ಪದ

ಹರಿಯ ಹೊಗುವ ಫಲಗುಣನ ಯೆಲ್ಲಿ ತೋರುವೆ ಯನೆ
ಕಲಿ ಯದುರಿನಲ್ಲಿ ನಿಲ್ಲಲು ಹರಿಯು ಕಂಡನು ಸೈಂಧವನಾ॥

ಸೈಂಧವ : ಅಯ್ಯ ಕೌರವೇಶ್ವರಾ, ಯಂನ ವೈರಿಯಾದ ಅರ್ಜುನನು ಅಗ್ನಿಪ್ರವೇಶ ಧಾವಲ್ಲಿ ಹೋಗುತ್ತಾನೆ ನೋಡುವುದಕ್ಕೆ ಜಾಗ್ರತೆಯಾಗಿ ಹೋಗೋಣ, ಹೊರಡುವಂಥವನಾಗಯ್ಯ ಕೌರವೇಶ್ವರಾ॥

ಪದ

ತಡವ ಮಾಡದಿರೆಲವೊ ಫಲುಗುಣ ತೊಡು ತೊಡು ಅಸ್ತ್ರವಾ
ವೈರಿಯ ಕೆಡುಹು ಬೇಗ ಪೇಳೆನಲು ಮಾಳ ನುಡಿದನು ನರನು

ಕೃಷ್ಣ : ಯಲೈ ಫಲುಗುಣನೆ, ಇಕೊ ನಿನ್ನ ವೈರಿಯು ನಿನ್ನ ಇದಿರಿನಲ್ಲಿ ನಿಂತಿರುತ್ತಾನೆ. ಶಂಕರನಿಂದ ಪಡೆದಿರುವ ಪರ‌್ವತಾಸ್ತ್ರವನ್ನು ತೊಟ್ಟು ಜಾಗ್ರತೆ ಇಂದ ಶಿರಶ್ಛೇದನ ಮಾಡುವಂಥವನಾಗಯ್ಯ ಪಾರ್ಥ.

ಭಾಮಿನಿ

ದೇವ ಪರಶಿವ ರವಿ ಅಸ್ತಮಿಸಿದನು ನಿಂನ ವಾಕ್ಯವ ಕಂಡರೆ ನನಗೆ ಭಯವು ಬೇಡವೋ

ಅರ್ಜುನ : ಹೇ ಪರಮಾತ್ಮ,ೆ ಸೂರ‌್ಯನು ಪಶ್ಚಿಮಾಂಬುಧಿಯಲ್ಲಿ ಮುಳುಗುವಂಥವನಾದ. ಹೇ ಗೋವಿಂದ ನಾನು ಮಾಡಿದ ಶಪಥವು ತೀರಲಿಲ್ಲ. ಸೈಂಧವರಾಜನಂನು ಸಂಹಾರ ಮಾಡಿದೆಯಾದರೆ ಸಮರ್ಥರಾದ  ನಂದನರು ಅಧರ್ಮಕ್ಕೆ ಗುರಿಯಾದರೆಂದು, ಈ ಲೋಕವೆಲ್ಲಾ ಪ್ರಸಿದ್ಧಿಯಾಗುವ ಕಾರಣ ಸರ‌್ವಥಾ ಬಾಣವನ್ನು ತೊಡಲಾರೆನು ಅಗ್ನಿ ಪ್ರವೇಶವಾಗುವೆನೈ ಪರಮಾತ್ಮನೆ॥

ಪದ

ಗಾಢದಿಂದ ಸೈಂಧವನಾ ಕೊಲೆ ಮಾಡಲಾಗದು
ಎನಲು ಧನುವಿನೊಳ್ ತಡೆದನು ಪಾಶುಪತಾಸ್ತ್ರವನು॥

ಕೃಷ್ಣ : ಅಯ್ಯ ಫಲುಗುಣನೆ, ಅನುಮಾನವೇತಕ್ಕೆ. ಸೂರ‌್ಯನಾರಾಯಣನ ದರುಶನವನ್ನು ತೋರಿಸುತ್ತೇನೆ. ಹೆದರಬೇಡ. ಬಾಣ ಪ್ರಯೋಗವನ್ನು ಮಾಡಿ ಸೈಂಧವನ ತಲೆಯನ್ನು ತೆಗೆಯುವಂಥವನಾಗೈ ಫಲುಗುಣನೆ.

ಅರ್ಜುನ : ಹೇ ಭಾವಯ್ಯ, ನಮ್ಮ ಮಾನ ಅಭಿಮಾನವು ತಮ್ಮ ಪಾದವಂನೆ ಹೊಂದಿರುತ್ತೆ. ನಿಂಮ ಮಾತಿನಂತೆ ಬಾಣವನ್ನು ಹೂಡಿ ವೈರಿಯಾದ ಸೈಂಧವನ ಸಂಹಾರ ಮಾಡುತ್ತೇನೆ, ನೋಡುವಂಥವರಾಗಿ.

ಕೃಷ್ಣ : ಅಯ್ಯ ಫಲುಗುಣ, ಈ ಸೈಂಧವನ ತಂದೆಯಾದ ವೃದ್ಧ ಕ್ಷತ್ರಿಯನು, ಯಂನ ಕಂದನ ಶಿರಸ್ಸನ್ನು ಯಾರು ಭೂಮಿಗೆ ಕೆಡಹುವರೊ ಅಂಥವರ ಶಿರಸ್ಸು ಸಾಸಿರ ಹೋಳಾಗಲೆಂದು ತಪಸಿರುವನು. ಈ ಸೈಂಧವನ ಶಿರಸ್ಸು ಇವನ ತಂದೆಯಾದ ವೃದ್ಧ ಕ್ಷತ್ರಿಯನ ಕೈಗೆ ಬೀಳುವಂತೆ ಬಾಣಕ್ಕೆ ಆಜ್ಞೆ  ಮಾಡಿ ಸರಿಯಾಗಿ ಬಾಣವನ್ನು ಹೂಡಿ ಹೊಡೆವಂಥವನಾಗೈ ಫಲುಗುಣನೆ.

ಅರ್ಜುನ : ಹೇ ಭಾವಯ್ಯ, ತಂಮ ಅಪ್ಪಣೆಯಂತೆ ಬಾಣಕ್ಕೆ ಆಗ್ನೆಯಂ ಮಾಡಿ ಬಾಣವಂನು ಹೂಡಿ ಹೊಡೆಯುತ್ತೇನೆ, ನೋಡುವಂಥಾವರಾಗಿ ಭಾವಯ್ಯ.

ಅರ್ಜುನ : ಹೇ ಪಕ್ಷಿ ವಾಹನನೆ, ಬಾಣವಂನು ಹೂಡಿ ಸೈಂಧವನನ್ನು ಸಂಹಾರ ಮಾಡುವಂಥವನಾದೆನು. ಸೂರ‌್ಯ ನಾರಾಯಣನು ಕಾಣಿಸುವುದಿಲ್ಲವಲ್ಲಾ, ಅಂಣೈಯ ಧರ‌್ಮನಂದನ ಅಧರ‌್ಮಕ್ಕೆ ಗುರಿಯಾದೆನಲಾ ಹೇ ಭಾವಯ್ಯ ಮೋಸ ಹೋದೆನಲಾ. ಅಯ್ಯೋ ದೈವವೆ ಈ ಲೋಕದಲ್ಲಿ ಅಪಹಾಸ್ಯಕ್ಕೆ ಗುರಿಯಾದೆನಲ್ಲಾ ಹರಿಯೆ ದ್ರೋಣಾದಿ ಆಡಿಕೊಳ್ಳುವುದಕ್ಕೆ ಗುರಿಯಾದೆನೆ ಶಿವನೆ ಮಹದೇವನೇ.

ಕೃಷ್ಣ : ಯಲೈ ಫಲುಗುಣ ಯೋಚನೆಯನ್ನು ಬಿಡು. ರವಿಗೆ ಮರೆ ಮಾಡಿದ ಚಕ್ರವನ್ನು ತೆಗೆಯುತ್ತೇನೆ. ನಿಂನ ಭಾಷೆಯು ನೆರವೇರುವಂತೆ ಸೂರ‌್ಯದರುಶನ ಮಾಡುವಂಥವನಾಗಯ್ಯ ಪಾರ್ಥ.

ಅರ್ಜುನ : ಹೇ ಮಹಾನುಭಾವನಾದ ಪರಮಾತ್ಮನೆ, ನಿಂನಯ ಮಾತಿನಂತೆ ಸೂರ‌್ಯ ದರುಶನವನು ಮಾಡಿ ನಿಂಮ ಕರುಣ ಕಟಾಕ್ಷವು ನಂಮ ಮೇಲೆ ಇರಲಿಕ್ಕಾಗಿ ಯಂನ ಭಾಷೆ ನೆರವೇರಿತು. ಭಕ್ತ ಪರಾಧೀನ ಯಂಬ ವಚನಕ್ಕೆ ನ್ಯೂನತೆಯು ಬರಲಿಲ್ಲವೈ ಭಾವ ಪ್ರಾಣ ಸಂಜೀವ.

ಅರ್ಜುನ : ನಮೊ ನಮೋ ಅಂಣೈಯಾ ಧರ‌್ಮನಂದನ.

ಧರ‌್ಮರಾಯ : ಶಿರ ಸಾಷ್ಟಾಂಗ ಬಿಂನಹವೈ ಪರಮಾತ್ಮನೆ.

ಕೃಷ್ಣ : ಆಯುಷ್ಮಂತನಾಗು.

ಸೌಭದ್ರೆ : ಸಾಷ್ಟಾಂಗ ವಂದನವೈ ಅಂಣೈಯ್ಯ

ಕೃಷ್ಣ : ನಿನಗೆ ಮಂಗಲವಾಗಲಿ ಸೌಭದ್ರ.

ಕೃಷ್ಣ : ಹೇ ಸತ್ಯಸಂಧನಾದ ಧರ‌್ಮಜನೆ, ನಿನಗೆ ಯಾವ ಕಷ್ಟವು ಸಂಭವಿಸಿದಾಗ್ಯೂ ಜಾಗ್ರತೆಯಾಗಿ ಪರಿಹಾರವಾಗುವದನ್ನು ನೋಡಿ ನನ್ನ ಮನಸ್ಸು ಹಾಲಿಗೆ ತುಪ್ಪವನ್ನು ಬೆರೆಸಿದಷ್ಟು ಸಂತೋಷಪಟ್ಟೆನೈಯ್ಯ ಧರ‌್ಮನಂದನಾ॥

ಭಾಮಿನಿ

ಜಲಜನಾಭ ನಿಂನ ಮಹಿಮೆಯಂ ಪೇಳುವರ‌್ಯಾರು ತ್ರಿಜಗದಿ ಸಲಹಬೇಕೈ ಯಂಮಾ.

ಧರ‌್ಮ : ಸರಸಿಜಾಕ್ಷನಾದ ಗೋವಿಂದನೆ, ನಿಂನ ಮಹಿಮಾ ಶಕ್ತಿ ನೆಲೆಯಂನು ತಿಳಿಯುವುದಕ್ಕೆ ಯೆಂಮಿಂದ ಆಗುವುದೆ. ಗೋವಿಂದನೆ ನಮಗೆ ವದಗಿರುವಂಥ ಶತ್ರುಭಯವನ್ನು ಕಂಟಕದಲ್ಲಿ ಸಂಪೂರ್ಣವಾದ ಕೃಪಾ ಕಟಾಕ್ಷವಿತ್ತು ಕಾಪಾಡಿದಲ್ಲದೆ, ನಂಮಿಂದ ಆಗಲರಿವುದಯ್ಯ ದೇವ ಮಹಾನುಭಾವ॥ತಂಮಂದಿರಾದ ಭೀಮ ಅರ್ಜುನರೆ ಅಂತು ಸೌಭದ್ರೆ ಎಲ್ಲರೂ ಸೇರಿ ಲೋಕೋದ್ಧಾರಕನಾದ ಪರಮಾತ್ಮನ ಕುರಿತು ಸರ‌್ವರು ಮಂಗಳವಂನು ಮಾಡುವಂಥವರಾಗಿ॥

ಮಂಗಳಂ

ಮಂಗಳಾರತಿ ಅಂಗನೆಯರೆಲ್ಲಾ॥ಶ್ರೀರಾಮಚಂದ್ರಗೆ ಅಂಗನಮಣಿಯರು ತಂದು ಬೆಳಗಿರಿ ಧೀರ ಹನುಮನಿಗೆ ಬೆಟ್ಟವ ಬೆರಳೊಳು ಎತ್ತಿದಾತನಿಗೆ॥ಪೃಥ್ವಿಯಲ್ಲಿ ನೆಲಸಿ ಇರುವ ಶಂಭುಲಿಂಗನಿಗೆ ಸುತ್ತಾ ಕಾವೇರಿ ನಡುವೆ ಶ್ರೀರಂಗ॥ಮಧ್ಯದಲ್ಲಿ ನೆಲಸಿ ಇರುವ ರಂಗನಾಥನಿಗೆ॥ಪುರವ ಮಾವಿನಕೆರೆಯ ಬಳಿಯೊಳು ನೆಲಸಿ ಇರುವ ರಂಗನಾಥನಿಗೆ ಎತ್ತಿರಾರತಿ ಶ್ರೀರಾಮಚಂದ್ರಗೆ.

ಸಂಪೂರ್ಣ