ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡುವ ಕೇಂದ್ರಗಳು ಹೊಸಪೇಟೆ ಬಸ್‌ನಿಲ್ದಾಣದಲ್ಲಾಗಲಿ, ರೈಲ್ವೆ ನಿಲ್ದಾಣದಲ್ಲಾಗಲಿ ಇಲ್ಲದಿರುವುದು ಒಂದು ದೊಡ್ಡ ಕೊರತೆ ಎಂದು ಲೇಖಕ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉದ್ಯೋಗಿ ಶ್ರೀ ಎಂ.ಎಂ. ಶಿವಪ್ರಕಾಶ ಉಲ್ಲೇಖಿಸಲು ವಿಷಾಧಿಸುತ್ತಾರೆ. ಅವರು ಹಂಪಿ ಅಭಿವೃದ್ದಿ ಕುರಿತು ಬರೆದ ವಿವಿಧ ಲೇಖನಗಳಸಾರ ಗಮನಾರ್ಹವಾಗಿದೆ.

ಪ್ರವಾಸಿಗರು ಹಂಪಿಗೆ ಬಂದಿಳಿದೊಡನೆ ಮಾರ್ಗದರ್ಶಿ (ಗೈಡ್) ಪುಸ್ತಕಗಳು ಸುಲಭ ಬೆಲೆಗೆ ಸಿಗುವಂತಾಗಬೇಕು. ಹಂಪಿಯಲ್ಲಿ ಒಂದು ವಾಚನಾಲಯ ಸ್ಥಾಪಿಸಿದರೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಆಸಕ್ತರಿಗೆ, ಪ್ರವಾಸಿಗರಿಗೆ ನೆರವಾಗಬಲ್ಲದು. ನಿಖರವಾದ ವಿಜಯನಗರ ಇತಿಹಾಸ ವಿವರಿಸುವ ಗೈಡ್‌ಗಳು ಲಭ್ಯವಾಗಲು ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಳ್ಳಬೇಕು. ಉತ್ತಮ ಗೈಡ್‌ಗಳ ಕೊರತೆಯನ್ನು ನಿವಾರಿಸಬೇಕು.

ದೇಶ-ವಿದೇಶದ ಪ್ರವಾಸಿಗರನ್ನು ಸಮನಾಗಿ ಕಂಡು ಅವರ ಸೇವೆ ಮಾಡುವ ಮನೋಭಾವದ ಮನಸ್ಸಿನಿಂದ ಊಟ-\ಂಡಿಗಳನ್ನು ಸುಲಭ ದರದಲ್ಲಿ ಪೊರೈಸಲು ಹೋಟೆಲ್‌ನವರು ಮುಂದಾಗಬೇಕು. ಸ್ಥಳೀಯ ಕಲಾವಿದರ ಕುಶಲ ಕೈಗಾರಿಕಾ ಕೃತಿಗಳನ್ನು ಮಾರಾಟ ಮಾಡಲು ಹಂಪಿಯಲ್ಲಿ ಮಾರುಕಟ್ಟೆ ಒದಗಿಸಬೇಕು. ಅದ್ಭುತ ಶಿಲ್ಪಕಲಾ ಸ್ಮಾರಕಗಳ ತೋಟದಲ್ಲಿ ನಿರ್ಭಯವಾಗಿ ತಿರುಗಾಡಲು ಪ್ರವಾಸಿಗರಿಗೆ ಪೋಲೀಸರು ರಕ್ಷಣೆ ಒದಗಿಸುವ ಕ್ರಮಕೈಗೊಳ್ಳಬೇಕು. ಹಂಪಿಯ ಸ್ಮಾರಕಗಳನ್ನು ವೀಕ್ಷಿಸಲು ಐದು ಕಡೆ ಪ್ರವೇಶ ಶುಲ್ಕ ಕಡ್ಡಾಯ ಮಾಡಲಾಗಿದೆ. ಈ ವ್ಯವಸ್ಥೆ ‘ಹಣ ಇದ್ದವರಿಗೆ ಹಂಪೆ’ ಎಂಬ ಹೊಸ ಗಾದೆ ಮಾತನ್ನು ಹುಟ್ಟು ಹಾಕಬಹುದು. ಶುಲ್ಕ ನೀಡಲಾಗದ ಪ್ರವಾಸಿಗರು ಸ್ಮಾರಕಗಳನ್ನು ವೀಕ್ಷಿಸುವ ಆಕಾಂಕ್ಷೆಯಿಂದ ವಂಚಿತರಾಗುವುದೂ ಉಂಟು.

ಪಶ್ಚಿಮ ಕಡಲ ತೀರದಿಂದ ಹಂಪಿಗೆ ಬರುವ ‘ಹಿಪ್ಪಿ’ಗಳ ಹಾವಳಿ ಹಂಪಿಯ ಪಾವಿತ್ರ್ಯ ಹಾಳು ಮಾಡುವುದನ್ನು ನಿಲ್ಲಿಸಲು ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು. ಉನ್ಮಾದ ಪದಾರ್ಥಗಳ ಸೇವನೆ ಹಾಗೂ ಸ್ವೇಚ್ಛಾಚಾರವಾಗಿ ಚುಂಬಿಸುವ ಅಶ್ಲೀಲ ವರ್ತನೆಗಳನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಹಂಪಿ ಪರಿಸರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಹಾಗೂ ಅತಿಕ್ರಮಣವನ್ನು ತಡೆದು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿದಂತೆ ನೋಡಿ ಕೊಳ್ಳುವುದು ಮುಖ್ಯವಾಗಿದೆ ಎನ್ನುತ್ತಾರೆ ಶ್ರೀ ಎಂ.ಎಂ. ಶಿವಪ್ರಕಾಶ.

ಹಂಪಿ ಪರಿಸರದ ಅಭಿವೃದ್ದಿಯ ನೆಪದಲ್ಲಿ ಮಂಟಪಗಳಲ್ಲಿ ಬ್ಯಾಂಕ್ ನಡೆಸುವುದು. ಪವಿತ್ರ ಸ್ಥಳವಾದ ವಿರೂಪಾಕ್ಷ ಗುಡಿಯ ಆವರಣದಲ್ಲಿ ಪೋಲೀಸ್ ಠಾಣೆ ಸ್ಥಾಪಿಸುವುದು. ಪ್ರವಾಸಿಗರು ತಂಗಲು ನಿರ್ಮಿಸಿದ ಮಂಟಪಗಳಲ್ಲಿ ಸ್ಥಳೀಯರು ನಿವಾಸ ಮಾಡುವುದು, ಮಂಟಪ, ಸ್ಮಾರಕಗಳ ಬಳಿಯಲ್ಲಿಯೇ ಗದ್ದೆ, ತೋಟದಲ್ಲಿ ಬೆಳೆ ಬೆಳೆಸುವುದು ಆಗಬಾರದು.

ವಿದೇಶಿಯರ ‘ಆಸಿಡ್‌ಪಾರ್ಟಿ’ಗಳಿಗೆ ಪೋಲೀಸರು ಅನುಮತಿ ನೀಡಬಾರದು. ಗಾಂಜಾ, ಚರಸ್ ಸೇದಿ ಅಸಭ್ಯವಾಗಿ ವರ್ತಿಸುವವರನ್ನೂ ನಿಯಂತ್ರಿಸಬೇಕು. ಈ ಕಾರಣಕ್ಕಾಗಿಯೇ ಶ್ರೀ ಕೊಟ್ಟೂರು ಮಠದ ಸಂಗನ ಬಸವಸ್ವಾಮಿಜೀ ‘ಹಂಪಿ ಪಾವಿತ್ರ್ಯ ಕಾಪಾಡಿ’ ಎಂಬ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.