Categories
ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು ಕೃಷಿ ಪುಸ್ತಕಗಳಿಂದ ಸಹಜ ಸಮೃದ್ಧ ಪ್ರಕಾಶನ

ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು : ಇದೆಂಥ ವಿಪರ್ಯಾಸ ನೋಡಿ ! : ಪ್ರೊ. ದೇವೇಂದ್ರ ಶರ್ಮ : ಕನ್ನಡಕ್ಕೆ: ನಾಗೇಶ ಹೆಗಡೆ

ಇದೆಂಥ ವಿಪರ್ಯಾಸ ನೋಡಿ !

ಜಾಗತೀಕರಣದ ನಂತರ ಇಡೀ ದೇಶ ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದತೊಡಗಿದೆ ಎಂದು ಅಧಿಕಾರದ ಪೀಠದಲ್ಲಿರುವ ಎಲ್ಲರೂ ಹೇಳುತ್ತಿದ್ದಾರೆ. ನಗರಗಳಲ್ಲಿ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಏರುತ್ತಿದೆ. ಶೇರು ಮಾರುಕಟ್ಟೆಯ ಸೂಚ್ಯಂಕ ಏರುತ್ತಿದೆ. ಹಣದ ವಹಿವಾಟಿನ ಮೊತ್ತ ಏರುತ್ತಿದೆ. ವಿದೇಶೀ ಸಾಮಗ್ರಿಗಳ ರಾಶಿ ಏರುತ್ತಿದೆ. ಕೋಟ್ಯಧೀಶರ ಧನರಾಶಿ ಏರುತ್ತಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ಸಾಮಾನ್ಯ ರೈತರ ಸಂಕಟಗಳೂ ಏರುತ್ತಿವೆ. ವಾಸ್ತವ ಚಿತ್ರಣ ಏನು ಎಂಬುದನ್ನು ಕೃಷಿ ತಜ್ಞ  ಡಾ. ದೇವೇಂದ್ರ ಶರ್ಮಾ ಇಲ್ಲಿ ವಿವರಿಸಿದ್ದಾರೆ.

ಇದೆಂಥ ವಿಪರ್ಯಾಸ ನೋಡಿ !

ಇಂಡಿಯಾದ ಪ್ರಗತಿಯ ಗತಿ ಶೇಕಡಾ 8 ದಾಟಿತು, 9ಕ್ಕೇರಿತು, 10ನ್ನು ತಲುಪಲಿದೆ, 12ಕ್ಕೂ ಏರಬಹುದು ಎಂದು ಪೈಪೋಟಿಗೆ ಬಿದ್ದವರಂತೆ ನಮ್ಮ ಪುಢಾರಿಗಳು ಈಚಿನ ವರ್ಷಗಳಲ್ಲಿ ಪರಾಕು ಹಾಕುತ್ತಲೇ ಇದ್ದಾರೆ. 1993ರೀಚಿನ ಜಾಗತೀಕರಣದ ಪ್ರಭಾವವೇ ಇದೆಂತಲೂ ಹೇಳುತ್ತಾರೆ.

1993ರೀಚಿನ ಹದಿನೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಹೀಗೆಯೇ ಏರುತ್ತ ಬಂದಿದೆ. ಸಾವಿರಕ್ಕೇರಿತು; ಹತ್ತು ಸಾವಿರ ದಾಟಿತು. ಒಂದು ಲಕ್ಷವನ್ನೂ ಮೀರಿತು. ಈಚೆಗೆ ಒಂದೂವರೆ ಲಕ್ಷ ದಾಟಿದೆ.

ಈ ಲೇಖನವನ್ನು ಓದಿ ಮುಗಿಸುವ ಅವಧಿಯಲ್ಲಿ ಇನ್ನೂ ಎಂಟು ಮಂದಿ ರೈತರು ಇಹಲೋಕ ತ್ಯಜಿಸಲಿದ್ದಾರೆ. ಯಾರೂ ಅದರ ಬಗ್ಗೆ ಚಕಾರ ಎತ್ತುವುದಿಲ್ಲ.

ವಿಪರ್ಯಾಸ ಅಷ್ಟಕ್ಕೇ ಮುಗಿದಿಲ್ಲ.

ಬೆಂಗಳೂರು ಎಂದರೆ ಐಟಿ ಹಬ್, ಬಿಟಿ ಹಬ್. ಭಾರತೀಯರ ಸಮಸ್ಯೆಗಳಿಗೆ ಉತ್ತರ ಹುಡುಕಲೆಂದು ಟೆಕ್ನಾಲಜಿಗಾಗಿ ಇಲ್ಲಿ ವಿನಿಯೋಗ ಆದಷ್ಟು ಹಣ ಬೇರೆಲ್ಲೂ ಆಗಿಲ್ಲ.

ಕರ್ನಾಟಕ   ಎಂದರೆ   ವಿಜ್ಞಾನ   ತಂತ್ರಜ್ಞಾನದಲ್ಲಿ     ಮುಂಚೂಣಿಯಲ್ಲಿರುವ ನಾಡು.

ರೈತರ ಆತ್ಮಹತ್ಯೆಯ ಅಂಕಿಸಂಖ್ಯಾ ಪೈಪೋಟಿಯಲ್ಲಿ ಕರ್ನಾಟಕವೇ ಎಲ್ಲಕ್ಕಿಂತ ಮುಂದಿದೆ.

ರಾಷ್ಟ್ರದ ರೈತರ ಈವರೆಗಿನ ಆತ್ಮಹತ್ಯೆಗಳಲ್ಲಿ ಶೇಕಡಾ 40ರಷ್ಟು  ವಿಜ್ಞಾನ ರಾಜಧಾನಿಯ ಆಸು ಪಾಸಿನಲ್ಲಿ ಅದೆಷ್ಟು ಆತ್ಮಹತ್ಯೆ ಗಳು!

ಬಾಯಿಪಾಠ ಮಾಡಿದ ಹಾಗೆ ಇನ್ನೊಂದು ಮಾತನ್ನು ಹೇಳುತ್ತಿ ರುತ್ತಾರೆ: ಪಾಶ್ಚಾತ್ಯ ರೈತರನ್ನು ನೋಡಿ; ನಮ್ಮ ರೈತರೂ ಅವರಷ್ಟೇ ಸುಧಾರಿಸಬೇಕು ಎನ್ನುತ್ತಿರುತ್ತಾರೆ. ಅಲ್ಲಿನ ರೈತ ಮತ್ತು ಇಲ್ಲಿನ ರೈತರನ್ನು ಏಕೆ ಹೋಲಿಸುತ್ತೀರಿ? ಅಲ್ಲಿನ ದನ ಮತ್ತು ಇಲ್ಲಿನ ರೈತರನ್ನು ಹೋಲಿಸಿ ನೋಡಿ. ಪಾಶ್ಚಾತ್ಯ ದನಗಳಿಗೆ ಸೆಕೆಯಾದರೆ ಫ್ಯಾನ್ ಗಾಳಿ ಬೀಸುತ್ತದೆ. ಸೆಕೆ ಹೆಚ್ಚಾದರೆ ತುಂತುರು ನೀರಿನ ಸಿಂಪಡನಾ ವ್ಯವಸ್ಥೆ ಇರುತ್ತದೆ. ಚಳಿ ಹೆಚ್ಚಾದರೆ ಕೊಟ್ಟಿಗೆಯನ್ನು ಬೆಚ್ಚಗೆ ಮಾಡಲಾಗುತ್ತದೆ. ದನಗಳ ನಿತ್ಯದ ಅಗತ್ಯಗಳ ನಿರ್ವಹಣೆಗೆಂದೇ ಕಂಪ್ಯೂಟರ್‌ಗಳಿವೆ. ದನದ ಕತ್ತಿನ ಪಟ್ಟಿಗೆ ಒಂದು ಬಿಲ್ಲೆ ಇರುತ್ತದೆ. ಅಲ್ಲೇ ಪಕ್ಕದ ಗೋಡೆಯ ಮೇಲೆ ಒಂದು ಗಣಕಫಲಕ ಇರುತ್ತದೆ. ದನದ ದೇಹದ ಉಷ್ಣತೆ, ರಕ್ತದೊತ್ತಡ, ಬೆದೆಬಯಕೆ ಎಲ್ಲವನ್ನೂ ಅದು ಮಾನಿಟರ್ ಮಾಡುತ್ತದೆ. ಯಾವ ದನಕ್ಕೂ ತುಸುವೂ ಕಷ್ಟ ಬಾರದಂತೆ ಕಾಲಕಾಲಕ್ಕೆ ಆಹಾರ, ಪೋಷಕಾಂಶ, ಹಾರ್ಮೋನು, ವೈದ್ಯಕೀಯ ಪರೀಕ್ಷೆ ಸಿಗುತ್ತದೆ. ಒಂದು ದನವನ್ನು ಅಲ್ಲಿ ಸಾಕಬೇಕೆಂದರೆ ಹತ್ತು ಹೆಕ್ಟೇರಿನಲ್ಲಿ ಬೆಳೆಯುವಷ್ಟು ಹುಲ್ಲು, ಜೋಳ, ಹಿಂಡಿಕಾಳು  ಬೆಳೆಸುತ್ತಾರೆ. ಅಲ್ಲಿ ಅತ್ಯಂತ ಗರಿಷ್ಠ ಆಹಾರ ಭದ್ರತೆ ಪಡೆದ ಜೀವಿಯೆಂದರೆ ದನ.

ನಮ್ಮ  ರೈತರ ಸರಾಸರಿ ಹಿಡುವಳಿ ಎರಡು ಹೆಕ್ಟೇರ್‌ಗಿಂತ ಕಮ್ಮಿ ಇದೆ. ಕರ್ನಾಟಕದಲ್ಲಿ  ಸುಮಾರು 1.7 ಹೆಕ್ಟೇರ್ ಅದರಲ್ಲೇ ರೈತ ಮತ್ತು ಆತನ ಕುಟುಂಬದ ಐದು ಸದಸ್ಯರ ಜೀವನ ನಿರ್ವಹಣೆ ನಡೆಯಬೇಕು. ಜತೆಗೆ ಆತ ಸಾಕಿಟ್ಟುಕೊಂಡ ದನ, ಎಮ್ಮೆ, ಕುರಿ, ನಾಯಿ, ಕೋಳಿಗಳ ಜೀವನವೂ ಸಾಗಬೇಕು.

ಪಾಶ್ಚಾತ್ಯ ದೇಶಗಳಲ್ಲಿ ಪ್ರತಿ ಹಸುವಿನ ಸಾಕಣೆಗೆ ಪ್ರತಿ ದಿನ 150 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

ಜಗತ್ತಿನಲ್ಲಿ ಪ್ರತಿ ದಿನ 85 ಕೋಟಿ ಜನರು ಅರೆಹೊಟ್ಟೆಯಲ್ಲಿ ನಿದ್ರೆ ಹೋಗುತ್ತಾರೆ. ಅವರಲ್ಲಿ ಶೇಕಡಾ 30 ಪಾಲು ಅಂದರೆ ಸುಮಾರು 33 ಕೋಟಿ ಜನರು ಭಾರತೀಯರು. ಅವರಿಗೆ ಅಗತ್ಯ ಪೋಷಕಾಂಶಗಳು ಸಿಗುತ್ತಿಲ್ಲ.

ಪಾಶ್ಚಾತ್ಯ ರೈತರನ್ನು ನೀವೂ ಅನುಸರಿಸಿ ಎಂದರೆ ಆದೀತೆ?

ಹೋಲಿಕೆ ಮಾಡುವುದಾದರೆ ಹೀಗೆ ಮಾಡಿ:

ಅಮೆರಿಕದ ಪ್ರಜೆಗಳಲ್ಲ್ಲಿ ರೈತರ ಸಂಖ್ಯೆ ಶೇಕಡಾ 1ಕ್ಕಿಂತ ಕಡಿಮೆ ಇದೆ. ಇಪ್ಪತ್ತು ವರ್ಷಗಳ ಹಿಂದೆ ಶೇಕಡಾ 7ರಷ್ಟಿತ್ತು. ಅದು ಕಡಿಮೆ ಆಗುತ್ತ ಆಗುತ್ತ ಬಂದು ಈಗಂತೂ ಜನಗಣತಿಯಲ್ಲಿ ರೈತರ ಸಂಖ್ಯೆಯ ಲೆಕ್ಕ ಇಡುವುದನ್ನೇ ಮರೆತುಬಿಟ್ಟಿದ್ದಾರೆ. ಅಲ್ಲಿ ಸುಮಾರು ಏಳು ಲಕ್ಷ ಜನರು ಆಹಾರ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಎಪ್ಪತ್ತು ಲಕ್ಷ ಜನರು ಜೈಲಿನಲ್ಲೊ, ಪ್ಯರೋಲ್ ಮೇಲೊ ಅಂತೂ ಸರ್ಕಾರದ ಕಟ್ಟಾ ನಿಗಾದಲ್ಲಿ ಬದುಕುತ್ತಿದ್ದಾರೆ.

ಅಮೆರಿಕದ  ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಯ ಪಾಲು ಕೇವಲ ಶೇಕಡಾ 4ರಷ್ಟಿದೆ. ಅದೇ ಭಾರತದ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಯ ಪಾಲು ತುಂಬಾ ದೊಡ್ಡದು. ಸರಕಾರಿ ಲೆಕ್ಕದ ಪ್ರಕಾರ ಅದು ಶೇಕಡಾ 18ರಷ್ಟಿದೆ. ಆದರೆ ಕೃಷಿಯನ್ನೇ ಆಧರಿಸಿ ಬೆಳೆದು ನಿಂತ ಉದ್ಯಮಗಳನ್ನೂ ಸೇವೆಗಳನ್ನೂ (ಇಫ್ಕೊ, ಗಿಫ್ಕೊ ಎಲ್ಲ) ಸೇರಿಸಿದರೆ ಅದು ಶೇಕಡಾ 60ರಷ್ಟಾಗುತ್ತದೆ.

ಅಮೆರಿಕದಲ್ಲಿ ಎಂಭತ್ತರ ದಶಕದಲ್ಲಿ ತಲಾ ಕೃಷಿಕನಿಗೆ 50 ಹೆಕ್ಟೇರ್ ಜಮೀನು ಇತ್ತು. ಈಗ ಅದು ಸಹಜವಾಗಿ ಏರಿದೆ. 200 ಹೆಕ್ಟಾರ್‌ಗೆ ಏರಿದೆ. ಭಾರತದಲ್ಲಿ ಇದರ ಉಲ್ಟಾ! ವರ್ಷ ವರ್ಷವೂ ಕೃಷಿಕನ ಜಮೀನಿನ ಹಿಡುವಳಿಯ ಪ್ರಮಾಣ ತಗ್ಗುತ್ತ ಹೋಗಿದೆ. ಹಿಂದೆ ಸರಾಸರಿ ಮೂರು ಹೆಕ್ಟಾರ್ ಇತ್ತು. ಈಗ 1.47ಗೆ ಇಳಿದಿದೆ.

ಮತ್ತೆ ಅದೇ ಪ್ರಶ್ನೆ: ಪಾಶ್ಚಾತ್ಯ ಕೃಷಿಕರೊಂದಿಗೆ ಪೈಪೋಟಿ ಮಾಡಿರೆಂದು ನಮ್ಮ ಕೃಷಿಕರಿಗೆ ಹೇಳಬಹುದೆ?

ಈಗ ಬಹು ಮುಖ್ಯವಾದ ಕೃಷಿ ಸಬ್ಸಿಡಿಯ ವಿಚಾರಕ್ಕೆ ಬರೋಣ. ಹತ್ತಿ ಬೆಳೆಯುವವರಿಗೆ ಅಮೆರಿಕದಲ್ಲಿ 390 ಕೋಟಿ ಡಾಲರ್‌ಗಳ ಸಬ್ಸಿಡಿ ಸಿಗುತ್ತದೆ. ಸಹಜವಾಗಿಯೇ ಅಲ್ಲಿನ ಕೃಷಿಕ ತನ್ನ ಹತ್ತಿಯನ್ನು ಅಗ್ಗಕ್ಕೆ ಮಾರುತ್ತಾನೆ. ಅವನ ಜತೆ ಪೈಪೋಟಿ ಮಾಡಿ ಜಗತ್ತಿನ ಇತರ ರೈತರು ಇನ್ನೂ ಕಡಿಮೆ ಬೆಲೆಗೆ ಹತ್ತಿಯನ್ನು ಮಾರಬೇಕು. ಸಾಧ್ಯವೊ ಅಸಾಧ್ಯವೊ ಅಂತೂ ಈ ಬೆಲೆ ಇಳಿಕೆ ಪೈಪೋಟಿಯ ಪರಿಣಾಮವಾಗಿ ಇಡೀ ಜಗತ್ತಿನಲ್ಲಿ ಇಂದು ಹತ್ತಿ ಬೆಳೆಯ ಬೆಲೆ ಶೇಕಡಾ 45ರಷ್ಟು ತಗ್ಗಿದೆ. ನಮ್ಮ ರೈತ ಈ ಮಾರುಕಟ್ಟೆಯಲ್ಲಿ ಕಾಲಿಡಲಾರ. ಕಾಲಿಟ್ಟು ಬದುಕಲಾರ.

ಎಕರೆವಾರು ಉತ್ಪಾದನೆಯನ್ನು ಹೆಚ್ಚಿಸಿದರೆ ಆತ ಬದುಕಿಕೊಳ್ಳಬಲ್ಲ ಎಂದು ನಮ್ಮ ತಜ್ಞರು ವಾದಿಸುತ್ತಾರೆ. ಇದೂ ಒಂದು ತಪ್ಪು ಕಲ್ಪನೆಯೇ ಸರಿ. ಅದು ಹೇಗೆಂದು ಹೇಳುತ್ತೇನೆ ತಾಳಿ. ಮೊದಲು ಇಲ್ಲಿನ ಚಿತ್ರಣ ನೋಡೋಣ.

ರಾಷ್ಟ್ರಪತಿ ಕಲಾಂ ಸಾಹೇಬರು ಹೈದರಾಬಾದ್‌ನ ಇಕ್ರಿಸಾಟ್ ಕೃಷಿ ಸಂಸ್ಥೆಯಲ್ಲಿ ಭಾಷಣ ಮಾಡುತ್ತ, ಎಕರೆವಾರು ಉತ್ಪಾದನೆಯನ್ನು ಹೆಚ್ಚಿಸುವತ್ತ ರೈತರಿಗೆ ನಮ್ಮ ವಿಜ್ಞಾನಿಗಳು ಸಹಾಯ ಮಾಡಬೇಕು ಎಂದು ಕರೆ ನೀಡಿದರು. ಅದಾಗಿ 15 ದಿನಗಳಲ್ಲೇ ಕರ್ನೂಲ್ ಜಿಲ್ಲೆಯ ನೂರಾರು ರೈತರು ತಾವು ಬೆಳೆದ ಟೊಮ್ಯಾಟೊಕ್ಕೆ ಕಿಲೊಕ್ಕೆ 50 ಪೈಸೆಯೂ ಸಿಗುತ್ತಿಲ್ಲವೆಂದು ಕುಪಿತರಾಗಿ ರಸ್ತೆಯ ತುಂಬೆಲ್ಲ ಅದನ್ನು ಚೆಲ್ಲಾಡಿ ಹೋದರು. ಉತ್ತರ ಪ್ರದೇಶ, ಹರ್ಯಾಣಾ, ಪಂಜಾಬ್‌ಗಳ ರೈತರು ಆಲೂಗಡ್ಡೆಯನ್ನು ಹೀಗೆ ರಸ್ತೆಗೆ ಸುರುವಿ ಹೋದದ್ದನ್ನು ನೀವು ಓದಿರಬಹುದು.

ಭತ್ತ, ಗೋಧಿ, ಕಬ್ಬು, ಹತ್ತಿ, ಹಣ್ಣು, ತರಕಾರಿಗಳ ವಿಷಯ ಬಂದಾಗ ಭಾರತದ ಬಿತ್ತನೆ ಕ್ಷೇತ್ರ ಭಾರೀ ದೊಡ್ಡದಿದೆ. ಜಗತ್ತಿನ ಅತಿ ವಿಸ್ತಾರ ಹೊಲಗಳ ಶ್ರೇಯಾಂಕದಲ್ಲಿ ಭಾರತ ಸದಾ ಮುಂಚೂಣಿಯಲ್ಲಿದೆ. ಮೊದಲ ಐದು ಶ್ರೇಯಾಂಕಗಳಲ್ಲೇ ಅದರ ಸ್ಥಾನ ಸದಾ ಇರುತ್ತದೆ. ಆದರೆ ಎಕರೆವಾರು ಉತ್ಪಾದನೆಯ ವಿಷಯ ಬಂದಾಗ ಜಗತ್ತಿನ ಅತಿ ಕೆಳಗಿನ ಶ್ರೇಯಾಂಕ ನಮ್ಮದೇ. ಒಪ್ಪಿಕೊಳ್ಳೋಣ. 2000ದಲ್ಲಿ ಭಾರತದಲ್ಲಿ ಪ್ರತಿ ಹೆಕ್ಟಾರಿಗೆ ಭತ್ತದ ಇಳುವರಿ 30 ಕ್ವಿಂಟಾಲ್ ಆಸುಪಾಸು ಇತ್ತು. ಥಾಯ್ಲೆಂಡಿನಲ್ಲಿ ಅದು 23 ಕ್ವಿಂಟಾಲ್ ಇತ್ತು. ಅದೇ ವರ್ಷ ಅಮೆರಿಕದ ಭತ್ತದ ಇಳುವರಿ ಹೆಕ್ಟೇರಿಗೆ 70 ಕ್ವಿಂಟಾಲ್! ಈ ಲೆಕ್ಕ ಗೊತ್ತಿದ್ದರಿಂದಲೇ ಇಳುವರಿ ಹೆಚ್ಚಿಸಿದರೆ ರೈತನನ್ನು ಬಚಾವು ಮಾಡಬಹುದು ಎಂದು ಎಲ್ಲರೂ ಹೇಳುತ್ತಾರೆ.

ಆದರೆ ಅಸಲೀ ಚಿತ್ರಣ ಬೇರೆಯದೇ ಇದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿಯನ್ನು ರಫ್ತು ಮಾಡುವ ದೇಶವೆಂದರೆ ಥಾಯ್ಲೆಂಡ್. ನಾವೂ ಏನ್ ಕಮ್ಮಿ ಇಲ್ಲ. ಸರಕಾರಿ ಗೋದಾಮುಗಳಿಗೆ ಲೆವಿ ಭತ್ತ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಆಗಿತ್ತೆಂದರೆ, ಅದು ಎರಡು ಕೋಟಿ ಟನ್‌ಗಳ ಗುರಿ ಮುಟ್ಟಿ, ಮುಂದೆ 2002ರಲ್ಲಿ ಐದು ಕೋಟಿ ಟನ್‌ಗೆ ಏರಿ, ಇಡಲೂ ಕೂಡ ಜಾಗ ಇಲ್ಲದೆ, ಪಂಜಾಬ್, ಹರ್ಯಾಣಾ ಮತ್ತು ಆಂಧ್ರ ಪ್ರದೇಶ ಸರಕಾರಗಳು ರೈತರಿಗೆ ಇಷ್ಟೆಲ್ಲ ಭತ್ತ ಉತ್ಪಾದಿಸಬೇಡಿ, ಜಾಗ ಇಲ್ಲ ಎಂದು ಗೋಗರೆದಿದ್ದವು. (ಸರಕಾರಿ ಗೋದಾಮುಗಳಲ್ಲಿ ಅಷ್ಟೆಲ್ಲವನ್ನು ರಕ್ಷಿಸಲೆಂದು ಪ್ರತಿ ದಿನಕ್ಕೆ ನಾಲ್ಕು ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಅಷ್ಟೂ ಅಕ್ಕಿಯನ್ನು ಸಮುದ್ರಕ್ಕೆ ಸುರಿಯೋದು ಒಳ್ಳೇದಿತ್ತು ಎಂದು ನಮ್ಮ ಹಿರಿಯ ಆರ್ಥಿಕ ತಜ್ಞನೊಬ್ಬ ಸಲಹೆ ಮಾಡಿದ್ದ!)

ಕಡಿಮೆ ಇಳುವರಿ ಇದ್ದವರ ಗತಿ ಹೀಗಾದರೆ ಅಮೆರಿಕದ ಸ್ಥಿತಿ ಹೇಗಿದ್ದೀತು? ಅಲ್ಲಿ ನಮಗಿಂತ ಇಮ್ಮಡಿ ಇಳುವರಿ ಸಿಗುತ್ತಿದ್ದರೂ ಆ ರೈತನ ದೃಷ್ಟಿಯಲ್ಲಿ ಭತ್ತ ಬೆಳೆಯುವುದೆಂದರೆ ಬರೀ ನಷ್ಟದ ಬಾಬ್ತೇ. ಅದಕ್ಕೇ ಆತ ಸರಕಾರದಿಂದ ಸಬ್ಸಿಡಿ ಕೇಳಿ ಪಡೆಯುತ್ತಾನೆ. ಅಲ್ಲಿನ ಸರಾಸರಿ ರೈತ ಕುಟುಂಬ ಪ್ರತಿ ವರ್ಷ 30 ಸಾವಿರ ಡಾಲರ್ ಸಬ್ಸಿಡಿ ಪಡೆಯುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ 180 ಶತಕೋಟಿ ಡಾಲರ್ ಹಣವನ್ನು ಕೃಷಿ ಸಬ್ಸಿಡಿಗೆಂತಲೇ ಅಲ್ಲಿನ ಸರಕಾರ ಮೀಸಲು ಇಟ್ಟಿದೆ.   ಇಳುವರಿ ಹೆಚ್ಚಾದರೆ ಜಾಗತಿಕ ಮಾರು ಕಟ್ಟೆ ಯಲ್ಲಿ ಪೈಪೋಟಿ ಸುಲಭವೆಂದಾದರೆ, ಅಮೆರಿಕದ ಕೃಷಿಕ ಸರಕಾರದಿಂದ ಏಕೆ ನೆರವು ಪಡೆಯಬೇಕು?

ಭಾರತದಲ್ಲಿ ಅತಿ ಹೆಚ್ಚು ಇಳುವರಿ ಪಡೆದ ರೈತ ಹೈರಾಣಾಗುತ್ತಾನೆ. ಸರಕಾರ ಏನೇನೋ ಸಬೂಬು ಹೇಳಿ ಲೆವಿ ಭತ್ತ ಖರೀದಿಸಲು ನಿರಾಕರಿಸುತ್ತದೆ. ಬೆಲೆ ಏರೀತೆಂದು ಕಾದು ಕಾದು ರೈತ ಕೊನೆಗೂ ತನ್ನ ಫಸಲಿಗೆ ಗಿರಾಕಿ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಹತ್ತಿಯ ವಿಚಾರಕ್ಕೆ ಬಂದರೆ ಇನ್ನೂ ವಿಲಕ್ಷಣ ಚಿತ್ರಣಗಳು ನಮಗೆ ಸಿಗುತ್ತವೆ. ಜಗತ್ತಿನಲ್ಲಿ ಹತ್ತಿ ಬೆಳೆಯುವ ಅತ್ಯಂತ ವಿಸ್ತೀರ್ಣ ಕ್ಷೇತ್ರ ಭಾರತದಲ್ಲಿದೆ. ಅತ್ಯಂತ ಕನಿಷ್ಠ ಇಳುವರಿ ಪಡೆಯುವ ದೇಶವೆಂಬ ಅಗ್ಗಳಿಕೆಯೂ ನಮ್ಮದೇ ಆಗಿದೆ. ಇಂಥ ಅಂಕಿ ಸಂಖ್ಯೆಗಳನ್ನು ನೋಡಿ, ಮನ ಕರಗಿ ನಮ್ಮ ರೈತರನ್ನು ಉದ್ಧಾರ ಮಾಡಲೆಂದೇ ಮೊನ್ಸಾಂಟೊ ಕಂಪನಿ ಬಿಟಿ ಹತ್ತಿಯನ್ನು ನಮಗೆ ಪರಿಚಯಿಸಲೆಂದು ಬಂತು. ಅದಕ್ಕೆ ನೆರವು ನೀಡಲೆಂದು ನಮ್ಮ ಕೃಷಿ ಸಂಶೋಧನ ಮಂಡಲಿ ಮುಂದೆ ಬಂತು. ಬಯೊಟೆಕ್ನಾಲಜಿ ಇಲಾಖೆಯೂ ಮುಂದೆ ಬಂತು. ಹತ್ತಿಗೆ ತಗಲುವ ಬೊಲ್ ವರ್ಮ್ ಎಂಬ ಹುಳವನ್ನು ತಾನು ವಿಷ ಸಿಂಪಡನೆ ಮಾಡದೆಯೇ ಕೊಲ್ಲುತ್ತೇನೆಂದು ಮೊನ್ಸಾಂಟೊ ಹೇಳಿತು. ಈ ಹೊಸ ತಳಿಯಿಂದ ಉತ್ಪಾದನೆಯೇನೂ ಹೇಳಿಕೊಳ್ಳುವಷ್ಟು ಏರಲಿಲ್ಲ. ಆದರೆ ರೈತರ ಆತ್ಮಹತ್ಯೆಯ ಅಂಕಿಸಂಖ್ಯೆ ಮಾತ್ರ ಏರುತ್ತ ಹೋಯಿತು.

ಕಳೆದ 25 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹತ್ತಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಳುವರಿ ಹೆಚ್ಚಿಲ್ಲವೆಂತಲ್ಲ, ಈ ಅವಧಿಯಲ್ಲಿ ಇಳುವರಿ ಶೇಕಡಾ 75ರಷ್ಟು ಹೆಚ್ಚಾಗಿದೆ. ಆದರೆ ಅದರಿಂದ ರೈತರ ಸಂಕಷ್ಟಗಳೇನೂ ಪರಿಹಾರ ಆಗಿಲ್ಲ.

ಈಗ ಜಗತ್ತಿನ ಅತಿ ದೊಡ್ಡ ಹತ್ತಿ ರಫ್ತುದಾರ ಎನಿಸಿದ ಅಮೆರಿಕವನ್ನು ಹೋಲಿಕೆಗೆ ಪರಿಶೀಲಿಸೋಣ. ಅಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ತೀರಾ ಕಡಿಮೆ ಇದೆ. ಒಟ್ಟೂ 9 ಲಕ್ಷ ರೈತರಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ಕೇವಲ 25 ಸಾವಿರ ಅಷ್ಟೆ. ಆದರೆ ಅವರಿಗೆ ಬೆಂಬಲವಾಗಿ ಸರಕಾರ 380 ಕೋಟಿ ಡಾಲರ್ ಸಬ್ಸಿಡಿ ನೀಡುತ್ತಿದೆ. ಪ್ರತಿ ಬೆಳೆಗಾರನ ಸರಾಸರಿ ಆಸ್ತಿ ಮೌಲ್ಯ ಎಂಟು ಲಕ್ಷ ಡಾಲರ್‌ನಷ್ಟಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಸರಕಾರಿ ಕೃಪೆ. ಆತ ಅದೆಷ್ಟು ಅಗ್ಗದಲ್ಲಿ ತನ್ನ ಹತ್ತಿಯನ್ನು ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಬಿಡುತ್ತಾನೆಂದರೆ, ಚೀನಾ, ಭಾರತ, ಪಶ್ಚಿಮ ಆಫ್ರಿಕಾ ಎಲ್ಲವೂ ಪೈಪೋಟಿ ನಡೆಸಲಾರದೆ ತತ್ತರಿಸುತ್ತಿವೆ. ಸಾಲದ್ದಕ್ಕೆ ಭಾರತ ಸರಕಾರ ಅದೇ ಅಮೆರಿಕದ ಅಗ್ಗದ ಹತ್ತಿಯನ್ನು ಖರೀದಿಸಿ (ಇಸವಿ 2000ದಲ್ಲಿ 48 ಸಾವಿರ ಟನ್) ನಮ್ಮ ರೈತರ ಗಾಯಕ್ಕೆ ಉಪ್ಪು ಸವರಿದೆ.

ಏನಾಗಿದೆ ನಮ್ಮ ಸರಕಾರೀ ಧುರೀಣರಿಗೆ? ಅಥವಾ ಅವರಿಗೆ ಉಪದೇಶ ಮಾಡುವ ಆರ್ಥಿಕ ತಜ್ಞರಿಗೆ? ಅಥವಾ ಕೃಷಿಕರಿಗೆ ಮಾರ್ಗದರ್ಶನ ಮಾಡುವ ಕೃಷಿ ತಜ್ಞರಿಗೆ? ಏಕೆ ಅವರು ಅಮೆರಿಕ ಮತ್ತು ಯುರೋಪಿನ ಮಾದರಿಗಳನ್ನು ಒಪ್ಪಿಕೊಂಡು ಅವರದ್ದೇ ಆರ್ಥಿಕ ಸಲಹೆಗಳನ್ನು ಪಾಲಿಸುತ್ತ, ಅಲ್ಲಿನ ರೈತರ ಹೊಟ್ಟೆಯನ್ನು ತಂಪಾಗಿಸುವಂಥ ನೀತಿಯನ್ನೇ ನಮ್ಮ ರೈತರ ಮೇಲೆ ಹೇರುತ್ತ ಬರುತ್ತಿದ್ದಾರೆ?

ನಮ್ಮ ದೇಶದ ಕೃಷಿರಂಗದ ದುಃಸ್ಥಿತಿಗೆ ಮುಖ್ಯ ಕಾರಣ ಏನು ಗೊತ್ತೆ? ಇಂದಿಗೂ ಅಮೆರಿಕ ಅಥವಾ ಬ್ರಿಟಿಷ್ ತಜ್ಞರು ಬರೆದ ಪಠ್ಯಪುಸ್ತಕಗಳನ್ನು ಓದಿಯೇ ನಮ್ಮ ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದ ಸ್ಥಿತಿ ಇದೆ.  ಪಾಶ್ಚಾತ್ಯ ಕೃಷಿ ಪಂಡಿತರ ಸಲಹೆಗಳಿಂದಾಗಿಯೇ ನಮ್ಮಲ್ಲಿ ಏನೇನು ದುರವಸ್ಥೆಗಳಾಗಿವೆ ಎಂಬುದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ:

1966ರಲ್ಲಿ ನಮ್ಮಲ್ಲಿ ಹಸಿರು ಕ್ರಾಂತಿಯ ಬೀಜಗಳನ್ನು ಹೊರ ದೇಶಗಳಿಂದ ತರಿಸಿದೆವು. ಅದರಿಂದ ಮತ್ತೇನೂ ದುಷ್ಪರಿಣಾಮ ಆಗಲಿಕ್ಕಿಲ್ಲ, ಎರೆಹುಳಗಳು ಸಾಯಬಹುದು ಅಷ್ಟೆ ಎಂಬ ಉಪದೇಶ ಈ ತಜ್ಞರಿಂದ ನಮಗೆ ಸಿಕ್ಕಿತು. ಸರಿ, ಗಿಡ್ಡ ತಳಿಯ ಭತ್ತದ ತಳಿಗಳು ಬಂದವು. ಹಿಂದೆಲ್ಲ ನಮ್ಮ ರೈತರು ಬೀಜಗಳನ್ನು ಹೊಲದಲ್ಲಿ ಎರಚುತ್ತಿದ್ದರು. ಹಾಗೆ ಮಾಡುವುದು ಸರಿಯಲ್ಲ, ಸಾಲಾಗಿ ನಾಟಿ ಮಾಡಿ ಎಂದು ಈ ತಜ್ಞರು ಹೇಳಿದರು. ಜತೆಗೆ ಹೇರಳ ರಸಗೊಬ್ಬರ, ನೀರು, ಕೀಟನಾಶಕ ಸುರಿಯಲು ಸಲಹೆ ಮಾಡಿದರು. ಅವೆಲ್ಲ ಸುರಿದರೆ ಫಸಲು ಚೆನ್ನಾಗಿ ಬರುತ್ತದೆ ನಿಜ. ಆದರೆ ಸಾಲಾಗಿ ಏಕೆ ನಾಟಿ ಮಾಡಬೇಕು? ಅದಕ್ಕೆಂದು ಹೆಚ್ಚಿನ ಕೃಷಿ ಕೂಲಿಕಾರರು ಬೇಕು. ದಾರ ಕಟ್ಟಿ ಕೆಸರಿನಲ್ಲಿ ನಾಟಿ ಮಾಡಲು ಅಪಾರ ಕೂಲಿ ವೆಚ್ಚವಾಗುತ್ತದೆ. ಸಾಲಾಗಿ ನೆಟ್ಟ ಮಾತ್ರಕ್ಕೇ ಇಳುವರಿ ಜಾಸ್ತಿ ಬರುವುದಿಲ್ಲ. ಆದರೂ ಯಾಕೆ ಈ ನಿಯಮ ಜಾರಿಯಲ್ಲಿದೆ?

ಫಿಲಿಪ್ಪೀನ್ಸ್‌ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕಾಗಿದ್ದ ಗುರುದೇಬ್ ಘೋಷ್ ಅವರಿಗೆ ನಾನು ಹಿಂದೊಮ್ಮೆ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿದ್ದೆ. ಕೊನೆಗೆ ಅವರು ಚುಟುಕಾಗಿ ಉತ್ತರಿಸಿದರು: ಟ್ರಾಕ್ಟರ್ ತಯಾರಿಕಾ ಉದ್ಯಮಕ್ಕೆ ನೆರವಾಗಲಿ ಎಂದೇ ಈ ನಿಯಮ! ಎಂದರು. ನಿಜವೇ ಇರಬೇಕು. ಶಿಸ್ತಿನ ಸಾಲಿನಲ್ಲಿ ನಾಟಿ ಮಾಡಿದರೆ ಮಾತ್ರ ಸಾಲಿನ ಮಧ್ಯೆ ಟ್ರ್ಯಾಕ್ಟರ್ ಸಲೀಸಾಗಿ ಓಡಾಡುತ್ತದೆ. ನಿರೀಕ್ಷೆಯಂತೆ ಅನುಕೂಲಸ್ಥ ರೈತರು ಟ್ರಾಕ್ಟರ್ ಮೋಡಿಗೆ ಬಿದ್ದರು. ಅಷ್ಟೇನೂ ಅನುಕೂಲವಿಲ್ಲದ ರೈತರಿಗೂ ಅದು ಆಕರ್ಷಕ ಎನಿಸಿತು. ಬ್ಯಾಂಕ್‌ಗಳೂ ತಾವಾಗಿ ಟ್ರ್ಯಾಕ್ಟರ್ ಕೊಳ್ಳಲು ಸಾಲ ಕೊಡಲು ಮುಂದಾದರು. ತಾವು ಸಾಲ ಕೊಟ್ಟ ಟ್ರ್ಯಾಕ್ಟರಿಗೆ ಮಾಲೆ ಹಾಕಿ ಫೋಟೊ ತೆಗೆಸಿ ಪ್ರಚಾರ ಕೊಟ್ಟು ಬ್ಯಾಂಕ್‌ಗಳು ಉದ್ಧಾರವಾದರೇ ವಿನಾ ರೈತರ ಏಳಿಗೆಯಾಗಲಿಲ್ಲ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಶೇಕಡಾ 70ರಷ್ಟು ಟ್ರ್ಯಾಕ್ಟರ್‌ಗಳಿವೆ.  ಆತ್ಮಹತ್ಯೆ ಮಾಡಿಕೊಳ್ಳುವವರಲ್ಲೂ ಟ್ರ್ಯಾಕ್ಟರ್ ಇಟ್ಟುಕೊಂಡವರ ಸಂಖ್ಯೆಯೇ ಜಾಸ್ತಿ ಇದೆ. ಇನ್ನು ಮೇಲೆ ಟ್ರ್ಯಾಕ್ಟರ್‌ಗೆ ಸಾಲ ಕೊಡುವುದನ್ನು ನಿಲ್ಲಿಸಿ ಬಿಡಿ ಎಂದು ನಮ್ಮಂಥ ಕೆಲವರು ಬ್ಯಾಂಕ್‌ಗಳಿಗೆ ವಿನಂತಿ ಮಾಡಿಕೊಂಡೆವು. ಏನೂ ಪ್ರಯೋಜನವಾಗಲಿಲ್ಲ. ಸಾಲ ನಿಲ್ಲಿಸಲು ಬ್ಯಾಂಕ್‌ಗಳು ಖಡಾಖಂಡಿತ ನಿರಾಕರಿಸಿದವು.

ಕೀಟನಾಶಕಗಳದ್ದೂ ಇದೇ ಕತೆ. ಭತ್ತಕ್ಕೆ ಕೀಟನಾಶಕದ ಸಿಂಪಡನೆಯ ಅಗತ್ಯವೇ ಇಲ್ಲ. ಆದರೂ ರೈತರಿಗೆ ಅದೇನೋ ಮೋಡಿ ಮಾಡಲಾಗಿದೆ. ಬೆನ್ನಿಗೆ ಕಟ್ಟಿಕೊಳ್ಳುವ ಸಿಂಪಡನಾ ಯಂತ್ರಗಳು ಬಂದವು. ಉದ್ದ ಪಿಚಕಾರಿಯ ಮೂತಿ ಇರುವ ಸ್ಪ್ರೇಯರ್‌ಗಳು, ಅಗಲ ಸಿಂಪಡನೆಯ ಮೂತಿಯ ಸ್ಪ್ರೇಯರ್‌ಗಳು. ಹೇಗೇ ಸ್ಪ್ರೇ ಮಾಡಿದರೂ ಶೇಕಡಾ 99.99ರಷ್ಟು ಕೀಟನಾಶಕ ಎಲ್ಲ ಗಾಳಿಯಲ್ಲೇ ಸೇರಿ ಹೋಗುತ್ತದೆ. ಇಲ್ಲವೆ ನೀರಿಗೊ ಮಣ್ಣಿಗೊ ಸೇರ್ಪಡೆ ಆಗಿ ವಿಷವನ್ನು ಬೇಕಿಲ್ಲದ ಜಾಗಕ್ಕೆಲ್ಲ ಪಸರಿಸುತ್ತವೆ. ಹೇಗಿದ್ದರೂ ಸ್ಪ್ರೇ ಪಂಪ್ ಇದೆ ಎಂಬ ಒಂದೇ ಕಾರಣಕ್ಕೆ ಕೀಟನಾಶಕಗಳನ್ನು ಖರೀದಿಸಿ ತಂದು, ಅನಗತ್ಯವಾಗಿ ಭತ್ತಕ್ಕೆ ಸಿಂಪಡನೆ ಮಾಡಲಾಗುತ್ತದೆ. ಈ ಉದಾಹರಣೆಯಲ್ಲೂ ಸ್ಪ್ರೇ ಪಂಪ್‌ಗಳ ಮಾರಾಟದ ಜಾಲದಿಂದಾಗಿಯೇ ಕೀಟನಾಶಕದ ಬಳಕೆ ಅತಿಯಾಯಿತೇ ವಿನಾ ರೈತರ ಅಗತ್ಯದಿಂದಾಗಿ ಅಲ್ಲ. ಇಂಥ ಕೃಷಿ ಸಲಕರಣೆಗಳ ಮೇಲಿನ ಸಾಲದ ಹೊರೆಯಿಂದಾಗಿಯೇ ರೈತನ ಉತ್ಪಾದನೆಯ ವೆಚ್ಚ ಏರುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಭತ್ತದ/ಅಕ್ಕಿಯ ಬೆಲೆಯಲ್ಲಿ ಮಾತ್ರ ಏನೇನೂ ಏರಿಕೆಯಾಗಿಲ್ಲ.

ನಿಮಗಿದು ಗೊತ್ತೆ? ಕೃಷಿ ವಿಷಯ ಕುರಿತ ಏನೆಲ್ಲ ಬಗೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಇದುವರೆಗೆ ರೈತರ ಆತ್ಮಹತ್ಯೆಯ ವಿಷಯದಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಅವರಿಗೆ ರೈತರ ಕಷ್ಟನಷ್ಟಗಳ ಗೊಡವೆಯೇ ಬೇಕಿಲ್ಲ. ಅವರು ಟ್ರ್ಯಾಕ್ಟರ್ ಮಾರಾಟದ ವ್ಯವಸ್ಥೆ ಮಾಡುತ್ತಾರೆ. ಕೀಟನಾಶಕದ ಮಾರಾಟದ ಏರ್ಪಾಡು ಮಾಡುತ್ತಾರೆ. ಈಗ ಕುಲಾಂತರಿ ಫಸಲಿನ ಜಾಹೀರಾತು ಮಾಡುತ್ತಿದ್ದಾರೆ.

ನಾವೀಗ ಈ ತಜ್ಞರಿಗೆ ಹೇಳಬೇಕಾಗಿದೆ: ಮಾನ್ಯರೆ, ಇಷ್ಟು ವರ್ಷಗಳ ಕಾಲ ಉದ್ದಿಮೆಗಳು ಬದುಕುಳಿಯಲು ನೀವು ರೈತರ ಹಿತವನ್ನು ಬಲಿಗೊಟ್ಟಿರಿ. ಒಂದೊಂದು ಬ್ಲಾಕ್‌ನಿಂದಲೂ ಸರಾಸರಿ 70 ಲಕ್ಷ ರೂಪಾಯಿಗಳು ರೈತರ ಕಿಸೆಯಿಂದ ಉದ್ದಿಮೆಗಳಿಗೆ ಹರಿದು ಹೋಗುವಂತೆ ಮಾಡಿದಿರಿ. ಇನ್ನಾದರೂ ಅವನ್ನೆಲ್ಲ ನಿಲ್ಲಿಸಿ, ರೈತರು ಬದುಕುಳಿಯುವಂಥ ಏನಾದರೂ ಉಪಾಯ ಮಾಡಿ ಎನ್ನಬೇಕಾಗಿದೆ. ಮತ್ತೇನಿಲ್ಲ ಈ 70 ಲಕ್ಷ ರೂಪಾಯಿ ಆಯಾ ಬ್ಲಾಕ್‌ಗಳಲ್ಲಿ ರೈತರ ಬಳಿಯೇ ಉಳಿದರೂ ಸಾಕು ದೊಡ್ಡ ಉಪಕಾರವಾಗುತ್ತದೆ. ದಯವಿಟ್ಟು ಈ ಉದ್ಯಮಗಳು ಹಳ್ಳಿಗೆ ಬರದಂತೆ ನೋಡಿಕೊಳ್ಳಿ ಎನ್ನಬೇಕಾಗಿದೆ.

1988ರಲ್ಲಿ ಇಂಡೋನೇಶ್ಯ ಸರಕಾರ ಇಂಥದೇ ನಿರ್ಣಯವನ್ನು ಕೈಗೊಂಡಿತು. ಅಲ್ಲೂ ಕೀಟನಾಶಕದ ಹಾವಳಿ ಅತಿಯಾಗಿತ್ತು. ಭತ್ತಕ್ಕೆ ಕಂದು ಜಿಗಿ ಹುಳು ಬರುತ್ತದೆಂಬ ಭೀತಿ ಹುಟ್ಟಿಸಿ, 57 ಬಗೆಯ ಕೀಟನಾಶಕಗಳನ್ನು ರೈತರು ಭತ್ತದ ಗದ್ದೆಗೆ ಎರಚುವಂತೆ ಮಾಡಲಾಗಿತ್ತು. ರೈತರು ರೋಸಿ ಹೋಗಿದ್ದರು. ಒಂದು ಕಠಿಣ ನಿರ್ಧಾರವನ್ನು ಕೈಗೊಂಡು ಅಲ್ಲಿನ ಸರಕಾರ ಎಲ್ಲ ಕೀಟನಾಶಕಗಳನ್ನೂ ನಿಷೇಧಿಸಿತು. ಅಪ್ಪಟ ನಿಷೇಧ! ಅಚ್ಚರಿಯ ಸಂಗತಿ ಏನು ಗೊತ್ತೆ? ಭತ್ತದ ಉತ್ಪಾದಕತೆ ಶೇಕಡಾ 20 ರಷ್ಟು ಹೆಚ್ಚಾಯಿತು.

ಐಎಆರ್‌ಐಯ ಯಾವ ತಜ್ಞರೂ ನಮ್ಮ ರೈತರಿಗೆ ಇಂಥ ದೇಶಗಳ ಉದಾಹರಣೆಗಳನ್ನು ಕೊಡುವುದಿಲ್ಲ. ಬದಲಿಗೆ ಇಸ್ರೇಲ್ ದೇಶದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮರುಭೂಮಿ ನಳನಳಿಸುತ್ತದಂತೆ. ಎಲ್ಲಾ ಕಡೆ ಹನಿ ನೀರಾವರಿಯ ವ್ಯವಸ್ಥೆ ಇದೆಯಂತೆ. ಇದು ಜಿನುಗು ನೀರಾವರಿಯ ಪೈಪು, ಕೊಳವೆ, ಪಂಪ್‌ಗಳನ್ನು ಮಾರಾಟ ಮಾಡುವವರ ಅನುಕೂಲಕ್ಕಾಗಿ ನೀಡುವ ಉದಾಹರಣೆಯೇ ಹೊರತೂ, ರೈತರ ಉದ್ಧಾರಕ್ಕಲ್ಲ. ಇಸ್ರೇಲಿನಲ್ಲಿ ರೈತ ಬದುಕಿದ್ದಾನೆ ಏಕೆಂದರೆ ಅಮೆರಿಕದವರು ಇಸ್ರೇಲಿ ರೈತರಿಗೆ ಹೇರಳ ಹಣ ನೀಡುತ್ತಾರೆ. ಅಷ್ಟೊಂದು ಹಣ ಸುರಿದರೆ ಮರುಭೂಮಿ ನಳನಳಿಸುತ್ತಿದೆ ನಂಬೋಣ. ಆದರೆ, ಅದೇ ಕ್ರಮಗಳನ್ನು ಇಲ್ಲೂ ಅನುಸರಿಸಲು ಹೋದರೆ, ಮೊದಲೇ ನಳನಳಿಸುತ್ತಿದ್ದ ಇಲ್ಲಿನ ನಂದನವನವನ್ನು ಮರುಭೂಮಿಯಾಗಿ ಮಾಡುತ್ತೇವಷ್ಟೆ.

ನಮ್ಮಲ್ಲಿಲ್ಲದ್ದನ್ನು ನಮ್ಮ ರೈತರ ಮೇಲೆ ಹೇರುವ, ನಮ್ಮದನ್ನು ಹೆರವರಿಗೆ ಹೇರುವ ಕೆಲಸವನ್ನು ನಮ್ಮ ತಜ್ಞರು ಸಲೀಸಾಗಿ ಮಾಡುತ್ತಾರೆ. ಆಫ್ರಿಕದ ಎರೆಹುಳುಗಳನ್ನು ಇಲ್ಲಿಗೆ ತರಿಸಿ, ನಮ್ಮ ರೈತರು ಲಾಭ ಮಾಡಿಕೊಂಡ ಬಗ್ಗೆ  ಪ್ರಚಾರ ಅದೆಷ್ಟು ಜೋರಾಗಿ ನಡೆಯಿತೆಂದರೆ, ಅಮೆರಿಕದ ಕೆಲ ರೈತರೂ ಮರುಳಾಗಿ ಇಲ್ಲಿಂದ ಎರೆಹುಳಗಳನ್ನು ಎರವಲು ಪಡೆದು ತಮ್ಮ ಭೂಮಿಯಲ್ಲಿ ಬಿಟ್ಟರು. ಅಮೆರಿಕದ ನೆಲದಲ್ಲಿ ಎರೆಹುಳು ಇಲ್ಲವೇ ಇಲ್ಲ. ಇಡೀ ದೇಶದ ಎಲ್ಲೂ ಇಲ್ಲ. ಎರಡು ವರ್ಷಗಳ ಹಿಂದೆ ಅವರು ಎರೆಹುಳುಗಳನ್ನು ಸಾಕಲು ಯತ್ನಿಸಿ ವಿಫಲರಾಗಿ ಈಗ ಆ ಯತ್ನವನ್ನೇ ಕೈಬಿಟ್ಟಿದ್ದಾರೆ. ನಾವು ಯುರೋಪ್ ದೇಶಗಳಿಂದ ದನಗಳನ್ನು ತರಿಸಿಕೊಂಡು ಇಡೀ ದೇಶದ ತುಂಬೆಲ್ಲಾ ಪರಕೀಯ ತಳಿಗಳನ್ನೇ ತುಂಬಿದ್ದೇವೆ. ಇಂದು ನಮ್ಮಲ್ಲಿ ವಿದೇಶೀ ಮೂಲದ 35 ಲಕ್ಷ ದನಗಳಿವೆ. ನಮ್ಮ ಮೂಲ ತಳಿಗಳು ಎಲ್ಲಿಗೆ ಹೋದವೊ ಯಾರೂ ಲೆಕ್ಕ ಇಟ್ಟಿಲ್ಲ.

ನಾನು ಹೇಳುತ್ತೇನೆ ಕೇಳಿ. ನಮ್ಮ ದೇಶದ ಕಿಲಾರಿ ಮತ್ತು ಒಂಗೋಲ್‌ನಂಥ ದನಗಳ ತಳಿಗಳು ದೂರದ ಬ್ರಝಿಲ್ ದೇಶದಲ್ಲಿ ಪ್ರಫುಲ್ಲವಾಗಿ ಬೆಳೆಯುತ್ತಿವೆ. ಅಲ್ಲಿನವರು ಈ ತಳಿಗಳನ್ನು ಬೇರೆ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಇಂದಿನ ಲೆಕ್ಕಾಚಾರದ ಪ್ರಕಾರ ಭಾರತೀಯ ಮೂಲದ ದನಗಳ ಅತಿ ದೊಡ್ಡ ರಫ್ತುದಾರ ಯಾರೆಂದರೆ ಬ್ರಝಿಲ್ ದೇಶ. ಈಗ ನಾವು ನಮ್ಮದೇ ಮೂಲದ ಅಪರೂಪದ ತಳಿ ಬೇಕೆಂದಿದ್ದರೆ ಬ್ರಝಿಲ್‌ನಿಂದ ಆಮದು ಮಾಡಿಕೊಳ್ಳಬೇಕು.

ಹಿಂದಿನ ಇಂಥ ಎಲ್ಲ ತಪ್ಪುಗಳನ್ನು ಸರಿಪಡಿಸಿ, ಮಾದರಿ ಕೃಷಿ ಎಂದರೇನೆಂದು ನಮ್ಮ ರೈತರಿಗೆ ತೋರಿಸಲೆಂದು ಈಗ ಹೊಸ ಎಸ್‌ಇಝಡ್ ಯೋಜನೆಯನ್ನು ತಜ್ಞರು ರೂಪಿಸಿದ್ದಾರೆ.

ಅಗ್ರಿ ಬಿಸಿನೆಸ್ ಕಂಪನಿಗಳ ಕೃಪೆ ಇದು. ಜಗತ್ತಿನಲ್ಲಿ ಎಲ್ಲೂ ಈ ಕಂಪನಿಗಳು ರೈತರ ಜತೆ ಕೈಜೋಡಿಸಿ ಕೆಲಸ ಮಾಡಿದ್ದೇ ಇಲ್ಲ. ಇಂಥ ಕಂಪನಿಗಳು ಎಲ್ಲೆಲ್ಲಿ ಕಾಲಿಟ್ಟಿವೆಯೊ ಅಲ್ಲೆಲ್ಲ ರೈತರು ಗುಳೆ ಎದ್ದಿದ್ದಾರೆ. ಅದು ಅಮೆರಿಕ ಇರಲಿ, ಯುರೋಪ್ ಇರಲಿ, ಸರಕಾರಗಳು ಅಷ್ಟು ದೊಡ್ಡ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದರೂ ರೈತರಿಗೆ ಬದುಕಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ಈ ಕಂಪನಿಗಳು ತಂದೊಡ್ಡುತ್ತವೆ. ನಮ್ಮಲ್ಲೂ ಅಂಥ ಕಂಪನಿಗಳಿಗೆ ದೊಡ್ಡ ಮಣೆ ಹಾಕುವ ಸಿದ್ಧತೆಗಳು ನಡೆದಿವೆ. ಎಸ್‌ಇಝಡ್ ಹೆಸರಿನಲ್ಲಿ ಗುತ್ತಿಗೆ ಕೃಷಿ ದೊಡ್ಡ ಪ್ರಮಾಣದಲ್ಲಿ ಬರಲಿದೆ. ಅವರಿಗಾಗಿ ನಮ್ಮೆಲ್ಲ ಸಂಪನ್ಮೂಲಗಳನ್ನು ‘ಅಂದರೆ ನೀರು, ಜೀವಿ ವೈವಿಧ್ಯ, ಅರಣ್ಯ, ಬೀಜನಿಧಿ, ಕೃಷಿ ಮಾರುಕಟ್ಟೆ ಮತ್ತು ಖನಿಜ ಸಂಪತ್ತನ್ನು- ಧಾರೆ ಎರೆಯುವ ಯೋಜನೆಗಳು ರೂಪುಗೊಂಡಿವೆ. ಇಂಥ ಗುತ್ತಿಗೆದಾರರು ಅತಿ ನೀರು, ಅತಿ ಗೊಬ್ಬರ, ಅತಿ ಪ್ರಮಾಣದ ಪೀಡೆನಾಶಕಗಳನ್ನು ಬಳಸಿ, ಸಾಮಾನ್ಯ ರೈತರು ಬಳಸುವುದಕ್ಕಿಂತ 15-20 ಪಟ್ಟು ಒಳಸುರಿಗಳನ್ನು ಸುರಿದು ಸ್ವಲ್ಪವೇ ಅವಧಿಯಲ್ಲಿ ದೊಡ್ಡ ಲಾಭ ಮಾಡಿಕೊಂಡು, ನೆಲವನ್ನ ಬಂಜರು ಮಾಡಿ ಬೇರೆಡೆ ಹೊರಡುತ್ತಾರೆ. ಹಿಂದಿನ ಶತಮಾನದಲ್ಲಿ ವನವಾಸಿಗಳು ಅನುಸರಿಸುತ್ತಿದ್ದ ವಲಸೆ ಕೃಷಿ (ಝೂಮ್ ಪದ್ಧತಿ)ಯ ವಿಕಾರ ರೂಪ ಇದು.

ರೈತರನ್ನು ನಗರಗಳಿಗೆ ಅಟ್ಟಿ, ಕೃಷಿ ಭೂಮಿಯನ್ನು ಬಂಜರು ಮಾಡಿ ಯಾರನ್ನು ಉದ್ಧಾರ ಮಾಡುವ ಯೋಜನೆಗಳು ಇವು?

ದೇಶದ ಸುಮಾರು ಆರು ಕೋಟಿ ಸರಕಾರಿ ನೌಕರರ ಏಳ್ಗೆಗೆಂದು ಆರನೇ ವೇತನ ಆಯೋಗ ಒಂದು ಲಕ್ಷ ಕೋಟಿ ರೂಪಾಯಿಗಳ ಹೊಸ ಪ್ಯಾಕೇಜನ್ನು ಘೋಷಿಸಿದೆ ಅದರ ಅರ್ಧದಷ್ಟು, ಅಂದರೆ 50 ಸಾವಿರ ಕೋಟಿ ರೂಪಾಯಿಗಳು ಅರವತ್ತು ಕೋಟಿ ರೈತರ ಕಲ್ಯಾಣಕ್ಕೆ ಸಾಕೇ ಸಾಕು. ಅಷ್ಟನ್ನು ಸರಕಾರ ಕೃಷಿರಂಗದ ಮೇಲೆ ವೆಚ್ಚ ಮಾಡಲಾರದೆ?

* * *


ದೇಶದ ಹೆಸರಾಂತ ಕೃಷಿ ಚಿಂತಕ ಡಾ. ದೇವೀಂದ್ರ ಶರ್ಮಾ ಈಚೆಗೆ ಬೆಂಗಳೂರಿನ ಕೃಷಿ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಹೇಳಿದ ಮಾತುಗಳು ಇವು. ಇದು ಶಬ್ದಶಃ ತರ್ಜುಮೆಯಲ್ಲ. ಅವರ ಭಾಷಣದ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಟಿಪ್ಪಣಿಯನ್ನು ಆಧರಿಸಿ ಪತ್ರಕರ್ತ ನಾಗೇಶ ಹೆಗಡೆ ಸಿದ್ಧಪಡಿಸಿದ ಕನ್ನಡ ಲೇಖನ ಇದು. ಹೆಚ್ಚಿನ ಇಲ್ಲವೆ ಪೂರಕ ಮಾಹಿತಿ ಬೇಕಿದ್ದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಶರ್ಮಾ ಅವರ ಲೇಖನಗಳು www.countercurrents.org/glo-crop.htm ಹೆಸರಿನ ಜಾಲತಾಣದಲ್ಲಿ ಸಿಗುತ್ತವೆ.

 

ಆಧುನಿಕ ತಂತ್ರಜ್ಞಾನವನ್ನು ಆಧರಿಸಿದ ಕೃಷಿಯೇ ಮೇಲೆಂದು ವಾದಿಸುವ ಈ ಕೃಷಿ ವಿಜ್ಞಾನಿಗಳಿಗೆ  ರೈತ ಎಂಬುದು ಒಂದು ನೆಪವಷ್ಟೆ.

ರೈತನ ಹೆಸರಿನಲ್ಲಿ ಇವರೆಲ್ಲ ತಂತಮ್ಮ ಅನುಕೂಲಕ್ಕಾಗಿ, ತಂತಮ್ಮ ಪದೋನ್ನತಿಗಾಗಿ ಏನು ಬೇಕೊ ಅದನ್ನೆಲ್ಲ ಮಾಡುತ್ತಾರೆ.

ಈಗಂತೂ ಎಲ್ಲೆಲ್ಲೂ ತಳಿಗುಣಗಳನ್ನು ಬದಲಾಯಿಸಿದ ಕುಲಾಂತರಿ ತಳಿಗಳನ್ನೇ ನಮ್ಮ ಕೃಷಿ ವಿಜ್ಞಾನಿಗಳು ಹಾಡಿ ಹೊಗಳುತ್ತಿದ್ದಾರೆ. ನಮ್ಮ ಪುರಾಣ-ಕತೆಗಳಲ್ಲೂ ಅವುಗಳ ಗುಣಗಾನ ಇವೆಯಂತೆ.

ಹೌದು, ಇವೆ. ರಾಮಾಯಣದ ರಾವಣನನ್ನು ನೋಡಿ: ಆತನಿಗೆ ಹತ್ತು ತಲೆ, ಇಪ್ಪತ್ತು ಕೈಗಳು!

ಮಹಾಭಾರತದ ಕೌರವರನ್ನು ನೋಡಿ: ಅಂಧರಾಜನಿಗೆ ನೂರೊಂದು ಮಕ್ಕಳು. ಎಲ್ಲರೂ ಅತಿ ಆಸೆಯ ಫಲಗಳೇ. ಅಧಿಕಾರದ ಹಮ್ಮಿನಿಂದ ಶಕ್ತಿಶಾಲಿಗಳೆಂದು ಬೀಗಿದರೂ ಅಂತಿಮವಾಗಿ, ಸೋತು ನೆಲಕಚ್ಚಿದವರು ಅವರೇ ತಾನೆ?

 

ಡಾ. ದೇವೇಂದ್ರ ಶರ್ಮಾ,

ಆಗಸ್ಟ್ 26, 2008ರಂದು ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ

ವಿಚಾರ ಸಂಕಿರಣದಲಿ

 


ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ, ಕ್ರಿ.. 2015ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು 40 ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು, ಯುಕೆ, ಫ್ರಾನ್ಸ್ ಮತ್ತು ಜರ್ಮನಿಯ ಒಟ್ಟೂ ಜನಸಂಖ್ಯೆಯ ಎರಡು ಪಟ್ಟು! ಇದು ನಂಬಬಹುದಾದ ಸಂಖ್ಯೆಯೇ ಇರಬೇಕು. ಏಕೆಂದರೆ ನ್ಯಾಶನಲ್ ಸ್ಯಾಂಪಲ್ ಸರ್ವೆಯವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 40ರಷ್ಟು ರೈತರು ಈಗಾಗಲೇ ರೋಸಿ ಹೋಗಿದ್ದಾರೆ. ಕೃಷಿಯನ್ನು ಬಿಟ್ಟು ಬೇರೇನಾದರೂ ಉದ್ಯೋಗ ಹುಡುಕಿಕೊಳ್ಳೋಣ ಎಂದಿದ್ದಾರೆ. ನಮ್ಮವರೇ ನಡೆಸಿದ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ. 70ರಷ್ಟು ರೈತರು, ಪಂಜಾಬಿನ 65%, ಉತ್ತರ ಪ್ರದೇಶದ ಸುಮಾರು 55% ರೈತರು ಬೇಸಾಯದ ಬವಣೆ ತಾಳಲಾರದೆ ನಗರಗಳಿಗೆ ಬರಲಿದ್ದಾರೆ. ಆಗ ಕೃಷಿ ನಿರಾಶ್ರಿತರು ಎಂಬ ಹಣೆಪಟ್ಟಿಯೊಂದಿಗೆ ನಮ್ಮ ದೇಶದಲ್ಲಿ ಹೊಸದೊಂದು ಆತಂಕ ಸೃಷ್ಟಿಯಾಗಲಿದೆ. ಅಣೆಕಟ್ಟಿನ ನಿರಾಶ್ರಿತರು, ಪರಿಸರ ನಿರಾಶ್ರಿತರು ಎಲ್ಲರನ್ನು ಮೀರಿಸಿ ಕೃಷಿ ನಿರಾಶ್ರಿತರು ನಗರಗಳಿಗೆ ಬರಲಿದ್ದಾರೆ.

ಪ್ರೊ. ದೇವೇಂದ್ರ ಶರ್ಮ : ಕನ್ನಡಕ್ಕೆ: ನಾಗೇಶ ಹೆಗಡೆ