ಸಾರಥಿ : ಈ ಧಾರುಣಿಯೋಳ್ ಅಪಾರವಾದ ಸಾರಗುಣರನ್ನು ಸೇರಿರುವ ನಾರಿ ಶಿರೋರತ್ನವಾದ ಸಾರಸಾಂಬಕಿಯೆ ಈ ಶೋಭಿತವಾದ ರಂಗಸ್ಥಳಕ್ಕೆ ಸಂಭ್ರಮದಿಂದ ಬಂದು ನಿಂದಿರತಕ್ಕವರು ನೀವು ಧಾವ ರಾಯರ ಅರಸಿಯರಮ್ಮ ತಾಯೆ ನಮ್ಮ ದನಕರು ನೀ ಕಾಯೆ॥

ಸೌಭದ್ರೆ : ಅಪ್ಪಾ ಮನುಷ್ಯನೆ ಹೀಗೆ ಬರುವಂಥವನಾಗು ಮತ್ತೂ ಹೀಗೆ ಬರುವಂಥಾವನಾಗು. ಯಮ್ಮ ಸಮ್ಮುಖದಲ್ಲಿ ಬಂದು ಯನ್ನನ್ನು ಧಾವ ರಾಯರ ಅರಸಿಯರೆಂದು ಬೆಸಗೊಳ್ಳುವ ಮಾನುಷ್ಯ ನೀ ಧಾರು ನಿನ್ನ ಹೆಸರೇನು ಹಸನಾಗಿ ಉಸುರುವಂಥವನಾಗಪ್ಪ ಮಾನುಷ್ಯನೆ.

ಸಾರಥಿ : ಎನ್ನನ್ನು ಈ ಅಟ್ಟದ ಮೇಲಿರುವ ಪುಟ್ಟಸಾರಥಿಯೆಂದು ಕರೆಯುತ್ತಾರಮ್ಮಾ ತಾಯೆ ಕರುಣದಿಂದೆನ್ನ  ಕಾಯೇ॥

ಸೌಭದ್ರೆ : ಅಪ್ಪಾ ಸಾರಥಿ. ಸಾರಥಿಯೆಂಬ ಚಾರಕುಲ ಮಸ್ತಕದ ಮಣಿಯೆ ನಿನಗಾರು ಅಣಿಯೆ, ಅಪ್ಪಾ ಸಾರಥಿ ಹೀಗೆ ಬರುವಂಥವನಾಗೂ॥ಈ ತ್ರಿಭುವನದೋಳ್ ವಿರಾಜಿಸುವ ಸಿಂಧುರಂಗದೊಳೆಸೆವ ದ್ವಾರಕೆಗೆ, ಕಾರಣಕರ್ತರಾದ ಯದುಕುಲ ಶಿಖಾಮಣಿ ಬಲರಾಮ ಶ್ರೀಕೃಷ್ಣರಿಗೆ ಸಹೋದರಿಯಾಗಿ, ಗಜಪುರದರಸನಾದ ಯುಧಿಷ್ಟಿರ ಮಹಾರಾಜನ ತಮ್ಮ ಅಸಹಾಯಶೂರರಾದ ತ್ರಿಲೋಕಕ್ಕೆ ಗಂಡರೆಂದು ಪ್ರಖ್ಯಾತಿಯಂ ಪಡೆದಿರುವ ಅರ್ಜುನದೇವರ ಕರವಂ ಪಿಡಿದು, ಮಡದಿಯಾದ ಸೌಭದ್ರೆಯೆಂಬ ಸುಂದರಿಯಾದ ಹೆಣ್ಣು ನಾನೇ ಅಲ್ಲವೇನಪ್ಪಾ ಸಾರಥಿ॥

ಸಾರಥಿ : ಶೋಭಿತವಾದ ಈ ರಂಗಸ್ಥಳಕ್ಕೆ ಆಗಮಿಸಿದ ತಾತ್ವರ್ಯವೇನಮ್ಮ ಅಂಗಜನರಗಿಳಿಯೇ॥

ಸೌಭದ್ರೆ : ಅಪ್ಪಾ ಸಾರಥಿ. ಈ ಶೋಭಿತವಾದ ರಂಗಸ್ಥಳಕ್ಕೆ ಬಂದ ತಾತ್ಪರ್ಯವೇನೆಂದರೆ ಎನ್ನ ಕಂದನಾದ ಅಭಿಮನ್ಯು ಮುಂದೆ ಬರುವ ಕಂಟಕವನ್ನು ಅರಿಯದೆ ಮಂದಮತಿಯಾಗಿ ಅಪನಿಂದೆಗೆ ಕಾರಣನಾಗಬೇಕೆಂದು, ಈ ಚಿಕ್ಕ ವಯಸ್ಸಿನಲ್ಲಿ ಶಸ್ತ್ರ ಪಂಡಿತರಾದ ದ್ರೋಣರು ರಚಿಸಿರುವ ಕುಟಿಲ ತಂತ್ರವೆಂಬ ಚಕ್ರವ್ಯೂಹದ ಕೋಟೆಯ ಯುದ್ಧಕ್ಕೆ ಹೊರಟಿರುವನಂತೆ, ತರಳನು ತೆರಳಿದರೆ ಮರಳಿ ಬರುವುದುಂಟೆ, ಅಳಲುವುದು. ಸಹಜವಲ್ಲವೇನಪ್ಪ ಸಾರಥಿ॥

ಸಾರಥಿ : ಅಹುದಮ್ಮಾ ತಾಯೆ, ಯೀಗ ನಾನು ನೀನು ಹೇಳಿದರೆ ಕಾಲುಕೆರೆದುಕೊಂಡು ನಿಂತಿರುವ ಯೀ ಕಂದನು ಕೇಳಬಲ್ಲನೋ ಹೇಳಿ॥

ಸೌಭದ್ರೆ : ಚಿಂತೆಯಿಲ್ಲ ಅವನೆಲ್ಲಿದ್ದಾನಪ್ಪಾ ಸಾರಥಿ॥

ಸಾರಥಿ : ಅಮ್ಮಾ ಯಿಗೋ ಇಲ್ಲಿ ನೋಡು ನನ್ನ ಕೈಯಲ್ಲಿರುವ ಕೋಲು ಹೋದ ಹಾಗೆ ನಿಮ್ಮ ಕಣ್ಣು ಹೋಗಲಿ, ಕಲಹಕ್ಕೆ ಕಾಲು ಕೆರೆದುಕೊಂಡು ನಿಂತಿರುತ್ತಾರೆ. ಬಾಲ ನಿಂನಯ ಮುಖವ ನೋಡು.

ಸೌಭದ್ರೆ : ಅಯ್ಯೋ ದೈವವೆ ಏನ ಮಾಡಲಿ, ಯಿದಕ್ಕೆ ಎಲ್ಲಿ ಬೀಳಲಿ. ಯೀಗಲೆ ಯೀ ಮಂದಬುದ್ಧಿಯು ಕಂದನಿಗೆ ಬರಬಹುದೆ ಶಿವಶಿವಾ॥

ಭಾಮಿನಿ

ಫಳಿಲನಿತ್ತಭಿಮನ್ಯು ವೀರನ ಕುಶಲವಾರ್ತೆಯ ಕೇಳುತ
ನಳಿನಮುಖಿ ಸೌಭದ್ರೆ ಬಿದ್ದಳು ಕುವರನೆಡೆಗಳುತಾ॥

ಅಭಿಮನ್ಯು : ನಮೋನ್ನಮೋ ಹೇ ತಾಯೆ. ಆಹಾ ಮಾತನಾಡಲಿಲ್ಲವಲ್ಲ. ನಮೋನ್ನಮೋ ಹೆತ್ತಮ್ಮ ಹೇ ಹಡದಮ್ಮ ಮುನಿಸ್ಯಾಕೆ ಮಾತನಾಡವ್ವ॥

ಸೌಭದ್ರೆ : ಮಗನೆ, ಏನು ಮಾತನಾಡಲಪ್ಪ. ತೊಳಲಿಬಳಲಿ ಅಳಲಿನ ಕಾಲವನ್ನು ಕೊಟ್ಟೆಯಲ್ಲೋ ಕಂದಾ॥

ಪದರಾಗಅಟ್ಟತಾಳ

ಅಳಲುವ ಕಾಲವಲ್ಲಿದು ದೈರ್ಯಳಾಗೆನ್ನ ತಾಯೆ ಕೇಳು
ಖೂಳ ಕೌರವರೊಳು ಕಲಹಕ್ಕೋಗುವೆ ನಾನು ತಾಯೆ ಕೇಳು.

ಅಭಿಮನ್ಯು : ಹೇ ತಾಯೆ ಹಡದವ್ವ, ಈ ಹೊತ್ತಿನ ದಿವಸ ಕುನ್ನಿಗಳಾದ ಕೌರವರನ್ನು ಕೊಲ್ಲುವುದಕ್ಕೆ ವುಲ್ಲಾಸದಿಂದ ಹಲ್ಲು ಕಡಿದುಕೊಂಡು ಹೊರಟಿರುವಾಗ ಸಲ್ಲದೆಂದು ಹೇಳುವುದು ಮಾತಲ್ಲ. ಅಮ್ಮಯ್ಯ ಹೀಗಿರುವಲ್ಲಿ ಧೈರ್ಯವಾಗಿ ಕಂದನನ್ನು ಯೇಕೆ ಕಳುಹಿಸಬಾರದೂ ಭಯವೇನೂ

ಸೌಭದ್ರೆ : ಕಂದ, ಖಂಡಿತವಾದ ತಂಟೆ ಬಂದ ಮೇಲೆ ಕಂಟಯಿಂದ ಕಲಹಕ್ಕೆ ಹೋಗಬೇಕಾದ ಕಾರಣವೇನು॥

ಪದ

ಚಕ್ರವ್ಯೂಹವ ರಚಿಸುವನಂತೆ ಕಲಶಜ ತಾಯೆ ಕೇಳೂ
ಯೆನ್ನ ವಿಕ್ರಮತನವ ತೋರಿಸುವೆನು ಆನೊಳೂ ತಾಯೆ ಕೇಳೂ.

ಅಭಿಮನ್ಯು : ಹೇ ತಾಯೆ, ಯೀ ದಿವಸ ಕಲಶ ಸಂಭವರಾದ ದ್ರೋಣಾಚಾರ‌್ಯರು ನಿರ್ಮಿಸಿರುವ ಚಕ್ರವ್ಯೂಹದ ಕೋಟೆಗೆ ನುಗ್ಗಿ, ಕಾರ್ಯದರ್ಶಿಯಾಗಿರುವ ದ್ರೋಣನನ್ನು ಮೊದಲು ಕೊಂದು, ತದನಂತರ ಕೌರವಾದಿಗಳನ್ನು ಅದೇ ಕೋಟೆಗೆ ಆಹುತಿಯನ್ನು ಕೊಟ್ಟು ಬಂದರೆ, ನಿಮ್ಮ ಹೊಟ್ಟೆಯಲ್ಲಿ ನಾನು ಹುಟ್ಟಿದ್ದಕ್ಕೆ ಸಾರ್ಥಕವಲ್ಲವೇ ಅಮ್ಮಯ್ಯ ಕೀರ್ತಿ ಬರುವುದಿಲ್ಲವೇ ಜನನಿ ಮತ್ತೂ ಹೇಳುತ್ತೇನೆ॥

ಪದ

ಸಂತೋಷದಿಂದೆನ್ನ ಕಳುಹು ವೀಳ್ಯವನು ತಾಯೆ ಕೇಳು
ಎನ್ನ ಪಂಥಾವ ಮೆರಸೂವೆ ದುರುಳ ಕೌರವನೊಳು ತಾಯೆ ಕೇಳು॥

ಅಭಿಮನ್ಯು : ಹೇ ತಾಯೆ, ಸಂತೋಷದಿಂದೆನ್ನ ಕಳುಹಿಸಿ ಕೊಟ್ಟರೆ ಕರಾಳರಾದ ಕೌರವರನ್ನು ಸರಳುಗಳಿಂದ ಆನಂದವನ್ನುಂಟು ಮಾಡಿ ಬರುತ್ತೇನೆ. ಅಮ್ಮಯ್ಯ ವೀಳಯವನ್ನು ಕೊಟ್ಟು ಕಳುಹಿಸಬಾರದೇ॥

ರಾಗಕಾಂಭೋದಿಆದಿತಾಳ

ಏತಕಿಂತ ಬುದ್ಧಿ ಬಂತು
ಕಂದ ಕಂದ ನಿನಗೆ ಪ್ರೀತಿಯೇನೊ
ವೀರಲೋಕ ಕಂದ ಕಂದ

ಸೌಭದ್ರ : ಹೇ ಕಂದಾ, ಬಾಲಲೀಲೆಯಲ್ಲಿ ಚಂಡುಬುಗರಿ ಗಜ್ಜುಗ ಗೋಲಿ ಮುಂತಾದ ಆಟ ಪಾಟಗಳನ್ನು ಆಡಿಕೊಂಡು ಅರಮನೆಯಲ್ಲಿರುವ ಯೀ ಚಿಕ್ಕ ಪ್ರಾಯಕ್ಕೆ ರಣಾಗ್ರಕ್ಕೆ ಹೋಗಿ ವೀರಸ್ವರ್ಗ ಸೇರತಕ್ಕ ಈ ನಿನ್ನ ಗ್ರಹಚಾರಕ್ಕೆ ನನ್ನ ತಲೆಯನ್ನು ಹೊಡೆದುಕೊಳ್ಳಲೆ, ಬಾಲನೆ ಯೇತಕ್ಕೆ ಇಂಥ ದುರ್ಬುದ್ಧಿಯು ಬರುವಂಥದ್ದಾಯ್ತು॥

ಪದ

ನೀತಿಯೆಲ್ಲ ಪೋಪುದಿಂತು ಕಂದ
ಯನ್ನ ಘಾಶಿಸಿ ಪೋಗಯ್ಯ ರಣಕೆ ಕಂದಾ॥

ಸೌಭದ್ರೆ : ಹೇ ಕಂದ ಯೀ ದುರ್ಘಟವಾದ. ರಣಾಗ್ರಕ್ಕೆ ಹೋಗತಕ್ಕದ್ದು ನನಗೆ ಸಮಾಧಾನವಿಲ್ಲವು. ಮುಂದೆ ಬರುವ ಕಷ್ಟ ತಿಳಿಯದೆ ಭ್ರಷ್ಟನಾಗಿರುವೆ. ನೀನು ಹೋಗುವದಾಗಿದ್ದರೆ, ನನ್ನನ್ನು ತೀರಿಸಿಕೊಂಡು ಹೋಗಪ್ಪಾ ಕಂದ ಯಿಗೋ ತಲೆಯನ್ನು ಒಡ್ಡಿರುವೆ ಕಡಿದು ಬಿಡು॥

ಅಭಿಮನ್ಯು : ಅಮ್ಮಾ ತಾಯೆ, ಶಿರಸಾವಹಿಸಿ ಬೇಡಿಕೊಳ್ಳುತ್ತೇನೆ ಯಿಂಥಾ ಮಾತನಾಡಬೇಡವೆ ತಾಯೆ॥

ಪದ

ಹಿರಿಯಾ ತಂದೆ ವೋಡಿ ಬಂದಾ ಕಂದ
ಮುಂದೆ ಬರುವ ಹಾನಿವೃದ್ಧಿಯಂ ತಾ ಕಂದ ॥

ಸೌಭದ್ರೆ : ಹೇ ಮಗುವೆ ನಿಮ್ಮ ಚಿಕ್ಕ ದೊಡ್ಡಪ್ಪನವರಾದ ಭೀಮಸೇನರೂ ಕೂಡ ನಳಿನ ವ್ಯೂಹಕ್ಕೆ ಹೋಗಿ ಮುಖದ ಮೇಲೆ ಹೊಡೆಸಿಕೊಂಡು ಬಂದಿರುತ್ತಾರೆ. ಆದ್ದರಿಂದ ಮುಂದೆ ಬರುವ ಹಾನಿ ವೃದ್ಧಿಯನ್ನು ಹೇಳುವೆನಲ್ಲೊ ಬಾಲಾ ಬೇಡಪ್ಪಾ ಹೋಗಬೇಡಯ್ಯ, ಅಯ್ಯೋ ನಾನುಟ್ಟ ಸರಗನ್ನು ವಡ್ಡಿ ಬೇಡಿಕೊಳ್ಳುತ್ತೇನೆ.

ಅಭಿಮನ್ಯು : ಹೇ ತಾಯೆ, ಮುಂದೆ ಬರುವ ಹಾನಿವೃದ್ಧಿಯು ಈಶ್ವರಾಧೀನವಲ್ಲವೆ ನಿನಗೇನು ಗೊತ್ತೆ ತಾಯಮ್ಮಾ.

ಪದ

ಸರಸವಲ್ಲ ಸಮರವಿಂದು ಕಂದ ಕಂದ
ಈಗ ತೊರೆಯೋ ಬೇಗ ರಣವಾ ಕಂದ ಕಂದಾ॥

ಸೌಭದ್ರೆ : ಹೇ ಮಗನೆ ಸಮರ ಯೆಂದರೆ ಸರಸವೇ ಮಕ್ಕಳಾಟಿಕೆ ಕೆಲಸವೆ ಈ ಸುದ್ಧಿಯನ್ನು ಮರೆತುಬಿಡು. ಮನೆಗೆ ಬಾರಪ್ಪಾ ಬಾಲಾ ಹೋಗೋಣ॥

ಅಭಿಮನ್ಯು : ಹೇ ತಾಯೆ, ಮನೆಗೆ ಬಾರಪ್ಪಾ ಯೆಂದು ಕರೆಯುವುದಕ್ಕೆ ನಿನ್ನ ಕರೆಸಲಿಲ್ಲ ಏಕೆ ನಿನ್ನ ಕೇಳಲಿ ಮಾತನಾಡದಿದ್ದರೆ ಆಯ್ತು

ಸೌಭದ್ರೆ : ಆಹಾ ಸಭಿಕರೆ ಮಗನಿಗೆ ಮುನಿಸು ಬಂತು. ಅಮ್ಮಗಳಿರಾ ಅಕ್ಕಗಳಿರಾ ತಾಯಿಗಳಿರಾ ಕಂದನಿಗೆ ನೀವಾದರೂ ಬುದ್ಧಿ ಹೇಳಬಾರದೇ॥

ಭಾಮಿನಿ

ಪೊಡವಿಪತಿ ಕೇಳಿಂತು ಕುವರನ ಪಿಡಿದು ತಕ್ಕೈಸುತಲಿ
ದುಃಖದ ಕಡಲೊಳರ್ದಳಂದಿನೊಳೂ ಹಡದವ್ವಾ.

ಸೌಭದ್ರೆ : ಆಹಾ ಮಗನೆ, ನೀನು ಸಣ್ಣ ಶಿಶುವಾಗಿ ರಣಾಗ್ರಕ್ಕೆ ಹೋಗುವುದು ತರವಲ್ಲವೆಂದು ಹೇಳಿದಾಗ್ಯೂ ಕೇಳದೆ ನನ್ನನ್ನು ಯೀ ದುಃಖ ಯೆಂಬ ಮಡುವಿಗೆ ಕೆಡವಿ ಬಿಟ್ಟೆಯಾ ಕಂದ॥ಬೇಡಪ್ಪಾ ಬೇಡಯ್ಯ ಕರವನ್ನು ಮುಗಿಯುತ್ತೇನೆ ಶರಗಳನ್ನು ತಾರಪ್ಪಾ ಯಿಲ್ಲಿ.

ಭಾಮಿನಿ

ತಡವರೇ ಯಲೆ ತಾಯೆ ಯೀ ಪರಿ ಛಲವ ನುಡಿದರೆ
ರಣವ ಜೈಸೆಂದು ಕಳುಹದೆ ಮರುಗುವರೆ ನೀನೆಂದನಭಿಮನ್ಯು

ಅಭಿಮನ್ಯು : ಹೇ ತಾಯೆ, ಸಿದ್ಧವಾಗಿ ಯುದ್ಧಕ್ಕೆ ಹೊರಟ ಕಾಲದಲ್ಲಿ ಹರಸಿ ಕಳಿಸುವುದು ಯುಕ್ತ. ತಡೆಯತಕ್ಕದ್ದು ಯುಕ್ತವಲ್ಲಾ. ಯಿದು ಛಲೋ ಕೆಲಸವಲ್ಲವೋ ತಾಯಮ್ಮ. ಯಿಷ್ಟಾದರೂ ನನ್ನ ಪರಾಕ್ರಮವು ತಿಳಿಯದಿಲ್ಲವೇನೇ ತಾಯೆ.

ಸೌಭದ್ರೆ : ಅದೇನಪ್ಪಾ ನಿನ್ನ ಪರಾಕ್ರಮ॥

ಪದಕೇದಾರಗೌಳ

ಚಿಂತಿಪುದೇಕೆ ಕೇಳವ್ವ ನಾ ಬೆದರೆ ದಂತಿ ಪುರಾಧಿಪಗೇ
ಸಂತಸದಿಂದೀಗ ವೀಳ್ಯವ ಕೊಟ್ಟು ನೀ ಕಳುಹಿಸಮ್ಮೆ ನೀ ಯನಗೆ॥

ಅಭಿಮನ್ಯು : ಅಂಚೆ ಗಮನೆಯಾದ ಚಂಚಲಾಕ್ಷಿಯೆ, ವಂಚನೆಯಿಲ್ಲದೆ ಕೊಂಚವೂ ಚಿಂತೆಯ ಮಾಡದೆ ಸಂಚಕಾರ ಕೊಟ್ಟರೆ ಕೌರವಾದಿಗಳ ತಲೆಯನ್ನು ಈ ಕತ್ತಿಯಿಂದ ಕಡಿದುಕೊಂಡು ಬಂದು ತಮ್ಮ ಪಾದಕ್ಕೆ ಒಪ್ಪಿಸುತ್ತೇನೆ ಮತ್ತೂ ಹೇಳುತ್ತೇನೆ.

ಪದ

ಕೊಳಗುಳದೊಳಧಿಕ ರಿಪುಗಳೆಲ್ಲರ ಯಮನಿಳೆಗೈದಿಸುವೆನೆಂದು
ಛಲದಿಂದ ನಾನೀಗ ಶಿರಗಳೊಡೆದು ತಂದು ಚರಣಕೊಪ್ಪಿಸುವೆನಮ್ಮಾ.

ಅಭಿಮನ್ಯು : ಅಮ್ಮಾ ತಾಯೆ, ಯೀ ದಿವಸ ಯುದ್ಧದಲ್ಲಿ ನಾನು ವೈರಿಗಳನ್ನು ಕೊಂದು ಯಮಪಟ್ಟಣಕ್ಕೆ ಅಟ್ಟಿ ಬರುತ್ತೇನೆ. ನನ್ನ ಸಾಹಸವನ್ನು ನೋಡುವುದಕ್ಕೆ ಇದು ನಿಮಗೆ ಸಮಯವಲ್ಲವೆ, ಅಮ್ಮಯ್ಯ ಇಗೋ ದಮ್ಮಯ್ಯ ಕಾಲಿಗೆ ಬೀಳುವೆ ದಯಪಾಲಿಸಬೇಕು ಅಪ್ಪಣೆಯನ್ನು.

ಸೌಭದ್ರೆ : ಕಂದ ಹೇ ಬಾಲಾ, ಹೇ ಮಗುವೆ ಖಂಡಿತವಾಗಿಯೂ ಕಳುಹಿಸುವುದಿಲ್ಲಾ॥

ಅಭಿಮನ್ಯು : ತಾಯೆ ಖಂಡಿತವಾಗಿಯೂ ನೀವು ಕಳುಹಿಸದಿದ್ದರೆ ನಾನು ಬಿಡಲಿಲ್ಲಾ.

ಸೌಭದ್ರ : ಆಹಾ ದೈವವೆ, ಯೀ ಮೂರ್ಖನಿಗೆ ಇದುವರೆವಿಗೂ ಹೇಳಿದ್ದು ಗೋರ‌್ಕಲ್ಲಿನ ಮೇಲೆ ಮಳೆಗೆ ಹೊಯ್ದಂತೆ ಆಯ್ತು. ಕೇಡುಗಾಲಕ್ಕೆ ಯೀ ದುರ್ಬುದ್ಧಿಯು ಕೂಡಿ ಬಂದಿರುವುದಲ್ಲದೆ ಏನ ಮಾಡಲಿ ಹೇಳುತ್ತೇನೆ.

ಪದರಾಗಸೌರಾಷ್ಟ್ರತ್ರಿಪುಡೆ

ಸುರಿವ ಕಂಬನಿಯನ್ನು ಸೆರಗಿನಿಂದೊರಸಿ,
ಜನನಿಯ ಪಾದ ರಜವನು
ಶಿರದೊಳಾಂತು ಪಾರ್ಥನಂದನ ಹೊರಟನಾಗಾ

ಅಭಿಮನ್ಯು : ಅಯ್ಯ ಭಾಗವತರೆ, ಮಾತೃಶ್ರೀಯವರಲ್ಲಿ ಎಷ್ಟೋ ಸಮಾಧಾನ ಕೊಟ್ಟಾಗ್ಯೂ ದುಃಖಕ್ಕೆ ಕಾರಣರಾಗಿರುವರು, ಅಮ್ಮಯ್ಯ ದುಃಖವನ್ನು ಇಲ್ಲಿಗೆ ಬಿಡು. ನಾನು ಹೋಗತಕ್ಕದ್ದು ಖಂಡಿತ. ನಿಮ್ಮ ಕಣ್ಣಿನಿಂದ ಸುರಿಯುವ ಕಂಬನಿಯನ್ನು ಈ ಶೆರಗಿನಿಂದ ಒರೆಸಿದಾಗ್ಯೂ ತಣ್ಣಗಾಗಲಿಲ್ಲವೆ, ಅಮ್ಮಯ್ಯ ತಮ್ಮ ಪಾದಾಗ್ರರೇಣುವನ್ನು ತಲೆಯಲ್ಲಿ ಧರಿಸಿದೆನೂ. ರಣಾಗ್ರಕ್ಕೆ ಹೊರಟೆ ಅವ್ವಯ್ಯ. ನಿಮ್ಮ ಕೃಪಾಪೂರಿತ ಆಶೀರ್ವಾದವನ್ನು ನನ್ನ ಮೇಲೆ ಸಂಪೂರ್ಣವಾಗಿ ಇರಲೆಂದು ಹರಸಿ ಕಳುಹಿಸಮ್ಮಾ ಜನನಿ॥

ಸೌಭದ್ರೆ : ಹೇ ಕಂದ, ಎಷ್ಟು ಹೇಳಿದರೂ ನಿನಗೆ ಕೇಳಲಿಲ್ಲ. ಶ್ರೀಕಂಠನ ಕರುಣದಿಂದ ನನ್ನ ಕೃಪಾರಸಪೂರಿತವಾದ ಆಶೀರ್ವಾದವನ್ನು ಕೊಟ್ಟಿರುತ್ತೇನೆ, ಹೋಗಿ ಬರಬಹುದಯ್ಯ ಬಾಲಾ.

ಅಭಿಮನ್ಯು : ಅಮ್ಮಯ್ಯ, ಯೀಗ ಯತಾರ್ಥವಾಗಿಯೂ ಕೃತಾರ್ಥನಾದೆ. ಸಾರ್ಥಕವಾಯ್ತು ಸದನಕ್ಕೆ ದಯಮಾಡಿಸಬಹುದಮ್ಮಾ ಜನನಿ.

ಸೌಭದ್ರೆ : ಆಹಾ ಆದರೆ ಈ ಕಂದನಿಗೆ ನಾನು ಪೇಳಿದ ಮಾತು ಹಿತವಾಗಲಿಲ್ಲ, ಇವನ ಕಾಂತೆಯಾದ ಕನಕಾಂಗಿಯು ಬಂದು ಹೇಳಿದರೆ, ಹೆಂಡತಿಯ ಮಾತನ್ನು ಕೇಳ್ಯಾನಲ್ಲವೆ ಹೋಗಿ ಕನಕಾಂಗಿಯನ್ನು ಕಳುಹಿಸವೆನು.

 

(ಕನಕಾಂಗಿ ಪ್ರವೇಶ)

ರಾಗದ್ವಿಪದೆಮುಖಾರಿ

ಪ್ರಿಯನಿರವ ತಾ ಕೇಳಿ ಆಗ ಹರುಷವ ತಾಳಿ
ಅಂಗನೆ ಕನಕಾಂಗಿ ಆಭರಣವಿಟ್ಟು
ರಂಗುಳ್ಳ ಸೀರೆಯನ್ನು ರಮಣಿ ತಾನುಟ್ಟು
ಮುತ್ತು ರತ್ನಗಳಿದ್ದ ಕುಪ್ಪಸವ ತೊಟ್ಟು ಚಪಲಾಕ್ಷಿ ಕಣ್ಣಿಗೆ
ಕಪ್ಪು ತಾನಿಟ್ಟು ನಿಲುವುಗನ್ನಡಿ ಪಿಡಿದು ಚೆಲುವೆ ಮುಖನೋಡಿ
ಯೀ ರೂಪು ಯೀ ಸೊಂಪು ಯೀ
ವಿಭ್ರಮಗಳ ನೋಡಿ ಸುಖಿಸುವ
ಪಾರ್ಥಸುತ ತನಗೆಂದು ಧರೆಯೊಳಗೆ
ಗಂಡಸಿಯ ನಗರದೊಳು ಮಧ್ಯದಲಿ
ನೆಲಸಿರುವ ಶ್ರೀ ಶಂಭುಲಿಂಗನಂ ಭಜಿಸಿ
ಕನಕಾಂಗಿ ಬಂದು ತೆರೆಯೊಳಗೆ ನಿಂದೂ॥

ರಾಗದರುವುಆದಿತಾಳ

ಗೌರೀ ಸಲಹೆ, ಶಾರ್ವನರಸೀ ಅಂಬಾ ಸಲಹೆ ಶಾರ್ವನರಸಿ ಅಂಬಾ

ಸಾರಥಿ : ಈ ಶೋಭಿತಮಾದ ರಂಗಸ್ಥಳಕ್ಕೆ ಕನಕಪುತ್ಥಳಿಯಂತೆ ಯೀಗ ಬಂದು ನಿಂದಿರತಕ್ಕವರು, ತಾವು ಧಾರಮ್ಮಾ ತಾಯೆ ನಮ್ಮಂದೆ ಕುರಿ ನೀ ಕಾಯೆ॥

ಕನಕಾಂಗಿ : ಅಪ್ಪಾ ವಿದೂಷಕ ಹೀಗೆ ಬರುವಂಥವನಾಗು. ಸ್ವರ್ಗಮರ್ತ್ಯ ಪಾತಾಳ ಈ ಮೂರು ಲೋಕಗಳಲ್ಲಿಯೂ ಇರತಕ್ಕ, ಚಂಡ ಪ್ರಚಂಡ ಭಂಡರಿಗೆಲ್ಲ ಗಂಡನೆಂದು ಬಿರುದಿನ ಪೆಂಡೆಯನ್ನು ಪಡೆದಿರತಕ್ಕ ಅರ್ಜುನ ದೇವರಿಗೆ ಸೊಸೆಯಾಗಿ, ಅವರ ಮಗನಾದ ಅಭಿಮನ್ಯು ದೇವರಿಗೆ ಅಟ್ಟಹಾಸದಿ ಪಟ್ಟದ ರಾಣಿಯಾಗಿರುವ ದಿಟ್ಟ ಕನಕಾಂಗಿಯೆಂಬ ಕನ್ಯಾರತ್ನವು ನಾನೇ ಅಲ್ಲವೇನಪ್ಪಾ ವಿದೂಷಕ ನೀ ಚಮತ್ಕಾರಕ॥

ಸಾರಥಿ : ತಾಯೆ ಗೊತ್ತಾಯಿತು, ಯೀ ಸಭಾ ಮಂಟಪಕ್ಕೆ ಬಂದ ಕಾರಣವೇನಮ್ಮಾ ಕನಕಾಂಗಿ॥

ಕನಕಾಂಗಿ : ಅಪ್ಪಾ ಸಾರಥಿ, ಯನ್ನರಸನಾದ ಅಭಿಮನ್ಯು ದೇವರ ಪ್ರಯಾಣ ಸುದ್ಧಿಯನ್ನು ಕೇಳಿ, ಅವರಲ್ಲಿ ವಂಚನೆಯಿಲ್ಲದೆ ಕೊಂಚ ಮಾತಾಡಲು ಚಂಚಲಾಕ್ಷಿಯು ಬಂದಿರುತ್ತೇನೆ. ಧಾವಲ್ಲಿದ್ದಾರೆ ತೋರಿಸಪ್ಪಾ ಸಾರಥಿ॥

ಸಾರಥಿ : ಅವ್ವೋ ಕತ್ತಿ ವರೆ ಹಿರೀಕೊಂಡು ರಣಾಗ್ರಕ್ಕೆ ಹೊರಟು ಯಿರುತ್ತಾರೆ ನೋಡಿ॥

ಕನಕಾಂಗಿ : ನಮೋನ್ನಮೋ ಹೇ ಕಾಂತ॥

ಅಭಿಮನ್ಯು : ಹರಿದ್ರಾ ಕುಂಕುಮಾಲಂಕೃತೆಯಾದ ಸೌಭಾಗ್ಯವತಿಯೆ ಹೀಗೆ ಬಾ. ಬಂದ ಕಾರಣವೇನು.

ಪದರಾಗದರುವುಆದಿತಾಳ

ಪೋಪುದೆಲ್ಲಿಗೆ ಕಾಂತ ಪೇಳಿ ವೃತ್ತಾಂತ ನೀವು ಪೋಪುದೆಲ್ಲಿಗೆ ಕಾಂತ॥
ಕರದಲ್ಲಿ ಶರಗಳಿಡಿದು ಝಳಪಿಸುವಿರಿ ಯಾರ ಮೇಲೆ ಯುದ್ಧಕೀಗ
ತೆರಳುತಿರುವಿರಿ ಪೋಪುದೆಲ್ಲಿಗೆ ಕಾಂತ॥

ಕನಕಾಂಗಿ : ಹೇ ಕಾಂತ, ಯೀ ದಿವಸ ರಣಸನ್ನದ್ಧರಾಗಿ ಪ್ರಸಿದ್ಧಿಯಿಂದ ಕರದಲ್ಲಿ ಶರಗಳಿರಿದುಕೊಂಡು ಝೇಂಕರಿಸುತ್ತ ಯಾರ ಮೇಲೆ ಯುದ್ಧಕ್ಕೆ ಹೋಗಬೇಕೆಂದು ಹೊರಟಿರುವಿರಿ॥

ಅಭಿಮನ್ಯು : ಹೇ ರಮಣಿ, ಶಸ್ತ್ರ ಪಂಡಿತ ನಮ್ಮ ಅಪ್ಪನ ವಿದ್ಯಾಗುರು ದ್ರೋಣನು ನಿರ್ಮಿಸಿರುವ ಚಕ್ರವ್ಯೂಹದ ಕೋಟೆಗೆ ಈ ದಿವಸ ಸಿದ್ಧವಾಗಿ ಯುದ್ಧಕ್ಕೆ ಹೊರಟು ಯಿರುತ್ತೇನೆ, ಈ ಕಾಲದಲ್ಲಿ ಎದುರಿಗೆ ಬಂದು ನಿಲ್ಲಬಹುದೆ ಮಂಗಳಾಂಗಿಯೆ ಹೊರಟು ಹೋಗು॥

ಕನಕಾಂಗಿ : ಹೇ ಕಾಂತ ಹಾಗಾದರೆ ಹೇಳುತ್ತೇನೆ ಕೇಳಿ॥

ಪದ

ಅರಸ ಕೇಳಿ ಗುರುಗಳಲ್ಲಿ ಯುದ್ಧ ಸಲ್ಲದು ಮರಳಿ ಬಂದೂ
ಮನೆಗೆ ನೀವು ಸುಖವ ಹೊಂದಿರಿ ಪೋಪುದೆಲ್ಲಿಗೆ ಕಾಂತ ಪೇಳಿ ವೃತ್ತಾಂತ॥

ಕನಕಾಂಗಿ : ಹೇ ಕಾಂತ ಗುರುಳಾದ ಶಸ್ತ್ರ ಪಂಡಿತರಲ್ಲಿ ನಿಮಗೆ ಯುದ್ಧವು ಅಸಾಧ್ಯವಾಗಿರುವುದರ ಪ್ರಯುಕ್ತ, ಸದನಕ್ಕೆ ಬಂದು ಸುರತಸದ್ಗೋಷ್ಟಿಯಲ್ಲಿ ಸುಖಪಡಬಾರದೆ. ನಲ್ಲ ಅರಮನೆಗೆ ಹೋಗೋಣ ಬನ್ನಿ.

ಅಭಿಮನ್ಯು : ಹೇ ಕಾಂತೆ ಹೆತ್ತ ತಾಯಿಯ ಮಾತನ್ನೇ ಕೇಳಲಿಲ್ಲ ನಿನ್ನ ಮಾತು ಕೇಳತಕ್ಕದ್ದು ನಿಜವೆ ತಂಟೆಯನ್ನು ಮಾಡಿದರೆ  ಶ್ರೀಕಂಠನಾಣೆಯಾಗಿಯೂ ನಿನಗೆ ಕಂಟಕ ಬರುವುದು ಛಲೋ ಮಾತಿನಲ್ಲಿ ಹೊರಟುನಡೆ॥

ಸಾರಥಿ : ಅವ್ವೋ ಆಯ್ತು ಬಿಡಿ ಮಾತನಾಡೀರಾ ಮತ್ತೆ ಹುಷಾರು ಯೇನವ್ವಾ ನೀವು ನೀರ ಹುಯ್ಕಂಡು, ಎಷ್ಟು ದಿವಸವಾಯ್ತವ್ವಾ॥

ಕನಕಾಂಗಿ : ಅಪ್ಪಾ ಚಾರವರ ಪ್ರತಿನಿತ್ಯವೂ ನೀರು ಹಾಕಿಕೊಳ್ಳುತ್ತೇವೆ, ಸ್ನಾನ ಮಾಡುತ್ತೇವೆ॥

ಸಾರಥಿ : ಅದಲ್ಲ ಕಂಡ್ರವ್ವ.

ಕನಕಾಂಗಿ : ಇನ್ನಾವುದಪ್ಪಾ ಚಾರವರ

ಸಾರಥಿ : ನೀವು ಹೊರಗಾಗಿ ಎಷ್ಟು ದಿವಸವಾಯ್ತವ್ವಾ.

ಕನಕಾಂಗಿ : ಗೊತ್ತಾಗಲಿಲ್ಲವಲ್ಲಾ.

ಸಾರಥಿ : ಬಿಡ್ರವ್ವ ನಿಮಗೆ ಮುಟ್ಟು ನಿಂತು ಎಷ್ಟು ದಿವಸವಾಯ್ತು.

ಭಾಗವತ : ಎಲಾ ಹನುಮನಾಯ್ಕ ಚಾರವರ ಬೇಕೂಫ್‌ರಾಜಸ್ತ್ರೀಯರ ಸಂಗಡ ಹೀಗೆಲ್ಲಾ ಮಾತನಾಡಬಾರದು. ಯಿಲ್ಲಿ ನನ್ನ ಕೇಳು ಹೇಳುತ್ತೇನೆ. ಇವರು ಪುಷ್ಪವತಿಯರಾಗಿ ತ್ರಿಮಾಸ.

ಸಾರಥಿ : ಹೀಗಂದ್ರೆ ಯಿದೇನೊ ನನಗೆ ಗೊತ್ತಾಗಲಿಲ್ಲಪ್ಪ ವಡಚಿ ಹೇಳಪ್ಪ.

ಭಾಗವತ : ಎಲಾ ಹನುಮನಾಯ್ಕ, ಚಾರವರ. ಯಿವತ್ತಿಗೆ ಮುಟ್ಟು ನಿಂತು ಬಹುಶಹ ಮೂರು ತಿಂಗಳಾಗಿರಬಹುದು ಕಣೋ.

ಅಭಿಮನ್ಯು : ಎಲೈ ಚಾರಕ ಚಾರವರ ರಥದ ಮೇಲೆ ಕೂತಿರುತ್ತೇನೆ. ತಡವ್ಯಾತಕ್ಕೆ ಯೀ ರಥಕ್ಕೆ ವಾಯು ವೇಗ ಮನೋವೇಗದಲ್ಲಿ ಹೋಗತಕ್ಕ ನಾಲ್ಕು ಕುದುರೆಗಳನ್ನು ಕಟ್ಟಿ ರಥವನ್ನು ಚಕ್ರವ್ಯೂಹದ ಕೋಟೆಗೆ ಬಿಡುವಂಥವನಾಗೊ

ಸಾರಥಿ : ಅಪ್ಪಣೆ॥

ಅಭಿಮನ್ಯು : ಎಲೈ ಚಾರವರ ನಮ್ಮ ರಥವು ಎಲ್ಲಿಗೆ ಬಂದು ಯಿರುತ್ತೆ ನೋಡಿ ಹೇಳುವಂಥವನಾಗು॥

ಸಾರಥಿ : ಅಪ್ಪೋ ಕುರುಕ್ಷೇತ್ರದಲ್ಲಿ ಗುರುಗಳಿಂದ ನಿರ್ಮಿಸಿರುವ ಚಕ್ರವ್ಯೂಹದ ಕೋಟೆ ಬಳಿಗೆ ನೀಟಾಗಿ ಬಂದಿರುತ್ತೆ॥

ಅಭಿಮನ್ಯು : ಎಲೈ ಚಾರಕ ಮಹಾದ್ವಾರದಲ್ಲಿ ಯಾರು ನಿಂತಿರುತ್ತಾರೆ ನೋಡಿ ಹೇಳು॥

ಸಾರಥಿ : ಯಾರೊ ನಾ ಕಾಣೆ ವಂದು ಪರಗಣಿ ಬೇತಾಳ ನಿಂತುಕೊಂಡಂಗೆ ಯರಡೂವರೆ ಆಳುದ್ದಕ್ಕೆ ದೆವ್ವ ನಿಂತಾಂಗೆ ನಿಂತಿದ್ದಾನೆ ನೋಡಿದರೆ ಭಯವಾಗುತ್ತಪ್ಪ.

ಅಭಿಮನ್ಯು : ಎಲಾ ಚಾರಕ, ಹಾಗಾದರೆ ಯಿವನು ಕೌರವನ ಭಾವಮೈದ, ದುಶ್ಶಳೆ ಗಂಡ, ಸಿಂಧುದೇಶದ ದೊರೆ, ಸೈಂಧವ ಮಹಾದ್ವಾರದಲ್ಲಿದ್ದರೆ, ತಾವು ವೊಳಗೆ ಹೋಗುವುದಕ್ಕೆ ದಾರಿಯನ್ನು ಸಲೀಸಾಗಿ ಬಿಟ್ಟು ಕೊಡುತ್ತಾನೊ ಯಿಲ್ಲವೋ ಕೇಳಿಕೊಂಡು ಬಾ॥

ಸಾರಥಿ : ಹಾಗಾದರೆ ಕೇಳಿಬರುತ್ತೇನೆ. ಅಪ್ಪ ಸೈಂಧವಪ್ಪ ನಮ್ಮ ರಾಜಪುತ್ರರು ವಳಕ್ಕೆ ಹೋಗುವುದಕ್ಕೆ ದಾರಿಯನ್ನು ಬಿಟ್ಟು ಕೊಡುತ್ತಿಯಿಲ್ಲವೋ ಕೇಳೋ ಅಂದ್ರು

ಸೈಂಧವ : ಎಲಾ ಚಾರವರ ನಿಮ್ಮ ರಾಜಪುತ್ರ ಧಾರು ಅವರ ಹೆಸರೇನು.

ಸಾರಥಿ : ಅರ್ಜುನ ದೇವರ ಮಗ ಅಭಿಮನ್ಯು.

ಸೈಂಧವ : ಹಾಗಾದರೆ ಅವನೇ ಬರಲಿ ಹೋಗಿ ಕಳುಹಿಸು.

ಅಭಿಮನ್ಯು : ಎಲಾ ಚಾರಕ ಏನಂದ ಸೈಂಧವ॥

ಸಾರಥಿ : ಅಪ್ಪೋ ನೀವೇ ಬರಲಿ ಅಂದ.

ಅಭಿಮನ್ಯು : ಒಳ್ಳೇದು ನನ್ನ ಹಿಂದೆ ಯಿರು.

ಸಾರಥಿ : ಒಳ್ಳೇದು ಹಾಗೆ ಮಾಡು ಮಹರಾಯ.

ಭಾಮಿನಿ

ಎಲವೋ ಸೈಂಧವ ಕೇಳು ನಿನ್ನಯ ತಲೆಯ ಕಾಯ್ವೆ ನಾನು.
ಈ ದಿನ ನಳಿನ ವ್ಯೂಹಕ್ಕೆ ದಾರಿಯನ್ನು ಬಿಡು ಯೆಂದನಭಿಮನ್ಯು.

ಅಭಿಮನ್ಯು : ಎಲಾ ಸೈಂಧವ, ಯೀ ದಿವಸ ಮುದಿಹಾರುವ ದ್ರೋಣನಿಂದ ನಿರ್ಮಿತವಾಗಿರುವ ಕುಟಿಲ ತಂತ್ರವೆಂಬ ನಳಿನ ವ್ಯೂಹವನ್ನು ನಾಶಮಾಡಿ, ಕುರುಕುಲದ ಬೇರನ್ನು ಕೀಳುವುದಕ್ಕೆ ಕಂಕಣವನ್ನು ಕಟ್ಟಿಕೊಂಡು ಬಂದಿರುತ್ತೇನೆ, ಛಲೋ ಮಾತಿನಲ್ಲಿ ವಳಗೆ ಹೋಗುವುದಕ್ಕೆ ದಾರಿಯನ್ನು ಕೊಟ್ಟರೆ  ನಿನ್ನ ತಲೆಯನ್ನು ಕಾಯುತ್ತೇನೆ ಬಿಡುವಂಥವನಾಗು॥

ಸೈಂಧವ : ಎಲಾ ಹುಡುಗನೆ, ನಿಮ್ಮ ದೊಡ್ಡಪ್ಪನಾದ ಭೀಮನ ಗತಿ ನಿನಗೂ ಕೂಡಿತು. ನಿನ್ನ ಪಾಡೇನು ಮಾಡಿ ಕಳುಹಿಸುತ್ತೇನೆ ಧಗಡಿ ದಾರಿಯನ್ನು ಖಂಡಿತ ಬಿಡಲಿಕ್ಕಿಲ್ಲ ಹಿಂದಿರುಗು.

ಅಭಿಮನ್ಯು : ಎಲಾ ಸೈಂಧವ, ನೀನು ದಾರಿಯನ್ನು ಕೊಡದೆ ಹೋದರೆ ನನ್ನ ಸಾಹಸವನ್ನು ತೋರಿಸಲೆ॥

ಸೈಂಧವ : ಎಲಾ ಅಭಿಮನ್ಯು ಅದೇನಿದ್ದರೂ ತೋರುವಂಥವನಾಗು॥

ಅಭಿಮನ್ಯು : ಹಾಗಾದರೆ ಬಾಣಗಳನ್ನು ತೆಗೆದುಕೊಳ್ಳುತ್ತೇನೆ, ರಣಾಗ್ರಕ್ಕೆ ಯೆದುರಾಗು॥

ಅಭಿಮನ್ಯು : ಎಲಾ ಸೈಂಧವ ಏನಾಯಿತು ನಿನ್ನ ಗತಿ ಈ ಕೈಗಾರಿಕೆ ಈಗ ಗೊತ್ತಾಗಿ ಇರಬಹುದಲ್ಲವೆ, ಮೂದೇವಿ.

 

(ಸೈಂಧವನ ಮೂರ್ಛೆ)

ಭಾಮಿನಿ

ಘುಡಿಘುಡಿಸುತಲೆ ಜಯದ್ರಥ ತಡೆದು ನಿಲ್ಲಲು
ತವಕದಿಂದಲಿ ಫಢ ಫಡ ಕೊಲ್ ತೊಲಗೆನುತ
ಮುಕ್ಕಡಿಯ ಮಾಡಿದನವನ ರಥವನು ಬಿಡದೆ
ಸಾರಥಿ ಸಹಿತ ಚಾಪವ ಕಡಿದ ಸಾಂಬ ಮುಖ್ಯರನು
ಜವಗೆಡಿಸಿದನು ಕಾಲಾಗ್ನಿ ರುದ್ರನ ಫಣೆಯಲಾ
ಅಭಿಮನ್ಯುವಿನ ಸಮರವೇನೆಂಬೇ

ಅಭಿಮನ್ಯು : ಅಯ್ಯ ಭಾಗವತರೆ, ಸೈಂಧವನ ಪಾಡು ಕಾಡುಪಾಲು ಮಾಡಿ ರಥವ ಮೂರು ತುಂಡಿಗೆ ಕಡಿದು, ಯಿವನ ಬಾಣಗಳನ್ನು ಸಹ ತುಕ್ಕಡ ತುಂಡಿಗೆ ಕತ್ತರಿಸಿ ಶಕುನಿ ಮುಂತಾದವರನ್ನು ಧ್ವಂಸವನ್ನು ಮಾಡಿರುತ್ತೇನೆ. ಯಿದೇ ಮೊದಲು ಲೆಕ್ಕ ಮಾಡಿಕೊಳ್ಳುತ್ತಿರಿ, ಎಲೈ ಚಾರಕ ಹೆದರಬೇಡ, ದಾರಿಯನ್ನು ಬಿಡಿಸಿರುತ್ತೇನೆ, ನುಗ್ಗಿ ವಳಗೆ ಹೊಡಿ ರಥ.

ವಚನ

ಈ ಪ್ರಕಾರವಾಗಿ ಅಭಿಮನ್ಯು ದ್ರೋಣರಿಂದ ನಿರ್ಮಿಸಲ್ಪಟ್ಟ ಚಕ್ರವ್ಯೂಹಕ್ಕೆ ಮದವೇರಿದ ಗಜ ಹೊಕ್ಕಂತೆ ನುಗ್ಗಿ, ಪ್ರಮುಖರನ್ನು ನೋಡಿ ಕೇಸರಿಯಂತೆ ಘರ್ಜಿಸಿ ಒಬ್ಬೊಬ್ಬರನ್ನಾಗಿ ಯುದ್ಧಕ್ಕೆ ಎಳೆಯುತಿರ್ದನು.

ಅಭಿಮನ್ಯು : ಅಯ್ಯ ಭಾಗವತರೆ, ರಾಷ್ಟ್ರಾಧಿಪತಿಯಾದಂಥ ಕೌರವೇಶ್ವರನು ತನ್ನ ಬೆಂಬಲದಲ್ಲಿ ಕರ್ಣ ಶಲ್ಯ ದ್ರೋಣಾಚಾರ್ಯರು ಕೃಪ, ಅಶ್ವತ್ಥಾಮ, ದುಶ್ಶಾಸನ ಮುಂತಾದ ಹನ್ನೊಂದು ಅಕ್ಷೋಹಿಣಿ, ಮಾರ್ಬಲವನ್ನು ಯಿಟ್ಟುಕೊಂಡು ನನಗೆ ಮೃತ್ಯುವಾಗಿ, ಶತೃವನ್ನು ಗೆಲ್ಲಬೇಕೆಂದು, ಯೀ ಶಸ್ತ್ರ ಪಂಡಿತನಾದ ದ್ರೋಣನಿಂದ, ಕುಟಿಲ ತಂತ್ರವೆಂಬ ಈ ಚಕ್ರವ್ಯೂಹವನ್ನು ರಚಿಸಿಯಿರುತ್ತಾನೆ ಬಲ್ಲಿರಾ, ಅಹುದೊ ಅಲ್ಲವೊ ನಾನು ವೋರ್ವ ಯೀ ವಿಷಯದಲ್ಲಿ ವಂಚನೆಯಿಲ್ಲದೆ ಕೊಂಚ ಯೀ ದ್ರೋಣರಲ್ಲಿ ವಿಜ್ಞಾಪಿಸಿಕೊಳ್ಳುತ್ತೇನೆ, ಪೂಜ್ಯರೆ ಶಸ್ತ್ರ ಪಂಡಿತರೇ, ಯೀ ದಿವಸ ಯುದ್ಧಕ್ಕೆ ಬದ್ಧರಾಗಿ ಕಂಕಣವನ್ನು ಕಟ್ಟಿಕೊಂಡು ಯಿರುವಿರಿ ಸಂತೋಷ. ನಾನು ವೋರ್ವ ಹೀಗಿರಲು ಯೇಕ ಕಾಲದಲ್ಲಿ ಯೆಲ್ಲರೂ ನನ್ನ ಮೇಲೆ ಯುದ್ಧಕ್ಕೆ ಬರುತ್ತೀರೊ, ಒಬ್ಬೊಬ್ಬರಾಗಿ ಬರುತ್ತೀರೊ ಅಪ್ಪಣೆಯಾಗಲಿ.