ವಿಜಯನಗರ ಕಾಲದಲ್ಲಿ ಹೊರ ರಾಜ್ಯಗಳನ್ನು ಗೆದ್ದು ಬಂದ ರಾಯರ ಸ್ವಾಗತಕ್ಕೆ ದಾರಿಯುದ್ಧಕ್ಕೂ ತೋರಣ ಕಟ್ಟಿ ಸ್ವಾಗತಿಸುತ್ತಿದ್ದರು. ಈಗ ಇರುವ ತೋರಣಗಲ್ಲು ಎಂಬ ಗ್ರಾಮದಿಂದ ತೋರಣ ಕಟ್ಟುವ ಕಲ್ಲು ಕಂಬಗಳನ್ನು ನಿರ್ಮಿಸಲಾಗಿತ್ತು. ಈಗಲೂ ಆ ಕಂಬಗಳನ್ನು ಇಲ್ಲಿ ನೋಡಬಹುದಾಗಿದೆ. ತೋರಣ ಕಟ್ಟುವ ಕಲ್ಲು ಕಂಬಗಳಿರುವುದರಿಂದ ಆ ಗ್ರಾಮಕ್ಕೆ “ತೋರಣಗಲ್ಲು” ಎಂಬ ಹೆಸರು ಬಂದಿರಬೇಕು.

ಈ ತೋರಣಗಲ್ಲು ಗ್ರಾಮದಲ್ಲಿ ೧೯೯೩ರಲ್ಲಿ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಯನ್ನು ರೂ. ೮ ಸಾವಿರ ಕೋಟಿ ಬಂಡವಾಳ ಹೂಡಿ ಸ್ಥಾಪಿಸಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ೧೯೭೧ರಲ್ಲಿ ಈ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸರ್ಕಾರದ ಸ್ವಾಮ್ಯದಲ್ಲಿ ಸ್ಥಾಪಿಸಬೇಕಾಗಿದ್ದ ಉಕ್ಕಿನ ಕಾರ್ಖಾನೆ ಎರಡು ದಶಕಗಳಷ್ಟು ತಡವಾಗಿ ಖಾಸಗಿಯವರು ಜಂಟಿ ಸಹಭಾಗಿತ್ವದಲ್ಲಿ ಕಾರ್ಖಾನೆ ಆರಂಭಿಸಲು ಸರ್ಕಾರ ಅನುಮತಿ ನೀಡಿತು.

ಕರ್ನಾಟಕ ರಾಜ್ಯದಲ್ಲೆ ಅತ್ಯಧಿಕ ಮೊತ್ತದ ಖಾಸಗಿ ಬಂಡವಾಳದ ಓ.ಪಿ. ಜಿಂದಾಲ್ ಅವರ ಒಡೆತನದಲ್ಲಿ ಸಾರ್ವಜನಿಕರ ಷೇರು ಬಂಡವಾಳದೊಂದಿಗೆ ಸ್ಥಾಪಿಸಲಾಯಿತು. ಆರಂಭದಲ್ಲಿ ೧,೮೦೦ ಎಕರೆ ಜಮೀನಿನಲ್ಲಿ ಸ್ಥಾಪನೆಯಾದ ಕಾರ್ಖಾನೆ, ಕ್ರಮೇಣ ಅದು ೩,೬೦೦ ಎಕರೆಗೆ ವಿಸ್ತರಣೆಯಾಗಿದೆ. ಸ್ಥಾಪನೆಗೂ ಮುನ್ನ ಮೂಲ ಸೌಲಭ್ಯಗಳು ಇರಲಿಲ್ಲ.

ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಎಂಬ ಹೆಸರಿನಲ್ಲಿ ಆರಂಭವಾದ ಈ ಕಾರ್ಖಾನೆ ಜಿಂದಾಲ್ ಸಮೂಹದ ಮುಂಬೈ ಉಕ್ಕಿನ ಕಾರ್ಖಾನೆಯನ್ನು ೨೦೦೪-೦೫ರಲ್ಲಿ ವಿಲೀನಗೊಂಡನಂತರ ಜಿಂದಾಲ್ ಸೌತ್ ವೆಸ್ಟ್ ಸ್ಟೀಲ್ ಲಿಮಿಟೆಡ್ ಎಂದು ಹೆಸರು ಬದಲಿಸಿಕೊಂಡಿದೆ. ಕಾರ್ಖಾನೆಗೆ ಅಗತ್ಯವಾದ ವಿದ್ಯುತ್ ತಾನೆ ಉತ್ಪಾದಿಸಿಕೊಳ್ಳುತ್ತಿದೆ. ಭಾರತದಲ್ಲಿ ಈ ಕಾರ್ಖಾನೆ ೨.೫ ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ವರ್ಷ ೪ ದಶಲಕ್ಷ ಟನ್ ಉಕ್ಕು ಉತ್ಪಾದಿಸಲಿದೆ.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳಿಂದ ೨೦೧೦ರ ವೇಳೆಗೆ ೧೦ ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಮೂಲಕ ಭಾರತ ದೇಶದ ನಂ. ೧ ಸ್ಥಾನ ಪಡೆಯಲು ಯೋಜನೆ ಹಾಕಿಕೊಂಡಿದೆ. ಕಾರ್ಖಾನೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾರ್ಖಾನೆಯ ಸುತ್ತಲೂ ೮.೨. ಲಕ್ಷ ಮರಗಿಡಗಳನ್ನು ಬೆಳೆಸಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಸಿಂಹಪಾಲನ್ನು ನೀಡುವುದಲ್ಲದೆ, ಸುತ್ತಮುತ್ತಲ ಗ್ರಾಮಗಳಲ್ಲಿ ಶಾಲೆ, ಕಂಪ್ಯೂಟರ್ ತರಬೇತಿ, ಆಸ್ಪತ್ರೆ, ರಸ್ತೆ ನಿರ್ಮಾಣ ಇತ್ಯಾದಿ ಸೌಕರ್ಯಗಳಿಗೆ ಕಾರ್ಖಾನೆಯ ಆಡಳಿತ ಮಂಡಳಿ ನೆರವು ನೀಡಿದೆ. ಕಾರ್ಖಾನೆಯ ಆವರಣದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾದರಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ ಸಾರ್ವಜನಿಕರ  ವೀಕ್ಷಣೆಗೆ ಮುಕ್ತಗೊಳಿಸಿದೆ. ಹಂಪಿ ಪರಿಸರದಲ್ಲಿ ಇದೊಂದು ಆಧುನಿಕ ದೇಗುಲ ಎಂದು ಕರೆಯಲಾಗುತ್ತಿದೆ.