ಶರದ ಮಳೆಯನ್ನು ಸುರಿದು ಸಮರ ಸನ್ನದ್ಧರಾಗಿರಿ॥

 

(ಅಭಿಮನ್ಯು ಸೋತು ಮಲಗುವನು)

ಕೌರವ : ನಮಗೆ ಮೃತ್ಯುವಾಗಿದ್ದ ಶತೃ ಕಂಟಕನಾದ ಕಂಠೀರವನ ಮರಿಯೆ ನಿನ್ನ ಗತಿ ಏನಾಯಿತು. ಯೀಗಾ ಗುರುಗಳೇ ಕರ್ಣ ನೀವೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದೂ. ಜಯವಾಯಿತು ಯೆಲಾ ಚಾರವರ ಹನುಮ ಬಾಯಿಲ್ಲಿ ಯೀ ಹುಡುಗನ ಪಾಡೇನು ಆಗಿದೆ ನೋಡು.

ಸಾರಥಿ : ಅಪ್ಪೋ ನೋಡದೆ ಆಗಲೋ ಯೀಗಲೋ.

ಕೌರವ : ಎಲಾ ಹನುಮ ಚಾರವರ ಪ್ರಾಣ ಹೋಗಿದೆಯೇನೊ

ಸಾರಥಿ : ಅಷ್ಟೇ ಕೌರವಪ್ಪ.

ಕೌರವ : ಎಲೈ ಚಾರವರ, ಹಾಗಾದರೆ ತಂಬಿಗೆ ಗೋ ಕ್ಷೀರವನ್ನು ತೆಗೆದುಕೊಂಡು ಬಾ ಕುಡಿಯೋಣ.

ಸಾರಥಿ : ಸ್ವಾಮಿ ಶ್ವಾನಕ್ಷೀರ ಅಂದರೆ ನಾಯಿಯ ಹಾಲು

ಕೌರವ : ಛೇ ಬೇಕೂಫ್ ಗೋವಿನ ಹಾಲೊ ತಬ್ಬಲಿ ತಾಯಿಗ್ಗಂಡ

ಸಾರಥಿ : ಬುದ್ಧಿ ನಿಮ್ಮೊಬ್ಬರಿಗೆ ವಂದು ಬುರುಡೆ ತಂದುಕೊಡ್ಳೆ॥

ಕೌರವ : ಛೇ ಬೇಕೂಫ್ ಯೇನೊ ಬೊಗುಳಿದೆ.

ಸಾರಥಿ : ಅಲ್ಲಾ ಕಾಣಿರಿ ಬುದ್ಧಿ ಹೊಡಿಯಬೇಡಿರಿ. ಒಂದು ಚಂಬು ಹಾಲು ತಂದು ನಿಮ್ಮೊಬ್ಬರಿಗೆ ಕೊಡಲೊ ಯಿಲ್ಲಿ ಯಿರತಕ್ಕವರಿಗೆಲ್ಲ ಕೊಡಲೊ॥

ಕೌರವ : ಎಲಾ ಚಾರವರ ಯಿಲ್ಲಿ ಯಿರತಕ್ಕ ಮಹನೀಯರೆಲ್ಲರಿಗೂ ಕೊಟ್ಟು ನಂತರ ನನಗೆ ಕೊಡುವಂಥವನಾಗೂ॥

ಸಾರಥಿ : ನಿನ್ನಂಗೆ ಮನೆಹಾಳು ಮಾಡಿಕೊಳ್ಳೋದ್ಕೆ ಕುಡೀರಪ್ಪ. ಸತ್ಯವಂತ ಹೇಳುತ್ತಾನೆ ಆಗಲಿ ಮತ್ತೇನು ಅಪ್ಪಣೆಯಾಗಬೇಕು.

ಕೌರವ : ಎಲಾ ಚಾರವರ, ಸಾವಿರಾರು ಬಂಡಿಗಳ ಮೇಲೆ ಸಕ್ಕರೆಯನ್ನು ಸೇರಿಸಿಕೊಂಡು ಬಂದು ಯೀ ಪಟ್ಟಣದ ಸಂದಿಗೊಂದಿಗಳನ್ನು ಸಹ ಬಿಡದೆ ಪ್ರಜೆಗಳಿಗೆಲ್ಲಾ ಬೀರಿಸುವಂಥವನಾಗು.

ಸಾರಥಿ : ಏನಿರಪ್ಪಾ ನಿಮಗೆ ಸಂತೋಷ ಕಾಲವೊ.

ಕೌರವ : ಎಲಾ ಚಾರವರ ಯೀಗ ನನ್ನ ಹೊಟ್ಟೆಯು ತಣ್ಣಗಾಯಿತೊ.

ಸಾರಥಿ : ಏನ್ ಬುದ್ಧಿ ತಣ್ಣಗಾಗಲಿ, ಯಿನ್ನೊಂದು ಗಳಿಗೆಯಲ್ಲಿ ಯಿರುವೆಯ ಗೂಡಿಗೆ ಬೆಂಕಿ ಬಿದ್ದಂತೆ ವುರಿಯಾಗುತ್ತೆ. ಯಿರಲಿ ವಂದು ತಲೆ ಬಿದ್ದುದ್ದಕ್ಕೆ ಯಿಷ್ಟು ಖರ್ಚು ಹೇಳಿದಿರಿ, ಮುಂದೆ ಬೀಳುವ ತಲೆಗಳಿಗೆಲ್ಲಾ ತಲೆ ಮೇಲೆ ಯಿದೇ ಖರ್ಚು ತಾನೆ ಮಾಡಿಸೋದೂ.

ಕೌರವ : ಹೌದೊ ಹಾಗಂದುಕೊ ಯಿದೇ ಕರ್ಚು ಯಿರಿಸುತ್ತೇನೆ.

ಸಾರಥಿ : ತಪ್ಪುವುದಿಲ್ಲವೊ ಯೀ ಮಾತಿಗೆ.

ಕೌರವ : ಈ ಮಾತಿಗೆ ತಪ್ಪುವುದಿಲ್ಲವೋ ಚಾರವರನೆ.

ಸಾರಥಿ : ಏನಿರಪ್ಪೋ ಹಾಗಾದರೆ, ಮರತೀರ ಮನಸ್ಸಿನಲ್ಲಿ ಯಿಟ್ಟುಕೊಂಡಿರಬೇಕು.