ಭಾಮಿನಿ

ವರ ಧನುವ ಶಸ್ತ್ರಾಸ್ತ್ರ ಕವಚವನಿರಿಸಿ ಕೈ ವಡುವರಿಗೆ ಕನಲುತ
ಅರಮನೆಗೆ ಹೊಕ್ಕನು ಯುಧಿಷ್ಠಿರ ರಾಯನಾಲಯವಾ॥

ಅರ್ಜುನ : ಅಗ್ರಜನ ಆಸ್ಥಾನದಲ್ಲಿರುವ ಭಟರುಗಳು ದುಗುಡವಾಗಿ ಕಾಣುವುದಲ್ಲದೆ ಅಗ್ರಜನು ಯಿರುವುದು ಮಗನ ಮರಣವನ್ನು ನಿಶ್ಚಯವೆಂದೂ ಸೂಚಿಸುತ್ತಿದೆಯಲ್ಲಾ. ಯೆಲ್ಲರೂ ಮೌನದಿಂದಿರುತ್ತಾರೆ, ಶಿವ ಶಿವಾ ಯೇನು ಮಾಡಲೀ.

ಪದರಾಗಅಷ್ಟತಾಳ

ತಿಳಿದುದಾಕ್ಷಣ ಪುತ್ರ ಶೋಕ ಲಕ್ಷಣಗಳೂ ಅಂಣಾ ಪೇಳೈ
ಕಳವಳಪಡುತಿದೆ ಮನ ಬೇಗ ವುಸುರಯ್ಯ ಅಣ್ಣ ದೇವಾ॥

ಅರ್ಜುನ : ಆಹಾ ಅಗ್ರಜನೆ, ನಿಮ್ಮನ್ನು ನೋಡಿದರೆ ಪುತ್ರಶೋಕದಿಂದ ಯಿರುವಂತೆ ಕಾಣುತ್ತದೆ ಮತ್ತು ನನ್ನ ಮನಸ್ಸು ಕಳವಳಪಡುತ್ತಿದೆ. ಬೇಗನೆ ಹೇಳೈ ಅಗ್ರಜಾ ಮತ್ತೂ ಹೇಳುತ್ತೇನೆ.

ಪದ

ಕಂದನು ಯೆಲ್ಲಿಗೆ ಪೋದನೆಂಬುದ ಯೀಗ ಅಣ್ಣ ಪೇಳೈ
ಹಿಂದಿನ ಚಕ್ರವ್ಯೂಹದಿ ಹತವಾದನೊ ಹಗೆಯರೋಳ್ ಅಣ್ಣ ಪೇಳೈ॥

ಅರ್ಜುನ : ಆಹಾ ಅಗ್ರಜನೆ, ನನ್ನ ಕಂದನು ಯೆಲ್ಲಿಗೆ ಹೋಗಿರುವನೂ ಮತ್ತು ಹಿಂದಿನ ಚಕ್ರವ್ಯೂಹದಲ್ಲಿ ಶತೃಗಳಿಂದ ಹತನಾದನೊ ಯಾವುದನ್ನೂ ಹೇಳಬಾರದೆ ಅಗ್ರಜ॥

ಪದ

ತಂದೆಯನ್ನು ಧೃತಿಗೆಡಿಸಬೇಡವೊ ಯಿಂನು ಅಣ್ಣ ಪೇಳೈ
ಕಂದನೂ ಯೀ ದಿನ ಮಣ್ಣು ಪಾಲಾದನೆ ಅಣ್ಣ ಕೇಳೈ॥

ಅರ್ಜುನ : ಆಹಾ ಅಗ್ರಜನೆ ನನ್ನನ್ನು ವೃಥಾ ಯಾತಕ್ಕೆ ಬಳಲಿಸುತ್ತೀಯಾ ಈ ದಿನ ಮಗನು ಮಣ್ಣು ಪಾಲಾದನೆಂದು ಯಾಕೆ ಹೇಳಬಾರದೆ ಅಗ್ರಜಾ॥

ಭಾಮಿನಿ

ಮಕ್ಕಳೊಳು ನೋಡಿದನು ಕಂದನು ಕಾಣದಿರೆ ಸಿಕ್ಕಿದರೆ ಲಾಲೇಸು
ಮಾಡಿದಿರೇ ಕೊಳುಗುಳದೀ ಹಾಳುಗಳೆನುತ ಭೂಪತಿಗೆ ಪೊಡಮಟ್ಟೇ॥

ಅರ್ಜುನ : ನಮೋನ್ನಮೋ ಅಗ್ರಜಾ, ಯೀ ಸಭೆಯಲ್ಲಿರುವ ಮಕ್ಕಳುಗಳಲ್ಲಿ ಯೆಲ್ಲಿ ನೋಡಿದರೂ ಅಭಿಮನ್ಯು ಕಾಣುವುದಿಲ್ಲವಲ್ಲಾ ಕದನ ಕಲಿಗಳಾದ ಭಟರುಗಳಿದ್ದು ಯನ್ನ ಕಂದನನ್ನು ರಣಕ್ಕೆ ಬಲಿಯನ್ನು ಕೊಟ್ಟುಬಿಟ್ಟಿರಾ ಆಹಾ ದೈವವೆ ಮುಂದೆ ಲೇಸಾಯ್ತು ಅಯ್ಯೋ ಶಿವ ಶಿವಾ ಈ ಶೋಕವನ್ನು ಯೆಂತು ಮರೆಯಲಿ. ಆಹಾ ದೈವವೆ ಮಗು ಅಭಿಮನ್ಯು ಯೆಲ್ಲಿ ಅಡಗಿಕೊಂಡಿರುವೆಯೋ ಕಂದ ತಂದೆ ಬಂದನೆಂದು ವೋಡಿ ಬಂದು ವಂದು ಮಾತನಾಡಬಾರದೆ ಮುದ್ದು ಬಾಲಕ.

ಭಾಮಿನಿ

ನೋಡುವೆನೆಂದರೆ ಬಾಲನ ಶಿರ ಕಾಣೆ ರೂಢಿಯೊಳು
ಭೂರಿಬಲ ಸಭೆಯಲಿ ಯೆನ್ನ ಕುಮಾರನ
ಕಡೆಗಾಣೆನೀ ಪರಿವಾರದೊಳಗೆಂದೆನುತ ಬಂದೆರಗಿದಳು ಸೌಭದ್ರೆ॥

ಸೌಭದ್ರೆ : ಹೇ ರಮಣ ಹೇ ಕಾಂತ, ಮೂರ್ಛೆಯಿಂದ ಯಾಕೆ ಮಲಗಿರುವೆ. ಯೇಳಿ ನಿಮಗೆ ವಂದಿಸುವೆನು ಆಹಾ ರಮಣ ಯೀ ಸಪ್ತಾಂಗ ಲಕ್ಷಣವುಳ್ಳ ಸಭೆಯಲ್ಲಿ ಯೆನ್ನ ಕುಮಾರ ಕಂಠೀರವನು ಯೆಲ್ಲಿಯೂ ಕಾಣುವುದಿಲ್ಲವಲ್ಲಾ ಆಹಾ ದೈವವೆ ಏನು ಮಾಡಲಿ.

ಪದನೀಲಾಂಬರಿಆದಿತಾಳ

ಸುತನು ಯೆಲ್ಲೀ ಪೋದಾ ರಮಣ ಪ್ರಾಣರತುನಾ ತಾನೇನಾದ
ಪತಿಯೇ ನೀವೂ ತೋರಿಸೆಂದೂ ಅತಿ ದುಃಖಾದಿಂದ ನೊಂದು॥

ಸೌಭದ್ರೆ : ಹೇ ರಮಣ, ಯನ್ನ ವುದರದಲ್ಲಿ ಪುಟ್ಟಿದ ಮಗನು ಯೆಲ್ಲಿ? ಯನ್ನ ಪ್ರಾಣರತ್ನವೂ ಯೆಲ್ಲಿ. ಆಹಾ ಕಾಂತನೆ, ಅತಿ ದುಃಖದಿಂದ ಯಿರುವ ನಿಮ್ಮ ಸತಿಗೆ ಸಮಾಧಾನವನ್ನು ಹೇಳದೆ ಯಾಕೆ ಮೌನದಲ್ಲಿರುವಿರಿ ಕಾಂತ॥

ಪದ

ಬಾರೈ ಕಂದಾ ಪಿತನಾ ಬಳಿಗೆ ತೋರೇ ಪ್ರೇಮವನ್ನು
ನೀನೂ ಕರದಿ ಮಯ್ಯ ತಡವರಿಸಯ್ಯ॥

ಸೌಭದ್ರೆ : ಆಹಾ ಕಂದ, ನಿಮ್ಮ ತಂದೆ ಬಂದಿರುವರಲ್ಲಾ. ಅವರ ಬಳಿಗೆ ಯೆಂದಿನಂತೆ ಬಂದು  ಪ್ರೇಮವನ್ನು ತೋರಿಸಿ ನಿನ್ನ ಕೋಮಲವಾದ ಹಸ್ತದಿಂದ ಮೈಯನ್ನು ತಡವರಿಸಿ ಗಾಯವನ್ನು ನೋಡಿ ಮರುಗುತ್ತಿದ್ದೆಯಲ್ಲಾ ಕಂದ. ಶತೃಗಳೆಂಬ ಆನೆಗೆ ಸಿಂಹದೋಪಾದಿಯಲ್ಲಿದ್ದ ಮುದ್ದು ಕಂದ ಅಭಿಮನ್ಯು ಯೆಲ್ಲಿ ಹೋಗಿ ಅಡಗಿಕೊಂಡಿರುವೆಯೋ ಕಂದ॥

ಅರ್ಜುನ : ಆಹಾ ರಮಣಿ ಸೌಭದ್ರೆ ಸುರಪುರಕ್ಕೆ ತೆರಳಿದ ಮಗನಿಗೆ ಯಾಕೆ ದುಃಖಪಡುವೆ ಹೇಳುತ್ತೇನೆ ಕೇಳು॥

ಭಾಮಿನಿ

ಅರಸ ಕೇಳಿಂತಳುವ ಕಾಂತೆಯ ಸುರಿವ ಕಂಬನಿಯನ್ನು
ಸೆರಗಿಂದೊರಸಿ ಬಿಡು ಬಿಡು ಶೋಕವನು॥
ಸಂತಾಪದಲಿ ಬೆಂದುದೊಡಲೆಂದು ಕಡುನೊಂದು ಸಂತೈಸಿ॥

ಅರ್ಜುನ : ಹೇ ರಮಣೀ ಸೌಭದ್ರೆ, ಸುರಪುರಕ್ಕೆ ತೆರಳಿದ ಮಗನಿಗೆ ಯಾಕೆ ಅತ್ತು ಕಣ್ಣೀರು ಸುರಿಸುತ್ತೀಯ. ಶೋಕವನ್ನು ಬಿಡು ಬಿಡು. ಮಗನನ್ನು ಹಡೆದ ಒಡಲು ಹಾಳಾಯ್ತು. ಸಮಾಧಾನದಿಂದಿರು ನಡೆ ಪಾಳಯಕ್ಕೆ.

ಸೌಭದ್ರೆ : ಕಾಂತನೇ ನಾನು ಹೋಗುವೆನು.

ಭಾಮಿನಿ

ತರಹರಿಸಿ ಬಾಯಾರಿ ತನ್ನಯ ತರಳನಾ ಯೆಡೆ ಹೇಳು ಹೇಳೈ
ಯಿಂದು ಬಳಲಿಸಬೇಡಾ ಯೆಂದಗ್ರಜನ ಬೆಸಗೊಂಡ॥

ಅರ್ಜುನ : ಆಹಾ ಅಗ್ರಜಾ, ಪುತ್ರ ಶೋಕದಿಂದ ಬಾಯಾರಿ ವ್ಯಥೆಪಡುತ್ತಿರುವ ಎನ್ನನ್ನು ಹೆಚ್ಚಾಗಿ ಬಳಲಿಸಬೇಡ. ಮಗನೆಲ್ಲಿರುವನು ಜಾಗ್ರತೆ ಹೇಳಬಾರದೆ ಅಗ್ರಜಾ॥ಆಹಾ ಅಗ್ರಜನು ಕೂಡ ಪುತ್ರ ಶೋಕದಿಂದ ಕ್ಲುಪ್ತನಾಗಿ ಮಗನ ಮರಣ ವಾರ್ತೆಯನ್ನು ಯನ್ನೊಡನೆ ಹ್ಯಾಗೆ ಹೇಳಲೆಂಬ ಸಂಕೋಚದಿಂದ ಮೌನದಿಂದಿರುವನು. ಅಭಿಮನ್ಯು ಜೀವದೊಂದಿಗಿದ್ದರೆ ಯನ್ನೊಡನೆ ಯಿದುವರೆಗೆ ಮಾತನಾಡದೆ ಯಿರುತಿರ್ದನೇ ಗೊತ್ತಾಯಿತು ಹೇಳುತ್ತೇನೆ॥

ಭಾಮಿನಿ

ನುಡಿದು ಫಲವೇನಿನ್ನು ನಾನಿನ್ನೊಡೆಯರಿಲ್ಲದ ವಸ್ತುವಾದೆನೂ
ವಸೆದ ಪುಣ್ಯವಿದೆಂದು ಬಿಸುಸುಯ್ದಳುತಾ ಮೂರ್ಛಿಸಿದಾ
ಹೊಡೆ ಕರೆಸಿಕೊಂಡೆದ್ದು ರೋಷದಿ ಕಡೆಯ ವಡಬಾನಲನ
ತೆರದಲಿ ನುಡಿದ ಕೋಪದಲಿ॥

ಅರ್ಜುನ : ಆಹಾ ಅಗ್ರಜನೆ, ನೀನು ಯೀಗ ಮಾತನಾಡಿ ಫಲವೇನು, ವಡೆಯರಿಲ್ಲದ ವಸ್ತುವಾಗಿ ಬಿಟ್ಟೆನು. ಯಿದು ನನ್ನ ಜನ್ಮಾಂತರ ಪಾಪಶೇಷ ಮಾಡುವುದೇನು. ಯೀಗ ನನ್ನ ಶರೀರದಲ್ಲಿ ಹುಟ್ಟಿರುವ ಶೋಕವೆಂಬ ಶಿಖೆಗೆ ಕ್ಷತ್ರಿಯ ಪೌರುಷವೆಂಬ ಕೋಪಾಗ್ನಿಯು ಕಲೆತು ಅಂತ್ಯಕಾಲದ ವಡಬಾನಲದಂತೆ ಆಗಿದೆ. ಹೇ ಅಗ್ರಜಾ ನಿಜವಾಗಿಯೂ ಮಗನನ್ನು ಕೊಂದವನಾರು, ಅರುಹಬೇಕೋ ಧರ್ಮಜ॥

ಪದಕಲ್ಯಾಣಿಆದಿತಾಳ

ಕೇಳಯ್ಯ ದೇವೇಂದ್ರಜಾತ ವಿಖ್ಯಾತಾ ನೀನು ಸಮಸಪ್ತಕರ
ಧುರಕೆ ಪೋಗಲು ಸಾತ್ಯಕಿ ನಕುಲ, ದೃಪಾದಿ ನೃಪರೂ.

ಧರ‌್ಮರಾಯ : ಆಹಾ ಅರ್ಜುನನೆ, ನೀನು ಸಮಸಪ್ತಕರ ಧುರಕ್ಕೆ ಹೋದಾಗ ದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಚಕ್ರವ್ಯೂಹಕ್ಕೆ, ಭೀಮ ಸಾತ್ಯಕಿ, ನಕುಲ ಮೊದಲಾದ ಪಟುಭಟರುಗಳು ಚತುರಂಗ ಬಲ ಸಮೇತವಾಗಿ ಯುದ್ಧಕ್ಕೆ ತೆರಳುವಂಥವರಾದರು ಮತ್ತೂ ಹೇಳುತ್ತೇನೆ ಕೇಳುವಂಥಾವನಾಗು.

ಪದ

ಚಕ್ರವ್ಯೂಹವ ಹೊಗದೆ ನೊಂದು ಬಂದರು ಬಳಿಕಾ
ವಿಕ್ರಮದಿ ಅಭಿಮನ್ಯು ಪೋದನೆಂದಿರೇ॥

ಧರ್ಮರಾಯ : ಆಹಾ ತಮ್ಮ ಅರ್ಜುನನೆ, ಅವರು ಚಕ್ರವ್ಯೂಹವನ್ನು ಹೊಗಲು ಅಸಾಧ್ಯವಾಗಿ ಹಿಮ್ಮುಖ ವಾಗಿ ಬರುವಂಥವರಾದರು, ನಂತರ ಮಗನಾದ ಅಭಿಮನ್ಯುವು ತಾನು ಹೋಗಿ ಜಯಶೀಲನಾಗಿ ಹೋಗಿ ಬರುತ್ತೇನೆಂದು ಘನಪರಾಕ್ರಮದಿಂದ ಹೊರಟನು. ನೀನು ಹೋಗಬೇಡವೆಂದೂ ಯೆಷ್ಟು ಹೇಳಿದರೂ ಕೇಳದೆ ಯುದ್ಧಕ್ಕೆ ತೆರಳುವಂಥವನಾದ ಮತ್ತೂ ಹೇಳುತ್ತೇನೆ.

ಪದ

ತರಳನಿಗೆ ಬೆಂಬಲವಾಗಿ ಪೋದವರನ್ನು ಹರನ
ವರವುಂಟೆಂದು ತಡೆದ ಸೈಂಧವನೂ

ಧರ್ಮರಾಯ : ಅಯ್ಯ ತಮ್ಮ ಸವ್ಯಸಾಚಿ, ಮಗನಿಗೆ ಬೆಂಬಲವಾಗಿ ಹೋದ ಷಡುರಥರನ್ನು ಸೈಂಧವನು ತನಗೆ ಯೀಶ್ವರ ಮಹದೇವರ ವರವುಂಟೆಂದು ವಳಗೆ ಬಿಡದೆ ಹೋದನು. ಆಗ್ಗೆ ಅವನನ್ನು ಬಿಡಿಸಿಕೊಂಡು ಹೋಗಲು, ಸಮರ್ಥರಿಲ್ಲದೆ ಹೋದರು ಮತ್ತೂ ಹೇಳುತ್ತೇನೆ.

ಪದ

ತರಳನಿಗೆ ಮರಣಾವು ಬಂತು, ಸೈಂಧವನಿಂದ
ಅರುಹಲೇ ನಿನಗೆ ನಾನೂ ಸಹಜಾತ ಪಾರ್ಥ॥

ಧರ‌್ಮರಾಯ : ಅಯ್ಯ ತಮ್ಮಾ ಅರ್ಜುನ, ಮಗನಿಗೆ ಸಹಾಯವಾಗಿ ಹೋಗಿದ್ದ ಪಟು ಭಟರನ್ನು ತಡೆಯದೆ ವಳಗೆ ಬಿಟ್ಟಿದ್ದರೆ ಅಸಹಾಯ ಶೂರನಾದ ಮಗನು ಮರಣ ಹೊಂದುತ್ತಿದ್ದನೆ, ಯೆಂದಿಗೂ ಯಿಲ್ಲ ಕಂಡೆಯೊ, ಯೀಶ್ವರನ ವರಬಲದಿಂದ ಖೂಳನಾದ ಸೈಂಧವನು ವಳಗೆ ಬಿಡದೆ ಹೋದ್ದರಿಂದಲೇ ಮಗನಿಗೆ ಮರಣವುಂಟಾಯಿತಲ್ಲದೆ ಅನ್ಯಥಾ ಯಿಲ್ಲ ಕಂಡೆಯಾ ಏನ ಹೇಳಲಯ್ಯ ತಮ್ಮಾ॥

ಅರ್ಜುನ : ಆಹಾ ಅಗ್ರಜಾ, ಆ ಖೂಳ ಸೈಂಧವನಿಂದೆನ್ನ ಮಗನು ಮೃತಿಯನೈದಿದನೆ ಹೇಳುತ್ತೇನೆ ಲಾಲಿಸಿ॥

ಪದರಾಗತ್ರಿಪುಡೆ

ಅರರೆ ಪ್ರಳಯದ ರುದ್ರನೆನೆ ಹೂಂಕರಿಸಿದಡಿಗಡಿಗೌಡುಗಚ್ಚುತ
ನರನು ವೀರಾವೇಶದಲಿ ಭೂವರನಿಗೆಂದಾ

ಅರ್ಜುನ : ಆಹಾ ಅಗ್ರಜ, ನನ್ನ ಶರೀರದಲ್ಲಿ ಪುತ್ರ ಶೋಕಾಗ್ನಿ ವಂದೇ ಯಿದ್ದು ಯೀ ಪುತ್ರನಿಗೆ ಮರಣವನ್ನು ತಂದ ಸೈಂಧವನನ್ನು ಸಂಹರಿಸಲು ಹುಟ್ಟಿದ ರೋಷಾಗ್ನಿಯು ಸೇರಿದ್ದರಿಂದ ಪ್ರಳಯದ ರುದ್ರನೇ ತಾನೆಂದು ಭಾವಿಸಿರಿ, ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಹುಡುಗನನು ಕೊಂದವನ ಜೀವಕೆ ಹಿಡಿಯಿದಕೆ ಸಂಚಕಾರವ
ನುಡಿಗೆ ತಪ್ಪಿದರೆ ಕೇಳ್ನಿಮ್ಮಡಿಗಳಾಣೆ॥

ಅರ್ಜುನ : ಆಹಾ ಅಗ್ರಜನೆ, ಮಗನನ್ನು ಕೊಂದವನ ಪ್ರಾಣಕ್ಕೆ ಯಿಕೋ ಸಂಚಕಾರವ ಹಿಡಿ. ನಿಮ್ಮ ಪಾದದಾಣೆಯಾಗಿಯೂ ತಪ್ಪುವುದಿಲ್ಲಾ ನನ್ನ ಪ್ರತಿಜ್ಞೆಯನ್ನು ಕೇಳಿ॥

ಪದ

ರವಿಯು ಮುಳುಗುವ ಮುನ್ನ ರಿಪು ಸೈಂಧವನ ವಧಿಸದಿದ್ದರೆ
ಅವಗಡಸಿ ದಾವಾಗ್ನಿ ಕುಡವ ಹೊಗುವೆ ನಾನೂ॥

ಅರ್ಜುನ : ಅಯ್ಯ ಅಗ್ರಜನೆ ಲಾಲಿಸು, ನಾಳೆ ದಿವಸ ಸೂರ್ಯನು ಪಶ್ಚಿಮ ಪ್ರತಿಷ್ಟೆ ಆಗುವುದರೊಳಗಾಗಿ ವೈರಿಯಾದ ಸೈಂಧವನನ್ನು ಸಂಹರಿಸದೆ ತಪ್ಪಿದರೆ- ನನ್ನ ಪ್ರತಿಜ್ಞೆಯನ್ನು ಲಾಲಿಸಿರಿ, ಈ ನನ್ನ ಶರೀರವನ್ನು ಅಗ್ನಿಕುಂಡದಲ್ಲಿ ಹೊಗಿಸಿ, ಪರಲೋಕಕ್ಕೆ ಪ್ರಯಾಣ ಹೊರಡಿಸುತ್ತೇನೆ, ನೋಡಿರಿ॥

ಭಾಮಿನಿ

ಕೇಳು ಧರ್ಮಜನೆಂಬ ಶೌರ್ಯ ಚಂಡನ ನುಡಿಯೆ ಲಾಲಿಸುವ
ಮರಾಳ ವಾಹನನಯ್ಯ ಹಿಗ್ಗುತಲೆ ನಡೆ ತಂದು॥

ಕೃಷ್ಣ : ಅಯ್ಯ ಕಿರೀಟಿ, ನಿನ್ನ ನುಡಿಗಳು ಯೆನಗೆ ಕರ್ಣಾನಂದವಾಯಿತು ಅಲ್ಲದೆ ಶೋಕವೆಂಬ ಅಂಧಕಾರಕ್ಕೆ ಸೂರ್ಯನು ಪ್ರತಿಷ್ಠೆಯಾದರೆ ಹೇಗೋ ಹಾಗೆಯೇ ಶೋಕವು ಕೆರಳಿತು ಮತ್ತೂ ಹೇಳುತ್ತೇನೆ ಲಾಲಿಸು॥

ಪದರಾಗಆದಿತಾಳ

ಮೆಚ್ಚಿದೆ ಮೆಚ್ಚಿದೆ ಪಾರ್ಥ ನಿನ್ನ ಹೆಚ್ಚಿನ ಭಾಷೆಯು ಸ್ವಾರ್ಥ
ಖೂಳ ಸೈಂಧವ ಭಟನ ಸೀಳಲು ಪೋಗಿಹ ಮಗನ
ಬಾಳಾಂಕದೊಳು ಪಡೆದಂತಾಯಿತು, ನಾಳೆಗೆ
ಸರ್ವರ ಶೋಕ ನಿವಾರಣ, ಮೆಚ್ಚಿದೆ.

ಕೃಷ್ಣ : ಅಯ್ಯ ಪಾರ್ಥ, ನೀನು ಮಾಡಿದ ಹೆಚ್ಚಿನ ಭಾಷೆಗೆ ಮೆಚ್ಚಿದೆನು. ಹೇ ವೀರ ನಿನ್ನ ವಚನವು ರಘುವೀರನ ಬಾಣವಲ್ಲವೆ, ಆ ಖೂಳನಾದ ಸೈಂಧವ ವಧೆಯನ್ನು ಮಾಡಲು ಆ ಪರಮೇಶ್ವರನಲ್ಲಿ ಪುನಃ ಪುತ್ರನನ್ನು ಪಡೆದಹಾಗಾಯಿತು. ಅಲ್ಲದೆ ನಾಳೆಗೆ ಸರ್ವರ ಶೋಕವು ನಿವಾರಣೆಯಾಯಿತು॥

ಭಾಗವತ : ಎಂದು ಗೋವಿಂದನು ಕಿರೀಟಿಯ ಸಂತೈಸುತಿರಲು ಪುತ್ರಶೋಕವನಾಂತು ಮಗುಳಾದರಿಸಲಾರದೆ, ಬಂದು ಸೌಭದ್ರೆ ಕಂತುಪಿತನಂಘ್ರಿಯಲಿ ಬಿದ್ದು ಪ್ರಲಾಪಿಸಿದಳದನೆಂತು ಬಣ್ಣಿಪೆ ಕೇಳು ಜನಮೇಜಯ ಮಹೀಪಾಲ.

ಸೌಭದ್ರೆ : ನಮೋನ್ನಮೊ ಅಣ್ಣಯ್ಯ ಯೀ ಪುತ್ರ ಶೋಕವನ್ನು ಹ್ಯಾಗೆ ಸೈರಿಸಲಿ. ಯಿಷ್ಟು ಮಂದಿ ಷಡುರಥ ಮಹಾರಥರಿದ್ದು ದಾವಾಗ್ನಿಯಲ್ಲಿ ಕಂದನನ್ನು ನೂಕಿ ಕಳೆದರಲ್ಲಾ. ಹರಹರಾ ಯೀ ಧರಿತ್ರಿಯಮೇಲೆ ನಾನು ಹೇಗೆ ಬಾಳಲಿ ಹ್ಯಾಗೆ ಮಾಡಲಿ ಅಣ್ಣಯ್ಯ॥

ಕೃಷ್ಣ : ಅಮ್ಮಾ ಸೌಭದ್ರೆ ಹೇಳುತ್ತೇನೆ ಕೇಳು

ಪದರಾಗಮಧ್ಯಮಾವತಿಅಟ್ಟತಾಳ

ಕೇಳಮ್ಮ ತಂಗಿ ನೀ ಮರುಗದಿರಿನ್ನು ಪೇಳುವೆ ಸೈರಿಸಬೇಕು ದುಃಖವನೂ॥

ಕೃಷ್ಣ : ಅಮ್ಮಾ ಸೌಭದ್ರೆ ಯಾಕೆ ದುಃಖಪಡುತ್ತೀಯ ಬಿಡು. ಸಮಾಧಾನ ಮಾಡಿಕೊಳ್ಳುವಳಾಗೂ ಹೇಳುತ್ತೇನೆ ಕೇಳು-

ಪದ

ಬಾಳಾಕ್ಷ ಕಮಲಜ ಬರೆದ ಬರಹವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ॥

ಕೃಷ್ಣ : ಅಮ್ಮಾ ಸೌಭದ್ರಾ, ಹಣೆಯಲ್ಲಿ ಬ್ರಹ್ಮದೇವರು ಬರೆದ ಬರಹವನ್ನು ಮೀರಲು ಯಾರಿಗೂ ಶಕ್ಯವಲ್ಲ, ಅವರವರ ಕರ್ಮಾನುಸಾರವಾಗಿ ವದಗಿದ ಆಪತ್ತನ್ನು ಅನುಭವಿಸಿಯೇ ತೀರಬೇಕು ಮತ್ತೂ ಹೇಳುತ್ತೇನೆ॥

ಪದ

ಮಗನಿಗೆ ಮರಣವ ತಂದ ಸೈಂಧವನನ್ನು
ಶಿಗಿಸುವೆ ನಾಳೆ ನೀನೋಡು ಭಾಷೆಯಾ

ಕೃಷ್ಣ : ಅಮ್ಮಾ ತಂಗಿ, ನಿನ್ನ ಮಗನಿಗೆ ಮರಣವನ್ನು ತಂದ ಆ ಖೂಳ ಸೈಂಧವನನ್ನು ನಾಳೆ ಶಿಗಿಸುತ್ತೇನೆ, ಹಗರಣವನ್ನು ಬಿಟ್ಟು ಅರಮನೆಗೆ ತೆರಳುವಂಥವಳಾಗಮ್ಮ ತಂಗಿ॥

ಕೃಷ್ಣ : ಎಲೈ ಅರ್ಜುನ, ಇಂದಿನ ವೈರಿಗಳೆದೆಯಂ ತಲ್ಲಣವಾಗುವಂತೆ ನೀನು ದೇವದತ್ತ ಧ್ವನಿಯನ್ನು ಮಾಡು. ನಾನು ಪಾಂಚಜನ್ಯ ಧ್ವನಿಯನ್ನು ಗೈಯುತ್ತೇನೆ, ವುಭಯ ಶಬ್ದಗಳು ಕೂಡಿದರೆ ವೈರಿಗಳು ತಳಮಳಗೊಳ್ಳುವರೂ ಬೇಗನೆ ಮಾಡೂ॥

ಕೃಷ್ಣ : ನಾವು ಮುಂದೆ ಆಲೋಚನೆ ಮಾಡಬೇಕಾಗುತ್ತೆ ಪಾಳೆಯಕ್ಕೆ ತೆರಳೋಣ ನಡೆ-

ಭಾಮಿನಿ

ಅರಸ ಕೇಳಿಂತಾಗುತಿರಲಾ ವೇಳೆಯಲಿ ಬಂದರುಹಿದರು
ಕೌರವನ ಬೇಹಿನ ಚಾರರು ಸೈಂಧವನ
ಶಿರವಗೊಂಬನು ನಾಳೆ, ಫಲುಗುಣನುರಿಯ
ಹೊಗುವನು ಕೊಲ್ಲದಿರ್ದೊಡೆ
ಸ್ಥಿರವಿದೆನೆಲಾ ನುಡಿಗೆ ಭಯಗೊಂಡನು ಜಯದ್ರಥನೂ॥

ಚಾರ : ಅರೆ ಸ್ವಾಮಿ ಅಗದಿ ಸಲಾಮ್.

ಕೌರವ : ಎಲಾ ಚಾರಕ ಬಹಳ ಗಾಬರಿಯಿಂದ ಬಂದಿರುವೆಯಲ್ಲಾ ಯೇನು ಕಾರಣ॥

ಚಾರ : ಬುದ್ಧಿ ನಾನೇನು ಹೇಳಲಿ ನಿಮ್ಮ ಸಂಗಡ ಕೂತಿರುವ ಯೀ ಯಪ್ಪನಿಗೆ ಐತಲ್ಲಾ ಅರ್ಜುನಪ್ಪಾ ಐತಲ್ಲಾ, ನೋಡಿ ಘಜ್ಜರ್‌ನಾಳೆ, ಸೂರ್ಯನಿಗೆ ಮುಳುಗೋದೆ ಮೊದಲು, ಇವನ ತಲೆಯನ್ನು ಕಡಿದು ಹಾಕುತ್ತಾನಂತೆ ಯಿದಕೇನ ಹೇಳುವೆ.

ಸೈಂಧವ : ಆಹಾ ಭಾವನವರೆ, ಚಾರಕನು ಹೇಳುವ ಮಾತ ಕೇಳಿದಿರೋ. ಆಹಾ ವಿಧಿಯೆ ಆ ಅರ್ಜುನನಿಗೆ ನಾನು ಯೇನು ಅಪರಾಧ ಮಾಡಿದೆನೆಂದು ಯೀ ರೀತಿ ಶಪಥವನ್ನು ಮಾಡಿಕೊಂಡಿರುವನು, ಆಹಾ ಭಾವಯ್ಯ ನಾನು ಜೀವದೊಂದಿಗೆ ಯಿರಲು ಯೇನು ವುಪಾಯವನ್ನು ಮಾಡಲಿ ವಿಧಿಯೆ.

ಕೌರವ : ಅಯ್ಯ ಸಿಂಧು ದೇಶಾಧಿಪತಿಯೆ ಹೇ ಸೈಂಧವನೆ ಹೇಳುವೆನು ಲಾಲಿಸು॥

ಪದ

ಇಂತೆಂದು ಭಯಗೊಳಲಾಗ ಕೌರವ ರಾಯನೆಂದು ಸೈಂಧವ ನೃಪಗೇ
ಇಂದಿದಕಂಜುವರುಂಟೇ ಭೀಮಾರ್ಜುನರಿಂದಾಗುವುದೇನು॥

ಕೌರವ : ಅಯ್ಯ ಸೈಂಧವರಾಯನೆ, ಅರ್ಜುನನ ಘರ್ಜನೆಯಿಂದ ತರ್ಜಿನಿಯಂನ್ನಾಡಿಸಿ ಆಡಿದ ಯೀ ಮಾತಿಗೆ ನೀನು ಯೆಷ್ಟು ಮಾತ್ರಕ್ಕೂ ಬೆದರಬೇಡ ಕಂಡೆಯೋ. ಆ ಖೂಳರಾದ ಭೀಮಾರ್ಜುನರಿಂದ ನಮಗೇನಾಗಬಲ್ಲುದು ಮತ್ತೂ, ಹೇಳುತ್ತೇನೆ ಕೇಳು॥

ಪದ

ಗರುಡಿಯಾಚಾರ್ಯನ ಬಲವುಂಟು ನಮಗಿನ್ನು
ವಜ್ರಪಂಜರವಾಗಿ ಯಿಹರೂ ಪೊರೆವನು
ನಾವಾತಗರುಹುವ ಯೆಂದಾಗ ಬಂದರು ಅವನೆಡೆಗೆ॥

ಕೌರವ : ಅಯ್ಯ ಸೈಂಧವ ರಾಜನೆ ನಮ್ಮ ಗುರುಗಳಾದ ದ್ರೋಣಾಚಾರ್ಯರು ನಮಗೆ ವಜ್ರ ಪಂಜರವಾಗಿರುತ್ತಾರೆ. ಬಲ್ಲೆಯಾ ಯೀಗಲೂ ಅವರಲ್ಲಿಗೆ ಹೋಗಿ ಹೇಳಿಕೊಳ್ಳೋಣ. ನಡೆಯಯ್ಯ ಜಯದ್ರಥನೆ॥

ಭಾಮಿನಿ

ವಸುಧೆಪತಿ ಕೇಳಾಗ ಕೌರವರೆಸೆವ ಕರ್ಣನೃಪಾದಿಗಳೂ
ಬಂದು ಸಬಲ ದ್ರೋಣಂಗೆ ಕಾಣಿಸಿಕೊಳ್ಳಲೂ ತವಕದಲೀ॥

ಕೌರವ : ಗರುಡಿಯಾಚಾರ್ಯರಿಗೆ ಕೌರವನಿಂದ ವಂದನೆ ಬಂದಿರುತ್ತೆ.

ದ್ರೋಣ : ಬಾರಯ್ಯ ಕೌರವಭೂಪ, ಸೈಂಧವರಾಜನೆ ಮೇಲಕ್ಕೆ ಏಳಿರಿ ಶುಭವಾಗಲಿ.

ಭಾಮಿನಿ

ವುಸುರುದ್ಯಾತಕೆ ಬಂದಿರೀ ನಡುನಿಶಿಯೊಳೆನೆಲಾ
ಕೌರವೇಂದ್ರನು ಬಸವಳಿದು ವುಸುರಿದನು ನಸು ಸುಯ್ಯುತ್ತಲಿ.

ದ್ರೋಣ : ಅಯ್ಯ ಕೌರವ ಭೂಪಾಲ, ಯೀ ನಡುರಾತ್ರಿಯಲ್ಲಿ ಕಡು ಖಿನ್ನರಾಗಿ ಬಸವಳಿದು ಅಳಲುತ್ತ ನಮ್ಮ ಬಳಿಗೆ ಬಂದ ಕಾರಣವೇನು ಹಸನಾಗಿದ್ದರುಸುರಯ್ಯ ರಾಜನೆ॥

ಕೌರವ : ಸ್ವಾಮಿ ಗುರುಗಳೇ ಅರಿಕೆ ಮಾಡಿಕೊಳ್ಳುವೆನು ಲಾಲಿಸಿರಿ॥

ಪದಅಟ್ಟತಾಳ

ಗುರುವರ ಲಾಲಿಸು ಅರುಹುವೆ ನಾನಿಂತು ತೀರಿತಾಯುಷ್ಯ
ಕೃಪ ಸೈಂಧವಗೆ ಮೆರೆವ ರವಿಯು ನಾಳೆ
ಸಾರುವುದರೊಳು ಮುನ್ನ ಸೀಳುವನು ನೃಪ ಸೈಂಧವನ॥

ಕೌರವ : ಹೇ ಸ್ವಾಮಿ ನಾನೇನು ಹೇಳಲಿ. ಯೀ ಸೈಂಧವ ರಾಜನ ಆಯುಷ್ಯವು ತೀರಿಹೋಗುವಂತಾಗಿದೆ, ನಾಳೆ ಸೂರ್ಯನು ಅಸ್ತಮಿಸುವುದರೊಳಗೆ, ಅರ್ಜುನನು ಸಂಹರಿಸುತ್ತಾನಂತೆ ಮತ್ತೂ ಹೇಳುತ್ತೇನೆ.

ಪದ

ಸೀಳದೊಡಗ್ನಿಗೆ ಬೀಳುವೆ ಭಾಷೆಯ ಖೂಳ
ಪಾರ್ಥನು ನುಡಿದಿರುವ ಬಾಳುವದ್ಯಾಗಿನ್ನು ನೀವು
ಪೇಳಿರುಪಾಯವ ನಾಳೆ ಸೈಂಧವ ನೃಪಗೇ॥