(ಪ್ರಜಾವಾಣಿ ೧೯೯೩)

ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ ಹಾಗೂ ಎರಡನೆ ಘಟಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಅದರ ಸಾಧಕ-ಬಾಧಕಗಳ ಕುರಿತು ಅವಲೋಕನ ಇಲ್ಲಿದೆ.

ಪ್ರತಿನಿತ್ಯ ವಿದ್ಯೆ ಹುಟ್ಟಬೇಕು. ಬೌದ್ದಿಕ ಅಗತ್ಯಗಳ ಬೇಡಿಕೆ ಜನರಿಂದ ಬರಬೇಕು ಹಾಗೂ ಅದರ ಆರೈಕೆಯಾಗಬೇಕು. ಈ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡಬಲ್ಲದು. ಇದನ್ನು ರಕ್ಷಿಸುವವರು ಹಾಗೂ ಬೆಳೆಸುವವರು ಕನ್ನಡಿಗರು ಎಂದು ತಮ್ಮ ಅಭಿಪ್ರಾಯವನ್ನು ಕುಲಪತಿ ಡಾ. ಚಂದ್ರಶೇಖರ ಕಂಬಾರ ಹೇಳುತ್ತಾರೆ.

ಬುಡಕಟ್ಟು ಜನಾಂಗದ ಮಹತ್ವ ಅರಿಯಲು ಒಂದು ಯೋಜನೆಯನ್ನು ರೂಪಿಸಲು, ಅವರಲ್ಲಿ ಬೆಳೆದು ಬಂದ ಮಹಾಕಾವ್ಯಗಳನ್ನು ಕಲಾವಿದರು ಹೇಗೆ ಹಾಡುತ್ತಾರೆ ಎಂಬುದನ್ನು ಹಾಗೂ ಸಂಪ್ರದಾಯದ ಒಳಗುಟ್ಟುಗಳನ್ನು ಅರಿಯುವ ಪ್ರಯತ್ನ ಮಾಡಲಾಗುತ್ತಿದೆ. ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಮೌಲ್ಯದಿಂದ, ಇತಿಹಾಸದ ಬೆಳಕಿನಿಂದ ಇನ್ನೊಂದು ಬಾರಿ ಕರ್ನಾಟಕ ನೋಡುವ ಸಾಹಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತಿದೆ.

ಅಂತರ್‌ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳು ಕಥೆ, ಕಾವ್ಯ, ಕಮ್ಮಟಗಳು ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿವೆ. ಕೃಷಿಪದ ನಿಘಂಟು ಆಯಗಾರರ ಕೋಶ, ವಿಜ್ಞಾನ ವಿಶ್ವಕೋಶ, ಜಾನಪದ ಕಲೆಗಳ ವಿಶ್ವಕೋಶ, ಸಮಗ್ರ ಕರ್ನಾಟಕ ಇತಿಹಾಸ, ಕನ್ನಡದ ಇತಿಹಾಸ ಮುಂತಾದ ಅಮೂಲ್ಯ ಸಂಪುಟಗಳು ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದ ಮೂಲಕ ಪ್ರಕಟವಾಗಲು ಸಿದ್ಧವಾಗುತ್ತಿವೆ.

ಪಠ್ಯಪುಸ್ತಕ ಯೋಜನೆ ವಿಶ್ವವಿದ್ಯಾಲಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈಗಾಗಲೇ ಪ್ರಥಮ ವರ್ಷ ಪಿ.ಯು.ಸಿ. ತರಗತಿಗೆ ನಾಲ್ಕು ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಲಾಗಿದೆ. ಪಿ.ಯು.ಸಿ. ದ್ವಿತೀಯ ವರ್ಷದ ತರಗತಿಗೆ ಒಟ್ಟು ೧೮ ಪುಸ್ತಕಗಳು ವಿಜ್ಞಾನ ಹಾಗೂ ಕಲಾ ಭಾಗಗಳಲ್ಲಿ ಈ ಬಾರಿ ಪ್ರಕಟಿಸಲಿದೆ.

ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದ ಪುಸ್ತಕಗಳಿಗೆ ತುಂಬಾ ಬೇಡಿಕೆ ಇದೆ. ಪ್ರತಿ ತಿಂಗಳು ಒಂದು, ಒಂದೂವರೆ ಲಕ್ಷ ರೂಪಾಯಿಗಳ ಪುಸ್ತಕ ಮಾರಾಟವಾಗುತ್ತಿವೆ. ಮಾರಾಟದಿಂದ ಬಂದ ಹಣವನ್ನು ಒಂದು ನಿಧಿಯಾಗಿ ಶೇಖರಿಸಿ ಮುಂದಿನ ಪ್ರಕಟಣೆಗಳಿಗೆ ನೆರವಾಗುವ ರೀತಿಯಲ್ಲಿ ರೂಪಿಸಿಕೊಂಡು ಪ್ರಸಾರಾಂಗವನ್ನು ಸ್ವಸಾಮರ್ಥ್ಯವುಳ್ಳ ಅಂಗವನ್ನಾಗಿ ಮಾಡುವ ಉದ್ದೇಶ ಇವರದಾಗಿದೆ.

ಐದು ವರ್ಷಗಳ ಹಿಂದೆ ೬೦೦ ಎಕರೆ ಜಮೀನು ನಿರ್ಜನ ಪ್ರದೇಶವಾಗಿತ್ತು. ಇಂದು ೭೦ ಸಾವಿರ ಮರಗಳು ಬೆಳೆಯುತ್ತಿವೆ. ೨೨ ಕಟ್ಟಡಗಳು ಮೇಲೆದ್ದು ನಿಂತಿವೆ. ಸುಮಾರು ೧೫೦ ಜನ ಈವರೆಗೆ ೨೫೦ ಪ್ರಕಟಣೆಗಳು ಹೊರಬಿದ್ದಿವೆ. ಕನ್ನಡ ವಿಶ್ವವಿದ್ಯಾಲಯ ಒಟ್ಟು ರೂ. ೫ ಕೋಟಿ ಖರ್ಚು ಮಾಡಿದೆ. ಮೊದಲಿನ ಮೂರು ವರ್ಷಗಳು ಕಟ್ಟಡಗಳನ್ನು ಕಟ್ಟಿಸುವುದರಲ್ಲಿ ಹೆಚ್ಚು ಸಮಯ ಕಳೆದರೂ ವಿದ್ಯಾರಣ್ಯ ಕ್ಯಾಂಪಸ್‌ನ ಗ್ರಂಥಾಲಯ ಕಟ್ಟಡದ ಕೆಲಸ ಇನ್ನೂ ಮುಗಿದಿಲ್ಲ.

ಕನ್ನಡ ವಿಶ್ವವಿದ್ಯಾಲಯ ಸಮಗ್ರ ಕರ್ನಾಟಕಕ್ಕೆ ಸೇರಿದ್ದು. ಅದರ ಬೆಳವಣಿಗೆಗೆ ಆರ್ಥಿಕ ನೆರವು ಅನಿವಾರ‍್ಯವಾಗಿದೆ. ವಿವಿಧ ಮೂಲಗಳಿಂದ ಆರ್ಥಿಕ ನೆರವು ಪಡೆಯಲು ವಿಶ್ವವಿದ್ಯಾಲಯದವರು ಪ್ರಯತ್ನಿಸುತ್ತಿದ್ದಾರೆ. ಗಿರಿಸೀಮೆ ಬಳಿ ನಿರ್ಮಿಸಿರುವ “ಚೋಮನ” ಕೆರೆಗೆ ಪ್ರತಿ ವರ್ಷ ೨ ಕ್ಯೂಸೆಕ್ಸ್ ನೀರು ಬೇಕಾಗಿದೆ. ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸಬೇಕಾಗಿದೆ. ಜ್ಞಾನ ಅಕ್ಷರಸ್ಥರಿಗೆ ಸೇರಿದ್ದು ಎಂಬ ಹಮ್ಮನ್ನು ಬಿಟ್ಟು ಪ್ರಖ್ಯಾತರಾದ ಎಲ್ಲರನ್ನೂ ಕನ್ನಡ ವಿಶ್ವವಿದ್ಯಾಲಯ ತನ್ನ ತೋಳ ತೆಕ್ಕೆಗೆ ಸೇರಿಸಕೊಳ್ಳಬೇಕಾಗಿದೆ.