(ಪ್ರಜಾವಾಣಿ ..೧೯೯೯)

ರಾಜ್ಯದಲ್ಲಿ ಕರಡಿ ಸಂತತಿಯ ಅಭಿವೃದ್ದಿಗಾಗಿ ರಾಜ್ಯ ಸರ್ಕಾರವು ೧೯೯೫ರಲ್ಲಿ ಹಂಪಿಯಿಂದ ೧೪ ಕಿ.ಮೀ. ದೂರದಲ್ಲಿರುವ ದರೋಜಿ ಎಂಬಲ್ಲಿ ಕರಡಿಧಾಮವೊಂದನ್ನು ನಿರ್ಮಿಸಿತು. ಇದು ಏಷಿಯಾದಲ್ಲಿಯೇ ಅಪರೂಪದ ಕರಡಿಧಾಮ ಎನಿಸಿದೆ.

ಏಷಿಯಾ ಖಂಡದಲ್ಲೇ ಪ್ರಥಮ ಎನ್ನಲಾದ ದರೋಜಿ ಕರಡಿಧಾಮ ವಿಶ್ವವಿಖ್ಯಾತ ಹಂಪಿಯಿಂದ ಕೇವಲ ೧೫ ಕಿ.ಮೀ. ದೂರದಲ್ಲಿದೆ. ಈ ಅಪರೂಪದ ‘ಕರಡಿಧಾಮ’ವು ಸುಮಾರು ೫೩ ಕರಡಿಗಳಿಗೆ (ಇಂದು ೧೦೦ಕ್ಕೂ ಹೆಚ್ಚಿವೆ) ರಕ್ಷಣೆ ನೀಡುತ್ತಿದೆ. ೧೯೯೫ರ ಅಕ್ಟೋಬರ್ ೧೭ ರಂದು ಇದು ಸರ್ಕಾರದಿಂದ ಘೋಷಿಸಲ್ಪಟ್ಟಿತು.

ಕರಡಿಧಾಮದ ಸುರಕ್ಷತೆಗೆ ಕಳ್ಳ ಬೇಟೆ ಹಾಗೂ ಬೆಂಕಿ ಹಾವಳಿ ತಡೆ ಬಹುಮುಖ್ಯ, ಇಲ್ಲವಾದರೆ ಕರಡಿಗಳ ಉಳಿವಿಗೆ ಹಾಗೂ ಸಂತತಿ ಅಭಿವೃದ್ದಿಗೆ ಆತಂಕವಾಗುತ್ತದೆ ಎಂದು ದರೋಜಿ ಕರಡಿಧಾಮದ ಗಣತಿ ವರದಿಯು ಎಚ್ಚರಿಸಿದೆ. ಈ ವರದಿಯ ಪ್ರಕಾರ ಕರಡಿಗುಡ್ಡದ ಬಳಿ ೫೩ ಕರಡಿಗಳು, ೪ ಚಿರತೆ, ೧೯ ಚಿಗರಿ, ೨೫ ನವಿಲು ನಿರ್ಭಯವಾಗಿ ಓಡಾಡುತ್ತಿವೆ. ನರಿ, ತೋಳ, ಮೊಲ ಸಾಕಷ್ಟು ಸಂಖ್ಯೆಯಲ್ಲಿವೆ. ಈ ವನ್ಯಜೀವಿಗಳಿಗಾಗಿ ಆಹಾರ ಒದಗಿಸಲು ಬಾರೆಗಿಡ, ಉಲ್ಪಿ ಕವಳಿ, ಹುರಿಕಡ್ಲಿಯ ಗಿಡ ಬೆಳೆಸಲಾಗಿದೆ. ಅಲ್ಲಲ್ಲಿ ಜೇನು ಹುಳುಗಳು ಗೂಡು ಕಟ್ಟಿವೆ.

ಪ್ರಾಣಿಗಳ ನೀರಿನ ದಾಹ ಹಿಂಗಿಸಲು ಅಂಬರ್ ದೋಣಿ, ಹನುಮನ ಡೋಣಿಗಳಲ್ಲಿ ಸದಾಕಾಲ ನೀರು ಇರುವಂತೆ ಮಾಡಲಾಗಿದೆ. ಕಾಲುವೆ ನೀರು ಗುಡ್ಡಗಳ ಬಳಿ ಬಂದು ನಿಲ್ಲುವುದರಿಂದ ಪ್ರಾಣಿಗಳಿಗೆ, ಪಕ್ಷಿಗಳಿಗೆ ಅನುಕೂಲವಾಗಿದೆ. ಹಕ್ಕ, ಬುಕ್ಕ ಎಂಬ ಕೈಪಂಪುಗಳನ್ನು ಜೋಡಿಸಿ ನೆಲಮಟ್ಟದ ಹೊಂಡ ನಿರ್ಮಿಸಲಾಗಿದೆ. ಕರಡಿಗಳಿಗಾಗಿ ಗಡ್ಡೆ-ಗೆಣಸು, ಮೂಲಂಗಿ, ಕಾಕಂಬಿ, ಇತ್ಯಾದಿಗಳನ್ನು ಅರಣ್ಯ ಇಲಾಖೆಯವರು ಅಲ್ಲಲ್ಲಿ ಇಡುತ್ತಾರೆ. ಮನುಷ್ಯರ ವಾಸನೆ ಬಂದರೆ ಕರಡಿಗಳು ಆ ಕಡೆ ಬರುವುದೇ ಇಲ್ಲ. ಈ ಭಾಗದ ರೈತರ ಬೆಳೆಗೆ ಹಾನಿಯಾಗಬಾರದು ಹಾಗೂ ಕರಡಿಗಳ ಸಂತತಿ ಅಭಿವೃದ್ದಿಯಲ್ಲಿ ಕೊರತೆ ಉಂಟಾಗಬಾರದು ಎಂದು ರಾಜ್ಯ ಸರ್ಕಾರ ಈ ಕರಡಿಧಾಮವನ್ನು ೧೯೯೫ರಲ್ಲಿ ನಿರ್ಮಿಸಿತು. ಈವರೆಗೆ ಕರಡಿಧಾಮದ ಅಭಿವೃದ್ದಿಗೆ ಸರ್ಕಾರ ರೂ. ೧೫ ಲಕ್ಷ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ರೂ. ೯.೬೯ ಲಕ್ಷ ನೈಸರ್ಗಿಕ ಕಾಡು ಬೆಳೆಸಲು ನೀಡಿದೆ. ಸುಮಾರು ೮೦ ಹೆಕ್ಟೇರುಗಳಲ್ಲಿ ಅರಣ್ಯ ಬೆಳೆಸಲು ಮೂರು ಬ್ಲಾಕ್ ಮಾಡಲಾಗಿದೆ.

ವೀಕ್ಷಣಾ ಗೋಪುರ

ಕರಡಿ ಗುಡ್ಡದ ಬಳಿ ಕರಡಿಗಳನ್ನು ವೀಕ್ಷಿಸಲು ಒಂದು ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಅರಣ್ಯಾಧಿಕಾರಿ ಕಂಬಳಿಯವರು ಹೆಚ್ಚು ಕಾಲ ಇಲ್ಲಿ ವಾಸ ಮಾಡುತ್ತಾರೆ. ಕರಡಿಗಳ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಕಾಳಜಿ ವಹಿಸುತ್ತಾರೆ. ಇವರು ಪ್ರಾಣಿ ದಯಾಪರರು, ಮಾಂಸಾಹಾರ ಸೇವಿಸುವುದಿಲ್ಲ. ಹೆಚ್ಚಾಗಿ ಹಸಿ ತರಕಾರಿಗಳನ್ನು ಸೇವಿಸುತ್ತಾರೆ.

ಸಂಜೆ ೬ ಗಂಟೆಗೆ ಕರಡಿಗಳು ತಮ್ಮ ಮರಿಗಳ ಜೊತೆ ಕರಡಿಗುಡ್ಡದ ಗುಹೆಗಳಿಂದ ಹೊರಬಂದು. ಆಹಾರಕ್ಕಾಗಿ ಹುಡುಕಾಟ ನಡೆಸುತ್ತವೆ. ರಾತ್ರಿಯೆಲ್ಲಾ ನಿರ್ಭಯವಾಗಿ ತಿರುಗಾಡಿ ಬೆಳಗಿನ ೬ ಗಂಟೆಗೆ ಗುಹೆಗಳಲ್ಲಿ ಸೇರಿಕೊಳ್ಳುತ್ತವೆ. ವೀಕ್ಷಣಾ ಗೋಪುರದಿಂದ ಈ ಕರಡಿಗಳ ಆಟ, ಚೆಲ್ಲಾಟ ಬೆಳಗಿನವರೆಗೆ ನೋಡಬಹುದು. ಕರಡಿ ಗುಡ್ಡದ ಬಳಿ ಯಾರಿಗೂ ಹೋಗಲು ಬಿಡುವುದಿಲ್ಲ.

ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ, ವೆಂಕಟಾಪುರ, ಕಡ್ಡಿರಾಂಪುರ ಗ್ರಾಮಗಳ ಬಳಿ ಗುಡ್ಡಗಳಲ್ಲಿ ಕರಡಿಗಳು ವಾಸಿಸುತ್ತವೆ. ಅವುಗಳು ಆಹಾರಕ್ಕಾಗಿ ಗ್ರಾಮಗಳಿಗೆ ನುಗ್ಗುತ್ತವೆ. ಹೊಲಗದ್ದೆಗಳ ಪೈರು ಹಾಳು ಮಾಡಿ ತೊಂದರೆ ಕೊಡುತ್ತವೆ. ಈ ಕರಡಿಗಳನ್ನು ಕರಡಿಧಾಮದಲ್ಲಿ ಸೇರಿಸುವಂತಿಲ್ಲ, ಪ್ರತ್ಯೇಕವಾಗಿಯೇ ಬಿಡಬೇಕು.

ಅಭಯಾರಣ್ಯದ ಅಗತ್ಯ

ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಬಳಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಅವುಗಳ ರಕ್ಷಣೆಗೆ ಹಾಗೂ ಆಹಾರಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು. ಕರಡಿಗಳ ಸಂತತಿ ಈ ಭಾಗದಲ್ಲಿ ಹೆಚ್ಚಾಗಿರುವುದನ್ನು ಗಮನಿಸಿ ಅರಣ್ಯ ಇಲಾಖೆಯವರು ಸಂತತಿ ಉಳಿವಿಗಾಗಿ ತೀವ್ರ ಗಮನಹರಿಸಬೇಕಾಗಿದೆ. ವನ್ಯ ಜೀವಿಗಳು ನಿರಾತಂಕವಾಗಿ ವಿಹರಿಸಲು ಬದುಕಲು, ತಮ್ಮ ಸಂತತಿ ಮುಂದುವರೆಸಲು ಅಭಯಾರಣ್ಯ ಅವಶ್ಯವಾಗಿದೆ.

ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ ೫ ರಾಷ್ಟ್ರೀಯ ರಕ್ಷಿತಾರಣ್ಯಗಳು ಹಾಗೂ ೨೨ ಧಾಮಗಳು ಇವೆ. ದಾಂಡೇಲಿಯ ಅಭಯಾರಣ್ಯ ನಮ್ಮ ರಾಜ್ಯದಲ್ಲಿ ಅತಿ ದೊಡ್ಡದು (೮೪೩ ಚ.ಕಿ.ಮೀ.) ಆದಿಚುಂಚನಗಿರಿ ನವಿಲುಧಾಮ ಅತಿ ಚಿಕ್ಕದು (೦.೮೪ ಚ.ಕಿ.ಮೀ.) ಬಂಡಿಪುರ, ನಾಗರಹೊಳೆಗಳಲ್ಲಿ ಹುಲಿಗಳ ಧಾಮ, ರಾಣಿಬೆನ್ನೂರಿನಲ್ಲಿ ಕೃಷ್ಣಮೃಗ ಧಾಮ, ಮೇಲುಕೋಟೆಯಲ್ಲಿ ತೋಳಗಳ ಧಾಮ ಹಾಗೂ ರಂಗನತಿಟ್ಟು ಮತ್ತು ಘಟಪ್ರಭಾ ಪಕ್ಷಿಗಳ ಧಾಮವಾಗಿ ವನ್ಯಜೀವಿಗಳಿಗೆ ರಕ್ಷಣೆ ನೀಡುತ್ತಿವೆ.

ದರೋಜಿ ಕರಡಿಧಾಮವನ್ನು ಅಭಿವೃದ್ದಿಪಡಿಸಿದರೆ ಪ್ರವಾಸಿಗಳಿಗೆ ವೀಕ್ಷಿಸಲು ಅನುಕೂಲ ವಾಗಬಹುದು. ಸುರಕ್ಷತೆಯನ್ನು ಕಲ್ಪಿಸಿದರೆ ಕರಡಿಗಳ, ಚಲನವಲನ ಹಾಗೂ ರಹಸ್ಯ ಅರಿಯುವ ಆಸಕ್ತಿಯುಳ್ಳವರಿಗೆ ಅನುಕೂಲವಾಗುತ್ತದೆ. ಪ್ರಕೃತಿಯ ಶಿಕ್ಷಣ ಶಿಬಿರಗಳನ್ನು ಈ ಧಾಮದಲ್ಲಿ ಏರ್ಪಡಿಸಿದರೆ ಪ್ರಾಣಿ ಪ್ರೇಮಿಗಳಿಗೆ ಉಪಯುಕ್ತ ತಾಣವಾಗಬಲ್ಲದು. ಕರಡಿ ಸಫಾರಿ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಉತ್ತಮ.

ಕರಡಿಧಾಮದ ಬಳಿ ಕಲ್ಲು ಕಾಯ್ದಿಟ್ಟ ಅರಣ್ಯ ಇದೆ. ಕರಡಿಧಾಮ ವಿಸ್ತೀರ್ಣ ೫೮೭.೩೦ ಹೆಕ್ಟೇರ್ ಇದೆ. ಸುತ್ತಲೂ ನಾಲ್ಕು ಕಡೆ ರಸ್ತೆ ಇದೆ. ಬೇಲಿ ಹಾಗೂ ಕಲ್ಲಿನ ಗೋಡೆ ಸುತ್ತಲೂ ಕಟ್ಟಿಸಲಾಗಿದೆ. ಧಾಮದ ನಿರ್ವಹಣೆಗೆ ೧೦ ಜನ ದಿನಗೂಲಿಗಳಿದ್ದಾರೆ.

೧೯೯೭ರಲ್ಲಿ ದರೋಜಿ ಕರಡಿಧಾಮಕ್ಕೆ ಬೆಂಗಳೂರು ವನ್ಯಜೀವಿ ಮುಖ್ಯ ಪರಿಪಾಲಕ ಬಿ.ಆರ್. ಭಾಸ್ಕರ್ ಅವರು ಭೇಟಿ ನೀಡಿದಾಗ ಕರಡಿಗಳ ಆಹಾರಕ್ಕಾಗಿ ಹಲಸು, ಮಾವು, ತರಕಾರಿ ಬೆಳೆಸಲು ಸಲಹೆ ಮಾಡಿದ್ದರು. ಅವರ ಸಲಹೆ ಪ್ರಕಾರ ತರಕಾರಿ ಗಿಡಗಳನ್ನು ಅಲ್ಲಲ್ಲಿ ಬೆಳೆಸಲಾಗುತ್ತಿದೆ. ಕರಡಿಧಾಮದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡು ವುದನ್ನು ಬಳ್ಳಾರಿ ಜಿಲ್ಲಾಧಿಕಾರಿಗಳ ನೆರವಿನಿಂದ ತಡೆಯಲಾಗಿದೆ.