ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ಕಟ್ಟುವುದಕ್ಕೂ ಮುಂಚೆ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ನದಿಯ ಮೂಲಕ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಣ್ಣ ಸಣ್ಣ ಕಾಲುವೆಗಳ ಮೂಲಕ ನೀರನ್ನು ಗದ್ದೆ, ತೋಟಗಳಿಗೆ ಹರಿಸಿ ಸಂಮೃದ್ಧ ಬೆಳೆ ಬೆಳೆಸಲಾಗುತ್ತಿತ್ತು. ಈ ಕಾಲುವೆಗಳನ್ನು ವಿಜಯನಗರದ ರಾಯರು ಕಟ್ಟಿಸಿದ್ದರು.

ಮೊಟ್ಟಮೊದಲ ತುರ್ತಾ ಆಣೆಕಟ್ಟನ್ನು ೧೩೯೯ರಲ್ಲಿ ಎರಡನೆಯ ಬುಕ್ಕರಾಯನು ಕಟ್ಟಿಸಿದ್ದ ಎಂಬುದನ್ನು ಶಾಸನಗಳಿಂದ ತಿಳಿದು ಬರುತ್ತದೆ. ನಂತರದ ಆಣೆಕಟ್ಟುಗಳನ್ನು ರಾಯರು ಕಟ್ಟಿಸಿದ್ದಾರೆ. ಶ್ರೀ ಕೃಷ್ಣದೇವರಾಯ ಹಾಗೂ ನಂತರದ ರಾಯರು ೧೫೦೯ರಿಂದ ೧೫೬೦ರ ನಡುವಿನ ಕಾಲದಲ್ಲಿ ನೀರಾವರಿ ವ್ಯವಸ್ಥೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು.

ಬಳ್ಳಾರಿ ಜಿಲ್ಲೆಯಲ್ಲಿ ಇರುವ ಉಪಯುಕ್ತ ಆಣೆಕಟ್ಟುಗಳನ್ನು ರಾಯರ ಕಾಲದಲ್ಲಿ ವಲ್ಲಭಾಪುರದಿಂದ ಬಸವಣ್ಣ ಕಾಲುವೆ, ಹೊಸಕೋಟಾ ಆಣೆಕಟ್ಟಿನಿಂದ ರಾಯ ಕಾಲುವೆ, ಹೊಸೂರಿನಿಂದ ಬೆಲ್ಲ, ಕಾಳಘಟ್ಟ ಕಾಲುವೆಗಳು, ತುರ್ತ್ತಾದಿಂದ  ತುರ್ತ್ತಾ ಕಾಲುವೆ, ರಾಮಸಾಗರದಿಂದ ರಾಮಸಾಗರ ಕಾಲುವೆ, ಕಂಪ್ಲಿಯಿಂದ ಕಂಪ್ಲಿ ಕಾಲುವೆ ಹಾಗೂ ಬೆಳಗೊಡಾಳ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿತ್ತು. ಈ ೮ ಕಾಲುವೆಗಳಿಗೆ ಆಣೆಕಟ್ಟು ಗಳನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ವಕ್ರ ಕಲ್ಲುಗಳಿಂದ ಸಾಲಾಗಿ ಗೋಡೆ ಕಟ್ಟಿದ್ದಾರೆ. ಆಣೆಕಟ್ಟುಗಳಿಗೆ ಎತ್ತರದ ಪ್ರದೇಶ ಆಯ್ಕೆ ಮಾಡಿ ತಗ್ಗು ಪ್ರದೇಶಕ್ಕೆ ಕಾಲುವೆಗಳ ಮೂಲಕ ನೀರು ಹರಿಸುವ ತಂತ್ರ ಬಳಸಲಾಗಿದೆ.

ಈ ಕಾಲುವೆಗಳ ಪೈಕಿ ಬರುವ ಬಸವಣ್ಣ ಮತ್ತು ರಾಯ ಕಾಲುವೆಗಳ ಆಣೆಕಟ್ಟುಗಳು ತುಂಗಭದ್ರಾ ಜಲಾಶಯದಲ್ಲಿ ಜಲಮಯವಾಗಿ ಬಿಟ್ಟಿವೆ. ಆದ್ದರಿಂದ ಜಲಾಶಯದಿಂದ ಒಂದು ಪ್ರತ್ಯೇಕ ತೂಬು ಈ ಕಾಲುವೆಗಳಿಗೆ ಬಿಡಲಾಗಿದೆ. ಈ ಎರಡು ಕಾಲುವೆಗಳಿಗೆ ಈಗ ಜಲಾಶಯದಿಂದ ನೀರು ಪಡೆಯಲಾಗುತ್ತಿದೆ.

ವಿಜಯನಗರದ ಕಾಲುವೆಗಳು ಸಮಮಟ್ಟದಲ್ಲಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು, ಕಣಿವೆಗಳ ಮಳೆ ನೀರು ಹರಿದು ಹೋಗಲು ಅವಕಾಶ ಕಲ್ಪಿಸಲಾಗಿದೆ. ಈ ಕಾಲುವೆಗಳ ವ್ಯಾಪ್ತಿಗೆ ಬರುವ ಆಯಕಟ್ಟಿನಲ್ಲಿ ಮೂರು ವಿಧದ ಬೆಳೆ ಪದ್ಧತಿ ಅಳವಡಿಸಲಾಗಿತ್ತು.

ಈಗ ಸಮಗ್ರ ಆಣೆಕಟ್ಟಿನ ಕಾಲುವೆಗಳ ಆಯಕಟ್ಟಿನಲ್ಲಿ ಕಬ್ಬು, ಬತ್ತ, ಬಾಳೆ ಸುಮಾರು ೧೭,೪೧೬ ಎಕರೆ ಜಮೀನಿಗೂ ಹೆಚ್ಚಿನ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಪಡೆಯಲಾಗಿದೆ. ಈ ಕಾಲುವೆಗಳ ನೀರು ವಿತರಣಾ ತೂಬುಗಳು ಹಾಳಾಗಿವೆ, ನೀರಿನ ಪೂರೈಕೆ ಸಮಪರ್ಕವಾಗಿ ಹಂಚಿಕೆಯಾಗುತ್ತಿಲ್ಲ, ಸೋರಿಕೆಯಾಗುತ್ತಿದೆ. ಸಮಗ್ರ ದುರಸ್ತಿ ಕಾರ್ಯ ನಡೆಯಬೇಕಿದೆ.  ಕಾಲುವೆಗಳಲ್ಲಿ ಹೂಳು ತುಂಬಿದೆ, ದಂಡೆಗಳು ಬಲಹೀನವಾಗಿವೆ. ಈ ಕಾರಣಗಳಿಂದ ಒಂದು ಕ್ಯೂಸೆಕ್ಸ್ ನೀರಿನಲ್ಲಿ ಕೇವಲ ೩೫ ಎಕರೆ ಜಮೀನಿಗೆ ನೀರು ಹರಿಸಲು ಸಾಧ್ಯವಾಗಿದೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ಪೂರೈಸುವುದು ಕಷ್ಟವಾಗಿದೆ.

ರಾಯ ಕಾಲುವೆ ಜಲಾಶಯದಿಂದ ೧೬೦ ಕ್ಯೂಸೆಕ್ಸ್ ನೀರು ಪಡೆಯುತ್ತಿದೆ. ೨೮.೨೦ ಕಿ.ಮೀ. ಉದ್ದವಿದೆ. ಇದಕ್ಕೆ ೬೭ ಮೋರಿಗಳ ಮೂಲಕ ಸುಮಾರು ೫೭೨೭ ಎಕರೆ ಆಯಕಟ್ಟಿಗೆ ನೀರು ಉಣಿಸಲಾಗುತ್ತಿದೆ.

ಬಸವಣ್ಣ ಕಾಲುವೆ ಜಲಾಶಯದಿಂದ ೧೩೯ ಕ್ಯೂಸೆಕ್ಸ್ ನೀರು ಹರಿಸಿ ೩೦೩೯ ಎಕರೆ ಜಮೀನಿಗೆ ೨೯ ಮೋರಿಗಳಿಂದ ನೀರು ಒದಗಿಸಲಾಗುತ್ತಿದೆ. ಈ ಕಾಲುವೆ ೧೬ ಕಿ.ಮೀ. ಉದ್ದವಿದೆ.

ವಿಜಯನಗರ ಕಾಲುವೆಗಳನ್ನು ಪ್ರತಿ ವರ್ಷ ಡಿಸೆಂಬರ್ ೧೦ ರಿಂದ ಡಿಸೆಂಬರ್ ೩೧ರವರೆಗೆ (೨೦ ದಿನ) ನೀರು ನಿಲ್ಲಿಸಲು ನಿಗದಿ ಪಡಿಸಲಾಗಿದೆ. ಆದರೆ ನೀರಿನ ಕೊರತೆಯಿಂದ ಈ ನಿಗದಿ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಪ್ರತಿ ವರ್ಷ ಈ ಭಾಗದ ರೈತರು ಕಾಲುವೆಗಳಲ್ಲಿನ ಹೂಳು ತೆಗೆಸಲು, ದಂಡೆಗಳನ್ನು ಬಲಪಡಿಸಲು, ದಂಡೆಗಳ ಬಳಿ ಬೆಳೆದಿರುವ ಜಂಗಲ್ ಕಡಿದು ಹಾಕಲು, ಮಳೆ ನೀರಿನ ರಭಸಕ್ಕೆ ಆಗಿರುವ ಕೊರಕಲ್ಲುಗಳನ್ನು ಮುಚ್ಚಿ ಹಾಕಲು ಹಾಗೂ ನೀರು ಸೋರುವಿಕೆಯನ್ನು ತಡೆಗಟ್ಟಲು ಮನವಿ ಮಾಡುತ್ತಾ ಬಂದಿದ್ದಾರೆ. ಕಳಪೆ ಕಾಮಗಾರಿಗಳು ನಡೆಯುತ್ತಿರುವುದನ್ನು ಪತ್ರಿಕೆಗಳು ಉಲ್ಲೇಖಿಸುತ್ತಾ ಬಂದರೂ ದುರಸ್ತಿ ಕಾರ್ಯ ಸಮರ್ಪಕವಾಗಿ ಈವರೆಗೂ ನಡೆದಿಲ್ಲ.

೨೦೦೫ರಲ್ಲಿ ಈ ವಿಜಯನಗರ ಕಾಲುವೆಗಳ ಸಮಗ್ರ ದುರಸ್ತಿಗೆ ರೂ. ೯೫ ಕೋಟಿ ಕರ್ನಾಟಕ ರಾಜ್ಯ ಸರ್ಕಾರದಿಂದ ಮಂಜೂರು ಮಾಡಲಾಯಿತು. ಆದರೆ ಆ ವರ್ಷ ಕೆವಲ ರೂ. ೪ ಕೋಟಿ ಬಿಡುಗಡೆ ಮಾಡಲಾಯಿತು. “ಕುಂಭಕರ್ಣನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ” ಎಲ್ಲಿ ಸಾಲುತ್ತದೆ. ಅದೇ ರೀತಿ ರೂ. ೪ ಕೋಟಿ ಕಾಲುವೆಗಳ ಸಮಗ್ರ ದುರಸ್ತಿ ಕಾರ್ಯಕ್ಕೆ ಏನೂ ಸಾಲದು. ಮಂತ್ರಿಮಹೋದಯರು, ರಾಜಕಾರಣಿಗಳು ಈ ಕಾಲುವೆಗಳ ದುರಸ್ತಿಗೆ ತಮ್ಮ ಇಚ್ಛಾಶಕ್ತಿ ಪ್ರಕಟಿಸುವ ಅವಶ್ಯಕತೆ ಇದೆ. ಬೆಳೆ ಬೆಳೆದರೆ ಜನರ ಜೀವನ ಹಸನಾಗುತ್ತದೆ. ಇದಕ್ಕೆ ಪೂರಕವಾಗಿ ಸಚಿವರು, ಜನ ಪ್ರತಿನಿಧಿಗಳು ನಡೆದುಕೊಳ್ಳ ಬೇಕಾಗುತ್ತದೆ. ರಾಜ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಾದರೂ ವಿಜಯನಗರ ಕಾಲದ ಬಳುವಳಿಗಳಾದ ಈ ಕಾಲುವೆಗಳ ರಕ್ಷಣೆಯ ಪ್ರಯತ್ನ ನಡೆಯಬೇಕಾಗಿದೆ.

ನದಿ ತೀರಕ್ಕೆ ಸಂಬಂಧಿಸಿದ ರೈತರ ಹಕ್ಕು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂದು ಕಮಲಾಪುರದ ರೈತ ಕೆ.ಪಿ. ಪಾಂಡುರಂಗರಾವ್ ದೂರುತ್ತಾರೆ. ರೈತರಿಗೆ ಇರುವ ಹಳೆಯ ಸೌಕರ್ಯಗಳ ರಕ್ಷಣೆ ನೀಡದೆ, ಸುಧಾರಣೆಯ ಅಭಿವೃದ್ದಿಯ ನೆಪದಲ್ಲಿ ವಿಜಯನಗರ ಕಾಲುವೆಗಳ ರೈತರ ಭೂಮಿಗೆ ನೀರು ಪೂರೈಕೆಯಲ್ಲಿ ಕಡಿಮೆ ಮಾಡುವುದು ನ್ಯಾಯಸಮ್ಮತವಲ್ಲ. ಬಚಾವತ್ ಅವಾರ್ಡ್ ಪ್ರಕಾರ ೭ ಟಿ.ಎಂ.ಸಿ. ನೀರು ಕಾಲುವೆಗಳಿಗೆ ನೀಡಲಾಗಿದೆ. ಆದರೆ ನೀರು ಕಡಿಮೆಯಾದಾಗ ಈ ಭಾಗದ ಕಾಲುವೆಗಳಲ್ಲಿ ನೀರು ಕಡಿಮೆ ಮಾಡುವುದು ಅನ್ಯಾಯ ವಲ್ಲವೆ? ಬೆಳೆ ಪದ್ಧತಿ ಪ್ರಕಾರ ನೀರು ಕಡಿಮೆ ಮಾಡಬಾರದು. ಆದರೆ ನೀರಾವರಿ ಇಲಾಖೆ ಮಾಡುತ್ತಿದೆ. ಜಲಾಶಯದಲ್ಲಿ ನೀರು ಕಡಿಮೆ ಸಂಗ್ರಹವಾದಾಗಲೂ ವಿಜಯನಗರ ಕಾಲುವೆ ಗಳಿಗೆ ನೀರು ಕಡಿಮೆ ಮಾಡುತ್ತಾರೆ. ಇದರಿಂದ ವಿಜಯನಗರ ಕಾಲದಿಂದ ಬಳಕೆಗೆ ಬಂದಿರುವ ನೀರಾವರಿ ವ್ಯವಸ್ಥೆಗೆ ಒಳಪಡುವ ರೈತರ ಹಕ್ಕು ಮೊಟಕುಗೊಳಿಸಿದಂತಾಗಿದೆ. ಈ ಕಾಲುವೆಗಳಿಗೆ ಪೂರ್ಣ ಪ್ರಮಾಣದ ನೀರು ಪೂರೈಕೆ ಮಾಡುವುದು ನ್ಯಾಯ ಸಮ್ಮತವಾಗಿದೆ. ಅದನ್ನು ಬಿಟ್ಟು ಸಮಗ್ರ ದುರಸ್ತಿ ಯೋಜನೆಯ ನೆಪದಲ್ಲಿ ನದಿ ತೀರಕ್ಕೆ ಸಂಬಂಧಿಸಿದ ರೈತರ ಹಕ್ಕು ಹೊಸಕಿ ಹಾಕುವುದು ಸೂಕ್ತವಾದ ಕ್ರಮವಲ್ಲ ಎಂದು ಈ ಭಾಗದ ರೈತರ ಸಮೂಹ ತಮ್ಮ ಅಭಿಪ್ರಾಯವನ್ನು ಪತ್ರಿಕೆಗಳ ಮೂಲಕ, ಮನವಿಗಳ ಮೂಲಕ ವ್ಯಕ್ತಪಡಿಸಿದ್ದಾರೆ. ನೀರು ಪೂರೈಕೆಯ ಅಂತರ್‌ವ್ಯವಸ್ಥೆ ಮೂಲಕ ಕರ್ನಾಟಕದ ನೀರಿನ ಕೋಟಾದಲ್ಲಿ ವಿಜಯನಗರ ಕಾಲುವೆಗಳಿಗೆ ಒದಗಿಸುವ ನೀರಿನ ಪ್ರಮಾಣವನ್ನು ಸರಿದೂಗಿಸಬೇಕು ಎಂಬ ಸೂಚನೆಯನ್ನೂ ರೈತರು ಪತ್ರಿಕೆಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.