ವಿಜಯನಗರ ಸಾಮ್ರಾಜ್ಯವಾಳಿದ ಮೊದಲ ರಾಜಮನೆತನ ಸಂಗಮರು (ಕ್ರಿ.ಶ. ೧೩೩೬-೧೪೮೫) ಆಡಳಿತ ನಡೆಸಿ ರಾಜ್ಯವನ್ನು ಉತ್ತರದ ಗುಲ್ಬರ್ಗಾದಿಂದ ದಕ್ಷಿಣದ ಶ್ರೀಲಂಕಾವರೆಗೆ, ಪೂರ್ವದಲ್ಲಿ ಒರಿಸ್ಸಾದಿಂದ ಹಿಡಿದು ಪಶ್ಚಿಮದಲ್ಲಿ ಮಲಬಾರ್‌ವರೆಗೂ ವಿಸ್ತರಿಸಿದ್ದರು.

ಸಂಗಮರ ನಂತರ ಸಾಳ್ವರು ರಾಜ್ಯವಾಳಿ (ಕ್ರಿ.ಶ. ೧೪೮೫-೧೪೯೧) ರಾಜಕೀಯ ಅಂತಹಕಲದಿಂದ ಹಾಗೂ ವಿದೇಶಿಯರ ದಾಳಿಯಿಂದ ತತ್ತರಿಸಿದ ಅಂದಿನ ಬಲಹೀನ ರಾಜರು ಕೈಗೊಂಡ ಕಾರ್ಯಗಳ ಬಗ್ಗೆ ಚರಿತ್ರೆ ವಿವರಿಸುತ್ತದೆ.

ತುಳು ವಂಶದ ರಾಯರು (ಕ್ರಿ.ಶ. ೧೪೯೧-೧೫೭೦) ರಾಜ್ಯವಾಳಿ ಸುವರ್ಣಯುಗ ಸಾಮ್ರಾಜ್ಯದಲ್ಲಿ ಬರುವಂತೆ ಮಾಡಿದರು. ಈ ವಂಶದ ಅತ್ಯಂತ ಶ್ರೇಷ್ಠ ಮತ್ತು ಸಮರ್ಥ ರಾಜ ಶ್ರೀ ಕೃಷ್ಣದೇವರಾಯ (ಕ್ರಿ.ಶ. ೧೫೦೯-೧೫೨೯) ಈ ರಾಯನ ಕಾಲದಲ್ಲಿ ದೇವಸ್ಥಾನಗಳು, ಸ್ಮಾರಕಗಳು ನಿರ್ಮಿಸಿದ್ದು ಇಂದಿಗೂ ಅವಶೇಷವಾಗಿ ಉಳಿದು ಕಲೆಯ ನೆಲೆಯಾಗಿವೆ.

ವಿಜಯನಗರದ ಕೊನೆಯ ವಂಶಸ್ಥರಾದ ಅರವೀಡು ರಾಜರು (ಕ್ರಿ.ಶ. ೧೫೭೧-೧೬೪೬) ಆದರೂ ಹಿಂದಿನ ವೈಭವವನ್ನು ಉಳಿಸಿಕೊಳ್ಳಲು ಅಸಮರ್ಥರಾದರು.

ವಿವಿಧ ರಾಜ ವಂಶಸ್ಥರ ಕಾಲದಲ್ಲಿ ದೇವಸ್ಥಾನಗಳ ಸಮುಚ್ಛಯಗಳು ನಿರ್ಮಾಣಗೊಂಡು ವಿಜಯನಗರ ಕಾಲದ ಶಿಲ್ಪ ಕಲಾ ಶೈಲಿ ಬೆಳಕಿಗೆ ಬರುವಂತಾಯಿತು. ಸ್ಥಳೀಯವಾಗಿ ಲಭ್ಯವಿರುವ ಗ್ರಾನೈಟ್ ಬಂಡೆಗಳನ್ನು ಬಳಕೆ ಮಾಡಿ ಅದ್ಭುತ ಶಿಲೆಗಳ ಮೇಲೆ ಶಿಲ್ಪಗಳನ್ನು ಕೆತ್ತಿಸಿದ ಕೀರ್ತಿಗೆ ಪಾತ್ರರಾಗಿ ಸೃಷ್ಟಿಗೆ ಮೆರಗನ್ನು ತಂದರು.

ಜನ ಬದುಕಬೇಕೆಂದು ರಾಜ್ಯವಾಳಿದ ಈ ರಾಯರು ಜನಹಿತ ಕಾರ್ಯಗಳನ್ನು ಯಥೇಚ್ಛವಾಗಿ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿ ಉಲ್ಲೇಖವಾಗಿವೆ. ತುಂಗಭದ್ರಾ ನದಿಯ ನೀರನ್ನು ನೀರಾವರಿಗೆ ಬಳಸಿ ರೈತರು ಧಾನ್ಯ ಬೆಳೆಸಲು ಅನುಕೂಲ ಕಲ್ಪಿಸಿದರು. ವಿಜಯನಗರ ಕಾಲದ ೮ ಕಾಲುವೆಗಳು ಈಗಲೂ ರೈತರ ಗದ್ದೆಗಳಿಗೆ ನೀರು ಹರಿಸಿ ಬೆಳೆ ತೆಗೆಯಲು ಸಹಾಯವಾಗಿದೆ. ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದರು. ಕೆರೆಕುಂಟೆಗಳನ್ನು ನಿರ್ಮಿಸಿ ನೀರಿನ ಸುವ್ಯವಸ್ಥೆ ಕಲ್ಪಿಸುವ ಕಾರ್ಯದಲ್ಲಿ ಇಂದಿಗೂ ಮಾದರಿಯಾಗುವ ಕಾರ್ಯ ಮಾಡಿದ್ದರು. ಕುಡಿಯುವ ನೀರಿನ ಪೂರೈಕೆಗಾಗಿ ಕಲ್ಲಿನ ಡೋಣಿ, ಕಲ್ಲಿನ ಕಾಲುವೆ ಕಟ್ಟಿಸಿದ್ದು ಇಂದಿಗೂ ಕಂಡು ಬರುತ್ತವೆ. ಕಮಲಾಪುರದ ಕೆರೆ ದೊಡ್ಡದು ಅದು ಎಂದಿಗೂ ಬತ್ತಿ ಹೋಗಿದ್ದಿಲ್ಲ. ಅಲ್ಲಿ ಕಮಲದ ಹೂ ಬೆಳೆದು ವಿಜಯನಗರಕ್ಕೆ ಕಳುಹಿಸಲಾಗುತ್ತಿತ್ತು.

ಗ್ರಾಮಗಳ ನೀರಾವರಿಗೆ ದರೋಜಿ ಕೆರೆಯ ನೀರನ್ನು ಬಳಸಲಾಗುತ್ತಿತ್ತು. ರೈತರು ಬೆಳೆದ ಉತ್ಪನ್ನಗಳಿಗೆ, ಕುಶಲಕರ್ಮಿಗಳು ಸಿದ್ಧಪಡಿಸಿದ ಕಲಾಕುಸರಿನ ವಸ್ತುಗಳಿಗೆ ಹಾಗೂ ಬೆಲೆ ಬಾಳುವ ಹರಳು, ಮುತ್ತು, ರತ್ನಗಳಿಗೆ ಮಾರುಕಟ್ಟೆಯನ್ನೂ ಒದಗಿಸಿ ವ್ಯಾಪಾರಕ್ಕೆ ಅಣಿ ಮಾಡಿಕೊಟ್ಟು ಪ್ರಜೆಗಳ ಹಿತಾಸಕ್ತಿ ಕಾಪಾಡಿದವರು ವಿಜಯನಗರದ ರಾಯರುಗಳು.

ಪೋರ್ಚುಗೀಸ್ ಪ್ರವಾಸಿ ಡೊಮಾಂಗೋ ಪಯಸ್ ಪ್ರಕಾರ ವಿಜಯನಗರದ ಮಾರುಕಟ್ಟೆಯಲ್ಲಿ ತಾಜಾ ಹಣ್ಣುಗಳು ತರಕಾರಿ, ಮಾಂಸ ಮಾರಾಟವಾಗುತ್ತಿದ್ದುದನ್ನು ಕಂಡು ಬರೆದಿದ್ದಾರೆ. ಐಷಾರಾಮದ ವಸ್ತುಗಳೂ ಮಾರಾಟವಾಗುತ್ತಿದ್ದವು. ಒಂದೊಂದು ಉಪಯುಕ್ತ ವಸ್ತುವಿಗೂ ಒಂದೊಂದು ಬಜಾರು ಇರುತ್ತಿದ್ದವು. ಉದಾ: ಪಾನ್-ಸುಪಾರಿ  ಬಜಾರ್.

ಪ್ರಜೆಗಳ ಓಡಾಟಕ್ಕೆ ಸುವ್ಯವಸ್ಥಿತವಾದ ರಸ್ತೆಗಳು, ದೇವಸ್ಥಾನಗಳ ಬಳಿ ತಂಗಲು ಮಂಟಪಗಳು ನಿರ್ಮಿಸಿದ್ದರು. ಪ್ರಾಚ್ಯವಸ್ತು ಇಲಾಖೆಯವರು ಈವರೆಗೆ ೩೨ ರಸ್ತೆಗಳು ಇದ್ದವು ಎಂದು ಗುರುತಿಸಿದ್ದಾರೆ. ಆದರೆ ಕೆಲವರ ೩-೪ ರಸ್ತೆಗಳನ್ನು ಮಾತ್ರ ಉತ್ಖನನ ಮಾಡಿ ಕಂಡು ಹಿಡಿದಿದ್ದಾರೆ.

ವಿಜಯನರದರಸರು ಜನರ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ ಸಮುಚ್ಛಯಗಳನ್ನು ಆಸಕ್ತಿಯಿಂದ ಕಲಾ ನೈಪುಣ್ಯದಿಂದ, ಶ್ರದ್ಧೆಯಿಂದ ಹಾಗೂ ಸರ್ವಸುರಕ್ಷಿತವಾಗಿ ನಿರ್ಮಿಸುತ್ತಿದ್ದರು. ಹಬ್ಬ-ಹರಿದಿನಗಳು, ಚಾತ್ರೆ-ಉತ್ಸವಗಳು ತುಂಬಾ ಉತ್ಸಾಹದಿಂದ ಜನ ಆಚರಿಸಲು ಅನುಕೂಲ ಕಲ್ಪಿಸುತ್ತಿದ್ದರು.

ದಿವಂಗತ ಡಾ. ಹೆಚ್. ತಿಪ್ಪೇರಾದ್ರಸ್ವಾಮಿ ಅವರು ನುಡಿದರುವಂತೆ “ವಿಜಯನಗರ ಸಾಮ್ರಾಜ್ಯವಂತೂ ಭರತಖಂಡ ಹಿಂದೆಂದೂ ಕಂಡರಿಯದಂಥ ಒಂದು ಸರ್ವಸಮ್ವಯ ಮಹಾಶಕ್ತಿಯಾಗಿ ಪರಿಣಮಿಸಿತ್ತು. ಎಲ್ಲ ಭಾಷೆ, ಎಲ್ಲ ಪಂಥ ಎಲ್ಲ ಧರ್ಮಗಳಿಗೂ ಅದರ ಶ್ವೇತಚ್ಛತ್ರದ ನೆರಳಿನಲ್ಲಿ ಆಶ್ರಯ ಸಿಕ್ಕಿತ್ತು. ರಾಜರು ಯಾವುದೇ ಧರ್ಮಕ್ಕೆ ಸೇರಿರಲಿ,  ತಾವು ಬಹುಮುಖ ಸಮಾಜದ ಪ್ರತಿನಿಧಿಗಳು ಎಂಬುದನ್ನು ಮರೆಯದೆ ಸಾರ್ವಜನಿಕ ಜೀವನದಲ್ಲಿ ವ್ಯವಹರಿಸುತ್ತಿದ್ದರು. ‘ಹಿಂದೂ ಸುರತ್ತಾಣ’ ಅರ್ಥಾತ್ ‘ಹಿಂದೂ ಸುಲ್ತಾನ’ ರೆಂಬ ಬಿರುದನ್ನು ಧರಿಸಿದ್ಧ ವಿಜಯನಗರದ ಪ್ರಭುವಗಳು ಪರಧರ್ಮ ಸಹಿಷ್ಣುತೆಯ ಸಾಕಾರ ಮೂರ್ತಿಗಳಾಗಿದ್ದರು” ಎಂದು ವಿವರಿಸಿದ್ದಾರೆ. (ಪ್ರಜಾವಾಣಿ ದೀಪವಾಳಿ ವಿಶೇಷಾಂಕ, ೨೦೦೫.)