ಹಂಪಿ ಪರಿಸರದಲ್ಲಿ ಇರುವ ಪ್ರದೇಶಗಳ, ಸಂಸ್ಥೆಗಳ, ಕಲಾತಾಣಗಳ, ಜನ ಜೀವನದ, ಪ್ರಕೃತಿ ನಿಕ್ಷೇಪಗಳ, ಸ್ಮಾರಕಗಳ ಹಾಗೂ ಉದ್ಯಮಗಳ ವಿಚಾರವಾಗಿ ಕಳೆದ ೨೦ ವರ್ಷಗಳಿಂದ ಆಗಾಗ ಕೆಲವು ಲೇಖನಗಳನ್ನು ನಾನು ಬರೆದಿದ್ದೇನೆ. ಹಂಪಿ ಸುತ್ತಮುತ್ತಲ ಆಕರ್ಷಿಕ ತಾಣಗಳ ವಿಚಾರವಾಗಿ ಬರೆದಿರುವುದನ್ನು ಇಲ್ಲಿ ಪುನರ್‌ಉತ್ಪತ್ತಿ ಮಾಡಿದ್ದೇನೆ. ಈ ಲೇಖನಗಳನ್ನು ಓದುವುದರಿಂದ ಅಂದಿನ ಸ್ಥಿತಿಗತಿ ಹಾಗೂ ಅವುಗಳ ವಿಶಿಷ್ಟ ಗುಣಮಟ್ಟಗಳು, ಉಪಯುಕ್ತತೆಗಳು ಗಮನ ಸೆಳೆಯುತ್ತವೆ. ನನ್ನ ವಿವಿಧ ಲೇಖನಗಳನ್ನು ಪ್ರಕಟಿಸಿದ ‘ಪ್ರಜಾವಾಣಿ’ ದಿನಪತ್ರಿಕೆ ಹಾಗೂ ‘ಸುಧಾ’ ವಾರಪತ್ರಿಕೆಗಳಿಗೆ ನನ್ನ ಕೃತಜ್ಞತೆಗಳು. ನನ್ನ ಲೇಖನಗಳ ಜೊತೆಗೆ ಇತರರು ಬರೆದ ಕೆಲವು ಸಂಬಂಧಪಟ್ಟ ಲೇಖನಗಳನ್ನು ಈ ಪುಸ್ತಕದಲ್ಲಿ ಅವರ ಹೆಸರು ಹಾಗೂ ಲೇಖನದ ಶೀರ್ಷಿಕೆಯೊಂದಿಗೆ ತಮ್ಮ ಓದಿಗೆ ನಿವೇದಿಸುತ್ತಿದ್ದೇನೆ.

 

ಈ ಲೇಖನಗಳು ಹಂಪಿ ಪರಿಸರದ ಮೇಲೆ ಬೆಳಕು ಚೆಲ್ಲುತ್ತವೆ ಹಾಗೂ ಅವುಗಳ ಅಭಿವೃದ್ದಿ ಕುರಿತು ಒಂದು ನಿಖರವಾದ ಮಾಹಿತಿ ನೀಡುತ್ತವೆ. ಆಯಾ ಲೇಖನಗಳು ಅಂದು ಪ್ರಕಟವಾದ ರೂಪದಲ್ಲೆ ನಿವೇದಿಸಲಾಗುತ್ತಿದೆ. ಈ ಲೇಖನಗಳು ಹೇಗೆ ಸೌಮ್ಯವಾಗಿ ಅಭಿವೃದ್ದಿಯ ಕಡೆ ಗಮನ ಸೆಳೆಯಲಾಗಿದೆ ಎಂಬುದನ್ನು ಸಹ ಗಮನಿಸಬಹುದು. ಪತ್ರಿಕೆಗಳಲ್ಲಿ ಹಂಪಿ ಪರಿಸರದ ಅಭಿವೃದ್ದಿ ಕುರಿತ ನನ್ನ ಲೇಖನಗಳಲ್ಲಿ ವಿಚಾರ ಹೇಗೆ ಮೂಡಿ ಬಂದಿದೆ ಎಂಬುದನ್ನೂ ಸಹ ನೋಡಬಹುದು.