(ಪ್ರಜಾವಾಣಿ .೧೧.೧೯೯೨)

ಹಂಪೆಯ ಕನ್ನಡ ವಿಶ್ವವಿದ್ಯಾಲಯ ತನ್ನ ಪ್ರಥಮ ವಾರ್ಷಿಕೋತ್ಸವವನ್ನು “ನುಡಿಹಬ್ಬ” ಎಂದು ಆಚರಿಸಲಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ನವೆಂಬರ್ ೯ ಹಾಗೂ ೧೦ ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾಡಿನ ಹಾಗೂ ನಾಡಿನ ಹೊರಗಿನ ಗಣ್ಯರು, ವಿದ್ವಾಂಸರು, ಸಾಹಿತಿಗಳು, ಕಲಾವಿದರು ಮುಂತಾದವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಒಂದು ವಿಶ್ವವಿದ್ಯಾಲಯದ ಸಾಧನೆ ಅಳೆಯಲು ಒಂದು ವರ್ಷ ಅತ್ಯಲ್ಪ ಕಾಲ. ಆದರೂ ಅಲ್ಪ ಕಾಲದಲ್ಲಿ ಅದು ನಡೆಸಿದ ಕಾರ್ಯಕ್ರಮ ಹಾಗೂ ಮುಂದಿನ ವರ್ಷಗಳಿಗೆ ಹಾಕಿಕೊಂಡಿರುವ ರೂಪರೇಷಗಳನ್ನು ಗಮನಿಸಿದರೆ ಹಂಪೆಯ ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡಿನ ಜನರ ಆಶೆ-ಆಕಾಂಕ್ಷೆಗಳ ಹತ್ತಿರಕ್ಕೆ ಬರುತ್ತಿರುವುದು ಕಂಡು ಬರುತ್ತಿದೆ.

ಕರ್ನಾಟಕದ ಜನತೆ ಗಮನ ಸೆಳೆದಿರುವ ಈ ವಿಶ್ವವಿದ್ಯಾಲಯಕ್ಕೆ ಅನೇಕ ಹಿರಿ-ಕಿರಿಯ ಸಾಹಿತಿಗಳು ಕವಿಗಳು, ಕಲಾವಿದರು, ವಿದ್ವಾಂಸರು ಹಾಗೂ ಮುಖ್ಯಮಂತ್ರಿ ಶಿಕ್ಷಣ ಸಚಿವರು ಮುಂತಾದ ಗಣ್ಯರು ಭೇಟಿ ನೀಡಿದ್ದಾರೆ.

ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ದಿನ ಅಂದಿನ ಶಿಕ್ಷಣ ಸಚಿವರಾಗಿದ್ದ ಎಂ. ವೀರಪ್ಪಮೊಯಿಲಿ ಕನ್ನಡ ವಿಶ್ವವಿದ್ಯಾಲಯ ವಿಶೇಷಾಡಳಿತಾಧಿಕಾರಿಗಳ ಕಛೇರಿ ಉದ್ಘಾಟನೆ ಮಾಡಿ “ಕನ್ನಡ ಭವ್ಯ ಪರಂಪರೆಯನ್ನು ವಿಶ್ವಮಟ್ಟಕ್ಕೆ ಒಯ್ಯುವುದು ವಿಶ್ವವಿದ್ಯಾಲಯದ ಪ್ರಧಾನ ಗುರಿಯಾಗಲಿ” ಎಂದು ಹಾರೈಸಿದ್ದರು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಯ ಜವಾಬ್ದಾರಿಯನ್ನು ಕನ್ನಡ ವಿಶ್ವವಿದ್ಯಾಲಯ ಹೊತ್ತಿದೆ. ಈ ಅಭಿವೃದ್ದಿಯ ಕಾರ್ಯದಲ್ಲಿ ಸಂಬಂಧಪಟ್ಟ ವಿದ್ವಾಂಸರ ತೀರ್ಮಾನವೇ ಅಂತಿಮ ತೀರ್ಮಾನ. ಸರಕಾರ ಇಂಥ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸುತ್ತಾ ವಿಶ್ವವಿದ್ಯಾಲಯಕ್ಕೆ ಬೇಕಾದ ಧನ ಸಹಾಯಕ್ಕೆ ಕೊರತೆ ಇಲ್ಲ ಎಂದು ತಿಳಿಸಿದರು.

ಕನ್ನಡ ನಾಡು-ನುಡಿ ಕಲೆ, ಸಂಸ್ಕೃತಿ ಹೀಗೆ ಕರ್ನಾಟಕದ ಒಟ್ಟಾರೆ ಬದುಕಿನ ಪ್ರತೀಕವಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಇತರ ಸಾಮಾನ್ಯ ವಿಶ್ವವಿದ್ಯಾಲಯಗಳ ಶಿಕ್ಷಣ ಕ್ರಮಕ್ಕಿಂತ ಭಿನ್ನವಾಗಿ ರೂಪಿಸುವ ಆಶವನ್ನು ಕನ್ನಡ ವಿಶ್ವವಿದ್ಯಾಲಯ ಪ್ರಥಮ ಕುಲಪತಿ ಡಾ. ಚಂದ್ರಶೇಖರ ಕಂಬಾರ ಇತ್ತೀಚೆಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಸತತ ಕ್ರಮ

ಕನ್ನಡ ವಿಶ್ವವಿದ್ಯಾಲಯದ ಗೊತ್ತು ಗುರಿಗಳ ಬಗ್ಗೆ ಕುಲಪತಿಗಳು ಹಂಪೆಯಲ್ಲಿ ಹಾಗೂ ರಾಜ್ಯದ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ವಿವಿಧ ವಿದ್ವಾಂಸರುಗಳ ಜೊತೆಗೆ ಹಲವಾರು ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾಗಿ ಡಾ. ಕೆ.ವಿ.  ನಾರಾಯಣ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಅಭಿವೃದ್ದಿ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ತಜ್ಞರನ್ನೊಳಗೊಂಡ ಒಂದು ಸಲಹಾ ಸಮಿತಿ ರಚಿಸಲಾಗಿದೆ. ಗ್ರಂಥಾಲಯದ ಮುಖ್ಯಸ್ಥರಾಗಿ ಜೆ.ಆರ್. ರಾಮಮೂರ್ತಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ೧೪ ಪ್ರಥಮ ಸಂಶೋಧನಾ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಹಂಪೆಯ ಎದುರು ಬಸವಣ್ಣ ಮಂಟಪದ ಬಲಭಾಗದಲ್ಲಿ ಇರುವ ವಿಸ್ತಾರವಾದ ಮೂರು ಕಲ್ಲುಮಂಟಪಗಳನ್ನು ತಾತ್ಕಾಲಿಕವಾಗಿ ಶೈಕ್ಷಣಿಕ ಕಾರ್ಯಕ್ಕಾಗಿ ತೆಗೆದುಕೊಂಡು ಒಂದರಲ್ಲಿ ಗ್ರಂಥಾಲಯ, ಇನ್ನೊಂದರಲ್ಲಿ ಯೋಜನಾ ಕಾರ್ಯಾಲಯ, ಮತ್ತೊಂದರಲ್ಲಿ ಆಡಳಿತ ಕಛೇರಿಯನ್ನು ಪ್ರಾರಂಭಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯ ಲಾಂಛನವನ್ನು ಈಗಾಗಲೇ ಪ್ರಕಟಿಸಲಾಗಿದೆ. ಹಲ್ಮಿಡಿಶಾಸನ ಮೇಲ್ಭಾಗದಲ್ಲಿ ಇರುವ ಕೆತ್ತನೆಯನ್ನು ಬಳಸಿ ಸಿ. ಚಂದ್ರಶೇಖರ ಲಾಂಛನ ರೂಪಿಸಿದ್ದಾರೆ.

ಸಂಶೋಧನಾ ಕಮ್ಮಟವು ಡಾ. ಎಂ. ಚಿದಾನಂದಮೂರ್ತಿ ಅವರ ನಿರ್ದೇಶನದಲ್ಲಿ ಜರುಗಿತು. ಶಿಕಾಗೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಕೆ. ರಾಮಾನುಜನ್ ಕಮ್ಮಟವನ್ನು ಉದ್ಘಾಟಿಸಿದ್ದರು.

ಕಾವ್ಯ ಬೋಧನ ಕಮ್ಮಟ ೧೯೯೨ ಪ್ರೊ. ಜಿ.ಎಸ್. ಶಿವರುದ್ರಪ್ಪನವರ ನಿರ್ದೇಶನದಲ್ಲಿ ನಡೆದಿದೆ. ಕವಿ ಚನ್ನವೀರ ಕಣವಿ ಕಮ್ಮಟ ಉದ್ಘಾಟಿಸಿದ್ದರು. ಕರ್ನಾಟಕದ ನಾನಾ ಭಾಗಗಳಿಂದ ಬಂದಿದ್ದ ಪ್ರೌಢ ಶಾಲಾ ಅಧ್ಯಾಪಕರು ಈ ಕಮ್ಮಟದ ಲಾಭ ಪಡೆದರು.

ಕನ್ನಡ ವಿಶ್ವವಿದ್ಯಾಲಯ ವಾರ್ತಾ ಪತ್ರ ‘ಚೆಲುವ ಕನ್ನಡ’ ದ್ವೈಮಾಸಿಕ ಪತ್ರಿಕೆಯಲ್ಲಿ  ಪ್ರಕಟಿಸಿರುವ ೧೮ ಮುಖ್ಯ ಉದ್ದೇಶಗಳು ಮುಖ್ಯವಾದವುಗಳು. ಅವುಗಳನ್ನು ಸಾಧಿಸಲು ಹೋರಾಡಬೇಕಾಗಿದೆ. ‘ಹಂಪಿ ಉತ್ಸವ’ ನಡೆಸಲು ಮುಂದೆ ಬಂದಿರುವ ವಿಶ್ವವಿದ್ಯಾಲಯವು ಈವರೆಗೆ ನಡೆಸಿಲ್ಲ. ಪತ್ರಕರ್ತರಿಗೂ ಒಂದು ಕಮ್ಮಟ ನಡೆಸಲಿದೆ. ಈ ರೀತಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಪ್ರವೇಶಿಸುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯೂ ಇದೆ.

‘ನುಡಿಹಬ್ಬ’ದ ಸಂದರ್ಭದಲ್ಲಿ “ಸಮಕಾಲೀನ ಕಲೆ ಮೇಲಿನ ಒತ್ತಡಗಳು” ಮತ್ತು “ನನ್ನ ಕರ್ನಾಟಕ” ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ.

 ಕನ್ನಡ ವಿಶ್ವವಿದ್ಯಾಲಯದ ರೂಪರೇಷ ಸಿದ್ಧಪಡಿಸಲು ನೇಮಕಗೊಂಡಿದ್ದ ಏಕಸದಸ್ಯ ಆಯೋಗದ ಅಧ್ಯಕ್ಷರಾಗಿದ್ದ ಡಾ. ಎಸ್.ಎಸ್. ಒಡೆಯರ್ ಅವರನ್ನು ಗೌರವಿಸಿ-ಸನ್ಮಾನಿಸುವ ಸಮಾರಂಭ ಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಐದು ಪುಸ್ತಕಗಳು ಬಿಡುಗಡೆಯಾಗಲಿವೆ. ಇದರ ಜೊತೆಗೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಕರ್ನಾಟಕದ ಬಗ್ಗೆ ನಡೆಸಿರುವ ಸಂಶೋಧನೆಗಳ ಪರಿಷ್ಕರಣ ಪುಸ್ತಿಕೆಯೂ ಬಿಡುಗಡೆಯಾಗಲಿದೆ. ನುಡಿಹಬ್ಬದ ಎರಡೂ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.