(ಪ್ರಜಾವಾಣಿ ೧೯೯೮)

ಬಳ್ಳಾರಿ – ಹೊಸಪೇಟೆ ಪ್ರದೇಶ ಬೃಹತ್ ಉಕ್ಕಿನ ಕಾರ್ಖಾನೆಗಳ ದಿqsರ್ ಸ್ಥಾಪನೆಯಿಂದಾಗಿ ಸಾಮಾಜಿಕ ಜೀವನ ತತ್ತರಿಸಿ ಹೋಗುತ್ತಿವೆ. ಪರಿಸರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ತುಂಗಭದ್ರಾ ಜಲಾಶಯ ಹೂಳಿನಿಂದ ನೀರನ್ನು ಶೇಖರಿಸುವ ಇಡುವ ಪ್ರಮಾಣ ಕಡಿಮೆಯಾಗುತ್ತಿದೆ. ಜಲಾಶಯದ ನೀರಿಗೆ ಉದ್ಯಮಗಳು, ಕೃಷಿಕರು ಹಪಹಪಿಸುವಂತಾಗಿದೆ. ಈ ಸ್ಥಿತಿಯನ್ನು ತಿಳಿಗೊಳಿಸುವ ಕೆಲಸ ಆಗಬೇಕಿದೆ.

ಸಣ್ಣ ಪ್ರಮಾಣದಲ್ಲಿ ಉದ್ಯಮಗಳು ಬೆಳೆದುಕೊಂಡು ಬಂದರೆ ನಾಗರಿಕ ಜೀವನಕ್ಕೆ ಅಷ್ಟೊಂದು ತೊಂದರೆ ಆಗುವುದಿಲ್ಲ. ಆದರೆ ರೂ. ೩೦,೦೦೦ ಕೋಟಿ ಬಂಡವಾಳದಿಂದ ಬೃಹತ್ ಉದ್ಯಮಗಳು ಬರುತ್ತಿರುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಸಾಮಾಜಿಕ ಅಂತರ್‌ರಚನೆ ಅಗತ್ಯವಾಗಿದೆ.

ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಳ್ಳುವ ಸ್ಥಳೀಯರಿಗೆ ತೊಡಕುಗಳ ಹೊರತು ಬೇರೆ ಏನೂ ಲಾಭವಿಲ್ಲ, ಆದರೆ ಉದ್ಯಮಗಳಿಗೆ ಭಾರಿ ಲಾಭ. ಸಂಪನ್ಮೂಲಗಳು ಮುಗಿದು ಹೋದರೆ ಸ್ಥಳೀಯರಿಗೆ ಮುಂದಿನ ಪರಿಸ್ಥಿತಿಗಳೇನು?

ಸುಮಾರು ೨೦೦ ವರ್ಷಗಳ ನಂತರ ಈ ಭಾಗದ ಲೋಹದ ಅದುರಿನ ಗುಡ್ಡಗಳು ಹಾಳು, ಬೀಳು ಪ್ರದೇಶವಾಗುತ್ತದೆ. ಅದೇ ಸಂದರ್ಭಕ್ಕೆ ತುಂಗಭದ್ರಾ ಜಲಾಶಯವೂ ಬರಿದಾಗಬಹುದು. ಆಗ ಸಾಮಾಜಿಕ ವ್ಯವಸ್ಥೆ ಕೆಟ್ಟು ಹೋಗಿ ಜನ ಜೀವನವೇ ಇರದಂತಹ ಪರಿಸ್ಥಿತಿ ಏರ್ಪಾಡಾಗಬಹುದು. ಈ ಭಾರಿ ಉದ್ಯಮಗಳಿಂದ ಮನುಷ್ಯನ ವಾಸಸ್ಥಾನ ಹಾಳಾಗುವುದರ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತ. ಅಂತರ ರಚನೆಗೆ ಒತ್ತು ಕೊಡುವುದು ಇಂದಿನ ಅಗತ್ಯವಾಗಿದೆ. ಉದ್ಯಮ ಅಭಿವೃದ್ದಿಗೊಳ್ಳುವ ಕ್ರಮವನ್ನು ನಿಯಂತ್ರಿಸಲು ಎಚ್ಚರಿಕೆ ನೀಡಲು ಸ್ಥಳೀಯರಿಗೆ ಒಂದು ಮಂಡಳಿ ರಚನೆಯಾಗಬೇಕು.

ಹೊಸಪೇಟೆ ನಗರದ ಮೇಲೆ ಸಧ್ಯ ಹೆಚ್ಚು ಒತ್ತಡ ಬೀಳುತ್ತಿರುವುದು ಕಂಡು ಬರುತ್ತದೆ. ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಅನೇಕ ಉದ್ಯಮಿಗಳು, ಸಿಬ್ಬಂದಿಯವರು ಹೊಸಪೇಟೆಯನ್ನು ವಾಸಸ್ಥಾನವಾಗಿ ಮಾಡಿಕೊಂಡಿದ್ದಾರೆ. ಹೊಸಪೇಟೆ ಕರ್ನಾಟಕದ “ಉಕ್ಕಿನ ನಗರ” ಎಂದು ಪ್ರಸಿದ್ದಿಯಾಗಿ ವಿಶ್ವದ ಭೂಪಟದಲ್ಲಿ ಹೆಸರು ಮಾಡಲಿದೆ.

ಈ ನಗರದ ಸಮಗ್ರ ಸರ್ವೇಕ್ಷಣಾ ಅಭಿವೃದ್ದಿಯ ವರದಿ ತೀವ್ರವಾಗಿ ಸಿದ್ಧವಾಗಬೇಕಿದೆ. ಒಂದು ಕಡೆ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಇನ್ನೊಂದು ಕಡೆ ತುಂಗಭದ್ರಾ ವಿವಿಧೋದ್ದೇಶ ಯೋಜನೆಯ ಜಲಾಶಯ ಮಗದೊಂದು ಕಡೆ ಕಬ್ಬಿಣ ಅದುರಿನ ನಿಕ್ಷೇಪ. ಇವುಗಳ ಇರುವಿಕೆಯಿಂದ ನಗರದ ಜನಸಂಖ್ಯೆ ಏರುತ್ತಿದೆ. ಆದರೆ ನಿಯಂತ್ರಣದ ಬಗ್ಗೆ ಯಾವೊಂದು ಕ್ರಮವೂ ಕೈಗೊಂಡ ಬಗ್ಗೆ ತಿಳಿದು ಬಂದಿಲ್ಲ.

ಆಧುನಿಕ ವೈಜ್ಞಾನಿಕ ತಂತ್ರಜ್ಞಾನದಿಂದ ಅದಿರನ್ನು ಹೊರ ತೆಗೆದು ಪರಿಸರವನ್ನು ಕಾಪಾಡುವಲ್ಲಿ ಗಮನ ಹರಿಸಿ ಅದುರಿನ ಗುಡ್ಡಗಳ ಬಳಿ ವಾಸಿಸುವ ಗ್ರಾಮಸ್ಥರಿಗೂ ಜೀವನ ಸುಧಾರಿಸುವ ಕ್ರಮ ಕೈಗೊಳ್ಳಬೇಕಾಗಿದೆ.

ಅದುರಿನ ಅನುಪಯುಕ್ತ ವಸ್ತುಗಳನ್ನು ಮಿತಿಗೊಳಿಸಲು ಬಿಗಿಯಾದ ಕಾಯ್ದೆ-ಕಾನೂನು ಗಳು ಬರಬೇಕಾಗಿದೆ. ವಿದೇಶಕ್ಕೆ ಇನ್ನೂ ಮುಂದೆ ಅದಿರನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು. ದೇಶದ ಹಿತೃದೃಷ್ಟಿ ಕಾಪಾಡಬೇಕು. ಇದರಿಂದ ಸ್ಥಳೀಯ ಕಬ್ಬಿಣ ತಯಾರಿಸುವ ಕಾರ್ಖಾನೆಗಳು ಕೆಲಕಾಲ ಜೀವಿಸುವಂತಾಗಲು ಸಾಧ್ಯವಾಗುತ್ತದೆ. ಸಂಪನ್ಮೂಲ ಬೇಗ ಹಾಳಾಗುವುದು ನಿಧಾನವಾಗುತ್ತದೆ.

ಭಾರತದಲ್ಲಿ ಪ್ರತಿವರ್ಷ ೫೬ರಿಂದ ೫೮ ಮಿಲಿಯನ್ ಟನ್ ಕಬ್ಬಿಣದ ಅದಿರು ಗಣಿಗಳಿಂದ ತೆಗೆಯಲಾಗುತ್ತಿದೆ. ಇದರಲ್ಲಿ ೩೦ ಮಿಲಿಯನ್ ಟನ್ ಪ್ರತಿವರ್ಷ ರಫ್ತು ಮಾಡಲಾಗುತ್ತಿದೆ. ಉಳಿದ ಅದಿರನ್ನು ದೇಶದಲ್ಲಿ ಕಬ್ಬಿಣ-ಉಕ್ಕು ತಯಾರಿಸಲು ಬಳಸಲಾಗುತ್ತಿದೆ. ಆದರೂ ವಿಶ್ವದಲ್ಲಿ ಕಬ್ಬಿಣ ಅದಿರು ಉತ್ಪಾದನೆಯಲ್ಲಿ ಭಾರತವು ನಾಲ್ಕನೆಯ ಸ್ಥಾನ ಹೊಂದಿದೆ.

ಕರ್ನಾಟಕದ ಬಳ್ಳಾರಿ-ಹೊಸಪೇಟೆ ಭಾಗದಿಂದ ಹಾಗೂ ಕುದುರೆಮುಖದಿಂದ ೧೩.೫ ಮಿಲಿಯನ್ ಟನ್ ಕಬ್ಬಿಣ ಅದಿರು ಅಗೆಯಲಾಗುತ್ತಿದೆ. ಸುಮಾರು ೭೦ ಚ.ಕಿ.ಮೀ. ಹೊಸಪೇಟೆ ಗುಡ್ಡಗಳಿಂದ ೬.೫ ಮಿಲಿಯನ್ ಟನ್ ಕಬ್ಬಿಣ ಅದಿರು ಅಗೆಯಲಾಗುತ್ತಿದೆ. ಈ ಭಾಗದಲ್ಲಿ ೮೫ ಗಣಿಗಾರಿಕೆಗಳ ಪೈಕಿ ೬೫ ಗಣಿಗಳು ತೀವ್ರ ಚಟುವಟಿಕೆಯಿಂದ ಕೂಡಿದ್ದು, ಗುಡ್ಡಗಳ ಸುಂದರತೆಯನ್ನು ಬೋಳು ಮಾಡುವ ಕೆಲಸದಲ್ಲಿ ತೊಡಗಿವೆ. ಸ್ಥಳೀಯರ ಹಿತಚಿಂತನೆಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ಅಗತ್ಯವಾಗಿದೆ.