(ಸುಧಾ ವಾರಪತ್ರಿಕೆ ೨೨..೧೯೯೮)

ಹಂಪೆಯಲ್ಲಿನ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶಿಷ್ಟವಾದ ಶಿಲ್ಪವನ ಕಂಗೊಳಿಸುತ್ತಿದೆ. ಹತ್ತಾರು ಸಹಸ್ರ ವರ್ಷಗಳಿಂದ ಬಿದ್ದಲ್ಲೆ ಬಿದ್ದ ಶಿಲೆಗಳಲ್ಲಿ ಪ್ರತಿಮೆ ಸೃಷ್ಟಿಸುವ ಕಾರ್ಯವನ್ನು ಶಿಲ್ಪಿಗಳು ಮಾಡುತ್ತಿದ್ದಾರೆ.

ನಾವೆಲ್ಲರೂ ಎದ್ದು ನಿಂತಿರುವ ಬಂಡೆಗಳನ್ನು, ಬಿದ್ದ ಕಲ್ಲುಗಳನ್ನು ನೋಡುತ್ತೇವೆ. ನಮಗವು ಬರಿ ಬಂಡೆ. ಆದರೆ ಒಬ್ಬ ಕಲಾವಿದನ ಕಣ್ಣಿಗೆ, ಶಿಲ್ಪಿಯ ಕಣ್ಣಿಗೆ ಬಂಡೆಗಳಲ್ಲಿ ರೂಪ ಕಾಣಿಸುತ್ತದೆ. ಆತ ಸ್ಫೂರ್ತಿಗೊಳ್ಳುತ್ತಾನೆ. ಬಂಡೆಯಲ್ಲಿ ಕಂಡ ರೂಪವನ್ನು ಸಾಕಾರಗೊಳಿ ಸುವುದು ಅಷ್ಟು ಸುಲಭದ ಕೆಲಸವೆ? ಚಾಣದಿಂದ ಬೇಡವಾದ ಕಲ್ಲು ಭಾಗಗಳನ್ನು ಕತ್ತರಿಸಿ, ಬೇಕಾದ ರೂಪವನ್ನು ಬಿಡಿಸತೊಡಗುತ್ತಾನೆ. ದಿಟ್ಟಿಸಿ ನೋಡಿದ, ಕೆತ್ತಿದ…. ದಿನಗಳು ಉರುಳಿದವು. ಆಮೆಯ ಆಕಾರ ದೇಹ ಪಡೆದಾಗ ಮನದಲ್ಲಿ ಒಂದು ಯೋಚನೆ ಮಿಂಚಿತು ತನಗೆ ಹೊಳದ “ಮನುಷ್ಯರ ಮುಖದ ಆಮೆಯ ಶಿಲ್ಪ” ಹೀಗೆ ಸಿದ್ಧವಾಯಿತು.

ಕಲ್ಪನೆಗೆ ಶಾಶ್ವತ ರೂಪ ಕೊಡುವ ಈ ಪ್ರಕ್ರಿಯೆ ಹಂಪೆಯ ಕನ್ನಡ ವಿಶ್ವವಿದ್ಯಾಲಯದ ‘ಶಿಲ್ಪವನ’ದಲ್ಲಿ ನಡೆದಿದೆ. ‘ಶಿಲ್ಪವನ’ವನ್ನು ದೃಶ್ಯಕಲಾ ವಿಭಾಗದ ನಿರ್ದೇಶಕರಾದ ಜಿ. ಜಯಕುಮಾರ ಅವರು ತಮ್ಮ ಸಂಗಡಿಗರಾದ ಜಿ. ರವೀಂದ್ರನಾಥ, ಡಿ. ಹುಸೇನ್, ಈಶ್ವರಪ್ಪ, ರಾಮಕೃಷ್ಣ ಮೊದಲಾದವರ ನೆರವಿನಿಂದ ನಿರ್ಮಿಸಿದ್ದಾರೆ.

ದನ, ಕುರಿ, ಕಾಯುವ ಹುಡುಗರು ಕೂಡ ಶಿಲ್ಪವನಕ್ಕೆ ತಮ್ಮ ಕಾಣಿಕೆ ನೀಡಿದ್ದಾರೆ. ಅವರು ಬೇಜಾರು ಕಳೆಯಲು ಬಂಡೆಗಲ್ಲುಗಳ ಮೇಲೆ ಅಸ್ತವ್ಯಸ್ತವಾಗಿ ಗೀಚಿದ್ದ ಚಿತ್ರಗಳನ್ನೂ ಕೂಡ ಇಲ್ಲಿ ಶಾಶ್ವತಗೊಳಿಸಲಾಗಿದೆ. ಸಹಜವಾಗಿ ಗೀಚಿದ್ದು ಎಂಬುದು ಯಾರಿಗೂ ತಿಳಿಯದು. ಆ ರಚನೆ ಜನಪದ ರಚನೆಯಾಗಿ ಉಳಿದಿದೆ. ಶಿಲ್ಪವನವನ್ನು ನೋಡುತ್ತಾ ಹೊರಟಾಗ ಅಲ್ಲಲ್ಲಿ ಬಿದ್ದಿರುವ ಕಲ್ಲು ಬಂಡೆಗಳಲ್ಲಿಯೇ ಮೂಡಿಸಿದ ಶಿಲ್ಪಗಳನ್ನು  ಕಂಡು ನೀವು ವಿಸ್ಮಿತರಾಗುವಿರಿ. ಉದಾಹರಣೆಗೆ ಸೊಕ್ಕಿ ನಿಂತ ಕಲ್ಲೊಂದರಲ್ಲಿ ಬೆದೆಯ ಭಂಗಿಯಲ್ಲಿರುವ ಗೂಳಿ ಮೂಡಿದೆ. ತನ್ನ ಸಂಗಾತಿಗಾಗಿ ಹುಡುಕಾಟ ನಡೆಸಿದೆ ಎನ್ನುವಂತಿದೆ ಇದು.

ಪರಿಸರ ಗಣಪತಿ

ಗುಂಡು ಕಲ್ಲಿನಲ್ಲಿ ಉಬ್ಬು ಶಿಲ್ಪದ ಗಣಪತಿಯನ್ನು ಬಿಡಿಸಲಾಗಿದೆ. ಬಲಗೈಯಲ್ಲಿ ಮರ, ಎಡಗೈಯಲ್ಲಿನ ಬೆರಳ ಮೇಲೆ ಪಕ್ಷಿ, ಸೊಂಟಕ್ಕೆ ಸರ್ಪ ಮೂಡಿಸಿದೆ. ಇವು ಪರಿಸರವನ್ನು ಪ್ರತಿನಿಧಿಸುತ್ತವೆ. ಸಾವಿರಾರು ವರ್ಷಗಳಿಂದ ಗುಂಡು ಕಲ್ಲಾಗಿ ಬಿದ್ದಿದ್ದ ಬಂಡೆಯಲ್ಲಿ ಅಚ್ಚುಕಟ್ಟಾಗಿ “ಪರಿಸರ ಗಣಪತಿ” ಮೂಡಿದ್ದಾನೆ. ಪರಿಸರದ ಬಗ್ಗೆ ಎಚ್ಚರಿಸುವ ಶಿಲ್ಪ ಇದು.

ಒರಟೊರಟಾಗಿ ಕಾಣಿಸುವ ಒಂದು ಶಿಲ್ಪ ಏನನ್ನೊ ಅಪ್ಪಿಕೊಂಡಂತಿದೆ. ಮಗು ಇರಬಹುದು ಎಂದು ದಿಟ್ಟಿಸಿ ನೋಡಿದರೆ, ಅದು ಒಂದು ಮೀನು! ಒಪ್ಪ ಓರಣ ಕೊಡದೇ ಅಭಿವ್ಯಕ್ತವಾದ ಈ ಶಿಲ್ಪ ಕಡಲಿಗೂ ಹೆಣ್ಣಿಗೂ ಇರುವ ಸಾಮ್ಯವನ್ನು ವಿವರಿಸಲು ಹೊರಟಂತೆ ತೋರುತ್ತದೆ ನಾಗಕನ್ಯೆ. ಯಕ್ಷ ಕನ್ಯೆಯರ ರೀತಿಯಲ್ಲಿ ಈ ಮತ್ಸ್ಯ ಕನ್ಯೆ ಶಿಲ್ಪ ವನದಲ್ಲಿ ಪವಡಿಸಿದ್ದಾಳೆ. ಪಕ್ಕದಲ್ಲಿಯೇ ಒಂದು ಸಿಂಹ ಕೂಡ ವಿಶ್ರಾಂತಿ ಪಡೆಯುತ್ತಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆವರಣ ‘ವಿದ್ಯಾರಣ್ಯ’ದಲ್ಲಿ ಶಿಲ್ಪವನಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ದೃಶ್ಯ ಕಲಾವಿಭಾಗ ವಹಿಸಿಕೊಂಡಿದೆ. ಜಯಕುಮಾರರ ಪ್ರಕಾರ ನಿಸರ್ಗದತ್ತವಾದ ಬಂಡೆಗಳಿಗೆ ಅವುಗಳು ಬಿದ್ದಲ್ಲಿಯೇ ಸೃಜನಾತ್ಮಕ ರೂಪ ಕೊಡುವುದು ಮೂಲ ಉದ್ದೇಶವಾಗಿದೆ. ಈ ರೀತಿಯ ಕಲ್ಪನೆ ದೇಶದಲ್ಲಿಯೇ ಅಪರೂಪ ಎನ್ನುತ್ತಾರೆ ಕುಲಪತಿ ಡಾ. ಚಂದ್ರಶೇಖರ ಕಂಬಾರ.

ಹಲವು ಹಂತಗಳ ಶಿಲ್ಪವನದ ಯೋಜನೆಯಲ್ಲಿ ಕೇವಲ ಬಂಡೆಗಳಲ್ಲಿ ಶಿಲ್ಪ ನಿರ್ಮಿಸುವುದಲ್ಲದೇ ಮರ, ಕಬ್ಬಿಣ, ಕಂಚು, ಗಾರೆ, ಫೈಬರ್, ಟೆರ್ರಕೋಟ, ಸಿಮೆಂಟ್ ಮುಂತಾದ ಮಾಧ್ಯಮಗಳ ಮೂಲಕವೂ ಮೂರ್ತಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ತಾಯಿ

ದೂರದಿಂದಲೇ ಕಾಣುವ ಒಂದು ಅಡಿಯಷ್ಟು ಅಗಲ ಕುಂಕುಮ ಧರಿಸಿದ ‘ತಾಯಿ’ ಮೂರ್ತಿಯನ್ನು ನೋಡಿದಾಗ ಇದಾವುದೋ ‘ಮಾರಿ’ ಇರಬಹುದು ಎನಿಸಿತು. ಗಾರೆ ಮತ್ತು ಕಬ್ಬಿಣದ ಸಲಾಕೆಗಳಿಂದ ನಿರ್ಮಿಸಿರುವ ಈ ಮೂರ್ತಿ ೧೫ ಅಡಿ ಎತ್ತರವಿದೆ. ನೀಳಕುತ್ತಿಗೆ, ನಿಡುಗಣ್ಣ ನೋಟ ಯಾರನ್ನು ನುಂಗಲು ಕಾಯುತ್ತಿದೆಯೋ ತಿಳಿಯದು. ವಾಸ್ತವದಲ್ಲಿ ಆಕೆ ಕಾಯುವ ತಾಯಿಯೂ ಹೌದು. ತನ್ನ ತನವನ್ನು ಸಮರ್ಥಿಸಿಕೊಳ್ಳುತ್ತಿರುವ ಸ್ತ್ರೀ ಸಂಕೇತವೂ ಹೌದು!.

‘ಅಕ್ಷರ’ ನಾಮದ ಗ್ರಂಥಾಲಯವನ್ನೆ ದಿಟ್ಟಿಸುತ್ತಿರುವ ಈ ಮೂರ್ತಿ ಎತ್ತರದ ಪ್ರದೇಶದಲ್ಲಿದೆ. ವಿಶ್ವವಿದ್ಯಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ನಿಮ್ಮ ಗಮನ ಸೆಳೆಯುತ್ತದೆ.

ಚೆಂಡನ್ನು ಗೋಲ್ ಮಾಡಲು ಹೋಗಿ ವಿಫಲವಾಗಿ ಬಿದ್ದಿರುವ ಮಹಿಳೆಯ ಆಟದ ನೋಟವನ್ನು ರಚಿಸಲಾಗಿದೆ. ಇದನ್ನು ಸಿಮೆಂಟ್ ಸಲಾಕೆ ಅನುಪಯುಕ್ತ ಗಾಜು, ಬಳೆ, ಟೈಲ್ಸ್ ಬಳಸಿ ರಚಿಸಲಾಗಿದೆ. ಗುಂಡು ಕಲ್ಲುಗಳು, ಕಮಾನು, ಹುಲ್ಲು ಎಲ್ಲ ಸೇರಿ ಪದಗಳಿಲ್ಲದ ಪದ್ಯದಂತೆ ಭಾಸವಾಗುತ್ತಿದೆ. ಆಟದಲ್ಲಿ ಸೋಲು ಗೆಲುವುಗಳೆಲ್ಲ ಒಂದೇ ಎನ್ನುವುದನ್ನು ಈ ಶಿಲ್ಪಿ ಸೂಚಿಸುವಂತಿದೆ.

ಗಿರಿಸೀಮೆಯ ಚಾವಡಿ ಪಕ್ಕದಲ್ಲಿಯೇ ರಾಕ್ಷಸಾಕಾರದ ಮೂರ್ತಿ ಇದೆ. ತಲೆಗೆ ಎರಡು ಕೊಂಬು, ಕಿವಿಯಿಂದ ಮನುಷ್ಯ ಬೀಳುತ್ತಿದ್ದಾನೆ. ತಲೆ ತುಂಬ ಆನೆ ಇರುವೆ, ಹಡಗು, ಪ್ರಾಣಿ ಇತ್ಯಾದಿಗಳು ಇವೆ. ಇದೇನು ವಿಚಿತ್ರ ಎಂದು ಕಲಾವಿದ ಹುಸೇನ್ ಅವರಿಗೆ ವಿಚಾರಿಸಿದಾಗ “ಮನುಷ್ಯನ ತಲೆಯಲ್ಲಿ ತುಂಬಿರುವ ಒಳ-ಹೊರ ಪ್ರಪಂಚದ ಸಂದಿಗ್ಧತೆಯ ಚಿತ್ರವಿದು” ಎಂದು ವಿವರಿಸಿದರು. ಬುಡಕಟ್ಟು ಜನಾಂಗದವರು ಆರಾಧಿಸುವ ಮುಖವಾಡದ ಮಾದರಿ ಈ ‘ಚೋಮ’.

ಭುವನ ವಿಜಯ

ವಿಜಯನಗರದ ಸಾಮ್ರಾಟ ಶ್ರೀ ಕೃಷ್ಣದೇವರಾಯನ ಓಲಗಕ್ಕೆ ‘ಭುವನ ವಿಜಯ’ ಎಂದು ಕರೆಯುತ್ತಿದ್ದರು. ಆ ನೆನಪು ಮರುಕಳಿಸುವಂತೆ ಕನ್ನಡ ವಿಶ್ವವಿದ್ಯಾಲಯದ ಬಹುಪಯೋಗಿ ಕಟ್ಟಡಕ್ಕೆ ‘ಭುವನ ವಿಜಯ’ ಎಂದು ಹೆಸರಿಸಲಾಗಿದೆ. ಈ ಕಟ್ಟಡದ ಪ್ರವೇಶ ದ್ವಾರದ ಗೋಡೆಗಳಿಗೆ ನವೀನ ರೀತಿಯಲ್ಲಿ ಶ್ರೀ ವಿರೂಪಾಕ್ಷ ಹಾಗೂ ಪಂಪಾದೇವಿ ಮುಖಗಳನ್ನು ರೂಪಿಸಲಾಗಿದೆ. ಮೂರನೆಯ ಕಣ್ಣು, ಬಿಚ್ಚಿದ ಜಡೆ ವಿರೂಪಾಕ್ಷನದಾದರೆ, ಸೌಮ್ಯ ಮುಖ ಪಂಪಾದೇವಿಯದು.

ದೃಶ್ಯಕಲಾ ವಿಭಾಗವನ್ನು ೧೯೯೩ರಲ್ಲಿ ಪ್ರಾರಂಭವಾಯಿತು. ಕಲಾತ್ಮಕವಾದ ತೈಲವರ್ಣ ಚಿತ್ರಗಳನ್ನು ಸಹ ಇಲ್ಲಿ ಸಿದ್ಧಪಡಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಕಟ್ಟಡಗಳಾದ ‘ಕಾಯಕದ ಮನೆ’, ‘ಚಾವಡಿ’, ‘ತುಂಗಭದ್ರಾ’, ‘ಕೂಡಲಸಂಗಮ’, ‘ತ್ರಿಪದಿ’, ‘ಕ್ರಿಯಾಶಕ್ತಿ’ ಇತ್ಯಾದಿ ಕಟ್ಟಡಗಳು ಅನೇಕ ರೀತಿಯ ಚಿತ್ರಗಳು ಹಾಗೂ ಶಿಲ್ಪಗಳಿಂದ ಸಿಂಗಾರಗೊಂಡಿವೆ.

ಶಿಲ್ಪಕಲಾ ಕೃತಿಗಳ ಒಂದು ದೊಡ್ಡ ಪರಂಪರೆ ಸಿಂಧೂ ನದಿ ಸಂಸ್ಕೃತಿಯಿಂದ ಇಂದಿನವರೆಗೆ ನಿರ್ಮಿತವಾಗುತ್ತ ಬಂದಿದೆ. ಇದರ ಗಾಢ ಅರಿವಿನಿಂದ ಮಾನವ ಸಂಸ್ಕೃತಿಯ  ಸ್ತರಗಳನ್ನು ಗುರುತಿಸುವುದು ಈ ಭಾಗದ ಉದ್ದೇಶವಾಗಿದೆ ಎನ್ನುತ್ತಾರೆ ನಿರ್ದೇಶಕರು.

ಪ್ರತಿಭಾವಂತರು ಚರ್ಚಿಸುವುದಿಲ್ಲ ಸೃಷ್ಟಿಸುತ್ತಾರೆ ಎಂಬ ಅಭಿಪ್ರಾಯವನ್ನು ಶಿಲ್ಪವನಕ್ಕೆ ಭೇಟಿ ನೀಡಿದ ಡಾ. ಯು.ಆರ್. ಅನಂತಮೂರ್ತಿ, ಕಲಾವಿದ ಎಸ್.ಜಿ. ವಾಸುದೇವ, ವಿದ್ವಾಂಸರು, ಕಲಾವಿದರು, ಗಣ್ಯರಾದ ವೀರಪ್ಪಮೊಯಿಲಿ. ಜೀವರಾಜ್ ಆಳ್ವ, ಎಂ.ಪಿ. ಪ್ರಕಾಶ ಮುಂತಾದವರು ವ್ಯಕ್ತಪಡಿಸಿದ್ದಾರೆ.

ವಿಶ್ವವಿಖ್ಯಾತ ಶಿಲ್ಪಕಲೆಯ ಆಗರವಾದ ಹಂಪೆಯ ಹತ್ತಿರವೇ ಶಿಲ್ಪವನದ ಅವಶ್ಯಕತೆ ಇತ್ತೇ? ಹೌದು ಇತ್ತು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಾಗೂ ಹೊಸ ರೀತಿಯ ಶಿಲ್ಪಗಳನ್ನು ನಿರ್ಮಿಸಲು ಕಲೆ ಜನರ ಸಂಪತ್ತು ಇದನ್ನು ವೃದ್ದಿಪಡಿಸುವುದು ಹೊಸ ಹೊಸ ಕಲಾವಿದರ ಕರ್ತವ್ಯ ಅಲ್ಲವೆ?

ಪ್ರೀತಿ ಮತ್ತು ಎಚ್ಚರಿಕೆ

ಶಿಲ್ಪವನದಲ್ಲಿ ಒಂದೆಡೆ ಒಂದು ಗುಂಡ ಕಲ್ಲಿನಲ್ಲಿ ಹಿಂದೆ-ಮುಂದೆ ವರಾಹ – ವರಾಹಿ ಮೂರ್ತಿ ಕೆತ್ತಲಾಗಿದೆ. ಸಿಲೆಂಡರ್ ಆಕಾರದ ಶಿಲೆಯಲ್ಲಿ ರೂಪಿಸಲಾಗಿದೆ. ಈ ಮೂರ್ತಿಯಲ್ಲಿ ಎಚ್ಚರಿಕೆ ಮತ್ತು ಪ್ರೀತಿಯ ಕಲ್ಪನೆಯನ್ನು ಮೂಡಿಸಿದಂತಿದೆ. ಇವೆರಡೂ ಬದುಕಿನ ಎರಡು ಕಣ್ಣು ಶಿಲ್ಪವನದ ಸಂದೇಶವೇ ಇದು.

ಕಲಾವಿದ ಜಯಕುಮಾರ ಬೆಂಗಳೂರಿನ ಕೆನ್ ಕಲಾ ಶಾಲೆ, ಬರೋಡದ ಎಂ.ಎಸ್. ವಿಶ್ವವಿದ್ಯಾಲಯ ಮತ್ತು ಲಂಡನ್ ರಾಯಲ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ಕಲಾ ತರಬೇತಿ ಪಡೆದು ಬಂದವರು. ಅವರ ತರಬೇತಿ ಮತ್ತು ಅನುಭವ ‘ಶಿಲ್ಪವನ’ದಲ್ಲಿ ಎದ್ದು ಕಾಣುವಂತಿವೆ.

ಕನ್ನಡ ವಿಶ್ವವಿದ್ಯಾಲಯದ ‘ಶಿಲ್ಪವನ’ ಕಲಾವಿದರಿಗೆ ಕಾಶಿಯಾಗಬೇಕು. ಮುಂದಿನ ದಿನಗಳಲ್ಲಿ ಪ್ರೇಕ್ಷಣೀಯ ತಾಣವಾಗಿ ನಿರ್ಮಾಣಗೊಳ್ಳಬೇಕು ಎಂಬ ಹೆಬ್ಬಯಕೆ ಹೊಂದಿರುವ ಜಯಕುಮಾರ “ಸುಂದರವಾದುದು ಯಾವಾಗಲೂ ಸಂತೋಷವನ್ನೆ ನೀಡುತ್ತದೆ” ಎಂಬ ನಂಬಿಕೆ ಉಳ್ಳವರು” ಸತ್ಯಂ ಶಿವಂ ಸುಂದರಂ”.

ಹೂ ಬನದಲ್ಲಿ ಬಣ್ಣ, ಪರಿಮಳ, ತಂಪು  ಪ್ರತಿ ಹೂವಿನಿಂದ ದೊರೆಯುತ್ತದೆ. ಶಿಲ್ಪವನದಲ್ಲಿ ಪ್ರತಿಶಿಲ್ಪದಿಂದ ಒಂದಲ್ಲ ಒಂದು ಭಾವನೆ ಅರಳಿ ಮನಕ್ಕೆ ಮುದ ನೀಡುವಂತಿದೆ. ಯಾರಿಗಾದರೂ ಶಿಲ್ಪ ಹಾಗೂ ಹೂ ಇವುಗಳ ಬೆಲೆ ಕಟ್ಟಲು ಸಾಧ್ಯವೇ? ಶಿಲ್ಪವನದಲ್ಲಿ ನೀರಿನ ಕಾರಂಜಿ, ಹಣ್ಣು ಹೂವಿನ ಗಿಡ ಮರ ಹಾಗೂ ಅಲ್ಲಲ್ಲಿ ವೀಕ್ಷಕರು ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಕಲ್ಪಿಸಿದರೆ ಉತ್ತಮ. ಸಿಮೆಂಟ್ ಮಾಧ್ಯಮದ ಫಲಕಗಳಲ್ಲಿ ಉಬ್ಬು-ತಗ್ಗಿನ ಶಿಲ್ಪಗಳನ್ನು ಕಲಾವಿದರಾದ ರವೀಂದ್ರನಾಥ ಹಾಗೂ ಡಿ. ಹುಸೇನ್ ರಚಿಸಿದ್ದಾರೆ.

ಅನೇಕ ವಿಭಾಗಗಳಲ್ಲಿ ಇವುಗಳನ್ನು ಓರಣವಾಗಿ ಇಡಲಾಗಿದೆ. ಜಾನಪದ ವಿಭಾಗದ ಕಛೇರಿಯ ಬಾಗಿಲ ಮೇಲೆ ಸೂರ್ಯನ ಮಾರಿ ಮಾಡಿ ಅದಕ್ಕೆ ಕನ್ನಡಿ ಚೂರು ಅಂಟಿಸಿರುವುದರಿಂದ ಅದು ಪ್ರತಿಫಲಿಸುತ್ತಿದೆ. ಕಣ್ಣಿಗೆ, ಮನಸ್ಸಿಗೆ ರಸದೌತಣ ನೀಡುವ ವರ್ಣಚಿತ್ರಗಳು ದೃಶ್ಯಕಲಾ ವಿಭಾಗದ ಕಛೇರಿಯಲ್ಲಿ ಬೆಳಗುತ್ತಿವೆ. ಬಹುತೇಕ ಚಿತ್ರಗಳನ್ನು ಕಲಾವಿದ ಜಯಕುಮಾರ ಚಿತ್ರಿಸಿದ್ದಾರೆ. ಶಿಲ್ಪವನದ ಪ್ರತಿಯೊಂದು ಕಲಾಕೃತಿ ತನ್ನದೇ ಆದ ಸಂದೇಶ ನೀಡುತ್ತಿದೆ. ಶಿಲ್ಪ ಮತ್ತು ಕುಂಚದಿಂದ ಮೂಡಿಬಂದ ಭಾವನೆಗಳು ಸತ್ಯದ ಆವಿಷ್ಕಾರ ಮಾಡುತ್ತಿವೆ. ರಾಜ್ಯದ ಇತರ ಯಾವುದೇ ವಿಶ್ವವಿದ್ಯಾಲಯದಲ್ಲಿ ಇಂಥ ಶಿಲ್ಪವನ ಇಲ್ಲ ಎಂಬುದೊಂದು ಹೆಗ್ಗಳಿಕೆ.

ಪರಂಪರೆಯ ಸೊಗಡಿನಿಂದ ಮತ್ತು ಗತ ವೈಭವದ ಹೆಮ್ಮೆಯಿಂದ ಕೂಡಿದ ಹಂಪೆಯ ಕ್ಷೇತ್ರದ ಹಿನ್ನೆಲೆಯಲ್ಲಿ ಮತ್ತು ಕನ್ನಡಿಗರ ಮಹತ್ವಾಕಾಂಕ್ಷೆಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಶಿಲ್ಪವನ ಕಂಗೊಳಿಸುತ್ತಿರುವುದರಿಂದ ಅದು ಹಸಿರು ಹಿನ್ನೆಲೆಯೊಂದಿಗೆ ಪೂರ್ಣ ಅಭಿವೃದ್ದಿ ಸಾಧಿಸಿದಾಗ ಇನ್ನೂ ಹೆಚ್ಚಿನ ಮೆರೆಗು ಬರುವುದರಲ್ಲಿ ಸಂಶಯವಿಲ್ಲ.