(ಪ್ರಜಾವಾಣಿ ೨೪.೧೧.೧೯೯೫)

ಹಂಪಿ ಉತ್ಸವ ೧೯೯೫ ಒಂದು ಹೊಸ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಆಚರಿಸಲು ರಾಜ್ಯ ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಈ ಮೊದಲು ವಿಜಯನಗರ ಸಾಮ್ರಾಜ್ಯದ ದಸರಾ ಸಂದರ್ಭದಲ್ಲಿ ಆಚರಿಸುತ್ತಿದ್ದ ನವರಾತ್ರಿಯಂತೆ ನಾಡಹಬ್ಬ ಸಜ್ಜುಗೊಳ್ಳುತ್ತಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ನವೆಂಬರ್ ಒಂದರಿಂದ ಮೂರು ದಿನಗಳ ಕಾಲ ಹಂಪಿಯಲ್ಲಿ ಉತ್ಸವವನ್ನು ನಡೆಸಬೇಕೆಂದು ಆಜ್ಞೆ ಹೊರಡಿಸಲಿದೆ.

ಕನ್ನಡ ನಾಡಿನ ಗತಕಾಲದ ಹಾಗೂ ಇಂದಿನ ಕಲೆ ಸಂಸ್ಕೃತಿಗಳ ಉತ್ಸವವನ್ನು ಎಲ್ಲ ಭಾಗದ ಕಲಾವಿದರಿಂದ ರೂಪುಗೊಳ್ಳುವಂತೆ ಮಾಡಿ ಕಲಾ ವೈಭವವನ್ನು ಜನತೆಯ ಮುಂದೆ ಪ್ರದರ್ಶಿಸುವ ಯೋಜನೆ ಇದಾಗಿದೆ. ಇದರಿಂದ ಲಲಿತ ಕಲೆಗಳ ಏಳಿಗೆ, ಕಲಾವಿದರಿಗೆ ಅವಕಾಶ, ಪ್ರೇಕ್ಷಕರಿಗೆ ರಸ ದೌತಣ ಲಭಿಸಲಿದೆ.

ಖಚಿತವಾದ ರೂಪರೇಷಗಳು ಹಂಪಿ ಉತ್ಸವದ ಬಗ್ಗೆ ಇನ್ನೂ ಮೂಡಿ ಬರಬೇಕಾಗಿದೆ. ಮೂರು ದಿನಗಳ ಕಾಲ ಮೂರು ವೇದಿಕೆಗಳ ಮೇಲೆ ನಾಡಿನ ಹಾಗೂ ಹೊರನಾಡಿನ ಕಲಾವಿದರಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಬಾರಿ ನವೆಂಬರ್ ೨೫ ರಂದು ಬೆಳಿಗ್ಗೆ ೯.೩೦ಕ್ಕೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡರು ಉತ್ಸವವನ್ನು ಉದ್ಘಾಟಿಸಲಿರುವರು. ಸಮಾರೋಪದ ಸಮಾರಂಭ ನವೆಂಬರ್ ೨೭ ರಂದು ಜರುಗುವುದು. ಉಪಮುಖ್ಯಮಂತ್ರಿ ಜೆ.ಹೆಚ್. ಪಟೇಲ್, ಡಾ. ಚಂದ್ರಶೇಖರ ಕಂಬಾರ ಮುಂತಾದವರು ಭಾಗವಹಿಸುವರು.

ಪುಸ್ತಕ ಮಾರಾಟ, ಕುಸ್ತಿಪಂದ್ಯ, ಚಾನುವಾರು ಜಾತ್ರೆ ಮುಂತಾದವುಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ದಕ್ಷಿಣಮಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಪ್ರವಾಸೋದ್ಯಮ ಇಲಾಖೆ ಸಂಯುಕ್ತವಾಗಿ ಹಂಪಿ ಉತ್ಸವ ವ್ಯವಸ್ಥೆಗೊಳಿಸಿವೆ. ನಾಡಿನ ನಾನಾ ಭಾಗಗಳಿಂದ ಬರುವ ಉತ್ಸವ ಪ್ರೇಮಗಳಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಹೊಸ ಅಲಂಕಾರ

ಉತ್ಸವದ ಅಂಗವಾಗಿ ಹೊಸಪೇಟೆ ನಗರವನ್ನು ಸರ್ವಾಂಗ ಸುಂದರಗೊಳಿಸಲು ರಸ್ತೆಗಳ ದುರಸ್ತಿ ಕಾರ್ಯ, ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ, ರಸ್ತೆ ಬದಿ ಅನಧಿಕೃತವಾಗಿ ಆವರಿಸಿಕೊಂಡ ಸ್ಥಳದ ತೆರವು, ಗಿಡ ಮರಗಳ ಬಡ್ಡಿಗೆ ಬಣ್ಣ ಹಾಗೂ ಸ್ವಾಗತ ಕಮಾನುಗಳು ಭರದಿಂದ ನಿರ್ಮಾಣಗೊಳ್ಳುತ್ತಿವೆ. ಒಟ್ಟಿನಲ್ಲಿ ನಗರದ ತುಂಬ ಹಂಪಿಯ ಉದ್ದಗಲಕ್ಕೂ ಉತ್ಸವದ ಉತ್ಸಾಹ ಕಾಣಬಹುದಾಗಿದೆ. ಕಳೆದ ಅನೇಕ ವರ್ಷಗಳಿಂದ ದುರಸ್ತಿ ಕಾಣದ ಹೊಸಪೇಟೆ ನಗರದ ಅನೇಕ ರಸ್ತೆಗಳು ಮೈತುಂಬಿ ವಾಹನಗಳ ಓಡಾಟಕ್ಕೆ ಸಜ್ಜಾಗುತ್ತಿವೆ.

ರಸ್ತೆಗಳ ಅತಿಕ್ರಮಣ ಮಾಡಿದ ಎಲ್ಲಾ ಕಟ್ಟಡಗಳನ್ನು ತೆಗೆಸಲು ಕ್ರಮಕೈಗೊಳ್ಳಲಾಗುತ್ತಿದೆ. ರೈಲ್ವೆ ನಿಲ್ದಾಣದ ಬಳಿ ಹಂಪಿ ಗೋಪುರದ ಎಡಬಲ ಬದಿಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆಗೆಸಿ ಹಾಕಲಾಗಿದೆ. ಹಂಪಿ ಹೇಮಕೂಟದ ರಸ್ತೆಯ ಪಕ್ಕದಲ್ಲಿ ಕಲ್ಲು ಹಾಸಿಗೆಯ ಪಾದಚಾರಿ ಗಳ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

ಹೊಸಪೇಟೆ-ಹಂಪಿಗೆ ಹೊಸರೂಪ ಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಹೆಚ್ಚಿನ ರೂಪದಲ್ಲಿ ಆರ್ಥಿಕ ನೆರವು ಪಡೆದು ಮಾಡಿಸಲಾಗುತ್ತಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಪ್ರಕಾಶ ಅವರಿಗೆ ಸ್ಥಳೀಯ ಶಾಸಕರು, ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿ, ಉತ್ಸವದ ನೆಪದಲ್ಲಿ ಅನೇಕ ಜನಹಿತ ಕಾರ್ಯಗಳು ನಡೆಯುತ್ತಿರುವುದನ್ನು ಸ್ವಾಗತಿಸಿದ್ದಾರೆ. ಅಧಿಕಾರಿಗಳು ರಾಜಕಾರಣಿಗಳು, ಸಂಘ-ಸಂಸ್ಥೆಯವರು, ಪತ್ರಕರ್ತರು ಈ ಕಾರ್ಯಕ್ಕೆ ನೆರವಾಗಿದ್ದಾರೆ.

ಹಂಪಿ ಗ್ರಾಮವನ್ನು ಮಾದರಿ ಗ್ರಾಮ ಮಾಡಲು ಈಗಾಗಲೇ ರೂ. ೨೫.೭೦ ಲಕ್ಷ ಬಿಡುಗಡೆಯಾಗಿದೆ. ಆದರೆ ಹಂಪಿಯಲ್ಲಿ ತುಂಗಭದ್ರ ನದಿಯ ದಂಡೆಯಲ್ಲಿ ಸ್ನಾನಘಟ್ಟ ಆಗಬೇಕಿದೆ. ಅದು ಶೀಘ್ರವಾಗಿ ಆಗಬೇಕು. ಹಂಪಿಯ ಗೋಪುರದ ಬಳಿ ಅನಧಿಕೃತವಾಗಿ ಮೇಲೆ ಬಂದಿರುವ ಕಟ್ಟಡಗಳನ್ನು ತೆಗೆಸಬೇಕು. ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಆಗಬೇಕು. ದೇವಸ್ಥಾನದಲ್ಲಿ ದಾಸೋಹ ಪ್ರಾರಂಭಿಸಿದರೆ ಭಕ್ತಾದಿಗಳಿಗೆ ಅನುಕೂಲವಾಗುವುದು. ಹಂಪಿ ಗೋಪುರಕ್ಕೆ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಆಗಬೇಕಾಗಿದೆ.