(ಪ್ರಜಾವಾಣಿ ಸಾಪ್ತಾಹಿಕ ಪುರವಣಿ ೩೦..೨೦೦೫ಪ್ರೇಮಕುಮಾರ ಹರಿಯಬ್ಬೆ)

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯನ್ನು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಹೀಗೆ ಕರೆದುಕೊಳ್ಳುವುದು ಕೇವಲ ಅಭಿಮಾನಕ್ಕೆ ಅಲ್ಲ. ವಿಜಯನಗರದ ಅರಸರು ಸಾಹಿತ್ಯ, ಸಂಸ್ಕೃತಿ, ಕಲೆಗೆ ನೀಡಿದ ಪ್ರೋತ್ಸಾಹ, ಕವಿಗಳು, ಪಂಡಿತೋತ್ತಮರಿಗೆ ನೀಡಿದ ಆಶ್ರಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಹಂಪೆಯನ್ನು ಸಾಂಸ್ಕೃತಿಕ ರಾಜಧಾನಿ ಎಂದು ಅಭಿಮಾನದಿಂದ ಕರೆಯುತ್ತಾರೆ. ಇತಿಹಾಸಿಕ ಹಂಪೆ ಕಲೆ ವಾಸ್ತುಶಿಲ್ಪ, ಸಾಂಸ್ಕೃತಿಕ ಹಿರಿಮೆ, ಪರಂಪರೆಯ ಸಂಕೇತವೂ ಆಗಿತ್ತು. ವಿಜಯನಗರ ಸಾಮ್ರಾಜ್ಯ ಮತ್ತು ರಾಜಧಾನಿ ಹಂಪೆಯ ಕೇರಳ ಉತ್ತುಂಗ ಶಿಖರ ತಲುಪಿದ್ದು ಕೃಷ್ಣದೇವರಾಯರ ಕಾಲದಲ್ಲಿ. ವಿಜಯನಗರ ಅರಸರ ಕಾಲದಲ್ಲಿ ನಡೆಯುತ್ತಿದ್ದ ನಾಡಹಬ್ಬ ‘ದಸರಾ’ ಹಂಪೆಯ ವೈಭವದ ಸಂಕೇತವಾಗಿತ್ತು. ವೈಭವದ ಹಂಪೆಗೆ ಭೇಟಿಕೊಟ್ಟ ಪ್ರವಾಸಿ ಇತಿಹಾಸಕಾರರೆಲ್ಲಾ ತಮ್ಮ ಬರಹಗಳಲ್ಲಿ ನಾಡಹಬ್ಬದ ವೈಭವವನ್ನು ದಾಖಲಿಸಿದ್ದಾರೆ.

ನವರಾತ್ರಿ ಆಚರಣೆಯಲ್ಲಿ ಮಹಾನವಮಿದಿಬ್ಬದ ಪ್ರದೇಶದಲ್ಲಿ ನಡೆಯುತ್ತಿದ್ದವು. ಮಹಾನವಮಿಯದಿಬ್ಬ ಹಂಪೆಯ ಪ್ರಮುಖ ಸ್ಮಾರಕಗಳಲ್ಲಿ ಒಂದು. ನವರಾತ್ರಿ ಆಚರಣೆಗಾಗಿ ವಿಜಯನಗರದ ಅರಸರು ಮಹಾನವಮಿದಿಬ್ಬವನ್ನು ನಿರ್ಮಿಸಿದರು ಎನ್ನುವ ಅಭಿಪ್ರಾಯವೂ ಇದೆ. ಸಹಸ್ರಾರು ಜನರು ಕುಳಿತು ಉತ್ಸವ ನೋಡಲು ಅನುಕೂಲವಾಗುವಂತೆ ದಿಬ್ಬವನ್ನು  ನಿರ್ಮಿಸಿದ್ದರು. ಮಹಾನವಮಿ ವೀಕ್ಷಿಸಲು ಬರುವ ವಿದೇಶಿಯರು, ವಿಜಯನಗರದ ಮಾಂಡಲಿಕರು, ಅರಸು ಪರಿವಾರದವರು ಮತ್ತು ಸಾಮಾನ್ಯ ಪ್ರಜೆಗಳಿಗೆ ಬೇಕಾದ ಸೌಲಭ್ಯಗಳ್ನು ದಿಬ್ಬದ ಪ್ರದೇಶದಲ್ಲಿದ್ದವರಂತೆ, ಉತ್ಸವದ ಭಾಗವಾಗಿ ನಡೆಯುತ್ತಿದ್ದ ಸಂಗೀತ ನೃತ್ಯ ಸಾಂಪ್ರದಾಯಿಕ ಕುಸ್ತಿ ಮತ್ತು ಮನೋಲ್ಲಾಸದ ಚಟುವಟಿಕೆಗಳು ಮಹಾನವಮಿದಿಬ್ಬ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದ್ದವು. ಉತ್ಸವ ವಿಜಯನಗರದ ಒಂದು ಮುಖ್ಯ ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ‘ನವರಾತ್ರಿಯ ಉತ್ಸವದ ವೈಭವವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ’ ಎನ್ನುವ ಮಾತನ್ನು ವಿದೇಶಿ ಪ್ರವಾಸಿ ಪಯಸ್ ಹೇಳಿದ್ದಾನೆ.

ಇದು ಉತ್ಪ್ರೇಕ್ಷೆಯ ಮಾತಲ್ಲ. ಪಯಸ್ ಹಂಪೆಗೆ ಭೇಟಿ ನೀಡಿದಾಗ ವಿಜಯನಗರ ಸಾಮ್ರಾಜ್ಯದ ವೈಭವ ಉತ್ತುಂಗಕ್ಕೆ ಏರಿದ್ದ ಕಾಲ. ಮುತ್ತು ರತ್ನಗಳನ್ನು ಬೀದಿಯಲ್ಲಿ ದವಸ ಧಾನ್ಯಗಳಂತೆ ಮಾರಾಟ ಮಾಡುತ್ತಿದ್ದ ಸುಭೀಕ್ಷೆಯ ಕಾಲ, ಆಸುಭಿಕ್ಷಾ ಕಾಲದ ನವರಾತ್ರಿ ಉತ್ಸವ ಈಗ ನನೆಪು ಮಾತ್ರ,  ಆ ಕಾಲದ ನಾಡಹಬ್ಬವನ್ನು ದೃಶ್ಯ ವೈಭವಗಳನ್ನು ಇಂದು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ತಾಳಿಕೋಟಿ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು. ಯುದ್ಧದನಂತರ ಹಂಪೆಗೆ ದಾಳಿ ಇಟ್ಟ ಶತ್ರು ಸೈನಿಕರು ಸುಮಾರು ಆರು ತಿಂಗಳ ಕಾಲ ಹಂಪೆಯಲ್ಲಿ ಬೀಡುಬಿಟ್ಟು ಸಾಮ್ರಾಜ್ಯದ ವೈಭವ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದ ದೇವಾಲಯಗಳು, ಅರಮನೆಗಳು, ಕೋಟೆ-ಕೊತ್ತಲಗಳು, ಎಲ್ಲವನ್ನು ಧ್ವಂಸ (ವಿರೂಪಾಕ್ಷ ದೇವಾಲಯ ಒಂದನ್ನು ಹೊರತುಪಡಿಸಿ) ಮಾಡಿದರು. ಸಾಮ್ರಾಜ್ಯದ ಪತನ ಮತ್ತು ಹಂಪೆಯ ನಾಶದೊಂದಿಗೆ ವೈಭವದ ನವರಾತ್ರಿ ಉತ್ಸವವೂ ಕೊನೆಗೊಂಡಿತು.

ಹಲವು ಶತಮಾನಗಳ ಕಾಲ ಸಾಹಿತ್ಯ, ಕಲೆ, ಸಂಸ್ಕೃತಿಯ ಪೋಷಣೆ ಮಾಡಿಕೊಂಡು ಬಂದ ಹಂಪೆ ಸಾಮ್ರಾಜ್ಯ ಪತನದ ನಂತರದ ಮುರ‍್ನಾಲ್ಕು ಶತಮಾನಗಳ ಕಾಲ ಅಕ್ಷರಶಃ ಸದಾ ಬಣ್ಣಗೊಡುವ ಹಾಳು ಹಂಪೆಯಾಯಿತು. ಹಾಳು ಹಂಪೆಗೆ ಕಾಲಿಡಲೂ ಜನ ಅಂಜುತ್ತಿದ್ದರು. ನೂರಾರು ವರ್ಷಗಳ ಕಾಲ ಸತತವಾಗಿ ಮಳೆ, ಗಾಳಿ, ಬಿಸಿಲು ಇತ್ಯಾದಿಗಳು ಪ್ರಾಕೃತಿಕ ದಾಳಿಗೆ ಸಿಕ್ಕ ಹಂಪೆಯ ಸ್ಮಾರಕಗಳು ಮಣ್ಣಿನಡಿ ಹೂತು ಹೋದವು. ವಿಜಯನಗರ ಸಾಮ್ರಾಜ್ಯ ಜನಸಾಮಾನ್ಯರ ಪಾಲಿಗೆ ಮರತೆ ಹೋಯಿತು. ಹಂಪೆಗೆ ಮತ್ತೆ ಜೀವ ಬಂದದ್ದು ಬ್ರಿಟಿಷ್‌ರ ಆಡಳಿತ ಕಾಲದಲ್ಲಿ ರಾಬರ್ಟ್ ಸಿವೆಲ್ ತಮ್ಮ “ಫರ್ಗಾಟನ್ ಎಂಪೈರ್” ಕೃತಿಯ ಮೂಲಕ ವಿಶ್ವದ ಗಮನ ಸೆಳೆದರು. ಹಂಪೆಯ ಸ್ಮಾರಕಗಳನ್ನು ನಾಳಿನ ಪೀಳಿಗೆಯವರಿಗೆ ಸಂರಕ್ಷಿಸುವ ಕಾರ್ಯ ಪ್ರಾರಂಭವಾದದ್ದು ಬ್ರಿಟಿಷರ ಕಾಲದಲ್ಲಿ. ದೇಶಕ್ಕೆ ಸ್ವತಂತ್ರ ಬಂದ ನಂತರ ಹಂಪೆಯ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೆತ್ತಿಕೊಂಡವು. ಸ್ಮಾರಕಗಳ ರಕ್ಷಣೆಯ ಹೊಣೆ ಹೊತ್ತುಕೊಂಡ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಹಂಪೆಯ ಪ್ರಮುಖ ಸ್ಮಾರಕಗಳ ಪ್ರದೇಶದಲ್ಲಿ ಉತ್ಖನನ ನಡೆಸುವ ಯೋಜನೆಯನ್ನು ೧೯೭೦ ದಶಕದ ಕೊನೆಯ ಭಾಗದಲ್ಲಿ ರೂಪಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತಂದಿತು. ಸುಮಾರು ೧೦ ವರ್ಷಗಳ ಕಾಲ ನಡೆದ ಉತ್ಖನನದ ನಂತರ ಮಣ್ಣಿನಡಿ ಹೂತು ಹೋದ ಹಲವಾರು ಕಟ್ಟಡಗಳು, ದೇವಾಲಯಗಳ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿತು. ಮಹಾನವಮಿದಿಬ್ಬದ ಪ್ರದೇಶದಲ್ಲಿನ ವಿಶಾಲ ಕಟ್ಟಡಗಳು ಸೇರಿದಂತೆ ಹಲವಾರು ಕಟ್ಟಡಗಳ ಕುರುಹುಗಳು ಬೆಳಕಿಗೆ ಬಂದವು. ಹಂಪೆಯ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ ಮತ್ತು ವ್ಯವಸ್ಥಿತ ನಗರ ನಿರ್ಮಾಣದಲ್ಲಿ ವಿಜಯನಗರ ಕಾಲದ ವಾಸ್ತುಶಿಲ್ಪಗಳು ಮತ್ತು ತಂತ್ರಜ್ಞರಿಗೆ ಇದ್ದ ವಿಶೇಷ ಜ್ಞಾನ ಇತ್ಯಾದಿಗಳಿಗೆ ಕನ್ನಡಿ ಹಿಡಿದವು. ಹಂಪೆಯ ಸ್ಮಾರಕಗಳಿಗೆ ಜೀವ ತುಂಬುವ ಕೆಲಸದ ಜೊತೆಗೆ ವೈಭವದ ನಾಡಹಬ್ಬವನ್ನು ಮತ್ತೆ ಆಚರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿತು. ೧೯೮೬ರಲ್ಲಿ ‘ಹಂಪೆ  ಉತ್ಸವ’ದ ಹೆಸರಿನಲ್ಲಿ ನಾಡಹಬ್ಬ ಮತ್ತೆ ಆರಂಭವಾಯಿತು. ಮೂರ‍್ನಾಲ್ಕು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಉತ್ಸವ ಪ್ರತಿವರ್ಷ ಆಚರಿಸುವಂತೆ ಸರ್ಕಾರ ವಿಶೇಷ ಆದೇಶ ಹೊರಡಿಸಿ ಅನಿರ್ಬಾಧಿತವಾಗಿ ನಡೆಯುವಂತೆ ಮಾಡಿತು.

ಸಾಹಿತ್ಯ ಭಾಷೆ, ಕಲೆ ಮತ್ತು ಸಂಸ್ಕೃತಿಗಳನ್ನು ಪೋಷಿಸಿಕೊಂಡು ಕಾಲಕಾಲಕ್ಕೆ ಪುನರುಜ್ಜೀವನ ನಡೆದು ಬಂದದ್ದು ವಿಜಯನಗರ ಅರಸರ ಕಾಲದಲ್ಲಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂಪೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನೆ ಮತ್ತು ಜ್ಞಾನ ಸಂಚಯ ಕಾರ್ಯಗಳಿಗೆ ಉತ್ತೇಜನ ನೀಡಿದೆ.

ಹಂಪೆ ಉತ್ಸವವನ್ನು ವಿಜಯನಗರ ಕಾಲದ ನಾಡಹಬ್ಬದ ನೆನಪಿನಲ್ಲಿ ಜನರ ಉತ್ಸವವಾಗಿ ಆಚರಣೆಯಾಗಬೇಕು ಎನ್ನುವುದು ಸರ್ಕಾರದ ಆಶಯ. ಬದಲಾದ ಕಾಲಮಾನಕ್ಕೆ ಅನುಗುಣ ವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳಲ್ಲಿ ಸ್ಥಳೀಯ ಕಲಾವಿದರೂ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸುತ್ತಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಬರುವ ಜನಪದ ಕಲಾ ತಂಡಗಳು ನಡೆಸಿಕೊಡುವ ಕಾರ್ಯ ಕ್ರಮಗಳು ಉತ್ಸವಕ್ಕೆ ವೈವಿಧ್ಯತೆಯ ಸೊಬಗನ್ನು ನೀಡುತ್ತಿವೆ. ಉತ್ಸವದ ಕೊನೆಯ ದಿನ ನೂರಾರು ಜನಪದ ತಂಡಗಳು ಆಕರ್ಷಕ ಮೆರವಣಿಗೆಯಲ್ಲಿ ಪಾಲುಗೊಳ್ಳುತ್ತವೆ. ಮೆರವಣಿಗೆ ನೋಡುವುದೇ ಒಂದು ಸೊಗಸು.

ಉತ್ಸವಕ್ಕೆ ಪೂರಕವಾಗಿ ಕೃಷಿ ವಸ್ತು ಪ್ರದರ್ಶನ, ರಾಶಿಗಳ ಪ್ರದರ್ಶನ, ಎತ್ತಿನ ಬಂಡಿಗಳ ಓಟದ ಸ್ಪರ್ಧೆ ರೈತಾಪಿ ಜನರಿಗೆ ರೂಪಿಸಲಾಗಿದೆ. ಸರ್ಕಾರ ನಡೆಸುವ ಉತ್ಸವ ಜನೋತ್ಸವವಾಗಿ ಆಚರಿಸಲ್ಪಡಬೇಕು ಎನ್ನುವುದು ಇದರ ಉದ್ದೇಶ. ಈ ವರ್ಷದ ಉತ್ಸವ ನವೆಂಬರ್ ೩ ರಿಂದ ಮೂರು ದಿನಗಳ ಕಾಲ ನಡೆಯಲಿದೆ.