ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯವರು ಹಂಪಿಯ ಸ್ಮಾರಕಗಳ ಮೇಲೆ ಗಣಿಗಾರಿಕೆಯು ಪರಿಣಾಮ ಬೀರುವುದನ್ನು ಅರಿಯಲು ಒಂದು ಅಧ್ಯಯನದ ಮೂಲಕ ಅಭ್ಯಾಸ ನಡೆಸಲು ಕ್ರಮಕೈಗೊಂಡಿದೆ. ಡೆಕ್ಕನ್ ಹೆರಾಲ್ಡ್ (೨೧.೧೧.೦೫) ಆಂಗ್ಲ ಪತ್ರಿಕೆಯಲ್ಲಿ ವರದಿಯಾಗಿರುವುದರ ಮೂಲಕ ತಿಳಿಯುವುದೇನೆಂದರೆ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಾಚ್ಯವಸ್ತು ಶೋಧಕರಿಂದ ಹಂಪಿಯ ಚಾರಿತ್ರಿಕ ಅವಶೇಷಗಳು ಪ್ರಕೃತಿ ವಿಕೋಪದಿಂದ, ಗಣಿಗಾರಿಕೆಯಿಂದ ಹಾಗೂ ಇತರ ಕಾರಣಗಳಿಂದ ಹಾಳಾಗುತ್ತಿ ರುವುದನ್ನು ಕಂಡು ಹಿಡಿಯಲು ಒಂದು ಅಧ್ಯಯನ ರೂಪಿಸಲಾಗಿದೆ. ಗಂಡಾಂತರಕ್ಕೆ ಸಿದ್ಧವಾಗಲು ಉಪಾಯ ಜಾರಿಗೊಳಿಸಲಾಗುತ್ತಿದೆ. ವಿವರವಾದ ವರದಿಯನ್ನು ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಸರ್ವೇಕ್ಷಣಾ ಇಲಾಖೆಯ ಹಿರಿಯ ಪ್ರಾಚೀನ ಶೋಧಕ ಡಾ. ಜೆ. ರಂಗನಾಥ ಅವರು  ಹಂಪಿಯ ಸ್ಮಾರಕಗಳು “ಅಪಾಯದ ಅಂಚಿನಲ್ಲಿವೆ( ಎಂದು ಯುನೊಸ್ಕೋ ಸಂಸ್ಥೆ ಸಾರಿದೆ. ಅಪಾಯದ ಪಟ್ಟಿಯಿಂದ ಹೊರಬರಲು ಶೀಘ್ರವಾಗಿ ಕ್ರಮಕೈಗೊಂಡು ಗಂಡಾಂತರ ತೊಡೆದು ಹಾಕಲು ಅಭ್ಯಾಸ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಹಂಪಿಯು ಪುರಾತನ ಕಾಲದ ಕಲೆಯ ಸಂಪತ್ತಿನ ಆಗರವಾಗಿದೆ. ಇದು ೩೩ ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ೫೬ ಸ್ಮಾರಕಗಳನ್ನು ಹಾಗೂ ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಇಲಾಖೆ ೮೦೦ಕ್ಕೂ ಹೆಚ್ಚಿನ ಸ್ಮಾರಕಗಳ ರಕ್ಷಣೆಯ ಹೊಣೆ ಹೊತ್ತಿವೆ. ಈ ಎಲ್ಲಾ ಸ್ಮಾರಕಗಳು ಗಣಿಗಾರಿಕೆಯಿಂದ ಅಪಾಯಕ್ಕೊಳಗಾಗುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಲಾಥೂರ್ ಭೂಕಂಪದ  ಸಂದರ್ಭದಲ್ಲಿ ಹಂಪಿಯ ಪ್ರಸಿದ್ಧ ಕಲ್ಲಿನ ರಥದಲ್ಲಿ ಬಿರುಕು ಕಂಡು ಬಂದಿವೆ ಎಂದು ಜನ ದೂರಿದ್ದರು. ಆದರೆ ಪರೀಕ್ಷಿಸಿ ನೋಡಿದಾಗ ಅದು ಸುಳ್ಳಾಗಿತ್ತು ಎಂದು ಡಾ. ರಂಗನಾಥ ತಿಳಿಸುತ್ತಾರೆ. ಬಹಳಷ್ಟು ಹಂಪಿಯ ಸ್ಮಾರಕಗಳು ಬಲಹೀನ ಗೊಂಡಿರುವುದು ಶತಮಾನಗಳಿಂದ ಪಂಚಭೂತಗಳಿಗೆ ತೆರೆದಿಟ್ಟಿರುವ ಕಾರಣದಿಂದ, ವಿಜಯವಿಠಲ ಮಂದಿರದಲ್ಲಿ ನೂರಾರು ಬಿರುಕುಗಳು ಕಂಡು ಬಂದಿವೆ. ಇದು ಶತ್ರುಗಳ ದಾಳಿಯಿಂದ ಬೆಂಕಿಯಿಂದಲೂ ಆಗಿರಲೂ ಸಾಧ್ಯವಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಅಲ್ಲಲ್ಲಿ ಸ್ಮಾರಕಗಳಿಗೆ ಆಧಾರ ಗೋಡೆ, ತೊಲೆ ನಿರ್ಮಿಸಿ ರಕ್ಷಣೆ ನೀಡಿದೆ. ಆದರೂ ಒಂದೇ ಒಂದು ಸಣ್ಣ ಆಕಸ್ಮಿಕ ಘಟನೆ ನಡೆದರೆ ಸ್ಮಾರಕಗಳಿಗೆ ಅಪಾರ ಹಾನಿ ಆಗುವ, ಸಂಭವವಿದೆ.

ಇದಲ್ಲದೇ ನೂರಾರು ಸಣ್ಣ ಗುಡಿಗಳು, ಮಂಟಪಗಳು, ಕೋಟೆ-ಕೊತ್ತಲಗಳು, ಅಪಾಯದ ಅಂಚಿನಲ್ಲಿವೆ. ಗಿಡ ಗಂಟೆಗಳ ಚೆಲ್ಲಾಟ, ಸ್ಮಾರಕಗಳ ಬಿರುಕು, ರಂಧ್ರಗಳಲ್ಲಿ ಬೆಳೆದು, ಶತಮಾನಗಳಿಂದ ರಕ್ಷಣೆಯಿಲ್ಲದೆ ಅಪಾಯಕ್ಕೊಳಗಾಗಿವೆ. ಇವುಗಳ ಜೊತೆಗೆ ಗಣಿಗಾರಿಕೆ ಯಿಂದಲೂ ಗಣನೀಯ ಪ್ರಮಾಣವಾಗಿ ಹಾನಿಯಾಗುತ್ತಿದೆ. ಬೃಹತ್ ಪ್ರಮಾಣವಾಗಿ ಹೊಸಪೇಟೆ, ಸಂಡೂರುಗಳಲ್ಲಿ ನಡೆಯುವ ಗಣಿಗಾರಿಕೆಗಳಿಂದಾಗಿ ಶಕ್ತಿಯುತವಾದ ಸ್ಫೋಟನ ಸಿಡಿಸಲಾಗುತ್ತಿದೆ. ಈ ಸ್ಫೋಟದ ಕಂಪನಕ್ಕೆ ಹತ್ತಿರದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಲ್ಲಿನ ಕಟ್ಟಡಗಳೂ ಸಹಿತ ಅದರುತ್ತಿವೆ. ಕುಲಪತಿ ಡಾ. ಬಿ.ಎ. ವಿವೇಕ ರೈ ಅವರ ಪ್ರಕಾರ ಗಣಿಗಾರಿಕೆಯ ಸಿಡಿತಕ್ಕೆ ವಿಶ್ವವಿದ್ಯಾಲಯದ ಕಟ್ಟಡಗಳೂ ನಡಗುತ್ತಿವೆ. ವೈಜ್ಞಾನಿಕವಾಗಿ ಈ ಸ್ಫೋಟಕಗಳನ್ನು ಬಳಸಲು ಯೋಜಿಸಬೇಕಾಗಿರುವುದು ಅವಶ್ಯವಾಗಿದೆ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು.