(ಪ್ರಜಾವಾಣಿ ೧೯೯೭)

ಸೇತುವೆಗಳು ಸಂಪರ್ಕ ಕಲ್ಪಿಸುತ್ತವೆ. ಒಂದು ಪ್ರದೇಶದ ಜನ, ವಸ್ತುಗಳನ್ನು ಸಾಗಣೆ ಮಾಡುವ ಸಾಧನಗಳಾಗಿ ಕಾರ್ಯ ನಿರ್ವಹಿಸುತ್ತವೆ. ದೂರ ಮತ್ತು ಸಮಯವನ್ನು ಕಡಿಮೆ ಮಾಡುತ್ತವೆ. ಒಟ್ಟಾರೆಯಾಗಿ ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನದಿ, ಕಾಲುವೆಗಳಿಗೆ ಅಡ್ಡಲಾಗಿ ನಿರ್ಮಿಸುವ ಸೇತುವೆಗಳು ಸಂಪರ್ಕ ಸುಗಮಗೊಳಿಸುತ್ತವೆ.

ಹಂಪಿಯ ತಳವಾರಘಟ್ಟ ಹಾಗೂ ಆನೆಗುಂದಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ನೂತನ ಮಾದಿರ ಸೇತುವೆ ನಿರ್ಮಾಣ ಕೆಲಸ ಆರಂಭವಾಗಿದೆ. ಈ ಕೆಲಸಕ್ಕೆ ೧೯೯೩ರಲ್ಲಿ ಆಡಳಿತಾತ್ಮಕ ಮಂಜೂರಿ ದೊರಕಿದ್ದರೂ ಹಣ ಬಿಡುಗಡೆಯ ವಿಳಂಬದಿಂದಾಗಿ ಕೆಲಸ ತಡವಾಯಿತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ೨೪.೧೨.೧೯೯೩ ರಂದು ಶಂಕುಸ್ಥಾಪನೆಯನ್ನೂ ಸಹ ಮಾಡಿದ್ದರು. ಆಗ ಅಂದಾಜು ವೆಚ್ಚ ರೂ. ೨.೫ ಕೋಟಿ ಎಂದು ನಿಗದಿಯಾಗಿತ್ತು.

ಈ ನೂತನ ಮಾದರಿ ಸೇತುವೆ ನಿರ್ಮಾಣದ ವೆಚ್ಚವನ್ನು ‘ನಬಾರ್ಡ್ ಧನ ಸಹಾಯ’ ಯೋಜನೆಯಲ್ಲಿ ಸೇರಿಸಲು ಮಾಜಿ ಸಚಿವ ಶ್ರೀರಂಗ ದೇವರಾಯಲು ಮತ್ತಿತರ ಅಧಿಕಾರಿಗಳು ಆಸಕ್ತಿ ವಹಿಸಿದ್ದರು. ಇದರ ಫಲಶ್ರುತಿಯಾಗಿ ೩.೫. ಕೋಟಿ ಆರ್ಥಿಕ ನೆರವು ನಬಾರ್ಡ್‌ನಿಂದ ದೊರೆಯಿತು.

ಹೊಸ ಮಾದರಿಯ ವಿನ್ಯಾಸದಲ್ಲಿ ಸೇತುವೆ ನಿರ್ಮಿಸಲು ೧೦ ಮೀ. ಅಂತರದಲ್ಲಿ ೨೧ ಆರ್.ಸಿ.ಸಿ. ಕಂಬಗಳನ್ನು ತಯಾರಿಸಿ ಸಿದ್ಧಪಡಿಸಲಾಗುವುದು. ಇದನ್ನು ನಿರ್ಮಿಸಲು ಇರುವ  ತೊಂದರೆ ಏನೆಂದರೆ ೮೦ ಮೀ. ಉದ್ದ ಹಾಗೂ ೧೨. ಮೀ. ಆಳ ನದಿಯಲ್ಲಿ ಯಾವಾಗಲೂ ನೀರು ಇರುತ್ತದೆ. ಅಂತಹ ಪ್ರದೇಶದಲ್ಲಿ ೮೦ ಮೀ. ಉದ್ದ ಅಂತರದಲ್ಲಿ ೧ ಸ್ಪಾನ್ ೪೦ ಮೀ. ಅಂತರದಲ್ಲಿ ೨ ಸ್ಪ್ಯಾನ್, ೧೬.೫ ಮೀ. ಅಂತರದಲ್ಲಿ ೪ ಸ್ಪಾನ್‌ಗಳು ಮಾಡಿ ೧೨ ಅಡಿ ಆಳ ಇರುವ ನೀರಿನಲ್ಲಿ ಕಂಬ ನಿಲ್ಲಿಸಲಾಗುವುದು. ೩ ಲಕ್ಷ್ಯ ಕ್ಯೂಸೆಕ್ಸ್ ನೀರು ನದಿಯಲ್ಲಿ ಹರಿದರೂ ಸೇತುವೆ  ಗಟ್ಟಿಯಾಗಿ ನಿಲ್ಲುವುದು. ಕಲ್ಕತ್ತಾದ ಹವ್ರಾಬ್ರಿಡ್ಜ್ ಪಕ್ಕದಲ್ಲಿ ಕಟ್ಟಲಾದ ಹೊಸ ಕೇಬಲ್ ಸ್ಪೇಯಡ್ ಸೇತುವೆ ಮಾದರಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿಯೇ ನವೀನ ಪ್ರಥಮ ಮಾದರಿ ಸೇತುವೆಯಾಗಲಿದೆ. ಗ್ರಾಮೀಣ ಸಂಪರ್ಕ ಅಭಿವೃದ್ದಿಗಾಗಿ ನಬಾರ್ಡ್ ಈ ಸೇತುವೆಗೆ ಆರ್ಥಿಕ ನೆರವು ನೀಡಿದೆ.

ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಸಕಲ ರೀತಿಯ ಉತ್ತೇಜನ ನೀಡುವುದಾಗಿ ಪ್ರಕಟಿಸಿದ್ದಾರೆ. ಕಾರ್ಯದರ್ಶಿ ಮೇಜರ್ ಸಿ.ಆರ್. ರಮೇಶ ಬಹುದಿನಗಳ ಬೇಡಿಕೆಯಾದ ಈ ಸೇತುವೆ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಈ ಸೇತುವೆ ನಿರ್ಮಾಣವಾಗುವುದರಿಂದ ಬಹಳಷ್ಟು ಸಮಯ ಹಾಗೂ ದೂರ (ಇಂಧನ) ಉಳಿತಾಯವಾಗಲಿದೆ. ಗಂಗಾವತಿಯಿಂದ ಹಂಪಿಗೆ ಹೋಗಲು ಈಗ ೫೫ ಕಿ.ಮೀ. ದೂರ ಕ್ರಮಿಸಬೇಕು. ಸೇತುವೆಯನ್ನು ಬಳಸಿ ಹೋಗುವುದರಿಂದ ಕೇವಲ ೧೫.ಕಿ.ಮೀ. ದೂರ ಆಗುತ್ತದೆ. ೪೦ ಕಿ.ಮೀ.ಗಳ ಉಳಿತಾಯವಾಗುತ್ತದೆ.

ಅದೇ ರೀತಿ ಹೊಸಪೇಟೆಯಿಂದ ಕಂಪ್ಲಿ ಮಾರ್ಗವಾಗಿ ಗಂಗಾವತಿಗೆ ಹೋಗಲು ೪೩ ಕಿ.ಮೀ. ಸೇತುವೆ ನಿರ್ಮಾಣದ ನಂತರ ಆ ಅಂತರ ಕೇಲವ ೧೮ ಕಿ.ಮೀ.ಗೆ ಇಳಿಯುತ್ತದೆ. ಬೆಂಗಳೂರು, ಮಂಗಳೂರಿನಿಂದ ಗಂಗಾವತಿಗೆ  ಅಂತರ ಕಡಿಮೆಯಾಗುತ್ತದೆ.

ವಿಜಯನಗರ ಕಾಲದಿಂದಲೂ ತೆಪ್ಪದಲ್ಲಿ ನದಿ ದಾಟುತ್ತಿದ್ದ ಸಾರ್ವಜನಿಕರಿಗೆ ಇನ್ನೊಂದು ವರ್ಷದಲ್ಲಿ ನೂತನ ಮಾದರಿ ಸೇತುವೆ ಸಜ್ಜಾಗುತ್ತಿರುವುದರಿಂದ ಅದನ್ನು ಸ್ವಾಗತಿಸಿದ್ದಾರೆ. ತ್ವರಿತಗತಿಯಿಂದ ಸೇತುವೆ ಕೆಲಸ ಪೂರೈಸಿ, ಸೇತುವೆಯ ಹಂಪಿ ಕಡೆಯ ರಸ್ತೆ ಹಾಗೂ ಆನೆಗೊಂದಿ ಕಡೆಯ ರಸ್ತೆಯನ್ನು ಡಬಲ್ ಮಾಡುವುದರಿಂದ ಇನ್ನೂ ಅನುಕೂಲವಾಗಲಿದೆ. ದಕ್ಷಿಣ ಭಾರತದ ಪ್ರಥಮ ನೂತನ ಮಾದರಿ ಸೇತುವೆ ಬೇಗ ಸಿದ್ಧವಾಗಲಿ ಎಂಬುದೇ ಇಲ್ಲಿನ ಜನತೆಯ ಆಶಯ.