ಹಲವು ಗಜಗಳು ಸಿಂಹಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನಮರಿಯ ಮುರಿದವೊಲಾಯಿತಕಟೆನುತ!
ಅಳಲಿದುದು ಸುರನಿಕಟ.

ಭಾಷೆ ಸುಲಭವಾಗಿದೆ, ಅರ್ಥವಾಗುತ್ತದೆ ಅಲ್ಲವೆ? ಸುರನಿಕಟ ಎಂದರೆ ದೇವತೆಗಳ ಗುಂಪು. ದೇವತೆಗಳ ಗುಂಪು ದುಃಖಪಡುತ್ತ ಹೇಳಿತಂತೆ: ‘ಅನೇಕ  ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಗೆದ್ದ ಹಾಗಾಯಿತು, ಹಾವಿನ ಬಳಗವೇ ಸೇರಿ ಒಂದು ಗರುಡನ ಮರಿಯನ್ನು ಕೊಂದ ಹಾಗಾಯಿತು.’

ಮಹಾಭಾರತ ಕಥೆಯನ್ನು ಕೇಳಿದ್ದೀರಿ, ಅಲ್ಲವೆ? ಪಾಂಡವರು ಮತ್ತು ಕೌರವರ ಈ ಕಥೆಯನ್ನು ವ್ಯಾಸ ಮಹಾಕವಿ ಹೇಳಿದರು. ಕನ್ನಡದಲ್ಲಿ ಕುಮಾರವ್ಯಾಸ ಎಂಬ ಹೆಸರಿನಿಂದ ಪ್ರಸಿದ್ಧನಾದ ಕವಿ ಇದನ್ನು ಬಹು ಸುಂದರವಾಗಿ ಪದ್ಯರೂಪದಲ್ಲಿ ಹೇಳಿದ್ದಾನೆ. (ಆತನ ನಿಜವಾದ ಹೆಸರು ಗದುಗಿನ ನಾರಣಪ್ಪ.)

ಮಹಾಭಾರತ ಯುದ್ಧದಲ್ಲಿ ಎಂತೆಂತಹ ಮಹಾವೀರರು ಹೋರಾಡಿದರು! ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ, ಭೀಷ್ಮ, ದ್ರೋಣ, ಕರ್ಣ, ಕೃಪ, ಅಶ್ವತ್ಥಾಮ, ಶಲ್ಯ…… ದೊಡ್ಡ ಪಟ್ಟಿಯನ್ನು ಬೆಳೆಸಬಹುದು. ಈ ವೀರರ ಪರಾಕ್ರಮವನ್ನು ನೋಡಲು ದೇವತೆಗಳೇ ಆಕಾಶದಲ್ಲಿ ಗುಂಪಾಗಿ ಸೇರಿದ್ದರಂತೆ. ಇಂತಹ ವೀರಾಧಿವೀರರ ಸಾಹಸಗಳನ್ನು ನೋಡಿ ಬೆರಗಾದ ದೇವತೆಗಳು ಸಹ, ಒಬ್ಬ ವೀರ ಸತ್ತಾಗ ಅವನ ಪರಾಕ್ರಮವನ್ನು ಮೆಚ್ಚಿ, ಒಬ್ಬನನ್ನು ಅನೇಕ ಶತ್ರುಗಳು ಸೇರಿ ಕೊಂದರಲ್ಲ ಎಂಬ ದುಃಖದಿಂದ, ‘ಅನೇಕ ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಗೆದ್ದ ಹಾಗಾಯಿತು, ಹಾವಿನ ಬಳಗವೇ ಸೇರಿ ಒಂದು ಗರುಡನ ಮರಿಯನ್ನು ಕೊಂದ ಹಾಗಾಯಿತು’ ಎಂದು ಕಣ್ಣೀರಿಟ್ಟರು ಎಂದು ವರ್ಣಿಸುತ್ತಾನೆ ಕುಮಾರವ್ಯಾಸ.

ಭೀಷ್ಮ, ದ್ರೋಣ, ಭೀಮ, ಅರ್ಜುನ, ಕರ್ಣ, ಅಶ್ವತ್ಥಾಮ, ದುರ್ಯೋಧನ, ದುಶ್ಯಾಸನ ಮೊದಲಾದ ಶೂರರ ಮಧ್ಯೆ ಇಂತಹ ಮೆಚ್ಚಿಕೆ ಪಡೆದ ಶೂರ ಯಾರು?

ಅವನಿನ್ನೂ ಹುಡುಗ. ಅವನ ಪರಾಕ್ರಮಕ್ಕೆ ಇಡೀ ಕೌರವರ ಸೈನ್ಯವೇ ತಲ್ಲಣಿಸಿಹೋಯಿತು. ಕೌರವರಲ್ಲಿ ಸಮಾನರಿಲ್ಲದ ಶೂರರು ಎನ್ನಿಸಿಕೊಂಡವರು ಓಡಿಹೋಗಬೇಕಾಯಿತು. ಅವರೆಲ್ಲ ಸೇರಿ ಸುತ್ತುಗಟ್ಟಬೇಕಾಯಿತು, ಆ ಒಬ್ಬ ಹುಡುಗನನ್ನು ಸೋಲಿಸಿ ಕೊಲ್ಲುವುದಕ್ಕೆ.

ಆ ಸಿಡಿಲಿನ ಮೂರ್ತಿ ವೀರ ಅಭಿಮನ್ಯು.

ಸುಭದ್ರೆಗೆ ಮಗುವಾಯಿತು

ಅಭಿಮನ್ಯು ಶ್ರೀಕೃಷ್ಣನ ಸೋದರಳಿಯ, ಎಂದರೆ ತಂಗಿಯ ಮಗ. ಕೃಷ್ಣನ ತಂಗಿ ಸುಭದ್ರೆ. ಅವಳು ಪಾಂಡವರಲ್ಲಿ ಒಬ್ಬನೂ ಇಡೀ ಪ್ರಪಂಚದಲ್ಲಿಯೆ ಪ್ರಸಿದ್ಧನಾದ ವೀರನೂ ಆಗಿದ್ದ ಅರ್ಜುನನ್ನು ಮದುವೆಯಾಗಿದ್ದಳು. ಸುಭದ್ರೆ-ಅರ್ಜುನ ಇವರ ಮಗ ಅಭಿಮನ್ಯು.

ಅರ್ಜುನ ಇದ್ದುದು ಇಂದ್ರಪ್ರಸ್ಥ ಎಂಬ ಪಟ್ಟಣದಲ್ಲಿ. ಈ ಪಟ್ಟಣ ಹಿಂದೆ ಬಹಳ ಹೆಸರುವಾಸಿಯಾಗಿತ್ತು. ಧರ್ಮವಂತರೂ, ನೀತಿವಂತರೂ, ನ್ಯಾಯವನ್ನು ಪಾಲಿಸುವವರೂ ಆದ ಪಾಂಡವರ ರಾಜಧಾನಿ ಇದಾಗಿತ್ತು. ಅವರು ಪಾಂಡು ಎಂಬ ರಾಜನ ಮಕ್ಕಳು. ಪಾಂಡುರಾಜನಿಗೆ ಐದು ಜನ ಮಕ್ಕಳಿದ್ದರು. ಮೊದಲ ಮಗ ಧರ್ಮರಾಯ, ಅನಂತರ ಭೀಮ, ಮೂರನೆಯವನು ಅರ್ಜುನ, ನಾಲ್ಕನೆಯ ಮಗ ನಕುಲ, ಕಡೆಯವನು ಸಹದೇವ.

ಧರ್ಮರಾಯ ಹಿರಿಯ, ಆದ್ದರಿಂದ ಅವನ ಮಾತನ್ನು ಉಳಿದ ನಾಲ್ವರು ತಮ್ಮಂದಿರು ಕೇಳುತ್ತಿದ್ದರು. ಅವನೇ ರಾಜ್ಯದ ರಾಜ. ತಮ್ಮಂದಿರು ರಾಜ್ಯದ ರಕ್ಷಣೆ, ಆಡಳತಿ ಇವುಗಳಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದರು. ಧರ್ಮರಾಯನ ಆಳ್ವಿಕೆಯಲ್ಲಿ ಜನರು ಆನಂದದಿಂದಿದ್ದರು. ಅಭಿಮನ್ಯು ಸುಬದ್ರೆಯ ಒಬ್ಬನೇ ಮಗ. ಅವನು ಹುಟ್ಟುವ ಕೆಲವು ತಿಂಗಳ ಮೊದಲು ತಂಗಿಯನ್ನು ತನ್ನ ನಗರವಾದ ದ್ವಾರಕೆಗೆ ಕರೆದುಕೊಂಡು ಹೋಗಲು ಕೃಷ್ಣ ಇಂದ್ರಪ್ರಸ್ಥಕ್ಕೆ ಬಂದ. ಸುಭದ್ರೆ ಹಿರಿಯರಿಗೆಲ್ಲ ನಮಸ್ಕರಿಸಿ ಅವರ ಆಶೀರ್ವಾದ ಪಡೆದು ಹೊರಟಳು.

ಇಂದ್ರಪಸ್ಥದಿಂದ ದ್ವಾರಕೆಗೆ ಅವರು ಕುದುರೆಗಳನ್ನು ಕಟ್ಟಿದ ರಥದಲ್ಲಿ ಪ್ರಯಾಣ ಮಾಡುತ್ತಿದ್ದರು. ಶ್ರೀಕೃಷ್ಣ ರಥ ನಡೆಸುತ್ತಿದ್ದ. ತುಂಬಿದ ಗರ್ಭವತಿಯಾದ ತಂಗಿಗೆ ಆಯಾಸವಾಗಬಾರದೆಂದು ಅವನ ಆಸೆಯಾಗಿತ್ತು.

ತುಂಬಾ ದೂರ ಹೋಗಬೇಕಾಗಿತ್ತು. ಮೊದಲು ಸುಭದ್ರೆ ದ್ವಾರಕೆಯ ಬಗ್ಗೆ, ಅಲ್ಲಿನ ಜನಗಳ ಬಗ್ಗೆ, ಅತ್ತಿಗೆಯರ ಬಗ್ಗೆ, ಪ್ರಶ್ನೆ ಕೇಳಿದಳು. ಕೃಷ್ಣ ವಿವರವಾಗಿ ತನ್ನೂರ ಸುದ್ದಿ ತಿಳಿಸಿದ. ತಂಗಿಗೆ ಪ್ರಯಣ ಬೇಸರವಾಗಬಾರದು ಎಂದು ಕೃಷ್ಣನ ಆಸೆ. ಕಥೆ ಹೇಳಲೆ ಎಂದ. “ಕಥೆ ಬೇಡಣ್ಣ, ನೀನು ಹೇಳುವುದಾದರೆ, ನನ್ನ ಪತಿ ತುಂಬಾ ಯುದ್ಧವಿದ್ಯೆಗಳನ್ನು ಕಲಿತಿದ್ದಾರಲ್ಲ…….” “ಓಹೋ, ನೀನು ಯುದ್ಧ ಮಾಡುತ್ತೀಯ?” ಕೃಷ್ಣ ನಕ್ಕು ಹೇಳಿದ. “ಗಂಡನಿಗೆ ಸಹಾಯ ಮಾಡಲು ನಾನು ಯುದ್ಧ ಮಾಡಿದರೆ ತಪ್ಪೇ ಅಣ್ಣ?” ಸುಭದ್ರೆ ಕೇಳಿದಳು. “ತಪ್ಪಲ್ಲ, ಆದರೆ ನಿನಗೆ ಅಂತಹ ಕಾಲ ಬರುವುದಿಲ್ಲ,” ಶ್ರೀಕೃಷ್ಣ ಹೇಳಿದ. “ಅವರು ವೀರರಣ್ಣ. ಯುದ್ಧದಲ್ಲಿ ಅವರಿಗೆ ಭಯವೇ ಇಲ್ಲ. ಅವರ ಜೀವನವೆಲ್ಲಾ ಹೋರಾಟ, ಯುದ್ಧಕ್ಕಾಗಿ ತರಬೇತಿ ಆಯಿತಂತೆ ಅಣ್ಣ.” ತಂಗಿಯ ಮಾತು ಕೇಳಿ ಕೃಷ್ಣ ಯೋಚಿಸಿದ. ತಂಗಿಗೆ ಈ ಕಾಲದಲ್ಲಿ ಏನಾದರೂ ಇಷ್ಟಪಟ್ಟರೆ ಅದನ್ನು ನಡೆಸಬೇಕು. ಅವಳಿಗೆ ಈಗ ಯುದ್ಧದಲ್ಲಿ ಆಸಕ್ತಿ ಇದೆ. ಇವಳ ಮಗನು ಮುಂದೆ ಧರ್ಮಕ್ಕಾಗಿ ಹೋರಾಡಬೇಕು. ಅದೇ ತಂಗಿಯ ಬಯಕೆಯಾಗಿದೆ. ಹೀಗೆ ಯೋಚಿಸಿದ ಕೃಷ್ಣ. ಅರ್ಜುನನು ತನ್ನ ಗುರುಗಳಾದ ದ್ರೋಣರಲ್ಲಿ ಕಲಿತ ಯುದ್ಧದ ಮರ್ಮಗಳನ್ನು ಕೃಷ್ಣ ವಿವರವಾಗಿ ಹೇಳಿದ. ‘ಮಕರವ್ಯೂಹ’, ‘ಚಕ್ರವ್ಯೂಹ’, ನಾನಾ ಬಗೆಯ ಶಸ್ತ್ರಾಸ್ತ್ರಗಳ ಬಿಡುವಿಕೆ, ಎದುರಿಸುವಿಕೆ, ವೈರಿಗಳನ್ನು ಸದೆಬಡಿದು ಮುನ್ನುಗ್ಗುವಿಕೆ, ಎಲ್ಲವನ್ನೂ ವಿವರಿಸಿದ. ಅರ್ಜುನದ ಶೌರ್ಯದ ಕಥೆಗಳನ್ನು ಹೇಳಿದ.

“ಇದನ್ನು ಕೇಳಿ ನನಗೆ ತುಂಬಾ ಸಂತೋಷವಾಗಿದೆ, ಅಣ್ಣ”.

“ಯಾಕೆ, ತಂಗಿ?”

“ಇಂತಹ ವೀರರ ಹೆಂಡತಿಯಾದ ನಾನು ಧನ್ಯೆ. ಅವರಂತೆ ನನ್ನ ಮಗನೂ ವೀರನಾಗುವಂತೆ ನೀನು ಸಹಾಯ ಮಾಡು, ಅಣ್ಣ”.

ತಂಗಿಯ ಮಾತುಗಳಿಂದ ಕೃಷ್ಣನಿಗೆ ಬಹಳ ಸಂತೋಷವಾಯಿತು. ಸ್ವತಃ ಅವನು ಅಸಮಾನ ಶೂರ. ಪ್ರಜೆಗಳಿಗೆ ತುಂಬ ಹಿಂಸೆ ಕೊಡುತ್ತಿದ್ದ ರಾಜ ಕಂಸನನ್ನು ಶ್ರೀಕೃಷ್ಣ ಹುಡುಗನಾಗಿದ್ದಾಗಲೆ ಕೊಂದುಹಾಕಿದ್ದ. ಜರಾಸಂಧ, ಶಿಶುಪಾಲ ಮೊದಲಾದ ರಾಜರು ತುಂಬ ಪರಾಕ್ರಮಿಗಳು, ಆದರೆ ದುಷ್ಟರು. ಅವರು ಮತ್ತೆಮತ್ತೆ ಯಾದವರಿಗೆ ತೊಂದರೆ ಕೊಡುತ್ತಿದ್ದರು. ಯಾದವರನ್ನು  ಕೃಷ್ಣ, ತನ್ನ ಅಣ್ಣ ಬಲರಾಮನ ಸಹಾಯದಿಂದ ರಕ್ಷಿಸಿದ್ದ. ತನ್ನ ತಂಗಿ, ವೀರ ಅರ್ಜುನನ ಹೆಂಡತಿ, ಸುಭದ್ರೆ ತನ್ನ ಮಗನೂ ವೀರನಾಗಬೇಕೆಂದು ಬಯಸಿದುದು ಅವನಿಗೆ ತುಂಬ ಸಂತೋಷವನ್ನುಂಟುಮಾಡಿತು. ‘ನಿನ್ನ ಮಗ ಶೂರನಾಗಲಿ, ಕೀರ್ತಿವಂತನಾಗಲಿ’ ಎಂದು ಹರಸಿದ.

ಕೃಷ್ಣ-ಸುಭದ್ರೆಯರು ದ್ವಾರಕೆಯನ್ನು ಸೇರಿದರು. ಅವರ ತಂದೆ, ತಾಯಿ, ಬಂಧು, ಬಳಗ ಅವರನ್ನು ತುಂಬ ಸಂತೋಷದಿಂದ ಬರಮಾಡಿಕೊಂಡರು. ಸುಭದ್ರೆಗೆ ಆರತಿ ಮಾಡಿ ಅರಮನೆಯೊಳಕ್ಕೆ ಕರೆದುಕೊಂಡು ಹೋದರು.

ಕೆಲವು ದಿನಗಳ ನಂತರ ಸುಭದ್ರೆಗೆ ಗಂಡು- ಮಗುವಾಯಿತು. ಈ ಮಗುವಿಗೆ ಅಭಿಮನ್ಯು ಎಂದು ಹೆಸರಿಟ್ಟರು. ಅಭಿಮನ್ಯು ಎಂದರೆ ‘ಬುದ್ಧಿಯ ಮಧ್ಯೆಯೆ ಇರುವವನು’ (ಎಂದರೆ ಬಹು ಬುದ್ಧಿವಂತ) ಎಂದು ಅರ್ಥ; ತನ್ನ ಗೌರವವನ್ನು ಕಾಪಾಡಿಕೊಳ್ಳುವವನು ಎಂದೂ ಇನ್ನೊಂದು ಅರ್ಥ.

ಸುಭದ್ರೆಗೆ ಮುದ್ದು ಮಗ ಹುಟ್ಟಿದನೆಂದು ಅರಮನೆಯ ರಾಣಿಯರು, ಶ್ರೀಕೃಷ್ಣ, ಬಲರಾಮ, ಪರಿವಾರ ಎಲ್ಲರೂ ಸಂತೋಷದಿಂದ ತುಂಬಿಹೋದರು. ಯಾದವರೆಲ್ಲ ಒಟ್ಟು ಸೇರಿ ಹಬ್ಬವನ್ನೇ ಆಚರಿಸಿದರು.

ಮಗು ಹುಟ್ಟಿದ ಸುದ್ದಿ ಕೇಳಿ ಇಂದ್ರಪ್ರಸ್ಥದಲ್ಲಿ ಪಾಂಡವರಿಗೂ ಸಂಭ್ರಮವೋ ಸಂಭ್ರಮ. ಊರಿನ ಜನರಿಗೆಲ್ಲ ಸಿಹಿ ಹಂಚಿದರು. ಬಡವರಿಗೆ ಬಟ್ಟೆಬರೆ ಹಂಚಿದರು, ಅನ್ನದಾನ ಮಾಡಿದರು.

ಇಂದ್ರಪ್ರಸ್ಥಕ್ಕೆ, ಮತ್ತೆ ದ್ವಾರಕೆಗೆ

ಕೆಲವು ತಿಂಗಳ ನಂತರ ಸುಭದ್ರೆಯನ್ನೂ ಅಭಿಮನ್ಯುವನ್ನೂ ಶ್ರೀಕೃಷ್ಣ ವೈಭವದಿಂದ ಇಂದ್ರಪ್ರಸ್ಥಕ್ಕೆ ಕರೆದುಕೊಂಡು ಹೋಗಿಬಿಟ್ಟ. ಅರಮನೆಯಲ್ಲಿ ಎಲ್ಲರ ಕಣ್ಮರೆಯಾಗಿ ಬೆಳೆಯುತ್ತಿದ್ದ ಹುಡುಗ.

ಅಭಿಮನ್ಯು ಸ್ವಲ್ಪ ದೊಡ್ಡವನಾಗುತ್ತಲೇ ಅವನಿಗೆ ವಿದ್ಯಾಭ್ಯಾಸ ಪ್ರಾರಂಭವಾಯಿತು. ರಾಜಕುಮಾರನಿಗೆ ಅಗತ್ಯವಾದ ಯುದ್ಧವಿದ್ಯೆಯ ಅಭ್ಯಾಸವೂ ಪ್ರಾರಂಭವಾಯಿತು. ತಂದೆ ಜಗತ್ತಿನಲ್ಲೆ ಪ್ರಖ್ಯಾತನಾದ ಬಿಲ್ಲುಗಾರ ಅರ್ಜುನ; ದೊಡ್ಡಪ್ಪ ಗದಾಯುದ್ಧದಲ್ಲಿ ಶತ್ರುಗಳ ಎದೆಯನ್ನು ನಡುಗಿಸುವ ಭೀಮಸೇನ. ಅಭಿಮನ್ಯುವಿನ ಶಸ್ತ್ರಾಭ್ಯಾಸ ಸಾಂಗವಾಗಿ ನಡೆಯಿತು.

ಆದರೆ ಅವನು ಇನ್ನೂ ಚಿಕ್ಕ ಹುಡುಗನಾಗಿದ್ದಾಗಲೆ ಕಷ್ಟ ಎರಗಿತು.

ಪಾಂಡವರ ದೊಡ್ಡಪ್ಪ ಧೃತರಾಷ್ಟ್ರ. ಅವನು ಕುರುಡ. ಅವನಿಗೆ ನೂರು ಜನ ಗಂಡುಮಕ್ಕಳು. ಅವರಲ್ಲಿ ಹಿರಿಯ ದುರ್ಯೋಧನ. ದುಶ್ಯಾಸನ ಅವನ ತಮ್ಮಂದಿರಲ್ಲೊಬ್ಬ. ಇವರಿಗೆ ಕೌರವರು ಎಂದು ಹೆಸರು . ಕೌರವರಿಗೆ ಪಾಂಡವರನ್ನು ಕಂಡರೆ ದ್ವೇಷ. ಹೇಗಾದರೂ ಮಾಡಿ ಅವರ ರಾಜ್ಯವನ್ನು ಕಿತ್ತುಕೊಂಡು ಓಡಿಸಬೇಕು ಎಂದು ಅವರ ಪ್ರಯತ್ನ. ದುರ್ಯೋಧನ ಧರ್ಮರಾಯನನ್ನು ಪಗಡೆಯಾಟಕ್ಕೆ ಕರೆದ, ಆಟದಲ್ಲಿ ಮೋಸದಿಂದ ಗೆದ್ದ. ಧರ್ಮರಾಯ  ಮೊದಲೇ ಒಪ್ಪಿಕೊಂಡಂತೆ, ರಾಜ್ಯವನ್ನು ಹದಿಮೂರು ವರ್ಷಗಳ ಕಾಲ ಬಿಟ್ಟುಕೊಡಬೇಕಾಯಿತು. ಇದರಲ್ಲಿ ಹನ್ನೆರಡು ವರ್ಷಗಳ ಕಾಲ ಅವರು ಕಾಡಿನಲ್ಲಿ ವಾಸಮಾಡಬೇಕು, ಒಂದು ವರ್ಷ ಯಾರಿಗೂ ತಿಳಿಯದ ಹಾಗೆ (ಎಂದರೆ ಅಜ್ಞಾತವಾಗಿ) ವಾಸಮಾಡಬೇಕು. ಈ ವರ್ಷ ಮುಗಿಯುವುದರಲ್ಲಿ ಅವರನ್ನು ಯಾರಾದರೂ ಗುರುತಿಸಿದರೆ, ಮತ್ತೆ ಹನ್ನೆರಡು ವರ್ಷ ಕಾಡಿನ ವಾಸ, ಒಂದು ವರ್ಷ ಅಜ್ಞಾತವಾಸ.

ರಾಜರಾಗಿ ವೈಭವದಿಂದ ಬಾಳುತ್ತಿದ್ದ ಪಾಂಡವರು ಕಾಡಿಗೆ ಹೊರಟರು. ಅವರ ಹೆಂಡತಿ ದ್ರೌಪದಿ. ಅವಳೂ ಅವಳ ಮಕ್ಕಳೂ ಅವರ ಜೊತೆಯಲ್ಲಿ ಹೊರಟರು. ಸುಭದ್ರೆಯೂ ಎಳೆಯ ಅಭಿಮನ್ಯುವೂ ಕಾಡಿಗೆ ನಡೆದರು.

ಅವರು ಕಾಡಿನಲ್ಲಿದ್ದಾಗ ಶ್ರೀಕೃಷ್ಣನು ಅವರನ್ನು ನೋಡಲು ಬಂದ. ರಾಜ್ಯವನ್ನು ಕಳೆದುಕೊಂಡು ಹಲವು ರೀತಿಗಳಲ್ಲಿ ಅಪಮಾನಪಟ್ಟಿದ್ದ ಪಾಂಡವರು ತುಂಬ ದುಃಖದಲ್ಲಿದ್ದರು. ಕೃಷ್ಣನು ಅವರಿಗೆ ಸಮಾಧಾನ ಹೇಳಿ, ಸುಭದ್ರೆಯನ್ನೂ ಅಭಿಮನ್ಯುವನ್ನೂ ದ್ವಾರಕೆಗೆ ಕರೆದುಕೊಂಡುಹೋದ.

ದ್ವಾರಕೆಯಲ್ಲಿ ಅಭಿಮನ್ಯುವಿನ ಶಸ್ತ್ರವಿದ್ಯಾಭ್ಯಾಸ ಮುಂದಕ್ಕೆ ಸಾಗಿತು. ಒಬ್ಬ ಸೋದರಮಾವ ಶ್ರೀಕೃಷ್ಣನೇ. ಮತ್ತೊಬ್ಬ ಸೋದರಮಾವ ಭೀಮನಿಗೇ ಗದೆಯ ವಿದ್ಯೆ ಕಲಿಸಿದ ಬಲರಾಮ.  ಇನ್ನು ಕೇಳುವುದೇನು? ಕೃಷ್ಣನು ಅಭಿಮನ್ಯುವಿಗೆ ಹಲವು ರೀತಿಯ ಅಸ್ತ್ರಗಳನ್ನು ಬಿಡುವುದು ಹೇಗೆ ಎಂದು ಹೇಳಿಕೊಟ್ಟ. ಯುದ್ಧದಲ್ಲಿ ಶತ್ರುಗಳನ್ನು ತಡೆಯಲು ಸೈನ್ಯವನ್ನು ಹಲವು ಆಕಾರಗಳಲ್ಲಿ ನಿಲ್ಲಿಸುತ್ತಿದ್ದರು. ಇಂತಹ ಜೋಡಣೆಗೆ ವ್ಯೂಹ ಎಂದು ಹೆಸರು. ಮಕರವ್ಯೂಹ ಚಕ್ರವ್ಯೂಹ ಮೊದಲಾಗಿ ವ್ಯೂಹಗಳಲ್ಲಿ ಹಲವು ಬಗೆ. ಇವನ್ನು ಸೀಳಿಕೊಂಡು ದಾರಿಮಾಡಿಕೊಂಡು ಒಳಕ್ಕೆ ಹೋಗುವುದು, ಬರುವುದು ಕಷ್ಟ. ಕೃಷ್ಣ ಇವನ್ನು ಪ್ರವೇಶಿಸುವುದು ಹೇಗೆ ಎಂದು ಹೇಳಿಕೊಟ್ಟ. ಬಲರಾಮನು ಗದಾಯುದ್ಧವನ್ನು  ಹೇಳಿಕೊಟ್ಟ.

ಹಲವು ವರ್ಷಗಳು ಕಳೆದವು. ಪಾಂಡವರು ಕಾಡಿನಲ್ಲೆ ವಾಸಮಾಡುತ್ತಿದ್ದರು. ಸುಭದ್ರೆ ಅರ್ಜುನನ ವನವಾಸ-ಅಜ್ಞಾತವಾಸಗಳು ಮುಗಿಯುವುದನ್ನೇ ಕಾಯುತ್ತ ದುಃಖದಿಂದ ದಿನಗಳನ್ನು ಕಳೆಯುತ್ತಿದ್ದಳು. ಅಭಿಮನ್ಯುವು ನೋಡುವವರ ಕಣ್ಣಿಗೆ ಹಬ್ಬವಾಗಿ, ವೀರನಾಗಿ ಬೆಳೆಯುತ್ತಿದ್ದುದನ್ನು ನೋಡುವುದೊಂದೇ ಅವಳಿಗೆ ಸಮಾಧಾನ.

ಘಟೋತ್ಕಚನೊಡನೆ ಯುದ್ಧ

ಸುಭದ್ರೆಯ ಅಣ್ಣ ಬಲರಾಮನ ಮಗಳು ಶಶಿರೇಖೆ. ಬಹು ಮುದ್ದಾದ ಹುಡುಗಿ. ಅವಳು ಚಿಕ್ಕ ಹುಡುಗಿಯಾಗಿದ್ದಾಗಲೆ ಸುಭದ್ರೆಗೆ ಅವಳು ಅಭಿಮನ್ಯುವಿನ ಹೆಂಡತಿಯಾಗಬೇಕು, ತನ್ನ ಸೊಸೆಯಾಗಬೇಕು ಎಂದು ಆಸೆ. ಪಾಂಡವರು ಕಾಡಿಗೆ ಹೋಗುವ ಮೊದಲು ಒಮ್ಮೆ ಸುಭದ್ರೆ ದ್ವಾರಕೆಗೆ ಬಂದಿದ್ದಳು. ಆಗಲೆ ಅಣ್ಣನ ಹತ್ತಿರ ತನ್ನ ಆಸೆಯನ್ನು ಹೇಳಿಕೊಂಡಿದ್ದಳು. ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜರು, ವೈಭವದಿಂದ ಬಾಳುವವರು, ಅರ್ಜುನ ಜಗತ್ತಿನಲ್ಲೆ ಪ್ರಸಿದ್ಧನಾದ ವೀರ, ಅವನ ಮಗ ಅಭಿಮನ್ಯು ಎಂದು ಬಲರಾಮನೂ ತಂಗಿಯ ಮಾತಿಗೆ ಒಪ್ಪಿದ.

ಆದರೆ ಪಾಂಡವರು ಕಾಡಿಗೆ ಹೋದಮೇಲೆ ಬಲರಾಮನ ಮನಸ್ಸು ಸ್ವಲ್ಪಸ್ವಲ್ಪವಾಗಿ ಬದಲಾಯಿಸಿತು. ಪಾಂಡವರಿಗೆ ಇರಲು ಸ್ಥಳವಿಲ್ಲ. ಕಾಡಿನಲ್ಲಿ ವಾಸ. ಇವತ್ತು ಇಲ್ಲಿ, ನಾಳೆ ಬೇರೊಂದು ಕಡೆ. ಹನ್ನೆರಡು ವರ್ಷ ಕಾಡಿನಲ್ಲಿ ವಾಸ, ಒಂದು ವರ್ಷ ಯಾರಿಗೂ ಕಾಣದಂತೆ ಇರಬೇಕು; ಆ ವರ್ಷದಲ್ಲಿ ಯಾರಿಗಾದರೂ ಗುರುತು ಸಿಕ್ಕರೆ ಮತ್ತೆ ಹನ್ನೆರಡು ವರ್ಷ ಕಾಡಿನ ವಾಸ. ಇಂತಹವರ ಮನೆಗೆ ಮಗಳನ್ನು ಕಳುಹಿಸುವುದೆ ಎನ್ನಿಸಿತು. ದುರ್ಯೋಧನ ಬಲರಾಮನ ಶಿಷ್ಯ; ಅವನನ್ನು ಕಂಡರೂ ಬಲರಾಮನಿಗೆ ಬಹು ಪ್ರೀತಿ. ಅವನ ಮಗ ಲಕ್ಷಣಕುಮಾರ. ದುರ್ಯೋಧನ ಮೊದಲೇ ರಾಜನಾಗಿದ್ದವನು, ಪಾಂಡವರ ರಾಜ್ಯವನ್ನೂ ಗೆದ್ದಮೇಲೆ ಕೇಳಬೇಕೆ?

ದುರ್ಯೋಧನ ಶಶಿರೇಖೆಯನ್ನು ಲಕ್ಷಣಕುಮಾರನಿಗೆ ಕೊಟ್ಟು ಮದುವೆ ಮಾಡಬೇಕೆಂದು ಬಲರಾಮನನ್ನು ಕೇಳಿದ. ಬಲರಾಮ ಒಪ್ಪಿದ.

ಸುಭದ್ರೆಗೆ ತುಂಬ ಸಂಕಟವಾಯಿತು. ತನ್ನ ಗಂಡನಿಗೆ ಕಷ್ಟ ಬಂದಿತೆಂದು ತನ್ನ ಸ್ವಂತ ಅಣ್ಣನೇ ತಮ್ಮನ್ನು ಕಡೆಗಣಿಸಿದನಲ್ಲ ಎಂದು ಅತ್ತಳು. ಕೃಷ್ಣನ ಮುಂದೆ ತನ್ನ ದುಃಖವನ್ನು ತೋಡಿಕೊಂಡಳು. ಕೃಷ್ಣನೂ ಬಲರಾಮನಿಗೆ ಬುದ್ಧಿವಾದ ಹೇಳಿದ: ತಂಗಿಗೆ ಸಂಕಟಪಡಿಸಬಾರದು, ಪಾಂಡವರು ಇಂದು ಕಷ್ಟದಲ್ಲಿರಬಹುದು – ನಾಳೆ ಮತ್ತೆ ಚಕ್ರವರ್ತಿಗಳಾಗುತ್ತಾರೆ ಎಂದ. ಬಲರಾಮ ಕೇಳಲಿಲ್ಲ. ಸುಭದ್ರೆಯ ದುಃಖ ಕಟ್ಟೊಡೆಯಿತು.

ಅಭಿಮನ್ಯುವಿಗೆ ತಾಯಿಯ ದುಃಖದ ವಿಷಯ ಗೊತ್ತಾಯಿತು. ತನಗೂ, ತನ್ನ ತಾಯಿಗೂ ತನ್ನ ತಂದೆಗೂ ಅವಮಾನವಾಯಿತು ಎಂದು ಅವನಿಗೂ ಬಹು ಕೋಪ. ತಾಯಿ-ಮಗ ಒಂದು ತೀರ್ಮಾನಕ್ಕೆ ಬಂದರು. ತಮಗೆ ಮರ್ಯಾದೆ ಇಲ್ಲದ ಸ್ಥಳದಲ್ಲಿ ತಾವಿರುವುದೇ ಬೇಡ; ಪಾಂಡವರು ಇರುವ ಕಡೆ ಹೋಗುವುದೇ ಸರಿ.

ಅವರು ಪ್ರಯಾಣ ಮಾಡುತ್ತಿದ್ದಾಗ ಹಿಡಿಂಬವನ ಎಂಬ ಪ್ರದೇಶಕ್ಕೆ ಬಂದರು. ಅಲ್ಲಿಯ ರಾಜ ಘಟೋತ್ಕಚ ಎಂಬುವವನು ತುಂಬ ಪರಾಕ್ರಮಶಾಲಿ. ಅವನ ತಾಯಿ ಹಿಡಿಂಬೆ. ಹಿಡಿಂಬೆ ಭೀಮನ ಹಿಂಡತಿ, ಘಟೋತ್ಕಜ ಭೀಮನ ಮಗ. ಇದು ಸುಭದ್ರೆಗೆ ಅಭಿಮನ್ಯುವಿಗೆ ತಿಳಿದಿರಲಿಲ್ಲ. ಅವರು ಹಿಡಿಂಬವನದಲ್ಲಿ ಕಾಲಿಟ್ಟರು. ತನ್ನ ಅಪ್ಪಣೆ ಇಲ್ಲದೆ ಅಲ್ಲಿ ಬಂದರೆಂದು ಘಟೋತ್ಕಚನಿಗೆ ಸಿಟ್ಟು ಬಂದಿತು. ಅವರನ್ನು ತಡೆದ. ಅಭಿಮನ್ಯು ಅರ್ಜುನನ ಮಗ, ಕೇಳಬೇಕೆ?

ಸಿಡಿದೆದ್ದ ಅಭಿಮನ್ಯು ಘಟೋತ್ಕಚನನ್ನು ನೂರು ಬಾಣಗಳಿಂದ ಹೊಡಿದೆ. ಪ್ರಾರಂಭದಲ್ಲಿ ಘಟೋತ್ಕಚ, ‘ಇವನೇನು ಮಹಾ? ಎಳೆಯ ಹುಡುಗ!’ ಎಂದು ಉದಾಸೀನದಿಂದ ಇದ್ದ. ಅವನದು ಬೆಟ್ಟದಂತಹ ಆಕಾರ, ಅಸಾಧಾರಣ ಶಕ್ತಿ. ಅವನೊಡನೆ ಹೋರಾಡುವುದು ಸುಲಭವಾಗಿರಲಿಲ್ಲ. ಅವನನ್ನು ನೋಡಿ ಸುಭದ್ರೆಯಂತೂ ನಡುಗಿಹೋದಳು.

ಆದರೆ ಆಬಿಮನ್ಯು ಲಕ್ಷ್ಯ ಮಾಡಲಿಲ್ಲ. ತನ್ನ ಮೇಲೆ ಪರ್ವತದಂತೆ ಎರಗಿದ ಘಟೋತ್ಕಚನ ಮೇಲೆ ಬಾಣಗಳನ್ನು ಬಿಟ್ಟ. ಘಟೋತ್ಕಚ ಅವನನ್ನು ತಡೆದು ಎಸೆದು ಮತ್ತೆ ಅಭಿಮನ್ಯುವಿನ ಮೇಲೆ ಹಾರಿದ. ಮತ್ತೆ ಅಭಿಮನ್ಯು ಬಾಣಗಳ ಮಳೆಯನ್ನೆ ಕರೆದ. ಅವು ಘಟೋತ್ಕಚನ ಮೈಯಲ್ಲಿ ನೆಟ್ಟವು. ಅವನಿಗೆ ನೋವನ್ನು ತಡೆಯಲಾಗಲಿಲ್ಲ. ಕೂಗಿಕೊಂಡು ಕೆಳಕ್ಕೆ ಬಿದ್ದ.

ಅವನ ಕೂಗನ್ನು ಕೇಳಿ ಹಿಡಿಂಬೆ ಅಲ್ಲಿಗೆ ಬಂದಳು. ಶೂರನಾದ ಮಗನ ಸ್ಥಿತಿಯನ್ನು ಕಂಡು ಅವಳಿಗೆ ತುಂಬ ದುಃಖವಾಯಿತು. ಅವನ ತಲೆಯನ್ನು ತೊಡೆಯ ಮೇಲೆ ಇರಿಸಿಕೊಂಡಳು. ‘ಅಯ್ಯೋ, ಭೀಮಸೇನನ ಮಗನಾದ ನಿನಗೆ ಈ ಸ್ಥಿತೆ ಬಂದಿತೆ?’ ಎಂದು ಅತ್ತಳು.

ಅವಳು ಭೀಮಸೇನನ ಹೆಸರನ್ನು ಹೇಳುತ್ತಲೆ ಸುಭದ್ರೆ-ಅಭಿಮನ್ಯು ಹೌಹಾರಿದರು. ‘ಅಯ್ಯೋ, ಇವನು ಭೀಮಸೇನನ ಮಗನೆ? ಎಂತಹ ಕೆಲಸವಾಯಿತಲ್ಲ!’ ಎಂದು ಮರುಗಿದರು. ಸುಭದ್ರೆ ಹಿಡಿಂಬಿಗೆ, ‘ಅಮ್ಮಾ ನೀನು ಯಾರೋ ನನಗೆ ತಿಳಿಯದು. ಇವನು ಭೀಮಸೇನನ ಮಗ ಎನ್ನುತ್ತೀಯೆ, ಹೇಗೆ?’ ಎಂದು ಕೇಳಿದಳು.

ಹಿಡಿಂಬೆ ಕಣ್ಣೀರಿಡುತ್ತ ಹಿಂದೆ ಭೀಮಸೇನನು ಅಲ್ಲಿಗೆ ಬಂದಾಗ ತಾನು ಅವನನ್ನು ಪ್ರೀತಿಸಿದುದು, ತನ್ನ ಅಣ್ಣ ಹಿಡಿಂಬನಿಗೂ ಭೀಮನಿಗೂ ಹೋರಾಟವಾಗಿ ಹಿಡಿಂಬ  ಸೋತು ಸತ್ತುದು, ತನ್ನನ್ನು ಭೀಮ ಮದುವೆಯಾದುದು – ಎಲ್ಲ ಕಥೆಯನ್ನೂ ಹೇಳಿದಳು. ‘ಇವನು ಘಟೋತ್ಕಚ, ನನ್ನ – ಭೀಮಸೇನನ ಮಗ’ ಎಂದಳು.

ಸುಭದ್ರೆ ಮತ್ತು ಅಭಿಮನ್ಯುವಿಗೆ, ಭೀಮನ ಮಗನೊಡನೆ ಕಾದಾಟವಾಗಿ ಹೀಗಾಯಿತಲ್ಲಾ ಎಂದು ತುಂಬ ದುಃಖವಾಯಿತು. ಅಭಿಮನ್ಯು ನೀರನ್ನು ತಂದು ಘಟೋತ್ಕಚನಿಗೆ ಉಪಚರಿಸಿದ. ಸುಭದ್ರೆ ಹಿಡಿಂಬಿಗೆ ‘ಅಮ್ಮ, ನೀನು ನಿಜವಾಗಿ ನನಗೆ ಅಕ್ಕನಾಗಬೇಕು, ನಾನು ಅರ್ಜುನದೇವನ ಹೆಂಡತಿ, ಕೃಷ್ಣನ ತಂಗಿ, ಇವನು ನನ್ನ ಮಗ ಅಭಿಮನ್ಯು’ ಎಂದಳು.

ಈ ಹೊತ್ತಿಗೆ ಘಟೋತ್ಕಚನಿಗೆ ಮೂರ್ಛೆ ಹೋಗಿ ಎಚ್ಚರವಾಯಿತು. ತಾಯಿ ಅವನಿಗೆ ಎಲ್ಲವನ್ನೂ ಹೇಳಿದಳು. ತಾನು ಸೋತೆನಲ್ಲ ಎಂದು ಬೆಂಕಿಯಾಗಿದ್ದ ಅವನಿಗೆ, ತನ್ನ ತಮ್ಮ ಎಂತಹ ಬಲಶಾಲಿ ಎಂದು ಸಂತೋಷವಾಯಿತು. ಸುಭದ್ರೆಯನ್ನೂ ಅಭಿಮನ್ಯುವನ್ನೂ ತನ್ನ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ. ಅವರು ದ್ವಾರಕೆಯನ್ನು ಏಕೆ ಬಿಟ್ಟರು ಎಂದು ತಿಳಿದುಕೊಂಡ.

ಬಲರಾಮ ಮಾತಿಗೆ ತಪ್ಪಿದ, ಅಲ್ಲದೆ ಭೀಮಾರ್ಜುನರನ್ನು ಕಾಡಿಗೆ ಕಳುಹಿಸಿದ ದುರ್ಯೋಧನನ ಮಗನಿಗೆ ಕೊಟ್ಟು ಶಶಿರೇಖೆಗೆ ಮದುವೆ ಮಾಡುತ್ತಾನೆ ಎಂದು ಕೇಳಿ ಘಟೋತ್ಕಚನಿಗೆ ಮೈಯೆಲ್ಲ ಉರಿಯಾಯಿತು. ಏನೇ ಆಗಲಿ, ಅಭಿಮನ್ಯುವೇ ಅವಳನ್ನು ಮದುವೆಯಾಗಬೇಕು ಎಂದು ತೀರ್ಮಾನಿಸಿದ. ಸುಭದ್ರೆ ಅಭಿಮನ್ಯು ಇವರನ್ನು ದ್ವಾರಕೆಗೆ ಕರೆದುಕೊಂಡು ಹೋದ. ಶಶಿರೇಖೆಯನ್ನು ಕರೆದುಕೊಂಡು ಬಂದು ಅವರ ಬಳಿ ಬಿಟ್ಟ. ಶಶಿರೇಖೆಗೂ ಅಭಿಮನ್ಯುವನ್ನು ಮದುವೆಯಾಗುವ ಆಸೆ ಇತ್ತು. ಅವರಿಬ್ಬರಿಗೂ ತುಂಬ ಸಂತೋಷವಾಯಿತು. ಘಟೋತ್ಕಚನ ಉಪಾಯದಿಂದ ದುರ್ಯೋಧನ ಲಕ್ಷಣರು ಹೊರಟುಹೋದರು. ಬಲರಾಮನೂ ಅಭಿಮನ್ಯುವೇ ಶಶಿರೇಖೆಯನ್ನು ಮದುವೆಯಾಗಲು ಒಪ್ಪಿದ. ಅವರ ಮದುವೆ ಬಹು ವೈಭವದಿಂದ ನಡೆಯಿತು.

ಹೀಗೆ ಚಿಕ್ಕವನಾಗಿದ್ದಾಗಲೇ ಅಭಿಮನ್ಯುವು ಮಹಾವೀರ ಘಟೋತ್ಕಚನ ಜೊತೆಗೆ ಹೋರಾಡಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟ.

ಉತ್ತರೆಯೊಡನೆ ಮದುವೆ

ಹನ್ನೆರಡು ವರ್ಷಗಳು ಕಳೆದುವು. ಪಾಂಡವರ ಕಾಡಿನ ವಾಸ ಮುಗಿಯಿತು. ಯಾರಿಗೂ ಗುರುತು ತಿಳಿಯದಂತೆ ಇನ್ನೊಂದು ವರ್ಷವನ್ನು ಅವರು ಕಳೆಯಬೇಕಲ್ಲ? ವಿರಾಟ ಎಂಬ ರಾಜನ ಆಸ್ಥಾನಕ್ಕೆ ಹೋದರು. ಒಬ್ಬೊಬ್ಬರು  ಒಂದೊಂದು ವೇಷ ಹಾಕಿಕೊಂಡು ಅಲ್ಲಿ ಕೆಲಸಕ್ಕೆ ಸೇರಿದರು. ಬಹು ವೈಭವದಿಂದ ಬಾಳಿದ ವೀರ ಪಾಂಡವರೂ ಅವರ ಹೆಂಡತಿ, ಮಹಾರಾಜ ದ್ರುಪದನ ಮಗಳು, ತಾನೇ ಇಂದ್ರಪ್ರಸ್ಥದ ಮಹಾರಾಣಿ ದ್ರವಪದಿ ಇತರರ ಸೇವೆಯನ್ನು ಮಾಡುತ್ತ ಒಂದು ವರ್ಷವನ್ನು ಕಳೆಯಬೇಕಾಯಿತು. ಎಷ್ಟು ದುಃಖ, ಎಷ್ಟು ಅಪಮಾನ ಸಹಿಸಬೇಕಾಯಿತು! ಅರ್ಜುನನು ನೃತ್ಯವನ್ನು ಹೇಳಿಕೊಡುವ ಗುರುವಿನ ವೇಷದಲ್ಲಿ, ವಿರಾಟನ ಮಗಳು ಉತ್ತರೆಗೆ ನೃತ್ಯವನ್ನು ಕಲಿಸುತ್ತ ವರ್ಷವನ್ನು ಕಳೆದ. ವರ್ಷವು ಮುಗಿದ ಮೇಲೆ ಪಾಂಡವರು ತಮ್ಮ ನಿಜರೂಪದಿಂದ ವಿರಾಟರಾಜನಿಗೆ ಕಾಣಿಸಿಕೊಂಡರು. ವಿರಾಟನಿಗೆ ಆಶ್ಚರ್ಯವಾಯಿತು, ಸಂತೋಷವಾಯಿತು, ಜೊತೆಗೆ ಇಂತಹ ಶೂರರು ತನ್ನ ಅರಮನೆಯಲ್ಲಿ ಸೇವಕರಾಗಿದ್ದರಲ್ಲ ಎಂದು ವ್ಯಥೆಯೂ ಆಯಿತು. ಉತ್ತರೆಯನ್ನು ಅರ್ಜುನನು ಮದುವೆ ಮಾಡಿಕೊಳ್ಳಬೇಕು ಎಂದು ಕೇಳಿದ.

ವೀರ ಅಭಿಮನ್ಯು ರಥದ ಚಕ್ರಗಳನ್ನೆ ಹಿಡಿದು ಶತ್ರುಗಳ ಮೇಲೆ ಎರಗಿದ

 ಅರ್ಜುನನು ತನಗೆ ವಯಸ್ಸಾಯಿತು, ಅಲ್ಲದೆ ಉತ್ತರೆ ತನ್ನ ಶಿಷ್ಯೆ ಎಂದು ಹೇಳಿ ಅವಳನ್ನು ಅಭಿಮನ್ಯುವಿಗೆ ಕೊಟ್ಟು ಮದುವೆ ಮಾಡಬೇಕೆಂದು ತಿಳಿಸಿದ. ವಿರಾಟನು ಒಪ್ಪಿದ.

ವಿರಾಟರಾಜನ ಪ್ರತಿನಿಧಿಗಳು ಮಂಗಳದ್ರವ್ಯಗಳು, ಒಡವೆ ವಸ್ತುಗಳನ್ನು ತೆಗೆದುಕೊಂಡು ದ್ವಾರಕೆಗೆ ಹೋದರು. ಧರ್ಮರಾಯನೂ ಅರ್ಜುನನೂ ತಮ್ಮ ಪ್ರತಿನಿಧಿಗಳನ್ನು ಬಲರಾಮಕೃಷ್ಣರಿಗೆ ಕಳುಹಿಸಿ, ಅವರು ಈ ಮದುವೆಗೆ ಒಪ್ಪಿಬಂದು ನಡೆಸಿಕೊಡಬೇಕೆಂದು ಬೇಡಿದರು. ದ್ವಾರಕೆಯ ಅರಮನೆಯಲ್ಲಿ ಸಂತೋಷವೋ ಸಂತೋಷ, ಸಂಭ್ರಮವೋ ಸಂಭ್ರಮ. ಸುಭದ್ರೆಗಂತೂ ಹೇಳಲಾರದಷ್ಟು ಹಿಗ್ಗು-ಗಂಡನ ಅಜ್ಞಾತವಾಸ ಮುಗಿಯಿತು ಎಂದು, ಮಗನಿಗೆ ಮದುವೆ ಎಂದು.

ಶುಭಮಹುಹೂರ್ತದಲ್ಲಿ ಉತ್ತರ ವೀರ ಅಭಿಮನ್ಯುವಿನ ಹೆಂಡತಿಯಾದಳು.

ವೀರ ಅಭಿಮನ್ಯು

ದುರ್ಯೋಧನನು ಧರ್ಮರಾಯನನ್ನು ಪಗಡೆ ಆಟದಲ್ಲಿ ಸೋಲಿಸಿ, ಕಾಡಿಗೆ ಕಳುಹಿಸಿದನಲ್ಲವೆ? ಪಾಂಡವರು ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮುಗಿಸಿದ ನಂತರ ಅವನು ಅವರಿಗೆ ರಾಜ್ಯವನ್ನು ಹಿಂದಕ್ಕೆ ಕೊಡಬೇಕಾಗಿತ್ತು.

ಕೊಡುವುದಿಲ್ಲ ಎಂದ.

ಧರ್ಮರಾಯನಿಗೆ ತನ್ನ ದೊಡ್ಡಪ್ಪನ ಮಕ್ಕಳ ಜೊತೆಗೆ ಕಾದಾಡುವುದು ಬೇಕಿರಲಿಲ್ಲ. ಯುದ್ಧವಾದರೆ ಲಕ್ಷಾಂತರ ಜನ ಸಾಯುತ್ತಾರೆ, ಸಾವಿರಾರು ಸಂಸಾರಗಳು ಹಾಳಾಗುತ್ತವೆ ಎಂದು ಚಿಂತಿಸಿದ. ದುರ್ಯೋಧನ ಐದು ಊರುಗಳನ್ನು ಕೊಟ್ಟರೆ ಸಾಕು ಎಂದು ಕೃಷ್ಣನ ಮೂಲಕ ಹೇಳಿಕಳುಹಿಸಿದ.

ದುರ್ಯೋಧನ ಒಪ್ಪಲಿಲ್ಲ. ಒಂದು ಸೂಜಿಯ ಮೊನೆಯನ್ನು ಊರುವಷ್ಟೂ ನೆಲ ಕೊಡುವುದಿಲ್ಲ. ಬೇಕಾದರೆ ಯುದ್ಧ ಮಾಡಿ ತೆಗೆದುಕೊಳ್ಳಲಿ ಎಂದ.

ಕುರುಕ್ಷೇತ್ರ ಎಂಬ ವಿಶಾಲ ಪ್ರದೇಶದಲ್ಲಿ ಎರಡು ಕಡೆಯ ಸೈನ್ಯಗಳೂ ಸೇರಿದುವು. ಪಾಂಡವರು-ಕೌರವರು ಇಬ್ಬರಿಗೂ ಅನೇಕ ರಾಜ ಬೆಂಬಲವಿತ್ತು. ಪಾಂಡವರ ಕಡೆ ಏಳು ಅಕ್ಷೋಹಿಣಿ ಸೈನ್ಯ, ಕೌರವರ ಕಡೆ ಹನ್ನೊಂದು ಅಕ್ಷೋಹಿಣಿ. (ಒಂದು ಅಕ್ಷೋಹಿಣಿ ಎಂದರೆ ೨೧,೮೭೦ ಆನೆಗಳು, ೨೧,೮೭೦ ರಥಗಳು, ೬೫,೬೧೦ ಕುದುರೆಗಳು, ೧,೦೯,೩೫೦ ಕಾಲಾಳುಗಳು.) ಎರಡು ಕಡೆಯೂ ಶೌರ್ಯವೇ ರೂಪತಾಳಿ ಬಂದಂತಹ ವೀರಾಧಿವೀರರು. ಕೌರವರ ಸೈನ್ಯಕ್ಕೆ ನಾಯಕ ಭೀಷ್ಮಾಚಾರ್ಯ, ಪಾಂಡವ-ಕೌರವರ ಅಜ್ಜ. ಅವನು ಗಂಗಾದೇವಿಯ ಮಗ. ಯುದ್ಧದಲ್ಲಿ ಶತ್ರುಗಳಿಗೆ ಯಮನಂತೆ. ಕೌರವರ ಸೈನ್ಯದಲ್ಲಿ ಮತ್ತೊಬ್ಬ ಹಿರಿಯ ದ್ರೋಣಾಚಾರ್ಯರು ಪಾಂಡವರು ಮತ್ತು ಕೌರವರಿಗೆ ಧನುರ್ವಿದ್ಯೆ ಹೇಳಿಕೊಟ್ಟ ಗುರು. ಅವರ ಮಗ ಮತ್ತೊಬ್ಬ ಮಹಾವೀರ ಅಶ್ವತ್ಥಾಮ. ದುಯೋಧನನ ಸ್ನೇಹಿತ ಕರ್ಣ ಅನೇಕ ಭಯಂಕರ ಅಸ್ತ್ರಗಳನ್ನು ಪಡೆದಿದ್ದ ಬಿಲ್ಲುಗಾರ. ದುರ್ಯೋಧನ, ದುಶ್ಯಾಸನರೇ ಶತ್ರುಗಳು ತತ್ತರಿಸುವಂತೆ ಮಾಡಬಲ್ಲ ಯೋಧರು. ಪಾಂಡವ-ಕೌರವರ ಸೋದರಮಾವ ಶಲ್ಯ ಮತ್ತೊಬ್ಬ ಪ್ರಸಿದ್ಧ ವೀರ. ಪಾಂಡವರಲ್ಲಿ ಭೀಮನ ಗದೆ ಎಂದರೆ ಶತ್ರುಗಳಿಗೆ ಮೈನಡುಕ;  ಅರ್ಜುನನ ಗಾಂಡೀವ ಧನಸ್ಸು – ಅವನ ಬಾಣಗಳು ಎಂದರೆ ಶತ್ರುಗಳಿಗೆ ಕನಸಿನಲ್ಲಿಯೂ ಭಯ. ಅರ್ಜುನನ ರಥಕ್ಕೆ ಕೃಷ್ಣನೇ ಸಾರಥಿ. ಪಾಂಡವರ ಸೈನ್ಯದ ನಾಯಕ ದೃಷ್ಟದ್ಯುಮ್ನ. ಭೀಮನ ಮಗ ಘಟೋತ್ಕಜ ಮಾಯಾವಿದ್ಯೆ ಬಲ್ಲವನು. ಇಂತಹ ವೀರಾಧಿವೀರರು ಸೇರಿದರು ಕುರುಕ್ಷೇತ್ರದಲ್ಲಿ.

ಯುದ್ಧ ಪ್ರಾರಂಭವಾಯಿತು. ರಕ್ತದ ನದಿಯೇ ಹರಿಯಿತು. ಆನೆಗಳು, ಕುದುರೆಗಳು ಸತ್ತು ರಾಶಿ ಬಿದ್ದು ವು. ಸತ್ತ ಯೋಧರ ಹೆಣಗಳಿಂದ ಕುರುಕ್ಷೇತ್ರ ತುಂಬಿಹೋಯಿತು. ಗಾಯಗೊಂಡು ಘೀಳಿಡುತ್ತಿರುವ ಆನೆಗಳು, ಸಾಯುತ್ತಿರುವ ಸೈನಿಕರ ಚೀತ್ಕಾರ, ರಥ-ರಥಗಳ ಘರ್ಷಣೆ, ಶಸ್ತ್ರಗಳ ಹೊಡೆತದಿಂದ ಕಿವಿ ಕಿವುಡಾಗುವಂತಿತ್ತು. ರಾಜರುಗಳ ಕಿರೀಟಗಳು ರಕ್ತದ ಕೆಸರಿನಲ್ಲಿ ಉರುಳಿದುವು.

ಇಂತಹ ಭಯಂಕರ ಯುದ್ಧದಲ್ಲಿ, ಭೀಷ್ಮ – ದ್ರೋಣ-ಕರ್ಣ- ಅಶ್ವತ್ಥಾಮ-ಶಲ್ಯ-ಭೀಮ-ಅರ್ಜುನ-ಧೃಷ್ಟದ್ಯುಮ್ನ-ಘಟೋತ್ಕಚ ಮುಂತಾದ ವೀರಾಧಿವೀರರು, ಇವರಲ್ಲದೆ ಎಷ್ಟೋ ಯುದ್ಧಗಳಲ್ಲಿ ಆಗಲೇ ಹೋರಾಡಿ ಅನುಭವ ಪಡೆದಿದ್ದ ನೂರಾರು ಮಂದಿ ರಾಜರು ವೀರಾವೇಶದಿಂದ ಕಾದಾಡುತ್ತಿದ್ದ ಯುದ್ಧದಲ್ಲಿ ಹೋರಾಡಿದ, ಇನ್ನೂ ತರುಣನಾದ ಅಭಿಮನ್ಯು. ಈ ವೀರಾಧಿವೀರರ ಮಧ್ಯದಲ್ಲಿಯೂ ಎಂದೆಂದೂ ತನ್ನ ಹೆಸರು ಮರೆಯಾಗದಂತೆ ಹೋರಾಡಿದ. ‘ಅಭಿಮನ್ಯು’ ಎಂಬ ಹೆಸರನ್ನು ಸಾರ್ಥಕಮಾಡಿಕೊಂಡ.

ಯುದ್ಧದ ಒಂಬತ್ತನೆಯ ದಿನ. ಅಭಿಮನ್ಯುವಿನ ಬಾಣಗಳು ಶತ್ರುಗಳಿಗೆ ಯಮನೇ ಆದುವು. ಅವನು ಹೆಜ್ಜೆ ಇಟ್ಟ ಕಡೆ ಸುತ್ತ ಕೌರವರ ಸೈನಿಕರು ಉರುಳಿದರು. ‘ಇವನೇನು ಇನ್ನೂ ಹುಡುಗ!’ ಎಂದು ತಿರಸ್ಕಾರದಿಂದ ಅಡ್ಡಕಟ್ಟಲು ಬಂದ ರಾಜರು ಭೂಮಿಗೆ ಬಿದ್ದರು. ಕೃಪ, ಅಶ್ವತ್ಥಾಮ, ಸೈಂಧವ ಮೊದಲಾದ ಮಹಾವೀರರು ಅವನಿಗೆ ಎದುರಾದರು. ಅವನ ಬಾಣಗಳ ಹೊಡೆತವನ್ನು ತಡೆಯುವುದು ಅವರಿಂದಲೂ ಆಗಲಿಲ್ಲ. ಸ್ವತಃ ದ್ರೋಣಾಚಾರ್ಯರು- ಅಭಿಮನ್ಯುವಿನ ತಂದೆಗೇ ಬಿಲ್ಲುಗಾರಿಕೆಯನ್ನು ಹೇಳಿಕೊಟ್ಟರು-ಅವನನ್ನು ತಡೆದರು. ಅವನ ಕೈಚಳಕ ಅವರನ್ನೂ ಬೆರಗು ಮಾಡಿತು. ಬೆರಳಗಳು ಯಾವಾಗ ಆಡುತ್ತಿದ್ದುವೋ, ಯಾವಾಗ ಬತ್ತಳಿಕೆಯಿಂದ ಬಾಣ ತೆಗೆಯುತ್ತಿದ್ದನೋ, ಯಾವಾಗ ಬಿಲ್ಲಿಗೆ ಹೂಡುತ್ತಿದ್ದನೋ, ಯಾವಾಗ ಗುರಿ ಇಡುತ್ತಿದ್ದನೋ ಶತ್ರುಗಳಿಗೆ ತಿಳಿಯುತ್ತಲೇ ಇರಲಿಲ್ಲ; ಅವರಿಗೆ ತಿಳಿಯುತ್ತಿದ್ದುದು ಬಾಣದ ಮೇಲೆ ಬಾಣ ತಮ್ಮ ಮೈಯಲ್ಲಿ ಚುಚ್ಚುತ್ತಿದ್ದುದು! ಸೂರ್ಯನ ಸುತ್ತ ಒಂದೊಂದು ಬಾರಿ ಬೆಳಕಿನ ವೃತ್ತ ಕಾಣುತ್ತದೆ, ಹಾಗೆ ಅವನ ಸುತ್ತ ಅವನ ಧನುಸ್ಸಿನ ವೃತ್ತ ಒಂದೇ ಕಾಣಿಸುತ್ತಿತ್ತು. ಕೌರವನ ಸೈನ್ಯದವರು ಕುರುಕ್ಷೇತ್ರದಲ್ಲಿ ಒಬ್ಬ ಅರ್ಜುನನಿದ್ದಾನೋ ಇಬ್ಬರು ಅರ್ಜುನರಿದ್ದಾರೋ ಎಂದು ಬೆರಗಾದರು, ಬೆವತು ಹೋದರು. ದ್ರೋಣ, ಅಶ್ವತ್ಥಾಮ, ಕೃಪ ಮೊದಲಾದವರು ತತ್ತರಿಸಿದರು.

ದುರ್ಯೋಧನ ಇದನ್ನು ನೋಡಿದ, ಅಲಮ್ಬುಸ ಎಂಬ ವೀರರಾಕ್ಷಸನನ್ನು ಅಭಿಮನ್ಯುವನ್ನು ಕೊಲ್ಲಲು ಕಳುಹಿಸಿದ. ಅಲಮ್ಬುಸ ಸಾವಿರಾರು ಬಾಣಗಳ ಮಳೆಯನ್ನೆ ಕರೆದ. ಪಾಂಡವರ ಸೈನ್ಯದಲ್ಲಿ ಕಳವಳ ಹಬ್ಬಿತು. ಸೈನಿಕರು ಅತ್ತಿತ್ತ ಕಾಲ್ತೆಗೆಯಲು ಪ್ರಾರಂಭಿಸಿದರು. ದ್ರೌಪದಿಯ ಮಕ್ಕಳು ಉಪಪಾಂಡವರು ರಾಕ್ಷಸನನ್ನು ಎದುರಿಸಲು ನುಗ್ಗಿದರು. ಅವನು ಅವರ ರಥಗಳ ಕುದುರೆಗಳನ್ನೂ ಸಾರಥಿಗಳನ್ನೂ ಕೊಂದ. ಅಭಿಮನ್ಯು ಉಪಪಾಂಡವರ ಸಹಾಯಕ್ಕೆ ಧಾವಿಸಿದ. ಅವನಿಗೂ ಅಲಮ್ಬುಸನಿಗೂ ಭಯಂಕರ ಹೋರಾಟ ನಡೆಯಿತು. ಅಭಿಮನ್ಯುವಿನ ಚೂಪಾದ ಬಾಣಗಳು ರಾಕ್ಷಸನು ಹಿಂದಕ್ಕೆ ನಡೆಯುವಂತೆ ಮಾಡಿದವು. ಅವನು ತನ್ನ ಮಾಯೆಯಿಂದ ಸುತ್ತ ಕತ್ತಲು ಕವಿಯುವಂತೆ ಮಾಡಿದ. ಅಭಿಮನ್ಯು ಕಣ್ಣನ್ನು ಕೋರೈಸುವ ಸೂರ್ಯಾಸ್ತ್ರವನ್ನು ಬಿಟ್ಟು ಕತ್ತಲನ್ನು ಚೆದುರಿಸಿದ. ಅಲಮ್ಬುಸ ಓಡಿಹೋದ. ಮದ್ದಾನೆ ತಾವರೆಗಳ ಕೊಳದಲ್ಲಿ ಓಡಾಡಿ ಹೂಗಳನ್ನು ತುಳಿದುಹಾಕುವಂತೆ ಅಭಿಮನ್ಯು ಕುರುಕ್ಷೇತ್ರದಲ್ಲಿಕ ಸಂಚರಿಸಿ ಶತ್ರುಗಳನ್ನು ಒರೆಸಿ ಹಾಕಿದ. ಸ್ವತಃ ಭೀಷ್ಮಾಚಾರ್ಯನೇ ಕುರುಸೈನ್ಯವನ್ನು ಕಾಪಾಡಲು ತರುಣ ಅಭಿಮನ್ಯುವಿಗೆ ಎದುರಾದ. ಅಭಿಮನ್ಯುವಿನ ಸುತ್ತಲೂ ಬಾಣಗಳನ್ನು ಸುರಿಸಿದ. ಅಭಿಮನ್ಯು ಅವನ ಬಾಣಗಳನ್ನು  ಕತ್ತರಿಸಿದ. ಅರ್ಜುನ ಅಲ್ಲಿಗೆ ಮಗನ ಸಹಾಯಕ್ಕೆ ಧಾವಿಸಿ ಬಂದ. ಈ ಯುದ್ಧವಾಗುತ್ತಿರುವಂತೆ ಕತ್ತಲಾಗಿ ಎರಡು ಸೈನ್ಯಗಳೂ ಶಿಬಿರಕ್ಕೆ ಹಿಂದಿರುಗಿದುವು. ಕೌರವರ ಸೈನ್ಯಕ್ಕೆ ಅಭಿಮನ್ಯು ಎಂದರೆ ನಡುಗುವಂತಾಯಿತು.

ಯುದ್ಧದ ಹನ್ನೊಂದನೆಯ ದಿನ ಮತ್ತೆ ಅಭಿಮನ್ಯು ಕೌರವಸೇನೆಯನ್ನು ನಡುಗಿಸಿದ. ಪೌರವ ಎಂಬುವನು ಮಹಾಶೂರ ರಾಜ. ಅವನೇ ಅಭಿಮನ್ಯುವನ್ನು ಎದುರಿಸಿದ . ಅಭಿಮನ್ಯು ಅವನನ್ನು ಕೊಲ್ಲಲು ಒಂದು ಬಾಣವನ್ನು ಹೊಡೆದ, ಪೌರವ ತನ್ನ ಬಾಣಗಳಿಂದ ಅಭಿಮನ್ಯುವಿನ ಬಿಲ್ಲನ್ನೂ ಬಾಣಗಳನ್ನೂ ಕತ್ತರಿಸಿಬಿಟ್ಟ. ಅಭಿಮನ್ಯು ಬಿಲ್ಲನ್ನು ಬಿಸುಟು ಕತ್ತಿಯನ್ನೆ ಹಿಡಿದು ಅವನ ಮೇಲೆ ಹಾರಿದ. ಅವನ ಕೂದಲನ್ನು ಹಿಡಿದು ಕೆಳಕ್ಕೆ ಬೀಳಿಸಿದ. ಆ ಹೊತ್ತಿಗೆ ಮತ್ತೊಬ್ಬ ಪ್ರಸಿದ್ಧ ವೀರ ಜಯದ್ರಥ ಅಲ್ಲಿಗೆ ಓಡಿಬಂದ. ಇವನು ಸಿಂಧು ದೇಶದ ರಾಜ, ಆದುದರಿಂದ ಸೈಂಧವನೆಂದೂ ಕರೆಯುತ್ತಿದ್ದರು. ಇವನಿಗೆ ಅರ್ಜುನನೆಂದರೆ ವಿಷ. ಅಭಿಮನ್ಯು-ಜಯದ್ರಥರು ಕತ್ತಿಗಳನ್ನು ಹಿಡಿದು ಹೋರಾಡಿದರು. ಅವರ ಕೈಚಳಕ, ಕತ್ತಿಗಳ ಮಿಂಚಿನ ಬೆಳಕು ಸುತ್ತಲಿದ್ದವರ ಕಣ್ಣುಗಳನ್ನು ಕೋರೈಸುತ್ತಿದ್ದುವು. ಇಬ್ಬರ ಶರೀರಗಳೂ ರಕ್ತದಿಂದ ತೋಯ್ದುಹೋದುವು. ಜಯದ್ರಥನ ಕತ್ತಿ ಅಭಿಮನ್ಯುವಿನ ಗುರಾಣಿಯನ್ನು ಹೊಡೆದು ಒಳಕ್ಕೆ ಹೊಕ್ಕಿತು; ಅವನು ಅದನ್ನು ಹಿಂದಕ್ಕೆ ಎಳೆದಾಗ ಮುರಿದು ಹೋಯಿತು. ಜಯದ್ರಥ ಆರು ಹೆಜ್ಜೆ ಹಿಂದಕ್ಕೆ ಹೋಘಿ ರಥವನ್ನೇರಿ ಹೊರಟುಹೋದ. ಶಲ್ಯ ಅಭಿಮನ್ಯುವಿನ ಮೇಲೆ ಬೆಂಕಿಯನ್ನು ಕರೆಯುವ ಬಾಣ ಒಂದನ್ನು ಪ್ರಯೋಗಿಸಿದ. ಮೇಲಿನಿಂದ ಬೀಳುವ ಹಾವನ್ನು ಹಿಡಿಯುವ ಗರುಡನ ಹಾಗೆ ಅಭಿಮನ್ಯು ಆ ಬಾಣವನ್ನು ಹಿಡಿದು ಹಿಂದಕ್ಕೆ ಎಸೆದ. ಅದು ಶಲ್ಯನ ರಥಕ್ಕೆ ತಗುಲಿತು, ಅವನ ಸಾರಥಿ ಸತ್ತು ಬಿದ್ದ. ಶಲ್ಯ ತನ್ನ ಭಾರವಾದ ಗದೆಯನ್ನು ಹಿಡಿದು ರಥದಿಂದ ಧುಮುಕಿ ಅಭಿಮನ್ಯುವಿನ ಮೇಲೆ ಬಿದ್ದ. ಅಭಿಮನ್ಯುವೂ ಗದೆಯನ್ನು ಹಿಡಿದ. ಅಷ್ಟು ಹೊತ್ತಿಗೇ ಭೀಮನೇ ಅವನ ಸಹಾಯಕ್ಕೆ ಬಂದ. ತಾನೇ ಶಲ್ಯನನ್ನು ಎದುರಿಸಬೇಕು ಎಂದು ಅಭಿಮನ್ಯುವಿನ ಹಠ. ಕಡೆಗೆ ದೊಡ್ಡಪ್ಪನ ಮಾತಿಗೆ ತಲೆಬಾಗಿ ಸರಿದ. ಭೀಮ ಶಲ್ಯನನ್ನು ಎದುರಿಸಿದ.

ಮಹಾಭಾರತ ಯುದ್ಧದ ಹನ್ನೆರಡನೆಯ ದಿನ. ಆ ಹೊತ್ತಿಗೆ ಭೀಷ್ಮ ತಾನು ಯುದ್ಧ ಮಾಡುವುದಿಲ್ಲ ಎಂದು ಬಿಲ್ಲನ್ನು ಕೆಳಗಿಟ್ಟು ಬಾಣಗಳ ಹಾಸಿಗೆಯಲ್ಲಿ ಮಲಗಿದ್ದ;  ದ್ರೋಣಾಚಾರ್ಯರೇ ಕುರುಸೈನ್ಯದ ನಾಯಕರಾಗಿದ್ದರು. ತನ್ನ ಸೈನ್ಯ ಸೋಲುತ್ತಿದೆ ಎಂದು ದುರ್ಯೋಧನನಿಗೆ ತುಂಬ ವ್ಯಥೆಯಾಗಿ ದ್ರೋಣರ ಬಳಿಗೆ ಹೋಗಿ ತನ್ನ ದುಃಖವನ್ನು ತೋಡಿಕೊಂಡ, ಅವರನ್ನು ಆಕ್ಷೇಪಿಸಿದ. ದ್ರೋಣರಿಗೆ ತುಂಬ ಮನಸ್ಸಿಗೆ ನೋವಾಯಿತು . ‘ಅರ್ಜುನನಿಂದ ನಮಗೆ ಸೋಲಾಗುತ್ತಿದೆ. ಅವನನ್ನು ಯುದ್ಧರಂಗದಲ್ಲಿ ಬೇರೆ ಕಡೆಗೆ ಕರೆದುಕೊಂಡು ಹೋದರೆ ಪಾಂಡವರನ್ನು ಸೋಲಿಸುತ್ತೇನೆ’ ಎಂದು ಹೇಳಿದರು. ದುರ್ಯೋಧನನ ಸೈನ್ಯದಲ್ಲಿ ಐವರು ಸಂಶಪ್ತಕರು (ಗೆಲ್ಲುತ್ತೇವೆ ಇಲ್ಲವೇ ಸಾಯುತ್ತೇವೆ ಎಂದು ಪ್ರತಿಜ್ಞೆ ಮಾಡಿ ಯುದ್ಧ ಮಾಡುವವರು) ಇದ್ದರು. ಇವರು ಅರ್ಜುನನ್ನು ಯುದ್ಧಕ್ಕೆ ಕರೆದರು.

ಮರುದಿನ, ಹದಿಮೂರನೆಯ ದಿನ, ಅರ್ಜುನ ರಥದಲ್ಲಿ ಕುಳಿತು ಸಂಶಪ್ತಕರ ಮೇಲೆ ಯುದ್ಧ ಮಾಡಲು ಹೊರಟ. ಕೃಷ್ಣನೇ ರಥ ನಡೆಸುವವನು.

ದ್ರೋಣಾಚಾರ್ಯ ಕೌರವ ಸೇನೆಯನ್ನು ಒಂದು ವಿಶೇಷ ಆಕಾರದಲ್ಲಿ ನಿಲ್ಲಿಸಿದ. ಇದಕ್ಕೆ ಪದ್ಮವ್ಯೂಹ ಎಂದೂ ಹೆಸರು, ಚಕ್ರವ್ಯೂಹ ಎಂದೂ ಹೆಸರು. ಇದನ್ನು ಭೇದಿಸಿ ಒಳಕ್ಕೆ ಹೋಗಿ ಯುದ್ಧ ಮಾಡುವುದು ಬಹು ಕಷ್ಟ. ಶ್ರೀಕೃಷ್ಣ, ಅವನ ಮಗ ಪ್ರದ್ಯುಮ್ನ, ಅರ್ಜುನ ಈ ಮೂವರಿಗೆ ಮಾತ್ರ ಇದನ್ನು ಒಳಹೊಕ್ಕು ಹೊರಕ್ಕೆ ಬರುವ ರೀತಿ ತಿಳಿದಿತ್ತು. ಅಭಿಮನ್ಯುವಿಗೆ ಚಕ್ರವ್ಯೂಹದ ಒಳಕ್ಕೆ ಹೋಗುವ ರೀತಿ ತಿಳಿದಿತ್ತು. ಧರ್ಮರಾಯ, ಭೀಮ, ನಕುಲ, ಸಹದೇವ, ಧೃಷ್ಟದ್ಯುಮ್ನ, ಅವನ ತಂದೆ ದ್ರುಪದ ರಾಜ-ಎಲ್ಲರೂ ಕೌರವ ಸೇನೆಯನ್ನು ಸೀಳಿಕೊಂಡು ಒಳಕ್ಕೆ ಹೋಗಲು ಪ್ರಯತ್ನಿಸಿದರು. ಯಾರಿಂದಲೂ ಸಾಧ್ಯವಾಗಲಿಲ್ಲ.

ಪಾಂಡವರ ಸೇನೆ ದಿಕ್ಕುಗೆಟ್ಟಿತು. ಶತ್ರುಸೈನ್ಯದ ಹತ್ತಿರ ಹೋಗಲು ಸಾಧ್ಯವಾಗದಿದ್ದರೆ ಏನು ಮಾಡಬೇಕು? ವೀರರಾದ ಸಂಶಪ್ತಕರು ಅರ್ಜುನನನ್ನು ತಡೆದು ನಿಲ್ಲಿಸಿದರು. ಧರ್ಮರಾಯನಿಗೆ ದಿಕ್ಕು ತೋರಲಿಲ್ಲ. ಪಾಂಡವರಿಗೆಲ್ಲ ಅವಮಾನ ಎಂದು ಕೈಯಲ್ಲಿ ತಲೆಹೊತ್ತು ಕುಳಿತ. ಭೀಮ, ನಕುಲ, ಸಹದೇವ ಎಲ್ಲ ತಲೆ ತಗ್ಗಿಸಿದರು. ಪಾಂಡವ ಸೈನ್ಯದಲ್ಲೆಲ್ಲ ಮಂಕು, ಕಳವಳ.

ವೀರ ಅಭಿಮನ್ಯು ತನ್ನ ದೊಡ್ಡಪ್ಪನ ವ್ಯಥೆಯನ್ನು ನೋಡಿದ. ಅವನ ಹತ್ತಿರ ಹೋಗಿ ಹೇಳಿದ: “ನಾನು ಚಕ್ರವ್ಯೂಹದಲ್ಲಿ ದಾರಿ ಮಾಡಿಕೊಂಡು ಹೋಗುತ್ತೇನೆ. ನೀವು ಚಿಂತಿಸಬೇಡಿ.”

ಎಳೆಯ ಅಭಿಮನ್ಯುವಿನ ಧೈರ್ಯಕ್ಕೆ ಧರ್ಮರಾಯ ತಲೆದೂಗಿದನು. ಆದರೆ ಅವನನ್ನು ಇಂತಹ ಅಪಾಯದ ಸಾಹಸಕ್ಕೆ ಕಳುಹಿಸಲು ಅವನಿಗೆ ಮನಸ್ಸು ಒಪ್ಪಲಿಲ್ಲ. ಅವನೆಂದ: “ಮಗೂ,ನೀನು ಪರಾಕ್ರಮಶಾಲಿ, ನಿನ್ನ ವಯಸ್ಸಿಗೆ ಮೀರಿದ ಶಕ್ತಿ, ಧೈರ್ಯ ನಿನಗಿದೆ. ಆದರೆ ಕೌರವರ ಸೇನೆಯಲ್ಲಿ ಯುದ್ಧದಲ್ಲಿ ನುರಿತ ರಾಜಾಧಿರಾಜರಿದ್ದಾರೆ. ಅವರನ್ನು ನೀನು ಎದುರಿಸಬಲ್ಲೆಯಾ? ಈ ಸಾಹಸ ನಿನಗೆ ಬೇಡ.”

ಅಭಿಮನ್ಯು ಉತ್ತರ ಕೊಟ್ಟ. “ಅಪ್ಪಾಜಿ, ಯುದ್ಧದಲ್ಲಿ ಯಾರೇ ಎದುರಾಗಲಿ ನನಗೆ ಭಯವಿಲ್ಲ. ಅವರನ್ನು ಸೋಲಿಸುವೆನು.”

ಧರ್ಮರಾಯ ಅವನಿಗೆ ಸಮಾಧಾನ ಹೇಳಲು ಪ್ರಯತ್ನಿಸಿದ “ಕೃಷ್ಣ, ಪ್ರದ್ಯುಮ್ನ, ಅರ್ಜುನ ಮೂವರು ಮಾತ್ರ ಚಕ್ರವ್ಯೂಹದ ಒಳಕ್ಕೆ ಹೋಗಿ ಸುರಕ್ಷಿತವಾಗಿ ಬಲಬಲ್ಲರು. ನೀನು ಒಳಕ್ಕೆ ಹೋಗಬಲ್ಲೆ.”

ಅಭಿಮನ್ಯು, “ನನಗೆ ಅಪ್ಪಣೆ ಕೊಡಿ. ದ್ರೋಣನ ವ್ಯೂಹವನ್ನು ಗೆಲ್ಲುತ್ತೇನೆ,” ಎಂದ.

ಧರ್ಮರಾಯನಿಗೂ ಇದು ಸರಿ ಎಂದು ತೋರಿತು. ಎಲ್ಲರೂ ಕೈಕಟ್ಟಿ ಕುಳಿತರೆ ಅರ್ಜುನ ಸಂಶಪ್ತಕರನ್ನು ಗೆದ್ದು ಬಂದು ತಮ್ಮನ್ನು ಆಕ್ಷೇಪಿಸಬಹುದೇನೋ ಎನ್ನಿಸಿತು. ಅವನು ಅಭಿಮನ್ಯುವಿಗೆ ಅಪ್ಪಣೆ ಕೊಟ್ಟು ಹೇಳಿದ: “ನೀನು ಒಂದುಸಲ ಒಳಕ್ಕೆ ಹೊಕ್ಕರೆ ಸಾಕು; ನಾನು, ಭೀಮ, ಸಾತ್ಯಕಿ, ಹೃಷ್ಟದ್ಯಮ್ನ, ಪಾಂಚಾಲರು ಎಲ್ಲ ನಿನ್ನ ಹಿಂದೆಯೇ ಇರುತ್ತೇವೆ, ನೀನು ದಾರಿ ಬಿಡಿಸುತ್ತಲೇ ನಿನ್ನ ಹಿಂದೆಯೇ ನುಗ್ಗುತ್ತೇವೆ.”

ಅಭಿಮನ್ಯುವಿಗೆ ಸಂತೋಷವಾಯಿತು. ‘ನನ್ನ ತಂದೆ, ತಾಯಿ ಇಬ್ಬರಿಗೂ ಕೀರ್ತಿ ತರುತ್ತೇನೆ’ ಎಂದು ಹೇಳಿ ಧರ್ಮರಾಯನಿಗೆ ನಮಸ್ಕರಿಸಿ ತನ್ನ ಕವಚವನ್ನು ಧರಿಸಿದ. ಬತ್ತಳಿಕೆಯನ್ನು ಕಟ್ಟಿಕೊಂಡು ಕತ್ತಿಯನ್ನು ತೆಗೆದುಕೊಂಡ. ಬಿಲ್ಲನ್ನು ರಥದಲ್ಲಿಟ್ಟ. ಸುಭದ್ರೆಗೆ ನಮಸ್ಕರಿಸಿದಿ. ಉತ್ತರೆ ಆರತಿ ಎತ್ತಿದಳು. ವೀರ ತರುಣ ರಥವನ್ನೇರಿದ.

ಅಭಿಮನ್ನಯುವಿನ ಸಾರಥಿಗೆ ಅವನ ಸಾಹಸವನ್ನು ನೋಡಿ ಕನಿಕರವಾಯಿತು. ಅವನು ಹೇಳಿದ: “ಯೋಚನೆ ಮಾಡು, ನೀನು ಬಹುದೊಡ್ಡ ಹೊಣೆಯನ್ನು ಹೊರುತ್ತಿದ್ದೀಯೇ. ನೀನಿನ್ನೂ ಹುಡುಗ, ಸುಖದಲ್ಲಿ ಬೆಳೆದವನು, ಯುದ್ಧದ ಅನುಭವವಿಲ್ಲ. ದ್ರೋಣ ಶಸ್ತ್ರಗಳ ಒಡೆಯ, ಎಷ್ಟೋ ಯುದ್ಧಗಳಲ್ಲಿ ಗೆದ್ದವನು.”

ಅಭಿಮನ್ಯು ನಕ್ಕು ಹೇಳಿದ: “ಗಾಳಿ ಬೆವರುತ್ತದೆಯೆ? ದೊಡ್ಡ ಉರಿ ಮಂಜಿಗೆ ಹೆದರುತ್ತದೆಯೆ? ನಾನು ಕೌರವರಸೈನ್ಯಕ್ಕೆ ಹೆದರಬೇಕೆ? ಯುದ್ಧದಲ್ಲಿ ನಾನು ಯಾರಿಗೂ ಹೆದರುವುದಿಲ್ಲ. ವಿಷ್ಣು ಬರಲಿ, ನನ್ನ ತಂದೆಯೇ ಎದುರಾಗಲಿ, ನನಗೆ ಹೆದರಿಗೆ ಎಂಬುದೇ ಇಲ್ಲ.”

ರಥವನ್ನು ಮುಂದಕ್ಕೆ ನಡೆಸಿದ. ಆನೆಗಳ ಹಿಂಡಿನ ಮೇಲೆ ಸಿಂಹ ಎರಗುವಂತೆ ವೀರಾಧಿವೀರರ ಸೈನ್ಯದ ಮೇಲೆ ಅಭಿಮನ್ಯು ಎರಿಗಿದ. ಕೌರವ ಸೇನೆಯ ಮಹಾಯೋಧರು ಅವನನ್ನು ತಡೆದರು. ಆದರೆ ಮುನ್ನುಗ್ಗುವ ಬೆಂಕಿಯನ್ನು ಮರಗಳು ತಡೆಗಟ್ಟಿದಂತಾಯಿತು. ಅಸಮಾನ ಧನುರ್ಧಾರಿ ಎನಿಸಿದ ದ್ರೋಣಾಚಾರ್ಯನೆದುರಿನಲ್ಲಿಯೆ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕನು. ಈ ಎಳೆಯ ವೀರನ ಸಾಹಸವನ್ನು ಕಂಡು ದುರ್ಯೋಧನ ಮತ್ತಿತರರು ಬೆಚ್ಚಿ ಬೆರಗಾದರು. ಕುರುಸೇನೆಯ ಸೈನಿಕರ ಬಾಯಿ ಒಣಗಿತು, ಕಣ್ಣು ಚಂಚಲವಾಯಿತು, ಕೂದಲು ನಿಮಿರಿತು. ಅಭಿಮನ್ಯುವಿನ ಬಾಣಗಳು ಸುತ್ತ ಶತ್ರು ಸೈನಿಕರನ್ನು ನೆಲಕ್ಕೆ ಕೆಡವಿದಂತೆ ಕೌರವ ಸೈನ್ಯ ಓಡಲು ಪ್ರಾರಂಭಿಸಿತು. ಇದನ್ನು ಕಂಡು ದುರ್ಯೋಧನನೇ ಅಭಿಮನ್ಯುವನ್ನು ಎದುರಿಸಿದ.

‘ದುರ್ಯೋಧನ’ ಎಂದರೆ ಭಯಂಕರವಾಗಿ ಯುದ್ಧ ಮಾಡುವವನು ಎಂದರ್ಥ. ಅವನನ್ನು ಯುದ್ಧಭೂಮಿಯಲ್ಲಿ ಎದುರಿಸುವುದು ನುರಿತ ಬಿಲ್ಲಾಳುಗಳಿಗೂ ಕಷ್ಟ. ಅವನು ಅಭಿಮನ್ಯುವನ್ನು ತಡೆಗಟ್ಟಿದುದನ್ನು ನೋಡಿ ದ್ರೋಣ, ಕೃಪ, ಕರ್ಣ ಎಲ್ಲ ಅತಿರಥ ಮಹಾರಥರು ಅವನ ಸಹಾಯಕ್ಕೆಂದು ಓಡಿಬಂದರು. ಅಭಿಮನ್ಯುವಿನ ಹಿಂದೆಯೇ ಚಕ್ರವ್ಯೂಹದ ಒಳಕ್ಕೆ ಬರಲು ಪ್ರಯತ್ನಿಸಿದ ಧರ್ಮರಾಯ, ಭೀಮ ಇಲ್ಲರನ್ನೂ ಜಯದ್ರಥ ತಡೆದು ನಿಲ್ಲಿಸಿದ. ಅವನಿಗೆ ಈಶ್ವರನ ವರವಿತ್ತು – ಅರ್ಜುನನನ್ನು ಬಿಟ್ಟು ಉಳಿದ ಪಾಂಡವರನ್ನೆಲ್ಲ ಒಂದು ದಿನದ ಮಟ್ಟಿಗೆ ತಡೆದು ನಿಲ್ಲಿಸುವೆ ಎಂದು. ಹೀಗಾಗಿ ಬಾಲಕ ಅಭಿಮನ್ಯು ಒಬ್ಬನೇ ಚಕ್ರವ್ಯೂಹದಲ್ಲಿ ಶತ್ರುಗಳ ಮಧ್ಯೆ ಉಳಿದುಕೊಂಡ.

ಅಭಿಮನ್ಯು ಬಿಟ್ಟ ಬಾಣಗಳ ಘಾತಕ್ಕೆ ದುರ್ಯೋಧನ ತತ್ತರಿಸಿದ. ದ್ರೋಣ ಕರ್ಣ ಕೃಪ ಅಶ್ವತ್ಥಾಮ ಮೊದಲಾದವರು ಬಂದು ಅವನನ್ನು ಬಿಡಿಸಿಕೊಂಡು ಅಭಿಮನ್ಯುವಿನ ಮೇಲೆ ಬಿದ್ದರು. ಏಕಾಕಿಯಾಗಿ ಅವನು ಎಲ್ಲರನ್ನೂ ತಡೆದು ನಿಲ್ಲಿಸಿದ. ಒಂದು ಬಾಣದಿಂದ ಕರ್ಣನ ಕವಚವನ್ನು ಭೇದಿಸಿದ. ಮೂರು ಬಾಣಗಳಿಂದ ಸುಷೇಣ, ದೀರ್ಘಲೋಚನ ಮತ್ತು ಇತರರನ್ನು ಕೊಂಡ. ವೀರರಲ್ಲಿ ವೀರ ನೆನ್ನಿಸಿಕೊಂಡ ಶಲ್ಯ ಅಭಿಮನ್ಯುವಿನ ಬಾಣಗಳಿಂದ ರಥದಲ್ಲಿ ಉರುಳಿದ. ಅರ್ಜುನ, ದುರ್ಯೋಧನರಿಗೆ ಶಸ್ತ್ರವಿದ್ಯೆ ಹೇಳಿಕೊಟ್ಟ ದ್ರೋಣಾಚಾರ್ಯನೇ ನೋಡುತ್ತಿದ್ದಂತೆ ಬಾಲಕನ ಬಾಣಗಳಿಂದ ಕಂಗೆಟ್ಟು ಕೌರವ ಸೈನ್ಯ ಓಡಿತು. ದ್ರೋಣಾಚಾರ್ಯನೇ ಬೆರಗಾಗಿ, ‘ಇಂತಹ ವೀರನನ್ನು ನಾನು ಕಂಡಿಲ್ಲ,’ ಎಂದು ಕೊಂಡಾಡಿದ. ಶತ್ರುವನ್ನು ದ್ರೋಣರು ಹೀಗೆ ಹೊಗಳಿದುದು ದುರ್ಯೋಧನನಿಗೆ ಕೋಪವನ್ನು ಬರಿಸಿತು. ದುಶ್ಯಾಸನನ್ನೂ ಇತರ ಕೆಲವರು ವೀರರನ್ನೂ ಕರೆದು, “ಆಚಾರ್ಯರಿಗೆ ಅರ್ಜುನನಲ್ಲಿ ಪ್ರೀತಿ; ಅವರು ಅರ್ಜುನನ ಮಗನನ್ನು ಹೊಡೆಯುವುದಿಲ್ಲ. ನೀವೆ ಹೊಡೆದು ಅಟ್ಟಿ” ಎಂದು ಹೇಳಿ ಕಳುಹಿಸಿದ. ದುಶ್ಯಾಸನನು, “ನಾನು ಅಭಿಮನ್ಯುವನ್ನು ಕೊಲ್ಲುವೆನು. ಅಭಿಮನ್ಯು ಸತ್ತರೆ ಅರ್ಜುನ ದುಃಖದಿಂದ ಸಾಯುತ್ತಾನೆ. ಅವನು ಸತ್ತಮೇಲೆ ಕೃಷ್ಣ ಉಳಿಯುವುದಿಲ್ಲ, ಧರ್ಮರಾಯ ಭೀಮ ಮೊದಲಾದ ಪಾಂಡವರೂ ಉಳಿಯುವುದಿಲ್ಲ,” ಎಂದು ಹೇಳಿ ಅಭಿಮನ್ಯುವನ್ನು ಎದುರಿಸಲು ಹೊರಟನು.

ಧರ್ಮರಾಯ – ದುರ್ಯೋಧನರ ಜೂಜಾಟವಾದ ಮೇಲೆ ತುಂಬಿದ ಸಭೆಯಲ್ಲಿ ದ್ರೌಪದಿಗೆ ದುಶ್ಯಾಸನ ಅವಮಾನ ಮಾಡಿದ್ದ. ಅವನೆಂದರೆ ಪಾಂಡವರಿಗೆ ಬಹು ದ್ವೇಷ, ಕೋಪ. ಆದರೆ ಅವನು ಮಹಾಪರಾಕ್ರಮಿ, ಅವನನ್ನು ಕಂಡು ಅಭಿಮನ್ಯು ಹೆದರಲಿಲ್ಲ. “ಓ ಸಿಕ್ಕೆಯಾ ನನ್ನ ಕೈಗೆ ಕ್ರೂರಿ, ಅಧರ್ಮಿ, ಬಡಾಯಿಗಾರ? ನಿನ್ನ ಕೆಟ್ಟತನಕ್ಕೆ ಶಿಕ್ಷೆಯನ್ನು ಅನುಭವಿಸು. ಎರಡು ಸೈನ್ಯಗಳೂ ನೋಡುತ್ತಿರುವಂತೆ ಅನುಭವಿಸು. ನೀನು ಓಡಿಹೋಗದಿದ್ದರೆ ಇಂದು ನನ್ನ ಕೈಯಲ್ಲಿ ಸಾಯುವೆ,” ಎಂದು ಹೇಳಿ ಬಾಣವನ್ನು ಹೂಡಿದ.

ಅಭಿಮನ್ಯು ಬಿಟ್ಟ ಬಾಣ ದುಶ್ಯಾಸನನ ಎದೆಯಲ್ಲಿ ನಾಟಿತು, ರಕ್ತ ಚಿಮ್ಮಿತು. ಮತ್ತೆ ಅಭಿಮನ್ಯು ಬಾಣವನ್ನು ಕಳುಹಿಸಿದ. ದುಶ್ಯಾಸನ ಮೂರ್ಛೆ ಹೋದ. ಅವನ ಸಾರಥಿ ಅಲ್ಲಿಂದ ಅವನ ರಥವನ್ನು ವೇಗವಾಗಿ ಓಡಿಸಿಕೊಂಡು ಹೋದ.

ದುಶ್ಯಾಸನನ ದುಸ್ಥಿತಿಯನ್ನು ಕಂಡು ಕರ್ಣ ಅಭಿಮನ್ಯುವಿದ್ದ ಕಡೆಗೆ ಧಾವಿಸಿದ. ಬಿಲ್ಲುಬಾಣಗಳ ಯುದ್ಧದಲ್ಲಿ ಕರ್ಣನಿಗೆ ಸಮನಾಗುವವರೇ ಬಹು ಕಡಿಮೆ. ಅವನಿಗೆ ಒಂದು ಕವಚವಿತ್ತು. ಅದನ್ನು ಯಾರ ಬಾಣವೂ ಭೇದಿಸುವುದೇ ಸಾಧ್ಯವಿರಲಿಲ್ಲ. ರಾಜರನ್ನೆಲ್ಲ ನಡುಗಿಸಿದ ಪರಶುರಾಮನ ಶಿಷ್ಯ ಅವನು. ಅರ್ಜುನನ್ನು ಎದುರಿಸಬಲ್ಲ ಬೀರ. ಕರ್ಣನು ಅಭಿಮನ್ಯುವಿನ ಮೇಲೆ ನೂರು ಬಾಣಗಳನ್ನು ಸುರಿದ . ಅಭಿಮನ್ಯು ಲೀಲಾ ಜಾಲವಾಗಿ ಅವನ ಬಿಲ್ಲನ್ನೆ ಕತ್ತರಿಸದ, ಅವನ ಬಾಣಗಳಿಂದ ಕರ್ಣನ ರಥದ ಧ್ವಜ ಮುರಿದುಬಿತ್ತು. ಕರ್ಣನ ಬಾಣಗಳನ್ನು ಗಾಳಿಯಲ್ಲಿಯೇ ಕತ್ತರಿಸಿದ. ಅಭಿಮನ್ಯುವಿನ ಬಾಣಗಳ ಹೊಡೆತವನ್ನು ತಾಳಲಾರದೆ ಕರ್ಣನ ರಥವೇ ಹೀಗೆ ಓಡಿದುದನ್ನು ಕಂಡು ಸುತ್ತಲಿದ್ದ ಕೌರವಸೇನೆ ಭಯದಿಂದ ನಡುಗಿತು. ಓಡಲಾರಂಭಿಸಿತು. ಒಣ ಹುಲ್ಲನ್ನು ಸುಡುವ ಬೆಂಕಿಯಂತೆ ಸೈನಿಕರನ್ನು ಅಭಿಮನ್ಯು ತನ್ನ ಬಾಣಗಳಿಂದ ಕೆಡವಿದ.

ಕುರುಸೈನ್ಯ ತಲ್ಲಣಿಸಿದುದನ್ನು ನೋಡಿ ಧರ್ಮರಾಯ, ಭೀಮ, ಸಾತ್ಯಕಿ ಎಲ್ಲ ಮತ್ತೆ ಅಭಿಮನ್ಯುವಿನ ಸಹಾಯಕ್ಕೆಂದು ನುಗ್ಗಿದರು. ಆದರೆ ದ್ರೋಣನನು ರಚಿಸಿದ್ದ ಪದ್ಮವ್ಯೂಹವನ್ನು ಒಳಹೋಗಲು ಅವರಿಂದ ಆಗಲಿಲ್ಲ.

ತಮ್ಮ ಸೈನ್ಯಕ್ಕೆ ಬಂದ ಸ್ಥಿತಿಯನ್ನು ಕಂಡು ಕೌರವ ವೀರರು ಮತ್ತೆ ಅಭಿಮನ್ಯುವನ್ನು ಮುತ್ತಿದರು. ಈಶ್ವರನ ವರ ಪಡೆದಿದ್ದ ಜಯದ್ರಥ ಪಾಂಡವಸೈನ್ಯದ ವೀರರನ್ನೆಲ್ಲ ತಡೆದು ನಿಲ್ಲಿಸಿದ, ಅಭಿಮನ್ಯು ಏಕಾಕಿಯಾಗಿಯೇ ಉಳಿದ. ಆದರೂ ತಿಮಿಂಗಿಲ ಮೀನುಗಳನ್ನು ಕೊಲ್ಲುವಂತೆ ಅವನು ಕೌರವ ಸೈನಿಕರನ್ನು ಕೊಂದುಹಾಕಿದ. ತನ್ನ ಸೈನಿಕರು ಎಲೆಗಳು ಗಾಳಿಯಲ್ಲಿ ಉದುರುವಂತೆ ಉರುಳುತ್ತಿರುವುದನ್ನು ಕಂಡು ದುರ್ಯೋಧನನೇ ಕೋಪದಿಂದ ಅಭಿಮನ್ಯುವಿಗೆ ಎದುರಾದ. ತಮ್ಮ ಒಡೆಯನ ಸಹಾಯಕ್ಕೆಂದು ದ್ರೋಣ, ಅಶ್ವತ್ಥಾಮ ಕರ್ಣ ಎಲ್ಲ ಅಭಿಮನ್ಯುವನ್ನು ಸುತ್ತುಗಟ್ಟಿದರು. ದುರ್ಯೋಧನನ ಮಗ ಲಕ್ಷಣ ಅಭಿಮನ್ಯುವಿನ ಮೇಲೆ ಬಾಣಗಳ ಮಳೆಯನ್ನು ಕರೆದ.

ಹೋರಾಟ ಮತ್ತೆ ಭಯಂಕರವಾಯಿತು. ಸುತ್ತ ಘೀಳಿಡುತ್ತ ಮೇಲೆರಗುವ ಆನೆಗಳೊಡನೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ವೀರರನ್ನು ಎದುರಿಸಿದ. ಅವರ ಮೇಲೆ ಅಸ್ತ್ರಗಳನ್ನು ಬಳಸಿದ. ಗಾಳಿಯಲ್ಲಿ ಬಾಣ ಬಾಣ ತಗುಲಿ ಉರಿಯುತ್ತ ಕೆಳಕ್ಕೆ ಬಿದ್ದುವು. ಕುದುರೆಗಳು ನೋವನ್ನು ತಡೆಯಲಾರದೆ ದಿಕ್ಕೆಟ್ಟು ಓಡಿದುವು. ಕಡೆಗೆ ದುರ್ಯೋಧನನೇ ಅಭಿಮನ್ಯುವಿನ ಬಾಣಗಳು ಬೆಂಕಿಯಂತೆ ನೆಟ್ಟುದನ್ನು ತಡೆಯಲಾರದೆ ಓಡಿದ. ಅಭಿಮನ್ಯುವಿನ ಬಾಣ ಲಕ್ಷಣನ ತಲೆಯನ್ನು  ಕತ್ತರಿಸಿತು. ದ್ರೋಣ ಅಶ್ವತ್ಥಾಮ ಕರ್ಣರು ರಥವನ್ನು ಹಿಂದಿರುಗಿಸಿದರು. ಕೌರವಸೈನ್ಯದಲ್ಲಿ ಹಾಹಾಕಾರವೆದ್ದಿತು.

ಕರ್ಣ ದ್ರೋಣರನ್ನು ಕೇಳಿದ: “ಆಚಾರ್ಯರೇ, ಈ ವೀರನನ್ನು ಗೆಲ್ಲುವುದು ಹೇಗೆ?”

ಆಚಾರ್ಯರೆಂದರು: “ಕರ್ಣ, ಇವನನ್ನು ಎದುರಿಸಿ ಗೆಲ್ಲುವುದುಂಟೆ? ಅವನ ಹೋರಾಟದಲ್ಲಿ ಏನಾದರೂ ದೋಷವಿದೆಯೆ? ಮನುಷ್ಯರಲ್ಲಿ ಸಿಂಹ ಇವನು, ಅರ್ಜುನನ ವರಪುತ್ರ. ಅರ್ಜುನನೇ ಭಾಗ್ಯಶಾಲಿ. ನೋಡು, ಅಭಿಮನ್ಯುವಿನ ಕೈಗಳು ಮತ್ತು ಬೆರಳುಗಳು ಎಷ್ಟು ಬೇಗ ಕೆಲಸ ಮಾಡುತ್ತವೆ, ಹೇಗೆ ಮಿಂಚಿನಂತೆ ಚಲಿಸುತ್ತಾನೆ! ಅವನ ರಥ ಚಲಿಸಿದರೆ ಅವನ ಬಿಲ್ಲು ವೃತ್ತಾಕಾರವಾದದ್ದು ಮಾತ್ರ ಕಾಣುತ್ತದೆ. ಹೆದೆಯನ್ನು ಎಳೆದದ್ದು, ಬಾಣವನ್ನು ಬಿಟ್ಟದ್ದು ಯಾವುದೂ ಕಾಣುವುದಿಲ್ಲವಲ್ಲ! ನನ್ನ ದೇಹದಲ್ಲೆಲ್ಲ ಅವನ ಬಾಣಗಳು ನೆಟ್ಟು ನೋವಾಗುತ್ತಿದೆ. ಈ ಎಳೆಯನ ಕೈಯಲ್ಲಿ ನಾನು ಸೋತಿದ್ದೇನೆ. ಆದರೂ ಅವನ ಕೈಚಳಕ ಅವನ ಅಸ್ತ್ರಗಳ ಬಳಕೆ ಕಂಡು ನನ್ನ ಮನಸ್ಸು ಸಂತೋಷದಿಂದ ತುಂಬಿಹೋಗಿದೆ.”

ಕರ್ಣ ಹೇಳಿದ: “ಯೋಧನಾಗಿ ಯುದ್ಧಭೂಮಿಯಿಂದ ಓಡಿಹೋಗುವುದು ಹೇಡಿತನ ಎಂದು ಉಳಿದಿದ್ದೇನೆ, ಅಷ್ಟೇ. ಅವನ ಬಾಣಗಳು ತಗುಲಿದ ಕಡೆಗಳಲ್ಲೆಲ್ಲ ಬೆಂಕಿಯ ಉಂಡೆ ಇಟ್ಟಂತೆ ಭಾಸವಾಗುತ್ತಿದೆ.”

ದ್ರೋಣ: “ಅಭಿಮನ್ಯು ಇನ್ನೂ ಹುಡುಗ, ಆದರೆ ಮಹಾಶೂರ. ಅವನ ಕವಚವನ್ನು ಬೇಧಿಸುವುದೇ ಸಾಧ್ಯವಿಲ್ಲ. ಬಲ್ಲವರು ಇವನ ಧನುಸ್ಸನ್ನು ಕತ್ತರಿಸಬಹುದು, ಹಾಗಾದರೆ ಮಾತ್ರ ನಾವು ಗೆಲ್ಲಬಹುದು . ಸಾಧ್ಯವಾದರೆ ಹಾಗೆ ಮಾಡು . ಇವನು ಹಿಂದಕ್ಕೆ ತಿರುಗಿದಾಗ ಹೊಡೆಯಬೇಕು, ಇವನು ಧನುಸ್ಸನ್ನು ಹಿಡಿದಾಗ ಮುಂದೆ ನಿಂತು ಯಾರೂ ಗೆಲ್ಲಲಾರರು. ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸು, ರಥವನ್ನು ಮುರಿ.”

ಕರ್ಣ ಹಿಂದಿನಿಂದ ಅಭಿಮನ್ಯುವಿನ ಕೈಗೆ ಗುರಿ ಇಟ್ಟು ಚೂಪಾದ ಬಾಣಗಳನ್ನು ಬಿಟ್ಟ. ಅಭಿಮನ್ಯುವಿನ ಬಿಲ್ಲು ಕತ್ತರಿಸಿತು . ಇದೇ ಸಮಯದಲ್ಲಿ ಭೋಜನೆಂಬುವನು ಅವನ ಕುದುರೆಗಳನ್ನು ಕೊಂದ. ಅಭಿಮನ್ಯುವಿನ ರಥ ಚಲಿಸದೆ ಹೋಯಿತು.  ಕೃಪ, ರಥರಕ್ಷಕರನ್ನು ಹೊಡೆದುರುಳಿಸಿದ. ದ್ರೋಣ, ಕರ್ಣ, ಕೃಪ, ಅಶ್ವತ್ಥಾಮ, ಬೃಹಧ್ವಜ, ಕೃತವರ್ಮ-ಆರುಮಂದಿ ಮಹಾವೀರರು ತರುಣ ವೀರನನ್ನು ಮುತ್ತಿದರು. ಅಭಿಮನ್ಯುವಿಗೆ ರಥವಿಲ್ಲ, ಧನುಸ್ಸಿಲ್ಲ. ಸಹಾಯ ಮಾಡಲು ಒಬ್ಬರೇ ಒಬ್ಬರಾದರೂ ಇಲ್ಲ.

ವೀರ ಅಭಿಮನ್ಯು ಬೆದರಲಿಲ್ಲ, ಬೆಚ್ಚಲಿಲ್ಲ, ದಿಕ್ಕುಗೆಡಲಿಲ್ಲ. ಕತ್ತಿಗುರಾಣಿಗಳನ್ನು ಹಿಡಿದು ರಥದಿಂದ ಮೇಲಕ್ಕೆ ಹಾರಿದ. ಆಗಲೇ ದ್ರೋಣ ಕರ್ಣರು ಅವನ ಗುರಾಣಿಯನ್ನು ಕತ್ತರಿಸಿದರು. ಅಭಿಮನ್ಯು ಭೂಮಿಗೆ ಧುಮುಕಿದ, ರಥದ ಚಕ್ರವನ್ನೇ ತೆಗೆದುಕೊಂಡು ದ್ರೋಣಾಚಾರ್ಯರ ಮೇಲೆ ಎರಗಿದ.  ಸುತ್ತಲಿದ್ದ ಶತ್ರು ವೀರರು ಬಾಣದ ಮೇಲೆ ಬಾಣ ಹೊಡೆದರು. ಚಕ್ರ ನೂರು ಚೂರುಗಳಾಗಿ ಸುತ್ತ ಉದುರಿತು. ಅಭಿಮನ್ಯು ತನ್ನ ರಥದಲ್ಲಿದ್ದ ಗದೆಯನ್ನು ಎತ್ತಿಕೊಂಡು ಶತ್ರುಗಳ ಮೇಲೆ ಬಿದ್ದ. ನೆಲದ ಮೇಲೆ ನಿಂತು ಪ್ರಹಾರಮಾಡುತ್ತಿದ್ದ ಈ ವೀರನ ಏಟಿಗೆ ರಥದಲ್ಲಿದ್ದವರು ಹಿಮ್ಮೆಟ್ಟಿದರು, ದುಶ್ಯಾಸನನ ರಥ ಮತ್ತು ಕುದುರೆಗಳು ಜಜ್ಜಿಹೋದವು. ಗದೆಯಿಂದಲೇ ಸುತ್ತ ಶತ್ರುಗಳನ್ನು ಹೊಡೆದುರುಳಿಸುತ್ತಿದ್ದ ಅಭಿಮನ್ಯುವನ್ನು ದುಶ್ಯಾಸನನ ಮಗ ಗದೆ ಹಿಡಿದು ಎದುರಿಸಿದ. ಇಬ್ಬರೂ ತರುಣರು, ವೀರರು, ಇಬ್ಬರೂ ಛಲದಿಂದ ತುಂಬಿದವರು. ಅವರ ಹೋರಾಟ ಎರಡು ಮದಿಸಿದ ಆನೆಗಳ ಹೋರಾಟದಂತೆ ಭಯಂಕರ. ಇಬ್ಬರೂ ಪ್ರಹಾರಗಳ ಘಾತಕ್ಕೆ ಕೆಳಕ್ಕೆ ಬಿದ್ದರು. ಆಗಲೇ ಬಹುಕಾಲ ವೀರಾಧಿವೀರರೊಡನೆ ಹೋರಾಡಿದ ಅಭಿಮನ್ಯು ಬಳಲಿದ್ದ. ಅವನಿಗಿಂತ ಮೊದಲು ಚೇತರಿಸಿಕೊಂಡು ದುಶ್ಯಾಸನನ ಮಗನು ಎದ್ದ. ಅಭಿಮನ್ಯು ಏಳುತ್ತಿರುವಾಗ ಅವನ ಶತ್ರ ಗದೆಯಿಂದ ಅವನಿತೆ ಹೊಡೆದ. ಅದರ ಘಾತವನ್ನು ತಡೆಯಲಾರದೆ ಅಭಿಮನ್ಯು ಕೆಳಕ್ಕುರುಳಿದ. ಆ ಅಸಮಾನ ವೀರನ ಚೇತನ ಎಳೆಯ ಸುಂದರ ದೇಹವನ್ನು ಬಿಟ್ಟು ಹೋಯಿತು. ಸುತ್ತ ರಕ್ತ ಚೆಲ್ಲಿರಲು ಅವನ ಬಲಶಾಲಿ ದೇಹ ಧೂಳಿನಲ್ಲಿ ಮುಚ್ಚಿಹೋಯಿತು. ಅಭಿಮನ್ಯು ಎಂದರೆ ಸಾಹಸಕ್ಕೆ ಇನ್ನೊಂದು ಹೆಸರು ಎಂಬ ಕೀರ್ತಿ ಉಳಿಯಿತು.