‘ಅಭಿವೃದ್ದಿ’ ಎಂಬ ಪರಿಕಲ್ಪನೆ ಎರಡನೆ ಮಹಾಯುದ್ಧದ ನಂತರ ಹುಟ್ಟಿ ಕೊಂಡಿತು. ಮೂಲತಃ ಒಬ್ಬ ವ್ಯಕ್ತಿಯ, ಕುಟುಂಬದ, ಸಮುದಾಯದ, ರಾಜ್ಯದ, ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ದೇಶದ ಪ್ರಗತಿ ಎಂದು ಪರಿಗಣಿಸಲಾಗಿದೆ. ಈ ಅರ್ಥದಲ್ಲಿ ಸರ್ವತೋಮುಖ ಅಭಿವೃದ್ದಿ ಕುರಿತು ವಿಶ್ಲೇಷಣೆಯನ್ನು ಪತ್ರಿಕೆಗಳು ಆಗಾಗ ಓದುಗರ ಗಮನಕ್ಕೆ ತಂದದ್ದು ಉಂಟು.

ದೇಶದ ತಲಾ ಆದಾಯ ಹೆಚ್ಚುವುದರಿಂದ ಪ್ರಗತಿ ಸಾಧ್ಯವಾಗುತ್ತದೆ. ಆರ್ಥಿಕ ಪ್ರಗತಿಯ ಜೊತೆಗೆ ಸಾಮಾಜಿಕ ಬದಲಾವಣೆ ತರುವುದರಿಂದ ಬದುಕಿನ ಗತಿ ಉನ್ನತವಾಗಲು ಸಾಧ್ಯವಿದೆ. ಮನುಷ್ಯನ ಮೂಲಭೂತ ಹಕ್ಕು ಮತ್ತು ಸಂರಕ್ಷಣೆ ಮುಖ್ಯವಾಗುವುದೇ ‘ಅಭಿವೃದ್ದಿ’, ಧಾರಣಶಕ್ತಿ, ಸಾಮಾಜಿಕ ಬದಲಾವಣೆಯ ಪ್ರಜ್ಞೆ, ಗ್ರಾಮಾಂತರ ಪ್ರದೇಶದ ಜನರಲ್ಲಿ ಮೂಡುವುದರಿಂದ ಸಮಗ್ರ ಭಾರತದ ಪ್ರಗತಿಗೆ ಮಾರ್ಗ ಸುಲಭವಾಗುತ್ತದೆ. ಅವರ ಮಟ್ಟಕ್ಕೆ ಜ್ಞಾನ ಪ್ರಸಾರಣದ ಮಾರ್ಗ ಕಂಡು ಹಿಡಿಯಬೇಕು. ಇದು ಪತ್ರಿಕಾ ಪ್ರಸಾರದಿಂದ ಸಾಧ್ಯ. ಆದರೆ ಶಿಕ್ಷಣ ಮಟ್ಟ ಎತ್ತರಿಸಬೇಕಾಗುತ್ತದೆ.

ಬೇಸಾಯ, ಆರೋಗ್ಯ, ಆಹಾರ, ಶಿಕ್ಷಣ ಕುಡಿಯುವ ನೀರು, ಪರಿಸರ ನೈರ್ಮುಲ್ಯ, ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ಪಿಡುಗುಗಳ, ಪ್ರಚಲಿತ ವಿದ್ಯಾಮಾನಗಳ ವಿಚಾರವಾಗಿ ಪ್ರತಿ ಗ್ರಾಮಕ್ಕೂ ಮಾಹಿತಿ ಮುಟ್ಟಿಸುವ ಮಹತ್ತರ ಕಾರ್ಯ ಪತ್ರಿಕೆಗಳು ಮಾಡಬಲ್ಲವು.

ರಾಷ್ಟ್ರದ ಅಬಿವೃದ್ದಿಗೆ ಪೂರಕವಾಗಿ ಕೆಲಸ ಮಾಡುವ ಪತ್ರಿಕೆಗಳು ಎಷ್ಟಿವೆ? ಅದೇ ಸಂದರ್ಭದಲ್ಲಿ ಸ್ವಾರ್ಥ ಸಾಧನೆ, ಧನದಾಸೆಯಿಂದ ಕೆಲಸ ಮಾಡುವ ಪತ್ರಿಕೆಗಳು ಇವೆ ಎಂಬುದನ್ನು ನಾವು ಮರೆಯಬಾರದು. ಈ ಕಾರಣಕ್ಕಾಗಿ ರಾಷ್ಟ್ರೀಯ ಸಂವಹನ ನೀತಿ ರೂಪಿಸುವುದು ಅಗತ್ಯವಾಗಿದೆ.

ಶಿಸ್ತು, ಸಂಯಮ, ಸದಾಚಾರಗಳು ವೃತ್ತಿ ಧರ್ಮವನ್ನು ಎತ್ತರಿಸುತ್ತವೆ. ಪತ್ರಿಕೆಗಳ ಗುಣಮಟ್ಟ ಕಾಪಾಡಿಕೊಂಡು ಬರಲು ಇವುಗಳ ಅಗತ್ಯವಿದೆ. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ, ಒಳ್ಳೆಯ ಸಂಪ್ರದಾಯ ಹಾಕುವಲ್ಲಿ ಪತ್ರಿಕೆಗಳು ಶಿಷ್ಟಾಚಾರ ಸಂಹಿತೆಯನ್ನು ಪಾಲಿಸುವುದು ಮುಖ್ಯವಾಗುತ್ತದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು. ಈ ನಿಟ್ಟಿನಲ್ಲಿ ಮುಂದಾಗಿ “ಪತ್ರಿಕಾ ನೀತಿ” ಎಂಬ ಕಿರುಹೊತ್ತಿಗೆಯನ್ನು ಸಿ.ಟಿ. ಜೋಶಿಯವರ ಸಂಪಾದಕತ್ವದಲ್ಲಿ ಹೊರತಂದಿದೆ. ಅದರ ಪ್ರಕಾರ ನಿಖರವಾದ, ವಾಸ್ತವವಾದ ಹಾಗೂ ಅಧಿಕೃತವಾದ ಮಾಹಿತಿಯನ್ನು ಸಂಯಮ ಹಾಗೂ ಸಮತೋಲನದೊಂದಿಗೆ ಜನತೆಗೆ ಒದಗಿಸುವುದು ಪತ್ರಿಕಾವೃತ್ತಿಯ ಉದ್ದೇಶವಾಗಿರ ಬೇಕು ಎಂದು ಸೂಚಿಸುತ್ತದೆ. ಮಾರ್ಗಸೂಚಿಗಳನ್ನು ಪತ್ರಕರ್ತರು ಹಾಗೂ ಪತ್ರಿಕೆಗಳು ಅನುಸರಿಸಿದರೆ ಅಭಿವೃದ್ದಿ ಪತ್ರಿಕೆಯ ಮೂಲ ಉದ್ದೇಶಕ್ಕೆ ನೆರವು ನೀಡಿದಂತಾಗುತ್ತದೆ.

ಕೋಗಿಲೆ ಹಾಡಲೇ ಬೇಕು. ಕೋಳಿ ಕೂಗಲೇ ಬೇಕು, ಜಿಂಕೆ ಹಾರಲೇ ಬೇಕು, ನಾಯಿ ಬೊಗಳಲೇ ಬೇಕು, ಮಗು ಅಳಲೇ ಬೇಕು. ಇವು ಪ್ರಕೃತಿಯ ನಿಯಮ ಹೀಗಿರುವಾಗ ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ೧೯ (೧) (ಕ) ಅನುಚ್ಛೇದದಂತೆ ಸಮಸ್ತ ನಾಗರಿಕರಿಗೆ ವಾಕ್ ಸ್ವಾತಂತ್ರ್ಯಕ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಕ್ಕು ನೀಡಿರುವುದನ್ನು ಘೋಷಸಲಾಗಿದೆ. ಆದರೆ ಪತ್ರಿಕೆಗಳಿಗೆ ನೇರವಾಗಿ ಈ ಸ್ವಾತಂತ್ರ್ಯ ನೀಡಲಾಗಿಲ್ಲ. ನಾಗರಿಕರಿಗೆ ನೀಡಿದ ಸ್ವಾತಂತ್ರ್ಯವನ್ನೇ ಪತ್ರಿಕೆಗಳು ಬಳಸುತ್ತಾ ಬಂದಿವೆ. ಜನತೆಯ ಧ್ವನಿಯಾಗಿ ಕೆಲಸ ಮಾಡಲು ೧೯೫೨ರಲ್ಲಿ ಭಾರತೀಯ ಪತ್ರಿಕಾ ಆಯೋಗ ಅವಕಾಶ ನೀಡಿದ್ದನ್ನು ಇಲ್ಲಿ ಗಮನಿಸಬಹುದು. “ಮಾಧ್ಯಮಗಳಿಗೆ ಸ್ವಾತಂತ್ರ್ಯ ಇಲ್ಲದಿದ್ದರೆ ಪ್ರಜಾಪ್ರಭುತ್ವ ಸತ್ತಂತೆಯೇ” ಎಂದು ಡಿ.ಆರ್. ಮಂಕೇಕರ್ ೧೯೫೨ರಲ್ಲಿ ತಿಳಿಸಿದ್ದಾರೆ.

ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂಜಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಅವಶ್ಯ ಎಂದು ಪ್ರತಿಪಾದಿಸಿದ್ದಾರೆ.

“ಪತ್ರಿಕೆಗಳು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಸರ್ಕಾರ ಇಷ್ಟಪಡದಿದ್ದರೂ, ಅದನ್ನು ಅಪಾಯಕಾರಿ ಎಂದು ಪರಿಗಣಿಸುವುದರಲ್ಲಿ ನನಗೆ ಸಂಶಯವಿಲ್ಲ. ಪತ್ರಿಕಾ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ಇಂತಹ ಸ್ವಾತಂತ್ರ್ಯವನ್ನು ತಪ್ಪಾಗಿ ಬಳಶಿಕೊಂಡು ಘಟಿಸಬಹುದಾದ ಅಪಾಯಗಳಿದ್ದರೂ ಮುಕ್ತ ಪತ್ರಿಕೋದ್ಯಮವನ್ನು ನಾನು ಬಯಸುತ್ತೇನೆ; ಕುಗ್ಗಿಸಿದ ಅಥವಾ ನಿಯಂತ್ರಿತ ಪತ್ರಿಕೋದ್ಯಮವನ್ನಲ್ಲ.”

ಇತ್ತೀಚಿಗೆ ಭಾರತದ ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ‘ದಿ ಟ್ರಿಬ್ಯೂನ್’ ಪತ್ರಿಕೆಯ ೧೨೫ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ೨೦೦೫ರ ಸೆಪ್ಟೆಂಬರ್ ೨೪ ರಂದು ಚಂದೀಗಡದಲ್ಲಿ ಪತ್ರಿಕೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಹೇಳಿದ ಮಾತು.

“ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಬಲು ದೊಡ್ಡದು. ಹೀಗಾಗಿ ಅವು ಗಾಳಿ ಮಾತು ಇಲ್ಲವೇ ಬರೀ ಪೂರ್ವ ಗ್ರಹಗಳ ವೇದಿಕೆಗಳಾಗ ಬಾರದು. ದೇಶದ ಬೌದ್ದಿಕ ಪ್ರಗತಿಗೆ ಮಾಧ್ಯಮಗಳು ರಚನಾತ್ಮಕ ಮತ್ತು ಅರ್ಥಪೂರ್ಣ ಕೊಡುಗೆ ನೀಡಬೇಕು. ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಶಕ್ತಿ ಇರುವ ರಾಜಕಾರಣಿಗಳು ಮತ್ತು ಸುದ್ದಿ ಮಾಧ್ಯಮಗಳೆಲ್ಲಾ ಒಂದೆಡೆ ಸೇರಿ ರಾಷ್ಟ್ರದ ಅಭಿವೃದ್ದಿಯನ್ನು ನನಸಾಗಿಸಬೇಕು. ಅಲ್ಲದೆ ಅಭಿವೃದ್ದಿಯ ಪಥದಲ್ಲೆ ಮುಂದುವರೆಯುವಂತೆ ನೋಡಿಕೊಳ್ಳಬೇಕು. ಹಾಗೆಯೇ ಆಧುನೀಕರಣಗೊಂಡ ಮನಸ್ಸು ಆರ್ಥಿಕ ವ್ಯವಸ್ಥೆಯ ಆಧುನೀಕರಣದ ಜತೆ ಸಾಗಬೇಕು. ಈ ನಿಟ್ಟಿನಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಒಟ್ಟಿನಲ್ಲಿ ನಮ್ಮ ಮುಂದಿನ ತಲೆಮಾರುಗಳನ್ನು ಪ್ರೇರೇಪಿಸುವಂಥ ಕೆಲಸ ಸಾಕಷ್ಟಿದೆ” (ಪ್ರಜಾವಾಣಿ).

ಪತ್ರಿಕೆಗಳು ಓದುಗನಿಗೆ ಬೇಕಾದುದನ್ನು ಎಷ್ಟು? ಯಾವಾಗ ಹೇಗೆ? ಕೊಡಬೇಕು ಎಂಬುದನ್ನು ನಿರ್ಧರಿಸಿ, ಕೊಟ್ಟಾದ ಮೇಲೆ ಓದುಗನ ಅಭಿಪ್ರಾಯ, ಅನಿಸಿಕೆ ಬಿಂಬಿಸುವುದು ಅತಿ ಮುಖ್ಯವಾಗಬೇಕು. ಏಕಮುಖವಾಗಿ ವಿಚಾರ ಹೊರಗೆ ಹಾಕುವುದು ಅಭಿವೃದ್ದಿಯಲ್ಲಿ. ದ್ವಿಮುಖ ಸಂವಹನ ಅತ್ಯಂತ ಮಹತ್ವದಪಾತ್ರವಹಿಸುತ್ತದೆ ಎಂದು ಡಾ. ಟಿ.ಸಿ. ಪೂರ್ಣಿಮಾ ಅಭಿಪ್ರಾಯಪಟ್ಟಿದ್ದಾರೆ.

‘ಅಭ್ಯುದಯ ಪತ್ರಿಕೋದ್ಯಮ’ ಪುಸ್ತಕದಲ್ಲಿ ಈಶ್ವರ ದೈತೋಟ ಅವರು ಅಭಿವೃದ್ದಿ ಪತ್ರಿಕೋದ್ಯಮದ ಬಗ್ಗೆ ಹೀಗೆ ಹೇಳುತ್ತಾರೆ. “ಒಂದು ಸಮಸ್ಯೆಯನ್ನು ಎತ್ತಿಕೊಂಡು ಆ ಬಗ್ಗೆ ತಿಳಿ ಹೇಳಿ ಓದುಗರನ್ನು ಚಿಂತನೆಗೆ ಹಚ್ಚುವುದು, ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಸಮಸ್ಯೆ ನಿವಾರಣೆಗೆ ಸಾಧ್ಯತೆ ಇರುವ ಎಲ್ಲ ಮಾರ್ಗಗಳನ್ನು ವಿಶ್ಲೇಷಿಸಿ ಯೋಗ್ಯ ಪರಿಹಾರ ಕಂಡು ಹಿಡಿಯುವಲ್ಲಿ ಅಭಿವೃದ್ದಿ ಪತ್ರಿಕೋದ್ಯಮ ಕೆಲಸ ಮಾಡಬಲ್ಲದು”.

ತಾರತಮ್ಯ ರಹಿತ ಸಮಾನತೆ ಹಾಗೂ ಬದುಕಿನ ಮಾರ್ಗಕ್ಕೆ ನೋಟ ಒದಗಿಸಿ, ಪ್ರಗತಿಗೆ ವಿರೋಧ ತಂದೊಡ್ಡುವ ಅಡೆತಡೆಗಳನ್ನು ಭೇದಿಸುವ ಅಸ್ತ್ರವೇ ಅಭಿವೃದ್ದಿ ಪತ್ರಿಕೋದ್ಯಮ ಎನ್ನಬಹುದು.

ಕೈಗಾರೀಕರಣ, ನಗರಾಭಿವೃದ್ದೀಕರಣ ಜಾಗತೀಕರಣ, ಉದಾರೀಕರಣಗಳ ಮಧ್ಯ ದಲ್ಲಿಯೂ ನಮ್ಮ ದೇಶ ‘ಹಳ್ಳಿಗಳ ದೇಶ’ ಎಂಬುದರಲ್ಲಿ ಭೇದವಿಲ್ಲ. ಗ್ರಾಮೀಣ ಸಮಾಜದ ಆಸೆ, ಆಕಾಂಕ್ಷೆ, ಸಾಧನೆ, ಸಂಭ್ರಮಗಳನ್ನು ಓದುಗನಿಗೆ ಒದಗಿಸಬೇಕಾದುದು ಪತ್ರಿಕೆಗಳ ಧರ್ಮ. ಮುಖ್ಯವಾಗಿ ಪತ್ರಕರ್ತನಿಗೆ ತಾನು ಬದುಕುವ ಸಮಾಜ ಮತ್ತು ಪರಿಸರದ ಬಗೆಗೆ ವಿಶೇಷ ಕಳಕಳಿ, ಮಮತೆ, ಸೂಕ್ಷ್ಮಸಂವೇದನೆ ಇರಬೇಕು.

ಮಹಾತ್ಮ ಗಾಂಧೀಜಿಯವರ ಪ್ರಕಾರ “ಪತ್ರಿಕೆಗಳ ಮುಖ್ಯ ಗುರಿ ಸೇವೆಯಾಗಿರಬೇಕು; ಪತ್ರಕರ್ತನಿಗೆ ಸಮಾಜದ ಹಾಗೂ ದೇಶದ ಸೇವೆಗಾಗಿ ದುಡಿಯುವ ಹಂಬಲ ಇರಬೇಕು”.

ಸಮಾಜದ, ದೇಶದ ಅಭಿವೃದ್ದಿಯೇ ನಿಜವಾದ ಹಾಗೂ ಪ್ರತಿ ನಾಗರಿಕನಿಗೆ ತಲುಪುವ ಅಭಿವೃದ್ದಿಯಾಗಿದೆ. ಸರ್ವತೋಮುಖವಾದ ಅಭಿವೃದ್ದಿ ಸಾಧಿಸಲು ಪತ್ರಿಕೆಗಳ ಪಾತ್ರ ಬಹು ದೊಡ್ಡದು.