ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ; ಆದರೆ ಬದಲಾವಣೆ ಮಾತ್ರ ಶಾಶ್ವತವಾದುದು. ಕಳೆದ ೫೦ ವರ್ಷಗಳಿಂದ ಹಂಪಿ ಪರಿಸರದಲ್ಲಿ ಆಗಿರುವ ಬದಲಾವಣೆ, ಅಭಿವೃದ್ದಿಯ ಮೇಲೆ ಪತ್ರಿಕೆಗಳ ಪ್ರಭಾವ ಅವಲೋಕಿಸಿದರೆ ಮೇಲಿನ ಮಾತಿಗೆ ಪುಷ್ಠಿ ಬರುತ್ತದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸಲು ಮುಂದಾಗುವುದಿಲ್ಲ, ಅದೇ ರೀತಿ ಪತ್ರಿಕೆಗಳಲ್ಲಿ ಬೇಕು-ಬೇಡಗಳ, ಅಭಿವೃದ್ದಿಯ ಹಾಗೂ ಹೋರಾಟಗಳ ಸುದ್ದಿ, ಲೇಖನಗಳು ಪ್ರಕಟವಾಗಿದ್ದರಿಂದ ಹಂಪಿ ಪರಿಸರದಲ್ಲಿ ಅಗಾಧ ಬೆಳವಣಿಗೆ ಆಗಿದೆ, ಆದರೆ ಇನ್ನೂ ಸಾಕಷ್ಟು ಆಗಬೇಕಿದೆ.

ಅರ್ಧ ಶತಮಾನದ ಹಿಂದೆ ಈ ಭಾಗದ ಜನರ ಏಳಿಗೆ; ಬವಣೆ, ಕಷ್ಟ-ನಷ್ಟಗಳನ್ನು ಬೆಳಕಿಗೆ ತರಲು ಪತ್ರಿಕೆಗಳಾಗಲಿ ಹೋರಾಟದ ಸಂಘ-ಸಂಸ್ಥೆಗಳಾಗಲಿ ಅಷ್ಟು ಇರಲಿಲ್ಲ. ಚರಿತ್ರೆಯ ಮೇಲೆ ಬೆಳಕು ಚೆಲ್ಲುವವರಾಗಲಿ ಅಪರೂಪವಾಗಿದ್ದಿರು. ವಿಜಯನಗರ ಸಾಮ್ರಾಜ್ಯದ ಅವಶೇಷಗಳ ಮಹತ್ವ, ಅದ್ಭುತ ವಿಶ್ವಕ್ಕೆ ತಿಳಿಸಲು ಬ್ರಿಟಿಷ್ ಅಧಿಕಾರಿ ರಾಬರ್ಟ್ ಸಿವೆಲ್ ‘ಮರೆತು ಹೋದ ಸಾಮ್ರಾಜ್ಯ’ ಎಂಬ ಪುಸ್ತಕ ಬರೆಯಬೇಕಾಯಿತು. ಇಂದು ಹಂಪಿ ಅವಶೇಷಗಳನ್ನು ವಿಶ್ವಸಂಸ್ಥೆಯ “ಯುನೋಸ್ಕೊ” ಗುರುತಿಸಿ ವಿಶ್ವಪರಂಪರೆಯ ಸ್ಥಳಗಳಲ್ಲಿ ಒಂದು ಎಂದು ಗುರುತಿಸಿದೆ.

ಈ ಭಾಗದ ರೈತರ ಜೀವನಾಡಿ ನೀರಾವರಿ, ವಿಜಯನಗರ ಕಾಲದಿಂದಲೂ ನೀರಾವರಿಗೆ ಆದ್ಯತೆ ನೀಡಲಾಗಿದೆ. ಆ ಕಾಲದ ೮ ಕಾಲುವೆಗಳು ಈಗಲೂ ರೈತರ ನೀರಿನ ಬೇಡಿಕೆ ಪೂರೈಸುತ್ತಿವೆ. ಬತ್ತ, ಕಬ್ಬು, ಬಾಳೆ ಹೆಚ್ಚಾಗಿ ಬೆಳೆಯುವ ಈ ಪ್ರದೇಶದಲ್ಲಿ ೬೫ ವರ್ಷಗಳ ಹಿಂದೆಯೇ ಸಕ್ಕರೆ ಕಾರ್ಖಾನೆಯೊಂದನ್ನು ಸ್ಥಾಪಿಸಲಾಗಿತ್ತು. ಕಬ್ಬು ಬೆಳೆಗಾರರಿಗೆ ಇದು ಭಾಗ್ಯದ ಬಾಗಿಲಾಗಿಯೂ ನಷ್ಟದ ಬಿಸಿ ಮುಟ್ಟಿಸಿಯೂ ಈವರೆಗೂ ಬದುಕಿ ಉಳಿದುಕೊಂಡು ಬಂದಿದೆ.

ಭಾರತ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ ಭಾರತ ಒಕ್ಕೂಟ ಸರ್ಕಾರ ಬೃಹತ್ ಪ್ರಮಾಣದ ತುಂಗಭದ್ರಾ ವಿವಿಧೋದ್ದೇಶ ಯೋಜನೆಯ ಜಲಾಶಯ ಒಂದನ್ನು ಹೊಸಪೇಟೆ ಬಳಿ ನಿರ್ಮಿಸಿತು. ೧೯೫೩ರಲ್ಲಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ಈ ಭಾಗದ ಜನರ ಅದೃಷ್ಟ ಬದಲಾಯಿಸಿತು.

ಮನೆ-ಮನೆಗೆ ಮಾಹಿತಿ-ಮನರಂಜನೆ ಒದಗಿಸುವ ಪ್ರಾದೇಶಿಕ ಸಾಧನ ಎಫ್.ಎಂ. ಆಕಾಶವಾಣಿ ಹೊಸಪೇಟೆಯಲ್ಲಿ ಸ್ಥಾಪನೆಗೊಂಡು ಹಂಪಿ ಪರಿಸರದ ಜನರ ಆಶೋತ್ತರ ಗಳನ್ನು ಶ್ರೋತೃಗಳ ಅಭಿಲಾಷೆಗಳನ್ನು ಬಿಂಬಿಸಲು ಪ್ರಾರಂಭಿಸಿತು.

ಹಂಪಿ ಪರಿಸರದಲ್ಲಿ ೧೯೯೧ರಲ್ಲಿ ವಿಶಿಷ್ಟವಾದ ಹಾಗೂ ಕನ್ನಡಿಗರ ಅಭಿಮಾನದ ಸಂಕೇತವಾದ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭಗೊಂಡಿತು. ಅದು ಉನ್ನತವಾದ – ಆಳವಾದ ಸಂಶೋಧನೆ ಮುಂತಾದ ಮಹತ್ವದ ಕಾರ್ಯಗಳಲ್ಲಿ ತೊಡಗಿ ಈ ಭಾಗದಲ್ಲಿ ವಿಶ್ವದ ಜ್ಞಾನ ಕೇಂದ್ರವಾಗಿ ಬೆಳಗುತ್ತಿದೆ.

ಶ್ರೇಷ್ಠ ಗುಣಮಟ್ಟದ ಅಪಾರ ಪ್ರಮಾಣದಲ್ಲಿ ಶೇಖರವಾಗಿರುವ ಕಬ್ಬಿಣ ಅದುರಿನ ನಿಕ್ಷೇಪ ಈ ಭಾಗದಲ್ಲಿ ಪ್ರಕೃತಿದತ್ತವಾಗಿ ಲಭ್ಯವಾಗಿದೆ. ಅಲ್ಪ ಪ್ರಮಾಣದಲ್ಲಿ ಸಾಗಣೆ ಯಾಗುತ್ತಿದ್ದ ಕಬ್ಬಿಣ ಅದಿರಿಗೆ ಇಂದು ಬಂಗಾರದ ಬೆಲೆ ಬಂದಿದೆ. ಈ ನಿಕ್ಷೇಪದಿಂದಾಗಿ ಕೈಗಾರಿಕೋದ್ಯಮಗಳು ಬೆಳೆದು ಈ ಭಾಗದ ಜನರಿಗೆ ಉದ್ಯೋಗಾವಕಾಶ ಗಳನ್ನು ಒದಗಿಸಿವೆ. ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆ ಜೊತೆಗೆ ಇತರ ಕೈಗಾರಿಕೆಗಳು ತಲೆ ಎತ್ತಿ ನಿಂತಿವೆ. ಪರಿಸರದ ಮತ್ತು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಹಂಪಿ ಪುಣ್ಯಕ್ಷೇತ್ರ ಜೊತೆಗೆ ವಿಜಯನಗರ ಸಾಮ್ರಾಜ್ಯದ ಅವಶೇಷಗಳನ್ನು, ಶಿಲ್ಪಕಲಾ ಆಗರವನ್ನು ಹೊಂದಿರುವ ಪ್ರದೇಶ. ಇಲ್ಲಿಗೆ ಪ್ರತಿ ದಿನ ಸಾವಿರಾರು ದೇಶ-ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಪ್ರದೇಶದ ಅಭಿವೃದ್ದಿ ಕುಂಠಿತವಾಗಿದೆ ಎಂದರೆ ತಪ್ಪಾಗಲಾರದು. ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಕಲ್ಪಿಸುವ ಈ ಪ್ರದೇಶದ ಅಭಿವೃದ್ದಿಗೆ ಪತ್ರಿಕೆಗಳು ಆಗಾಗ ಉಲ್ಲೇಖಿಸುತ್ತಾ ಬಂದಿವೆ.

ಸ್ಪಂದಿಸುವಲ್ಲಿ, ಪ್ರತಿಕ್ರಿಯಿಸುವುದರಲ್ಲಿ ಹಿಂದೆ ಬಿದ್ದಿರುವ ಈ ಭಾಗದ ಜನರಲ್ಲಿ ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗುತ್ತಿದೆ. ಪಂಚಾಯ್ತಿ ಆಡಳಿತ ಜಾರಿಗೆ ಬಂದಿರುವುದರಿಂದ ರಾಜಕೀಯದಲ್ಲಿ ಆಸಕ್ತಿ ಮೂಡಿ ಮೂಲಭೂತ ಸೌಕರ್ಯ ಪಡೆಯಲು ಗಮನಾರ್ಹ ಬದಲಾವಣೆಗಳಾಗುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬೆಳೆಯುತ್ತಿರುವುದರಿಂದ ಅಪರಾಧಗಳು, ಭ್ರಷ್ಟಾಚಾರಗಳು ಹೆಚ್ಚಾಗುವುದರ ಜೊತೆಗೆ ರಾಜಕೀಯ ಪ್ರಜ್ಞೆ ಬೆಳೆಯುತ್ತಿರುವುದು ಸಮಿಶ್ರ ಲಕ್ಷಣ.

ಸಾಂಸ್ಕೃತಿಕ ರಾಜಧಾನಿ ಎಂದು ಹೆಸರಾಗಿರುವ ಹಂಪಿಯಲ್ಲಿ ಪ್ರತಿವರ್ಷ ‘ಹಂಪಿ ಉತ್ಸವ’ ಕಳೆದ ಹನ್ನೊಂದು ವರ್ಷಗಳಿಂದ ಆಚರಿಸುತ್ತಾ ಬರಲಾಗಿದೆ. ಕನ್ನಡ ನಾಡಿನ ಗತಕಾಲದ ಹಾಗೂ ಇಂದಿನ ಕಲೆ ಸಾಂಸ್ಕೃತಿಕಗಳ ಉತ್ಸವನ್ನು ಎಲ್ಲ ಭಾಗದ ಕಲಾವಿದರಿಂದ ರೂಪುಗೊಳ್ಳುವಂತೆ ಮಾಡಿ, ಕಲಾ ವೈಭವವನ್ನು ಜನತೆಯ ಮುಂದೆ ಪ್ರದರ್ಶಿಸುವ ಯೋಜನೆ ಇದಾಗಿದೆ. ಇದರಿಂದ ಲಲಿತ ಕಲೆಗಳ ಏಳಿಗೆ ಕಲಾವಿದರಿಗೆ ಅವಕಾಶ, ಪ್ರೇಕ್ಷಕರಿಗೆ ರಸದೌತಣ ಲಭಿಸುವಂತೆ ಆಚರಿಸಲಾಗುತ್ತಿದೆ.

ಈ ಹಂಪಿ ಉತ್ಸವದ ರೂವಾರಿ ಈ ಭಾಗದ ಪ್ರಜ್ಞಾವಂತ ರಾಜಕಾರಣಿ ಎಂ.ಪಿ. ಪ್ರಕಾಶ್ ಎಂದರೆ ತಪ್ಪಾಗಲಾರದು. ಅವರು ಈ ಉತ್ಸವಕ್ಕೆ ತೋರಿದ ಇಚ್ಛಾಶಕ್ತಿ, ಆಸಕ್ತಿಯ ಕಾರಣವಾಗಿ “ಹಂಪಿ ಪ್ರಕಾಶ” ಎಂಬ ಉಪನಾಮ ಪಡೆದಿದ್ದಾರೆ. ಹಂಪಿ ಬಳಿಯೇ ಉಪನಗರ ‘ಪ್ರಕಾಶ ನಗರ’ವೂ ಅಸ್ತಿತ್ವದಲ್ಲಿ ಬಂದಿದೆ.

ಹಂಪಿ ಉತ್ಸವದ ನೆಪದಲ್ಲಿ ಹಂಪಿ ಪರಿಸರದ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿವರ್ಷ ಹಂತ ಹಂತವಾಗಿ ಜನಹಿತ ಕಾರ್ಯಗಳು ನಡೆದಿರುವುದನ್ನು ಕಾಣಬಹುದು.

ಕರ್ನಾಟಕ ರಾಜ್ಯ ಸರ್ಕಾರ ‘ಹಂಪಿ ಪ್ರದೇಶಾಭಿವೃದ್ದಿ ಪ್ರಾಧಿಕಾರವನ್ನು’ ರಚಿಸಿ ವಿಶೇಷ ಆಯುಕ್ತರನ್ನು ನೇಮಿಸಿ ಹಂಪಿ ಪ್ರದೇಶದ ಅಭಿವೃದ್ದಿಗೆ ಮುಂದಾಗಿರುವುದು ಒಂದು ಹರ್ಷದ ಸಂಗತಿಯಾಗಿದೆ.

ಹಂಪಿ ಪರಿಸರ ಪುರಾಣ ಕಾಲದಿಂದ ಇಂದಿನವರೆಗೂ ಹಲವು ಉಲ್ಲೇಖಾರ್ಹ ವೈಶಿಷ್ಟ್ಯವನ್ನು ಹೊಂದಿದೆ. ವಿಜಯನಗರ ಕಾಲದಲ್ಲಿ ಮಾತ್ರವಲ್ಲ, ಪ್ರಾಗೈತಿಹಾಸಿಕ ಕಾಲದಲ್ಲಿಯೂ ಇತರ ದೇಶಗಳೊಡನೆ ನಾಗರಿಕತೆಯ ಕೊಂಡಿಗಳನ್ನು ಬೆಸೆದುಕೊಂಡಿತ್ತು. ಈ ಪ್ರದೇಶ ಗಟ್ಟಿಮುಟ್ಟಾದ ಮೂಲ ಜೀವ ದ್ರವ್ಯವನ್ನು ಉಳಿಸಿಕೊಂಡು ಬಂದಿದೆ. ಇಲ್ಲಿಯ ಜನರ ಬದುಕು ಹಸನಾಗಲು ಪತ್ರಿಕೆಗಳು ಸಾಕಷ್ಟು ತಮ್ಮ ಪ್ರಯತ್ನ-ಪ್ರಭಾವ ಬೀರುತ್ತಿರುವುದನ್ನು ನಾವು ಗಮನಿಸಬಹುದು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸುವ ಪತ್ರಿಕೆಗಳು ಸಮಾಜವನ್ನು, ಸರ್ಕಾರವನ್ನೂ ಬಹು ಎಚ್ಚರಿಕೆಯಿಂದ ಕಾಯುತ್ತವೆ. ಪತ್ರಿಕೆಗಳ ಪಹರೆಯಿಂದಾಗಿಯೇ ಸಮಾಜ ಪ್ರಗತಿಯ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಸರ್ಕಾರವೂ ಉತ್ತರದಾಯಿತ್ವವನ್ನು ಹೊಂದಿ ಆಡಳಿತ ನಡೆಸುತ್ತದೆ. ಪತ್ರಿಕೆಗಳು ಬೀರುವ ವಿವಿಧ ಪರಿಣಾಮಗಳು ಮಹತ್ವದ್ದಾಗಿದೆ.

ಪತ್ರಿಕೆಗಳು ಇರದಿದ್ದರೆ ಜಗತ್ತು ಕತ್ತಲಿನಲ್ಲಿ ತೊಳಲಾಡಬೇಕಾಗುತ್ತಿತ್ತು. ಅಭಿವೃದ್ದಿಯ ಮಾತು ಇನ್ನೂ ದೂರ. ಜಗತ್ತು ಈಗಿರುವ ಪ್ರಮಾಣದ ಪ್ರಖರ ಬೆಳಕಿಗೆ ಬರುತ್ತಿರಲಿಲ್ಲ.  ಪತ್ರಿಕೆಗಳೆ ಇಲ್ಲದಿದ್ದಾಗ ಚಿಕ್ಕ ಚಿಕ್ಕ ಹಳ್ಳಿಗಳಂತ ಸಾವಿರಾರು ಪ್ರಪಂಚಗಳಿರುತ್ತಿದ್ದವು. ಈಗ ಎಲ್ಲವೂ ಏಕತ್ರಗೊಂಡು ಇಂದು ಇಡಿ ಪ್ರಪಂಚವೇ ಒಂದು ಗ್ರಾಮವಾಗಲು ಸಂಪರ್ಕ ಸಾಧನಗಳೇ ಕಾರಣ.