ಶಿಲ್ಪಕಲಾ ಸಂಗ್ರಹಾಲಯಗಳು ಕಲಾಶಕ್ತಿಯನ್ನು ಕೆರಳಿಸುವುದರ ಜೊತೆಗೆ ಜ್ಞಾನಾಭಿವೃದ್ದಿಯನ್ನು ಮಾಡುತ್ತವೆ. ಅಪರೂಪದ ಶಿಲ್ಪ ಕಲಾಕೃತಿಗಳನ್ನು ಕಾಪಾಡುವ ಸಂಗ್ರಹಾಲಯಗಳು ಕರ್ನಾಟಕದಲ್ಲಿ ಪ್ರಾಚ್ಯವಸ್ತು ಇಲಾಖೆಯ ೯ ಹಾಗೂ ಖಾಸಗಿಯವರ ೯ ಸಂಗ್ರಹಾಲಯಗಳಿವೆ. ಇದು ಸಾಲದು. ಭಾರತದಲ್ಲಿ ಗುರುತಿಸಲಾದ ವಿಶ್ವಪರಂಪರೆಯ ೧೩ ಸ್ಥಳಗಳಲ್ಲಿ ಎರಡು ಸ್ಥಳಗಳು ಕರ್ನಾಟಕದಲ್ಲಿವೆ. ಸಂಶೋಧನೆಗೆ, ಕಲೆ ಮತ್ತು ವಿಜ್ಞಾನದ ಮೌಲ್ಯಗಳನ್ನು ಗ್ರಹಿಸಲು ಈ ಸಂಗ್ರಹಾಲಯಗಳು ವಿಶ್ವವಿದ್ಯಾನಿಲಯಗಳಿದ್ದಂತೆ. ಇವುಗಳ ಸಂಖ್ಯೆ ಹೆಚ್ಚಾದರೆ ಹೆಚ್ಚು ಹೆಚ್ಚು ಕಲಾಕೃತಿಗಳನ್ನು ಕಾಪಾಡಬಹುದು.

ಹಂಪಿಯ ಬಳಿಗೆ ಕಮಲಾಪುರದಲ್ಲಿ ಭಾರತೀಯ ಪ್ರಾಚ್ಯವಸ್ತು ಇಲಾಖೆಯವರು ಸ್ಥಾಪಿಸಿರುವ ಶಿಲ್ಪಕಲಾ ವಸ್ತುಸಂಗ್ರಹಾಲಯವು ಎರಡು ದಶಕಗಳ ಹಳೆಯದು. ಇದರ ಸಾಧಕ-ಬಾಧಕಗಳ ಮೇಲೆ ಒಂದು ಕ್ಷಕಿರಣ ಇಲ್ಲಿದೆ.

ಹಂಪಿಯ ಗಜಶಾಲೆ ಬಳಿ ಸೊರಗುತ್ತಿದ್ದ ಈ ಸಂಗ್ರಹಾಲಯ ೧೯೭೨ರಲ್ಲಿ ಕಮಲಾಪುರದ ಸುಸಜ್ಜಿತವಾದ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಪ್ರತಿದಿನ ಸುಮಾರು ೩೦೦೦ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದರೆ ೧೦೦೦ ವೀಕ್ಷಕರು ಸಂಗ್ರಹಾಲಯಕ್ಕೆ ನುಗ್ಗುತ್ತಾರೆ. ವಿಜಯನಗರದ ಪೂರ್ವ ಕಾಲಕ್ಕೆ ಹಾಗೂ ನಂತರದ ಕಾಲಕ್ಕೆ ಸಂಬಂಧಪಟ್ಟ ಪುರಾತತ್ವ ವಸ್ತುಗಳನ್ನು ಅಭ್ಯಾಸ ಮಾಡಿ ಆಕರ್ಷಕವಾಗಿಡಲಾಗಿದೆ. ಆಯ್ಕೆಯಾದ ಕಲ್ಲಿನ, ಲೋಹದ ಶಿಲ್ಪಗಳು, ಚಿನ್ನ ಮತ್ತು ತಾಮ್ರದ ನಾಣ್ಯಗಳು, ಶಾಸನಗಳು, ಯುದ್ಧ ಆಯುಧ ಗಳು, ತಾಳೆಗರಿಗಳು, ಮನೆ ಬಳಕೆ ವಸ್ತುಗಳು ವರ್ಣಚಿತ್ರಗಳು ಅಂದವಾಗಿ ಸಂಗ್ರಹಿಸಿಡಲಾಗಿದೆ.

ಒಂದನೆ ಅಂಕಣದಲ್ಲಿ ಶೈವ ದೇವತೆಗಳು. ಕಲ್ಲಿನ ತಾಮ್ರದ ವಿಗ್ರಹಗಳಿವೆ. ವಿದೇಶ ಪ್ರಯಾಣ ಮಾಡಿ ಬಂದ ದಶಭುಜ ವೀರಭದ್ರನ ಅಪರೂಪದ ಶಿಲ್ಪ. ಇದು ಸ್ಪೇನ್ ದೇಶದಲ್ಲಿ ಪ್ರದರ್ಶನಗೊಂಡು ಮರಳಿ ಸಂಗ್ರಹಾಲಯಕ್ಕೆ ಬಂದಿದೆ. ಪ್ರೌಢ ದೇವರಾಯನ ವಿಗ್ರಹ ಇತಿಹಾಸಕಾರರ ಗಮನವನ್ನು ಜಿಜ್ಞಾಸೆಗೆ ಒಳಪಡಿಸುವಂತಿದೆ. ದ್ವಾರ ಬಾಗಿಲಿನ ಮೂಲಕ ಗುಡಿಗೆ ಪ್ರವೇಶ ಮಾಡುವ ರೀತಿಯಲ್ಲಿ ಶಿಲ್ಪಗಳನ್ನು  ಜೋಡಿಸಿಡಲಾಗಿದೆ.

ವೈಷ್ಣವ ದೇವತೆಗಳು ಕಪ್ಪು ಶಿಲೆಯಲ್ಲಿ ಶ್ರೀರಂಗನಾಥನ ಸೇವೆಯನ್ನು ಭೂದೇವಿ, ಶ್ರೀದೇವಿ ಮಾಡುತ್ತಿರುವುದನ್ನು, ಗರುಡ, ವೆಂಕಟೇಶ ಮುಂತಾದ ಶಿಲ್ಪಗಳು ಊನವಾಗಿ ರುವುದನ್ನು ಹಾಗೂ ವಿರಳವಾದ ಶೇಷಶಯನ ವಿಷ್ಣು ಎರಡನೆ ಅಂಕಣದಲ್ಲಿದ್ದಾರೆ.

ಮೂರನೆ ಅಂಕಣದಲ್ಲಿ ಯುದ್ಧೋಪಕರಣಗಳು, ಭೋಜನದ ತಟ್ಟೆಗಳು, ನಾಣ್ಯಗಳು ಇವೆ. ೩ನೇ ಶತಮಾನದಿಂದ ೧೫ನೇ ಶತಮಾನದವರೆಗೆ ಬೆಳೆದು ಬಂದ ಬ್ರಾಹ್ಮಿ ಲಿಪಿಯ ವಿವರಣೆಯ ಫಲಕ ಇಲ್ಲಿದೆ. ೧೮ನೇ ಶತಮಾನದ ಶ್ರೀ ರಾಮಚಂದ್ರ ಪಟ್ಟಾಭಿಷೇಕದ ವರ್ಣಚಿತ್ರ ವೀಕ್ಷಿಸಬಹುದು. ಇತ್ತೀಚಿಗೆ ವ್ಯವಸ್ಥೆಗೊಳಿಸಿರುವ ಗಾಜಿನ ಷೋ ಕೇಸಿನಲ್ಲಿ ಕನ್ನಡ ತೆಲುಗು ಹಾಗೂ ನಾಗರಿ ಲಿಪಿಗಳ ತಾಮ್ರಶಾಸನಗಳು ಇಡಲಾಗಿದೆ. ಒಂದು ತಾಮ್ರ ಶಾಸನದಲ್ಲಿ ರಾಜಮುದ್ರೆಯಾದ ಸೂರ್ಯ, ಚಂದ್ರ, ಖಡ್ಗ ಹಾಗೂ ವರಾಹ ಚಿತ್ರಗಳನ್ನು ಮುದ್ದಾಗಿ ಚಿತ್ರಿಸಲಾಗಿದೆ.

ಹಳೆಗನ್ನಡದಲ್ಲಿ ಬರೆದ ರಗಳೆ, ಕವನ, ವಚನ ಹಾಗೂ ಪುರಾಣದ ತಾಳೆಗರಿ ಪತ್ರಗಳನ್ನು ಸಂಗ್ರಹಿಸಲಾಗಿದೆ. ತಾಳೆಗರಿ ಮೇಲೆ ಯಾವ ಸಾಮಗ್ರಿಗಳಿಂದ ಬರೆಯುತ್ತಿದ್ದರು ಎಂಬುದನ್ನು ಇಲ್ಲಿ ವೀಕ್ಷಿಸಬಿಹುದು. ಪ್ರಾಚ್ಯವಸ್ತು ವಿಷಯಕ್ಕೆ ಸಂಬಂಧಪಟ್ಟ ಅಮೂಲ್ಯ ಗ್ರಂಥಗಳನ್ನು ಸಹ ಇಲ್ಲಿ ಸಂಗ್ರಹಿಸಿಡಲಾಗಿದೆ. ಸಭಾಂಗಣದಲ್ಲಿ ಪ್ರಾಚ್ಯವಸ್ತು ತಾಣಗಳ ಗುಡಿ-ಗೋಪುರಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಸಂಗ್ರಹಾಲಯದ ಮಧ್ಯಭಾಗದಲ್ಲಿ ಇರುವ ಆವರಣದಲ್ಲಿ ಹಂಪಿ ಕ್ಷೇತ್ರದ ಪಕ್ಷಿನೋಟ ವನ್ನು ನೀಡುವ ‘ಹಂಪಿ ಕಣಿವೆ’ ಮಾದರಿಯನ್ನು ಕಲ್ಲು, ಮಣ್ಣು, ಸಿಮೆಂಟ್‌ಗಳಿಂದ ಸೂಕ್ಷ್ಮವಾಗಿ ನಿರ್ಮಿಸಲಾಗಿದೆ. ಇದರಲ್ಲಿ ಹಂಪಿಯ ಗುಡ್ಡಗಳು, ಸ್ಮಾರಕಗಳು, ಅವಶೇಷಗಳು, ರಸ್ತೆ, ಗುಡಿಗೋಪುರ ತುಂಗಭದ್ರಾ ನದಿ ಹರಿಯುವುದು ಮುಂತಾದವುಗಳನ್ನು ಪುಟ್ಟದಾಗಿ ರಚಿಸಲಾಗಿದೆ. ಈ ಮಾದರಿ ವೀಕ್ಷಕರ ಕಣ್ಣು ಮನಗಳಿಗೆ ಆನಂದ ನೀಡಿದರೆ, ಸಂಗ್ರಹಾಲಯದ ಮುಂದಿನ ವಿಶಾಲವಾದ ಹುಲ್ಲಿನ ಹಾಸಿಗೆ, ಬಳ್ಳಿ ಬಣ್ಣದ ಹೂಗಳು ಮನಸ್ಸಿಗೆ ಮುದ ನೀಡುವಂತಿವೆ.

ಪ್ರವಾಸಿಗರು ಒಂದು ಬಾರಿ ಈ ಸಂಗ್ರಹಾಲಯದ ಒಳಹೊಕ್ಕು ಹೊರ ಬಂದರೆ ಸಾಕಷ್ಟು ವಿಜಯನಗರ ಸಾಮ್ರಾಜ್ಯದ ಚರಿತ್ರೆ, ಶಿಲ್ಪಕಲೆಯ ಬಗ್ಗೆ ತಿಳುವಳಿಕೆಯೊಂದಿಗೆ ಆ ಕಾಲದ ಶ್ರೇಷ್ಠ ಸಾಧನೆಯನ್ನು ಗುರುತಿಸಬಹುದಾಗಿದೆ.

ಕಮಲಾಪುರದ ಶಿಲ್ಪಕಲಾ ವಸ್ತು ಸಂಗ್ರಹಾಲಯವು ಚಿಕ್ಕದಾಗಿರುವುದರಿಂದ ಅನೇಕ ಅಪರೂಪದ ಶಿಲ್ಪಕೃತಿಗಳು ಬಯಲಿನಲ್ಲಿ ಬಿಸಿಲು, ಮಳೆ, ಚಳಿಗೆ, ಗಾಳಿಗೆ ಮೈ ಹರಡಿ ನೆರಳಿಗಾಗಿ ಕಾದು ಕುಳಿತಿರುವುದನ್ನು ಕಾಣಬಹುದು. ಸರಿಯಾದ ರಕ್ಷಣೆ ಸಿಗದೆ ಬೇಗನೆ ಈ ಕಲಾಕೃತಿಗಳು ಹಾಳಾಗುವ ಸಂಭವ ಹೆಚ್ಚು. ಬಯಲಿನಲ್ಲಿ ಬಿದ್ದಿರುವ ಶಿಲ್ಪಗಳನ್ನು ನೋಡಿದರೆ ಎಂಥ ಕಲ್ಲು ಹೃದಯದವರೂ ಮರಗುತ್ತಾರೆ.

ಹಂಪಿಯಲ್ಲಿ ಈವರೆಗೆ ಕಂಡು ಹಿಡಿಯಲ್ಪಟ್ಟ ಅಪರೂಪದ ಶಿಲ್ಪಗಳ ಪೈಕಿ ಸುಮಾರು ೧೦೦೦ ಪುರಾತತ್ವ ವಸ್ತುಗಳನ್ನು ಸಂಗ್ರಹಾಲಯದಲ್ಲಿ ಇಡಲು ಸಾಧ್ಯವಾಗಿದೆ. ಇನ್ನೂ ಸಾವಿರಾರು ಶಿಲ್ಪಗಳು ಸೊರಿಗಾಗಿ ಗೋಳಿಡುವಂತೆ ಭಾಸವಾಗುತ್ತದೆ. ಇನ್ನೂ ನಾಲ್ಕು ಅಂಕಣ ನಿರ್ಮಿಸಿ ಅಪರೂಪದ ಶಿಲ್ಪಗಳನ್ನು ರಕ್ಷಿಸುವ ಕೆಲಸ ತಕ್ಷಣ ಆಗಬೇಕು. ಕೇವಲ ವಿಶ್ವಪರಂಪರೆ ದಿನ, ವಿಶ್ವ ಪ್ರವಾಸಿ ಹಾಗೂ ಸ್ಮಾರಕ ರಕ್ಷಣಾ ಸಪ್ತಾಹ ಆಚರಿಸಿದರೆ ಸಾಲದು.

ಸಂಗ್ರಹಾಲಯದ ಹುಲ್ಲಿನ ಹಾಸಿಗೆಗೆ ದನ-ಕುರಿಗಳು ನುಗ್ಗಿ ಹಾಳು ಮಾಡುತ್ತಿವೆ. ಇದು ನಿಲ್ಲಬೇಕು. ಪ್ರವೇಶ ದ್ವಾರದ ಬಳಿ ಕಸಕಡ್ಡಿ ಹೊಲಸು ಪ್ರವಾಸಿಗರಿಗೆ ರಾಚುತ್ತಿದೆ,  ಇದು ಸ್ವಚ್ಛವಾಗಬೇಕು. ಪ್ರವಾಸಿಗರಿಗೆ ಹೆಚ್ಚಿನ ಶೌಚಾಲಯ ಸೌಲಭ್ಯ ಕಲ್ಪಿಸಬೇಕು.

ಬೆಲೆ ಬಾಳುವ ಆಭರಣಗಳ ಪ್ರದರ್ಶನಕ್ಕೆ ಭದ್ರತಾದಳದ ವ್ಯವಸ್ಥೆ ಆಗಬೇಕು. ಈ ಎಲ್ಲ ಬೇಕುಗಳನ್ನು ಈಡೇರಿಸಲು ಸ್ಥಳೀಯರೂ ಮುಂದಾಗಬೇಕು.

ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಎನ್ನಬಹುದಾದ ಹಾಗೂ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಹೆಮ್ಮೆಯ ಸಂಗ್ರಹಾಲಯವಾದ ಇದರ ಕುಂದುಕೊರತೆ ಬಗ್ಗೆ ಇಲಾಖೆ ಶೀಘ್ರವಾಗಿ ಗಮನ ಹರಿಸುವುದೇ?

ಸಾರ್ವಜನಿಕರಿಗೆ ಸಂಸ್ಕೃತಿ-ಪರಂಪರೆಯ ನೆನಪು ಮಾಡಿಕೊಡುವ ಇಂತಹ ಸಂಗ್ರಹಾಲಯ ಗಳು ಹೆಚ್ಚು ಕಡೆ ಸ್ಥಾಪನೆಯಾಗಲಿ, ಜನರ ಭಾವನೆಗಳಿಗೆ ಸರ್ಕಾರ ಗೌರವ ಕೊಡುವಂತಾಗ ಬೇಕು. ಇಲ್ಲವಾದರೆ ಭಾರತೀಯರಿಗೆ ಪ್ರಾಚ್ಯವಸ್ತುಗಳ ಬಗ್ಗೆ ಪ್ರಜ್ಞೆಯೇ ಇಲ್ಲ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಬೇಕಾಗುತ್ತದೆ.