ಪ್ರತಿಯೊಬ್ಬ ವ್ಯಕ್ತಿ ತನ್ನ ಬೇಕು ಬೇಡಗಳನ್ನು, ಅನಿಸಿಕೆ ಅಭಿಪ್ರಾಯಗಳನ್ನು, ಪ್ರತಿಭಟನೆಯನ್ನು ಸ್ಪಷ್ಟವಾಗಿ ಇನ್ನೊಬ್ಬರಿಗೆ ಅರ್ಥವಾಗುವಂತೆ ಅವರು ಅದನ್ನು ಕೇಳಿಸಿಕೊಳ್ಳುವಂತೆ, ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುವಂತೆ ಹೇಳಲು ಕಲಿಯಬೇಕು. ಹಾಗೇ ಇತರರ ಬೇಕುಬೇಡಗಳನ್ನು, ಅನಿಸಿಕೆ ಅಭಿಪ್ರಾಯಗಳನ್ನು ಪ್ರತಿಭಟನೆಯನ್ನು ಪ್ರಕಟಿಸಿದಾಗ, ವ್ಯಕ್ತಿ ಅವನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಸಂವಹನ ಕ್ರಿಯೆ-communication process  ಎನ್ನುತ್ತಾರೆ. ಸಂವಹನದಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ಭಾವನೆಯನ್ನು ಯಾವ ಪದಪುಂಜಗಳ ಮೂಲಕ ಸಮರ್ಥವಾಗಿ ಪ್ರಕಟಿಸಬಹುದು. ಯಾವ ರೀತಿಯಲ್ಲಿ, ಧ್ವನಿಯಲ್ಲಿ ಏರಿಳಿತ ಮಾಡಿ ಹೇಳಿದರೆ, ಕೇಳುವವರು ಆಸಕ್ತಿಯಿಂದ ಕೇಳುತ್ತಾರೆ. ಯಾವ ಉಪಮೆ, ಉದಾಹರಣೆಗಳಿಂದ ವಾದ ಮಾಡಿದರೆ, ಬೇರೆಯವರು ನನ್ನ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಯಾವ, ಪದ, ವಾಕ್ಯ ಅಥವಾ ಉಪಮೆಯನ್ನು ಬಳಸಿದರೆ ಜನರಿಗೆ ನೋವಾಗುತ್ತದೆ, ರೊಚ್ಚಿಗೇಳುತ್ತಾರೆ. ಯಾವ ರೀತಿಯಲ್ಲಿ ಹೇಳಿದರೆ ನನ್ನ ಅನಿಸಿಕೆಗಳಿಗೆ ಸಹಾನುಭೂತಿ ತೋರಿಸುತ್ತಾರೆ ಎಂಬುದನ್ನು ವ್ಯಕ್ತಿ ಅರಿತುಕೊಳ್ಳಬೇಕು. ‘ಮಾತೇ ಮುತ್ತು, ಮಾತೇ ಮೃತ್ಯು ಎನ್ನುತ್ತಾರೆ. ಚೆನ್ನಾಗಿ ಮಾತಾಡುವ ಕಲೆ ಇರುವವನಿಗೆ, ಶತೃಗಳು ಕಡಿಮೆ; ಸ್ನೇಹಿತರು ಹೆಚ್ಚು. ಕುಶಲ ಮಾತುಗಾರಿಕೆಯಿಂದ ಜನರನ್ನು ಮೆಚ್ಚಿಸಬಹುದು. ನಾವು ಹೇಳಿದಂತೆ ಕೇಳಲು ಪ್ರೇರೇಪಿಸಬಹುದು. ನಮ್ಮ ನಿಲುವುಗಳಿಗೆ ಸಪೋರ್ಟ್ ಮಾಡುವಂತೆ ಓಲೈಸಬಹುದು. ನಾವು ಮಾತಾಡಿದ್ದು ಇತರರಿಗೆ ಅರ್ಥವಾಗದಿದ್ದರೆ, ಇಷ್ಟವಾಗದಿದ್ದರೆ, ಸಂಬಂಧಗಳು ಹಾಳಾಗುತ್ತವೆ. ನುಡಿದರೆ ಮುತ್ತಿನ ಹಾರದಂತಿರಬೇಕು. ಅದು ಸಂಬಂಧಗಳನ್ನು ಬೆಸೆಯುತ್ತದೆ. ಮಾತಿನ ಜೊತೆಗೆ, ಬರವಣಿಗೆಯ ಮುಖಾಂತರವೂ ನಾವು ಸಂವಹನ ಮಾಡುತ್ತೇವೆ. ಪತ್ರ ಬರೆಯುತ್ತೇವೆ. ಲೇಖನವನ್ನು ಬರೆಯುತ್ತೇವೆ. ಕಥೆ, ಕಾವ್ಯವನ್ನು ಬರೆಯುತ್ತೇವೆ. ತನ್ಮೂಲಕ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ಹಾಗೆಯೇ ಸಂವಹನದಲ್ಲಿ ನಮ್ಮ ಶರೀರವೂ ಸಕ್ರಿಯವಾಗಿ ಭಾಗವಹಿಸುತ್ತದೆ. ನಮ್ಮ ಮುಖ ಭಾವ, ಕಣ್ಣುಗಳು, ಕೈಕಾಲುಗಳು, ದೇಹದ ಭಂಗಿ, ನಮ್ಮ ಭಾವನೆಗಳ ಪ್ರಕಟಣೆಗೆ ಪೂರಕವಾಗಿರುತ್ತವೆ. ಅಧಿಕಾರ ಚಲಾಯಿಸುವಾಗ, ಮುಖದಲ್ಲಿ ದರ್ಪ, ಶರೀರ ಸೆಟೆದಿರುತ್ತದೆ. ಗೌರವ ತೋರಿಸುವಾಗ, ಶರೀರ ಬಾಗಿರುತ್ತದೆ. ಕೋಪ, ಸಿಟ್ಟು, ಪ್ರಕಟಿಸುವಾಗ, ಕಣ್ಣುಗಳು ಅಗಲವಾಗಿ, ಕೆಂಪಾಗುತ್ತವೆ. ಮೂಗಿನ ಹೊಳ್ಳೆ ಅರಳುತ್ತದೆ. ತುಟಿ ವಕ್ರವಾಗುತ್ತದೆ. ಮುಷ್ಟಿಯನ್ನು ಬಿಗಿ ಹಿಡಿಯುತ್ತೇವೆ. ಧ್ವನಿ ಏರಿರುತ್ತದೆ. ದುಃಖ, ಪ್ರಕಟಣೆಯಲ್ಲಿ ಕಣ್ಣುಗಳು ಕಾಂತಿಹೀನವಾಗಿ, ಕಣ್ಣೀರಿನಿಂದ ತುಂಬಿಕೊಳ್ಳುತ್ತವೆ. ಮುಖ ಬಾಡಿರುತ್ತದೆ. ಅದೇ ಪ್ರೀತಿ, ವಿಶ್ವಾಸ ತೋರುವಾಗ, ಮುಖ ಅರಳಿರುತ್ತದೆ. ಕಣ್ಣುಗಳು ಮಿನುಗುತ್ತವೆ.

ಬೆಳೆಯುವ ಮಕ್ಕಳು, ಸಂವಹನ ಸಾಮರ್ಥ್ಯವನ್ನು ಕಲಿಯಬೇಕು. ಆದರೆ ಬಹುತೇಕ ಮಕ್ಕಳು ಇದನ್ನು ಕಲಿಯುವುದರಲ್ಲಿ ಹಿಂದುಳಿಯುತ್ತಾರೆ. ತಂದೆ-ತಾಯಿಗಳು, ಶಿಕ್ಷಕರು ಈ ಕಲಿಕೆಗೆ ಬೇಕಾದ ಅವಕಾಶ, ಪ್ರೋತ್ಸಾಹಗಳನ್ನು ಕೊಡುವುದಿಲ್ಲ.

ಎಲ್‌ಕೆಜಿ, ಯುಕೆಜಿ ಯಲ್ಲಿ ಮಕ್ಕಳಿಗೆ ಕಥೆ ಹೇಳುವುದರ ಮೂಲಕ ಹಾಗೂ ಕಥೆ ಹೇಳಿಸುವುದರ ಮೂಲಕ ಸಂವಹನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ತಾಯಿಯೋ, ತಂದೆಯೋ ಅಜ್ಜಿ, ಅಜ್ಜನೋ ‘ಬಾರೋಪುಟ್ಟಾ(ಪುಟ್ಟಿ) ನಿನಗೊಂದು ಕಥೆ ಹೇಳುತ್ತೇನೆ ಎಂದಾಗ ಅಥವಾ ಮಗುವೇ ‘ಅಮ್ಮಾ ನನಗೊಂದು ಕಥೆ ಹೇಳು, ಅಜ್ಜಿ ನನಗೊಂದು ಕಥೆ ಹೇಳು ಅಂದಾಗ ಸಂವಹನ ಕ್ರಿಯೆ ಶುರುವಾಗುತ್ತದೆ. ರಾಜಕುಮಾರನ ಕಷ್ಟಗಳು, ರಾಜಕುಮಾರಿಯ ಸಮಸ್ಯೆಗಳು, ಅವರ ಭಾವನೆಗಳು, ದುಷ್ಟ ಪಾತ್ರಗಳ ಅಟ್ಟಹಾಸ, ಅದನ್ನು ಅಡಗಿಸುವಲ್ಲಿ ರಾಜಕುಮಾರ, ರಾಜಕುಮಾರಿ ತೋರಿದ ಧೈರ್ಯ ಮತ್ತು ಜಾಣ್ಮೆ ಮಗುವಿಗೆ ಅರ್ಥವಾಗಿ ಈ ಕಥೆಯನ್ನು ತನ್ನ ಸಹ ವಯಸ್ಕರಿಗೆ ಹೇಳಲು ಅಣಿಯಾಗುತ್ತದೆ. ತನ್ನದೇ ಭಾಷೆಯಲ್ಲಿ ಹೇಳುತ್ತದೆ.

ಅನೇಕ ಮಕ್ಕಳಿಗೆ,  ಭಾಷೆಯ ಮೇಲೆ ಹಿಡಿತ ಇರುವುದಿಲ್ಲ, ವಾಕ್ಯ ರಚನೆ ಸರಿಯಾಗಿರುವುದಿಲ್ಲ. ಭಾಷಾ-ಪದ, ಸಂಪತ್ತು ಸೀಮಿತವಾಗಿರುತ್ತದೆ. ಸಂತೋಷವನ್ನು ವರ್ಣಿಸಲು, ದುಃಖವನ್ನು ಬಣ್ಣಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಕೋಪ ಸಿಟ್ಟು ಬಹುಬೇಗನೇ ಕೆಟ್ಟ ಪದಗಳನ್ನು ಅನುಚಿತ ಪದಗಳನ್ನು ಬಳಸಲು ಮುಂದಾಗುತ್ತಾರೆ. ಮಾತಾಡುವಾಗ ವಿಷಯ ನಿಧಾನವಾಗಿ, ವೇಗವಾಗಿ ಮಾತನಾಡಬೇಕು. ಧ್ವನಿಯ ಏರಿಳಿತ ಹೇಗಿರಬೇಕು. ಯಾವ ಪದ ಅಥವಾ ಪದ ಸಮುಚ್ಚಯವನ್ನು ಒತ್ತಿ ಹೇಳಬೇಕು. ಯಾವುದನ್ನು ಪುನರಾವರ್ತನೆ ಮಾಡಬೇಕು, ಅವರಿಗೆ ತಿಳಿದಿರುವುದಿಲ್ಲ. ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ. ಅವರ ಭಾಷಾ ಸಾಮರ್ಥ್ಯವೇನು, ತಾನು ಬಳಸುವ ಪದಗಳ ಅರ್ಥ ಅವರಿಗೆ ತಿಳಿದಿದೆಯೇ ಎಂಬುದನ್ನು ಯೋಚಿಸುವ ಗೊಡವೆಗೆ ಹೋಗುವುದಿಲ್ಲ. ಸಿನಿಮಾ ಸೂಪರ್ ಆಗಿತ್ತು ಅಜ್ಜಿ ಎಂದಾಗ, ‘ಸೂಪರ್ ಅನ್ನುವ ಪದ ಅಜ್ಜಿಗೆ ಗೊತ್ತೇ ಎನ್ನುವುದನ್ನು ಗಮನಿಸುವುದಿಲ್ಲ. ಅವನೊಬ್ಬ ತಗಡು, ಡಮ್ಮೀ ಕಣೇ ಎಂದು ತಂಗಿಗೆ ಹೇಳುವಾಗ ತಗಡು, ಡಮ್ಮೀ ಎಂದರೇನು ಎಂಬುದು ಆಕೆಗೆ ಗೊತ್ತೇ ಎಂಬುದನ್ನು ನೋಡುವುದಿಲ್ಲ. ಈಗಂತೂ ಪ್ರತಿಯೊಂದು ಭಾಷೆಯಲ್ಲೂ, ಅನೇಕ ಭಾಷೀಯ ಪದಗಳು,ಹೊಸತಾಗಿ ಸೃಷ್ಟಿಯಾದ ಪದಗಳು, ಸೇರಿಕೊಂಡು, ಅವುಗಳ ಉಪಯೋಗ ತಿಳಿಯದಿದ್ದವರಿಗೆ, ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದೇ ಅರ್ಥವಾಗುವುದಿಲ್ಲ. ಅವನೊಬ್ಬ ಸೀಬೈಟೂ ಎಂದಾಗ ಈ ಪದಗಳ ಅರ್ಥ ತಿಳಿಯದವರಿಗೆ ಏನೂ ಅರಿವಾಗುವುದಿಲ್ಲ.

ಮಾತನಾಡುವ ಭಾಷೆ ಕೆಲವರಿಗೆ ಕಷ್ಟವಾದರೆ ಬರವಣಿಗೆಯ ಭಾಷೆ ಸಾಕಷ್ಟು ಜನರಿಗೆ ಕಷ್ಟವಾಗುತ್ತದೆ. ಸರಾಗವಾಗಿ, ತಪ್ಪಿಲ್ಲದೆ ಬರೆಯುವ ಮತ್ತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರವಣಿಗೆ ಮೂಲಕ ವ್ಯಕ್ತಪಡಿಸುವ ಕೌಶಲ ಅವರಿಗಿರುವುದಿಲ್ಲ. ಪದಗಳ ಆಯ್ಕೆ, ಕಾಗುಣಿತ, ವಾಕ್ಯರಚನೆಯಲ್ಲಿ ಅವರು ಎಡವುತ್ತಾರೆ. ಅವರು ಬರೆದದ್ದು ಬಹುಜನರಿಗೆ ಸರಿಯಾಗಿ ಅರ್ಥವಾಗುವುದಿಲ್ಲ.

ಆದ್ದರಿಂದ ಚಿಕ್ಕಂದಿನಿಂದಲೇ ಮಕ್ಕಳಿಗೆ ಭಾಷಾಜ್ಞಾನ ಮತ್ತು ಸಂವಹನ ಸಾಮರ್ಥ್ಯವನ್ನು ಕಲಿಸಬೇಕು.

೧. ಸ್ಪಷ್ಟವಾಗಿ, ಸರಳವಾಗಿ ಮಾತಾಡಲು ಹೇಳಿ.

೨. ಯಾವುದೋ ವಿಷಯ ಕೊಟ್ಟು ಅದರ ಬಗ್ಗೆ ಮಾಹಿತಿ ಕಲೆ ಹಾಕಿ, ಆನಂತರ ಮಾತಾಡಲು ಅಥವಾ ಇತರರಿಗೆ ಹೇಳಲು ಹೇಳಿ.

೩. ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿ.

೪. ಪತ್ರಿಕೆ, ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ.

೫. ವಾಚಕರವಾಣಿಗೆ ಪತ್ರಗಳನ್ನು ಬರೆಯಲು ಹುರಿದುಂಬಿಸಿ, ಸಣ್ಣಪುಟ್ಟ ಕವನ, ಚುಟುಕ, ಕಿರುಕಥೆ, ಅನುಭವವನ್ನು ಬರೆದು ಪತ್ರಿಕೆಗೆ ಕಳುಹಿಸಲಿ.

೬. ಸ್ನೇಹಿತರಿಗೆ ಬಂಧುಗಳಿಗೆ ಪತ್ರ ಬರೆಯಲು ಪ್ರೇರೇಪಿಸಿ.

೭. ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಲು ಹೇಳಿ

೮. ಪ್ರತಿದಿನ ನಾಲ್ಕೈದು ಹೊಸ ಪದಗಳನ್ನು ಕಲಿತು, ಅವುಗಳ ಅರ್ಥ ಮತ್ತು ಬಳಕೆಯ ಬಗ್ಗೆ ಚರ್ಚಿಸಿ.

೯. ಪ್ರಸಿದ್ಧ ಸಾಹಿತಿ, ವಾಗ್ಮಿಗಳ ಭಾಷಣಗಳನ್ನು ಕೇಳಲಿ, ರೇಡಿಯೋ ಟೀವಿಗಳಲ್ಲಿ ಬರುವ ಭಾಷಾ ಕಾರ್ಯಕ್ರಮಗಳನ್ನು ಕೇಳಲಿ ನೋಡಲಿ.

೧೦. ಪತ್ರಿಕೆಗಳಲ್ಲಿ ಬರುವ ಕಥೆ, ಕವನ, ಲೇಖನಗಳನ್ನು ವಿಮರ್ಶೆ ಮಾಡಲಿ. ಅವುಗಳಲ್ಲಿರುವ ವ್ಯಾಕರಣ, ತಪ್ಪುಗಳು, ತಪ್ಪು ಪದ ಪ್ರಯೋಗವನ್ನು ಗುರುತಿಸಲಿ.