(ಪ್ರಜಾವಾಣಿ ೨೦೦೦)

ಹಂಪಿಯಿಂದ ಆನೆಗುಂದಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ನಾಲ್ಕು ಕೋಟಿ ಖರ್ಚಾಗಿದೆ. ಸ್ಥಳೀಯರ ದೃಷ್ಟಿಯಲ್ಲಿ ಆ ಕೆಲಸ ಪೂರ್ತಿಗೊಳ್ಳಬೇಕು. ಆದರೆ ಹಾಗೆ ಮಾಡಿದರೆ ‘ಯುನೊಸ್ಕೋ’ದ ವಿಶ್ವಪರಂಪರೆಯ ಪಟ್ಟಿಯಿಂದ ಹಂಪಿಯನ್ನು ತೆಗೆದು ಹಾಕಬೇಕಾಗಬಹುದು. ಸೇತುವೆಯನ್ನು ಕಳಚ ಬೇಕೆ? ಅಥವಾ ಬದಲೀ ಮಾರ್ಗ ಹುಡುಕಬೇಕೆ? ಈ ಸೇತುವೆಗಾಗಿ ನಮ್ಮ ಪುರಾತನ ಪರಂಪರೆಯ ಅವಶೇಷಗಳೆಲ್ಲ ನಾಶವಾಗುತ್ತವೆ. ಐತಿಹಾಸಿಕ ಮಹತ್ವವುಳ್ಳ ಕಲ್ಲುಗಳನನ್ನೇ ನಿರ್ಮಾಣಕ್ಕೆ ಬಳಸಿಕೊಂಡ ವರದಿಗಳಿವೆ. ಇದೂ ಬೇಡ ಇದರ ಪಕ್ಕದಲ್ಲಿ ವಿರೂಪಾಕ್ಷಪುರ ಗಡ್ಡೆಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆಯೂ ಆಗ ಕೂಡದು.

– ಡಾ. ಚಿದಾನಂದ ಮೂರ್ತಿ, ಕನ್ನಡ ಶಕ್ತಿ ಕೇಂದ್ರ. ಹಂಪಿಯನ್ನು ನೋಡ ಬಯಸುವ ವಿದೇಶಿ ಪ್ರವಾಸಿಗರಿಗೂ ಸೇತುವೆ ಅತ್ಯಗತ್ಯಬೇಕು. ಪ್ರಾಚೀನ ಭಾರತದ ಎಷ್ಟೊಂದು ದೇವಾಲಯಗಳನ್ನು ನಾವು ಜಲ ಸಮಾಧಿ ಮಾಡಿ ತದ್ರೂಪು ದೇವಾಲಯ ಕಟ್ಟಿದ್ದೇವೆ. ಇಲ್ಲೂ ಅವಶೇಷಗಳನ್ನು ಮರುಸೃಷ್ಟಿ ಮಾಡಲಿ.

– ಗುರುಶಂಕರಯ್ಯ, ಅಡ್ವೋಕೇಟ್ ಹೊಸಪೇಟೆ ಆನೆಗುಂದಿ ಸೇತುವೆ ಬೇಕೇ ಬೇಕು. ಪ್ರವಾಸಿಗಳಿಗೂ ಅದು ಅನುಕೂಲ. ಆದರೆ ಅಲ್ಲಿ ಕೆಲವು ಲಘು ವಾಹನಗಳು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಿಗೆ ಅನುಮತಿ ನೀಡಿ ಬಾರಿ ವಾಹನಗಳಿಗೆ ಪ್ರತಿಬಿಂಧ ಹಾಕಬೇಕು. ಇನ್ನಷ್ಟು ಅಂಗಡಿ ಹೋಟೆಲ್‌ಗಳ ಸಂತೆ ಆಗದಂತೆ ನೋಡಿ ಕೊಳ್ಳಬೇಕು.

– ಡಾ. ಬಿ.ಸಿ. ಪಾಟೀಲ್, ಇತಿಹಾಸ ಸಂಶೋಧಕ, ಹಂಪಿ. ಆನೆಗೊಂದಿ ಸೇತುವೆ ನಿರ್ಮಾಣವನ್ನು ಈ ಹಂತದಲ್ಲಿ ನಿಲ್ಲಿಸುವುದು ತೀರಾ ಕಷ್ಟ. ಕರ್ನಾಟಕ ಸರ್ಕಾರ ಈಗಾಗಲೇ ಅದಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡಿದೆ. ಸ್ಮಾರಕಗಳಿಗೆ ಹಾನಿಯಾಗದ ಹಾಗೆ ನಿರ್ಮಾಣ ಸಾಧ್ಯವೋ ನೋಡಬೇಕು.

– ಶ್ರೀಮತಿ ಅಚಲಾ ಮೌಲಿಕ್, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯಪಡೆಯ ಮುಖ್ಯಸ್ಥೆ.

ಈಗಾಗಲೇ ಇಷ್ಟೆಲ್ಲಾ ಖರ್ಚಾಗಿದೆ ಎಂದ ಮೇಲೆ ಸೇತುವೆಯನ್ನು ಯಾಕೆ ಕೈಬಿಡಬೇಕು? “ಹಂಪಿಗೆ ಇದರಿಂದ ಧಕ್ಕೆಯಾಗದ ಹಾಗೆ ನೋಡಿಕೊಳ್ತೇವೆ” ಎಂದು ಯುನೊಸ್ಕೋಕ್ಕೆ ಹೇಳೋಣ. ಜನಕ್ಕೆ ಸೇತುವೆ ಬೇಕು ಎಂದ ಮೇಲೆ ಅವರನ್ನು ವಿರೋಧಿಸಿ ಹಂಪಿಯ ರಕ್ಷಣೆ ಮಾಡಲು ಸಾಧ್ಯವೇ?

ಈಗಿನ ದಿನಗಳಲ್ಲಿ ಹಂಪಿಗೆ ಟೂರಿಸ್ಟ್ ಅಲ್ಲದವರೂ ಬರತೊಡಗಿದ್ದಾರೆ. ಅಲ್ಲಿನ ಪುರಾತನ ಅವಶೇಷಗಳ ಮಧ್ಯ ಅಚ್ಚ ಆಧುನಿಕ ಅವಶೇಷದಂತೆ ನಿಂತಿರುವ ಅರೆಬರೆ ನಿರ್ಮಿತ ಸೇತುವೆಯ ಬಿಳಿ ಸರಕಾರಿ ಜೀಪು, ಕಾರು, ಬಿಳಿ ಬಿಳಿ ಅಂಬಾಸಿದರ್‌ಗಳು ಸಾಲುಗಟ್ಟಿ ಬರುತ್ತವೆ. ಅನೇಕ ವರ್ಷಗಳಿಂದ ಜಾಗ ಸಿಕ್ಕಲ್ಲೆಲ್ಲ ಅತಿಕ್ರಮಣ ಮಾಡಿ ಬೇರು ಬಿಟ್ಟಿರುವ ಮಂದಿ ಕಂಗಾಲಾಗುತ್ತಿದ್ದಾರೆ. ಪ್ರವಾಸಿಗರು ಬಂದಾಗೆಲ್ಲಾ ಹರ್ಷಿಸುವ ಗೂಡು ಗುಡಿಸಲುಗಳು ಬಡಪಾಯಿಗಳು ಈ ಅಧಿಕಾರಿಗಳ ವಾಹನಗಳನ್ನು ನೋಡಿ ಕಣ್ತ ತಪ್ಪಿಸಿಕೊಳ್ಳುತ್ತಾರೆ.  ಇವೆಕ್ಕೆಲ್ಲ ಕಾರಣವಾದ ಈ ಸೇತುವೆಯನ್ನು ಶಪಿಸುತ್ತಾರೆ.

ಇದು ‘ತಳವಾರಘಟ್ಟ ಸೇತುವೆ’ ಸುತ್ತಮುತ್ತಲಿನ ಜನರ ಕನಸುಗಳಿಗೆ ಕಳೆದ ಏಳು ವರ್ಷಗಳಿಂದ ರೆಕ್ಕೆ ಪುಕ್ಕ ಕಟ್ಟಿದ ಸೇತುವೆ. ಎಷ್ಟೆಲ್ಲ ಜನರಿಗೆ ಇದು ಸುಲಭ ಸಂಚಾರದ ಸೇತುವೆ ಆಗುತ್ತಿತ್ತು. ಪ್ರಯಾಣದ ವೆಚ್ಚದಲ್ಲಿ ಎಷ್ಟೆಲ್ಲ ಉಳಿತಾಯ ಸಾಧ್ಯವಿತ್ತು. ಎಷ್ಟೆಲ್ಲ ವೇಳೆ ಉಳಿಸಬಹುದಿತ್ತು. ಆದರೆ ಈ ಸೇತುವೆಯ ನಿರ್ಮಾಣ ಪೂರ್ತಿ ಆಗುತ್ತೊ ಇಲ್ಲವೊ? ಹಂಪಿ ಮತ್ತು ಆನೆಗುಂದಿಯ ನಡುವೆ ಕೇವಲ ಎರಡು ಕಿ.ಮೀ. ಅಂತರವಿದ್ದರೂ ತುಂಗಭದ್ರಾ ನದಿಯಿಂದಾಗಿ ಅವುಗಳನ್ನು ರಸ್ತೆಯ ಮೂಲಕ ತಲುಪಲು ಸುಮಾರು ೫೦ ಕಿ.ಮೀ. ಸುತ್ತಿ ಬರಬೇಕು. ಈ ಅಂತರ ಕಡಿಮೆ ಮಾಡಲೆಂದು ಜನರ ಒತ್ತಾಯ ಬರುತ್ತಲೇ ಇತ್ತು. ಲೋಕೋಪಯೋಗಿ ಇಲಾಖೆಯು ಆನೆಗುಂದಿಯ ಬಳಿ ತೂಗು ಸೇತುವೆ ಕಟ್ಟಲು ನಿರ್ಧರಿಸಿತು. ಅಂದಾಜು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚ ಮಾಡಿದ ಈ ಸೇತುವೆಗೆ ೧೯೯೩ರಲ್ಲಿ ಆಗಿನ ಮುಖ್ಯಮಂತ್ರಿ ವೀರಪ್ಪಮೊಯಿಲಿ ಶಂಕು ಸ್ಥಾಪನೆ ಮಾಡಿದರು. ಎಂದಿನ ನಿಧಾನಗತಿಯಲ್ಲಿ ಕೆಲಸ ಸಾಗಿತು.

ದಕ್ಷಿಣ ಭಾರತದ ಮೊದಲ ತೂಗು ಸೇತುವೆ ಎಂಬ ಹೆಗ್ಗಳಿಕೆಯ ಇದರ ಒಟ್ಟು ಉದ್ದ ೨೨೬ ಮೀಟರ್. ಇದರಲ್ಲಿ ನಡುವಣ ೧೬೦ ಮೀಟರ್‌ನಷ್ಟನ್ನು ತಂತಿಗಳ ಸಹಾಯದಿಂದ ನಿಲ್ಲುವಂತೆ ರೂಪಿಸಲಾಗಿದ್ದು, ಮೂರು ಕಮಾನುಗಳನ್ನು ಒಳಗೊಂಡಿರುವ ಇದಕ್ಕೆ ೧೬.೫ ಮೀಟರ್‌ನ ನಾಲ್ಕು ಸೇತುಬಂಧುಗಳಿವೆ. ಏಳುವರೆ ಮೀಟರ್ ಅಗಲವನ್ನು ವಾಹನಗಳ ಓಡಾಟಕ್ಕೆ ಬಿಟ್ಟು ಅಕ್ಕಪಕ್ಕದಲ್ಲಿ ತಲಾ ೧.೫ ಮೀಟರ್ ಅಗಲವನ್ನು ಪಾದಾಚಾರಿಗಳಿಗಾಗಿ ಬಿಡಲಾಗಿದೆ. ನದಿಯ ಜಲಮಟ್ಟಕ್ಕಿಂತ ಆರು ಮೀಟರ್ ಎತ್ತರಕ್ಕೆ ಸೇತುವೆ ಬರುತ್ತದೆ.

ಈಗಾಗಲೆ ನದಿಯ ಎರಡೂ ಬದಿಗಳಲ್ಲಿ ಕಂಬ (ಪೈಲಾನ)ಗಳು ಎದ್ದಿವೆ. ಕಳೆದ ಆಗಷ್ಟ್‌ನಲ್ಲಿ ಸೇತುವೆಯ ಕೊನೆಯ ಕಂಬಗಳ ಮಧ್ಯ ಕಾಂಕ್ರೀಟ್ ಹಾಕಲೆಂದು ನೆಯ್ದಿದ್ದ ಕಬ್ಬಿಣದ ಜಾಳಿಗೆ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿ, ಹೈದರಾಬಾದಿನ ಗುತ್ತಿಗೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದೆ. ಸೇತುವೆ ಕಳೆದ ಏಪ್ರಿಲ್‌ನಲ್ಲಿ ಮುಗಿಯ ಬೇಕಿತ್ತು. ಸರಕಾರಿ ಕಾರಣಗಳ ಜೊತೆ ನಿಸರ್ಗ ವಿಕೋಪ ಸೇರಿತು.

ಸೇತುವೆ ಇದರೆ ಸಾಕೆ? ಅದನ್ನು ತಲುಪಲು ರಸ್ತೆಯೂ ಬೇಕಲ್ಲ? ಸೇತುವೆ ಎರಡೂ ಕಡೆ ಸಾಲು ಸಾಲು ಐತಿಹಾಸಿಕ ಸ್ಮಾರಕಗಳಿವೆ. ವಿಜಯನಗರ ಕಾಲದ ಕಮಾನುಗಳು, ಶಿಲಾ ಕಾಲುವೆಗಳು, ಮಂಟಪಗಳು, ಗೋಪುರಗಳು ಇವುಗಳಲ್ಲಿ ಕೆಲವನ್ನಾದರೂ ಭಗ್ನ ಮಾಡದೆ ರಸ್ತೆಯನ್ನು ನಿರ್ಮಿಸುವಂತಿಲ್ಲ. ಎಲ್ಲದಕ್ಕೂ ಮೊದಲು ತಳವಾರಘಟ್ಟ ಮಹಾದ್ವಾರವನ್ನು ಅಗಲ ಮಾಡಬೇಕು.

ಈಗ ಆಕ್ಷೇಪಣೆ ಬಂತು, ವಿಶ್ವಸಂಸ್ಥೆಯ ಅಂಗಸಂಸ್ಥೆ ‘ಯುನೆಸ್ಕೊ’ ೧೯೮೬ರಲ್ಲೆ ಹಂಪಿಯನ್ನು ವಿಶ್ವಪರಂಪರೆಯ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಿತ್ತು. ಅಂದರೆ ಇದು ಕೇವಲ ಇಲ್ಲಿನವರ ಆಸ್ತಿಯಲ್ಲಿ ಇಡೀ ಜಗತ್ತಿನ ಆಸ್ತಿ ಎಂಬರ್ಥದಲ್ಲಿ ಇದಕ್ಕೆ ವಿಶೇಷ ಸಂರಕ್ಷಣೆ ಆಗಬೇಕೆಂದು ಹೇಳಿತ್ತು. ಆದರೆ ಇಲ್ಲಿ ಕೇಳುವವರು ಯಾರು ಇಲ್ಲವೆಂಬಂತೆ ಒತ್ತುವರಿ, ದನಗಳ ಕೊಟ್ಟಿಗೆ ಗೂಡಂಗಡಿ ತೋಟದ ನಿರ್ಮಾಣ, ಕಳ್ಳರಕಾಟ ಹಿಪ್ಪಿಗಳ ಒಡಾಟ, ಸಚಿವರೊಬ್ಬರ ಹೆಸರಿನಲ್ಲಿ ಕಡಿಮೆ ವೆಚ್ಚದ ನೂರಾರು ಮನೆಗಳ ಕಾಲೋನಿ ಒಂದೆರಡೆ…?

ರಾಜ್ಯ ಸರ್ಕಾರವಾಗಲಿ, ಕೇಂದ್ರದ ಪುರಾತತ್ವ ಇಲಾಖೆಯಾಗಲಿ ಇತ್ತ ಸಾಕಷ್ಟು ಗಮನಹರಿಸಲಿಲ್ಲ. ‘ಯುನೆಸ್ಕೂ’ ಸಂಸ್ಥೆ ಹಂಪಿಯನ್ನು ೧೯೯೮ರಲ್ಲಿ ‘ಅಳಿವಿನಂಚಿನ’ ಪಟ್ಟಿಗೆ ಸೇರಿಸಿತು. ಇಲ್ಲಿನ ಕೃತ್ಯಗಳು ಹೀಗೆಯೇ ನಡೆಯುತ್ತಿದ್ದರೆ ಹಂಪಿಯನ್ನು ‘ವಿಶ್ವ ಪರಂಪರೆಯ ಸ್ಮಾರಕ’ಗಳ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಎಚ್ಚರಿಸಿತು.

ಹಾಗೆ ತೆಗೆದು ಹಾಕಿದರೆ ನಮಗೆ ಮುಖಭಂಗ ಅಷ್ಟೆ ಅಲ್ಲ ವಿದೇಶೀ ಪ್ರವಾಸಿಗಳ ಸಂಖ್ಯೆ ಗಮನಾರ್ಹವಾಗಿ ಇಳಿಯುತ್ತದೆ.

ಈಗಲಾದರೂ ಸರ್ಕಾರ ತುರ್ತಾಗಿ ಎಚ್ಚತ್ತುಕೊಳ್ಳಬೇಕಿತ್ತು. ಪ್ರಾಚ್ಯವಸ್ತು ಇಲಾಖೆಯ ವರಿಂದ ಎಂಥ ಆಕ್ಷೇಪವೂ ಇಲ್ಲ ಎಂಬ ಪತ್ರವನ್ನು ಕನ್ನಡ-ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಂದ್ರಹಾಸ ಗುಪ್ತ ಅವರು ಸೇತುವೆ ಗುತ್ತಿಗೆದಾರರಿಗೆ ಬೇರೆ ನೀಡಿದ್ದರು.

ಕಳೆದ ವರ್ಷ ‘ಯುನೆಸ್ಕೊ’ದ ಇಬ್ಬರು ಪ್ರತಿನಿಧಿಗಳು ಖುದ್ದಾಗಿ ಇಲ್ಲಿಗೆ ಬಂದರು. ಒಬ್ಬರು ಶ್ರೀಮತಿ ಜುಂಕೊ ತಾನಿಗುಚ್ಚಿ, ಇನ್ನೊಬ್ಬರು ಗಾಮಿನಿ ವಿಜಯ ಸೂರ್ಯ. ಇಲ್ಲಿನ ಸ್ಥಿತಿಯನ್ನು ಸುಧಾರಿಸುವ ಬದಲು ಇಲ್ಲಿ ಸೇತುವೆ, ಸೇತುವೆಗಾಗಿ ರಸ್ತೆ ನಿರ್ಮಾಣವಾಗುತ್ತಿ ರುವುದರ ಬಗ್ಗೆ ಆಕ್ಷೇಪಿಸಿದರು.

ದೂರದ ಊರುಗಳ ಜನರೂ ಈಗ ಆಕ್ಷೇಪ ಎತ್ತಿದರು. ಸರಕಾರ ಈಗ ಚುರುಕಾಯಿತು. ಸೇತುವೆಯ ಕೆಲಸ ತುರ್ತಾಗಿ ನಿಲ್ಲಬೇಕೆಂಬ ಆದೇಶ ಹೊರಡಿಸಲಾಯಿತು. ಹಂಪಿಯ ಒಟ್ಟಾರೆ ಸಂರಕ್ಷಣೆಯ ಬಗ್ಗೆ ಒಂದು ಕಾರ್ಯ ತಂಡವನ್ನು (ಟಾಸ್ಕ್‌ಪೊರ್ಸ್) ನಿಯೋಜಿಸಿತು. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಚಲಾ ಮೌಲಿಕ್ ಅವರು ಆ ತಂಡದ ಮುಖ್ಯಸ್ಥರಾದರು. ಬೆಂಗಳೂರಲ್ಲೆ ಸಭೆ ನಡೆಸಿದರು. ಸೇತುವೆಯ ಕಾರ್ಯವನ್ನು ಕೈಬಿಡುವಂತೆಯೂ ಇಲ್ಲ. ಹಾಗೆಂದು ‘ಯುನೆಸ್ಕೊ’ ನೀಡಿದ ಎಚ್ಚರಿಕೆಯನ್ನು ಕಡೆಗಾಣಿಸುವಂತೆಯೂ ಇಲ್ಲ. ಇವೆರಡರ ನಡುವೆ ಬದಲೀ ಮಾರ್ಗವಿದೆಯೆ ಎಂದು ಯೋಚಿಸಿದರು.

ಒಮ್ಮೆಯೂ ಹಂಪಿಗೆ ಭೇಟಿ ನೀಡಿದ ಕಾರ್ಯ ತಂಡ ಇದೀಗ ಹೊರಡಲು ಸಿದ್ಧ ವಾಗುತ್ತಿದೆ. ಈ ಮಧ್ಯ ಕೇಂದ್ರ ಸಂಸ್ಕೃತಿ ಸಚಿವ ಅನಂತಕುಮಾರ ಕೂಡ ಇತ್ತ ಗಮನ ಹರಿಸಿದ್ದಾರೆ. ಮುಖ್ಯಮಂತ್ರಿ ಕೃಷ್ಣರ ಜತೆ ಒಮ್ಮೆ ಹೋಗಿ ಸ್ಥಳ ಪರಿಶೀಲನೆ ಮಾಡುತ್ತೇನೆಂದು ಹೇಳಿದ್ದಾರೆ.

ಇತ್ತ ಆನೆಗೊಂದಿಯ ಜನರು ಕುಪಿತರಾಗಿದ್ದಾರೆ. ಸೇತುವೆಯ ಕೆಲಸವೇನಾದರೂ ನಿಂತರೆ ಅವರಿಗೆ ತೀರಾ ನಿರಾಶೆಯಾಗುತ್ತದೆ. ವಿಶ್ವಪರಂಪರೆಯ ಸ್ಥಳ ಎಂದಾಕ್ಷಣ ಅಲ್ಲಿ ಪ್ರವಾಸಿ ಸೌಕರ್ಯಗಳು ಬೇಡವೆ? ಅಲ್ಲಿ ಅಭಿವೃದ್ದಿ ಬೇಡವೆ? ಈ ಸೇತುವೆ ನಿರ್ಮಾಣವಾದರೆ ಹಂಪಿಯನ್ನು ಮಾತ್ರ ನೋಡಿ ಹೋಗುವ ಜನರು ಇನ್ನೂ ಆನೆಗೊಂದಿಗೂ ಬರುತ್ತಾರೆ. ಇಂಥ ಜನರಿಂದಾಗಿ ಸ್ಥಳೀಯರ ಆದಾಯ ಹೆಚ್ಚುತ್ತದೆ. ವಿಶ್ವಪರಂಪರೆಯ ಪಟ್ಟಿಯಿಂದ ಕಿತ್ತು ಹಾಕುವ ಬೆದರಿಕೆ ಒಡ್ಡುವ ‘ಯುನೆಸ್ಕೊ’ ಇಲ್ಲಿನ ಅಭಿವೃದ್ದಿಗೆ ಏನು ಹಣ ನೀಡಿದೆ? ಅದಕ್ಕಿಂತ ಮುಖ್ಯವಾದ ಕಾರಣ ಇನ್ನೊಂದಿದೆ. ಅಲ್ಲಿನ ಕಬ್ಬು, ಬತ್ತ ಅಷ್ಟೆ ಅಲ್ಲ ಈ ಭಾಗದಲ್ಲಿ ತುಂಬಾ ಪ್ರಸಿದ್ಧವಿರುವ ಆನೆಗೊಂದಿ ಬಾಳೆಹಣ್ಣು ರಾಜ್ಯದ ದಕ್ಷಿಣ ಭಾಗಕ್ಕೂ ಕಮ್ಮಿ ವೆಚ್ಚದಲ್ಲಿ ಬರಲು ಸಾಧ್ಯವಿದೆ. ಸೇತುವೆ ಪೂರ್ಣಗೊಂಡ ಮೇಲೆ ಇದರ ಅಕ್ಕಪಕ್ಕದಲ್ಲಿ ರಸ್ತೆಯ ಬದಿಗೆ ಅಂಗಡಿ, ಹೋಟೆಲ್ ಹಾಕಿ ಕೆಲವರು ಜೀವನ ಸಾಗಿಸಬಹುದಾಗಿದೆ.

‘ಯುನೆಸ್ಕೊ’ ತಂಡದ ಮುಖ್ಯ ಆಕ್ಷೇಪಣೆಯೂ ಇದೆ ಆಗಿದೆ. ರಸ್ತೆ ವಿಸ್ತರಣೆ ಮಾಡುವುದ ರಿಂದ ಐತಿಹಾಸಿಕ ಅವಶೇಷಗಳು ಇನ್ನಷ್ಟು ಭಗ್ನ ಆಗುತ್ತವೆ. ರಸ್ತೆ ಬದಿಗೆ ಅಂಗಡಿ ಹೋಟೆಲ್, ಎಳೆನೀರು ಮಾರಾಟ ಗುಟ್ಕಾ-ಮಟ್ಕಾದಂಧೆ ಹೆಚ್ಚಾಗುತ್ತದೆ.

ರಸ್ತೆ ಮತ್ತು ಸೇತುವೆಯನ್ನು ಇಟ್ಟುಕೊಂಡೂ ಇವುಗಳಿಗೆ ನಿಯಂತ್ರಣ ಹಾಕಲು ಸಾಧ್ಯ ವಿಲ್ಲವೇ? ಕಾರ್ಯತಂಡ ಇದನ್ನು ಪರಿಶೀಲನೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿ ಸುತ್ತಿದ್ದಾರೆ. ಇಷ್ಟಕ್ಕೂ ಗಂಗಾವತಿ ಕಡೆಯಿಂದ ಬರುವ ಮಧ್ಯಮ ವರ್ಗದ ಜನರು ಸೈಕಲ್, ಸ್ಕೂಟರ್‌ಗಳನ್ನು ತೆಪ್ಪದಲ್ಲಿ ಸಾಗಿಸಿ ತರುತ್ತಾರೆ. ನದಿ ರಭಸವಾಗಿ ಹರಿಯುವಾಗಲೂ ಇವರ ಪಯಣ ನಿಲ್ಲುವುದಿಲ್ಲ.

ಈ ಮಧ್ಯ ವಿರೂಪಾಕ್ಷ ದೇಗುಲದ ಸಮೀಪ ಇನ್ನೊಂದು ಕಾಲು ಸೇತುವೆ ನಿರ್ಮಿಸುವ ಸಿದ್ಧತೆ ನಡೆದು ಅದನ್ನು ಪುರಾತತ್ವ ಪ್ರೇಮಿಗಳು ವಿರೋಧಿಸಿ ಕೆಲಸ ನಿಂತಿದೆ.

ಸೇತುವೆ ಅರ್ಧಕ್ಕೆ ನಿಲ್ಲಿಸಿದರೆ ಸಾಲದು. ಅದನ್ನೂ ಪೂರ್ತಿ ಕಳಚಿ ಹಾಕಬೇಕಾಗುತ್ತದೆ. ಇಲ್ಲಾಂದರೆ ಹೊಸದೊಂದು ಅವಶೇಷ ಅಲ್ಲಿ ಸ್ಥಾಪನೆಯಾದಂತಾಗುತ್ತದೆ. ಸೇತುವೆಯನ್ನು ಕಿತ್ತು ಹಾಕಿದ್ದೇ ಆದರೆ ಅಲ್ಲಿ ತೆಪ್ಪ ನಡೆಸುವವರಿಗೆ ಮಾತ್ರ ಸಂತಸ ಆದೀತಷ್ಟೇ.