ಹಂಪಿ ಪರಿಸರದ ಹೊಸಪೇಟೆಯಲ್ಲಿ ಪತ್ರಿಕೋದ್ಯಮದ ಇತಿಹಾಸವು ೧೯೨೬ರಿಂದ ಆರಂಭವಾಗುತ್ತದೆ. ಆ ಕಾಲದಲ್ಲಿ ಆರ್. ನಾಗನಗೌಡರು ಮತ್ತು ಎ. ರಂಗನಾಥ ಮೊದಲಿಯಾರ್ ಎಂಬುವವರು ಸೇರಿ “ಪ್ರಜಾಬಂಧು” ಎನ್ನುವ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಈ ಭಾಗದ ಪತ್ರಿಕೋದ್ಯಮಕ್ಕೆ ನಾಂದಿಯಾದ ಮೊದಲ ವಾರ ಪತ್ರಿಕೆ. ಈ ಪತ್ರಿಕೆ ಎರಡು ವರ್ಷ ಕಾಲ ಅಸ್ತಿತ್ವದಲ್ಲಿತ್ತು.

ನಂತರ ೧೯೨೯ರಲ್ಲಿ ಬಿ.ಟಿ. ಪಂಪಾಪತಿ ಎಂಬುವವರ ಸಂಪಾದಕತ್ವದಲ್ಲಿ ‘ಸುಬೋಧ’ ಎನ್ನುವ ಪತ್ರಿಕೆ ಆರಂಭವಾಗಿ ನಾಲ್ಕು ವರ್ಷ ಬಾಳಿತು. ಅಲ್ಲಿಂದ ಸುಮಾರು ೨೫ ವರ್ಷಗಳ ಕಾಲ ಪತ್ರಿಕೋದ್ಯಮ ಜೀವ ಕಳೆ ಕಳೆದುಕೊಂಡಿತು.

ಮುಂದೆ ೧೯೫೨ ರಿಂದ ಮತ್ತೆ ಪತ್ರಿಕೋದ್ಯಮಕ್ಕೆ ಜೀವ ತುಂಬಿ ಬಂತು. ಹೆಚ್. ಸರ್ದೇಶ್ವರ ಇವರ ಸಂಪಾದಕತ್ವದಲ್ಲಿ ‘ಜ್ಯೋತಿ’ ಎಂಬ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಪ್ರಾರಂಭವಾಯಿತು. ಈ ಪತ್ರಿಕೆ ‘ಪ್ರಬುದ್ಧ ಕರ್ನಾಟಕ’ ಮಾದರಿಯ ಪತ್ರಿಕೆಯಾಗಿ ಗೋವಿಂದ ಪೈ, ಶಿವರಾಮ ಕಾರಂತ ಮೊದಲಾದ ನಾಡಿನ ಹೆಸರಾಂತ ಸಾಹಿತಿಗಳ ಬರಹಗಳನ್ನೊಳ ಗೊಂಡಿತ್ತು. ಆದರೆ ಈ ಪತ್ರಿಕೆ ಕೇವಲ ಎರಡೆ ಎರಡು ಸಂಚಿಕೆ ಬಿಡುಗಡೆಗೊಂಡು ಮಾಯವಾಯಿತು.

೧೯೫೩ರಲ್ಲಿ ಎಸ್.ಎಂ. ಕೊಟ್ರಯ್ಯನವರ ಸಂಪಾದಕತ್ವದಲ್ಲಿ ‘ಸ್ವತಂತ್ರ’ ಎಂಬ ವಾರ-ಪತ್ರಿಕೆ ಪ್ರಸಿದ್ಧವಾಗಿತ್ತು. ಇದು ಬಹಳ ಕಾಲ ಅಸ್ತಿತ್ವದಲ್ಲಿದ್ದು ಈ ಭಾಗದ ಬೆಳವಣಿಗೆಗೆ ಕಾರಣವಾಯಿತು. ಅನೇಕ ಲೇಖಕರು ಕವಿಗಳು ಈ ಪತ್ರಿಕೆಯ ಮೂಲಕ ಬೆಳಕಿಗೆ ಬಂದರು. ನನ್ನ ಮೊದಲ ಸಣ್ಣಕಥೆ ಹಾಗೂ ಕವನ ಪ್ರಕಟವಾಗಿದ್ದು ಈ ಪತ್ರಿಕೆಯಲ್ಲಿಯೆ.

ಸದ್ಯ ಎಸ್.ಎಂ. ಮನೋಹರ ಇವರ ಸಂಪಾದಕತ್ವದಲ್ಲಿ ‘ಹೋರಾಟ’ ಎಸ್.ಎಂ. ಪ್ರಕಾಶ ಅವರ ಸಂಪಾದಕತ್ವದಲ್ಲಿ ‘ಹೊಸಪೇಟೆ ಟೈಮ್ಸ್’ ಹಾಗೂ ಎಂ. ವಿರೂಪಾಕ್ಷ ನಾಯಕ ಇವರ ಗೌರವ ಸಂಪಾದಕತ್ವದಲ್ಲಿ ‘ಈನ್ಯೂಸ್’ ದಿನಪತ್ರಿಕೆಗಳು ನಾಗರಿಕರಿಗೆ ಸುದ್ದಿ ಪೂರೈಸುವ ಕೆಲಸ ಮಾಡುತ್ತಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಚೆಲುವ ಕನ್ನಡ’, ‘ಪುಸ್ತಕ ಮಾಹಿತಿ’, ‘ವಿಜ್ಞಾನ ಸಂಗಾತಿ’, ‘ಕನ್ನಡ ಅಧ್ಯಯ’ ಹಾಗೂ ‘ಮಹಿಳಾ ಅಧ್ಯಯನ’ ಪತ್ರಿಕೆಗಳು ಹೊರಬರುತ್ತಿವೆ.

ಕನ್ನಡದಲ್ಲಿ ಪ್ರಥಮವಾಗಿ ಪತ್ರಿಕೆ ಪ್ರಕಟವಾಗಿದ್ದು “ಕನ್ನಡ ಸಮಾಚಾರ” ಬಳ್ಳಾರಿಯಲ್ಲಿ ಮುದ್ರಿತವಾಗಿತ್ತು. ನಂತರ ಅದು ‘ಮಂಗಳೂರು ಸಮಾಚಾರ’ವಾಯಿತು. ಬಾಸೆಲ್ ಮಿಷನ್‌ನ ರೆವರೆಂಡ್ ಹರ್ಮನ್ ಪ್ರೆಡ್ರಿಕ್ ಮೋಗ್ಲಿಂಗ್ ಸಂಪಾದಕತ್ವದಲ್ಲಿ ಈ ಮೊದಲ ಕನ್ನಡ ಪತ್ರಿಕೆ ೧೮೪೨ರಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಂಪಿ ಪರಿಸರದ ಹೊಸಪೇಟೆಯಲ್ಲಿ ಪ್ರಕಟವಾಗುತ್ತಿರುವ ಸ್ಥಳೀಯ ಪತ್ರಿಕೆಗಳು ಈ ಭಾಗದ ಆಗು-ಹೋಗು ಹಾಗೂ ರಾಜಕೀಯದ ಬಗ್ಗೆ ತನ್ನದೇ ಆದ ಇತಿ-ಮಿತಿಗಳಲ್ಲಿ ಬೆಳಕು ಚೆಲ್ಲುತ್ತಾ ಬಂದಿವೆ. ರಾಜ್ಯಮಟ್ಟದ ಪತ್ರಿಕೆಗಳೂ ಈ ಭಾಗದ ಸುದ್ದಿ-ಸಮಾಚಾರ ಹಾಗೂ ಅಭಿವೃದ್ದಿ ಕುರಿತು ಲೇಖನಗಳನ್ನು ಪ್ರಕಟಿಸುತ್ತಿರುವುದು ಗಮನಾರ್ಹವಾಗಿದೆ.