ಗಂಗೆ ಗಜಗವರಿ ಬಾಯಲ್ಲಿ ಗಟವಳಿರು
ಎಂಜಲ್ ಬಾಯಲ್ಲಿ ದೆವ್ರ ನೆನಿಬಾರಾ | ಎಂದರ್ಜುನ
ಗಂಗ್ಹೋಗ್ವದಕೇ ಸವ್ನಾನೆ |
ಗಂಗ್ಹೋಗ್ವದಕೆ ಸಂಗಡಾರಿಲ್ಲೆಂದು
ಮಂಗ್ಳೂರ ರಾಜ್ಯ ತಿರಗಾನೆ | ಅರ್ಜಿನಗೆ
ನಾರಾಯಣ ದೆವ ಎದ್ರ ಬಂದ | ಏನಂಬಾನೇ
ನಾಬತ್ತೆ ಬಾವ ಒಡ್ನಲ್ಲಿ |
ಅಟ್ಟಂಬು ಮಾತಾ ಕೇಳಾನೇ ಅರ್ಜೀಣ

ಹಿಂದಕೆ ತಿರುಗಿ ಬರುವಾನೇ ಅರ್ಜೀಣ
ತನ್ನಾಲರ ಮನೆಗೆ ಬರುವಾನೆ | ಅರ್ಜೀಣ
ಮಾಳೂಗಿ ಒಳುಗೆ ನೆಡದಾನೆ | ಅರ್ಜೀಣ
ತನ್ನ ಪೆಟ್ಟಿಗೆಯ ತೆಗುದಾನೆ | ಅರ್ಜೀಣ
ಮೆಟ್ಟಿ ಬೀಗವ ಕರ್ದಾನೆ | ಅರ್ಜೀಣ
ಪಟ್ಟೆ ದೋತರವ ನೆರ್ದುಟ್ಟಿ | ಅರ್ಜೀಣ
ಕೋಲು ನೆವಳವ ಇಳ್ಯಿಟ್ಟಿ | ಅರ್ಜೀಣ
ಮುತ್ತನಾ ಮುಂಡೆಸ್ನ ತಲ್ಗಸುತ್ತಿ | ಅರ್ಜೀಣ
ಪಟ್ಟೆ ಜೋತವರ ಹೋಗೋಲಿಗೆ | ಇಟ್ಯೆಞಕಂಡಿ

ಮೂರು ಬೊಗ್ಸ ಹಣವ ಮೊಗ್ದಾನೆ | ಅರ್ಜೀಣ
ಹಚ್ಚಡ  ಸೆರ್ಗೀಗೆ ಅಗ್ಲಡ್ಚಿ | ಅರ್ಜೀಣ
ಪೆಟ್ಗೀ ಬಾಯನೆ ಮುಡ್ಗಾನೆ | ಅರ್ಜೀಣ
ಮಾಳೂಗಿಲಿಂದೆರಗೇ ಬರುವಾನೆ | ಅರ್ಜೀಣ
ರಾಜಂಗ್ಳ ಮೆಟ್ಟಿ ಇಳಿದಾನೆ | ಅರ್ಜೀಣ
ರಾಜ ಮಾರ್ಗದಲ್ಲಿ ನೆಡದಾನೆ | ಅರ್ಜೀಣ
ದೇವ ಲೋಕಕಾಗಿ ನೆಡದಾನೆ | ಅರ್ಜೀಣ

ದೇವಲೋಕದಂಗಡಿಯ ತೆಣಿ ಮೆನೆ | ಕೂತಿಕಂಡಿ
ಅಂಗಡಿ ಕಾರನ ಕರ್ದಾನೆ |
ಅಂಗಡಿಕಾರನ ಕರ್ವದ್ನು ಅಂಗಡೀಕಾರ
ಓಯ್ಗುಂಡೇ ಒಡ್ನೇ ಬರುವಾನೆ | ಅಂಗಡಿಕಾರ
ಏನು ಕಾರಣೆ ಕರ್ದೀಯೋ |
ಕರ್ದಂಬ್ ಕಾರ್ಯ ಸಯ್ ಕಿರ್ದಂಬ್ ಬ್ಯಾಸರಿಲ್ಲ
ದೇವಲೋಕದ ಪಟ್ಟೀ ತೆಗತಾರೋ |
ಅಟ್ಟಂಬು ಮಾತನೇ ಕೇಳಾನೆ ಅಂಗಡಿಕಾರ

ಅಂಗಡಿ ಒಳಗೇ ನೆಡುವಾನೇ | ಅಂಗಡಿಕಾರ
ಜವಳೀಯ ದಿಂಡು ಬಿಡುಸಾನೆ | ಅಂಗಡಿಕಾರ
ದೇವಲೋಕದ ಪಟ್ಟೀ ತೆಗದಾನೆ | ಅಂಗಡಿಕಾರ
ಅಂಗೂಡಿ ಹೊರುಗೆ ಬರುವಾನೆ | ಅಂಗಡಿಕಾರ
ಅರ್ಜಣನ ಬಲಗಯ್ಲಿ ಕೊಡುವಾನೆ |
ಅರ್ಜೀಣ ಬಲಗಯ್ಲಿ ಕೊಡುವದ್ನು ಅಂಗಡೀಕಾರ
ಎಯ್ಡು ಕಯ್ಯುಡ್ಡಿ ತಡದಾನೆ |

ಆಚೆಸೆರಗ ಈಚೊಮ್ಮೆ ಮೊಗಚಾನೆ ಅರ್ಜೀಣ
ಬಣ್ಣ ಸಾಕಿದರ ಬೆಲೆ ಹೇಳು |
ದೆಡಿಗೆ ಸಾವಿರವೆಂದ ಮೊಳಕೆ ಸಾವಿರವೆಂದ
ಅದಕೆ ಸಾವಿರದ ಹಣವೆಂದ |
ದಡಿಗೆ ಸಾವಿರ ಕೊಟ್ಟ ಮೊಳಕೆ ಸಾವಿರ ಕೊಟ್ಟ.
ಅದಕಲ್ಲೇ ಹಣವ ಸಲಿಸಾನೆ ಅರ್ಜೀಣ
ಪಟ್ಟೇ ದೋತರಲ್ಲೇ ಬಿಗದಾನೆ | ಅರ್ಜೀಣ
ಪಟ್ಟೇಯ ಎತ್ತಿ ಹೊಗಲೀಗೆ | ಇಟ್ಟೀಕಂಡಿ

ಅಂಗಡಿಗಿಂದ್ ಕೆಳಗೆ ಎಳದಾನೆ | ಅರ್ಜೀಣ
ರಾಜ ಬೀದಿಗಾಗಿ ನೆಡದಾನೆ | ಅರ್ಜೀಣ
ಇಂದ್ರಲೋಕಕಾಗಿ ನೆಡದಾನೆ | ಅರ್ಜೀಣ
ಇಂದ್ರಲೋಕದ ತಣಿಮೆನೇ | ಕುಳ್ತಿಕಂಡೆ
ಅಂಗಡೀಕಾರನ ಕರ್ದಾನೆ ಅಂಗಡಿಕಾರ
ಓಯ್ಗಂಡೇ ಹೆರಗೆ ಬರುವಾನೆ | ಅಂಗಡಿಕಾರ
ಏನು ಕಾರಣ ಕರ್ದೀರಿ |

ಕರ್ದಂರ್ಭ ಕಾರ್ಯ ಸಯ್ ಕಿರ್ ದಂಬ್ ಬ್ಯಾಸರಸೈ
ಇಂದ್ರಲೋಕದ ಪಟ್ಟೀ ತೆಗತಾರೋ |
ಅಟ್ಟುಂಬ ಮಾತ ಕೇಳಾನೇ ಅಂಗಡಿಕಾರ
ಅಂಗೂಡಿ ಒಳಗೆ ನೆಡುದಾನೆ | ಅಂಗಡಿಕಾರ
ಜವಳೀಯ ದಿಂಡ ಬಿಡಸಾನೆ| ಅಂಗಡಿಕಾರ
ಇಂದ್ರ ಲೋಕದ ಪಟ್ಟೀಯ ತೆಗದಾನೆ | ಅಂಗಡಿಕಾರ

ಅರ್ಜೀಣ ಬಲಗಯ್ಲಿ ಕೊಡುವಾನೇ | ಅಂಗಡೀಕಾರ
ಅರ್ಜೀಣ ಎಯ್ಡು ಕಯ್ಯೋಡ್ಡಿ ತಡದಾನೆ | ಅರ್ಜೀಣ
ಆಚೆ ಮೊಗಚಾನೆ ಈಚೆ ಮೊಗಚಾನೆ
ಬಣ್ಣ ಸಾಕಿದರೆ ಬೆಲೆ ಹೇಳು |
ದೆಡಿಗೆ ಸಾವಿರ ವೆಂದ ಮೊಳಕೆ ಸಾವಿರವೆಂದ
ಅದಕ್ಕೆ ಸಾವಿರದ ಹಣವೆಂದ | ಅರ್ಜೀಣ
ಅದಕ್ಕೆ ಹಣವ ಸಲಸಾನೆ ಅರ್ಜೀಣ

ಪಟ್ಟೆ ದಟ್ಟೀಲೆ ಬಿಗದಾನೆ | ಅರ್ಜೀಣ
ಪಟ್ಟೆಯ ಎತ್ತೇ ಹೋಗಲೀಗೆ| ಇಟ್ಟಿಕಂಡ್ಯೇ
ಅಂಗಡಿಗಿಂದ ಕೆಳಗೆ ಇಳಿದಾನೆ  | ಅರ್ಜೀಣ
ನಾಗಲೋಕಕಾಗಿ ನೆಡದಾನೆ | ಅರ್ಜೀಣ
ನಾಗಲೋಕದ ಪಟ್ಟೇ ತೆಗೆದಾನೆ | ಅರ್ಜೀಣ
ಪಟ್ಟೇ ದಟ್ಟೇಯಲ್ಲೇ ಬಿಗದಾನೆ | ಅರ್ಜೀಣ
ಅಂಗಡಿಕಾರಗೆ ಅಂದಾನೆ |

ನೀಕೊಟ್ಟ ಗಳಿಗಳೇಲಿ ನಾ ತೆಗಂಡ ಮೂರ್ತದಲ್ಲೇ
ಅಗಮಂಜುನಾಯುಸ್ಸ ಹೆರ್ದಾಲಿ | ಎಂದೇಳಿ
ಪಟ್ಟೀಯ ಎತ್ತೇ ಹೋಗಲೀಗೆ | ಇಟ್ಟೀಕಂಡಿ
ಅಂಗಡೀಗಿಂದ್ ಕೆಳಗೆ ಎಳುದಾನೆ | ಅರ್ಜೀಣ
ರಾಜಬೀದಿಗಾಗಿ ನೆಡದಾನೆ | ಅರ್ಜೀಣ

ತನ್ನಲರಮನಿಗೇ ನೆಡದಾನೆ | ಅರ್ಜೀಣ
ತೂಗು ಮಂಚದಲ್ಲೇ ಕುಳತಾನೆ | ಅರ್ಜೀಣ
ಜವಳೀಯ ದಿಂಡ ಮಡಗಾನೆ |
ಜವಳೀಯ ದಿಂಡ ಮಡುಗುದ್ನು ಅಗಮಂಜು

ಓಡ್ಯಂದಿ ತೊಡಿಮೆನೆ ಕುಳಿತಾನೆ | ಅರ್ಜೀಣ
ಜವಳಿ ದಿಂಡ  ಬಿಡಸಾನೆ | ಅರ್ಜೀಣ
ದೆವ ಪಟ್ಟೀಯ ನೋಡಿ ತೆಗುದಾನೆ | ಅರ್ಜೀಣ
ಒಂದು ಸುತ್ತಿನಲ್ಲೆ ನೆರ್ದುಡಿಸಿ | ಅರ್ಜೀಣ
ಮೊಕವನ್ನೇ ನೋಡಿ ಹೇಳಿದ | ಅರ್ಜೀಣ
ಸೂಲಿ ದೆವರ ಹೋಲು ಮಗನೀನು | ಅಗಮಂಜು
ಯಾರು ಕೇಳಿದ್ರು ಕೊಡಬೇಡ | ನಿನ್ನಾಲಾ
ಮಡದಿ ಮಂದ್ರೆ ಬೇಡಿದ್ರು  ಕೊಡ್ಬೆಡ | ಕೊಟ್ಟರೆ
ನಿನ್ನಾಯುಸ್ಯ ಸಿರಿಯೇ ತೊಲಗೀತು| ಅಂದೇಳಿ
ಹೇಳಿಯ ಪಟ್ಟೆ ಉಡಸಾನೆ | ಅರ್ಜೀಣ
ನಾಗಲೋಕದ ಪಟ್ಟೀ ತೆಗದಾನೆ | ಅರ್ಜೀಣ

ಒಂದು ಸುತ್ತಿನಲ್ಲೇ ನೆರ್ದುಡಿಸಿ | ಮೊಗನೋಡಿ
ಸುಕ್ರ ದೆವರ ಹೋಲು ಮಗನೀನು | ಮಗನೆ ಕೇಳು
ಯಾರು ಬೇಡಿದ್ರು ಕೊಡಬೇಡ | ನಿನ್ನಾಲಾ
ತಾಯ್ ಸೋದರ ಬೇಡಿದ್‌ರು ಕೊಡ್ಬೇಡಾ ಕೊಟ್ಟರೆ
ನಿನ್ನಾಯುಸ್ಯ ಸಿರಿಯೇ ತೊಲಗೂಗು | ಎಂದೇಳಿ
ಹೇಳಿಯ ಪಟ್ಟೀ ಉಡಸಾನೆ | ಅರ್ಜೀಣಾ
ಇಂದ್ರಲೋಕದ ಪಟ್ಟೀ ತೆಗೆದಾನೆ | ಅರ್ಜೀಣಾ
ಒಂದು ಸುತ್ತ್ನಲ್ಲೇ ನೆರ್ದುಡಿಸಿ | ಮೊಕನೋಡಿ
ಚಂದ್ರಮನು ಹೋಲು ಮಗನೀನು | ಮಗನೆ ಕೇಳು
ಯಾರು ಬೆಡಿದ್ದ್ರು ಕೊಡ್ವೇಡ ನಿನ್ನಾಲಾ
ಅಜ್ಜಮ್ಮ ಬೇಡಿದ್ರು ಕೊಡ್ಬೇಡ | ಕೊಟ್ಟದ್ದುಂಟಾದರೆ

ನಿನ್ನಾಯಿಸ ಸಿರಿಯೇ ತೊಲ್ಗೀಗು | ಅಂದೇಳಿ
ಹೇಳಿಯೆ ಪಟ್ಟಿ ಉಡಸಾನೆ | ಅರ್ಜೀಣ
ನೆತ್ತೀಯ ಕಿಟ್ಟೀ ಅಳಗಾನೆ |
ನೆತ್ತೀಯ ಕಿಟ್ಟಿ ಅಳುಗುದ್ನು ಅಗಮಂಜು
ತೋಡಿನಿಂದ ಕೆಳ್ಗೆ ಇಳಿದಾನೆ | ಅಗಮಂಜು
ತಪ್ಪ ತಳಕೋಗಿ ಕುಳಿತಾನೆ | ಅರ್ಜೀಣ
ಕೂತ ಗದ್ದಿಗೆಯ ಜಡಿದೆದ್ದಿ | ಅರ್ಜೀಣ
ಮಾಳೂಗಿ ಒಳುಗೆ ನೆಡುವಾನೆ | ಅರ್ಜೀಣ

ಹೆಣ್ಣು ಈಳ್ಯವ ತಡದಾನೆ | ಅರ್ಜೀಣ
ಗಂದ ಮಂಗಲವ ತಡದಾನೆ | ಅರ್ಜೀಣ
ತೆಂಗೀನ ಕಾಯಿಹಡಪಾಕೆ | ಅರ್ಜೀಣ
ದೂಪ ದೀಪನೆಲ್ಲ ಹಡಪಾಕೆ | ಇಟ್ಟೀ ಕಂಡೀ
ಹಾಡಪಾನೆತ್ತೀ ಹೋಗೋಲಿಗೆ  | ಇಟ್ಟೀಕಂಡಿ
ಮಾಳುಗಿಯ ಹೆರುಗೆ ಬರುವಾನೆ | ಅರ್ಜೀಣ
ಲಾಗೊಂದು ಮಾತ ನುಡದಾನ |
ಬಾಗಲಲ್ಲಾಡು ಬಾಲ ನನ್ನ ಅಗಮಂಜೂನ
ಬಾಗಲ್ಲಿಂದೆರಗು ಕಳ್ಗಬೆಡ |
ಬಂದ ದುರ್ಗವ ಬಂದಂತೆ ನೋಡಿಕಂತೆ
ಕಂದಯ್ನ ಕಾಳಗಕೆ ಕಳ್ಗಬೇಡ | ಅಂಬುದ್ನು

ಆಗೊಂದು ಮಾತ ನುಡ್ದಾಳೆ |
ಹೇಳೂವ ಮಾತೆಲ್ಲಾ ಹೇಳೀಕೆ ಹೋಗ್ವಾರಿ
ಬರುವ ಮೇಲ್ದುರ್ಗ ಅರಿಯಾರಿ |
ಎತ್ತು ಬೀಜವ ಒಪ್ಪಸ್ಗಿ ಹೋಯ್ತಿರಿ
ಬರುವ ಮೇಲ್ದುರ್ಗ ಅರಿಯಾರಿ |
ಅಟ್ಟಂಬು ಮಾತನೇ ಕೇಳಾನೆ | ಅರ್ಜೀಣ
ರಾಜಂಗಳ ಮೆಟ್ಟ ಇಳದಾನೆ | ಅರ್ಜೀಣ
ರಾಜಬೀದಿಗಾನೆ ನೆಡದಾನೆ |
ರಾಜ ಬೀದಿಗಾಗಿ ನೆಡುವುದ್ನು ನಾರ್ಣದೆವ
ಬಂದು ನಿಂತಾನೆ ಎದರೀಗೆ ಏನಂಬಾನೇ
ನಾಬತ್ತೆ ಬಾವ ಒಡ್ನಲ್ಲೇ |

ಅರ್ಜೀಣ ಮುಂದಾಗಿ ನಾರ್ಣದೆವರ ಹಿಂದಾಗಿ
ರಾಜ ಬೀದಿಗಾಗಿ ನೆಡದಾರೆ | ಬಾವ್ನೆಂಟ
ಮೂಡಣ ಗಂಗೀಗೆ ನೆಡದಾರೆ |
ಗಂಗೀ ಬಡಕೋಗಿ ನಿಲ್ವಾನೇ ಅರ್ಜೀಣ
ಹಣ್ಣು ಇಳ್ಸವ ಹರಗಾನೆ | ಅರ್ಜೀಣ
ಗಂದ ಮಂಗಲವ ಇಡುವಾನೆ | ಅರ್ಜೀಣ
ದೂಪ ದೀಪೆಲ್ಲ ಕಸದಾನೆ | ಅರ್ಜೀಣ
ಗಂಗೀಗೆ ಕಾಯ ಒಡದಾನೆ | ಅರ್ಜೀಣ

ಗಂಗೀಗೆ ಕಯ್ಯ ಮುಗದಾನೆ | ಅರ್ಜೀಣ
ಗಂಗೀಯ ಜಲವ ಮುಳಕಾನೆ |
ಒಂದು ಮುಂಡ್ ನೀರ ವಾಲಾಡೇ ಮುಳುಕಾನೆ
ಮತ್ತೊಂದು ಮುಂಡ್ ನೀರು ಮುಳುಕಾನೇ
ಬಂದ್ ನನ್ನಜ್ಜ ಗಾದೂ ಒಂದ್ ನನ್ನಜ್ಜೀಗಾದೂ
ಒಂದ್ ನಂಗಿಂದು ಹೆರಿಯವ್ಗೆ | ಆಗಾಲೆಂದು
ಮತ್ತೊಂದು ಮುಂಡ್ ನೀರ ಮುಳುಕಾನೆ | ನಾರ್ಣದೆವ
ಮೆಟ್ಟೀ ಕಂದ್ಸೀದ ತಳ್ನಲ್ಲಿ ನಾರ್ಣದೆವ
ಮತ್ತೊಂದು ರೂಪ್ನಲ್ಲಿ ದಿಡುನೆಗ್ದು | ನಾರ್ಣದೆವ
ಹಣ್ಣು ಈಳ್ಸವ ಹರಗಾನೆ | ನಾರ್ಣದೆವ

ತೆಂಗೀನ ಕಾಯ ಒಡದಾನೆ | ನಾರ್ಣದೆವ
ಗಂಗೀಗೆ ಕಯ್ಯ ಮುಗದಾನೆ | ನಾರ್ಣದೆವ
ರಾಜ ಬೀದಿಗಾನೇ ನೆಡದಾನೆ | ನಾರ್ಣದೆವಾ
ತಂಗೀಯರಮನಿಗೆ ನೆಡದಾನೆ |
ಅಣ್ಣ ಬರುಬರುವ ಅಟ್ಟುದೂರೇ ನೋಡಾಳೇ
ಚಂಬುಗಿಯಲ್ಲುದಕ ತಡದಾಳೇ |
ತಂಗೀ ಕೊಟ್ಟದಕವ ಬೇಗದಲ್ಲೇ ತಡದಾನೆ
ಕಾಲು ಸಿರಿಮೊಕವ ತೊಳದಾನೆ | ನಾರ್ಣದೆವಾ
ಮಾಳೂಗಿ ಒಳಗೆ ನೆಡುದಾನೆ | ನಾರ್ಣದೆವಾ
ತೂಗು ಮಂಚದಲ್ಲೇ ಕುಳಿತಾನೆ | ಸೋದೂರಿ

ಇಬ್ಬರೋದಲ್ಲಿ ಒಬ್ಬಾನೆ ಬಂದಾನೆ | ಅಣ್ಣಾ ಕೇಳೋ
ಇನ್ನೊಬ್ಬರೆತ್ತ ನೆಡದಾರೆ |
ಗಂಗೀಗೋದವ್ರು ಒಂದೇ ಬಾರ ಬರ್ತಾರ
ಇನ್ನೊಂದರ ಗಳಿಗೆಲ್ಲೇ ಬರ್ತಾನೆ
ಅಟ್ಟುಂಬು ಮಾತ ಕೇಳೀತೇ ತಂಗೀ ಸೋದೂರಿ
ಹೆಣ್ಣೆಲಿಯಂತೆ ಬಳ್ಕೀತೇ ಬಾಡುತೇ
ಮಾಳೂಗಿ ಒಳ್ಗೆ ನೆಡದಾರೆ | ಸೋದೂರೇ
ಅಣ್ಣಗೋಂದೀಳ್ಯ ಕೊಡುವಾಳು | ಸೋದೂರೇ
ತಾನೊಂದು ಎಲಿಯಾ ತಿಂದಾಳೋ |ಸೋದೂರೇ
ಲಾಗೊಂದು ಮಾತಾ ನುಡುದಾಳೆ |

ನೆರ‍್ಮನೆಗೆ ಹೋಪರಲ್ಲ ಹೊರಮನೆಗೆ ಹೋಪರಲ್ಲ
ಮತ್ತೊಬ್ಬರೆತ್ತ ನೆಡದಾರೆ |
ನಿನ್ನ ಗಂಡಗೆ ನಾಡು ನೆಂಟರು ತೋಲು
ಇನ್ನೊಂದು ಗಳಿಗೆ ಬರುವಾನೇ |
ಬಡವರ ಮನೆಯ ಹುಳಿಗಂಜಿ ತಿಳಿಗಂಜಿ
ಒಂದು ತುತ್ತುಣ್ಣೋ ಹರಿಯಣ್ಣ |
ಇಂದೂ ನಮ್ಮಲ್ಲಿ ಮಂಗ್ಳಾರೊಪ್ಪತ್ತು
ಅನ್ನಕ್ಕೂ ನನಗೂ ತರ್ಕಾವೇ |
ಗೆರ‍್ಸಿಲ್ ಗೇರಾಲಿಲ್ಲಾ ಒನಕೀ ತಾಗಿಸಲಿಲ್ಲ
ಸೆಳ್ಳುಗುರಲ್ ಸುಲದೇ ಅಡಗೀಯ | ಮಾಡಿದೆನೋ

ಒಂದು ತುತ್ತುಣ್ಣೋ ಹೆರಿಯಣ್ಣ |
ಇಂದೇ ನಮ್ಮಲ್ಲಿ ಸುಕ್ರಾರದೊಪ್ಪತ್ತು |
ಎಂಜ್ಲ ಮಯ್ಲಗಿಯ ಬೆರಸ ಬಾರಾ |
ಎಂಜ್ಲ ಮಯ್ಲುಗಿಯ ಗವ್ಡಿಯರ್ ಕಯ್ಲ ತೆಗಸ್ವೆ
ಒಂದು ತುತ್ತುಣ್ಣೋ ಹೆರಿಯಣ್ಣ |
ಅಡಗೀಯ ಮಾಡುವೆಂದಿ ಸಡಗರ ಬ್ಯೆಡಾ ತಂಗಿ
ಕಂದನ ಕಾಳಕ್ಕೆ ಕಲಿ ಮಾಡು |
ಕಡಬಾಯ್ ಹಲ್ ಹುಟ್ಟಲಿಲ್ಲ ನೆತ್ತಿ ಸುಳಿ ತುಂಬಲಿಲ್ಲ
ನನ ಬಾಲ ಕಾಳಗವ ಕಲಿಲಿಲ್ಲ |
ಅರಸ್ ಗೋಳ ಮಕ್ಕಳ್ಗೆ ಕಲಿಸ್ ಬೇಕೇ ಬುದ್ಧಿಯ

ಕಲ್ತಿಪ್ರು ತಾಯ ಗರ್ಬಲ್ಲಿ | ಗಂಡು ಮಕ್ಳು
ಕಡಚಕ್ರ ನಾದೀ ಗೆಲ್ ಬೇಕು |
ಬೇಲಿದ್ದೆ ಕೆಯ್ ತಿಂಬಂಗೆ ಬೆರ‍್ಗೆಕಿಚ್ಚಿಡುವಂಗೆ
ನೀಗಿದ್ದಿ ನನ ಮಗನ ಕುಲುವಂಗೆ |ದೆವರೆ
ನಾನ್ಯಾರಿಗ್ ಹೇಳೀ ಮರಗಲೆ
ನಿನ್ನಾಲಾ ಮಗನೀಗೆ ನನ್ಹಿಣ್ಣ ಕೊಟ್ಟೀದೆ
ನಿನ್ನಟ್ಟು ದುಕ್ಕ ನನಗುಂಟು ಸೋದರಿ.
ಕಂದನ ಕಾಳಕ್ಕೆ ಕಲಿಮಾಡು |
ಅಟ್ಟುಂಬ ಮಾತಾ ಕೇಳೀತೇ ತಂಗ್ ಸೊದರಿ
ಮಾಳುಗಿಲಿಂದ ಹೆರುಗೆ ಬರುವಾಳೆ |

ಸೂಡೀಗೆದ್ದೀಲೀ ಸೋಡಿಯಾಡು ಆಗಮಂಜು
ಹೆಣ್ಣ ಕೊಟ್ಟ ಮಾವ ಕರೆದಾನೆ |
ಅಟ್ಟುಂಬ ಮಾತನೇ ಕೇಳಾನೆ ಅಗಮಂಜು
ಬೋರಿನೇ ಆನೀ ನೆಗ್ದತ್ತಿ | ಅಗಮಂಜು
ಬೋರಿನೇ ಆನೀ ಹೊಡದಾನೆ |
ಬೋರೀನೇ ಆನೀ ಹೊಡವದ್ನು ಅಗಮಂಜೂಗೆ
ಸತ್ತಗಿ ಸಾವಿರವೇ ತಡದದೆ |
ಸತ್ತಗಿ ಸಾವಿರ ತಡವದ್ನು ಅಗಮಂಜು
ಬಂದೀ ಬಾಗಲ್ಲೇ ನಿಲುವಾನೇ | ಅಗಮಂಜು
ಆಗಿನಿಂದ್ ಕೆಳಗೇ ಇಳದಾನೆ | ಅಗಮಂಜು

ತಾಯಿಯ ಸಿರಿಪದಕೆ ಸರನೆಂದ |ತಾಯವ್ವಿ
ಆಗೊಂದು ಮಾತ ನುಡಿದಾಳೆ |
ಸುತ್ತನ ಮಣಿನಾಡ ಎತ್ತಂದರಸೀತೆ ಮಗನೇ
ಹೆಣ್ಣ ಕೊಟ ಮಾವಕರದಾನೆ | ಮಗನೇ ಕೇಳು
ಮಾವನ ಸಿರಿಪದಕೆ ಸರಣೆನ್ನು |
ಅಟ್ಟಂಬು ಮಾತಾ  ಹೇಳಾಳೇ ತಾಯ್ ಸೋದೂರಿ
ಕೈತೊಟ್ಟು ಪಾದಕೆ ಸರಣೆನ್ಸಿ | ಅಗಮಂಜು
ಮಾವನ ಸಿರಿಪದಕ್ಕೆ ಸರಣೆಂದ|
ಬಡವರ ಮಕ್ಕಳ ಹೊಗಿಯಾಕಿ ಕೊಲ್ಲುವೆ
ಮಸಿಮಣ್ಣ ಮಾಡಿ ಮಡಗೂವೆ |

ಅಟ್ಟಂಬು ಮಾತಾ ಕೇಳಾನೇ ನಾರ್ಣದೆವ
ಕೂತ ಗದ್ದಿಗೆಯ ಜಡಿದೆದ್ದಿ | ನಾರ್ಣದೆವಾ
ಹೋಗಿ ಬಾಗ್ಲಲ್ಲೇ ನಿಲ್ವಾನೆ | ನಾರ್ಣದೆವಾ
ಬಾಗ್ಲೋರೆ ಎಂದು ದೆನಿದೋರಿ ಕರೆವುದ್ನು
ಒಯ್ಗುಂಡೆ ಒಡ್ನೆ ಬರುವಾರು | ಬಾಗಿಲವ್ರು
ಏನುಕಾರಣ್ಲೆ ಕರೆದೀರಿ |
ಕರ್ದಂಬ್ ಕಾರ್ಯ ಸಯ್ ಕಿರ್ದಂಬ್ ಬೆಸರ ಸಯ್
ನನಗಿಂದು ಹಿಂದೆ ಅಗಮಂಜು |ದೊರೆ ಬರ್ತ
ತಡ್ದ ಬಾಗಿಲವ ಬಿಡಬೇಡಿ |
ಅವನುಟ್ಟ ಪಟ್ಟೀಯ ಉಡಗೇರಿ ಕೊಟ್ಟಂಕು

ತಡದ ಬಾಗಲವ ಬಡಿಬೇಡಿ |
ನಾರ್ಣದೆವ ಅಳಿಯನೆಂಬ ಮಂದ್ರಿ ಪುರಿಸನೆಂಬ
ಊರ ಆಳೂವ ಅಗಮಂಜು| ದೊರೆತಾನು
ಉಟ್ಟ ಪಟ್ಟೆಯ ತಾನು ಕಂಡೆನೆಂಬ |
ನಾರ್ಣದೆವ್ನ ಅಳಿಯನಾದ್ರೇನು ಊರಿಗ್ ದೊರೆಯಾದ್ರೇನು
ನೀನುಟ್ಟ ಪಟ್ಟೀ ಉಡಗೇರಿ | ಕೊಟ್ಟಂಕು
ತಡೆವ ಬಾಗಿಲವ ಬಿಡುದಿಲ್ಲ | ಎಂದೇಳಿ
ಮುಂದೀನ ಬಾಗಲಕೇ ನೆಡದಾನೆ | ನಾರ್ಣದೆವ
ಬಾಗ್ಲೂರೆ ಎಂದು ದೆನಿದೋರಿ | ಕರೆವದ್ನು
ಬಾಗ್ಲವ್ರು ಒಡ್ನೆ ಬರುವಾರು | ಬಾಗ್ಲವ್ರು

ಏನು ಕಾರಣ್ಲೆ ಕರೆದೀರಿ |
ನನಗಿಂದು ಹಿಂದೆ ಅಗಮಂಜು ದೊರೆಬರ್ತ
ಅವ ಉಟ್ಟೆ ಪಟ್ಟೆ ಉಡಗೇರಿ | ಕೊಟ್ಟಂಕು
ತಡದ ಬಾಗಿಲವ ಬಿಡಬೇಡಿ | ಅಂದೇಳಿ
ಬಾಗ್ಲೋರ್ಗೆ ಬುದ್ದೀ ಒರದಾನೆ | ನಾರ್ಣದೆವ
ತನ್ನಾಲರಮನ್ಗೆ ನೆಡದಾನೆ | ನಾರ್ಣದೆವ
ಮಾಳೂಗಿ ಒಳಗೆ ನೆಡದಾನೆ | ನಾರ್ಣದೆವ
ತೂಗು ಮಂಚದಲ್ಲೇ ಕುಳುತಾನೆ |
ತೂಗು ಮಂಚದಲ್ಲೇ ಕುಳುವುದ್ನು ಮಗಳು ಮಂದೂರಿ
ಬಂದು ತೊಡಿಮೆನೆ ಕುಳಿತಾಳೆ ನಾರ್ಣದೆವ

ನೆತ್ತೀಯ ಕಿಟ್ಟೀ ಅಳಗಾನೆ
ನನಗಿಂದು ಹಿಂದೆ ಅಗಮಂಜು ದೊರೆ ಬರ್ತ
ಏನೆಂದು ಮಗಳೇ ಹರಸೀತೆ |