‘ಅಭಿವೃದ್ದಿ’ ಎಂದೂ ನಿಲ್ಲದ ಕೆಲಸ ಅದು ನಡೆಯುತ್ತಲೆ ಇರಬೇಕು, ತುಂಗಭದ್ರಾ ನದಿ ಹರಿಯುತ್ತಿರುವಂತೆ, ನದಿಯಲ್ಲಿ ಹೊಸ ಹೊಸ ನೀರು ಬಂದು ಹರಿದು ಬೆಳೆ ಬೆಳೆದು ಜನರ ಜೀವನ ಹಸನುಗೊಳಿಸಿದಂತೆ ಅದು ನಿರಂತರವಾದ ಪ್ರಕ್ರಿಯೆ. ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲದಿದ್ದರೂ ಅಭಿವೃದ್ದಿಯ ಬದಲಾವಣೆ ಕಾಲಕಾಲಕ್ಕೆ ಪರಿವರ್ತಿತವಾಗುತ್ತಿರುತ್ತದೆ.

ಪರಿವರ್ತನೆಯ ಗಾಳಿ, ಅಭಿವೃದ್ದಿಯ ಬೆಳಕು ಹಂಪಿ ಕ್ಷೇತ್ರದ ಸುತ್ತಲೂ ಹರಡುವುದು ಅವಶ್ಯವಾಗಿದೆ. ಅದಕ್ಕಾಗಿ ಪತ್ರಿಕೆಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಹಂಪಿಯ ಮಹತ್ವ ಎಲ್ಲರಿಗೂ ತಿಳಿದಿದ್ದರೂ ನಿರ್ಲಕ್ಷದ ಕಾರಣವಾಗಿ ಆಗಬೇಕಾದಷ್ಟು ಸರ್ವತೋಮುಖವಾದ ಅಭಿವೃದ್ದಿ ಸಾಧ್ಯವಾಗಿಲ್ಲ.

ಹಂಪಿ ಸ್ಮಾರಕಗಳಿಗೆ ಇದ್ದ ಅಪಾಯ ಈಗ ತಪ್ಪಿದೆ ಎಂದು ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ತಿಳಿಸಿ, ತನ್ನ ಪಟ್ಟಿಯಲ್ಲಿ ಉಳಿಸಿಕೊಂಡಿರುವ ಅಭಿಪ್ರಾಯ ಸಮಾಧಾನ ತಂದಿದೆ. ಕರ್ನಾಟಕದ ಹೆಮ್ಮೆಯ ಅರಸೂತ್ತಿಗೆಯ ಹಾಗೂ ಪುಣ್ಯಕ್ಷೇತ್ರದ ಚಾರಿತ್ರಿಕ ಮಹತ್ವಕ್ಕೆ ಭಂಗ ಬಾರದಂತೆ ರಕ್ಷಿಸುವ ಮುತುವರ್ಜಿಯನ್ನು ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಹಂಪಿ ಸ್ಮಾರಕಗಳು ದೇಶದ ನಾಗರಿಕತೆ ಮುಟ್ಟಿದ್ದ ವೈಭವದ ಸಂಕೇತಗಳು. ಅವುಗಳನ್ನು ಮುಂದಿನ ಪೀಳಿಗೆಗೆ ಕಾದಿಡುವ, ಹಿಂದಿನವರ ಸಾಧನೆಗಳನ್ನು ನೆನಪಿಡುವ ಸಾಕ್ಷಿಗಳು, ಸಾಧನೆಗೆ ಪ್ರೇರಣೆ ನೀಡುವ ತಾಣವಾಗಿದೆ. ಆಕರ್ಷಣೆಯ ಕೇಂದ್ರವಾಗುವಂತೆ ಅಭಿವೃದ್ದಿ ಪಡಿಸುವ ಹೊಣೆಗಾರಿಕೆಯೂ ಇದೆ.

ಪ್ರಸ್ತುತವಾಗಿ ಹಂಪಿಯ ಸಮಗ್ರ ಅಭಿವೃದ್ದಿ ಕಡೆಗೆ ಎಲ್ಲರ ಗಮನ ಹರಿಯುತ್ತಿದೆ. ಹಂಪಿ ಅಭಿವೃದ್ದಿ ಪ್ರಾಧಿಕಾರ, ನಿರ್ವಹಣಾ ಪ್ರಾಧಿಕಾರ, ಯುನೊಸ್ಕೊ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಪಾನ್ ನೆರವಿನ ನಿಧಿ ಇತ್ಯಾದಿಗಳು ಹಂಪಿಯ ಬೆಳವಣಿಗೆಯ ಕಾರ್ಯಕ್ಕೆ ನುಗ್ಗಿ ಬರುತ್ತಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಈ ಕಾರ್ಯದಲ್ಲಿ ತನ್ನ ಪಾಲಿನ ಕರ್ತವ್ಯ ನಿರ್ವಹಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಈ ಪುಸ್ತಕ ಪ್ರಕಟಣೆ ತಿಳಿಸುತ್ತದೆ.