(ಪ್ರಜಾವಾಣಿ ೧೯೯೧)

ಹಂಪೆಯಲ್ಲಿ ಉತ್ಸವದ ಮೇಲೆ ಉತ್ಸವ ನಡೆಯುತ್ತಿವೆ. ಆದರೆ ಸ್ಮಾರಕಗಳು ಒಂದೊಂದಾಗಿ ಹಾಳಾಗುತ್ತಿವೆ. ಅವುಗಳ ರಕ್ಷಣೆ ಈಗ ಆಗದಿದ್ದರೆ ಅವು ನಮ್ಮ ಪಾಲಿಗೆ ಎಂದೆಂದಿಗೂ ಇಲ್ಲ. ಭೂತಕಾಲದ ಈ ಸ್ಮಾರಕಗಳು ಭವಿಷ್ಯದ ಪೀಳಿಗೆಗೆ ಉಳಿಯ ಬೇಡವೇ?

ವಿಶ್ವಪರಂಪರೆಯ ಸ್ಥಳಗಳಲ್ಲೊಂದಾದ ವಿಜಯನಗರ ಸಾಮ್ರಾಜ್ಯದ (ಹಂಪೆಯ) ಅವಶೇಷಗಳ ಬಗ್ಗೆ ನಿರ್ಲಕ್ಷ್ಯ ಎಂದೆಂದಿಗೂ ಸಲ್ಲದು. ಹಂಪೆಯ ಅನೇಕ ಸ್ಮಾರಕಗಳ ರಕ್ಷಣೆಯ ಜೊತೆಗೆ ಮಹಾದ್ವಾರಗಳನ್ನು ಮತ್ತು ಮಂಟಪಗಳನ್ನು ಸಂರಕ್ಷಿಸುವಲ್ಲಿ ವಿಳಂಬ ಎದ್ದು ಕಾಣುತ್ತಿದೆ.

ಮಹಾದ್ವಾರಗಳ ಮಂಟಪ ಗೋಪುರಗಳ ಮೂಲಕ ರಸ್ತೆ ನಿರ್ಮಿಸಲಾಗಿದ್ದು ಆ ಮೂಲಕ ಓಡಾಡುವ ವಾಹನಗಳ ಕಂಪನದಿಂದ ದ್ವಾರ ಮಂಟಪಗಳಿಗೆ ಅಪಾಯವಿದೆ. ಈಗಾಗಲೆ ಕೃಷ್ಣ ದೇವಸ್ಥಾನದ ಉತ್ತರ ದಿಕ್ಕಿನ ಮಹಾದ್ವಾರ ಗೋಪುರ ವಾಹನಗಳ ಓಡಾಟದಿಂದ ಮುರಿದು ಬಿದ್ದಿದೆ. ದಕ್ಷಿಣ ದಿಕ್ಕಿನ ಮಹಾದ್ವಾರ ಮಂಟಪ ಗಟ್ಟಿಯಾಗಿದೆ. ಅದರ ಮೂಲಕವೇ ಇಂದು ವಾಹನಗಳ ಓಡಾಟ ನಡೆದಿದೆ. ಈ ಮಹಾದ್ವಾರಗಳ ಉದ್ಘಾಟನೆಯನ್ನು ಶ್ರೀ ಕೃಷ್ಣದೇವರಾಯ ೧೫೧೩ರಲ್ಲಿ ಮಾಡಿದ ಉಲ್ಲೇಖ ಇದೆ. ಉಗ್ರನರಸಿಂಹ ವಿಗ್ರಹದ  ಮೂಲಕ ಬರುವ ಈ ರಸ್ತೆಯ ದಿಕ್ಕನ್ನು ತಪ್ಪಿಸಬೇಕಾಗಿದೆ.

ಹಂಪೆಯ ಪುನರುತ್ಥಾನ ಸಮಿತಿಯವರು ಈ ಮಹಾದ್ವಾರದ ರಕ್ಷಣೆಗೆ ಸಲಹೆ ಮಾಡಿ ಕೆಲವು ವರ್ಷಗಳೇ ಕಳೆದಿವೆ. ಆದರೆ ಈವರೆಗೂ ಅದು ರಕ್ಷಣೆ ಪಡೆದಿಲ್ಲ, ಮಾರ್ಗ ಬದಲಾಗಿಲ್ಲ.

ಆನೆಗೊಂದಿಯಿಂದ ವಿಜಯನಗರ ಸಾಮ್ರಾಜ್ಯಕ್ಕೆ ಬರಲು ಒಂದು ಮಾರ್ಗದಲ್ಲಿ ಸುಂದರವಾದ ಮಹಾದ್ವಾರ ನಿರ್ಮಿಸಲಾಗಿದೆ. ಈ ದ್ವಾರದ ಮೂಲಕವೇ ಇಂದು ಪ್ರವಾಸಿಗರು ತಮ್ಮ ವಾಹನಗಳಲ್ಲಿ ಪುರಂದರದಾಸರ ಮಂಟಪ ಹಾಗೂ ವಿಜಯವಿಠಲ ದೇವಸ್ಥಾನಕ್ಕೆ ಹೋಗಲು ಸರ್ಕಸ್ ಮಾಡಬೇಕಾಗುತ್ತದೆ. ಉದ್ದನೆಯ ವಾಹನ ಬಂದರೆ ಈ ದ್ವಾರದಿಂದ ತೂರಲು ಸಾಧ್ಯವಿಲ್ಲ.

ಅಪಾಯದ ಅಂಚಿನಲ್ಲಿ ಇರುವ ಈ ಮಹಾದ್ವಾರದ ರಕ್ಷಣೆಗೆ ಪುರಾತತ್ವ ಇಲಾಖೆ ಯವರು ಮುಂದಾಗಬೇಕಾಗಿದೆ. ಈ ದ್ವಾರ ಬಲು ಇಕ್ಕಟ್ಟಾಗಿರುವುದರಿಂದ ವಾಹನಗಳು ಕಟ್ಟಡಕ್ಕೆ ತಾಗಿ ಕಲ್ಲುಗಳ ಕೊರೆತವು ಸಂಭವಿಸುತ್ತಿದೆ. ಈ ಮಾರ್ಗ ಬಿಟ್ಟರೆ ಬೇರೆ ಮಾರ್ಗ ಪುರಂದರದಾಸರ ಮಂಟಪಕ್ಕೆ ವಾಹನಗಳ ಮೂಲಕ ಹೋಗಲು ಇಲ್ಲವಾಗಿದೆ.

ಹಂಪೆಯಲ್ಲಿ ನೂರಾರು ಕಲ್ಲಿನ ಮಂಟಪಗಳಿವೆ. ಅವುಗಳಲ್ಲಿ ಅನುಕೂಲಕ್ಕೆ ಬರುವ ಮಂಟಪಗಳನ್ನು ದುರಸ್ತಿ ಮಾಡಿ ಸಾಮಾನ್ಯ ಪ್ರವಾಸಿಗರಿಗೆ ತಂಗಲು, ವಿಶ್ರಾಂತಿ ಪಡೆಯಲು ಅನುವು ಮಾಡಿದರೆ ಪ್ರವಾಸಿ ವರ್ಷಕ್ಕೆ ಒಂದು ಅರ್ಥ ಬರುವುದು.

ಬಳ್ಳಾರಿ ಜಿಲ್ಲಾ ಪರಿಷತ್ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಸುಮಾರು ೧೦ ಲಕ್ಷ ರೂಪಾಯಿ ಖರ್ಚಿನಿಂದ ಎದುರು ಬಸವಣ್ಣ ವಿಗ್ರಹದ ಎರಡೂ ಬದಿಗೆ ಕಲ್ಲಿನ ಮಂಟಪಗಳ ಪುನರ್‌ನಿರ್ಮಾಣ ಮಾಡಲಾಗಿದೆ. ಈ ಮಂಟಪಗಳ ಉಪಯೋಗ ಅಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ತುಂಬಾ ಅನುಕೂಲವಾಗಿದೆ. ಪುರಂದರದಾಸರ ಉತ್ಸವ, ಹಂಪಿ ದಸರಾ ಉತ್ಸವ, ಭಾವೈಕ್ಯ ಶಿಬಿರಗಳು ಹಾಗೂ ಧಾರ್ಮಿಕ ಸಮಾರಂಭಗಳು ನಡೆದಾಗ ಸಾರ್ವಜನಿಕರಿಗ ನೆರಳು-ನೆಲೆ ನೀಡುವಲ್ಲಿ ಉಪಯುಕ್ತವಾಗಿವೆ.

ಪುರಾತತ್ವ ಇಲಾಖೆಯವರು ಈ ಮಂಟಪಗಳೊಂದರಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಪ್ರೇಕ್ಷಕರಿಗೆ ಆಸೀನರಾಗಲು ವಿಶಾಲವಾದ ಆವರಣವಿದೆ. ಸುತ್ತಲೂ ಬೆಟ್ಟ ಗುಡ್ಡಗಳು, ಹೊಲಗದ್ದೆಗಳ ಸುಂದರ ಪರಿಸರ ಪ್ರವಾಸಿಗರಿಗೆ ಮುದ ನೀಡುತ್ತವೆ.

ಹಂಪೆಯ ಶ್ರೀ ವಿರೂಪಾಕ್ಷ ದೇವಸ್ಥಾನದ ರಾಜ ಬೀದಿಯಲ್ಲಿ ಬರುವ ಮಂಟಪಗಳನ್ನು ಬಹಳಷ್ಟು ಜನ ಸ್ಥಳೀಯರು ಆಕ್ರಮಿಸಿದ್ದಾರೆ. ಅವುಗಳನ್ನು ಪ್ರವಾಸಿಗರಿಗೆ ತೆರವು ಮಾಡುವುದು ಉತ್ತಮ. ಈ ಮಂಟಪಗಳು ದುರಸ್ತಿ ಕಾರ್ಯವನ್ನು ರೂ. ೧.೯ ಲಕ್ಷ ವೆಚ್ಚದಿಂದ ಮಾಡು ವುದಾಗಿ ರಾಜ್ಯ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕರಾದ ದೇವರಾಜ ಅವರು ವೈಸೂರಿನಿಂದ ಇತ್ತೀಚೆಗೆ ಪ್ರಕಟಣೆಯನ್ನು ಪತ್ರಿಕೆಗಳಲ್ಲಿ ನೀಡಿದ್ದರು. ಆದರೆ ಈವರೆವಿಗೂ ಯಾವ ಎರಡು ಅಂತಸ್ತಿನ ಅಥವಾ ಒಂದು ಅಂತಸ್ತಿನ ಮಂಟಪ ದುರಸ್ತಿ ಕಂಡಿಲ್ಲ. ಮಳೆ-ಗಾಳಿ-ಬಿಸಿಲಿನ ಹೊಡೆತಕ್ಕೆ ಅನೇಕ ಸ್ಮಾರಕಗಳು ಕುಸಿಯುತ್ತಿವೆ. ಕೋಟೆ ಕೊತ್ತಲಗಳು ಬೀಳುತ್ತಿವೆ. ಕಲ್ಲಿನ ರಥ ಬಿರುಕು ಬಿಡುತ್ತಿದೆ. ಉಗ್ರನರಸಿಂಹ ಶಸ್ತ್ರಕ್ರಿಯೆ ಮಾಡಿಸಿಕೊಂಡು ಶಾಂತವಾಗಿ ಯೋಗ ಮುದ್ರೆಯಲ್ಲಿ ಕುಳಿತಿದ್ದಾನೆ. ಮಂಟಪಗಳ ಮಹಾದ್ವಾರಗಳು ನಮ್ಮನ್ನು ರಕ್ಷಿಸಿರಿ ಎಂದು ಬರುವ ಪ್ರವಾಸಿಗಳಿಗೆ ಕೂಗಿ ಕೂಗಿ ಹೇಳುವಂತೆ ಭಾಸವಾಗುತ್ತಿದೆ.

ಉಜ್ವಲ ಪರಂಪರೆಯ ನೆನಪು ಮಾಡಿಕೊಂಡುವ ಈ ಸ್ಮಾರಕಗಳ ಉಳಿವು ಅಗತ್ಯವಾಗಿದೆ. ಮುಂದಿನ ಪೀಳಿಗೆಯವರಿಗೆ ಇವುಗಳ ಪರಿಚಯ ಮಾಡಿಕೊಡಲು ರಕ್ಷಿಸಬೇಕಾಗಿದೆ. ಭಾರತೀಯರಿಗೆ ಅಮೂಲ್ಯ ಸ್ಮಾರಕಗಳನ್ನು ಉಳಿಸಿಕೊಳ್ಳುವ ಪರಿಜ್ಞಾನ ಇಲ್ಲ ಎಂಬುದನ್ನು ತೊರಗೂಡದೆ ನಮ್ಮ ಪರಂಪರೆ, ಕಲೆ ಹಾಗೂ ಹಿಂದಿನ ಕಾಲದ ರಾಯಭಾರಿಗಳನ್ನು ಉಳಿಸಿಕೊಳ್ಳಲು ಈ ಪ್ರವಾಸಿ ವರ್ಷದಲ್ಲಿ ಪುರಾತತ್ವ ಇಲಾಖೆಯವರು ತ್ವರಿತವಾಗಿ ಮುಂದಾಗ ಬೇಕಾಗಿದೆ.

ಈಗ ಡಿಸೆಂಬರ್‌ನಲ್ಲಿ ಹಂಪಿ ಉತ್ಸವ ಮತ್ತೆ ನಡೆಯಲಿದೆ, ಆಗಲಾದರೂ ಈ ಅವಶೇಷಗಳ ರಕ್ಷಣೆ ಬಗ್ಗೆ ದೀಕ್ಷೆ ತೊಡುವರೇ? ಬರೀ ಉತ್ಸವಗಳು ಸ್ಮಾರಕಗಳನ್ನು ರಕ್ಷಿಸಲಾರವು.

ಹಂಪಿಯಲ್ಲಿ ಈಗ ಹಿಪ್ಪಿಗಳ ಉಪಟಳ (ಪ್ರಜಾವಾಣಿ ೧೯೯೨)

ಹಂಪಿಯಲ್ಲಿ ಪ್ರಿಸ್ಕೂ ಪೆಂಟಿಂಗ್ ಹಾಗೂ ಭಿತ್ತಿ ಚಿತ್ರಗಳು ಅಪರೂಪದ್ದಾಗಿವೆ. ಈ ಚಿತ್ರ ಕಲೆಗಳಲ್ಲಿ ಪರಂಪರೆಯ ಕಲೆ ಮೂಡಿ ಬಂದಿದೆ. ಶ್ರವಣಬೆಳಗೊಳ, ಅಜಂತ, ಲೇಪಾಕ್ಷಿಗಳಲ್ಲಿ ಇರುವ ಚಿತ್ರಗಳನ್ನು ಯಾವ ರೀತಿ ಕಾಪಾಡಿ ಇಟ್ಟಿದ್ದಾರೊ ಅದೇ ರೀತಿ ಪರಂಪರೆಯ ಪ್ರತಿಭಾವಂತ ಕಲಾವಿದರಿಂದ ಹಂಪಿಯ ಚಿತ್ರಗಳನ್ನು ಮರು ಕೃತಿ ಮಾಡಿ ಇಡುವ ಕಾರ್ಯ ಆಗಬೇಕಾಗಿದೆ.

ಹಂಪಿಯಲ್ಲಿರುವ ಅವಶೇಷಗಳು ಮಂಗ ಮಯವಾಗುತ್ತಿರುವ ಬಗ್ಗೆ ಹಾಗೂ ಒಮ್ಮೆ ನೋಡಿದ, ಚಿತ್ರ ಬಿಡಿಸಿದ ಸ್ಮಾರಕ ಅದೇ ಸ್ಥಿತಿಯಲ್ಲಿರದೇ ಇರುವುದು ತೀರಾ ವಿಷಾದನೀಯ.

ಹಂಪಿಯ ಪ್ರತಿ ಮೂಲೆಯನ್ನು ನೋಡಿ ಚಿತ್ರ ಬಿಡಿಸಿರುವ ಕಲಾವಿದರು ಪುನಃ ಕೆಲಕಾಲದ ನಂತರ ಬಂದು ನೋಡಿದರೆ ತಾವು ಮೊದಲು ಕಂಡ ಸುಂದರ ಸಹಜ ನೋಟ ಕಾಣಸಿಗದೆ ಪೇಚಾಡುವಂತಾಗಿದೆ.

ಜೈನ ಬಸದಿಗಳ ಗುಂಪು, ನದಿಯ ದಂಡೆ, ರಸ್ತೆಯ ಬದಿಗಳು ಶೌಚಾಲಯದ ಕೊರತೆ ಯಿಂದ ಹೊಲಸು ತುಂಬಿ ನಾರುತ್ತಿವೆ. ಇಂಥ ಸ್ಥಳಗಳಲ್ಲಿ ಗಂಟೆಗಟ್ಟಲೆ ಕುಳಿತು ಚಿತ್ರ ಬಿಡಿಸುವುದು ಅಸಾಧ್ಯವಾಗಿದೆ.

ಹಂಪಿ ಗೋಪುರದ ಬಲಭಾಗದ ಗುಡ್ಡಗಳಲ್ಲಿ ಸ್ವಾಭಾವಿಕ ಗುಹೆ ಇದೆ. ನೋಡುವವರಿಗೆ ರೋಮಾಂಚನವಾಗುವ ಈ ಸ್ಥಳ ಈಗ ಶೌಚ ತುಂಬಿ ನಾರುತ್ತಿದೆ.

ಇನ್ನೂ ವಿದೇಶಿ ಹಿಪ್ಪಿಗಳು ಸ್ವೇಚ್ಛೆಯಾಗಿ ತಿರುಗಾಡುವುದನ್ನು ಹಾಗೂ ಗವಿಗಳಲ್ಲಿ, ಮಂಟಪಗಳಲ್ಲಿ ಹಾಗೂ ಸ್ಮಾರಕಗಳ ವಾಸಿಸುವುದನ್ನು ನಿಯಂತ್ರಿಸಬೇಕಾಗಿದೆ. ಅವರಿಗಾಗಿ ಒಂದು ಪ್ರತ್ಯೇಕ ಸ್ಥಳ ನಿಯೋಜಿಸಿ ಅಲ್ಲಿಯೇ ವಾಸಿಸುವಂತಾಗಬೇಕು ಎಂಬುದು ಖ್ಯಾತ ಕಲಾವಿದರ ಸಲಹೆ.

ಹಂಪಿಯಲ್ಲಿ ಚಿತ್ರಕಲೆಗೆ, ಪರಿಸರ ಕಲ್ಪನೆಗೆ ಅವಕಾಶ ವಿಪುಲವಾಗಿರುವುದರಿಂದ ಹಾಗೂ ಚಿಂತನೆ ಮಾಡಿ ಅಂದಿನ ಚಾರಿತ್ರಿಕ ಘಟನೆಗಳನ್ನು ಕುಂಚದಿಂದ ಮೂಡಿಸಲು ಅನುಕೂಲ ವಿರುವುದರಿಂದ ಕಲಾವಿದರು ಹಂಪಿಗೆ ಬಂದು ಚಿತ್ರ ಚಿತ್ರಸಲು ಬಯಸುತ್ತಾರೆ. ಚಿತ್ರ ಕಲಾವಿದರಿಗೆ ಈ ಸ್ಥಳ ಪ್ರಶಸ್ತವಾಗಿದೆ. ಈ ಕಾರಣದಿಂದ ಪ್ರತಿವರ್ಷ ಚಿತ್ರ ಕಲಾವಿದರು ಚಿತ್ರಕಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಹಂಪಿಗೆ ಬರುತ್ತಾರೆ.

ಇತಿಹಾಸದ ವಸ್ತು, ವೈಭವದ ಕಾಲ, ಶಿಲ್ಪಕಲೆಯ ಕುಸರಿ ಕೆಲಸ, ಬಂಡೆ ಗುಡ್ಡಗಳ ಸಾಲು, ಹೊಲಗದ್ದೆಯ ಪೈರು ಹಾಗೂ ನದಿಯ ದಂಡೆಯ ಅಪೂರ್ವ ಸೌಂದರ್ಯ ಇರುವ ಹಂಪೆ ಚಿತ್ರ ಕಲಾವಿದರ ಕಾಶಿಯಾಗಿ ಆಕರ್ಷಣೆಗೊಂಡಿದೆ.

ತರಕಾರಿ ಹಾಗೂ ಮಣ್ಣಿಂದ ಸಿದ್ಧಪಡಿಸಿದ ಬಣ್ಣ ಈವರೆವಿಗೂ ಉಳಿದು ಬಂದಿರುವುದು ಹಂಪಿಯ ಚಿತ್ರಗಳಲ್ಲಿ ಕಂಡು ಬಂದಿದೆ. ದಿನೇ ದಿನೇ ಹಾಳಾಗುತ್ತಿರುವ ಅಪೂರ್ವದ ಚಿತ್ರಗಳನ್ನು ಕಲೆಯಲ್ಲಿ ಸೆರೆ ಹಿಡಿದರೆ ಮಾತ್ರ ವಾಸ್ತವತೆ ತಿಳಿಯಲು ಹಾಗೂ ಮುಂದಿನ ಪೀಳಿಗೆಯ ಕಲಾವಿದರಿಗೆ ನೆರವಾಗಬಲ್ಲದು.

ಅಂದಿನ ಕಾಲದ ಕಲಾವಿದರು ಶ್ಲೋಕಗಳ ವರ್ಣನೆಯನ್ನು ತಿಳಿದುಕೊಂಡು ಚಿತ್ರ ಅಥವಾ ಮೂರ್ತಿ ರೂಪಿಸುತ್ತಿದ್ದರು. ಇಂದಿಗೂ ಆ ಲಕ್ಷಣ, ಆಭಣರಣ, ಮುಖಮುದ್ರೆ, ಹಸ್ತಗಳ ಚಿನ್ಹೆ ನೋಡಿ ತಿಳಿಯಬಹುದು.

ರವಿ ಕಾಣದನ್ನು ಕಲಾವಿದ ಸೃಷ್ಟಿಸಬಲ್ಲ. ಹಂಪಿ ಗೋಪುರದ ಮುಂದೆ ಕಲ್ಲು ರಥವನ್ನು ನಿಲ್ಲಿಸಿ ಚಿತ್ರಿಸಬಲ್ಲ. ತನ್ನದೇ ಆದ ಸಂಪ್ರದಾಯದ ಶೈಲಿಯಲ್ಲಿ ಹಂಪಿಯ ಸಾವಿರಾರು ಸುಂದರ ನೋಟಗಳನ್ನು ಕಲಾವಿದರು ಚಿತ್ರಗಳಲ್ಲಿ ಸೆರೆ ಹಿಡಿಯಲು ಇಲ್ಲಿ ವಿಪುಲ ಅವಕಾಶವಿದೆ. ಇಂಥ ಹಂಪಿಯನ್ನು ಸುರಕ್ಷಿತವಾಗಿ ಕಾಪಾಡುವ ಕೆಲಸ ಸಂಬಂಧಪಟ್ಟ ಇಲಾಖೆ ಮಾಡಬೇಕಾಗಿದೆ.