ಹಂಪಿಯೊಂದು ಸ್ಫೂರ್ತಿಯ, ಶಾಂತಿಯ ತಾಣ. ಅಲ್ಲಿಯ ಸ್ಮಾರಕಗಳ ಬಳಿ ಸುಳಿದಾಡುವಾಗ ಧನ್ಯತಾಭಾವ, ಆನಂದ ಹಾಗೂ ನೆಮ್ಮದಿ ಮನದಲ್ಲಿ ಮೂಡುತ್ತದೆ. ಅನೇಕರು ಹಂಪಿಗೆ ಭೇಟಿ ನೀಡಿದಾಗ ಒಂದಿಲ್ಲಾ ಒಂದು ಹೊಸ ವಿಚಾರ ಮನದಲ್ಲಿ ಮೂಡಿಸಿಕೊಳ್ಳುತ್ತಾರೆ. ಹರಿಯುತ್ತಿರುವ ತುಂಗಭದ್ರಾನದಿಯ ಚಕ್ರತೀರ್ಥ, ಶಿಲ್ಪ ರೂಪದಲ್ಲಿ ಕುಳಿತಿರುವ ದೇವ ದೇವತೆಗಳು, ಚಾರಿತ್ರಿಕ ಮಹಾಪುರುಷರು ನಡೆದಾಡಿದ, ಲಕ್ಷಾಂತರ ಸಾಮಾನ್ಯ ಜನರು ಬದುಕಿ ಬಾಳಿದ ನೆಲೆ, ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ, ವಿಶ್ವಪರಂಪರೆಯ ಸ್ಥಳಗಳಲ್ಲಿ ಒಂದಾದ ಹಂಪಿ ಪರಿಸರದ ಬಗ್ಗೆ ಬರೆಯಲು ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿದ್ದ ಡಾ. ಬಿ.ಎ. ವಿವೇಕ ರೈ ಸೂಚಿಸಿದಾಗ ನನಗೆ ಅತೀವ ಆನಂದವಾಯಿತು. ಕಾರಣವೇನೆಂದರೆ, ನಾನು ಹಂಪಿಯನ್ನು ಅತಿಯಾಗಿ ಪ್ರೀತಿಸುತ್ತೇನೆ, ಹಾಗೂ ಕಳೆದ ೫೦ ವರ್ಷಗಳಿಂದ ಹಂಪಿಯ ವಿಚಾರದಲ್ಲಿ ಎಲ್ಲಿಲ್ಲದ ಅಭಿಮಾನ. ಹಂಪಿ ನನಗೆ ಅನೇಕ ವಿಚಾರಗಳ ಅರಿವು ಮೂಡಿಸಿದೆ, ಸ್ಫೂರ್ತಿ ನೀಡಿದೆ.

ಒಮ್ಮೆ ಹೊಸಪೇಟೆಗೆ ಭೇಟಿ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರಿಗೆ ಪತ್ರಕರ್ತನಾಗಿ ಒಂದು ಪ್ರಶ್ನೆ ಕೇಳಿದ್ದೆ, ಅದಕ್ಕೆ ಉತ್ತವಾಗಿ ಅವರು “ಹಂಪಿ, ಕಲೆಯ ಬದುಕಿನ ದೃಷ್ಟಿಕೋನ ಬೆಳಗುವಂತಾಗಬೇಕು, ವಿವಿಧ ವಿಚಾರಗಳ ಅಧ್ಯಯನ ಕೇಂದ್ರವಾಗಬೇಕು. ಚಾರಿತ್ರಿಕವಾಗಿ, ಕಲಾತ್ಮಕವಾಗಿ ಅಧ್ಯಯನ ಮಾಡುವವರಿಗೆ ಹಲವು ಅರ್ಥಗಳನ್ನು ಹಂಪಿ ನೀಡುತ್ತದೆ. ಇದರ ಅಭಿವೃದ್ದಿಯ ಕಡೆಗೂ ಗಮನಹರಿಸಲು ಕನ್ನಡ ವಿಶ್ವವಿದ್ಯಾಲಯ ಇಲ್ಲಿಗೆ ಬಂದದ್ದು” ಎಂದು ತಿಳಿಸಿದ್ದರು.

ಹಂಪಿ ಪರಿಸರದ ಅಭಿವೃದ್ದಿ ನಿರೀಕ್ಷಿಸಿದ ಮಟ್ಟದಲ್ಲಿ ಆಗಿಲ್ಲ. ಹಂಪಿಯ ಸಮಗ್ರ ಅಭಿವೃದ್ದಿಗೆ ರಾಜಕಾರಣಿಗಳ ಇಚ್ಛಾಶಕ್ತಿ, ವಿಚಾರವಂತರ ಪ್ರಯತ್ನ, ಸಂಘ-ಸಂಸ್ಥೆಗಳ ಸಹಕಾರ ಹಾಗೂ ಸಾರ್ವಜನಿಕರ ಸಕ್ರಿಯ ಪಾಲುಗಾರಿಕೆ ಅಗತ್ಯವಾಗಿದೆ. ಪತ್ರಿಕೆಗಳು ಹಂಪಿಯ ವಿಚಾರವಾಗಿ ಮೂಡಿಸಿದ ಬೆಳಕು ಸಾಲದು, ಅವು ಇನ್ನಷ್ಟು ತೇಜ – ಸಂಕರ್ಷ ಕೇಂದ್ರಗೊಳಿಸಬೇಕಾಗಿದೆ ಎನಿಸುತ್ತದೆ.

ಈ ಪುಸ್ತಕವನ್ನು ಬರೆಯಲು ಅವಕಾಶ ನೀಡಿದ ಹಂಪಿ, ಕನ್ನಡ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನಾನು ಚಿರಋಣಿ. ಈಗಿನ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಹಾಗೂ ಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ಪ್ರಕಟಣೆ ಹೊರಬರಲು ಆಡಳಿತಾತ್ಮಕವಾಗಿ ನೆರವಾಗಿದ್ದಾರೆ, ಅವರಿಗೆ ನನ್ನ ಕೃತಜ್ಞತೆಗಳು. ಸಲಹೆ-ಸಹಕಾರ ನೀಡಿದ ವಿಮರ್ಶಕ ಹೆಚ್.ಎಸ್. ರಾಘವೇಂದ್ರರಾವ್, ಕಥೆಗಾರ ಡಾ. ಕರೀಗೌಡ ಬೀಚನಹಳ್ಳಿ, ಅಭಿಪ್ರಾಯ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್, ಲೇಖಕ ಡಾ. ಮೊಗಳ್ಳಿ ಗಣೇಶ್, ವಿಚಾರವಂತ ಡಾ.ಟಿ.ಆರ್. ಚಂದ್ರಶೇಖರ ಅವರಿಗೆ ಧನ್ಯವಾದಗಳು.

ನನ್ನ ಪೂಜ್ಯ ಗುರುಗಳಾದ ದಿವಂಗತ ಹೆಚ್. ತುಕಾರಾಂ ರಾವ್ ಇವರಿಗೆ ಸ್ಮರಿಸಿ, ನನ್ನ ಪತ್ನಿ ಸರೋಜನಿ, ಮಗ ಪ್ರದೀಪ ಆರ್.ಜಿ., ಕೆನಡದಲ್ಲಿ ಇರುವ ಅಳಿಯ ಸುಧಾಕರ, ಮಗಳು ರಜನಿ ಜರ್ಮನಿಯಲ್ಲಿರುವ ಪ್ರಶಾಂತ ಆರ್.ಜಿ. ಹಾಗೂ ‘ಪ್ರಜಾವಾಣಿ’ ಬಳಗ ಇವರ ನೆರವಿಗೆ ನಾನು ಕೃತಜ್ಞನಾಗಿದ್ದೇನೆ.

ಕೆ. ರಾಮಚಂದ್ರ
ಹೊಸಪೇಟೆ