ದೇಶ-ವಿದೇಶಗಳ ಮಟ್ಟದಲ್ಲಿ ಪ್ರಸಿದ್ಧವಾಗಿರುವ ‘ಹಂಪಿ’ಯ ಹೆಸರು ವಿಜಯ ನಗರ ಸಾಮ್ರಾಜ್ಯದ ಜೊತೆಗೆ ತಳಕು ಹಾಕಿಕೊಂಡಿರುವುದರಿಂದ ಬಹುಪಾಲು ಜನಕ್ಕೆ ಹಂಪೆಯ ಇತಿಹಾಸವು ವಿಜಯನಗರ ಸಾಮ್ರಾಜ್ಯದ ಇತಿಹಾಸದೊಂದಿಗೆ (ಕ್ರಿ.ಶ. ೧೩೩೬) ಆರಂಭವಾಗುತ್ತಾದರೂ ಹಂಪಿಯ ಉಲ್ಲೇಖ ಕ್ರಿ.ಶ. ೭-೮ ಶತಮಾನಗಳಷ್ಟು ಹಿಂದಿನ ಶಾಸನಗಳಲ್ಲಿ ದೊರಕುತ್ತದೆ ಎಂದು ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ ‘ಹೊಸತು ಹೊಸತು’ ಎಂಬ ಸಂಪ್ರಬಂಧ ಸಂಪುಟದಲ್ಲಿ ವಿವರಿಸಿದ್ದಾರೆ.

ಹಂಪಿಯ ನಾಲ್ಕು ಗಡಿಗಳನ್ನು ಹರಿಹರನ “ಪಂಪಾಕ್ಷೇತ್ರದ ರಗಳೆ”ಯಿಂದ ಆಯ್ದು ನೀಡಿರುವುದು ಹಂಪಿ ಕ್ಷೇತ್ರದ ವಿಸ್ತಾರ ತಿಳಿಸುತ್ತದೆ. ಹೊಸಪೇಟೆ ತಾಲ್ಲೂಕಿನ ಕಮಲಾಪುರ ದಿಂದ ಕಂಪ್ಲಿಗೆ ಹೋಗುವ ಮಾರ್ಗದಲ್ಲಿ ಬರುವ ಬುಕ್ಕಸಾಗರದ ಬಳಿ ಪೂರ್ವದಲ್ಲಿ ‘ಕಿನ್ನರೇಶ್ವರ’, ಹೊಸಪೇಟೆ ನಗರದ ಕಬ್ಬಿಣ ಅದುರಿನ ಗುಡ್ಡಗಳಲ್ಲಿ ದಕ್ಷಿಣಕ್ಕೆ ‘ಜಂಬುಕೇಶ್ವರ’, ಕೊಪ್ಪಳ ತಾಲ್ಲೂಕಿನ ಶಿವುಪುರದ ಬೆಟ್ಟದ ಮೇಲೆ ಪಶ್ಚಿಮಕ್ಕೆ ‘ಸೋಮನಾಥ’ ಹಾಗೂ ಗಂಗಾವತಿ ತಾಲ್ಲೂಕಿನ ಮಲ್ಲಾಪುರದ ಬಳಿ ಬೆಟ್ಟದ ಮೇಲೆ ಉತ್ತರಕ್ಕೆ ‘ಮಾಣಿ ಭದ್ರೇಶ್ವರ’ ದೇವಸ್ಥಾನಗಳು ಶ್ರೀ ವಿರೂಪಾಕ್ಷ ಸ್ವಾಮಿ ಕ್ಷೇತ್ರದ ಗಡಿಗಳಾಗಿವೆ.

ಬಳ್ಳಾರಿ ಜಿಲ್ಲೆಯ ಜನ ತುಂಗಭದ್ರಾ ನದಿಯನ್ನು ‘ಹಂಪಿ ಹೊಳಿ’ ಎಂದು ಕರೆಯುವುದ ರಿಂದ ಪಂಪಾಕ್ಷೇತ್ರಕ್ಕೆ ‘ಹಂಪಿ’ ಎಂದೂ ಹೆಸರು ಬಂದಿರಬೇಕು. ಪಂಪೆ (ಹಂಪಿ) ಮೂಲತಃ ನದಿಯ ಹೆಸರಾಗಿರುವುದನ್ನು ನಾವು ಗಮನಿಸಬೇಕು.

‘ಹಂಪಿ’ಯನ್ನು ಪಂಪಾಕ್ಷೇತ್ರ, ಕಿಷ್ಕಿಂದಾ ಕ್ಷೇತ್ರ ಹಾಗೂ ಭಾಸ್ಕರ ಕ್ಷೇತ್ರ ಎಂದು ಕರೆಯಲಾಗುತ್ತಿದೆ. ತುಂಗಭದ್ರಾ ನದಿ ದಂಡೆಯ ಮೇಲೆ ಪ್ರಸಿದ್ದ ಹಿಂದೂ ತೀರ್ಥಕ್ಷೇತ್ರವಾಗಿ ಪ್ರಚಲಿತವಾಗಿದೆ.

ಇಂಗ್ಲೆಂಡಿನ ಜಾನ್ ಎಂ. ಫ್ರಿಜ್ಜ್ ಹಾಗೂ ಜಾರ್ಚ್‌ಮಿಷಲ್ ಅವರು ಬರೆದ ‘ಹಂಪಿ’ ಗ್ರಂಥದ ಪ್ರಕಾರ ಕನಿಷ್ಟ ೩೦೦೦ ವರ್ಷಗಳ ಹಿಂದೆ ಪಂಪಾಕ್ಷೇತ್ರದಲ್ಲಿ ರಾಮಾಯಣ ಕಾಲದ ಕಪಿಗಳ ಕಿಷ್ಕಿಂದಾ ರಾಜ್ಯ ಜಾರಿಯಲ್ಲಿತ್ತು. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯವರು ನಡೆಸಿದ ಉತ್ಖನನದಿಂದ ಹಂಪಿಯಲ್ಲಿ ೨ ಮತ್ತು ೩ನೇ ಶತಮಾನಕ್ಕೆ ಸೇರಿದ ಬೌದ್ಧರ ಶಿಲ್ಪ ಕೃತಿಗಳು ದೊರಕಿರುವುದು ಹಂಪಿಯ ಹಿಂದಿನ ಇತಿಹಾಸದ ಮೇಲೆ ಬೆಳಕು ಬೀರುತ್ತದೆ. ಹಂಪಿಯು ಸಾವು, ನೋವು ಮತ್ತು ಶೂನ್ಯದಿಂದ ಉಳಿದುಕೊಂಡು ಬಂದು ಇಂದಿಗೂ ಎಲ್ಲ ವರ್ಗದ ಜನರ ಚಿತ್ತಾಕರ್ಷಕ ತಾಣವಾಗಿ ಪ್ರಸಿದ್ಧವಾಗಿರುವುದರಲ್ಲಿ ಸಂದೇಹವಿಲ್ಲ. ಈ ಎಲ್ಲ ಸಂಗತಿಗಳನ್ನು ಮೂಕಭಾವದಿಂದ ಹಂಪಿಯ ಬಂಡೆಗಳು ಮೌನವಾಗಿ ಪಿಸುಗುಡುತ್ತಿರುವುದು ಭಾಸವಾಗುತ್ತದೆ.

ಪುರಾಣಗಳಲ್ಲಿ ದೊಡ್ಡದಾದ ಸ್ಕಂದ ಪುರಾಣದಲ್ಲಿ ‘ಪಂಪಾ ಮಹಾತ್ಮೆ’ಯಲ್ಲಿ ಹಂಪಿ ಪರಿಸರವನ್ನು ಕುರಿತು ಪ್ರಸ್ತಾಪಿಸಲಾಗಿದೆ. ಬ್ರಹ್ಮನ ಮಗಳಾದ ಪಂಪಾದೇವಿಯು ಶಿವನನ್ನು ಮದುವೆಯಾಗಲು ಹೇಮಕೂಟದ ಉತ್ತರಕ್ಕಿರುವ ಅರ್ಧಕ್ರೋಶ ದೂರದಲ್ಲಿ ವಿಪ್ರಕೂಟ ಎಂಬ ಪರ್ವತದ ಬಳಿಯ ಸರೋವರದ (ಪಂಪಾ ಸರೋವರ) ದಡದಲ್ಲಿ ಉಗ್ರ ತಪಸ್ಸನ್ನಾಚರಿ ಸುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ. ಅವಳ ಇಚ್ಛೆಯ ಮೇರೆಗೆ ಹೇಮಕೂಟದಲ್ಲಿ ವಿವಾಹವಾಗಿ ವಿರೂಪಾಕ್ಷನಾಗಿದ್ದವನು ‘ಪಂಪಾಪತಿ’ ಎನಿಸಿಕೊಳ್ಳುತ್ತಾನೆ. ಈ ಕ್ಷೇತ್ರ ಪಂಪಾಕ್ಷೇತ್ರವಾಗಿ ಜನಮನದಲ್ಲಿ ಪ್ರಸಿದ್ಧವಾಗಿ ನಿಲ್ಲುತ್ತದೆ.

ಪಂಪಾದೇವಿ, ಪಂಪಾಪತಿ, ಪಂಪಾಕ್ಷೇತ್ರ, ಪಂಪಾ ಸರೋವರ ಹಾಗೂ ಪಂಪಾಪುರ ಇವು ‘ಪಂಪಾಪಂಚಕ’ ಎಂದು ಖ್ಯಾತಿಯಾಗಿರುವುದನ್ನು ಹಡಗಲಿ ತಾಲ್ಲೂಕಿನ ಹೊಳಗುಂದಿಯ ವೃಷಭಾಶ್ರಮದ ಸಿದ್ಧಲಿಂಗಸ್ವಾಮಿಯವರ ‘ಶೀ ಪಂಪಾಮಹಾತ್ಮ್ಯೆ’ಯಲ್ಲಿ ವಿವರಿಸಲಾಗಿದೆ.

೧೯೮೦ರ ಭಾರತದ ಇಂಪಿರಿಯಲ್ ಗೆಜೆಟಿಯರ್ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಶಿಲಾಯುಗದ ನೆಲೆಗಳನ್ನು ಗುರುತಿಸಲಾಗಿದೆ. ಹೊಸಪೇಟೆ ತಾಲ್ಲೂಕಿನ ಗಾದಿಗನೂರು, ಕುರೆಕುಪ್ಪೆ ಬೆಟ್ಟಗಳಲ್ಲಿ ಹಳೆ ಶಿಲಾಯುಗದ ಶಿಲಾಯುಧಗಳು ಪತ್ತೆಯಾಗಿವೆ. ಹಂಪಿಯ ವಿಠಲದೇವಾಲಯದ ಪೂರ್ವಕ್ಕಿರುವ ಮೊಸಳಯ್ಯನ ಗುಡ್ಡದಲ್ಲಿ ನವಶಿಲಾಯುಗದ ಅವಶೇಷಗಳ ಪತ್ತೆ ಹಚ್ಚಲಾಗಿದೆ. ಹಂಪಿಯ ಪರಿಸರವು ನವಶಿಲಾಯುಗದ ಕಾಲದಲ್ಲಿ ಜನ ನಿಬಿಡ ಪ್ರದೇಶವಾಗಿದ್ದು, ಮಾನವ ಚಟುವಟಿಕೆಗಳ ಕೇಂದ್ರವಾಗಿ ವಿಕಾಸ ಹೊಂದುತ್ತಾ ಬಂದಿರುವುದು ವ್ಯಕ್ತವಾಗುತ್ತದೆ. ಹಂಪಿಯ ಪರಿಸರದಲ್ಲಿ ಬಂಡೆಗಳ ಮೇಲೆ ಅನೇಕ ಕಡೆ ಕೆಂಪು ಬಣ್ಣದಲ್ಲಿ ಚಿತ್ರಿಸಲಾದ ನವಶಿಲಾಯುಗಕ್ಕೆ ಸೇರಿದ ಚಿತ್ರಗಳೂ ಕಂಡು ಬರುತ್ತವೆ.

ಇಂಥಹ ಸುವಿಖ್ಯಾತ ಪ್ರದೇಶದ ಪರಿಸರದಲ್ಲಿ ವಿಜಯನಗರ ಹಿಂದೂ ಸಾಮ್ರಾಜ್ಯ ಕ್ರಿ.ಶ. ೧೩೩೬ರಲ್ಲಿ ಉದಯಿಸಿತು. ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಪಸರಿಸಿದ್ಧ ಈ ಸಾಮ್ರಾಜ್ಯವನ್ನು ಹಿಂದೂ ರಾಜರಾದ ಹರಿಹರ ಮತ್ತು ಬುಕ್ಕರಾಯ (ಹಕ್ಕ-ಬುಕ್ಕ) ಸ್ಥಾಪಿಸಿದರು. ಭಾರತದ ರಾಜರ ಕಾಲದ ಕೊನೆಯ ದೊಡ್ಡ ಸಾಮ್ರಾಜ್ಯ ಇದಾಗಿತ್ತು. ಈ ಸಾಮ್ರಾಜ್ಯ ತನ್ನ ಕಾಲಕ್ಕಿಂತಲೂ ಮುಂದಾಗಿ ಬೆಳೆಯುತ್ತಿತ್ತು. ಇದಕ್ಕೆ ಅಂದಿನ ರಾಜರ ದೂರದೃಷ್ಟಿ ಕಾರಣವಾಗಿರಬಹುದು.

ಸೈನ್ಯ ಜೋಡಣೆ ಮಾಡುವಲ್ಲಿ, ಭಾರತದ ಸಂಸ್ಕೃತಿಯನ್ನು ಪುನರುಜ್ಜೀವನ ಗೊಳಿಸುವುದರಲ್ಲಿ ಮುಂದಾಗಿ, ಹಿಂದೂ ಕಲೆ, ಸಂಗೀತ, ಸಾಹಿತ್ಯದ ಪೋಷಕ ರಾಜ್ಯವಾಗಿ ಬೆಳೆಯುತ್ತಾ ಬಂದಿತ್ತು. ಚೈನಾ, ಪರ್ಷಿಯಾ, ಪೋರ್ಚುಗಲ್, ಇಟಲಿ ಮತ್ತು ರಷ್ಯಾ ದೇಶಗಳ ಜೊತೆಗೆ ವ್ಯಾಪಾರ ಸಂಬಂಧ ಬೆಳೆಸಿಕೊಂಡಿತ್ತು. ಆಮದಿಗಿಂತ ರಫ್ತು ಹೆಚ್ಚು ಮಾಡುತ್ತಿದುದ್ದರಿಂದ ಅಪಾರ ಲಾಭಗಳಿಸಲಾಗುತ್ತಿತ್ತು. ಈ ಕಾರಣದಿಂದಲೆ ಇರಬೇಕು ವಿಜಯನಗರ ಸಾಮ್ರಾಜ್ಯದಲ್ಲಿ ‘ಹೊನ್ನಿನ ಮಳೆ’ ಬೀಳುತ್ತಿತ್ತು ಎಂಬ ಮಾತು ಚಾಲನೆಗೆ ಬಂದಿದೆ.