ಸಾಮಾಜಿಕ ಬದಲಾವಣೆಯ ಸಂಕ್ರಮಣ ಕಾಲದ ಮೇಲೆ ಹೆಚ್ಚು ಬೆಳಕು ಚೆಲ್ಲುವ, ಬೆಳೆಯುತ್ತಿರುವ ಸಮಾಜದಲ್ಲಿ ಅಲಕ್ಷಿತ ಹಾಗೂ ವಸಾಹತುಶಾಹಿಯ ಪದ್ಧತಿ ವಿಚಾರವಾಗಿ ವಿವರಣೆ ನೀಡುವ ಪತ್ರಿಕೋದ್ಯಮಕ್ಕೆ ಅಭಿವೃದ್ದಿ ಪತ್ರಿಕೋದ್ಯಮ ಎನ್ನಬಹುದು. ಅಭಿವೃದ್ದಿ ಪತ್ರಿಕೋದ್ಯಮ ಸಮೂಹ ಮಾಧ್ಯಮದ ವಿಶಾಲವಾದ ಛತ್ರಿಯ ನೆರಳಲ್ಲಿ ಕೆಲಸ ಮಾಡುತ್ತದೆ. ಸಮೂಹ ಮಾಧ್ಯಮ ಅಭಿವೃದ್ದಿಯ ಕಾರ್ಯವಿಧಾನಕ್ಕೆ ಸಾಮರ್ಥ್ಯ ಹಾಗೂ ಬಲ ಒದಗಿಸುತ್ತದೆ. ಅವು ಅಭಿವೃದ್ದಿಯ ಕಲ್ಪನೆಗಳನ್ನು, ರಾಜನೀತಿಗಳನ್ನು, ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ಹಾಗೂ ಪರಿಣಾಮಗಳನ್ನು ವಿವರಿಸುತ್ತವೆ. ಆದಕಾರಣ ಅಭಿವೃದ್ದಿ ಪತ್ರಿಕೋದ್ಯಮದ ಜೊತೆಗೆ ಸಮೂಹ ಮಾಧ್ಯಮಗಳ ಕಲ್ಪನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಉತ್ತಮ.

ಸಾಮಾಜಿಕ ಲೆಕ್ಕಪತ್ರ ಪರಿಶೋಧನೆ ಹಾಗೂ ಅಭಿವೃದ್ದಿ ಯೋಜನೆಗಳ ವಿಚಾರವಾಗಿ ಅವುಗಳ ಗುಣಮಟ್ಟ ಹಾಗೂ ಅವು ಯಾರಿಗಾಗಿ ಸೇವೆ ಮಾಡಬೇಕಾಗಿತ್ತು. ಅದರ ಪರಿಣಾಮ ಅಂತಿಮವಾಗಿ ಏನಾಗಿದೆ, ಚಾರಿತ್ರಿಕವಾಗಿ ನಿರ್ಲಕ್ಷಕ್ಕೆ ಗುರಿಯಾದ ಸಮಾಜಗಳ ಜನರ ಉದ್ಧಾರದ ಫಲಿತಾಂಶ ವಿವರಿಸುವುದೇ ಅಭಿವೃದ್ದಿ ಪತ್ರಿಕೋದ್ಯಮ.

ಪತ್ರಿಕಾ ಮಾಧ್ಯಮದ ಮೂಲಕ ತುಳಿತಕ್ಕೆ ಒಳಗಾದ ಜನಾಂಗದವರ ಅಭಿವೃದ್ದಿಯ ವರದಿಗಳನ್ನು ಪ್ರಕಟನೆ ನ್ಯಾಯ ದೊರಕಿಸಿ ಕೊಡುವುದು ಮುಖ್ಯ. ಸ್ಥಳೀಯ ತೆರಿಗೆಗಳು, ಸ್ಥಳೀಯ ಸಂಸ್ಥೆಗಳು (ಪಂಚಾಯ್ತಿ, ಪುರಸಭೆ, ನಗರಸಭೆ ಇತ್ಯಾದಿ) ಸ್ಥಳೀಯ ಸಂಘಟನೆಗಳು ಮಠಮಾನ್ಯಗಳು, ಕ್ರೀಡಾಕೂಟಗಳು ಹಾಗೂ ಅಪರಾಧಗಳು ಪತ್ರಿಕೆಗಳಿಗೆ ಮೂಲ ಆಹಾರವಾಗಿವೆ. ಇವುಗಳ ಜೊತೆಗೆ ಅಭಿವೃದ್ದಿಗೆ ಅವಶ್ಯಕವಾದ ಶಿಕ್ಷಣದ ಅನುಕೂಲತೆಗಳು, ಮೂಲಭೂತ ಸೌಕರ್ಯಗಳು, ಸಮಾಜದ ಜನರ ಆಶೋತ್ತರಗಳನ್ನು ಬಿಂಬಿಸುವುದು ಪತ್ರಿಕೆಗಳಿಗೆ ಸೇರಿದ್ದು. ಪತ್ರಿಕೆಗಳು ‘ಕಾವಲು ನಾಯಿ’ಯಾಗಿ ತನ್ನ ತನಿಖಾ ವರದಿಗಳ ಸಂಸ್ಕೃತಿಯ ಮೂಲಕ ನಾಗರಿಕ ಹಿತಿ ಕಾಪಾಡಬೇಕಾಗುತ್ತದೆ.

ಅಧಿಕಾರದಲ್ಲಿರುವವರ ಅವ್ಯವಹಾರ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಬೆಳಕಿಗೆ ತರುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಆಗುವ ತಪ್ಪುಗಳು ಲಂಚಕೋರುತನ ನಿಲ್ಲಿಸುವಲ್ಲಿ ಹಾಗೂ ಅಭಿವೃದ್ದಿ ಕಾರ್ಯದಲ್ಲಿ ಬಾಧೆ ತರುವ, ತಿಕ್ಕಾಟ, ಘರ್ಷಣೆ, ಬಡಿದಾಟ ಮುಂತಾದ ಅಡೆ-ತಡೆಗಳ ವಿಚಾರವಾಗಿಯೂ ಸಾರ್ವಜನಿಕ ಅಭಿಪ್ರಾಯ ಮೂಡಿಸುವುದು ಪತ್ರಿಕೆಗಳ ಕರ್ತವ್ಯ. ಚರ್ಚೆ, ಸಂವಾದ, ವಿಚಾರ ಸಂಕಿರಣಗಳ ಮೂಲಕ ನೀತಿ ನಿರೂಪಣೆಗಳು ಬಯಲಿಗೆ ಬರುವಂತೆ ಮಾಡಬೇಕು. ನ್ಯಾಯ ಸಮ್ಮತವಾದ ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಅವಕಾಶ ಕಲ್ಪಿಸುವ ವಾತಾವರಣ ನಿರ್ಮಾಣ ಮಾಡುವುದು ಅಭಿವೃದ್ದಿ ಪತ್ರಿಕೋದ್ಯಮದ ಗುರಿಯಾಗಿದೆ.

ಅಭಿವೃದ್ದಿ ಜನರ ಮೇಲೆ ಹೇರುವ ವಿಚಾರವಲ್ಲ, ಅದು ಒಂದು ಕಾರ್ಯ ವಿಧಾನ ಅದರಲ್ಲಿ ಜನರು ಸ್ವತಃ ಭಾಗಿಯಾಗಬೇಕಾಗುತ್ತದೆ, ಅವರೆ ಪಾತ್ರಧಾರಿಗಳು ಹಾಗೂ ಫಲಾನುಭವಿಗಳಾಗಬೇಕಾಗುತ್ತದೆ. ಪತ್ರಿಕೋದ್ಯಮ ಸೂಕ್ತ ಮಾಹಿತಿ ನೀಡುವಲ್ಲಿ ನೆರವಾಗಬೇಕಾಗುತ್ತದೆ. ಅಭಿವೃದ್ದಿ ಪತ್ರಿಕೋದ್ಯಮ “ವಿರೋಧಾಭಾಸ ಅಲಂಕಾರ”ವಿದ್ದಂತೆ.  ಅಭಿವೃದ್ದಿಪರ ದೇಶಗಳಿಗೆ ಇದರ ಅವಶ್ಯಕತೆ ತುಂಬಾ ಇರುತ್ತದೆ. ಸ್ಥಳೀಯ ಸಂಪನ್ಮೂಲ ಗಳನ್ನು ಗಮನಿಸಿ ಅಭಿವೃದ್ದಿಗೆ ಒತ್ತು ನೀಡಬೇಕಾಗುತ್ತದೆ. ಕಲೆ, ಸಂಸ್ಕೃತಿ ಹಾಗೂ ಶಿಲ್ಪಕಲಾ ಸಂಪತ್ತು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕಾದಿಡುವ ಕೆಲಸವನ್ನೂ ಅದು ಮಾಡಬೇಕಾಗುತ್ತದೆ. ಅಭಿವೃದ್ದಿಯ ನೆಪದಲ್ಲಿ ಜನರಿಗೆ ಬರುವ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಸ್ಥಳೀಯ ಬೇಕು-ಬೇಡಗಳ ಸಂಶೋಧನೆ ಅಷ್ಟು ಸುಲಭವಾದುದಲ್ಲ, ಇದಕ್ಕೆ ಎಂಟೆದೆಯ ಧೈರ್ಯ ಬೇಕಾಗುತ್ತದೆ. ಸ್ಥಳೀಯ ಅಭಿವೃದ್ದಿ ಮುಂದಿನ ಪೀಳಿಗೆಗೆ ಧಕ್ಕೆಯಾಗದಂತೆ ವಿಜ್ಞಾನಿಗಳು ಹಾಗೂ ಸಂಶೋಧಕರು ವಿಚಾರ ಮಾಡಿ ಪತ್ರಿಕೆಗಳಿಗೆ ತಮ್ಮ ಅಭಿಪ್ರಾಯ ತಿಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ ಮಿತಿಯಾಗಿರುತ್ತದೆ. ಇದಕ್ಕೆ ವಿಶೇಷ ತರಬೇತಿ ಪತ್ರಕರ್ತರಿಗೆ ಬೇಕಾಗುತ್ತದೆ. ಆಗ ಮಾತ್ರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಬಹುದು.

ನಾಗರಿಕ ಸಮಾಜದ ಬದಲಾವಣೆಗೆ ಹಾಗೂ ಅಭಿವೃದ್ದಿಗೆ ಪತ್ರಿಕೋದ್ಯಮ ಬಹಳ ಮುಖ್ಯವಾಗಿದೆ. ಸಹನೆಗೆ, ಸಕಾರಾತ್ಮಕ ಚಿಂತನೆಗೆ ಮತ್ತು ಜವಾಬ್ದಾರಿತನಕ್ಕೆ ಪತ್ರಿಕೋದ್ಯಮ ಹೆಚ್ಚು ಒತ್ತು ಕೊಡುತ್ತದೆ. ಆದರೆ ‘ಅಭಿವೃದ್ದಿ’ ಎಂಬ ಪದದ ನಿಜವಾದ ಅರ್ಥ ನೀಡುವಲ್ಲಿ ಅದು ಅಸಮರ್ಥವಾಗಿದೆ ಎನ್ನಬಹುದು. ಇದಕ್ಕೆ ಕಾರಣವಿಲ್ಲದೇ ಇಲ್ಲ.

ಎಲ್ಲ ಪತ್ರಕರ್ತರೂ ಸಮಾಜ ಸೇವಾ ಕರ್ತರಲ್ಲ, ಅವರಿಗೆ ಅವರದೇ ಆದ ನಿರ್ಬಂಧ ಗಳಿವೆ. ಹಿರಿಯ ಪತ್ರಕರ್ತರ, ಸಂಪಾದಕರ ಹಾಗೂ ಪತ್ರಿಕೆಯ ಮಾಲಿಕರ ಮೂಗಿನ ನೇರಕ್ಕೆ ಬರೆಯಬೇಕಾಗುತ್ತದೆ. ಮುಖ್ಯವಾಗಿ ಪತ್ರಿಕಾ ಮಾರುಟ್ಟೆಯನ್ನು ಗಮನಿಸಿ ಬರೆಯಬೇಕಾಗುತ್ತದೆ ಎಂಬ ಅಭಿಪ್ರಾಯಗಳು ಚಿಂತಕರಿಂದ ಆಗಾಗ ಮೂಡಿ ಬಂದಿವೆ.

ಆದರೆ ಕೆಲವು ಚಿಂತಕರ ಪ್ರಕಾರ ‘ಅಭಿವೃದ್ದಿ ಪತ್ರಿಕೋದ್ಯಮ’ ಎಂದರೆ ಸಮಾಜದಲ್ಲಿ ಆದ ಪ್ರಗತಿ ವಿಚಾರ, ಇನ್ನೂ ಕೆಲವರ ಪ್ರಕಾರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾಗರಿಕ ವೇದಿಕೆಗಳಲ್ಲಿ ಅವಕಾಶ ನೀಡುವುದಾಗಿದೆ.

ನಾಗರಿಕರಿಗೆ ಮಾಹಿತಿ ನೀಡಿ, ಎಚ್ಚರಿಕೆ ಮೂಡಿಸುವುದರಿಂದ ಜನಸಾಮಾನ್ಯರು ಅಭಿವೃದ್ದಿ ಯೋಜನೆಗಳಿಂದ ವಂಚಿತರಾಗುವುದನ್ನು ಪತ್ರಿಕೆಗಳು ಖಂಡಿತವಾಗಿಯೂ ತಪ್ಪಿಸಬಹುದಾಗಿದೆ.

ಹಂಪಿ ಕ್ಷೇತ್ರದ ತುಂಗಭದ್ರಾ ನದಿ ದಂಡೆಯಲ್ಲಿ ಕಟ್ಟಿಸಿದ್ದ ಸ್ನಾನಘಾಟ ಕಟ್ಟಿಸಿದ್ದ ಕೆಲವೇ ತಿಂಗಳಲ್ಲಿ ನದಿ ನೀರಿನ ಹೊಡೆತಕ್ಕೆ ಕೊಚ್ಚಿ ಹೋಯಿತು. ಇದಕ್ಕೆ ಕಳಪೆ ಕಾಮಗಾರಿಕೆಯೇ ಕಾರಣ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವನ್ನು ಸರ್ಕಾರ ಭರಿಸಬೇಕಾಯಿತು. ಈ ವಿಚಾರವಾಗಿ ಪತ್ರಿಕೆಗಳು ತೀವ್ರವಾಗಿ ಟೀಕೆ ಮಾಡಲಿಲ್ಲ. ಅದರ ಹಿನ್ನೆಲೆಯಲ್ಲಿದ್ದವರನ್ನು ಬಯಲಿಗೆ ತರುವ ಪ್ರಯತ್ನ ಆಗಲಿಲ್ಲ. ಸ್ನಾನಘಾಟ ಕಟ್ಟಿಸುವ ಕೆಲಸ ಪಾರದರ್ಶಕವಾಗಿರಲಿಲ್ಲ. ಈ ನಷ್ಟ ತಡೆಯಲು ಸ್ಥಳೀಯರಾಗಲಿ, ಯುವಕರಾಗಲಿ ಹೋರಾಡಲಿಲ್ಲ. ಈ ರೀತಿಯ ನಿರ್ಲಕ್ಷ ಸಾರ್ವಜನಿಕರು ಹಾಗೂ ಪತ್ರಿಕೆಗಳು ತೋರಿದರೆ, ಸರ್ಕಾರದ ಹಣ ಪೋಲಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ.

ಸ್ನಾನಘಾಟ ನಿರ್ಮಾಣದಿಂದ ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ನಾನ  ಮಾಡಲು ಬರುವ ಜನರಿಗೆ ರಕ್ಷಣೆ ಒದಗಿಸುವ ಉದ್ದೇಶ ಸಫಲವಾಗದಿದ್ದರೆ ಏನು ಪ್ರಯೋಜನ. ಪ್ರತಿ ವರ್ಷ ಜನ ನದಿಯಲ್ಲಿ ಅಸುರಕ್ಷಿತ ಸ್ಥಳದಲ್ಲಿ ಸ್ನಾನ ಮಾಡಲು ಹೋಗಿ ನದಿಯಲ್ಲಿ ಮುಳಿಗಿ ಪ್ರಾಣ ಕಳೆದುಕೊಂಡ ವರದಿಗಳನ್ನು ಪತ್ರಿಕೆಗಳು ಪ್ರಕಟಿಸಿವೆ. ಆದರೆ ಕಳಪೆ ಕಾಮಗಾರಿಕೆಯ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡುವಲ್ಲಿ ಹಿಂದೆ ಬಿದ್ದಿರುವುದು ಏಕೆ? ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಈ ರೀತಿಯ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಬೆಳಕು ಚೆಲ್ಲಲು ಪತ್ರಕರ್ತರಿಗೆ ಕೌಶಲ್ಯ, ಕಾನೂನಿನ ಅರಿವು, ಚರಿತ್ರೆ, ಸಾರ್ವಜನಿಕ ಅಭಿಪ್ರಾಯ ಇತ್ಯಾದಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಅಭಿವೃದ್ದಿ ಕಾಮಗಾರಿಗೆ ಗಟ್ಟಿನೆಲೆ ಸಿಗಲು ಸಾಧ್ಯ.

ಮೌಲ್ಯಗಳಿಗೆ ಬೆಲೆ ಕೊಡುವ ಹಾಗೂ ಪತ್ರಿಕಾ ವರದಿಯ ಕೌಶಲ್ಯ ಅರಿತಿರುವ ಪತ್ರಕರ್ತರು ಅಭಿವೃದ್ದಿ ಪತ್ರಿಕೋದ್ಯಮದ ಬೆಳವಣಿಗೆಗೆ ನೀರು ಹರಿಸಬಲ್ಲರು. ಸ್ನಾನಕ್ಕೆ ಹೋಗುವ ಹೊಸಬರು ನದಿಯಲ್ಲಿ ಮುಳುಗಿ ಸಾಯುವ ಅಪಾಯ ಹೆಚ್ಚಾಗಿರುವುದರಿಂದ ಸ್ನಾನಘಾಟ ಕಟ್ಟಿಸಲು ಅಂದಿನ ವಿದ್ಯಾರಣ್ಯ ಪೀಠದ ಸ್ವಾಮೀಜಿ, ಶ್ರೀನರಸಿಂಹ ಭಾರತಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರೂ ಇದಕ್ಕೆ ಅನುಮತಿ ನೀಡಿದ್ದರು. ಕಟ್ಟಿಸುವವರು ಮಾತ್ರ ಕಳಪೆ ಕಾಮಗಾರಿ ಹಾಗೂ ಸರಿಯಾದ ಯೋಚನೆ ಇಲ್ಲದೆ ಈ ಕಾಮಗಾರಿಗೆ ಕೈಹಾಕಿ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ರೀತಿಯಲ್ಲಿ ನಡೆದುಕೊಂಡದ್ದನ್ನು ಗಮನಿಸಿದರೆ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯಗಳಿಗೆ ಕಲ್ಲು ಹಾಕುವ ಕೃತ್ಯ ಇದು ಎಂಬುದು ತಿಳಿದು ಬರುತ್ತದೆ.

ಈ ಒಂದು ಸಣ್ಣ ಉದಾಹರಣೆಯನ್ನು ತೆಗೆದುಕೊಂಡು ಯಾವ ರೀತಿ ಹಂಪಿಯ ಸಮಗ್ರ ಅಭಿವೃದ್ದಿಗೆ ಕುಂಠಿತವಾದ ಕೆಲಸಗಳು ನಡೆಯುತ್ತಿವೆ ಎಂಬುದನ್ನು ತಿಳಿಯಬಹುದು. ಕರ್ನಾಟಕದಲ್ಲಿ ಅನೇಕ ಪುಣ್ಯ ಕ್ಷೇತ್ರಗಳು ಹಾಗೂ ಚಾರಿತ್ರಿಕ ಸ್ಥಳಗಳು ಅಗಾಧ ಅಭಿವೃದ್ದಿಯನ್ನು ಸಾಧಿಸಿ ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸಲು ನೆರವಾಗಿವೆ. ಆದರೆ ಹಂಪಿ ಕ್ಷೇತ್ರ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವುದರಿಂದ ಬದಲಾವಣೆಯ ಬೆಳಕು ಕಾಣುವುದರ ಬದಲಿಗೆ ಕತ್ತಲೆಯ ಮಡುವಿನಲ್ಲಿ ಮುಳಿಗಿದ ಹಾಗೆ ಕಾಣುತ್ತಿದೆ. ಸರಿಯಾದ ಒಂದು ಸಾರ್ವಜನಿಕ ಶೌಚಾಲಯದ ಸೌಲಭ್ಯ ಇಲ್ಲದಾಗ ಅಭಿವೃದ್ದಿ ಹೇಗೆ ಸಾಧ್ಯ?

ಹಂಪಿ ಸಮಗ್ರ ಅಭಿವೃದ್ದಿಗೆ ಕಾಡುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಹರಿಸಿದರೆ ಎಲ್ಲಿ ಎಡವಲಾಗುತ್ತಿದೆ ಎಂಬುದನ್ನು ಅರಿಯಬಹುದು. ಹಂಪಿಯ ಕವಿ ರಾಘವಾಂಕ ಹೇಳಿದ ಪ್ರಕಾರ “ನಡೆಯುವವರೆಡವದೆ ಕುಳಿತವರೆಡುವುವರೆ?” ಎನ್ನುವ ರೀತಿಯಲ್ಲಿ ಮೊದಲು ಹಂಪಿಯಲ್ಲಿ ಏನಾಗಿದೆ, ಏನಾಗಬೇಕು. ಅದಕ್ಕೆ ಯಾರಾರು ಯಾವ ಕೆಲಸ ವಹಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿಯಬಹುದು.

ಹಂಪಿಯ ಕುಂದು-ಕೊರತೆಗಳ ಬಗ್ಗೆ, ಸಮಸ್ಯೆಗಳ ಬಗ್ಗೆ, ಸಮಸ್ಯೆ ಹುಟ್ಟು ಹಾಕುವವರ ಬಗ್ಗೆ, ಅಭಿವೃದ್ದಿ ಏಕೆ ಕುಂಠಿತವಾಗುತ್ತದೆ ಎನ್ನುವ ಬಗ್ಗೆ, ಹಂಪಿಯ ವೈಭವ, ವಿಶಿಷ್ಟತೆ ಬಗ್ಗೆ ವಿವಿಧ ಲೇಖಕರು ಬರೆದ ಲೇಖನಗಳನ್ನು, ಪತ್ರಿಕಾ ವರದಿಗಳನ್ನು ಅವಲೋಕಿಸಿದರೆ ಒಂದು ಸಮಗ್ರವಾದ ಅಭಿವೃದ್ದಿಗೆ ಮಾರ್ಗದರ್ಶನವಾಗಲು ಸಂದೇಹವೇ ಇಲ್ಲ.

‘ಹಂಪಿ’ ಕನ್ನಡಿಗರ ಸ್ಫೂರ್ತಿಯ ನೆಲೆ, ಕಲ್ಲಿನಲ್ಲಿ ಅರಳಿದ ಕಲೆ, ವೀರಶೂರರ ನೆಲೆ, ಸಾಂಸ್ಕೃತಿಕ ರಾಜಧಾನಿಯ ಸೆಲೆ, ಅದ್ಭುತ ಸಾಹಿತ್ಯದ ಬಲೆ, ತುಂಗಭದ್ರಾ ನದಿಯ ಸಿಹಿನೀರಿನ ಜಲ ಇವು ನಮ್ಮ ಆಸ್ತಿ. ಇವುಗಳನ್ನು ಕಾಪಾಡಿ ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಭದ್ರವಾಗಿ ಸಂರಕ್ಷಿಸುವ ಕೆಲಸ ಪತ್ರಿಕೆಗಳಿಂದ ಆಗಬೇಕಿದೆ. ಅದಕ್ಕಾಗಿ ಅಭಿವೃದ್ದಿಯ ಮಾರ್ಗ ಕಂಡು ಹಿಡಿಯುವುದು ಮುಖ್ಯವಾಗಿದೆ. ಅಭಿವೃದ್ದಿಯ ನೆಪದಲ್ಲಿ ಮುಗ್ಗರಿಸಿ ಬೀಳುವುದೂ ಆಗಬಾರದು.

ಜೀವನದಲ್ಲಿ ಪರಸ್ಪರ ಹೊಂದಿಕೆಯ ಬೆಳವಣಿಗೆ ಕಾಣುವುದೇ ‘ಅಭಿವೃದ್ದಿ’. ಸಾಮಾನ್ಯ ಜನರ ಮೂಲಭೂತ ಆಸಕ್ತಿಗಳನ್ನು ಪೂರೈಸುವುದು, ಆರ್ಥಿಕಮಟ್ಟ ಏರಿಸುವುದು, ಧಾರಣಶಕ್ತಿ ಹೆಚ್ಚಿಸುವುದು ಅಭಿವೃದ್ದಿಯ ಮಾರ್ಗಗಳು. ಆರ್ಥಿಕವಾಗಿ ಹಿಂದುಳಿದ ಜನರ ಏಳಿಗೆ ಜೊತೆಗೆ ಪರಂಪರಾಗತವಾಗಿ ಬಳುವಳಿಯಾಗಿ ಬಂದಿರುವ, ಸಂಸ್ಕೃತಿ, ಕಲೆ, ಸಾಹಿತ್ಯ ಸ್ಮಾರಕಗಳು ಇತ್ಯಾದಿ ಉಳಿಸಿಕೊಂಡು ರಕ್ಷಿಸುವುದೂ ಕೂಡಿದೆ. ಸಂರಕ್ಷಣೆಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ. ರಾಜನೀತಿಯ ರೂಪ-ರೇಷಗಳು ಬೇಸಾಯ ಮತ್ತು ಕೈಗಾರಿಕೆಗಳಿಗೆ ಬೆಂಬಲವಾಗಿ ಹಾಗೂ ಪೂರಕವಾಗಿ ರಚಿಸಬೇಕಾಗುತ್ತದೆ. ಇದರಿಂದ ಸಾಮಾನ್ಯ ಜನರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಬಡತನ ಹೋಗಲಾಡಿಸಲು ಕ್ರಮಕೈಗೊಳ್ಳಬೇಕು. ಕೊಳಚೆ ಪ್ರದೇಶಗಳಲ್ಲಿ ಅಂತರ್‌ವ್ಯವಸ್ಥೆ ಒದಗಿಸುವುದು ಆಹಾರ, ಕುಡಿಯುವ ನೀರು ಪೂರೈಕೆ, ವಸತಿ ಸೌಕರ್ಯ, ಶಿಕ್ಷಣ ಸೌಲಭ್ಯ ಇತ್ಯಾದಿ ಒದಗಿಸುವುದರಿಂದ ‘ಅಭಿವೃದ್ದಿ’ ಸಾಧಿಸಲು ಸಾಧ್ಯ. ಸರ್ಕಾರ ಜನರ ಮೂಲಭೂತ ಹಕ್ಕುಗಳನ್ನು ಆಸಕ್ತಿಯನ್ನು ರಕ್ಷಣೆ, ಸಮಾಜದ ಸ್ಥಿರತೆಯನ್ನು ಕಾಪಾಡಬೇಕು. ಆಗ ಮಾತ್ರ ನಿಜವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ. ಆದರೂ ಈ ರೀತಿ ಪೂರ್ಣ ಪ್ರಮಾಣದ ಸ್ಥಿತಿಯನ್ನು ಪ್ರಜಾಪ್ರಭುತ್ವದಲ್ಲಿ ಕಾಣಲು ತುಂಬಾ ಹೆಣಗಾಡಬೇಕಾಗುತ್ತದೆ. ಯಾವ ರೀತಿ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಪ್ರಪಂಚದ ಯಾವ ಭಾಗದಲ್ಲಿಯೂ ಜಾರಿಯಲ್ಲಿಲ್ಲವೋ ಅದೇ ರೀತಿ ಪರಿಪೂರ್ಣ ಪ್ರಮಾಣದ ಅಭಿವೃದ್ದಿಗೊಂಡ ಪ್ರದೇಶ ಎಲ್ಲಿಯೂ ಇಲ್ಲ ಎನ್ನಬಹುದು. ಇದನ್ನು ಅಭಿವೃದ್ದಿಯ ಮಿತಿ ಎಂದೂ ಕರೆಯಬಹುದು.