ವಿಜಯನಗರ ಆಳರಸರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಇಡೀ ವಿಶ್ವದಲ್ಲೆ ವಿಶಿಷ್ಟವಾಗಿತ್ತು. ಅದರ ಸಂಪತ್ತು ಅಗಾಧವಾಗಿತ್ತು. ಅರಸರು ಮಾಡಿದ ಜನಹಿತ ಕಾರ್ಯಗಳು ಇಂದಿಗೂ ಉಪಯುಕ್ತವಾಗಿವೆ. ವಿಜಯನಗರ ಸಾಮ್ರಾಜ್ಯದಲ್ಲಿ ೬೦೦೦ ಮುಸ್ಲಿಂ ಸೈನಿಕರಿದ್ದರು. ಧರ್ಮ ಸಹಿಷ್ಣುತೆಗೆ ಹೆಸರಾಗಿತ್ತು. ಹಂಪಿಯ ಪರಿಸರ ಇಂದು ಪವಿತ್ರ ನೆಲೆಯಾಗಿ ರೂಪಿತವಾಗಬೇಕಿದೆ. ಹಾಗಾಗದಿರಲು ಈ ಸ್ಥಳದ ಅಲಕ್ಷವೇ ಕಾರಣವಾಗಿದೆ.

ಹಂಪಿ, ಪಟ್ಟದ ಕಲ್ಲು ರಾಜ್ಯದಲ್ಲಿ ವಿಶ್ವಪರಂಪರೆ ಸ್ಥಳಗಳಾಗಿವೆ. ಅವುಗಳ ಅಭಿವೃದ್ದಿಗೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ‘ಸುವರ್ಣರೇಖೆ (Golden Ring)ಯ ಮೂಲಕ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಪ್ರವಾಸೋದ್ಯಮ ಇಲಾಖೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಜಪಾನ್ ಆರ್ಥಿಕ ನೆರವಿನ ಮೂಲಕವೂ ಹಂಪಿಯ ಅಭಿವೃದ್ದಿಗೆ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಂಪಿ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಿ ರಾಜ್ಯಪಾಲರ ಅನುಮತಿ ಪಡೆಯಲಾಗಿದೆ.

ವಿಜಯನಗರ ವೈಭವವನ್ನು ‘ಹಂಪಿ ಉತ್ಸವ’ದ ರೂಪದಲ್ಲಿ ಪುನರ್‌ಸೃಷ್ಟಿ ಮಾಡುವ ಕಾರ್ಯದಲ್ಲಿ ಜನಸಮೂಹ ಸಹಕರಿಸಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನೂ ಕೂಡ ತನ್ನ ದುಡಿಮೆ ಮತ್ತು ಬದುಕಿನಲ್ಲಿ ತೊಡಗಿಸಿಕೊಂಡರೆ ಅದು ಏಕತಾನತೆ ಆಗುತ್ತದೆ. ಅಂತಹ ಏಕಾತನತೆಯನ್ನು ಹಂಪಿ ಉತ್ಸವದಂತ ಉತ್ಸವಗಳು ಹೋಗಲಾಡಿಸುತ್ತವೆ.

ಮುಂದಿನ ವರ್ಷ ‘ಹಂಪಿ ಉತ್ಸವ’ ಹಾಗೂ ‘ವಿಶ್ವ ಕನ್ನಡ ಸಮ್ಮೇಳನ’ ಒಟ್ಟಿಗೆ ಆಚರಿ ಸುವ ಸಿದ್ಧತೆ ಮಾಡಲಾಗುವುದು. ಆ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ರೀತಿ, ನೀತಿ, ಬದುಕು-ಬರಹ ಮೊದಲಾದವು ಕನ್ನಡ ಸಂಬಂಧಿ ಚಟುವಟಿಕೆ ಜತೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ವಿಶ್ವದ ಮುಂದೆ ಅನಾವರಣಗೊಳ್ಳಲಿವೆ.

ಮುಂಬರುವ ಉತ್ಸವದಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಂಶೋಧನಾತ್ಮಕ ವಿಚಾರ ಗಳಲ್ಲಿ ಹೊರರಾಜ್ಯ ಮತ್ತು ರಾಷ್ಟ್ರಗಳ ಪ್ರತಿನಿಧಿಗಳ ಜೊತೆ ವಿಚಾರ ವಿನಿಮಯ ಮಾಡಿ ಕೊಳ್ಳಲಾಗುವುದು.

ಹಂಪಿಯಲ್ಲಿ ೨೬೩ ಎಕರೆ ಜಮೀನನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ಮೂಲಭೂತ ಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿಯೂ ಇದಕ್ಕೆ ಪೂರಕವಾಗಿ ರೂಪಿತವಾಗಬೇಕಿದೆ. ಹಂಪಿಯ ಸಮಗ್ರ ಅಭಿವೃದ್ದಿಗೆ ಗಮನಹರಿಸಲಾಗುವುದು.