ಪ್ರತಿ ವರ್ಷ ಜನವರಿಯಿಂದ ಡಿಸೆಂಬರ್‌ರವರೆಗೆ ಭಾರತೀಯರು ೬, ೮೬, ೫೨೫ ಹಾಗೂ ವಿದೇಶಿಯರು ೧೨, ೨೨೦, ಒಟ್ಟು ೬, ೯೮, ೭೪೫ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ. ಈ ಅಂಕಿ ಅಂಶಗಳನ್ನು ಹೊಸಪೇಟೆಯ ಪ್ರವಾಸೋದ್ಯಮ ಇಲಾಖೆ ದಾಖಲೆ ಮಾಡಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯಿಂದ ಕಮಲಾಪುರದ ಬಳಿ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ೩೨ ಸುಸಜ್ಜಿತ ಕೋಣೆಗಳ ಸೌಲಭ್ಯ ಹಾಗೂ ಊಟ-ತಿಂಡಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹೋಟೆಲ್ ಪಕ್ಕದಲ್ಲಿ ‘ಯಾತ್ರಿ ನಿವಾಸ್’ ಒಂದನ್ನು ಈಚೆಗೆ ನಿರ್ಮಿಸಲಾಗಿದೆ. ಅಲ್ಲಿ ಮಧ್ಯಮ ವರ್ಗದವರಿಗೆ ೮ ಕೋಣೆ ಹಾಗೂ ೨ ಡಾರ್ಮಿಟರಿ ವ್ಯವಸ್ತೆ ಮಾಡಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಾರ ೨೨೮ ಎಕರೆ ಜಮೀನಿನಲ್ಲಿ ಹಂಪಿ ಬಳಿ ‘ವಿನೋದ ತಾಣ’ ನಿರ್ಮಿಸಲು ಖಾಸಗಿಯವರಿಗೆ ಆಹ್ವಾನ ನೀಡಲಾಗಿದೆ. ಹಂಪಿ, ತುಂಗಭದ್ರಾ ಜಲಾಶಯ ವೀಕ್ಷಣೆಗಾಗಿ ಒಂದು ಬಸ್ ವ್ಯವಸ್ಥೆಯನ್ನು ಇಲಾಖೆ ಮಾಡಿದೆ. ಪ್ರತಿದಿನ ಓಡುವ ಈ ಬಸ್ ಟಿಕೇಟ್ ದರ ರೂ. ೧೨೫.

ಹಂಪಿಯಲ್ಲಿ ಪ್ರಕಾಶ ಗ್ರಾಮದ ಬಳಿ ೧೦೧ ಮಳಿಗೆಗಳ ಹಾಗೂ ಡಾರ್ಮಿಟರಿ ಇರುವ “ಪ್ರವಾಸಿ ವಾಣಿಜ್ಯ ಸಂಕೀರ್ಣ” ಒಂದನ್ನು ರೂ. ೫ ಕೋಟೆ ವೆಚ್ಚದಲ್ಲಿ ನಿರ್ಮಿಸಲು ಯುನೊಸ್ಕೋ ಸಂಸ್ಥೆಯ ಪರವಾನಿಗೆ ಸಿಗಬೇಕಾಗಿದೆ. ಈಗಾಗಲೆ ನಿರ್ಮಾಣ ಹಂತದಲ್ಲಿರುವ ಸಂಕೀರ್ಣದ ಕಾಮಗಾರಿ ನಿಲ್ಲಿಸಲಾಗಿದೆ.

ಹಂಪಿ ಬಜಾರ್, ಸ್ನಾನಘಾಟ (ತುಂಗಭದ್ರಾ ನದಿಯ ದಂಡೆ ಬಳಿ) ಕಮಲಮಹಲ್, ರಾಣಿಸ್ನಾನ ಗೃಹಗಳ ಬಳಿ ಸುಲಭ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪ್ರತಿಯೊಂದಕ್ಕೆ ರೂ. ೩೨ ಲಕ್ಷ ಮಂಜೂರಾಗಿದೆ ಎಂದು ಇಲಾಖೆ ತಿಳಿಸುತ್ತದೆ.

ಕಮಲಾಪುರದಲ್ಲಿ ನೂತನ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಲು ರೂ. ೯೬.೪೬ ಲಕ್ಷ ಮಂಜೂರಾಗಿದೆ. ಅದೇ ಪ್ರಕಾರ ಆನೆಗುಂದಿಯಲ್ಲಿ ರೂ. ೬೯.೯೦ ಲಕ್ಷ ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಿಸಲಾಗುವುದು. ಪಂಪಾ ಸರೋವರದ ಅಭಿವೃದ್ದಿಗೆ ರೂ. ೪೬.೭೦ ಲಕ್ಷ ಹಾಗೂ ಸಣಾಪುರ ಪ್ರವಾಸಿ ಮಂದಿರಗಳನ್ನು ಮೇಲಂತಸ್ತಿಗೆ ಏರಿಸಲು ರೂ. ೩೦.೭೧ ಲಕ್ಷ ಮಂಜೂರಾಗಿದೆ ಎಂದು ಇಲಾಖೆ ವಿವರಿಸುತ್ತದೆ.

ಹಂಪಿಯ ಸ್ಮಾರಕಗಳ ಮೌಲ್ಯಗಳ ಕಾರಣವಾಗಿ ವಿಶ್ವಪರಂಪರೆಯ ಸ್ಥಳಗಳ ಪಟ್ಟಿಯಲ್ಲಿ ಸೇರಿಸಿ ಸುಮಾರು ಎರಡು ದಶಕಗಳೆ ಕಳೆದಿವೆ. ಆದರೂ ಸ್ಮಾರಕ ವೀಕ್ಷಕರಿಗೆ ಸೌಲಭ್ಯ, ಮಾಹಿತಿ, ಅನುಕೂಲತೆ ಕಲ್ಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೀನ-ಮೇಷ ಮಾಡುತ್ತಿರುವುದು, ಯೋಜನೆಗಳನ್ನು ಕೇವಲ ಹಾಳೆಯ ಮೇಲೆ ಮೂಡಿಸಿ ಪ್ರವಾಸಿಗರ ಮೂಗಿಗೆ ತುಪ್ಪ ಹಚ್ಚುವ ಹುನ್ನಾರ ನಡೆಯುತ್ತಿರುವುದು ವಿಷಾದನೀಯ. ಪ್ರವಾಸೋದ್ಯಮ ಇಲಾಖೆ ಈ ಐತಿಹಾಸಿಕ ಮತ್ತು ಪುಣ್ಯಕ್ಷೇತ್ರದ ಕಾರಣವಾಗಿ ಸಾಕಷ್ಟು ಲಾಭ ಪಡೆಯು ತ್ತಿದ್ದರೂ, ಈ ಸ್ಥಳದ ಅಭಿವೃದ್ದಿ ಕಡೆ ಕೇವಲ ಯೋಜನೆಗಳನ್ನು ರೂಪಿಸುತ್ತಿದೆ. ಪ್ರತ್ಯಕ್ಷವಾಗಿ ವೀಕ್ಷಕರಿಗೆ ಕಲ್ಪಿಸಬಹುದಾದ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಹಿಂದೆ ಬಿದ್ದೆದೆ ಎಂದರೆ ತಪ್ಪಾಗದು.