ಅಮರ ಸಿಂಗ್ಭಾರತದ ಪ್ರಸಿದ್ಧ ಬೌಲರ್. ಮೂವತ್ತನೆ ವರ್ಷಕ್ಕೆ ತೀರಿಕೊಂಡ ಅಮರ ಸಿಂಗ್ ಪ್ರಪಂಚದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎನ್ನಿಸಿಕೊಂಡರು. ಒಳ್ಳೆಯ ಬ್ಯಾಟ್ಸ್‌ಮನ್, ಒಳ್ಳೆಯ ಫೀಲ್ಡರ್.

 ಅಮರ ಸಿಂಗ್

 

ಬಾಳಿದಷ್ಟು ದಿನ, ಎಷ್ಟೇ ಕಡಿಮೆ

[ಅವಧಿಯ] ದಾದರೂ, ಹುಲಿಯಂತೆ ಬಾಳಬೇಕು ಎಂಬುದು ಒಂದು ನಾಣ್ನುಡಿ. ಕೆಲವರು ಕೆಲವೇ ವರ್ಷಗಳ ಕಾಲ ಬದುಕುತ್ತಾರೆ, ಒಂದೇ ಕ್ಷೇತ್ರದಲ್ಲಿ ಶ್ರಮಿಸುತ್ತಾರೆ. ಸ್ವಲ್ಪಕಾಲದಲ್ಲಿ ತಾವು ಆರಿಸಿಕೊಂಡ ಕೆಲಸದಲ್ಲಿ ವಿಶಿಷ್ಟವಾದ ಸಾಮರ್ಥ್ಯವನ್ನು ತೋರಿಸುತ್ತಾರೆ. ಕೆಲವೇ ವರ್ಷಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಇಂತಹವರು ನಮಗೆ ಸ್ಫೂರ್ತಿಯ ನೆಲೆ.

ಜೀವಿತದ ಅವಧಿ ಕೇವಲ ಮೂವತ್ತು ವರ್ಷಗಳು. ತಮ್ಮನ್ನು ಕ್ರಿಕೆಟ್ ಕ್ರೀಡೆಗೆ ಅರ್ಪಿಸಿಕೊಂಡು ಜೀವನದ ಉದ್ದಕ್ಕೂ ಅದರ ಸಾಧನೆ ಮಾಡುತ್ತಲೇ ಕಳೆದ ಬದುಕು ಅಮರ ಸಿಂಗ್‌ರದು. ಹುಟ್ಟಿದ್ದು ಅತಿ ಸಾಮಾನ್ಯವಾದ ಬಡಕುಟುಂಬದಲ್ಲಾದರೂ ಕ್ರಿಕೆಟ್ ಕ್ರೀಡೆಯಲ್ಲಿನ ತಮ್ಮ ಅನುಪಮ ಸಾಧನೆಯಿಂದ ಜಗತ್ತನ್ನೇ ಬೆರಗು ಗೊಳಿಸಿದವರು. ನಮ್ಮ ನಾಡಿನ ಕ್ರಿಕೆಟ್ ಇತಿಹಾಸದಲ್ಲಿ ಅಮರಸಿಂಗ್‌ರ ಹೆಸರು ಜಾಜ್ವಲ್ಯಮಾನವಾಗಿ ಮರೆಯುತ್ತದೆ. ಅವರ ಬದುಕು ಕ್ರಿಕೆಟ್ ಆಡುತ್ತಿರುವವರಿಗೆ, ಕ್ರಿಕೆಟ್ ಕಲಿಯುತ್ತಲಿರುವವರಿಗೆ ಸ್ಫೂರ್ತಿಯ ನೆಲೆಯಾಗುತ್ತದೆ.

ಅಮರಸಿಂಗರು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ಈಗಿನಷ್ಟು ನಡೆಯುತ್ತಿರಲಿಲ್ಲ. ಆದುದರಿಂದ ಅವರು ಭಾರತದ ಪರವಾಗಿ ಕೆಲವೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು. ಆದರೂ ಅವರು ಪ್ರಪಂಚದ ಗಣ್ಯ ಕ್ರಿಕೆಟ್ ವಿಮರ್ಶಕರಿಂದ ಬಹುವಾಗಿ ಪ್ರಶಂಸೆ ಪಡೆದವರು.

ಅಮರಸಿಂಗ್ ಕ್ರಿಕೆಟ್ ಕ್ರೀಡೆಯಲ್ಲಿ ಖ್ಯಾತರಾಗಿದ್ದಂತೆಯೇ ಇತರ ಆಟಗಳಲ್ಲೂ ಖ್ಯಾತರು. ಅವರು ಹಲವು ಕ್ರೀಡೆಗಳಲ್ಲೂ ಉತ್ತಮವಾಗಿ ಆಡುತ್ತಿದ್ದರು. ಆದರೆ ಕ್ರಿಕೆಟ್ ಕ್ರೀಡೆಯಲ್ಲಿ ಅವರ ಆಸಕ್ತಿಯೆಲ್ಲಾ ಕೇಂದ್ರೀಕೃತವಾಗಿದ್ದಿತು. ಕಾರಣ ಆ ದಿನಗಳಲ್ಲಿ ರಾಜಾಶ್ರಯ ಪಡೆದಂತಹ ಕ್ರಿಕೆಟ್ ಕ್ರೀಡೆಯಲ್ಲಿ ಚೆನ್ನಾಗಿ ಸಾಧನೆ ಮಾಡಿದರೆ ಎಲ್ಲರಿಂದಲೂ ಶೀಘ್ರವಾಗಿ ಪ್ರಶಂಸೆ ಗಳಿಸಬಹುದಾಗಿತ್ತು. ಅದಕ್ಕಾಗಿಯೇ ವೇಗದ ಓಟಗಾರರೆಂದು ಈ ಮೊದಲೇ ಹೆಸರು ಪಡೆದಿದ್ದ ಅಮರ ಸಿಂಗ್ ವೇಗದ ಬೌಲರ್ ಆಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದರು.

ಇಂಗ್ಲೆಂಡ್ ಮೆಚ್ಚಿತು

ಅಮರಸಿಂಗ್ ಕೇವಲ ಬೌಲಿಂಗ್ ಒಂದರಲ್ಲಿಯೇ ಶ್ರೇಷ್ಠರಾಗಿರಲಿಲ್ಲ. ಅವರು ‘ಬ್ಯಾಟ್ಸ್‌ಮನ್’ ಆಗಿ ಬಿರುಸಿನ ಹೊಡೆತಗಳಿಗೆ ಖ್ಯಾತರಾಗಿದ್ದರು. ಅವರ ಆಕ್ರಮಣಕಾರೀ ಆಟ ನೋಡುವ ಜನಕ್ಕೆ ಅಪಾರ ರಂಜನೆ ಯನ್ನೊದಗಿಸುತ್ತಿತ್ತು. ‘ಫೀಲ್ಡರ್ ಆಗಿ’ ಬಿಗಿಯಾದ ಕ್ಷೇತ್ರ ರಕ್ಷಣೆಯಲ್ಲೂ ಅವರು ಖ್ಯಾತಿ ಪಡೆದಿದ್ದರು. ಆ ಕಾಲದಲ್ಲಿ ಪ್ರಪಂಚದ ಯಾವುದೇ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಬಹುದೆಂದು ವಿಮರ್ಶಕರು ಅಭಿಪ್ರಾಯ ಪಡುತ್ತಿದ್ದರು. ಅದಲ್ಲದೇ ಅಮರಸಿಂಗ್ ಅವರು ಲ್ಯಾಂಕಷೈರ್ ಲೀಗ್‌ಗೆ ಆಡಿದ ಪ್ರಥಮ ಭಾರತೀಯ ವೃತ್ತಿನಿರತ ಆಟಗಾರರಾಗಿದ್ದರು. ಲೀಗ್‌ನಲ್ಲಿ ವೃತ್ತಿನಿರತರಾಗಿ ಪ್ರತಿನಿಧಿಸುತ್ತಿದ್ದರೆಂದರೇ ಅದಕ್ಕೆ ಬಹಳ ಮಹತ್ವವಿತ್ತು. ಅತ್ಯುನ್ನತ ಪ್ರತಿಭಾವಂತರನ್ನು ಮಾತ್ರ ಆರಿಸಲಾಗುತ್ತಿತ್ತು. (ಆಟಗಾರರಲ್ಲಿ ವೃತ್ತಿ ನಿರತ ಆಟಗಾರರು, ಹವ್ಯಾಸಿ ಆಟಗಾರರು ಎಂದು ಎರಡು ವರ್ಗಗಳು. ವೃತ್ತಿನಿರತ ಆಟಗಾರರು ಆಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು ಎಂದರೆ ಆಡಿದುದಕ್ಕೆ ಸಂಬಳ ಪಡೆಯುತ್ತಾರೆ. ಹವ್ಯಾಸಿ ಆಟಗಾರರಿಗೆ ಖರ್ಚಿಗೆಂದು ಮತ್ತು ಗೌರವಧನವೆಂದು ಹಣ ಕೊಡಬಹುದು, ಆದರೆ  ಆಟವೇ ಅವರಿಗೆ ಜೀವನೋಪಾಯವಲ್ಲ.)

ಅನುಕೂಲಕರ ವಾತಾವರಣ

ಸ್ವಾತಂತ್ರ್ಯಕ್ಕೆ ಮುನ್ನ ಹಲವು ಸಂಸ್ಥಾನಗಳ ರಾಜರು ವಿವಿಧ ಆಟಗಳಲ್ಲಿ ಆಸಕ್ತಿ ವಹಿಸುತ್ತಿದ್ದರು. ಅವರಲ್ಲಿ ಕೆಲವರು ಪ್ರತಿಭಾವಂತ ಕ್ರಿಕೆಟ್ ಆಟಗಾರರ ಅನ್ವೇಷಣೆ ನಡೆಸಿ ಅವರಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಸಣ್ಣಪುಟ್ಟ ಸಂಸ್ಥಾನಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಆ ಸಂಸ್ಥಾನಗಳನ್ನಾಳುತ್ತಿದ್ದ ರಾಜರ ಆಸಕ್ತಿಯೂ ಒಂದೇ ಸಮನೆ ಇರುತ್ತಿರಲಿಲ್ಲ. ಕ್ರಿಕೆಟ್‌ನ ಆಸಕ್ತಿ ಹೆಚ್ಚಾಗಿದ್ದ ರಾಜ ಜಾಮ್‌ಸಾಹೇಬ್‌ನ ಜಾಮ್ ನಗರದಲ್ಲಿ ಅಮರ ಸಿಂಗ್ ೧೯೧೦ರ ಡಿಸೆಂಬರ್ ೪ರಂದು ಜನಿಸಿದರು.

ಜಾಮ್‌ಸಾಹೇಬ್‌ನ ಜಾಮ್ ನಗರ ಅಂದಿನ ಅಖಂಡ ಭಾರತದಲ್ಲೇ ಕ್ರಿಕೆಟ್ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಂತಹ ಕೇಂದ್ರ. ಬಹುಶಃ ಅಮರಸಿಂಗ್ ಬೇರೆ ಎಲ್ಲಾದರೂ ಹುಟ್ಟಿದ್ದರೆ ಕ್ರಿಕೆಟ್‌ನಲ್ಲಿ ಆ ಮಟ್ಟದ ಆಸಕ್ತಿ ಉಳಿಸಿಕೊಳ್ಳುತ್ತಿರಲಿಲ್ಲವೋ ಏನೋ.

ಅಮರ ಸಿಂಗ್‌ರ ಸೋದರ ರಾಮಜೀ ಸಿಂಗ್ ಸಹ ಉತ್ತಮ ಕ್ರಿಕೆಟ್ ಪಟುವಾಗಿದ್ದರಿಂದ ಅಮರಸಿಂಗ್‌ಗೆ ಬೇರೆಯವರ ಪ್ರೇರಣೆ ಬೇಕಿರಲಿಲ್ಲ. ಅಂದಿನ ದಿನದಲ್ಲಿ ರಾಮ್‌ಜೀ ಸಿಂಗ್‌ರವರು ವೇಗದ ಬೌಲರ್ ಆಗಿದ್ದರು. ಜಾಮ್ ನಗರದ ಕ್ರಿಕೆಟ್ ಸ್ಪರ್ಧೆಗಳಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿದ್ದ ಹೆಸರುಗಳೆಂದರೆ ರಾಮ್‌ಜೀಸಿಂಗ್ ಹಾಗೂ ಅಮರ ಸಿಂಗ್. ಅವರು ರಾಜರಾದ ಜಾಮ್‌ಸಾಹೇಬರ ಕಣ್ಣಿಗೆ ಬೀಳದೇ ಇರಲಿಲ್ಲ.  ಈಗ ಭಾರತದಲ್ಲಿ ‘ರಾನ್‌ಜಿ ಕ್ರಿಕೆಟ್ ಪಂದ್ಯ’ಗಳಾಗುತ್ತವಲ್ಲ, ಇವು ನಮ್ಮ ದೇಶದ ಶ್ರೇಷ್ಠ ಆಟಗಾರ ರಣಜಿತ್ ಸಿನ್ಹಜಿಯ ಹೆಸರಿನಲ್ಲಿ ನಡೆಯುತ್ತವೆ.(‘ರಾನ್ ಜಿ’ರಣಜಿತ್ ಸಿನ್ಹಜಿ ಎಂಬ ಹೆಸರಿನ ಹ್ರಸ್ವರೂಪ) ಈ ರಾನ್‌ಜಿ ಇಂಗ್ಲೆಂಡಿನವರಲ್ಲದಿದ್ದರೂ ಇಂಗ್ಲೆಂಡ್ ಪರವಾಗಿ ‘ಟೆಸ್’ ಪಂದ್ಯದಲ್ಲಿ ಆಡಲು ಆಯ್ಕೆಯಾದ ಪ್ರತಿಭಾವಂತರು, ಅವರಿಗೆ ಕ್ರಿಕೆಟ್ ಆಟಗಾರರಲ್ಲಿ ತುಂಬ ಅಭಿಮಾನ. ೧೯೦೭ ರಲ್ಲಿ ಅವರು ನವಾ ನಗರದ ಜಾಮ್ ಸಾಹೇಬ್ (ರಾಜ) ಆದರು. ದುಲೀಪ್ ಸಿಂಗ್ ಎಂಬ ಪ್ರತಿಭಾವಂತ ಆಟಗಾರರೂ ಸಹ ಕ್ರಿಕೆಟ್‌ನ ಆಸಕ್ತಿಯಿಂದ ಇಂಗ್ಲೆಂಡ್‌ಗೆ ಹೋಗಿದ್ದರೂ ಆಗಾಗ ದೇಶಕ್ಕೆ ಬಂದು ಇಲ್ಲಿನ ಶ್ರೇಷ್ಠ ಕ್ರಿಕೆಟ್ ಆಟಗಾರರ ಪ್ರತಿಭೆ ಕಂಡು ಹೋಗುತ್ತಿದ್ದರು. ಹೀಗಾಗಿ ರಾಮ್‌ಜಿ ಮತ್ತು ಅಮರಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್‌ನ ಪ್ರಚಂಡರಿಗೆ ಪರಿಚಯವಾದರು. ತಮ್ಮ ಹದಿ ಹರೆಯದಲ್ಲಿಯೇ ಅಮರಸಿಂಗ್ ತಾವು ಒಬ್ಬ ಶ್ರೇಷ್ಠ ಆಲ್‌ರೌಂಡ್ ಆಟಗಾರರೆಂದು ತೋರಿಸಿ ಕೊಂಡರು.

ರಾನ್‌ಜಿಯ ಮೆಚ್ಚಿಕೆ

ಒಮ್ಮೆ ರಾಜ್ ಕೋಟ್‌ನಲ್ಲಿ ರಣಜಿತ್ ಸಿನ್ಹಜಿ ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ನೋಡುತ್ತಿದ್ದರು. ಆ ಪಂದ್ಯಾವಳಿಯಲ್ಲಿ ಅಮರ ಸಿಂಗ್ ಆಡುತ್ತಿದ್ದರು. ಒಮ್ಮೆ ಒಂದು ಪಂದ್ಯದಲ್ಲಿ ಅಮರಸಿಂಗ್ ಬಹು ಕಡಿಮೆ ರನ್‌ಗಳನ್ನು ಕೊಟ್ಟು ಆರು ವಿಕೆಟ್ ಪಡೆದು ತಮ್ಮ ತಂಡದ ವಿಜಯಕ್ಕೆ ಕಾರಣರಾದರಂತೆ. ಆಗ ಯಾರೋ ರಾನ್‌ಜಿಯವರನ್ನು ಅಮರಸಿಂಗ್‌ರ ಬೌಲಿಂಗ್ ಬಗ್ಗೆ ಕೇಳಿದರು. ರಾನ್‌ಜಿಯವರು ‘ಆತ ಚೆನ್ನಾಗಿ ಬೌಲ್ ಮಾಡಿದ, ಉತ್ತಮ ಬೌಲರ್ ಆಗುವ ಲಕ್ಷಣ ಹೊಂದಿದ್ದಾನೆ’ ಎಂದರಂತೆ. ಆಟಗಾರರು ಎಷ್ಟೇ ಸಮರ್ಥರಾಗಿದ್ದರೂ ಅದೃಷ್ಟವೂ ಮುಖ್ಯ. ಅಮರ ಸಿಂಗರು ಮತ್ತೊಮ್ಮೆ ಒಂದು ಪಂದ್ಯದಲ್ಲಿ ಬೌಲ್ ಮಾಡುತ್ತಿದ್ದಾಗ ರಾನ್‌ಜಿ ಪಂದ್ಯವನ್ನು ನೋಡುತ್ತಿದ್ದರು. ಅಮರಸಿಂಗರು ಎಂಬತ್ತು ರನ್‌ಗಳನ್ನು ಕೊಟ್ಟರು. ಒಂದು ವಿಕೆಟ್‌ನ್ನು ಪಡೆಯಲೂ ಸಾಧ್ಯವಾಗಲಿಲ್ಲ. ಆದರೂ ರಾನ್‌ಜಿ ಅವರ ಪ್ರತಿಭೆಯನ್ನು ಗುರುತಿಸಿದರು. ‘ನೋಡಿ, ಆತ ಒಳ್ಳೆಯ ವೇಗದ ಬೌಲರ್ ಆಗುವ ಲಕ್ಷಣಗಳಿವೆ’ ಎಂದರು.

ಒಮ್ಮೆ ಒಬ್ಬ ಕ್ರಿಕೆಟ್ ಪ್ರೇಮಿ ಒಂದು ಕ್ರಿಕೆಟ್ ಸ್ಪರ್ಧೆಯಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಕ್ರೀಡಾಪಟುವಿಗೆ ಒಳ್ಳೆಯ ಬಹುಮಾನ ಕೊಡುವೆನೆಂದು ಪ್ರಕಟಿಸಿದನಂತೆ. ಇದಕ್ಕೆ ರಾನ್‌ಜೀಯವರೇ ತೀರ್ಪುಗಾರರಾಗಿರಬೇಕೆಂದು ಆತ ಬಯಸಿದನಂತೆ. ದುಲೀಪ್ ಸಿಂಗ್ ಹಾಗೂ ಇಫ್ತಿಕಾರ್ ಪಟೌಡಿಯವರು ಈ ಬಹುಮಾನ ಪಡೆಯಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆ ಪಂದ್ಯದಲ್ಲಿ ಈ ಇಬ್ಬರು ಘಟಾನುಘಟಿ ಆಟಗಾರರ ವಿರುದ್ಧದ ತಂಡದಲ್ಲಿದ್ದ ಅಮರ ಸಿಂಗ್ ಉತ್ತಮ ಬೌಲಿಂಗ್ ಮಾಡಿದರಾದರೂ ಅವರಿಗೆ ಒಂದು ವಿಕೆಟ್ ಕೂಡ ದೊರಕಲಿಲ್ಲವಂತೆ. ಆದರೆ ಪಂದ್ಯ ಮುಗಿದ ಮೇಲೆ ರಾನ್‌ಜಿಯವರು, ‘ಅಮರ ಸಿಂಗ್‌ರವರೇ ಈ ಸ್ಪರ್ಧೆಯ ಶ್ರೇಷ್ಠ ಬೌಲರ್’ ಎಂದು ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಯಿತಂತೆ. ಪಂದ್ಯದ ನಂತರ ರಾನ್‌ಜಿಯವರು ಮಾತನಾಡುತ್ತಾ ‘ಅಮರಸಿಂಗ್‌ರ ಎದುರು ತಂಡದಲ್ಲಿ ಬಹು ಸಮರ್ಥ ಆಟಗಾರರಿದ್ದರು. ಅಂತಹ ಆಟಗಾರರೂ ಗೊಂದಲದಲ್ಲಿ ಬೀಳುವಂತೆ ಬೌಲ್ ಮಾಡಿದ ಅಮರಸಿಂಗ್‌ರು ನಿಜವಾಗಿಯೂ ಉತ್ತಮ ಬೌಲರ್’ ಎಂದರು.

ರಣಜಿ ಟ್ರೋಫಿ ಪಂದ್ಯಗಳಲ್ಲಿ

ರಣಜಿ ಟ್ರೋಫಿ ಪಂದ್ಯಗಳಲ್ಲಿಯೂ ಸಹ ಅಮರ ಸಿಂಗ್‌ರ ಸಾಧನೆ ಕಡಿಮೆಯದೇನಲ್ಲ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಮೊತ್ತಮೊದಲಿಗೆ ನೂರು ವಿಕೆಟ್ ಪಡೆದ ಸಾಧನೆ ಅಮರಸಿಂಗ್‌ರದು. ಒಟ್ಟು ೧೦೦೦ ರನ್‌ಗಳನ್ನು ಮಾಡಿದ ಎರಡನೆಯ ಆಟಗಾರ ಅಮರ ಸಿಂಗ್. ಕೇವಲ ೧೬ ಪಂದ್ಯಗಳಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ಅವರು ಭಾರತದ ಶ್ರೇಷ್ಠ ಆಲ್ ರೌಂಡ್ ಆಟಗಾರರೆನ್ನಲು ಇದಕ್ಕಿಂತ ನಿದರ್ಶನ ಬೇಕೆ?

೧೯೩೨ರ ಇಂಗ್ಲೆಂಡ್ ಪ್ರವಾಸಕ್ಕೆ ಕ್ರಿಕೆಟ್ ಆಟಗಾರರನ್ನು ಆರಿಸಬೇಕಾಗಿತ್ತು. ಪಾಟಿಯಾಲದಲ್ಲಿ ರಾಷ್ಟ್ರೀಯ ಆಯ್ಕೆದಾರರಿಗಾಗಿ ಎರಡು ಪೂರ್ವಭಾವೀ ಪಂದ್ಯಗಳಲ್ಲಿ ಅಮರಸಿಂಗ್ ಆಡಿದರು. ಆಗಲೂ ಕೂಡ ಅವರ ಪ್ರತಿಭೆಯ ಪ್ರದರ್ಶನ ರಾಷ್ಟ್ರೀಯ ಆಯ್ಕೆದಾರರು ಹಾಗೂ ತಮ್ಮ ರಾಜ್ಯದ ಮಟ್ಟಿಗೆ ಸೀಮಿತವಾಗಿತ್ತು. ಅನಂತರ ಅವರು ಇಂಗ್ಲೆಂಡಿನ ಪ್ರವಾಸ ಮಾಡುವ ಟೀಮಿಗೆ ಆಯ್ಕೆಯಾದರು. ಭಾರತದ  ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಡಿದ ನಂತರ ಅಮರ ಸಿಂಗ್‌ರ ಪ್ರತಿಭೆ ಪ್ರಪಂಚದ ಕ್ರಿಕೆಟ್ ಕ್ರೀಡಾಸಕ್ತರಿಗೆಲ್ಲ ತಿಳಿಯಿತು.

ಮರೆಯಲಾಗದ ಆ ದಿನ

೧೯೩೨ ರ ಜೂನ್ ೨೬ನೆಯ ದಿನಾಂಕ, ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಮರೆಯಲಾಗದ ದಿನ. ಅಂದು ಭಾರತ-ಇಂಗ್ಲೆಂಡುಗಳ ನಡುವೆ ಮೊಟ್ಟ ಮೊದಲ ಕ್ರಿಕೆಟ್ ಟೆಸ್ಟ್  ಪಂದ್ಯ. ಇಂಗ್ಲೆಂಡಿನವರ ವಿಶಿಷ್ಟ ಆಟ ಎನಿಸಿಕೊಂಡಿದ್ದ ಕ್ರಿಕೆಟ್‌ನಲ್ಲಿ ಭಾರತ ತನ್ನನ್ನು ಎದುರಿಸುವಷ್ಟು ಪ್ರಾವಿಣ್ಯತೆ ಪಡೆದಿದೆ ಎಂದು ಇಂಗ್ಲೆಂಡ್ ಗುರುತಿಸಿದ ದಿನ. ಅಮರ ಸಿಂಗ್ ಮತ್ತೊಬ್ಬ ಶ್ರೇಷ್ಠ ವೇಗದ ಬೌಲರ್ ಆದ ಮಹಮದ್ ನಿಸ್ಸಾರ್‌ರೊಂದಿಗೆ ವೇಗದ ಬೌಲಿಂಗ್ ಹಂಚಿಕೊಂಡರು.

ಇಂಗ್ಲೆಂಡಿನ ಪ್ರಾರಂಭದ ಬ್ಯಾಟ್ಸ್‌ಮನ್ ಆಗಿದ್ದ ಸಟ್‌ಕ್ಲಿಫ್ ಮತ್ತು ಹೋಮ್ಸ್‌ರು ಪ್ರಪಂಚದ ಶ್ರೇಷ್ಠ ಪ್ರಾರಂಭದ ಆಟದ ಜೋಡಿ ಎನ್ನಿಸಿಕೊಂಡಿದ್ದರು. ಎಸೆಕ್ಸ್ ಎಂಬ ಕೌಂಟಿಯ ತಂಡದ ವಿರುದ್ಧ ೫೫೫ ರನ್‌ಗಳನ್ನು ಸೇರಿಸಿ ಕ್ರಿಕೆಟ್‌ನಲ್ಲಿ ಒಂದು ದಾಖಲೆ ಮಾಡಿದ್ದರು. ಒಂದು ಕಡೆಯಿಂದ ಕರಾರುವಾಕ್ ಆಗಿ ಅಮರ ಸಿಂಗ್ ಬೌಲಿಂಗ್ ಮಾಡುತ್ತಿದ್ದರೆ ಇನ್ನೊಂದು ಕಡೆ ನಿಸ್ಸಾರ್ ಸಟ್‌ಕ್ಲಿಪ್ ಹಾಗೂ ಹೋಮ್ಸ್‌ರನ್ನು ಔಟ್ ಮಾಡಿದರು. ಇಂಗ್ಲೆಂಡಿನ ಅತ್ಯಂತ ಶ್ರೇಷ್ಠ ಬ್ಯಾಟುಗಾರ ಎನಿಸಿದ ವ್ಯಾಲಿ ಹ್ಯಾಮಂಡ್‌ರನ್ನು ಅಮರಸಿಂಗ್ ‘ಬೌಲ್ಡ್’ ಮಾಡಿದರು. ಭಾರತಕ್ಕೆ ಕ್ರಿಕೆಟ್ ಕಲಿಸಿಕೊಟ್ಟ ಇಂಗ್ಲೆಂಡ್ ಈ ಇಬ್ಬರೂ ವೇಗದ ಬೌಲರ್‌ಗಳ  ಚಾಕಚಕ್ಯತೆಯ ಬೌಲಿಂಗ್‌ಗೆ ಬಲಿಯಾಗಬೇಕಾಯಿತು. ಇವರಿಬ್ಬರ ಜೋಡಿಯ ನಂತರ ನಲವತ್ತಮೂರು ವರ್ಷಗಳಾದರೂ ಸಹ ಭಾರತ ಇನ್ನೂ ಆ ಮಟ್ಟದ ಶ್ರೇಷ್ಠ ವೇಗದ ಬೌಲರ್‌ಗಳನ್ನು ತಯಾರು ಮಾಡುವುದಕ್ಕೆ ಸಾಧ್ಯವಾಗಿಲ್ಲ.  ತಮ್ಮ ನಾಡಿನಲ್ಲಿಯೇ ಇಂತಹ ಅತ್ಯುತ್ತಮ ಬೌಲಿಂಗನ್ನು ನೋಡಿಲ್ಲ ಎಂಬ ಅಭಿಪ್ರಾಯವನ್ನು ಇಂಗ್ಲೆಂಡ್ ಆಟಗಾರರು ಹಾಗೂ ವಿಮರ್ಶಕರು ಪಡುವ ರೀತಿಯಲ್ಲಿ ಈ ವೇಗದ ಬೌಲಿಂಗ್ ಜೋಡಿ ಇಂಗ್ಲೆಂಡಿನ ಪ್ರಥಮ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಹಂಚಿಕೊಂಡಿತು. ಅಮರ ಸಿಂಗ್‌ಗೆ ಬಂದದ್ದು ಎರಡು ವಿಕೆಟ್‌ಗಳೇ ಆದರೂ ಅವರು ೩೧ ಓವರ್‌ಗಳಲ್ಲಿ ಕೇವಲ ೭೫ ರನ್ ಕೊಟ್ಟು ಅತಿ ನಿಷ್ಕೃಷ್ಟವಾಗಿ ಬೌಲಿಂಗ್ ಮಾಡಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಆರಂಭ ಆಟಗಾರರ ಸಟ್‌ಕ್ಲಿಫ್‌ರ ವಿಕೆಟ್‌ನ್ನು ಪುನಃ ಕಡಿಮೆ ಸ್ಕೋರಿಗೆ ಅಮರ ಸಿಂಗ್ ಪಡೆದರು. ಪ್ರಥಮ ಇನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ಆಕ್ರಮಣಕ್ಕೆ ತಕ್ಕ ಪ್ರತಿರೋಧ ತೋರಿದ ಎಲ್. ಈ. ಜಿ. ಏಮ್‌ಸ್‌ರನ್ನು ಕೇವಲ ಆರು ರನ್‌ಗಳಿಗೆ ಅಮರಸಿಂಗ್ ಬೌಲ್ಡ್ ಮಾಡಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ೪೧ ಓವರ್‌ಗಳಲ್ಲಿ  ಅವರು ಕೇವಲ ೪೮ ರನ್‌ಗಳನ್ನು ಕೊಟ್ಟು ಎರಡು ವಿಕೆಟ್ ಪಡೆದರು. ಎಫ್. ಆರ್. ಬ್ರೌನ್‌ರ  ಕ್ಯಾಚನ್ನು ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮವಾಗಿ ಹಿಡಿದು ಉತ್ತಮ ಕ್ಷೇತ್ರರಕ್ಷಣೆಯಿಂದ ಎದುರಾಳಿತಂಡದ  ರನ್ ಗಳಿಕೆಗೆ ಕಡಿವಾಣ  ಹಾಕಿದರು. ಅಮರ ಸಿಂಗ್ ಭಾರತದ ಎರಡನೆ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್  ಪ್ರದರ್ಶನ ನೀಡಿದರು.  ಹೀಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗಗಳಲ್ಲೂ ತಮ್ಮ ಪ್ರತಿಭೆಯನ್ನು ಲಾರ್ಡ್ಸ್‌ಟೆಸ್ಟ್‌ನಲ್ಲಿ ತೋರಿಸಿಕೊಟ್ಟರು. ಈ ಪಂದ್ಯ ನಡೆದದ್ದು ಲಾರ್ಡ್ಸ್ ಮೈದಾನದಲ್ಲಿ, ಪ್ರಪಂಚದ ಕ್ರಿಕೆಟ್ ಆಟಗಾರರಿಗೆಲ್ಲ ಲಾರ್ಡ್ಸ್ ಮೈದಾನ ಎಂದರೆ ಬಹು ಗೌರವ. ಅಲ್ಲಿ ಅಮರ ಸಿಂಗ್‌ರು ಆಡಿದ ರೀತಿ ಕಡಿಮೆ ಸಾಧನೆಯೆ?

ಪ್ರಪಂಚದ ಹನ್ನೊಂದು ಆಟಗಾರರಲ್ಲಿ

ಈ ಪಂದ್ಯದ  ಮತ್ತೊಂದು ಸ್ವಾರಸ್ಯದ ಸಂಗತಿಯನ್ನು ಸ್ಮರಿಸಬಹುದು. ಭಾರತದ ಎರಡನೆಯ ಇನಿಂಗ್ಸ್‌ನಲ್ಲಿ ಏಳನೆಯ ಆಟಗಾರ ಔಟಾದಾಗ ಆಡಲು ಬಂದರು ಅಮರ ಸಿಂಗ್. ಆಗ ಭಾರತದ ಸ್ಕೋರ್  ೧೦೮. ಬಹುಶಃ ಇಂಗ್ಲೆಂಡ್ ತಂಡದ ಶ್ರೇಷ್ಠ ಬೌಲರ್‌ಗಳು ಭಾರತದ ಇಡೀ ತಂಡವನ್ನು ೧೨೦ ರನ್‌ಗಳೊಳಗಾಗಿ ಔಟ್ ಮಾಡಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಅಮರ ಸಿಂಗ್‌ರು ಆಡಲು ಬಂದಾಗ ಇನ್ನೊಂದು ಕೊನೆಯಲ್ಲಿ ಬ್ಯಾಟ್ ಮಾಡುತ್ತಿದ್ದವರು ಲಾಲ್ ಸಿಂಗ್. ಲಾಲ್ ಸಿಂಗ್‌ರವರನ್ನು ಮತ್ತೊಂದು ಕೊನೆಯಲ್ಲಿ ಇರಿಸಿ ಕೊಂಡು ಆಡಿದ ಅಮರ ಸಿಂಗ್ ಅದುವರೆವಿಗೂ ಯಶಸ್ಸು ಪಡೆದಿದ್ದ ಇಂಗ್ಲೆಂಡ್ ಬೌಲರ್‌ಗಳ  ದಿಕ್ಕುತಪ್ಪಿಸಿ ಶೀಘ್ರವಾಗಿ ರನ್ ಪೇರಿಸುತ್ತಾ ಬಂದರು. ರಾಬಿನ್ಸ್‌ರ  ಒಂದು ಓವರ್‌ನಲ್ಲಿ ಮೂರು ಬಾಲುಗಳನ್ನು ಸತತವಾಗಿ ಬೌಂಡರಿಗೆ ಮುಟ್ಟಿಸಿದ ಅಮರ ಸಿಂಗ್ ನಾಲ್ಕನೆಯ ಬಾಲನ್ನು ಸಿಕ್ಸರ್ ಬಾರಿಸಿದರು. ಕೇವಲ ೪೦ ನಿಮಿಷಗಳಲ್ಲಿ ಈ ಜೋಡಿ ೭೪ ರನ್‌ಗಳನ್ನು ಕೂಡಿಸಿತ್ತು. ಒಂಬತ್ತನೆಯ ಆಟಗಾರರಾಗಿ ಬಂದು ತಂಡದಲ್ಲಿಯೇ ಅತಿ ಹೆಚ್ಚು ಸ್ಕೋರನ್ನು ಮಾಡಿದ ಅಮರಸಿಂಗ್ ೫೧ ರನ್‌ಗಳನ್ನು ಮಾಡಿ ಔಟಾದರು.  ಈ ಆಟವನ್ನು ನೋಡುತ್ತಿದ್ದ ಕ್ರಿಕೆಟ್ ವಿಮರ್ಶಕ ಸರ್ ಪೆಲ್‌ಹ್ಯಾಮ್ ವಾರ್ನರ್‌ರವರು ಪ್ರಪಂಚದ ಶ್ರೇಷ್ಠ ಹನ್ನೊಂದು ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿ ಅಮರಸಿಂಗ್ ಶ್ರೇಷ್ಠ ಸರ್ವಾಂಗ ಪ್ರಬಲ ಆಟಗಾರರಾಗಿ ಸೇರುತ್ತಾರೆ ಎಂಬ ಅಭಿಪ್ರಾಯ ಪಟ್ಟರು.

ಕ್ರಿಕೆಟ್‌ನಲ್ಲಿನ ಶ್ರೇಷ್ಠ ಪ್ರದರ್ಶನಗಳನ್ನು, ಅತಿ ಪ್ರತಿಭಾವಂತರ ಕ್ರೀಡೆಗಳನ್ನು ದಾಖಲೆಯಾಗಿಸುವ ‘ವಿಸ್ಡನ್’ ಎಂಬ ಪ್ರಕಟಣೆಯ ಆ ವರ್ಷದ ಸಂಚಿಕೆಯಲ್ಲಿ ಅಮರ ಸಿಂಗ್‌ರ ಬಗ್ಗೆ ಲೇಖಕರು ಈ ರೀತಿ ಬರೆದರು.‘ಬೌಲಿಂಗ್ ಕಲೆಯ ದೃಷ್ಟಿಯಿಂದ ಭಾರತದ ತಂಡದಲ್ಲಿ ಅಮರ ಸಿಂಗ್ ಶ್ರೇಷ್ಠರಾಗಿದ್ದರು. ಆ ಟೆಸ್ಟ್ ಪಂದ್ಯದ ದ್ವಿತೀಯ ಸರದಿಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಅಮರಸಿಂಗ್ ಇತ್ತೀಚಿನ ದಿನಗಳಲ್ಲಿ  ಕಾಣದೆ ಇದ್ದಂತಹ ಒಂದು ಉತ್ತಮ ಮಟ್ಟವನ್ನು ಬೌಲಿಂಗ್‌ನಲ್ಲಿ ತೋರಿಸಿದರು. ಪ್ರಥಮ ಮಹಾಯುದ್ಧದ ನಂತರ ಟೆಸ್ಟ್ ಪಂದ್ಯದಲ್ಲಿ ಇಷ್ಟರ ಮಟ್ಟಿನ ಉತ್ತಮ ಬೌಲಿಂಗ್‌ನ್ನು ನಾನು ಕಂಡಿರಲೇ ಇಲ್ಲ.’

ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ

ಇಂಗ್ಲೆಂಡ್ ತಂಡ ೧೯೩೩-೩೪ ರಲ್ಲಿ ಭಾರತದ ಪ್ರವಾಸ ಮಾಡಿತು. ಮುಂಬಯಿಯಲ್ಲಾದ ಪ್ರಥಮ ಪಂದ್ಯದಲ್ಲಿ ಅಮರ ಸಿಂಗ್ ಹಾಗೂ ಅವರ ಸಹೋದರ ರಾಮ್‌ಜಿ ಒಟ್ಟಿಗೆ ಆಡಿದರು. ಈ ಪಂದ್ಯದಲ್ಲಿ ಅಮರಸಿಂಗ್ ಕೇವಲ ಎರಡು ವಿಕೆಟ್ ಪಡೆದರು. ಆದರೆ ಅನಂತರ ಕಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಅಮರಸಿಂಗ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಇಂಗ್ಲೆಂಡ್ ತಂಡದ ಮೊದಲನೆಯ ಇನ್ನಿಂಗ್ಸ್‌ನಲ್ಲಿ ೫೪.೫ ಓವರ್‌ಗಳಲ್ಲಿ ಕೇವಲ ೧೦೬ ರನ್‌ಗಳನ್ನು ಕೊಟ್ಟು ನಾಲ್ಕು ವಿಕೆಟ್‌ಗಳನ್ನು ಪಡೆದರು. ಮದರಾಸ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಈ ಸರಣಿಯ ಅತಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಅಮರಸಿಂಗ್ ಇಂಗ್ಲೆಂಡಿನವರ ಮೊದಲನೆ ಇನಿಂಗ್ಸ್‌ನಲ್ಲಿ ಕೇವಲ ೮೬ ರನ್‌ಗಳಿಗೆ ಏಳು ವಿಕೆಟ್ ಪಡೆದರು. ಇದರಲ್ಲದೆ ಅಮರಸಿಂಗ್ ಉತ್ತಮ ಆಕ್ರಮಣಕಾರಿ ಭಾರತದ ಪರ ಬ್ಯಾಟಿಂಗ್ ಮಾಡಿ ೪೮ ರನ್‌ಗಳನ್ನು ಬಾರಿಸಿದರು.

ಆ ವರ್ಷದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಅಮರಸಿಂಗ್ ಬೌಲ್ ಮಾಡಿದ್ದು ೧೬೩.೫ ಓವರ್‌ಗಳು, ಅವುಗಳಲ್ಲಿ ೩೯ ಮೆಯ್ಡನ್ ಓವರುಗಳು. ಅವರು ೩೮೨ ರನ್‌ಗಳಿಗೆ ೧೪ ವಿಕೆಟ್ ಪಡೆದರು. ಒಂದು ವಿಕೆಟ್‌ಗೆ  ೨೭.೨೮ ರನ್‌ಗಳ ಸರಾಸರಿ ಆಯಿತು. ಅವರ ಬ್ಯಾಟಿಂಗ್ ಸರಾಸರಿ ೧೫ ೫೦.

ಮತ್ತೆ ಪ್ರಚಂಡ ಬೌಲಿಂಗ್

ಪುನಃ ೧೯೩೬ ರಲ್ಲಿ ಭಾರತ ಇಂಗ್ಲೆಂಡಿನ ಪ್ರವಾಸ ಮಾಡಿದಾಗ ಅಮರಸಿಂಗ್ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನಗಳಿಗೆಲ್ಲಾ ಮೆರಗು ನೀಡುವಂತಹ ಬೌಲಿಂಗನ್ನು ಲಾರ್ಡ್ಸ್‌ನಲ್ಲಾದ ಪ್ರಥಮ ಟೆಸ್ಟನಲ್ಲಿ ನೀಡಿದರು. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ ೧೪೭ ರನ್‌ಗಳಿಗೆ ಔಟಾಗಬೇಕಾ ಯಿತು. ಇಂಗ್ಲೆಂಡ್ ಆಟಗಾರರು ಭಾರತವನ್ನು ಇನಿಂಗ್ಸ್‌ನಿಂದ ಸೋಲಿಸುವಷ್ಟು ರನ್ ಸೇರಿಸಬಹುದು ಎಂದು ಪ್ರೇಕ್ಷಕರು ಲೆಕ್ಕ ಹಾಕಿದ್ದರು. ಆದರೆ  ಇಂಗ್ಲೆಂಡ್‌ನ ಪರವಾಗಿ ಯೋಚನೆ ಮಾಡುತ್ತಿದ್ದವರ ನಿರೀಕ್ಷೆಗಳನ್ನೆಲ್ಲ  ಅಮರ ಸಿಂಗ್ ತಲೆಕೆಳಗು ಮಾಡಿದರು. ಕೇವಲ ೩೪ ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಉರುಳಿದವು. ಇಂಗ್ಲೆಂಡಿನ  ಈ ನಾಲ್ಕು  ವಿಕೆಟ್‌ಗಳನ್ನು ಅಮರ ಸಿಂಗ್ ಪಡೆದಿದ್ದರು. ಇನ್ನೂ ಏಳು ರನ್ ಪಡೆಯುವಷ್ಟರಲ್ಲಿ ಮತ್ತೊಂದು ವಿಕೆಟ್‌ನ್ನು ಮಹಮದ್ ನಿಸ್ಸಾರ್ ಪಡೆದರು. ಈ ಬೌಲಿಂಗ್ ಜೋಡಿ ಇಂಗ್ಲೆಂಡ್ ತಂಡವನ್ನೇ ಬೆದರಿಸಿ ಸೋಲಿನ ದವಡೆಯಲ್ಲಿ ತಳ್ಳಿತ್ತು. ಆರಂಭ ಆಟಗಾರ ಎ. ಮಿಚೆಲ್‌ರನ್ನು ಬೌಲ್ಡ್ ಮಾಡಿದ ಅಮರಸಿಂಗ್ ಆಗಿನ ಕಾಲಕ್ಕೆ ಅತಿ ಉತ್ತಮ ಬ್ಯಾಟುಗಾರರೆನಿಸಿಕೊಂಡ ಹೆಚ್ ಗಿಂಬ್ಲೆವ್‌ರನ್ನು ೧೧ ರನ್‌ಗಳಿಗೆ ಹಾಗೂ ವರ್ನ್ ಬಾಲ್‌ರನ್ನು ಸ್ಕೋರ್ ಮಾಡಲು ಅವಕಾಶ ಕೊಡದೆ ಪೆವಿಲಿಯನ್‌ಗೆ ಕಳಿಸಿದರು. ಆರ್.ಈ ಎಸ್.ವೈಟ್ ಅವರು ಸಹ ರನ್ ಸ್ಕೋರ್‌ಮಾಡದೆ ಅಮರಸಿಂಗ್‌ರ ಬೌಲಿಂಗ್‌ನಲ್ಲಿ ಮತ್ತೊಬ್ಬ ವೇಗದ ಬೌಲರ್ ಜಹಾಂಗೀರ್ ಖಾನ್‌ಗೆ ಕ್ಯಾಚಿತ್ತು ಔಟಾಗಬೇಕಾಯಿತು. ಆ ಸರದಿಯಲ್ಲಿ ಇಂಗ್ಲೆಂಡ್ ತಂಡವನ್ನು ೧೩೪ ರನ್‌ಗಳಿಗೆ ಔಟ್ ಮಾಡಿದ ಸಾಧನೆಯ ಹೆಚ್ಚು ಪಾಲು ಅಮರಸಿಂಗ್‌ರಿಗೆ ಸೇರುತ್ತದೆ. ಅವರು ೨೫.೧ ಓವರ್‌ಗಳಲ್ಲಿ ಕೇವಲ ೩೫ ರನ್‌ಗಳನ್ನಿತ್ತು ಆರು ವಿಕೆಟ್ ಪಡೆದರು. ಅವರೊಡನೆ ಬೌಲಿಂಗ್ ಮಾಡಿ ಎದುರಾಳಿ ತಂಡದ ಬೌಲಿಂಗ್ ಶಕ್ತಿಯನ್ನು ಮುರಿದ ಮಹಮದ್ ನಿಸ್ಸಾರ್‌ರವರಿಗೆ ಮೂರು ವಿಕೆಟ್ ದೊರೆತವು.

ಉಳಿದ ಟೆಸ್ಟ್ಗಳು

ದ್ವಿತೀಯ ಟೆಸ್ಟ್ನಲ್ಲಿ ತಮ್ಮ ಬೌಲಿಂಗ್ ಶಕ್ತಿಯನ್ನು ಅಮರ ಸಿಂಗ್‌ರವರು ತೋರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ೨೭, ಹಾಗೂ ಎರಡನೆ ಇನ್ನಿಂಗ್ಸ್‌ನಲ್ಲಿ ಔಟಾಗದೆ ೪೮ ರನ್‌ಗಳನ್ನು ಬಾರಿಸಿದರು. ಚೆಂಡನ್ನು ಬಲವಾಗಿ ಬಾರಿಸುವುದರಲ್ಲಿ ಖ್ಯಾತರಾಗಿದ್ದ ಅಮರಸಿಂಗ್ ಐದನೇ ವಿಕೆಟ್‌ಗೆ ಸೇರಿಸಿದ ೭೩ ರನ್‌ಗಳಲ್ಲಿ ತಾವೇ ೪೮ ರನ್‌ಗಳನ್ನು‘ಬಿರುಗಾಳಿ’ ಯಂತೆ ಸೇರಿಸಿದರು. ಈ ಟೆಸ್ಟ್‌ನಲ್ಲಿ ಅವರು ಹಾಗೂ ನಿಸ್ಸಾರ್ ತಲಾ ಎರಡು ವಿಕೆಟ್ ಪಡೆದರಾದರೂ ಹೆಚ್ಚು ಬೌಲಿಂಗ್ ಮಾಡುವ ಜವಾಬ್ದಾರಿ ಅಮರ ಸಿಂಗ್‌ರ ಮೇಲೆ ಬಿದ್ದಿತು. ಅವರು ಒಂದು ಬಾರಿ ಬೌಲಿಂಗ್ ಮಾಡುವಾಗ ಇಂಗ್ಲೆಂಡ್ ತಂಡದ ಸ್ಕೋರ್ ೪ ಕ್ಕೆ ೩೭೫ ರನ್ ಆಗಿತ್ತು. ಅವರು ಕೆಲವೇ ನಿಮಿಷಗಳಲ್ಲಿ ಎರಡು ಶೀಘ್ರ ವಿಕೆಟ್ ಪಡೆದು ಇಂಗ್ಲೆಂಡಿನ ಸ್ಕೋರನ್ನು ೬ ಕ್ಕೆ ೩೭೬ ರನ್ ಮಾಡಿ ಭಾರತಕ್ಕೆ ಗೌರವ ತಂದಿತ್ತರು.

ಓವಲ್‌ನಲ್ಲಿ ನಡೆದ ಮೂರನೆಯ ಟೆಸ್ಟ್‌ನಲ್ಲೂ ಸಹ ಅಮರ ಸಿಂಗ್ ದ್ವಿತೀಯ ಇನಿಂಗ್ಸ್‌ನಲ್ಲಿ ೪೪ ರನ್ ಬಾರಿಸಿ ಭಾರತದ ಸೋಲಿನಲ್ಲೂ ದಿಟ್ಟ ಹೋರಾಟದ ಮನೋಭಾವ ತೋರಿದ ಆಟಗಾರರಾದರು. ಇವರು ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರೂ ಸಹ ಕೇವಲ ಎರಡೇ ವಿಕೆಟ್‌ಗಳನ್ನು ಪಡೆಯಬೇಕಾಯಿತು. ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರನ ಪ್ರತಿಭೆಯನ್ನು ಯಾವಾಗಲೂ ಅಂಕಿ ಅಂಶಗಳಿಂದಲೇ ಅಳೆಯಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ಒಳ್ಳೆಯ ಬ್ಯಾಟ್ಸ್‌ಮನ್ ಬೇಗನೆ ಔಟ್  ಆಗಬಹುದು. ಒಳ್ಳೆಯ ಬೌಲರ್‌ಗೆ  ಹೆಚ್ಚು ವಿಕೆಟ್‌ಗಳು ಲಭ್ಯವಾಗದೆ ಹೋಗಬಹುದು. ಈ ಪಂದ್ಯದಲ್ಲಿ ಅಮರಸಿಂಗ್‌ರು ಚೆನ್ನಾಗಿ ಬೌಲ್ ಮಾಡಿದರೂ ಅವರಿಗೆ ಅದೃಷ್ಟ ಒಲಿಯಲಿಲ್ಲ. ೧೦೨ ರನ್‌ಗಳಿಗೆ ಎರಡೇ ವಿಕೆಟ್ ಪಡೆದರಾದರೂ ತಮ್ಮ ಅಭಿಮಾನಿಗಳನ್ನು ಅಮರಸಿಂಗ್ ಹೆಚ್ಚಿಸಿಕೊಂಡರು. ಇದೇ ಪ್ರವಾಸದಲ್ಲಿ ಅವರು ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಲ್ಯಾಂಕಷೈರಿನ ವಿರುದ್ಧ ಭಾರತ ಆಡುತ್ತಿದ್ದಾಗ, ಅಮರಸಿಂಗ್‌ರು ೯ನೆಯ ವಿಕೆಟ್ ಬಿದ್ದಾಗ ಆಡಲು ಬಂದರು. ೧೨೧ ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು.

ಲ್ಯಾಂಕಷೈರಿನ ಆಹ್ವಾನ

ಪಂದ್ಯದಿಂದ ಪಂದ್ಯಕ್ಕೆ ಮತ್ತು ಹೆಚ್ಚಿನ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಅಮರ ಸಿಂಗ್‌ರವರಿಗೆ  ೧೯೩೨ ರ ಇಂಗ್ಲೆಂಡ್ ಪ್ರವಾಸದ ನಂತರ ಲ್ಯಾಂಕಷೈರ್ ಲೀಗ್‌ನಲ್ಲಿ ಆಡುವುದಕ್ಕೆ ಕರೆಬಂದಿತು. ಇದೇ ಲ್ಯಾಂಕಷೈರ್‌ನ  ತಂಡದ ವಿರುದ್ಧ ಅವರು ೧೨೧ ರನ್‌ಗಳನ್ನು ಹೊಡೆದಿದ್ದರು. ಪ್ರಪಂಚದ ಶ್ರೇಷ್ಠ ಕ್ರಿಕೆಟ್ ಪಟುಗಳೊಂದಿಗೆ ಆಡುವ ಅವಕಾಶ ಸಿಗುತ್ತದೆಂದು ಅಮರ ಸಿಂಗ್ ಈ ಆಹ್ವಾನವನ್ನು ಒಪ್ಪಿಕೊಂಡರು. ಲ್ಯಾಂಕಷೈರ್ ಲೀಗ್‌ನಲ್ಲಿಯೂ ತಮ್ಮ ಅತ್ಯುತ್ತಮ ಆಟದಿಂದ ಅಮರ ಸಿಂಗ್ ಎಲ್ಲಾ ಕ್ರಿಕೆಟ್ ಪ್ರಿಯರನ್ನು ರಂಜಿಸಿದರು.

ಲ್ಯಾಂಕಷ್ಟೈರ್‌ಲೀಗ್ ಪಂದ್ಯದಲ್ಲಿ ಭಾಗವಹಿಸುತ್ತಿದ್ದ ಅವರು ಒಮ್ಮೆ ಇಂಗ್ಲೆಂಡ್‌ನ ತಂಡಕ್ಕೆ ಆಯ್ಕೆಯಾಗಿ (ಅನಧಿಕೃತ ಪ್ರಥಮ ದರ್ಜೆಯ ಪಂದ್ಯ) ಆಸ್ಟ್ರೇಲಿಯಾದ ವಿರುದ್ಧ ಆಡಿದರು. ೧೯೩೮ರಲ್ಲಿ ಬ್ಲ್ಯಾಕ್‌ಪೂಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ಬ್ಯಾಟುಗಾರರ ವಿಕೆಟ್‌ಗಳನ್ನು ೮೪ ರನ್ನುಗಳನ್ನಿತ್ತು ಪಡೆದಿದ್ದರು. ಪ್ರಪಂಚದಲ್ಲೆಲ್ಲ ಶ್ರೇಷ್ಠ ಬ್ಯಾಟುಗಾರರೆಂದು ಖ್ಯಾತರಾಗಿದ್ದ ಸ್ಪಾನ್ ಮೆಕಾಬೆ, ಹ್ಯಾಸೆಟ್, ಬಿ.ಏ. ಬಾರ್ನೆಟ್ ಹಾಗೂ ಡಬ್ಲ್ಯೂ, ಎ. ಬ್ರೌನ್‌ರ ವಿಕೆಟ್ಟನ್ನು ಅವರು ಈ ಪಂದ್ಯದಲ್ಲಿ ಪಡೆದಿದ್ದರು. (ಇಂದಿಗೂ ಶ್ರೇಷ್ಠ ಬ್ಯಾಟುಗಾರರಾಗುಳಿದಿರುವ ಸರ್.ಡಾನ್ ಬ್ರಾಡ್‌ಮನ್ ಈ ಪಂದ್ಯದಲ್ಲಾಡಲಿಲ್ಲ)

ಅಮರ್‌ಸಿಂಗ್‌ರವರು ಟೆಸ್ಟ್‌ನಲ್ಲಿ ಮಾಡಿದ ಈ ಸಾಧನೆಯನ್ನು ಇಂಗ್ಲೆಂಡ್ ಪ್ರವಾಸದ ಇತರೇ ಕೌಂಟಿಪಂದ್ಯಗಳಲ್ಲೂ ಉಳಿಸಿಕೊಂಡು ಬಂದರು. ಮಹಮದ್ ನಿಸ್ಸಾರ್ ಹಾಗೂ ಅಮರ್‌ಸಿಂಗ್ ಜೋಡಿ ಯೆಂದರೇ ಎಂತಹ ಆಕ್ರಮಣಕಾರೀ ಬ್ಯಾಟುಗಾರರೂ ಹೆದರುವ ರೀತಿಯಲ್ಲಿ ಉತ್ತಮಟ್ಟದ ಬೌಲಿಂಗ್‌ನ್ನು ಈ ಇಬ್ಬರು ಬೌಲರ್‌ಗಳೂ ಕಾಪಾಡಿಕೊಂಡು ಬಂದರು.

ಅಮರ್‌ಸಿಂಗ್ ೧೯೩೨ರ ಇಂಗ್ಲೆಂಡ್ ಸರಣಿ ಯಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲರ್ ಆದರಲ್ಲದೆ ಪರದೇಶದಲ್ಲಿ ನೂರು ವಿಕೆಟ್‌ಗಳಿಸಿದ ಪ್ರಥಮ ಭಾರತೀಯ ರೆನಿಸಿದರು. ಈ ವಿಷಯದಲ್ಲಿ ಮಹಮದ್ ನಿಸ್ಸಾರ್ ರವರಿಂದ ಪ್ರಬಲ ಪೈಪೋಟಿ ಎದುರಿಸಿದ ಅಮರ್ ಸಿಂಗ್ ಪ್ರಥಮ ದರ್ಜೆಯ ಪಂದ್ಯಗಳಲ್ಲಿ  ಒಟ್ಟು ೧೦೬೨ ಓವರ್‌ಗಳನ್ನು ಬೌಲ್ ಮಾಡಿ ೧೧೧ ವಿಕೆಟ್‌ಗಳಿಸಿದರು.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ

ಆ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲೂ ಅಮರ್‌ಸಿಂಗ್‌ರವರು ತಮ್ಮ ಪ್ರತಿಭೆಯನ್ನು ತೋರಿಸದೇ ಬಿಡಲಿಲ್ಲ. ೬೪೦ ರನ್‌ಗಳನ್ನು ಆ ಸರಣಿಯಲ್ಲಿ ಗಳಿಸಿದ ಅವರು ಎರಡು ಶತಕಗಳನ್ನು ಬಾರಿಸಿದ್ದರು. ಸರಣಿಯ ಕಡೆಯ ಪಂದ್ಯದಲ್ಲಿ ೧೦೭ರನ್‌ಗಳನ್ನು ಕೇವಲ ೮೦ ನಿಮಿಷಗಳಲ್ಲಿ ಪೂರೈಸಿ ತಾವೆಂತಹ ಪ್ರಚಂಡ ಪ್ರತಿಭೆಯ ಬ್ಯಾಟುಗಾರರೆಂದು ತೋರಿಸಿಕೊಟ್ಟರು. ಎದುರಾಳಿ ಕ್ಷೇತ್ರರಕ್ಷಕರನ್ನು ಹಾಗೂ ಬೌಲರ್‌ಗಳನ್ನು ಯಾವಾಗಲೂ ಗೊಂದಲದಲ್ಲಿ ಕೆಡುವುತ್ತಿದ್ದರು. ಅಮರ್‌ಸಿಂಗ್‌ರ ಬ್ಯಾಟಿಂಗ್ ಶೈಲಿಯಿಂದ ಅನೇಕ ಕಿರಿಯ ಕ್ರೀಡಾಪಟುಗಳು ಪ್ರಭಾವಿತರಾದರು.

ಮತ್ತೇ ಭಾರತದಲ್ಲಿ

ಅಮರ್‌ಸಿಂಗ್ ಎರಡು ಅನಧಿಕೃತ ಟೆಸ್ಟ್ ಪಂದ್ಯದಲ್ಲಾಡಿದರು. ೧೯೩೫-೩೬ರಲ್ಲಿ ರೈಡರ್ ನಾಯಕತ್ವದಲ್ಲಿ ಬಂದಿದ್ದ ಆಸ್ಟ್ರೇಲಿಯಾದ ತಂಡದ ವಿರುದ್ಧ ಹಾಗೂ ೧೯೩೭-೩೮ ರಲ್ಲಿ ಲಾರ್ಡ್ ಟೆನಿಸನ್ ಇಂಗ್ಲಿಷ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಆಡಿದರು. ರೈಡರ್ ನಾಯಕತ್ವದ ತಂಡದ ವಿರುದ್ಧ ಎರಡು ಪಂದ್ಯಗಳಲ್ಲೂ ಹಾಗೂ ಲಾರ್ಡ್ ಟೆನಿಸನ್ ತಂಡದ ವಿರುದ್ಧ ಐದು ಪಂದ್ಯಗಳಲ್ಲೂ ಅವರು ಆಡಿದರು.

೧೯೩೭-೩೮ ರಲ್ಲಿ ಭಾರತದ ಪ್ರವಾಸ ಮಾಡಿದ ಲಾರ್ಡ್ ಟೆನಿಸನ್ ತಂಡದ ವಿರುದ್ಧ ಅಮರ್ ಸಿಂಗ್ ಪುನಃ ತಮ್ಮ ಬೌಲಿಂಗ್ ಸಾರ್ವಭೌಮತ್ವವನ್ನು ಪ್ರದರ್ಶಿಸಿದರು. ಅವರು ಒಟ್ಟು ಈ ಸರಣಿಯಲ್ಲಿ ೩೬ ವಿಕೆಟ್‌ಗಳನ್ನು ಸಂಪಾದಿಸಿದರು. ಭಾರತ ಈ ಸರಣಿಯಲ್ಲಿ ಕಲ್ಕತ್ತ ಹಾಗೂ ಮದರಾಸಿನಲ್ಲಿ ನಡೆದ ಪಂದ್ಯಗಳಲ್ಲಿ ವಿಜಯ ಸಾಧಿಸಿತು. ಅಮರ್ ಸಿಂಗ್‌ರವರೇ  ಈ ಎರಡೂ ಟೆಸ್ಟ್ ಪಂದ್ಯಗಳ ವಿಜಯದ ಶಿಲ್ಪಿ, ಕಲ್ಕತ್ತದಲ್ಲಿ ೧೪೨ ರನ್‌ಗಳನ್ನಿತ್ತು ಏಳು ವಿಕೆಟ್‌ಗಳನ್ನು ಅಮರ್‌ಸಿಂಗ್‌ರವರು ಸಂಪಾದಿಸಿದರು. ಮದರಾಸಿನಲ್ಲಿ ಇನ್ನೂ ಉತ್ತಮ ಎನ್ನಬಹುದಾದ ಬೌಲಿಂಗ್ ಪ್ರದರ್ಶನವನ್ನಿತ್ತರು. ಇಂಗ್ಲೆಂಡಿನ ಈ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್‌ನಲ್ಲಿ ೩೪ ರನ್ನುಗಳನ್ನು ನೀಡಿ ೫ ವಿಕೆಟ್‌ಗಳನ್ನು ಪಡೆದರೆ; ದ್ವಿತೀಯ ಇನ್ನಿಂಗ್ಸ್‌ನಲ್ಲಿ ೩೮ ರನ್ನಗಳನ್ನಿತ್ತು ೬ ವಿಕೆಟ್‌ಗಳನ್ನು ಪಡೆದರು. ಹೀಗೆ ಒಟ್ಟು ೯೬ ರನ್ ಗಳಿಗೆ ಹನ್ನೊಂದು ವಿಕೆಟ್‌ಗಳನ್ನು ಪಡೆದರು.

ರಣಜಿ ಪಂದ್ಯಾವಳಿಯಲ್ಲಿ  ಶ್ರೇಷ್ಠ ಪ್ರದರ್ಶನ

೧೯೩೬ ರಲ್ಲಿ ಅಮರ್‌ಸಿಂಗ್‌ರವರು  ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಮರ್‌ಸಿಂಗ್‌ರವರು ನೀಡಿದ ಶ್ರೇಷ್ಠ ಪ್ರದರ್ಶನ ಅದು. ಅವರು ಆಗ ನವಾನಗರ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅನೇಕ ಉತ್ತಮ ಬ್ಯಾಟುಗಾರರನ್ನು ಹೊಂದಿದ್ದ ಮುಂಬಯಿಯ ವಿರುದ್ಧ ಅವರು ಎಂಟು ವಿಕೆಟ್ ಗಳಿಸಿದರು. ಅವರು ಪಂದ್ಯದಲ್ಲಿ ೨೮.೨ ಓವರ್‌ಗಳನ್ನು ಬೌಲ್ ಮಾಡಿದರು. ಅವುಗಳಲ್ಲಿ ಹತ್ತು ಮೆಯ್ಡನ್‌ಗಳು, ಅವರು ಕೇವಲ ೬೨ ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಪಡೆದರು. ೧೯೩೬ ರಲ್ಲಿ ಅವರು ೧೬.೮೨ ರ ಸರಾಸರಿಯಲ್ಲಿ ಒಟ್ಟು ೨೮ ವಿಕೆಟ್‌ಗಳನ್ನು ಪಡೆದರು.

ಮೃತ್ಯು ಔಟ್ ಮಾಡಿತು

೧೯೩೭-೩೮ ರಲ್ಲಿ ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬಯಿ ವಿರುದ್ಧ ಆಡಿದಾಗ ಅದ್ಭುತ ಪ್ರದರ್ಶನವನ್ನು ನೀಡಿದರು. ೧೬೦ ರನ್‌ಗಳನ್ನು ಮಾಡಿ ಔಟಾಗದೆ ಉಳಿದರು. ಕೇವಲ ೨೨ ರನ್ನುಗಳನ್ನು ಕೊಟ್ಟು ಆರು ವಿಕೆಟ್‌ಗಳನ್ನು ಪಡೆದರು.

೧೯೩೯ರಲ್ಲಿ ಪ್ರಪಂಚದ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಯುದ್ಧ ನಡೆಯುತ್ತಿದ್ದ ವರ್ಷಗಳಲ್ಲಿ ಕ್ರಿಕೆಟ್ ತಂಡಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ಪಂದ್ಯಗಳನ್ನಾಡುವುದು ಸಾಧವೇ ಇರಲಿಲ್ಲ. ಈ ಯುದ್ಧ ಪ್ರಾರಂಭವಾದಾಗ ಅಮರ್ ಸಿಂಗ್‌ರಿಗೆ ಇಪ್ಪತ್ತೊಂಬತ್ತು ವರ್ಷ. ಮತ್ತೆ ಅವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲೇ ಇಲ್ಲ. ೧೯೪೦ ರಲ್ಲಿ ನಿಧನರಾದರು.

ಅಮರ್ ಸಿಂಗ್‌ರವರು ಸಾಮಾನ್ಯ ಲೀಗ್ ಪಂದ್ಯದಿಂದ ಹಿಡಿದು ಟೆಸ್ಟ್ ಪಂದ್ಯದವರೆವಿಗೂ ಉತ್ತಮಮಟ್ಟದ ಬೌಲಿಂಗ್ ಪ್ರದರ್ಶನವಿತ್ತು ಒಂದೇ ಮಟ್ಟದ ಸ್ಥಿರತೆಯನ್ನು ಕಾಪಾಡಿಕೊಂಡು ಬರುತ್ತಿದ್ದರು. ತಮ್ಮ ತಂಡದ ಸೋಲು ನಿಶ್ಚಿತ ಎನಿಸಿದಾಗಲೂ ಮತ್ತು ಎದುರಾಳಿ ತಂಡ ಮೈಲುಗೈ ಪಡೆದಾಗಲೂ ವಿಚಲಿತರಾಗದೇ ಉತ್ಸಾಹ ಕಳೆದುಕೊಳ್ಳದೇ ಬೌಲಿಂಗ್ ಮಾಡುತ್ತಿದ್ದರು.

ವಿಶಿಷ್ಟಕಟ್

ನೀಳ ಕೈಗಳ ಅಮರ್ ಸಿಂಗ್ ಚೆಂಡನ್ನು ಸೊಗಸಾಗಿ ‘ಕಟ್’ ಮಾಡುತ್ತಿದ್ದರು. ಬಲಗೈ ಆಟಗಾರರನ್ನು ತಮ್ಮ‘ಸ್ಟಿಂಗ್’ನ  ಸೊಗಸಿನಿಂದ ಅಪಾರ ತೊಂದರೆಗೆ ಈಡು ಮಾಡುತ್ತಿದ್ದರು. ದೂರದಲ್ಲಿ ಪಿಚ್ ಆದ ಬಾಲನ್ನು ನೋಡಿ ಬ್ಯಾಟುಗಾರ ವಿಕೆಟ್‌ನ ಸಮೀಪ ಬಾಲು ಬರುವುದಿಲ್ಲ ಎಂದು ಅಂದುಕೊಂಡರೆ ತೀರಿತು. ಆತ ಬೌಲ್ಡ್ ಆಗಿಯೋ ಅಥವಾ ಕ್ಯಾಚಿತ್ತೋ ಔಟಾಗಬೇಕಾಗಿತ್ತು, ಈ ಎಸೆತವನ್ನು ಅಮರ್ ಸಿಂಗ್ ಬಹಳ ಪರಿಣಾಮಕಾರಿಯಾಗುವಂತೆ  ಬಳಸಿ ಕೊಳ್ಳುತ್ತಿದ್ದರು. ಇಂಗ್ಲೆಂಡ್‌ನಲ್ಲಿ  ಎರಡೂ ರೀತಿಯಲ್ಲಿ ‘ಕಟ್’ ಮಾಡಿ ಸಾಕಷ್ಟು ಹಳೆಯದಾದ ಚೆಂಡಿನಲ್ಲೂ ಪರಿಣಾಮಕಾರಿ ಬೌಲರ್ ಕಾಣುತ್ತಿದ್ದರು ಅಮರ್ ಸಿಂಗ್. ಚೆಂಡಿನ ವೇಗದಲ್ಲೂ ಪ್ರತಿಸ್ಪರ್ಧಿ ಬ್ಯಾಟುಗಾರನನ್ನು ಧೃತಿಗೆಡಿಸುತ್ತಿದ್ದರು. ಅಮರ್‌ಸಿಂಗ್ ಬೌಲಿಂಗ್ ಮಾಡುವಾಗ ಹೆಚ್ಚಿನ ‘ದೂರ’ವನ್ನೇನೂ ಕ್ರಮಿಸುತ್ತಿರಲಿಲ್ಲ. ಆದರೆ ಯಾವ ಬ್ಯಾಟುಗಾರನೂ ಸಹ ಇವರ ಬೌಲಿಂಗ್‌ನಲ್ಲಿ ‘ಪಿಚ್’ ಆದ ಚೆಂಡು ಯಾವ ವೇಗದಲ್ಲಿ ಬರುತ್ತಿದೆ ಎಂದು ನಿರೀಕ್ಷಿಸುವ ಹಾಗಿರಲಿಲ್ಲ.

ಹೆಚ್ಚು ರನ್  ಕೊಡುತ್ತಿರಲಿಲ್ಲ

ಅಮರ್ ಸಿಂಗ್‌ರ ಬೌಲಿಂಗ್ ಅಂಕಿ ಅಂಶಗಳನ್ನು ಗಮನಿಸಿದವರಿಗೆ ಒಂದು ವೈಶಿಷ್ಟ್ಯ ತಟಕ್ಕನೆ ಗೋಚರವಾಗುತ್ತದೆ. ಅವರು ಸರಾಸರಿ ಒಂದು ಓವರ್‌ಗೆ ಎರಡು ರನ್‌ಗಳಿಗಿಂತ ಹೆಚ್ಚು ನೀಡುತ್ತಿರಲಿಲ್ಲ. ಹೆಚ್ಚಿಗೆ ಮೇಡನ್ ಓವರ್‌ಗಳಿಸುತ್ತಿದ್ದವರಲ್ಲಿ ಭಾರತದಲ್ಲಿ ಅಮರ್ ಸಿಂಗ್‌ರವರೇ ಪ್ರಮುಖವಾಗಿ ಕಾಣಿಸುತ್ತಾರೆ. ಅಮರ್ ಸಿಂಗ್‌ರವರು ನಿಷ್ಕೃಷ್ಟವಾಗಿ ಆಗಿ ಬೌಲಿಂಗ್ ಮಾಡುತ್ತಿದ್ದರು. ಅವರು ‘ಲೂಸ್’ ಬಾಲ್‌ಗಳನ್ನು ಎಸೆಯದೇ ಇದ್ದುದರಿಂದ ಅವರ ಬೌಲಿಂಗ್‌ನಲ್ಲಿ ಬ್ಯಾಟುಗಾರ ರನ್ ಪಡೆಯಲು ತಿಣುಕಾಡಬೇಕಾಗುತ್ತಿತು. ಬ್ಯಾಟುಗಾರನಿಗೆ ಅನುಕೂಲಕಾರಿ ಯಾದಂತಹ ಪಿಚ್‌ಗಳಲ್ಲೂ ಸಹ ಅವರು ಪ್ರತಿಸ್ಪರ್ಧಿ ಬ್ಯಾಟುಗಾರರು ಎಚ್ಚರಿಕೆಯಿಂದ ಆಡಲೇ ಬೇಕೆನ್ನುವಂತೆ ಬೌಲ್ ಮಾಡುತ್ತಿದ್ದರು.

ಜಾಣ್ಮೆಯ  ಬೌಲಿಂಗ್

ಅಮರ್ ಸಿಂಗ್‌ರವರು ಎತ್ತರದ ಆಳು. ಅವರ ಎತ್ತರ ಆರಡಿ ಎರಡು ಅಂಗುಲ. ಸಣ್ಣಗೆ, ಉದ್ದಕ್ಕೆ, ಕಾಣುತ್ತಿದ್ದರು, ‘ಮೀಡಿಯಂ ವೇಗದ ಬೌಲರ್’ ಎಂದು ನಾವೀಗ ಕರೆಯುವ ಬೌಲರ್ ತೆಗೆದುಕೊಳ್ಳುವಷ್ಟೇ ’ಹೆಜ್ಜೆ’ಗಳನ್ನು ಮಾತ್ರ ಬೌಲಿಂಗ್‌ನ ವಿಕೆಟ್‌ನಿಂದ ತೆಗೆದುಕೊಳ್ಳುತ್ತಿದ್ದರು. ಪ್ರತಿಸ್ಪರ್ಧಿ, ಬ್ಯಾಟುಗಾರನ ದೌರ್ಬಲ್ಯವನ್ನು ಪತ್ತೇ ಹಚ್ಚಿ ಬೌಲಿಂಗ್ ಮಾಡುತ್ತಿದ್ದರು ಅಮರ್ ಸಿಂಗ್. ಉತ್ತಮವಾಗಿ ಆಡುತ್ತಿದ್ದ ಎಂತಹ ಸಂದರ್ಭದಲ್ಲೂ ಪ್ರತಿಸ್ಪರ್ಧಿ ಬ್ಯಾಟುಗಾರರು ಇವರಿಂದ ‘ಬೇಸ್ತು’ ಬೀಳುವಂತಾಗುತ್ತಿತ್ತು. ಬೌಲ್ ಮಾಡಲು ಅಮರ್‌ಸಿಂಗ್‌ರವರು ಹೆಚ್ಚು ಶ್ರಮ ವಹಿಸುತ್ತಾರೆ ಎಂದೇನೂ ತೋರುತ್ತಿರಲಿಲ್ಲ. ಆದರೆ ನಿಸ್ಕೃಷ್ಟವಾಗಿ ಬೌಲ್ ಮಾಡುತ್ತಿದ್ದರು. ಇವರು ಬೌಲ್ ಮಾಡಿದ ಚೆಂಡು ಪಿಚ್ಚಾದ ಬಳಿಕ ಬಹಳ ವೇಗವಾಗಿ ಬರುತ್ತಿತ್ತು. ವಿಕೆಟ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡೇ, ಬೌಲಿಂಗ್ ಮಾಡುತ್ತಿದ್ದರು, ಅಮರ್‌ಸಿಂಗ್. ‘ರಕ್ಷಣೆ’ಯ ಫೀಲ್ಡಿಂಗ್ ಅನ್ನು ಎಂದೂ ತಮ್ಮ ಬೌಲಿಂಗ್‌ನಲ್ಲಿ ಇಟ್ಟು ಕೊಂಡಿರುತ್ತಿರಲಿಲ್ಲ. ಎಲ್ಲಾ ಬಗೆಯ ಆಟಗಾರರಿಗೂ ಒಂದೇ ರೀತಿಯ ಕ್ಷೇತ್ರ ರಕ್ಷಣಾ ವ್ಯವಸ್ಥೆ ಮಾಡುತ್ತಿದ್ದ. ಅಮರ್‌ಸಿಂಗ್ ಬಿಗುವಾದ ಬೌಲಿಂಗ್‌ನಿಂದ ಬ್ಯಾಟುಗಾರನಿಗೆ ಸಮಸ್ಯೆಯಾಗಿಯೇ ಉಳಿಯುತ್ತಿದ್ದರು.

ಇಂಗ್ಲೆಂಡಿನ ಖ್ಯಾತ ಕ್ರಿಕೆಟ್ ವಿಮರ್ಶಕ ನೆವಿಲ್ ಕಾರ್ಡಸ್ ಆಗಿನ ಕಾಲದಲ್ಲಿ ಅಮರ್ ಸಿಂಗ್‌ರವರು ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಅಭಿಪ್ರಾಯ ಪಟ್ಟಿದ್ದರು. ಅಮರ್ ಸಿಂಗ್‌ರ ಬೌಲಿಂಗ್‌ನ್ನು ಕಂಡು ಅವರು,‘ಚೆಂಡನ್ನು ಎರಡೂ ರೀತಿಯಲ್ಲೂ ಸ್ವಿಂಗ್ ಮಾಡಬಲ್ಲ ಪ್ರತಿಭೆ ಹೊಂದಿದ್ದ ಅಮರ್‌ಸಿಂಗ್‌ರ ವೇಗದ ಬೌಲಿಂಗ್ ಜೀವಂತವಾಗಿತ್ತು. ಕೆಳಮಟ್ಟದ ಬೌಲಿಂಗ್ ಮಾಡುವುದು ಅವರ ಜಾಯಮಾನವಲ್ಲ ಎಂದು ಬೇಗನೆ ನಾವು ತಿಳಿಯಬಹುದಾಗಿತ್ತು. ಬೌಲಿಂಗ್ ಮಾಡುವಾಗ ಬಹಳ ಕಡಿಮೆ ದೂರವನ್ನು ಕ್ರಮಿಸಿ ಮೇಲೆ ಬಂದ ತೋಳಿನಿಂದ ಶಕ್ತಿ ತುಂಬಿ ಚೆಂಡನ್ನು ಬಿಟ್ಟಾಗ ಜಾವೆಲಿನ್ ಬಂದಷ್ಟು ವೇಗವಾಗಿ ಚೆಂಡು ವಿಕೆಟ್‌ನತ್ತ ಬರುತ್ತಿತ್ತು’ ಎಂದು ಅಮರ್‌ಸಿಂಗ್‌ರ ಬೌಲಿಂಗ್‌ನ್ನು ವರ್ಣನೆ ಮಾಡಿದರು.

ಅಮರ್‌ಸಿಂಗ್‌ರವರು ೧೯೩೯ ರಲ್ಲಿ ಇಂಗ್ಲೆಂಡ್ ವಿರುದ್ಧ ನೀಡಿದ ಪ್ರದರ್ಶನ ಕಂಡು ನೆವಿಲ್ ಕಾರ್ಡಸ್‌ರವರು‘ಇಂತಹ ಆಟಗಾರ ಇಂಗ್ಲೆಂಡಿನ ತಂಡದಲ್ಲಿದ್ದಿದ್ದರೆ ೧೯೩೬-೩೭ರ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು’ ಎಂಬ ಅಭಿಪ್ರಾಯಪಟ್ಟರು.

ಸವಾಲೆಂದರೆ ಖುಷಿ

ತಾವು ಪ್ರತಿನಿಧಿಸುತ್ತಿದ್ದ ತಂಡ ಯಾವುದೇ ಆಗಿದ್ದರೂ ಸಹ ತಮ್ಮ ಸಂಪೂರ್ಣ ಸಾಮರ್ಥ್ಯ ಉಪಯೋಗಿಸಿ ತಮ್ಮ ತಂಡದ ಗೆಲುವಿಗೆ ಸಾಧ್ಯ ವಾದದನ್ನೆಲ್ಲಾ ಮಾಡುತ್ತಿದ್ದರು ಅಮರ್‌ಸಿಂಗ್. ಎದುರಾಳಿ ತಂಡ ಹೆಚ್ಚು ಸಮರ್ಥಶಾಲಿಯಾದಷ್ಟೂ ಅವರು ಹೆಚ್ಚಿನ  ಉತ್ಸಾಹದಿಂದ ಬೌಲಿಂಗ್ ಮಾಡುತ್ತಿದ್ದರು.

ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಆಡಿ ತಮ್ಮ  ತಂಡಕ್ಕೆ ಮೇಲುಗೈ ಒದಗಿಸಿ ಕೊಡುವಂತಹ ಪ್ರತಿಭೆ ಅಮರ್ ಸಿಂಗ್‌ರದಾಗಿತ್ತು. ಬೌಲಿಂಗ್‌ನಲ್ಲಾಗಲೀ ಅಥವಾ ಬ್ಯಾಟಿಂಗ್‌ನಲ್ಲಾಗಲೀ ಅವರು ಕೆಲವೇ ನಿಮಿಷಗಳಲ್ಲಿ ಎದುರಾಳಿಗಳು ‘ಅಮರ್‌ಸಿಂಗ್ ಇಲ್ಲಿದ್ದಾರೆ’ ಎಂಬುದನ್ನು ಮರೆಯಲಾಗದಂತೆ ಮಾಡುತ್ತಿದ್ದರು. ಕ್ರೀಡೆಯ ಗತಿಯನ್ನೇ ಬದಲಿಸುವಷ್ಟು ಸಮರ್ಥರಾಗಿದ್ದರು.

ಬಿರುಸಿನ  ಬ್ಯಾಟಿಂಗ್

ಹೆಚ್ಚು ವೇಗವಾಗಿ ರನ್ ಪಡೆಯುವುದೆಂದರೆ ಅಮರ್‌ಸಿಂಗ್‌ಗೆ ಇಷ್ಟ. ಅವರಾಟ ನೋಡಲು ಪ್ರೇಕ್ಷಕರಿಗೂ ಬಹಳ ಇಷ್ಟ. ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸುವಂತಹ ರೀತಿಯ ಆಕ್ರಮಣಕಾರೀ ಆಟವನ್ನು ಅಮರ್ ಸಿಂಗ್‌ರವರು ಆಡುತ್ತಿದ್ದರು. ರಕ್ಷಣೆಯ ಆಟಕ್ಕೂ ಅವರಿಗೂ ದೂರ. ಸ್ವಲ್ಪ ಕಾಲ ಬ್ಯಾಟ್ ಮಾಡಿದರೂ ಅಮರ್ ಸಿಂಗ್ ಗಳಿಸುತ್ತಿದ್ದ ರನ್‌ಗಳ ಸಂಖ್ಯೆ ನಿಮಿಷಕ್ಕೆ ಮೂರುಪಟ್ಟು ನಾಲ್ಕು ಪಟ್ಟು ಹೆಚ್ಚಿರುತ್ತಿತ್ತು. ‘೧೯೩೪ರಲ್ಲಿ ಮದರಾಸಿನ ಟೆಸ್ಟ್ ಹಾಗೂ ೧೯೩೬ರಲ್ಲಿ ಮ್ಯಾಂಚೆಸ್ಟರ್ ಟೆಸ್ಟ್‌ಗಳಲ್ಲಿ ಅಮರ್‌ಸಿಂಗ್ ಇಂಗ್ಲೆಂಡ್ ವಿರುದ್ಧ ಆಡಿದ ಬ್ಯಾಟಿಂಗ್ ಮರೆಯಲಾಗ ದಂಥಹದ್ದು’ ಎಂದು ಭಾರತದ ಶ್ರೇಷ್ಠ ಆಟಗಾರ ವಿಜಯ ಮರ್ಚೆಂಟ್ ಬಣ್ಣಿಸುತ್ತಾರೆ, ಕಾರಣ, ಪ್ರತಿಸ್ಪರ್ಧಿಗಳ ಬೌಲಿಂಗ್ ಅತ್ಯುತ್ತಮ ಮಟ್ಟದಲ್ಲಿದ್ದು ತಂಡ ಸಂಕಷ್ಟದ ಪರಿಸ್ಥಿತಿ ಎದುರಿಸಿದಾಗಲೂ ಸಹ ಅಮರ್‌ಸಿಂಗ್ ಚೆಂಡನ್ನು ಬೌಂಡರಿಗಟ್ಟುತ್ತಾ ರನ್ ಪ್ರೇರಿಸುತ್ತಾ ಮುನ್ನಡೆಯುತ್ತಿದ್ದರು.

ವಿನಯ

ವಿಕೆಟ್‌ಗೆ ಸಮೀಪದಲ್ಲಿ ಅಮರ್‌ಸಿಂಗ್ ಅತ್ಯುತ್ತಮ ವಾಗಿ ಫೀಲ್ಡ್ ಮಾಡುತ್ತಿದ್ದರು. ’ಷಾರ್ಟ್‌ಫೈನ್‌ಲೆಗ್’ ಹಾಗೂ ’ಬ್ಯಾಕ್ ವರ್ಡ್ ಷಾರ್ಟ್‌ಲೆಗ್’ ನಲ್ಲಿ ನಿಂತು ಅತಿ ಕಠಿಣ ಎನ್ನಬಹುದಾದ ಕ್ಯಾಚುಗಳನ್ನು ತೀರಾ ಸುಲಭವಾಗಿ ಹಿಡಿಯುತ್ತಿದ್ದರು. ಸ್ಲಿಪ್‌ನಲ್ಲಿಯೂ ಸಹ ಅವರು ಉತ್ತಮ ಕ್ಷೇತ್ರರಕ್ಷಕರೆನಿಸಿಕೊಂಡಿದ್ದರು. ಇದಕ್ಕೆ ಕಾರಣ ಅವರು ಅತ್ಯಂತ ಜಾಗರೂಕತೆಯಿಂದ ಇರುತ್ತಿದ್ದುದು, ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲೂ ಉತ್ತಮ ಆಟ ಆಡುತ್ತಾ ಬಂದ ಅಮರ್ ಸಿಂಗ್ ಯಶಸ್ಸಿನಿಂದ ಹೆಚ್ಚಿನ ವಿನಯ ಕಲಿತರು. ಅತಿಸರಳ ಮನಸ್ಸಿನವರಾಗಿದ್ದ ಅಮರ್‌ಸಿಂಗ್ ಎಂತಹವರನ್ನೂ ತಮ್ಮ ನಡೆನುಡಿಗಳಿಂದ ಸ್ನೇಹಿತರನ್ನಾಗಿ ಮಾಡಿಕೊಂಡು ಬಿಡುತ್ತಿದ್ದರು. ಕೀರ್ತಿ ತಾನೇ ತಾನಾಗಿ ಬಂದರೂ ಕ್ರೀಡೆಯಲ್ಲಿ ತಾವು ಪಾರಂಗತರೆಂದು ಕೊಳ್ಳಲಿಲ್ಲ. ಬದಲಿಗೆ ಇನ್ನೂ ಕಲಿಯಬೇಕಾದ್ದಿದೆ ಎಂದು ನಿಷ್ಠೆಯಿಂದ ಅಭ್ಯಾಸದಲ್ಲಿ ತೊಡಗುತ್ತಿದ್ದರು. ಅವರು ವಿದೇಶ ಪ್ರವಾಸ ಮಾಡಿ ಬಂದರೂ ಸರಳ ಜೀವಿಗಳಾಗಿದ್ದರು.

ಅಮರ್‌ಸಿಂಗ್ ಬೇರೆಯ ಆಟಗಾರರ ಪ್ರತಿಭೆಯನ್ನು ಬೇಗನೇ ಗುರುತಿಸಿ ಅವರ ಆಟವನ್ನು ಪ್ರಶಂಸಿಸುತ್ತಿದ್ದರು. ವಿಜಯ ಮರ್ಚೆಂಟ್‌ರ ಶ್ರೇಷ್ಠ ಬ್ಯಾಟಿಂಗ್ ಪ್ರತಿಭೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ವಿಜಯ ಮರ್ಚೆಂಟ್ ಸಹ ಅಮರ್‌ಸಿಂಗ್‌ರ ಪ್ರಚಂಡ ಪ್ರತಿಭೆಯನ್ನು ಮೆಚ್ಚಿಕೊಂಡರು.

ಮತ್ತೆ ಇಂತಹ ಆಟಗಾರ ಹುಟ್ಟಲಿಲ್ಲ

ಅಮರ್ ಸಿಂಗ್‌ರ ಬಗ್ಗೆ ಹದಿನೇಳು ವರ್ಷಗಳ ಹಿಂದೆ ವಿಜಯ ಮರ್ಚೆಂಟ್ ಹೀಗೆ ಹೇಳಿದರು ‘ಜನಗಳನ್ನು ರಂಜಿಸುವಂತಹ ಮತ್ತೊಬ್ಬ ಉತ್ತಮ ಆಲ್ ರೌಂಡ್ ಆಟಗಾರ ಅಮರ್ ಸಿಂಗ್‌ರ ನಂತರ ಹುಟ್ಟಲಿಲ್ಲ. ಈಗಲೂ ಸಹ ಅಮರ್ ಸಿಂಗ್‌ರವರಂತಹ ಆಕ್ರಮಣಕಾರೀ ಆಟಗಾರರನ್ನು ನಾವು ತಯಾರುಮಾಡಿಲ್ಲವೆಂದು ನಾನು ಧೈರ್ಯವಾಗಿ ಹೇಳಬಲ್ಲೆ’. ಈಗಲೂ ಸಹ ಅವರ ಮಾತು ಅಕ್ಷರಶಃ ಸತ್ಯವಾಗಿ ಉಳಿದಿದೆಯಲ್ಲದೆ ಅವರಿಗೆ ಹೋಲಿಕೆಯಾಗಬಲ್ಲಂತಹ ಮತ್ತೊಬ್ಬ ಆಟಗಾರರನ್ನು ಭಾರತದಲ್ಲಿ ಕಾಣುವುದು ಕಷ್ಟ. ಭಾರತದ ವಿರುದ್ಧ ಭಾಗವಹಿಸಿದ ಇಂಗ್ಲೆಂಡಿನ ತಂಡಗಳಲ್ಲಿ ಆಗಿನ ದಿನಗಳಲ್ಲಿ ಪ್ರಪಂಚದ ಶ್ರೇಷ್ಠ ಆಟಗಾರರು ಸೇರಿದ್ದರು; ಇದನ್ನು ನೆನೆದಾಗ ಆ ಪೈಪೋಟಿಯಲ್ಲಿ ಉಜ್ವಲವಾಗಿ ಬೆಳಗಿದ ಅಮರ್ ಸಿಂಗ್‌ರ ಪ್ರತಿಭೆ ಗೋಚರವಾಗುತ್ತದೆ.

ಒಟ್ಟು ಏಳು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ ಅಮರ್‌ಸಿಂಗ್ ಒಟ್ಟು ೧೪ ಬಾರಿ ಅಡಿ ೨೯೨ ರನ್ ಗಳಿಸಿದರು.  ಅವರ ಬ್ಯಾಟಿಂಗ್ ಸರಾಸರಿ ೨೨.೫೫. ಬೌಲರ್ ಆಗಿ ಅವರು ಏಳು ಟೆಸ್ಟ್ ಪಂದ್ಯಗಳಲ್ಲಿ ೩೬೩.೪ ಓವರ್‌ಗಳಲ್ಲಿ ೯೫ ಮೇಡನ್‌ಗಳನ್ನು ಮಾಡಿ ೮೫೮ ರನ್‌ಗಳನ್ನು ಕೊಟ್ಟು ೨೮ ವಿಕೆಟ್‌ಗೊಳಿಸಿದರು. ಒಂದು ವಿಕೆಟ್‌ಗೆ ಅವರು ಸರಾಸರಿ ೩೦.೬೪ ರನ್‌ಗಳನ್ನು ಕೊಟ್ಟರು.

ಎರಡನೆಯ ವಿಶ್ವಯುದ್ಧದ ಫಲವಾಗಿ ಭಾರತದ ಕ್ರಿಕೆಟ್ ಪ್ರವಾಸ ನಿಂತಿತು. ಅನಂತರ ಅಮರ್ ಸಿಂಗ್ ಆಡಲಾಗಲಿಲ್ಲ. ಕ್ರೂರವಿಧಿ ಅವರನ್ನು ಬಲಿ ತೆಗೆದುಕೊಂಡಿತು. ನ್ಯುಮೋನಿಯಾ ರೋಗದಿಂದ ನರಳುತ್ತಿದ್ದ ಅವರು ೧೯೪೦ ನೇ ಇಸವಿಯ ಮೇ ತಿಂಗಳ ೨೧ನೆಯ ತಾರೀಖು ನಿಧನರಾದರು. ಆಗ ಅವರಿಗಿನ್ನೂ ೩೦ ನೆಯ ವರ್ಷ.

ಇಂದು ಇಂತಹವರು ಬೇಕು.

ಅಮರ್ ಸಿಂಗ್‌ರು ಆಡುತ್ತಿದ್ದುದು ಭಾರತವು ಅಂತರರಾಷ್ಟ್ರೀಯ ಕ್ರಿಕೆಟ್ಟಿನ ಜಗತ್ತನ್ನು ಪ್ರವೇಶಿಸುತ್ತಿದ್ದ ಕಾಲದಲ್ಲಿ ಎಂ.ಸಿ.ಸಿ. ತಂಡ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿದ್ದೆ ೧೯೨೬ ರಲ್ಲಿ. ಪಾರ್ಸಿ ತಂಡಗಳು ಭಾರತದಿಂದ ಹೋಗಿ ಇಂಗ್ಲೆಂಡಿನಲ್ಲಿ ೧೮೮೬ ರಲ್ಲಿ ಮತ್ತು ೧೮೮೮ ರಲ್ಲಿ ಪ್ರವಾಸ ಮಾಡಿದ್ದರೂ ಭಾರತ ಇಂಗ್ಲೆಂಡಿನ ಮೇಲೆ ಮೊಟ್ಟಮೊದಲನೆಯ ಟೆಸ್ಟ್ ಪಂದ್ಯ ಆಡಿದ್ದು ೧೬೩೨ ರಲ್ಲಿ ಈ ಪಂದ್ಯದಲ್ಲಿ ಅಮರ್‌ಸಿಂಗ್‌ರು ಭಾಗವಹಿಸಿದ್ದರು. ಭಾರತವು ಇಂಗ್ಲೆಂಡಿನ ಮೇಲೆ ಜಯಗಳಿಸಿದ್ದು ೧೯೫೨ ರಲ್ಲಿ ಅಮರ್‌ಸಿಂಗ್‌ರು ತೀರಿಕೊಂಡ ಹನ್ನೆರಡು ವರ್ಷಗಳ ನಂತರ. ರಾನ್ ಜಿ ಪಂದ್ಯಾವಳಿ ಪ್ರಾರಂಭವಾದದ್ದೇ ೧೯೩೪ ರಲ್ಲಿ ದುಲೀಪ್ ಟ್ರೋಫಿ ಪಂದ್ಯಾವಳಿ ಪ್ರಾರಂಭವಾದದ್ದು ೧೯೬೧ ರಲ್ಲಿ. ಹೀಗೆ ಅಮರ್‌ಸಿಂಗ್‌ರು ಕ್ರಿಕೆಟ್‌ನ್ನು ಪ್ರವೇಶಿಸಿದಾಗ ಭಾರತವೂ ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಹೆಸರುಗಳಿಸಲು ಶ್ರಮಿಸುತ್ತಿತ್ತು. ಭಾರತದಲ್ಲೇ ಪ್ರಥಮದರ್ಜೆಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶ ಇದ್ದದ್ದೆ ಕಡಿಮೆ. ಅಮರ್‌ಸಿಂಗ್‌ರು ಒಟ್ಟು ಆಡಿದ್ದು ಏಳೇ ಟೆಸ್ಟ್ ಪಂದ್ಯಗಳಲ್ಲಿ. ಇಷ್ಟಾದರೂ ಇಂದು ಭಾರತದಲ್ಲಿ ವೇಗದ ಬೌಲರ್‌ಗಳಿಲ್ಲ. ಟೆಸ್ಟ್ ಪಂದ್ಯಗಳಲ್ಲಿ ಹೊಸ ಚೆಂಡಿನ ಪ್ರಯೋಜವನ್ನು ಇತರ ದೇಶಗಳ ತಂಡಗಳು ಪಡೆಯುವಂತೆ ಭಾರತದ ತಂಡ ಪಡೆಯಲು ಸಾಧ್ಯವಿಲ್ಲವಾಗಿದೆ. ಇವತ್ತಿಗೂ ಭಾರತದ ಕ್ರಿಕೆಟ್ ತಂಡದ ಬಲಾಬಲಗಳನ್ನು ಚರ್ಚಿಸುವಾಗ, ಭಾರತದ ಕ್ರಿಕೆಟ್ ಇತಿಹಾಸವನ್ನು ನೆನೆಸಿಕೊಂಡಾಗ, ಇಬ್ಬರು ವೇಗದ ಬೌಲರ್‌ಗಳ ವಿಷಯ ತಜ್ಞರು ತುಂಬ ಮೆಚ್ಚಿಕೆಯಿಂದ ಮಾತಾಡುತ್ತಾರೆ. ಮಹಮದ್ ನಿಸ್ಸಾರ್ ಮತ್ತು ಅಮರ್ ಸಿಂಗ್. ಇಬ್ಬರೂ ಜಗತ್ತಿನ ಶ್ರೇಷ್ಠ ಬೌಲರ್‌ಗಳ ಪಂಕ್ತಿಗೆ ಸೇರುವವರೇ, ಮೂವತ್ತೆ ವರ್ಷಕ್ಕೆ ಅಮರ್‌ಸಿಂಗ್‌ರ ಜೀವನ ಮುಕ್ತಾಯವಾದದ್ದು ಭಾರತದ ಕ್ರಿಕೆಟ್ಟಿನ ದೌರ್ಭಾಗ್ಯ. ಅವರು ಶ್ರೇಷ್ಠ ಬೌಲರ್ ಮಾತ್ರವಲ್ಲದೆ ಒಳ್ಳೆಯ ಬ್ಯಾಟ್ಸ್‌ಮನ್ ಮತ್ತು ಸೊಗಸಾದ ಫೀಲ್ಡರ್ ಆಗಿದ್ದರು. ಬೌಲರ್‌ಗಳೆಲ್ಲ ಒಳ್ಳೆಯ ಬ್ಯಾಟ್ಸ್‌ಮನ್ ಆಗಲು ಸಾಧ್ಯವಿಲ್ಲ. ಆದರೆ ಒಂದು ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನೂ ಒಳ್ಳೆಯ ಕ್ಷೇತ್ರರಕ್ಷಣ- ಫೀಲ್ಡರ್ ಆಗುವುದು ಅಗತ್ಯ, ಆಗುವುದು ಸಾಧ್ಯ. ಅಮರ್ ಸಿಂಗ್‌ರಂತಹ ಬೌಲರ್ ಅಂತೂ ಇಂದು ಭಾರತದ ಟೀಮಿಗೆ ಅಗತ್ಯವಾಗಿ ಬೇಕು.