(ಪ್ರಜಾವಾಣಿ ೨೦೦೧)

ಕೇಳುಗರ ಕೊರತೆಯ ಮಧ್ಯದಲ್ಲಿಯೂ ಚಿಗುರುತ್ತಿರುವ ಹೊಸಪೇಟೆ ಆಕಾಶವಾಣಿ ಕೇಂದ್ರ ಇದೀಗ ತನ್ನ ವಾರ್ಷಿಕೋತ್ಸವ ಆಚರಿಸುತ್ತಿದೆ. ಎಫ್.ಎಂ. ಬಾನುಲಿ ನಿಲಯದ ಕೇಳುಗರು ನಗರದಲ್ಲಿ ಅತಿ ವಿರಳವಾಗಿದ್ದರು. ಕೇವಲ ೩೦೦ ಶ್ರೋತೃಗಳ ಹತ್ತಿರ ಎಫ್.ಎಂ. ರೇಡಿಯೋ ಸೆಟ್‌ಗಳಿದ್ದವು. ಈಗ ಅವುಗಳ ಸಂಖ್ಯೆ ೪೦೦೦ಕ್ಕೆ ಏರಿದೆ ಎನ್ನುತ್ತಾರೆ ಆಕಾಶವಾಣಿ ನಿಲಯ ನಿರ್ದೇಶಕರಾದ ಹೆಚ್.ಆರ್. ಕೃಷ್ಣಮೂರ್ತಿಯವರು.

ಶ್ರೋತೃಗಳ ಗಮನ ಸೆಳೆಯಲು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ಸೆಟ್‌ಗಳನ್ನು ಕೊಳ್ಳುವಂತೆ ಮಾಡಲು ಕೆಲವು ಆಕರ್ಷಕ ಕಾರ್ಯಕ್ರಮ ಬಿತ್ತರಿಸಿತು. ಮಕ್ಕಳ ಹುಟ್ಟು ಹಬ್ಬ ತಿಳಿಸಲು ‘ಶುಭಾಶಯ’ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ‘ಸಾಂತ್ವನ’ ಅನುಭವಿಗಳ ಜೀವನ ವಿವರಿಸಲು ‘ಸಾರ್ಥಕ ಜೀವನ’ ನುಡಿ ಮುತ್ತು ಹಾಗೂ ಮನರಂಜನೆಯ ಚಿತ್ರಗೀತೆ ಕಾರ್ಯಕ್ರಮ ಕೇಳುಗರ ಸಂಖ್ಯೆ ಹೆಚ್ಚಿಸಿದೆ ಎನ್ನಬಹುದು. ಆದರೂ ಶ್ರೋತೃಗಳ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದೆ.

ಸ್ಥಳೀಯ ಆಕಾಶವಾಣಿ ನಿಲಯಗಳು ಹೆಚ್ಚಾಗಿ ಎಫ್.ಎಂ. ಬ್ಯಾಂಡಿನಲ್ಲಿ ತಮ್ಮ ಕಾರ್ಯಕ್ರಮಗಳು ಬಿತ್ತರಿಸುತ್ತಿವೆ. ಈ ರೀತಿಯ ಮೂರು ಕೇಂದ್ರಗಳನ್ನು ರಾಜ್ಯದ ಹಾಸನ, ಚಿತ್ರದುರ್ಗ ಹಾಗೂ ಹೊಸಪೇಟೆಯಲ್ಲಿ ಸದ್ಯ ಕೆಲಸ ಮಾಡುತ್ತಿವೆ. ರಾಯಚೂರು, ಕಾರವಾರ ಹಾಗೂ ಮಡಿಕೇರಿಗಳಲ್ಲಿ ನಿಲಯಗಳು ಶೀಘ್ರವಾಗಿ ಪ್ರಾರಂಭಗೊಳ್ಳಲಿವೆ.

ಹೊಸಪೇಟೆ ಆಕಾಶವಾಣಿ ನಿಲಯದ ಆವರಣದಲ್ಲಿ ಹುಲ್ಲು, ಹೂ ಬಳ್ಳಿ, ಮರಗಳನ್ನು ಹುಲುಸಾಗ ಬೆಳೆಸಲಾಗಿದೆ. ಈ ತಾಣ ರಮಣೀಯವಾಗಿ ಕಾಣುತ್ತದೆ. ಇಲ್ಲಿ ಸಂಜೆ ೫.೩೦ ರಿಂದ ೯.೩೦ರವರೆಗೆ ಬಿತ್ತರವಾಗುವ ಕೆಲವು ಕಾರ್ಯಕ್ರಮಗಳು ತುಂಬಾ ಜನಪ್ರಿಯವಾಗಿದೆ.

ಗ್ರಾಮಾಂತರಂಗ ಕಾರ್ಯಕ್ರಮ ಕಳೆದ ತಿಂಗಳು ಜೂನ್‌ನಲ್ಲಿ ಪ್ರಾರಂಭವಾಗಿದೆ. ವಾರದ ಮೂರು ದಿನಗಳಲ್ಲಿ ಗ್ರಾಮಗಳ ಪಕ್ಷಿನೋಟ, ಉಪಕಸುಬುಗಳು ಹಾಗೂ ಬದುಕು ಬಿತ್ತರವಾಗುತ್ತವೆ. ರಾಮಸಾಗರ, ಬುಕ್ಕಸಾಗರ, ದರೋಜಿ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾದಾಗ ಸರ್ಕಾರದ ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಈ ವಿಭಾಗ ಕೆಲಸ ಮಾಡಿತು. ‘ಸಿಹಿ ಸಕ್ಕರೆ ಉದ್ಯಮದ ಕಹಿ ಕಥೆ’ ಕಾರ್ಯಕ್ರಮ ಸಕ್ಕರೆ ಉದ್ಯಮದ ಮೇಲೆ ಬೆಳಕು ಚೆಲ್ಲಿತ್ತು. ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು. ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆ ಮಧ್ಯೆ ಸೇತುವೆಯಾಗಿ ನಿಂತು ಆಕ್ಸೀಸ್ ಕಾರ್ಯಕ್ರಮದಡಿ ನೆರವು ನೀಡುತ್ತಿದೆ. ‘ಡ್ವಾಕ್ರಾ’ ಯೋಜನೆಯ ಕಾರ್ಯಕ್ರಮದ ವಿವರ, ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸುವುದು, ಮಹಿಳಾ ಗುಂಪುಗಳಿಗೆ ಸಲಹೆ ನೀಡುವುದು ಹಾಗೂ ಮಕ್ಕಳ ಕಾರ್ಯಕ್ರಮಗಳನ್ನು ಅವರದೇ ಆದ ಧಾಟಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಸುಮಾರು ೧೦೦೦ ಶಾಲೆಗಳಿಗೆ ಪತ್ರ ಬರೆದು ಮಕ್ಕಳ ಕಾರ್ಯಕ್ರಮ ನೀಡಲು ತಿಳಿಸಲಾಗಿದೆ.

ಕಾರ್ಯಕಲ್ಪ

ಹೊಸಪೇಟೆ ನಗರದ ಶ್ರೀರಾಮುಲು ಪಾರ್ಕ್ ಹಾಳು ಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದ್ದನ್ನು ಗಮನಿಸಿದ ಆಕಾಶವಾಣಿಯವರು ಅಲ್ಲಿ ಒಂದು ವೇದಿಕೆ ನಿರ್ಮಿಸಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಪಾರ್ಕಿಗೆ ಕಾರ್ಯಕಲ್ಪ ನೀಡಲಾಗಿದೆ. ಧ್ವನಿ ಪರೀಕ್ಷೆಯ ನಂತರ ಸ್ಥಳೀಯ ಹಾಡುಗಾರರಿಗೆ ಈ ಕೇಂದ್ರದಲ್ಲಿ ಹಾಡಲು ಅವಕಾಶ ನೀಡಲಾಗುತ್ತಿದೆ. ಲಘು ಸಂಗೀತ, ಜಾನಪದ, ಶಾಸ್ತ್ರೀಯ ಸಂಗೀತ ಹಾಡುವ ಸುಮಾರು ೫೦ ವೈಯಕ್ತಿಕ ಹಾಗೂ ತಂಡಗಳು ಬಳ್ಳಾರಿ ಜಿಲ್ಲೆಯಲ್ಲಿವೆ. ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಈ ಕಾರ್ಯಕ್ರಮಕ್ಕೆ ಬರುತ್ತಿದೆ.

“ಇವರೂ ನಮ್ಮವರೆ” ಎಂಬ ಕಾರ್ಯಕ್ರಮದ ಮೂಲಕ ಶ್ರಮ ಜೀವಿಗಳಾದ ರಿಕ್ಷಾವಾಲಾ, ಚಪ್ಪಲಿ ಹೊಲೆಯುವವ, ಕೂಲಿ ಮುಂತಾದವರ ಅನಿಸಿಕೆ ಪ್ರಸಾರವಾಗುತ್ತಿದೆ. ಜಿಲ್ಲೆಯ ಕ್ರೀಡಾ ಜಗತ್ತು, ಪ್ರತಿಭಾ ಪರಿಚಯ ಮೂಡಿ ಬರುತ್ತಿವೆ.

ಬಳ್ಳಾರಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಾಗಿ, ಕವಿ, ಸಾಹಿತಿ ಸೃಜನೇತರ ಲೇಖಕರ ವಿಚಾರಕ್ಕಾಗಿ ‘ಸಾಹಿತ್ಯ ಸಂಚಯ’ ಎಂಬ ಕಾರ್ಯಕ್ರಮವಿದೆ. ಹಿರಿಯ ಅನುಭವಿಗಳ ವಿಚಾರ ತಿಲಿಯಲು ‘ಜೀವನದೃಷ್ಟಿ’ ‘ಎಲೆ ಮರೆಯ ಹಣ್ಣು’ಗಳು, ವಾರದ ವ್ಯಕ್ತಿ ಅಲ್ಲದೇ ಪ್ರಸಿದ್ಧ ಸಾಹಿತಿಗಳ ವಿಚಾರ ವಿನಿಮಯ ನಡೆಯುತ್ತಿದೆ.

ಈ ರೀತಿಯಾಗಿ ಜೀವನದ ನಾನಾ ವಿಚಾರಗಳ ಬಗ್ಗೆ ಬಾನುಲಿ ಪ್ರಸಾರ ಮಾಡುವ ಕೇಂದ್ರ ಕೆಲವು ತೊಂದರೆಗಳನ್ನು ಅನುಭವಿಸುತ್ತಿದೆ. ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳಿಗೆ ಈ ಕೇಂದ್ರದ ಕಾರ್ಯಕ್ರಮ ಕೇಳಿಸುತ್ತಿಲ್ಲ. ಮುಖ್ಯವಾಗಿ ಸಂಡೂರು, ಸಿರಗುಪ್ಪಗಳಲ್ಲಿ ಎಫ್.ಎಂ. ಬ್ಯಾಂಡಿನ ರೇಡಿಯೋಗಳಲ್ಲಿ ಕೇಳಲಾಗದು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರಿಗೆ ಸಂಭಾವನೆ ತಕ್ಷಣ ಕೊಡದೆ ಮದ್ರಾಸ್‌ನಿಂದ ಚೆಕ್ ಬಂದ ಮೇಲೆ ಸುಮಾರು ಒಂದು ತಿಂಗಳ ನಂತರ ನೀಡಲಾಗುತ್ತಿದೆ. ಮುಖ್ಯವಾಗಿ ಈ ಆಕಾಶವಾಣಿ ನಿಲಯಕ್ಕೆ ತಲುಪಲು ಸರಿಯಾದ ನೇರ ರಸ್ತೆ ಇಲ್ಲವಾಗಿದೆ. ನಗರದ ಒಂದು ಮೂಲೆಯಲ್ಲಿ ನಿಲಯ ಇರುವುದರಿಂದ ಕಲಾವಿದರು ಕೇಂದ್ರಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ನಾಟಕಗಳ ಪ್ರಸಾರವೂ ಈ ಕೇಂದ್ರದಿಂದ ಸಿದ್ಧವಾಗಿ ಪ್ರಸಾರವಾಗುತ್ತಿಲ್ಲ.

ತೊಂದರೆಗಳನ್ನು ನೀಗಿಸಿಕೊಂಡು ಮನರಂಜನೆಯ ಜೊತೆಗೆ ಜ್ಞಾನದ ಬೆಳಕನ್ನು ಬಳ್ಳಾರಿ ಜಿಲ್ಲೆಯ ಮನೆ ಮನೆಗೂ ಈ ಬಾನುಲಿ ಕೇಂದ್ರ ಬೆಳಗುವಂತಾಗಲಿ ಎಂದು ಆಶಿಸೋಣವೇ?