ದ್ರೋಣ : ಎಲಾ ಅಭಿಮನ್ಯು ಅರ್ಜುನನ ಮಗನೆ, ನಿನ್ನ ಘರ್ಜನೆಯನ್ನು ನಾನು ಬಲ್ಲೆ. ನಾಯಿ ಹೊಡೆಯುವುದಕ್ಕೆ ಬಣ್ಣದ ಕೋಲು ಬೇಕೆ? ನಿನ್ನನ್ನು ಕೊಲ್ಲುವುದಕ್ಕೆ ಈ ಪ್ರಮುಖರೆಲ್ಲಾ ಬರಬೇಕೊ? ಅಯ್ಯ ಲಕ್ಷಣ ರಾಷ್ಟ್ರಾಧಿಪನ ಪುತ್ರನೆ, ಪ್ರಥಮ ಮೊದಲು, ಯಿವನಲ್ಲಿ ಯುದ್ಧವನ್ನು ಮಾಡಿ ಪ್ರಸಿದ್ಧಿಯನ್ನು ಪಡೆ॥

ಲಕ್ಷ್ಮಣ : ಗುರುಗಳೇ ಅಪ್ಪಣೆ. ಎಲಾ ಅಭಿಮನ್ಯು ಅರ್ಜುನನ ಮಗನೆ ರಣಾಗ್ರಕ್ಕೆ ಯೆದುರಾಗೂ

ಅಭಿಮನ್ಯು : ಎಲಾ ಲಕ್ಷಣ, ಕೌರವನ ಮಗನೆ ಯೆದುರಿಗೆ ಬಾ

ಅಭಿಮನ್ಯು : ನಿನ್ನ ಪಾಡೇನಾಯಿತು, ನಾಯಿ ಮೂದೇವಿ ಗುರುಗಳೆ ಇಗೊ ಲೆಕ್ಕ ಮಾಡಿಕೊಳ್ಳಿರಿ, ಹೆಚ್ಚಲಿ ವಂದು ಯಿನ್ಯಾರು ಬರಲಿ॥

 

(ಲಕ್ಷ್ಮಣನ ಮೂರ್ಛೆ)

ದ್ರೋಣ : ಅಯ್ಯ ಕರ್ಣ ನೀನೂ ತೆರಳು

ಕರ್ಣ : ಗುರುಗಳೇ ಅಪ್ಪಣೆ. ಎಲಾ ಅಭಿಮನ್ಯು ರಣಾಗ್ರಕ್ಕೆ ಎದುರಾಗೂ

ಅಭಿಮನ್ಯು : ಎಲಾ ಕರ್ಣ ತಬ್ಬಲಿಗ ಬಾ ಯೆದುರಾಗೂ॥

 

(ಕರ್ಣನ ಮೂರ್ಛೆ)

ಅಭಿಮನ್ಯು : ಎಲಾ ಕರ್ಣ ನಿನ್ನ ಪಾಡೇನಾಯಿತು ಬೆಸ್ತ, ಮೂದೇವಿ, ದ್ರೋಣರೇ ಇಗೋ ಲೆಕ್ಕಾ ಮಾಡಿಕೊಳ್ಳಿರಿ. ಎರಡು ಇನ್ಯಾರು ಬರಲಿ॥

ದ್ರೋಣ : ಹೇ ಮಗನೆ ಅಶ್ವತ್ಥಾಮ, ಯೀ ತರಳನ ಮೇಲೆ ನೀನೂ ತೆರಳೂ॥

ಅಶ್ವತ್ಥಾಮ : ಆರ್ಯರೇ ಅಪ್ಪಣೆ. ಎಲಾ ಅಭಿಮನ್ಯು ರಣಾಗ್ರಕ್ಕೆ ಯೆದುರಾಗೂ

ಅಭಿಮನ್ಯು : ಎಲಾ ಅಶ್ವತ್ಥಾಮ ಹಾರುವ ಬ್ರಹ್ಮಹತ್ಯಕ್ಕೆ ಗುರಿ ಮಾಡಿದೆಯಲ್ಲಾ. ಯಿರಲಿ ನಾನು ಅನುಭವಿಸುವೆ ಯೆದುರಾಗೂ॥

ಅಭಿಮನ್ಯು : ಎಲಾ ಅಶ್ವತ್ಥಾಮ ನಿನ್ನ ಪಾಡೇನಾಯಿತು ನಾರಾಯಣಾಸ್ತ್ರ ಯೆಲ್ಲಿ ಹೋಯಿತು, ನಾಯಿ ಮೂದೇವಿ. ಸ್ವಾಮಿ ಗುರುಗಳೆ ನಿಮ್ಮ ಮಗ ಬಿದ್ದ ಮರತೀರಾ ಲೆಕ್ಕಾ ಮೂರು ಇನ್ಯಾರು ಬರಲಿ.

ದ್ರೋಣ : ಅಯ್ಯ ಕೌರವೇಶ್ವರಾ, ಮುಖವನ್ನು ಯೇಕೆ ನೋಡುತ್ತೀಯಾ ಯೀ ತರಳನನ್ನು ಸರಳಿನಿಂದ ನರಳಿಸುವಂಥವನಾಗೂ॥

ಕೌರವ : ಸ್ವಾಮಿ ತಾವು ಏಕೆ ದಯೆಮಾಡಿಸಬಾರದೂ॥

ದ್ರೋಣ : ಕೌರವ ನಿನ್ನ ಹಿಂದೆ ನಾನು ಬರುತ್ತೇನೆ. ನೀನು ಮುಂದು ನಾನು ಹಿಂದು. ನನ್ನ ಗತಿ ನನಗೆ ನಿನ್ನ ಗತಿ ನಿನಗೆ ಇದರಲ್ಲಿ ಒಬ್ಬರೂ ಬದುಕುವುದಿಲ್ಲ.

ಕೌರವ : ಸ್ವಾಮಿ ಹಾಗಾದರೆ ನಾನು ತೆರಳಲೆ. ಎಲಾ ತರಳ ಅಭಿಮನ್ಯು ಬಾಲಕ ಯುದ್ಧಕ್ಕೆ ನಿಲ್ಲುವಂಥವನಾಗೂ॥

ಅಭಿಮನ್ಯು : ಎಲಾ ಕೌರವ, ನಿನಗೆ ಕಡೆಗಾಲ ಕೂಡಿದೆ ತುರಗಾಗ್ರಕ್ಕೆ ಯೆದುರಾಗೂ॥

 

(ಕೌರವನ ಮೂರ್ಛೆ)

ಅಭಿಮನ್ಯು : ಎಲಾ ಕೌರವ ನಿನ್ನ ಗತಿಯೇನಾಯಿತು ನಾಯಿ ಮೂದೇವಿ, ಸ್ವಾಮಿ ಯೀಗ ಲೆಕ್ಕ ಮಾಡಿಕೊಳ್ಳಿರಿ ಯಿಲ್ಲಿಗೆ ಪ್ರಮುಖರು ಯೆಷ್ಟು ಜನವಾಯ್ತು

ದ್ರೋಣ : ನಾಲ್ಕು ಜನವಲ್ಲೋ ಅಯೋಗ್ಯಾ.

ಅಭಿಮನ್ಯು : ಇನ್ಯಾರನ್ನು ಕಳುಹಿಸುತ್ತೀಯೊ ಕಳುಹಿಸು.

ದ್ರೋಣ : ಎಲಾ ಅಯೋಗ್ಯ, ಯಿನ್ನಾರನ್ನು ಕಳುಹಿಸಲಿ. ಆಖೈರು ಭಾಗ ನಾನು ಯೆದುರಾಗಿರುತ್ತೇನೆ  ಬಾ ರಣಾಗ್ರಕ್ಕೆ.

ಅಭಿಮನ್ಯು : ಎಲಾ ಬಡ ಹಾರುವ ನಿನ್ನ ಡೊಳ್ಳನ್ನು ಹೊಡೆದು ಹಾಕುತ್ತೇನೆ, ಯೆದುರಾಗೂ॥

 

(ದ್ರೋಣನ ಮೂರ್ಛೆ)

ಅಭಿಮನ್ಯು : ಎಲಾ ದ್ರೋಣ ನಿನ್ನ ಪಾಡೇನಾಯ್ತು. ಯೀ ತರಳನ ಸರಳಿನಲ್ಲಿ ನರಳುವುದು ಹ್ಯಾಂಗಿರುತ್ತೆ ಮತ್ತೆ

ಪದ(ರಾಗಭೈರವಿಆದಿತಾಳ)

ಇನ್ನೇನೆಂಬೆನು ರಣದಿ ಅಭಿಮನ್ಯುವಿನಸ್ತ್ರಗಳಲಿ ಚೂರ್ಣವಾದುದು
ಗಜ ರಥವು ಬಲುಜೀರ್ಣವಾದುದು ಕುರುಬಲವೂ

ಅಭಿಮನ್ಯು : ಎಲಾ ಚಾರವರನೆ. ನೀನು ರಣಾಗ್ರಕ್ಕೆ ಬರುವಾಗ್ಗೆ ಯೆನ್ನ ಪರಾಕ್ರಮವನ್ನು ತಿಳಿಯದೆ ಹೆದರಿಕೊಂಡು ಹಿಮ್ಮೆಟ್ಟಿದ್ದೆಯಲ್ಲಾ. ಯೀಗಲಾದರೂ ನನ್ನ ಬಾಣ ಪ್ರಹಾರವನ್ನು ನೋಡಿದೆಯಾ. ಗಜ ರಥಗಳೆಲ್ಲಾ ಚೂರ್ಣವಾಗಿ ಕುರುಬಲವು ಜೀರ್ಣವಾಗಿ ಹೋದ ರೀತಿಯನ್ನು ಕಣ್ಣಾರೆ ಕಂಡೆಯಾ ತಣ್ಣಗಾಯಿತೆ ಮನಸ್ಸು ಮತ್ತೂ ಹೇಳುತ್ತೇನೆ.

ಪದ

ಪಥಗಾಣದೆ ಮುಂದೆ ಸಿಕ್ಕಿಹ ರಥದೊಳೆಯೊಳು ಧುಮ್ಮಿಕ್ಕಿ
ಹರಿಭಯದಲಿ ನಡುಗಿದರು ಸ್ತುತಿ ಸುತಪದಕೆರಗಿದರೂ

ಅಭಿಮನ್ಯು : ಎಲಾ ಸಾರಥಿ ಬಾ ಯಿಲ್ಲಿ ನೋಡು. ಅತಿರಥರು ಮಹಾರಥರು ನನ್ನ ರಣ ಕಟ್ಟಾಳುತನಕ್ಕೆ ಮುಂಗಾಣದೆ ಪಥದಿಂದ ಹಾರಿಬಿದ್ದು ಭಯದಿಂದ ನಡುಗುತ್ತಾ ನನ್ನ ಪಾದಕ್ಕೆ ಯೆರಗುವುದನ್ನು ಕಂಡೆಯಾ ಮತ್ತೂ ಹೇಳುತ್ತೇನೆ.

ಪದ

ಕೊರಳನು ಕೊಯ್ಯೆಂದೆನುತ ತಮ್ಮ ಬೆರಳನು ಬಾಯೊಳಗಿಡುತ
ಕರದ ಚಾಪವನು ಯಿಕ್ಕಿದರೂ ನಿಜಕರದಿ ಕೃಪಣವ ಕಚ್ಚಿದರೂ॥

ಅಭಿಮನ್ಯು : ಎಲೈ ಸಾರಥಿ, ಯೀ ಕುರುಕ್ಷೇತ್ರದಲ್ಲಿ ಬಿದ್ದಿರುವ ಯಿವರು ಜೀವಗಳ್ಳರೆಂಬುದಕ್ಕೆ ಸಂದೇಹವಿದೆಯೊ ಯಿಲ್ಲವೋ ನೋಡು. ನನ್ನ ಕೊರಳನ್ನು ಕಾಯಬೇಕಂತ ತಮ್ಮ ಬೆರಳನ್ನು ಬಾಯಿಯೊಳಗೆ ಯಿಟ್ಟುಕೊಂಡು ಕೈಯಲ್ಲಿರುವ ಆಯುಧವನ್ನು ಕೆಳಕ್ಕೆ ಹಾಕಿ ಬಾಯಿಯಲ್ಲಿ ಹುಲ್ಲು ಕಡ್ಡಿಯನ್ನು ಕಚ್ಚಿ ಅಡ್ಡಬಿದ್ದು ತಮ್ಮ ಜೀವವನ್ನು ಉಳಿಸಬೇಕಂಥ ಹ್ಯಾಗೆ ಪ್ರಯತ್ನಗಳನ್ನು ಮಾಡುತ್ತಾ ಯಿದ್ದಾರೆ ನೋಡಿರಯ್ಯ॥

ಸಾರಥಿ : ಮಹಾರಾಜನೆ ರಾಜಕಂಠೀರವ ನೋಡಿದೆನೂ

ಅಭಿಮನ್ಯು : ಎಲಾ ಚಾರಕ. ಕೊಂಚ ಹೊತ್ತು ಸಮರಶ್ರಮ ವಿಶ್ರಾಂತಿಯನ್ನು ತೆಗೆದುಕೊಂಡು ಬರುತ್ತೇನೆ, ಯಿಲ್ಲಿ ಬಿದ್ದಿರತಕ್ಕವರು ಎದ್ದು ಚೇತರಿಸಿಕೊಳ್ಳಲಿ ನೋಡುತ್ತಾ ಇರು.

ಭಾಮಿನಿ

ಅರಸ ಕೇಳಭಿಮನ್ಯುವಿನ ಝಡಿತಕೆ ಜರಿದುದಜ
ಪಾಂಡನೂಕಿದುವು ಕರಿತುರಗ ಕಾಲಾಳುಗಳು ನುಗ್ಗಾಯಿತು,
ಅಪರಿಮಿತವಾಗಿ ತರಣಿಸುತ ದ್ರೋಣಾದಿಗಳು,
ಮೈಮೆರೆದರರ್ಜುನನಣುಗನ ಭಯಕೆ ಕುರುಕುಲಾಗ್ರಣಿ
ಕಂಡು ಬೆರಗಾಗುತ್ತ ಯಿಂತೆಂದಾ

ಆಹಾ ದೈವವೆ ಈಹೊತ್ತಿನ ಯುದ್ಧದಲ್ಲಿ ಅಭಿಮನ್ಯುವಿನ ಹೊಡೆತಕ್ಕೆ ಈ ಭೂಮಿಯು ಬಿರಿಯುವಂಥದ್ದಾಯಿತು. ನನ್ನ ಹನ್ನೊಂದಕ್ಷೋಣಿಯ ಮಾರ್ಬಲದಲ್ಲಿ ಅಪರಿಮಿತವಾದ ಕರಿತುರಗ, ರಥ ಪದಾತಿ ಕಾಲಾಳುಗಳು ನುಗ್ಗಾಗುವಂಥದ್ದಾಯಿತು. ಅಯ್ಯೋ ಹರಹರಾ ಸ್ವಾಮಿ ಗುರುಗಳೇ, ಕರ್ಣ ಅಶ್ವತ್ಥಾಮರೆ, ಚೇತರಿಸಿಕೊಂಡು ಮೇಲಕ್ಕೆ ಏಳಿರಪ್ಪ ಅಭಿಮನ್ಯುಯಿಲ್ಲ.

ಅಭಿಮನ್ಯು : ಎಲಾ ಕೌರವ, ಸಮರ ವಿಶ್ರಾಂತಿಯನ್ನು ತೆಗೆದುಕೊಂಡು ಬಂದು ಯಿರುತ್ತೇನೆ, ಯನ್ನ ಸಾಹಸ ಹ್ಯಾಗೆ ಯಿದೆ. ಮುಂದೆ ನೋಡುವಂಥವನಾಗು॥

ಪದ
ರಾಗಶಂಕರಭರಣಮಟ್ಟತಾಳ

ಭಳಿರೆ ಪಾರ್ಥನಣುಗ ನಿನ್ನ ಬಲುಮೆಗಿನ್ನು ಸರಿಯು ಯಾರು
ಹಲವರ‌್ಯಾಕೆ ವಬ್ಬ ಸಾಕು ಕುಲಕೆ ನೀನೂ॥

ಕೌರವ : ಭಳಿರೆ ಪಾರ್ಥನ ಸುಕುಮಾರನಾದ ಅಭಿಮನ್ಯುವೆ, ನಿನ್ನ ಸಾಮರ್ಥ್ಯಕ್ಕೆ ಮೆಚ್ಚಬೇಕಾಗಿದೆ. ಅಚ್ಯುತನಳಿಯ, ನನ್ನ ಹೊಟ್ಟೆಯಲ್ಲಿಯೂ ಹಲವು ಮಕ್ಕಳು ಹುಟ್ಟಿರುತ್ತಾರೆ, ಪ್ರಯೋಜನವೇನು ನಿನ್ನಂಥವನು ಕುಲಕ್ಕೆ ಶಿಖಾಮಣಿರತ್ನದೋಪಾದಿಯಲ್ಲಿ ವಬ್ಬ ಹುಟ್ಟಿದರೆ ಸಾಕು. ನಿನ್ನ ಪರಾಕ್ರಮಕ್ಕೆ ಸಮಾನರಾದವರು ಯಿನ್ಯಾರು ಯಿರುವರು, ಭಲಾ ಮೆಚ್ಚಿದಂಥವನಾದೆ.

ಪದ

ಫಲುಗುಣನು ಕೃತಾರ್ಥನಾದ ನೊಲಿದು ನಿನ್ನ ಪಡೆದ ಬಗೆಯು
ಅಸದಳವೆಂದು ಕೌರವೇಶ ತಲೆಯ ತೂಗುತಾ॥

ಕೌರವ : ಭಳಿ ಭಳಿರೆ ಬಾಲಕ, ಯೀ ಹೊತ್ತಿಗೆ ನಿನ್ನನ್ನು ಹುಟ್ಟಿಸಿದ ಅರ್ಜುನನು ಕೃತಾರ್ಥನಾದ, ಸಾರ್ಥಕವಾಯಿತು, ಶಹಬ್ಬಾಷ್ ಹೇ ಕ್ಷತ್ರಿಯ ಕುಲದ ಮರಿಯೇ, ನಾನಾದರು ಯೀ ತರಳನನ್ನು ಸರಳಿನಿಂದ ನರಳಿಸದೇ ಹೊಗಳಿದರೆ ಫಲವೇನು, ತಕ್ಕ ಪ್ರಯತ್ನದಿಂದ ಯೀ ಹುಡುಗನನು ಕೊಲ್ಲತಕ್ಕ ಕಾರ್ಯವನ್ನು ಸಾಧಿಸುತ್ತೇನೆ.

ಪದ

ಎನುತ ಭಾರಿಯ ಧನುವಗೊಂಡು ಕನಲಿ ಮನ್ನೆಯರನು
ಜರಿದು ತನಯನೊಡನೆ ತರುಬಿನಿಂದ ರಣ ಸಮರ್ಥನೂ॥

ಕೌರವ : ಅಯ್ಯ ಭಾಗವತರೆ, ನನ್ನ ಸೇನೆಯಲ್ಲಿರತಕ್ಕವರು ವಬ್ಬರೂ ಕೆಲಸಕ್ಕೆ ಬಂದವರಲ್ಲ, ಆದರೆ ತನ್ನ ಕಾರ್ಯವೇ ಕಾರ್ಯ, ನಾನು ಯೀ ಬಾಣವನ್ನು ತೆಗೆದುಕೊಂಡು ಈ ಹುಡುಗನ ಸಾಹಸವನ್ನು ನಿಲ್ಲಿಸಿ ಜಯಶೀಲನಾಗುತ್ತೇನೆ, ಎಲಾ ತರಳನೆ ನಿನ್ನನ್ನು ನರಳಿಸುವ ಸರಳುಗಳನ್ನು ತೆಗೆಯುತ್ತೇನೆ ಯದುರಾಗಿ ಬಾ॥

ಅಭಿಮನ್ಯು : ಹೇ ಅಯೋಗ್ಯ, ಸಮರ ಸನ್ನದ್ಧನಾಗಿ ಯೆದುರು ನಿಂತಿದ್ದೇನೆ, ಬೊಗುಳೊ-

ಪದ

ನೀನು ಕೆಡಲುಬೇಡ ಗುಣದಿ ಪೋಗೊ ಯೆನುತ ಕಣೆಯ
ಮಳೆಯ ಕರೆದನಾಗ ತಾನು ಅಣುಗ ಯೆಣಿಕೆಯಿಲ್ಲದೇ॥

ಕೌರವ : ಮಗು ಯಿದು ಘಟವಾದ ಕುರುಕ್ಷೇತ್ರಕ್ಕೆ ಬಂದು ಹೋರಾಡಿ ನಿನ್ನ ತಲೆಯನ್ನು ನೀಗಿಕೊಳ್ಳಬ್ಯಾಡ. ಬುದ್ಧಿ ಮಾತು ಹೇಳುತ್ತೇನೆ, ಕೇಳುವಂಥವನಾಗೂ. ಯಿದೂ ಅಲ್ಲದೆ ನಿನ್ನನ್ನು ನೋಡಿದರೆ ಕೇವಲ ಹುಡುಗನಂತೆ ತೋರುತ್ತೀಯ, ಇದೋ ನಿನ್ನ ಮೇಲೆ ಅನೇಕ ಅಸ್ತ್ರಗಳನ್ನು ಬಿಟ್ಟು ಯಿದ್ದೇನೆ ಸುಧಾರಿಸಿಕೊಳ್ಳುವಂಥವನಾಗು॥

ಅಭಿಮನ್ಯು : ಎಲಾ ಕೌರವ ಹಾಗಾದರೆ ಹೇಳುತ್ತೇನೆ ಕೇಳು.

ಪದ

ನಾನು ಅಣುಗನಾದರೆನ್ನ ಬಾಣಗಳಿಗೆ ಬಾಲಕತನವೆ
ಹೊಡಿ ನೋಡೆನುತ ಎಚ್ಚಲಾಗಿ ಶರಗಳಾ ॥

ಅಭಿಮನ್ಯು : ಎಲಾ ಕೌರವ, ಬಾಯಿಗೆ ಬಂದಂತೆ ನಿನ್ನ ಹೆಗ್ಗಳಿಕೆಯನ್ನು ಕೊಚ್ಚಿಕೊಂಡು ಯೆಚ್ಚರವಿಲ್ಲದೆ ಹುಚ್ಚನಾಗಬೇಡ, ನಾನು ಬಾಲಕನಾದರೂ ನನ್ನ ಕೈಯಲ್ಲಿರುವ ಬಾಣಗಳಿಗೆ ಬಾಲಕತನವಿಲ್ಲ. ಇದನ್ನು ಪರೀಕ್ಷೆ ಮಾಡಬೇಕಾದರೆ ಯಿದೇ ಮೊದಲು, ಹೆಚ್ಚಾಗಿ ಬಿಡುವುದಿಲ್ಲ ವಂದು ಬಾಣವನ್ನು ಬಿಟ್ಟು ಯಿರುತ್ತೇನೆ ರಣಾಗ್ರಕ್ಕೆ ಯೆದುರಾಗೂ-