ಹಂಪಿಯ ಸಮೂಹ ಸ್ಮಾರಕಗಳನ್ನು ‘ಯುನೊಸ್ಕೋ’ ಸಂಸ್ಥೆ ೧೯೮೬ರಲ್ಲಿ ವಿಶ್ವಪರಂಪರೆಯ ಸ್ಥಳಗಳ ಪಟ್ಟಿಯಲ್ಲಿ ಸೇರಿಸಿತು. ೧೯೭೨ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಒಂದು ನಿರ್ಣಯವನ್ನು ಅಂಗೀಕರಿಸಿ ವಿಶ್ವ-ಸಂಸ್ಕೃತಿಯ ಹಾಗೂ ಪ್ರಕೃತಿಯ ವಿಸ್ಮಯ ಪರಂಪರೆಯನ್ನು ಉಳಿಸುವ, ರಕ್ಷಿಸುವ ಉದ್ದೇಶದಿಂದ ಪಟ್ಟಿಯನ್ನು ಸಿದ್ಧಪಡಿಸತೊಡಗಿತು. ಚಿತ್ತಾಕರ್ಷಕ, ವಿಶ್ವಮೌಲ್ಯವುಳ್ಳ ಹಾಗೂ ವಿಶ್ವಮಾನವನಿಗೆ ಸಂಬಂಧಿಸಿದ ಸ್ಮಾರಕಗಳನ್ನು ರಕ್ಷಿಸುವ, ಅಭಿವೃದ್ದಿಪಡಿಸುವ ಹಾಗೂ ಮುಂದಿನ ಜನಾಂಗಕ್ಕೆ ಉಳಿಸಿಡುವ ಉದ್ದೇಶದಿಂದ ಪಟ್ಟಿ ಸಿದ್ಧಪಡಿಸಲಾಯಿತು. ಅದರಲ್ಲಿ ಹಂಪಿಯೂ ಒಂದು ೨೪೧ನೇ ಸ್ಥಳವಾಗಿ ಸೇರಿಸಲ್ಪಟ್ಟಿತು. ಇದರಿಂದಾಗಿ ಅಂತರ್‌ರಾಷ್ಟ್ರೀಯ ಘನತೆ-ಗೌರವವನ್ನು ಹಂಪಿಯ ಸ್ಮಾರಕಗಳು ಪಡೆದುಕೊಂಡವು. ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಪ್ರಾರಂಭಿಸಿದರು.

ಆದರೆ ಪ್ರಾಚ್ಯವಸ್ತು ಮತ್ತು ಸಂಸ್ಕೃತಿಯ ಹಂಪಿ ಪರಂಪರೆಯನ್ನು ಅಲಕ್ಷಕ್ಕೆ ಗುರಿಪಡಿಸಲಾಯಿತು. ಸ್ಮಾರಕಗಳ ಅತಿಕ್ರಮಣ, ಶಿಲ್ಪಗಳ ಅತ್ಯಾಚಾರ, ಕಲ್ಲಿನಿಂದ ಕುಟ್ಟುವುದು, ಒಡೆಯುವುದು ನಡೆಯತೊಡಗಿತು. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸಾರ್ವಜನಿಕರು ಶಿಲ್ಪಗಳ ತಲೆಯ ಮೇಲೆ ನಿಂತು ಚಿತ್ರೀಕರಣ ವೀಕ್ಷಿಸಿದ ಘಟನೆಗಳೂ ಜರುಗಿವೆ.

ಹಣಗಳಿಸುವ ಸ್ವಾರ್ಥದಿಂದ ವಿದೇಶಿಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಹಂಪಿ ನಿವಾಸಿಗಳು ತಮ್ಮ ಸ್ವಂತ ಮನೆಗಳನ್ನು ಅಂತಸ್ತುಗಳಾಗಿ ಮಾರ್ಪಡಿಸಿ ಬಾಡಿಗೆಗೆ ಕೊಟ್ಟು ತಾವು ಮಂಟಪಗಳಲ್ಲಿ ಮಲಗಲು ಪ್ರಾರಂಭಿಸಿದರು. ಮನೆಗಳನ್ನು ಹೋಟೆಲ್‌ಗಳಾಗಿ ರೂಪಿಸಿ ಪ್ರಾಚ್ಯವಸ್ತು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರ ತೊಡಗಿದರು. ಇದರ ಪರಿಣಾಮವಾಗಿ ಹಂಪಿಯ ಸುಂದರ ಶಾಂತ ಪರಿಸರ ಹಾಳಾಗತೊಡಗಿತು.

ಬೊರ್‌ವೆಲ್‌ಗಳ ಕೊರೆತ, ಗ್ರಾನೈಟ್ ಕಲ್ಲುಗಳಿಗಾಗ ಸ್ಫೋಟ, ಮಂಟಪ, ಸ್ಮಾರಕಗಳ ಬಳಿ ಬೇಸಾಯ, ಮುಂತಾದ ಕಾರ್ಯ ಚಟುವಟಿಕೆಗಳಿಂದ ನೆಲೆದ ಆಳದಲ್ಲಿ ಇರುವ ಅವಶೇಷಗಳಿಗೆ ಧಕ್ಕೆಯಾಗುವುದರ ಜೊತೆಗೆ ಮುಂದಿನ ಉತ್ಖನನ ಹಾಗೂ ಸಂಶೋಧನೆಗೆ ಧಕ್ಕೆ ಹಾಗೂ ಅಪಾಯ ಕಲ್ಪಿಸಿದಂತಾಯಿತು. ಹಂಪಿಯ ೨೫ ಕಿ.ಮೀ. ಪರಧಿಯ ರಕ್ಷಿತ ಪ್ರದೇಶದ ಸುರಕ್ಷತೆಗೆ ಯಾವ ಕ್ರಮವೂ ತೆಗೆದುಕೊಳ್ಳದಿರುವುದು ವಿಷಾದನೀಯ ಪರಿಸ್ಥಿತಿ ಉಂಟಾಗಿತ್ತು.

ತುಂಗಭದ್ರಾ ನದಿಗೆ ಅಡ್ಡಲಾಗಿ ಎರಡು ತೂಗು ಸೇತುವೆ ಕಟ್ಟಿಸುತ್ತಿರುವ ಸಮಾಚಾರ ಯುನೊಸ್ಕೋ ಸಂಸ್ಥೆಯ ಗಮನಕ್ಕೆ ತರಲಾಯಿತು. ಕಾಲು ದಾರಿಯ ತೂಗು ಸೇತುವೆ ಕಿತ್ತು ಹಾಕಲಾಯಿತು. ರಾಜ್ಯದ ಲೋಕೋಪಯೋಗಿ ಇಲಾಖೆ ಮುಕ್ಕಾಲು ಭಾಗ ಕಟ್ಟಿದ ಆನೆಗುಂದಿ ತೂಗು ಸೇತುವೆ ನಿರ್ಮಾಣದ ಕಾರ್ಯ ನಿಲ್ಲಿಸಬೇಕಾಗಿ ಬಂತು.

ತನ್ನದೇ ಆದ ಶಿಲ್ಪ ವೈಭವದಿಂದ ಕೂಡಿದ ಉಗ್ರ ನರಸಿಂಹ ಏಕಶಿಲಾ ಬೃಹದಾಕಾರದ ಮೂರ್ತಿಯನ್ನು ೧೯೮೦ರಲ್ಲಿ ನವೀಕರಿಸಲು ಅನುಮತಿ ನೀಡಲಾಗಿತ್ತು. ಶಿಲ್ಪಿ  ಪದ್ಮನಾಭ ಮೂರ್ತಿಯನ್ನು ನವೀಕರಿಸುವಾಗ ಖ್ಯಾತ ಸಾಹಿತಿ ಶಿವರಾಮ ಕಾರಂತರು ಆಕ್ಷೇಪಣೆ ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರ ಅತೀವ ವಿರೋಧದ ಕಾರಣವಾಗಿ ಮೂರ್ತಿಯ ನವೀಕರಣ ನಿಲ್ಲಿಸಲಾಯಿತು.

ಹಂಪಿಯ ಸುಂದರ ಪರಿಸರದ ಸುತ್ತಲೂ ನಡೆಯುತ್ತಿರುವ ತೋಟಗಾರಿಕೆಗೆ ಪೈಪ್ ಅಳವಡಿಸಿರುವುದು, ಬೇಲಿ ಹಾಕಿರುವುದು, ನೀರಿನ ತೊಟ್ಟಿ ನಿರ್ಮಿಸಿರುವುದು ಮಂಟಪಗಳಲ್ಲಿ ಬ್ಯಾಂಕ್, ಕಛೇರಿ, ಪೋಲೀಸ್ ಠಾಣೆ ನಡೆಸುತ್ತಿರುವುದು ಹಂಪಿ ಪರಿಸರವನ್ನು ಹದಗೆಡಿಸುವ ಚಟುವಟಿಕೆಗಳಾಗಿವೆ. ಈಗಲೂ ಹಂಪಿಯಲ್ಲಿಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಯುನೊಸ್ಕೋ ಸಂಸ್ಥೆ ‘ಹಂಪಿ ವಿಶ್ವಪರಂಪರೆ ಸ್ಥಳ’ ಅಪಾಯದ ಅಂಚಿನಲ್ಲಿದೆ ಎಂದು ಘೋಷಿಸಿತು. ವಿಶ್ವಪರಂಪರೆ ಸ್ಥಳಗಳ ಪಟ್ಟಿಯಿಂದ ಹಂಪಿಯನ್ನು ತೆಗೆದು ಹಾಕುವ ಬೆದರಿಕೆಯನ್ನೂ ವಿಶ್ವಸಂಸ್ಥೆ ನೀಡಬೇಕಾಗಿ ಬಂತು.

ವಿಶ್ವಸಂಸ್ಥೆಯ ಯುನೊಸ್ಕೋ ಸಂಸ್ಥೆಯ ಪ್ರತಿನಿಧಿಗಳು ಎರಡು ಬಾರಿ ಹಂಪಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ಮಾಡಿದ ಕಾರಣವಾಗಿ ಅನೇಕ ಬದಲಾವಣೆಗಳು ಸೂಕ್ತ ಮಾರ್ಪಾಡುಗಳು, ಹಂಪಿ ಅಭಿವೃದ್ದಿ ಪ್ರಾಧಿಕಾರ, ಆಡಳಿತ ನಿರ್ವಹಣಾ ಜಾಗೃತಿ ಮುಂತಾದ ಚಟುವಟಿಕೆಗಳು ಇಂದು ನಡೆಯುತ್ತಿವೆ.

ಕರ್ನಾಟಕ ರಾಜ್ಯ ಸರ್ಕಾರ ೨೦೦೩ ಏಪ್ರಿಲ್ ೯ ರಂದು “ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ”ವನ್ನು ಜಾರಿಗೆ ತಂದಿದೆ. ಇದಕ್ಕೆ ರಾಜ್ಯಪಾಲರ ಒಪ್ಪಿಗೆಯು ದೊರಕಿದೆ. ಈ ಪ್ರಾಧಿಕಾರದ ಮೂಲಕ ಹಂಪಿಯ ಎಲ್ಲಾ ಪುರಾತತ್ವ ಅವಶೇಷಗಳ ಮತ್ತು ನೈಸರ್ಗಿಕ ಪರಿಸರಗಳೊಂದಿಗೆ ಅದರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ, ಕರ್ನಾಟಕ ರಾಜ್ಯದಲ್ಲಿ ಅದರ ಸಾಂಸ್ಕೃತಿಕ ಸಮಗ್ರತೆಯನ್ನು ರಕ್ಷಿಸುವುದಕ್ಕಾಗಿ ಮತ್ತು ಹಂಪಿ ವಿಶ್ವಪರಂಪರೆ ಪ್ರದೇಶದ ಸಮರ್ಥ ಅಭಿವೃದ್ದಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಧಿನಿಯಮಗಳನ್ನು ರಚಿಸಲಾಗಿದೆ.

ಈ ಎಲ್ಲ ವ್ಯವಸ್ಥೆಗಳ ಮಧ್ಯ ಪತ್ರಿಕೆಗಳಲ್ಲಿ ಅಭಿವೃದ್ದಿ ವರದಿಗಳು ಪ್ರಕಟವಾಗಿವೆ. ಕಾಲಕಾಲಕ್ಕೆ ಅವು ಸೂಚನೆಗಳನ್ನು, ಜನಾಭಿಪ್ರಾಯಗಳನ್ನು, ಆತಂಕಗಳನ್ನು ಹಾಗೂ ವಸ್ತುಸ್ಥಿತಿಯನ್ನು ಪ್ರಕಟಮಾಡಿ, ಸಮಸ್ಯೆಗಳ  ಮೇಲೆ ಬೆಳಕು ಚೆಲ್ಲಿದ, ಪರಿಹಾರ ಸೂಚಿಸಿದ ವಿವರಗಳನ್ನು ಒಂದೊಂದಾಗಿ ಈ ಮುಂದೆ ಕೊಡಲಾಗುವುದು. ಹಂಪಿ ಪರಿಸರದ ಅಭಿವೃದ್ದಿಗೆ ಪ್ರಕಟವಾದ ಕೆಲವು ಆಯ್ದ ಲೇಖನಗಳನ್ನು ಸಾರಾಂಶವನ್ನು ವಿವಿಧ ಅಭಿಪ್ರಾಯಗಳನ್ನು ಇಲ್ಲಿ ಗಮನಿಸಬಹುದು.

ಹಂಪಿ ಸ್ಮಾರಕಗಳ ನಾಶವನ್ನು ತಪ್ಪಿಸಿ, ಸುರಕ್ಷಿತವಾಗಿ ರಕ್ಷಿಸಿ, ನಿರ್ವಹಿಸಿ ಮುಂದಿನ ಪೀಳಿಗೆಯವರಿಗೆ ಲಭ್ಯವಾಗುವಂತೆ ಮಾಡಲು ವಿಶ್ವಪರಂಪರೆ ಒಡಂಬಡಿಕೆ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಂಡಿದೆ.

ಹಂಪಿಯಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಹಾಗೂ ಅನೇಕ ಸಂದರ್ಭಗಳಲ್ಲಿ ಉಂಟಾಗುವ ಗೊಂದಲಗಳನ್ನು ವೀಕ್ಷಕರ ಹಾಗೂ ಜನಸಮುದಾಯಗಳ ಹಿತದೃಷ್ಟಿಯಿಂದ ನಿವಾರಿಸಲು, ನಿರ್ವಹಿಸಲು ಹಾಗೂ ಮಹತ್ವದ ಸ್ಮಾರಕಗಳನ್ನು ರಕ್ಷಿಸಲು ಅಗತ್ಯ ಕ್ರಮ ಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಆದ್ದರಿಂದ ಈ ಗತವೈಭವವನ್ನು ಸುರಕ್ಷಿತವಾಗಿ ಕಾಪಾಡುವುದರ ಜೊತೆಗೆ ನಾಡಿನ ಜನ ನೋಡಿ ಆನಂದಿಸುವ ಅವಕಾಶಕೊಟ್ಟಂತಾಗುತ್ತದೆ.

ಸಾಂಸ್ಕೃತಿಕ ಸಂಪನ್ಮೂಲ ಅಥವಾ ಪರಂಪರೆ ನಿರ್ವಹಣಾ ಯೋಜನೆಯೆಂಬುದು ಸ್ಥಳೀಯ, ಜಿಲ್ಲಾ, ರಾಜ್ಯ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಈಗಾಗಲೆ ಅಸ್ತಿತ್ವದಲ್ಲಿ ಇರುವ ವ್ಯವಸ್ಥೆಯ ಮುಖ್ಯ ಹಾಗೂ ಅವಿಭಾಜ್ಯ ಚಟುವಟಿಕೆಯಾಗಿದೆ. ಸಾಂಸ್ಕೃತಿಕ ಪರಂಪರೆ ಯೆಂಬುದು ಸಾಮಾಜಿಕ ಮತ್ತು ಆರ್ಥಿಕ ಚೌಕಟ್ಟಿಗೆ ಅತೀತವಾಗಿರಲು ಸಾಧ್ಯವಿಲ್ಲದ ಕಾರಣ, ಸದರಿ ನಿರ್ವಹಣಾ ಯೋಜನೆಯ ಅಭಿವೃದ್ದಿ ಮತ್ತು ಸಂಬಂಧಿಸಿದ ವಲಯಗಳ ಅಭಿವೃದ್ದಿ ಪರಸ್ಪರ ಒಂದಕ್ಕೊಂದು ಪೂರಕವಾಗಿರುವಂತೆ ಮಾಡಬೇಕಾಗುತ್ತದೆ.