(ಪ್ರಜಾವಾಣಿ ೧೯.೦೫.೨೦೦೧)

ಹಂಪಿ ಮಾತ್ರವಲ್ಲ; ತುಂಗಭದ್ರಾ ಆಣೆಕಟ್ಟು ಮತ್ತು ಅದರ ಎರಡೂ ಬದಿಗಳಲ್ಲಿ ನಿರ್ಮಿಸಿರುವ ಉದ್ಯಾನವಗಳು ಈಗ ಪ್ರೇಕ್ಷಣೀಯ ತಾಣವಾಗಿವೆ. ಸಸ್ಯರಾಶಿ ಮಾತ್ರವಲ್ಲ; ಪ್ರಾಣಿ ಪಕ್ಷಿ ಸಂಕುಲಗಳ ಉದ್ಯಾನವೂ ಇದಾಗಿದೆ. ಉತ್ತರ ಕರ್ನಾಟಕದ ಈ ‘ಬೃಂದಾವನ’ದ ವೈಭವ ಬೇಸಿಗೆಯಲ್ಲಿ ನಮ್ಮನ್ನು ಕೈಬೀಸಿ ಕರೆಯುತ್ತದೆ.

ಹಸಿರ ಚೆಲುವನ್ನು ಆರಾಧಿಸಬೇಕೆ? ಬನ್ನಿ ಹೊಸಪೇಟೆ ಸಮೀಪ ತುಂಗಭದ್ರಾ, ಜಲಾಶಯದ ಎರಡೂ ಬದಿಗಳಲ್ಲಿರುವ ‘ನಂದನವನ’, ‘ಪಂಪಾವನ’ಕ್ಕೆ ಅಲ್ಲಿನ ಹುಲಿಗೂ ಉಲ್ಲಾಸ ತುಂಬಿದೆ. ಅಲೆಯಾಗಿ ಹರಿದು ಬರುವ ತಂಬೂರಿ ನಾದದಂತೆ ಈ ಉದ್ಯಾವನಗಳ ಹೂವಿನ ಪರಿಮಳ ಅಲೆ-ಅಲೆಯಾಗಿ ನಮ್ಮನ್ನು ತಟ್ಟುತ್ತದೆ.

ಬಿಸಿಲೇ ಬೆಂಕಿಯಂತಿರುವ ಹೊಸಪೇಟೆಯಲ್ಲೂ ಇಂಥ ಉದ್ಯಾನವನವೇ ಎಂದು ನಾವು ಹುಬ್ಬೇರಿಸಬಹುದು. ಬೆಂಗಳೂರಿನ ಲಾಲ್‌ಬಾಗ್, ಮೈಸೂರಿನ ಕನ್ನಂಬಾಡಿ ಆಣೆಕಟ್ಟು ಮತ್ತು ಬೃಂದಾವನದಂತೆಯೇ ಟಿ.ಬಿ. ಡ್ಯಾಂ ಮತ್ತು ಇಲ್ಲಿನ ಉದ್ಯಾವನಗಳೂ ಪ್ರೇಕ್ಷಣೀಯ ತಾಣಗಳೇ, ಉತ್ತರ ಕರ್ನಾಟಕಕ್ಕೆ ಶೋಭೆಯಂತಿದೆ ಈ ಉದ್ಯಾನವನಗಳು. ಹಂಪೆಗೆ ಬರುವ ಪ್ರವಾಸಿಗರು ಇಲ್ಲಿಗೆ ಬಂದೇ ಬರುತ್ತಾರೆ. ಮಳೆಗಾಲದಲ್ಲಿ ಬಂದರಂತೂ ಇಲ್ಲಿನ ಸೊಬಗೆ ಬೇರೆ. ತುಂಬಿದ ತುಂಗಭದ್ರಾ, ನಳನಳಿಸುವ ಉದ್ಯಾನದ ಗಿಡಮರಗಳು ಸ್ವರ್ಗವೇ ಭೂಮಿಗಿಳಿದು ಬಂದಂತಾಗುತ್ತದೆ – ಇದನ್ನು ನೋಡಿದಾಗ ಜಲಾಶಯದ ಬಲ ಭಾಗದಲ್ಲಿರುವ ಟಿ.ಬಿ. ಡ್ಯಾಂನಲ್ಲಿ ಇರುವ ‘ನಂದನವನ’ ಜಪಾನೀಸ್ ಪಾರ್ಕ್‌ಗಳಲ್ಲಿ ಹೊಸ ಚೆಲುವಿನ ಬಲೆ ನೇಯ್ದು ಅಂದಗೊಳಿಸಿದ್ದಾರೆ. ಸುಮಾರು ೧೦೪ ಎಕರೆ ಜಮೀನಿನಲ್ಲಿ ಚಕ್ರವನ, ಮಕ್ಕಳ ಆಟಿಕೆವನ, ಪಕ್ಷಿಧಾಮ, ಜಿಂಕೆವನ ನಿರ್ಮಿಸಿದ್ದಾರೆ. ಕಾಮನಬಿಲ್ಲಿನ ಬಣ್ಣದ “ಸಂಗೀತ ನೃತ್ಯ ಕಾರಂಜಿ” ಕಂಪ್ಯೂಟರಿಕರಣಗೊಳಿಸಿ ನವೀಕರಿಸಿದ್ದಾರೆ. ತಂತಿಗಳಲ್ಲಿ ಪ್ರಾಣಿರೂಪಿಸಿ ಅದರ ಮೇಲೆ ಗಿಡಗಂಟೆಗಳನ್ನು ಆಕರ್ಷಕವಾಗಿ ಬೆಳೆಸಿದ್ದಾರೆ.

ರೈತರಿಗೆ, ಎಂಜನೀಯರಿಂಗ್ ವಿದ್ಯಾರ್ಥಿಗಳಿಗೆ ನೀರಿನ ನಿರ್ವಹಣೆ, ತುಂಗಭದ್ರಾ ಜಲಾಶಯದ ಇತಿಹಾಸ ತಿಳಿಸಲೆಂದೇ ಕಿರುಚಿತ್ರವನ್ನು ತಯಾರಿಸಲಾಗಿದೆ. ಇದನ್ನು ಪ್ರದರ್ಶಿಸಲೆಂದೇ ಒಂದು ಮಿನಿ ಚಿತ್ರಮಂದಿರವನ್ನೂ ನಿರ್ಮಿಸಲಾಗಿದೆ. ಇದಕ್ಕೆ ಕೇಂದ್ರ ಜಲಸಂಪನ್ಮೂಲ ಅಭಿವೃದ್ದಿ ಇಲಾಖೆ ಆರ್ಥಿಕ ನೆರವು ನೀಡಿದೆ.

‘ಪರ್ಣಜ’ ಎಂಬ ಮತ್ಸ್ಯಾಲಯ ಜಪಾನೀಸ್ ಪಾರ್ಕಿನಲ್ಲಿ ನಿರ್ಮಿಸಲಾಗಿದೆ. ಪರ್ಣಜ ಕುಟೀರ ನೀರಿನಲ್ಲಿ ತೇಲುವ ರೀತಿಯಲ್ಲಿ ಕಾಣುತ್ತದೆ. ಪಂಪಾದರ್ಶನ ಬೆಟ್ಟದ ಮೇಲಿಂದ ರಾತ್ರಿ ನೋಡಿದರೆ ‘ಅರೇಬಿಯನ್ ಟೆಂಟ್’ನಂತೆ ನಯನ ಮನೋಹರವಾಗಿ ಕಾಣುತ್ತದೆ. ಮತ್ಸ್ಯಾಲಯದ ಬಣ್ಣ ಬಣ್ಣದ ಸಣ್ಣ ದೊಡ್ಡ ಮೀನುಗಳು ಚಿತ್ತಾಕರ್ಷಕ. ಇಲ್ಲಿನ ವಿದ್ಯುತ್ ದೀಪಗಳ ಜೋಡಣೆ ಕಣ್ಣಿಗೆ ತಂಪು ನೀಡುತ್ತವೆ. ಇದನ್ನೆಲ್ಲಾ ನೋಡಿಯೇ ಆನಂದಿಸಬೇಕು.

ತುಂಗಭದ್ರಾ ಮಂಡಳಿ ಪ್ರತ್ಯೇಕ ತೋಟಗಾರಿಕೆ ಘಟಕ ತೆರೆದು ವನಗಳ ಅಭಿವೃದ್ದಿ ಪಡಿಸುವುದರ ಜೊತೆಗೆ ಕುಡಿಯುವ ನೀರು, ವಸತಿ ಮುಂತಾದ ಸೌಲಭ್ಯಗಳನ್ನೂ, ಪ್ರವಾಸಿಗರಿಗೆ ಒದಗಿಸುತ್ತಿದೆ. ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪಿ. ಪದ್ಮನಾಭನ್ ಪುಷ್ಪ ಗಡಿಯಾರ, ನೀರಿನಾಟದ ವ್ಯವಸ್ಥೆ ಮುಂತಾದವುಗಳನ್ನು ನಿರ್ಮಿಸಲು ವಿಪುಲ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.

ಪಂಪಾ ಸಾಗರ (ತುಂಗಭದ್ರಾ ಜಲಾಶಯ)ದ ಎಡಭಾಗದಲ್ಲಿ ‘ಪಂಪಾವನ’ ಜಪಾನ್ ಮಾದರಿಯ ಪಗೋಡಗಳಿಂದ ಸುಂದರವಾಗಿದೆ. ಮುಂಬಾಗಿಲು ಎದುರಿಗೆ ಹಸುರಿನ ಹಾಸಿಗೆ ಇದೆ. ಪಕ್ಕದಲ್ಲಿಯೇ ಗುಲಾಬಿ ತೋಟ ತಾನಿರುವ ತಾಣವನ್ನು ಸುಗಂಧವನ್ನು ಸೂಸಿ ಸೂಚಿಸುತ್ತಿದೆ.

ಪಂಪಾವನವನ್ನು ೬೬ ಎಕರೆ ಜಮೀನಿನಲ್ಲಿ ೧೯೬೭ ರಿಂದ ಅಭಿವೃದ್ದಿ ಪಡಿಸಲಾಗುತ್ತಿದೆ. ಇಲ್ಲಿನ ಪಗೋಡಗಳು, ಸೇತುವೆಗಳು, ಸರೋವರ ಮಕ್ಕಳ ಆಟಿಕೆಗಳು, ಕಾರಂಜಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಹಾಗೆಯೇ ಪುಟ್ಟ ‘ಜೂ’ ಕೂಡ ಇದೆ. ಇಲ್ಲಿ ಚೆಂಗನೆ ಜಿಗಿಯುವ ನೀಲಗಾಯ್ ಕೃಷ್ಣಮೃಗ, ಚಿಂಕಾರ್ ಜಾತಿಯ ಜಿಂಕೆಗಳು, ನವಿಲು, ಕಡವೆಗಳು ತರಾವರಿ ಪಕ್ಷಿಗಳೂ ಇವೆ.

ಉದ್ಯಾನವನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜ್ಯದ ತೋಟಗಾರಿಕೆ ಇಲಾಖೆ  ಉತ್ತರ ಕರ್ನಾಟಕದ ಸಸ್ಯ ಪ್ರಿಯರಿಗೆ ಅಲಂಕಾರ ಗಿಡಗಳನ್ನು ಪೂರೈಸುತ್ತಿದೆ.

ವನದ ಸೌಂದರ್ಯ ಹೆಚ್ಚಿಸಲು ಹಾಗೂ ಆಕರ್ಷಕಗೊಳಿಸಲು ಇಲ್ಲಿಯ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಸಿ.ಜಿ. ನಾಗರಾಜಹೊಸ ಯೋಜನೆಗಳನ್ನು ಸರ್ಕಾರದ ಪರಿಶೀಲನೆಗೆ ಹಾಗೂ ಆರ್ಥಿಕ ನೆರವಿಗೆ ಸಲ್ಲಿಸಿದ್ದಾರೆ.

ಈ ಉದ್ಯಾನವನಕ್ಕೆ ಪುಟ್ಟ ಕೃತಕ ಜಲಪಾತ, ಪುಟಾಣಿ ರೈಲು, ದೋಣಿ ವಿಹಾರ ಕಲ್ಪಿಸಲು ಅವಕಾಶವಿದೆ. ಪಂಪಾವನ ಸೌಂದರ್ಯೀಕರಣ ಸಮಿತಿ ಕೊಪ್ಪಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಿ ವನಕ್ಕೆ ನೆರವು ನೀಡಲು ಮುಂದಾಗಿದೆ.

ಉತ್ತರ ಕರ್ನಾಟಕದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದ ಬಳಿ ಉದ್ಯಾನವನಕ್ಕಾಗಿ ಸಾಕಷ್ಟು ಜಮೀನು ನೀಡಲಾಗಿದೆ. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಅವು ಮುದುಡಿಕೊಳ್ಳುತ್ತಿವೆ. ಅರಳಿಸಿ ಚೆಲುವು ನೀಡುವ ಕೆಲಸ ಆಗಬೇಕಿದೆ.

ನಿಸರ್ಗದ ಚೆಲುವಿಗೆ ಮತ್ತೊಂದು ಚೆಲುವ ಈ ಉದ್ಯಾನವನಗಳು. ಚಲುವಿನ ನೆಲೆ, ಕಣ್ಣಳ ಬಲೆಯಾಗಿವೆ. “ಸುಂದರವಾದುದೆಲ್ಲಾ ಯಾವಾಗಲೂ ಆನಂದವನ್ನೇ ನೀಡುತ್ತದೆ” ಎನ್ನುವ ಜಾನ್‌ಕೀಟ್ಸ್ ಕವಿಯ ಕವಿತೆಯ ಸಾಲುಗಳನ್ನು ಇಲ್ಲಿ ನೆನಪಿಸಬಹುದು.