(ಪ್ರಜಾವಾಣಿ ೧೯೯೨)

ವಿಜಯನಗರ ಸಾಮ್ರಾಜ್ಯದ ಸ್ಥಳವಾದ ಹಂಪೆಯ ಹೇಮಕೂಟ ಗುಡ್ಡದ ಇಳಿಜಾರಿನಲ್ಲಿ ಎರಡು ದೊಡ್ಡ ಕಲ್ಲಿನ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಬಹಳ ಕಾಲದಿಂದಲೂ ಈ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗಿಲ್ಲ.

ಸುಮಾರು ಹತ್ತು ಅಡಿ ಎತ್ತರವಿರುವ “ಸಾಸಿವೆ ಕಾಳು ಗಣೇಶ” ಒಂದು ಒರಟಾದ ಮಂಟಪದ ಪೀಠದ ಮೇಲೆ ಸ್ಥಾಪಿಸಲಾಗಿದೆ. ಈ ಮಂಟಪ ಒಂಟಿಯಾಗಿ ಬಯಲಿನಲ್ಲಿದೆ. ಕುಳಿತಿರುವ ಗಣೇಶನ ಬಲಗೈಯಲ್ಲಿ ಅಂಕುಶವಿದೆ ಹಾಗೂ ಕೋರೆ ಮುರಿದಿದೆ. ಮೇಲಿನ ಎಡಗೈಯಲ್ಲಿ ಸುರಳಿಯಾದ ಪಾಶವಿದೆ. ಕೆಳಗಿನ ಎಡಗೈ ಹಾಗೂ ಸೊಂಡಿಲು ಭಿನ್ನವಾಗಿವೆ.

ಇನ್ನೊಂದು ಏಕಶಿಲಾ ವಿಗ್ರಹ “ಕಡಲೆಕಾಳು ಗಣೇಶ” ಸುಮಾರು ೧೬ ಅಡಿ ಎತ್ತರವಿದೆ. ದೊಡ್ಡದಾದ ಬಂಡೆಯಲ್ಲಿ ಕೆತ್ತಿ ಸುಂದರ ಮಂಟಪದಲ್ಲಿ ಸ್ಥಾಪಿಸಲಾಗಿದೆ. ಕಡಲೆಕಾಳಿಗೂ ಸಾಸಿವೆ ಕಾಳಿಗೂ ಇರುವ ಅಂತರದಷ್ಟು ಅಂತರ ಈ ಎರಡೂ ಗಣಪತಿಗಳಿಗೆ ಇದೆ. ಈ ಕಲ್ಲಿನ ಮೂರ್ತಿಗಳು ಅಪೂರ್ವವಾಗಿವೆ.

ಆದರೆ ಶಾಶ್ವತವಾಗಿ ಕಲ್ಲಿನಲ್ಲಿ ಕೆತ್ತಿ ನಿಲ್ಲಿಸಿರುವ ಈ ಮೂರ್ತಿಗಳನ್ನು ಕೇಳುವವರೇ ದಿಕ್ಕಿಲ್ಲದಂತಾಗಿದೆ. ಗಣೇಶ ಉತ್ಸವದ ಸಂದರ್ಭದಲ್ಲಿಯಾದರೂ ಭಕ್ತರು ಅನಾಥವಾಗಿರುವ ಗಣಪತಿ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಾರೊ ಕಾದು ನೋಡಬೇಕು. ಇಂತಹ ಅಮೂಲ್ಯ ಕಲಾಕೃತಿಗಳ್ನು ರಕ್ಷಿಸುವುದಕ್ಕಾಗಿಯೆ ನಮ್ಮಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಇದೆ. ಆದರೂ ಈ ವಿಗ್ರಹಗಳ ಬಗೆಗೆ ಇಲಾಖೆಗೆ ಅನಾದರವೇಕೋ ತಿಳಿಯದು.