(ಪ್ರಜಾವಾಣಿ ೧೯೯೧)

ಹಂಪಿಯ ಸಮೀಪ ಹೊಸಪೇಟೆ ತಾಲ್ಲೂಕಿನಲ್ಲಿರುವ ಕಮಲಾಪುರ ಕೆರೆ ಶತಮಾನಗಳ ಕಾಲ ಬೆಳೆಗೆ ನೀರುಣಿಸಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಕೆರೆಯಿಂದ ಕಮಲದ ಹೂಗಳನ್ನು ರಾಜಧಾನಿಗೆ ಪೂರೈಸಲಾಗುತ್ತಿತ್ತು. ಕುಡಿಯುವ ನೀರು ಸಹ ಈ ಕೆರೆಯಿಂದ ಪೂರೈಸಲಾಗುತ್ತಿತ್ತು ಎಂದು ಕೆಲವು ಪುರಾವೆಗಳು ತಿಳಿಸುತ್ತವೆ.

ಹೊಲ ಗದ್ದೆಗಳಿಗೆ ಜೀವಾಳವಾಗಿರುವ ಈ ಕೆರೆಯನ್ನು ನಿರ್ಲಕ್ಷಿಸಲಾಗಿದೆ. ಹೂಳು ತುಂಬಿಕೊಂಡು ಅತಿಕ್ರಮಣದ ಕೊರೆತದಿಂದ ಕಮಲಾಪುರ ಕೆರೆ ವಿನಾಶದ ಅಂಚಿನಡೆಗೆ ಸಾಗುತ್ತಿದೆ.

ಸರ್ಕಾರಕ್ಕೆ ನೀಡಿದ ಅರ್ಜಿಗಳು, ಮನವಿ ಪತ್ರಗಳು ಬಿನ್ನವತ್ತಳೆಗಳು ಯಾವ ಪ್ರಭಾವ ವನ್ನೂ ಬೀರಿಲ್ಲ. ಈ ಭಾಗದ ರೈತರು ಈ ಕೆರೆಯಿಂದ ಎಷ್ಟು ಲಾಭವನ್ನು ಪಡೆದಿದ್ದಾರೋ ಅಷ್ಟೆ ಕಷ್ಟವನ್ನೂ ಇಂದು ಅನುಭವಿಸುತ್ತಿದ್ದಾರೆ.

ಕಮಲಾಪುರ ಕೆರೆಯನ್ನು ಕ್ರಿ.ಶ. ೧೫೦೦ ರಿಂದ ನೀರಾವರಿಗೆ ಬಳಸಲಾಗುತ್ತಿದೆ. ಈ ಕೆರೆಯನ್ನು ಯಾರು, ಯಾವಾಗ ಕಟ್ಟಿಸಿದರು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಸದ್ಯ ೧೨೦೦ ಎಕರೆ ಜಮೀನಿಗೆ ನೀರಾವರಿ ಒದಗಿಸಿದ ಕೆರೆಯ ಅಂಗಳ ೪೭೬ ಎಕರೆ ಇದೆ. ಈ ಕೆರೆಗೆ ರಾಯ ಬಸವಣ್ಣ ವಿಜಯನಗರ ಕಾಲುವೆಗಳಿಂದ ಹಾಗೂ ಪವರ್‌ಕೆನಾಲ್ ತೂಬಿನಿಂದಲೂ ನೀರು ಹರಿಸಲಾಗುತ್ತಿದೆ. ಈ ಕೆರೆಯ ಸಮೀಪದಲ್ಲಿ ಇರುವ ಕೆರೆಗಳೆಂದರೆ ಗೌರಮ್ಮನ ಕೆರೆ ೧೭೬ ಎಕರೆ ಜಮೀನಿಗೆ ನೀರಾವರಿ ಒದಗಿಸಿದೆ. ಅಳ್ಳಿಕೆರೆ ೧೦೪ ಎಕರೆಗೆ ಹಾಗೂ ವಿಠಲಾಪುರ ಕೆರೆ ೭೪ ಎಕರೆಗೆ ನೀರು ನೀಡಿವೆ. ಕಮಲಾಪುರದ ನೀರಾವರಿ ಇಲಾಖೆಯ ಉಪವಿಬಾಗದ ಸಹಾಯಕ ಅಭಿಯಂತರರ ಪ್ರಕಾರ ಈ ನಾಲ್ಕು ಕೆರೆಗಳು ೫೦೦ ವರ್ಷ ಹಳೆಯವು ಇವುಗಳಲ್ಲಿ ಹೂಳು ತುಂಬಿದೆ, ಅದನ್ನು ತೆಗೆಸಬೇಕು ಎನ್ನುತ್ತಾರೆ.

ಕಮಲಾಪುರ ಕೆರೆಯಲ್ಲಿ ೧೯೫೦ರಲ್ಲಿ ಆರು ಆಡಿಗಳಷ್ಟು ಹೂಳು ತುಂಬಿತ್ತು. ಆದರೆ ಇಂದು ೧೨ ಅಡಿಗಳು ಹೂಳು ತುಂಬಿದೆ. ಕೆರೆಯ ಒಟ್ಟು ಆಳ ೨೮ ಅಡಿಗಳು ಎನ್ನಲಾಗಿದೆ. ಹಿಂದಿನ ಶ್ಯಾನಭೂಗರಾದ ಲಕ್ಷ್ಮಣಗೌಡ ಹಾಗೂ ಇತರ ರೈತರ ಪ್ರಕಾರ ಕೆರೆಯಲ್ಲಿ ಇಷ್ಟು ಹೂಳು ತುಂಬಲು ಮುಖ್ಯ ಕಾರಣವೆಂದರೆ ಕೆರೆಯ ಅಚ್ಚುಕಟ್ಟಿನಲ್ಲಿ (ಕ್ಯಾಚ್‌ಮೆಂಟ್) ಪ್ರದೇಶದಲ್ಲಿ ನಡೆಯುತ್ತಿರುವ ಕಬ್ಬಿಣ ಅದಿರು ಅಗೆಯುವ ಕಾರ್ಯ.

ಮಳೆಗಾಲದಲ್ಲಿ ಮಳೆ ನೀರು ಹರಿದು ಬರುವಾಗ ಗಣಿಗಳಿಂದ ಅಗೆದು ಹಾಕಲಾದ ಮಣ್ಣು ಕೊಚ್ಚಿಕೊಂಡು ಬರುತ್ತದೆ. ಇದರಿಂದ ಕೆರೆಯಲ್ಲಿ ಹೂಳು ತುಂಬಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕೆರೆ ಪ್ರತಿವರ್ಷ ಕಳೆದುಕೊಳ್ಳುತ್ತಿದೆ.

ಇತ್ತೀಚಿಗೆ ಹೊಸಪೇಟೆ ವಿಭಾಗದ ಕಬ್ಬಿಣ ಅದಿರಿಗೆ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದ ಅದಿರು ಅಗೆಯುವ ಕಾರ್ಯಭರದಿಂದ ಸಾಗಿದೆ. ಹೊಸಪೇಟೆ ಬಳ್ಳಾರಿ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಒಟ್ಟು ಅದಿರು ಉತ್ಪಾದನೆಯ ಶೇಕಡ ೬೦ ಪ್ರಮಾಣದ ಅದಿರು ತೆಗೆಯಲಾಗುತ್ತಿದೆ.

ರೈತ ಸಂಘದ ಮನವಿ

ಕಳೆದ ವರ್ಷ ಕಮಲಾಪುರದ ರೈತಸಂಘ ಒಂದು ಮನವಿ ಪತ್ರವನ್ನು ಆಗಿನ ಕೇಂದ್ರದ ಉಕ್ಕು ಮತ್ತು ಗಣಿ ಸಚಿವರಾಗಿದ್ದ ಶ್ರೀಮಾನ್ ಬಸವರಾಜ ಪಾಟೀಲ ಅನ್ವರಿ ಇವರಿಗೆ ಕಮಲಾಪುರದಲ್ಲಿ ಅರ್ಪಿಸಿದ್ದರು. ಆ ಮನವಿಯಲ್ಲಿ ಕೆರೆಗೂ ಹಾಗೂ ರೈತರಿಗೂ ನಿಕಟ ಸಂಬಂಧ ಹಾಗೂ ಕೆರೆಯ ಮಹತ್ವವನ್ನು ವಿವರಿಸಲಾಗಿದೆ. ಕೆರೆ ಇಲ್ಲದೆ ಕಮಲಾಪುರದ ಅಸ್ತಿತ್ವವೇ ಇಲ್ಲದಾಗುತ್ತದೆ. ಆದ್ದರಿಂದ ಗಣಿ ಮಾಲಿಕರಿಂದ ವಿಶೇಷ ತೆರಿಗೆ ವಸೂಲಿ ಮಾಡಿ ಕೆರೆಗೆ ಬರುತ್ತಿರುವ ಹೂಳನ್ನು ತಡೆಗಟ್ಟಲು ಹಾಗೂ ಬೇರೆ ಕಡೆಗೆ ತಿರುಗಿಸಲು ಹಾಗೂ ಕೆರೆಯ ಅಭಿವೃದ್ದಿಗೆ ಬಳಸಲು ಕೋರಲಾಗಿತ್ತು.

ಕಮಲಾಪುರದ ರೈತಸಂಘದ ಅಧ್ಯಕ್ಷ ಎ. ಸೀತಾರಾಮಸಿಂಗ್ ಇವರು ಹಿಂದಿನ ರಾಜ್ಯಪಾಲ, ಪಿ. ವೆಂಕಟಸುಬ್ಬಯ್ಯನವರಿಗೆ ಒಂದು ಮನವಿ ಅರ್ಪಿಸಿ ಕೆರೆಯ ಅಂಗಳದಲ್ಲಿ ಆಗುತ್ತಿರುವ ಅತಿಕ್ರಮಣ ವ್ಯವಸಾಯವನ್ನು ತಡೆಗಟ್ಟಲು ಹಾಗೂ ಸುಮಾರು ೨೦೦ ಎಕರೆ ಅನಧಿಕೃತ ವ್ಯವಸಾಯವನ್ನು ಮಾಡುತ್ತಿರುವುದನ್ನು ತಡೆಗಟ್ಟಲು ನೀರಾವರಿ ಇಲಾಖೆಯವರು ಸೂಕ್ತಕ್ರಮ ಕೈಗೊಳ್ಳಲು ಅಗ್ರಹ ಪಡಿಸಿದ್ದರು.

ತುಂಗಭದ್ರಾ ನದಿಯಿಂದ ಹರಿದು ಬರುವ ನೀರಿಗಾಗಿ ಇರುವ ತುರ್ತಾ ಕಾಲುವೆಯಲ್ಲಿ ಹೂಳು ಹಾಗೂ ಮರಳು ತುಂಬಿ ನೀರು ಹರಿದು ಬರಲು ಅಡಚಣೆಯಾಗಿರುವುದನ್ನು ಸರಿಪಡಿಸಲು ಮನವಿ ಮಾಡಲಾಗಿತ್ತು.

ಕೆಲವು ಅನುಭವಿ ರೈತರ ಪ್ರಕಾರ ಹೂಳು ತೆಗೆಯಲು ಕಾರ್ಯ ಪಟ್ಟಿ ಸಿದ್ಧಪಡಿಸಿಲ್ಲ. ಇದರಿಂದ ಹೂಳು ತೆಗೆಯುವ ಕಾರ್ಯಕ್ಕೆ ತೊಂದರೆಯಾಗಬಹುದು ಎನ್ನುತ್ತಾರೆ.

.೬೫ ಲಕ್ಷ ರೂ. ಯೋಜನೆ

ಸಹಾಯಕ ಅಭಿಯಂತರರು ಕಮಲಾಪುರ ಕೆರೆಯ ಬಗ್ಗೆ ವಿವರಿಸುತ್ತಾ ಅದು ಮೊದಲು ಲೋಕೋಪಯೋಗಿ ಇಲಾಖೆಯವರ ಉಸ್ತುವಾರಿಯಲ್ಲಿತ್ತು. ಕೆಲವು ವರ್ಷಗಳ ಹಿಂದೆ ನೀರಾವರಿ ಇಲಾಖೆಗೆ ವರ್ಗಾಯಿಸಲಾಗಿದೆ. ದಾಖಲೆಯ ಪ್ರಕಾರ ೭೧೪ ಎಕರೆ ಜಮೀನಿಗೆ ನೀರಾವರಿ ಒದಗಿಸಲಾಗಿದೆ. ಕೆರೆಯಲ್ಲಿ ಹೂಳು ತುಂಬಿರುವುದನ್ನು ತಡೆಗಟ್ಟಲು ಕಣಿವೆ ಹತ್ತಿರ ಒರಟು ಕಲ್ಲುಗಳಿಂದ ವಡ್ಡರಕಟ್ಟೆ ಕಟ್ಟಲು ಸಲಹೆ ಮಾಡಿದ್ದರು. ಕಾಲುವೆ ಮತ್ತು ಅಭಿವೃದ್ದಿಗಾಗಿ ೧.೬೫ ಲಕ್ಷ ರೂ. ಮುಂಜೂರಿಗಾಗಿ ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಮಲಾಪುರ ಪುರಸಭೆಯ ವ್ಯಾಪ್ತಿಗೆ ಬರುವ ಹೊಸ ಚಿನ್ನಾಪುರ ಕೆರೆಯನ್ನು ಕಟ್ಟಲು ವರ್ಲ್ಡ್ ಬ್ಯಾಂಕಿನವರು ೩೦ ಲಕ್ಷ ರೂ. ಖರ್ಚು ಮಾಡಿದ್ದಾರೆ. ಆದರೆ ಮಳೆರಾಯನ ಕೃಪೆ  ಆ ಕೆರೆಗೆ ಇನ್ನೂ ಆಗಿಲ್ಲ. ಕಮಲಾಪುರ ಕೆರೆಗೆ ನೀರಿನ ಪೂರೈಕೆಯ ಕೊರತೆ ಇಲ್ಲ. ಈ ಕೆರೆಯನ್ನು ಏಕೆ ದುರಸ್ತಿ ಮಾಡಬಾರದು? ಈ ಕೆರೆಯ ನೀರುಣಿಸುವಿಕೆಯಿಂದ ಸುಮಾರು ೨ ಕೋಟಿ ಬೆಲೆಯ ವ್ಯವಸಾಯ ಉತ್ಪನ್ನ ಪ್ರತಿ ವರ್ಷ ಉತ್ಪಾದಿಸಲಾಗುತ್ತಿದೆ. ಕಮಲಾಪುರ ಪಟ್ಟಣ ದಿನೆ ದಿನೆ ವೃದ್ದಿಯಾಗುತ್ತಿರುವ ೨೦,೦೦೦ ಜನಸಂಖ್ಯೆವುಳ್ಳ ಪಟ್ಟಣ ಕೆರೆಯನ್ನೆ ಅವಲಂಬಿತವಾಗಿದೆ. ಸರ್ಕಾರ ಹೂಳು ತೆಗೆಸುವ ಹಾಗೂ ಅತಿಕ್ರಮಣ ತಡೆಗಟ್ಟುವ ಕ್ರಮ ಕೈಗೊಳ್ಳಬೇಕಾಗಿದೆ.

ದೋಣಿ ವಿಹಾರ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದವರು ಕಮಲಾಪುರ ಕೆರೆಯಲ್ಲಿ ದೋಣಿ ವಿವಾಹ ವ್ಯವಸ್ಥೆಯನ್ನು ಏರ್ಪಾಡು ಮಾಡುವ ಸನ್ನಾಹದಲ್ಲಿದ್ದಾರೆ. ಇದರಿಂದ ಹಂಪೆಗೆ ಬರುವ ಪ್ರವಾಸಿಗರೂ ಹಾಗೂ ಕಮಲಾಪುರದಲ್ಲಿ ನಿರ್ಮಿಸಿರುವ ಪ್ರವಾಸಿ ಸಮುಚ್ಚಯದಲ್ಲಿ ತಂಗುವವರು ಈ ದೋಣಿ ವಿಹಾರದ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ಕೆರೆಯಲ್ಲಿರುವ ಹೂಳು ಮತ್ತು ಪಾಚಿ ತೆಗೆದು ಸೂಕ್ತ ಸುರಕ್ಷಿತಾ ಕ್ರಮಕೈಗೊಳ್ಳಬೇಕಾಗುತ್ತದೆ.