ಅಂದು ದ್ರುಪದೆಯ ಮಾನ ಕಾಯ್ದೇ!
ಬಂದ ಗೆಳೆಯಗೆ ಸಿರಿಯ ಕೊಟ್ಟೆ!
ಹಿಂದೆ ದುಷ್ಟರ ಜೀವ ಹಿಂಡಿದೆ!
ಇಂದು ಹರಿಣನ ಕಾಯೆಲೈ. ||೧೦೧||

ಇಂತು ಭಜಿಸುತ ಮುರನ ವೈರಿಯ,
ಪಿಂತೆ ಮಾಡಿದ ಹರಿಯ ಕಾರ್ಯವ
ನಿಂತ ಮನದಲಿ ನಿಜದಿ ನೆನೆಯುತ,
ನಿಂತ ವೈರಿಯ ನೋಡಿದ. ||೧೦೨||

ಎಳೆಯ ನಗುವನು ಬೀರಿ ಮುದದಿಂ,
ಕೊಳೆಯ ವಸನದ ಬೇಡ ಬೇಗದಿ
ತಳೆದನಾಗಲೆ ದಿವ್ಯ ರೂಪವ
ಇಳೆಯನೆಲ್ಲಿಯು ಬೆಳಗುತ! ||೧೦೨||

ಥಳಿಸಿ ಹೊಳೆಯುವ ದಿವ್ಯರೂಪವ
ಬಳಲಿ ನಿಂದಿಹ ಅಮಲ ನೊಡುತ,
ಹೊಳಪ ಸಹಿಸದೆ ಎವೆಯ ಮುಚ್ಚಿದ
ಖಳರ ವೈರಿಯ ನುತಿಸುತ. ||೧೦೪||

ನಮಿಪೆ ದೇವನೆ! ಕಾವನೆ!
ನಮಿಪೆ ಮೂರ್ತಿಯೆ! ನಮುಪೆ ಕೀರ್ತಿಯೆ!
ನಮಿಪೆ ಕೃಷ್ಣನೆ! ನಮಿಪೆ ವಿಷ್ಣುವೆ!
ನಮಿಪೆ ಜಗದೋದ್ಧಾರನೆ! ||೧೦೫||

ನಮಿಪೆ ಯೋಗವೆ! ನಮಿಪೆ ಸಾಂಖ್ಯವೆ!
ನಮಿಪೆ ಜ್ಞಾನವೆ! ನಮಿಪೆ ಭಕ್ತಿಯೆ!
ನಮಿಪೆ ಕರ್ಮವೆ! ನಮಿಪೆ ಧರ್ಮವೆ!
ನಮಿಪೆ ಜಗದಧಿಮೂರ್ತಿಯೆ! ||೧೦೬||

ನಮಿಪೆ ಜನನವೆ! ನಮಿಪೆ ಮರಣವೆ!
ನಮಿಪೆ ಬೊಮ್ಮನೆ! ನಮಿಪೆ ರುದ್ರನೆ!
ನಮಿಪೆ ಭೂತಃ ದೈವ ಯಜ್ಞವೆ!
ನಮಿಪೆ ದೇವರ ದೇವನೆ! ||೧೦೭||

ನಮಿಪೆ ಅನಲನೆ! ನಮಿಪೆ ಅನಿಲನೆ!
ನಮಿಪೆ ಚಂದ್ರನೆ! ನಮಿಪೆ ಸೂರ್ಯನೆ!
ನಮಿಪೆ ಮೋದವೆ! ನಮಿಪೆ ಚಿಂತೆಯ!
ನಮಿಪೆ ಕೇವಲ ತೇಜಸೆ! ||೧೦೮||

ನಮಿಪೆ ಆದಿಯೆ! ನಮಿಪೆ ಅಂತ್ಯವೆ!
ನಮಿಪೆ ವೇದಃ ಭೇದ ಛೇದನೆ!
ನಮಿಪೆ ಮೇಘವೆ! ನಮಿಪೆ ವೇಗವೆ!
ನಮಿಪೆ ಜಗದಧಿ ಜ್ಞಾನಿಯೆ! ||೧೦೯||

ನಮಾಮಿ ಪಾಪಃ ಪುಣ್ಯರಹಿತನೆ!
ನಮಾಮಿ ಮೋದಃ ಚಿಂತ ರಹಿತನೆ!
ನಮಾಮಿ ಕಾಮಃ ಕ್ರೋಧ ರಹಿತನೆ!
ನಮಾಮಿ ಚಿನ್ಮಯ ರೂಪನೆ! ||೧೧೦||

ನಮಿಪೆ ಹರ್ಷವೆ! ನಮಿಪೆ ಸ್ಪರ್ಶವೆ!
ನಮಿಪೆ ಕಾಂತಿಯೆ! ನಮಿಪೆ ಶಾಂತಿಯೆ!
ನಮಿಪೆ ಹರನೇ! ನಮಿಪೆ ಸ್ಮರನೇ!
ನಮಿಪೆ ಜಗದಧಿ ಕೀರ್ತಿಯೆ! ||೧೧೧||

ನಮಿಪೆ ಭೀತಿಯೆ! ನಮಿಪೆ ನೀತಿಯೆ!
ನಮಿಪೆ ಪ್ರೇಮವೆ! ನಮಿಪೆ ನೇಮವೆ!
ನಮಿಪೆ ಕಾಲನೆ! ನಮಿಪೆ ಲೋಲನೆ!
ನಮಿಪೆ ಎನ್ನಯ ಆತ್ಮವೆ! ||೧೧೨||

ನಮಿಪೆ ತಂದೆಯೆ! ನಮಿಪೆ ತಾಯಿಯೆ!
ನಮಿಪೆ ಮಿತ್ರನೆ! ಮಿತ್ರ ಮಿತ್ರನೆ!
ನಮಿಪೆ ಬಂಧುವೆ! ನಮಿಪೆ ಬಳಗವೆ!
ನಮಿಪೆ ಎನ್ನಯ ಆತ್ಮವೆ! ||೧೧೩||

ನಮಿಪೆ ಬಿತ್ತವೆ! ನಮಿಪೆ ಚಿತ್ತವೆ!
ನಮಿಪೆ ವಿದ್ಯೆಯೆ! ನಮಿಪೆ ಬುದ್ಧಿಯೆ!
ನಮಿಪೆ ಶಕ್ತಿಯೆ! ನಮಿಪೆ ಮುಕ್ತಿಯೆ!
ನಮಿಪೆ ಎನ್ನಯ ಆತ್ಮವೆ! ||೧೧೪||

ಮಹಿಮ, ನಿನ್ನನು ಎಂತು ಪೊಗಳಲಿ?
ಅಹಿಪ ಶಯನನೆ, ನಿನ್ನ ರೂಪವ
ಸಹಿಸಲಾರೆನು; ಶಾಂತನಾಗಲು,
ಸಹಜನಾಗೆಲೊ ಎಂದನು. ||೧೧೫||

ಎಂದು ಪಾಡುತ ಕಣ್ಣ ತೆರೆಯಲು
ಚಂದ ರೂಪವನಲ್ಲಿ ಕಾಣದೆ
ಮಂದ ಭಾಗ್ಯನು ಎನುತ ಮನದಲಿ
ಹಿಂದೆ ನೋಡಿದ ಹಳುವನು. ||೧೧೬||

ತಳಿರ ಮರೆಯಲಿ ಅಡಗಿದೆರಳೆಯ
ಸುಳಿವ ಕಾಣದೆ ಕೌತುಕೆನುತಲಿ
ಗೆಲವಿನಿಂ ಮಾಧವನ ನುತಿಸುತ
ಬಲಿದ ಹಸಿವೆಯ ಮರೆತನು: ||೧೧೭||

ನಿನ್ನ ಭಕ್ತಿಯೆ ರಾಜ್ಯಪದವಿಯು!
ನಿನ್ನ ದಾಸನೆ ಸಕಲರೊಡೆಯನು!
ನಿನ್ನ ನಾಮವೆ ಸ್ವರ್ಗಲೋಕವು!
ನಿನ್ನ ಸೇವೆಯೆ ಮೋಕ್ಷವು! ||೧೧೮||

ನಿನ್ನ ದಾಸರ ದಾಸನಾಗಿಹೆ;
ನಿನ್ನ ಪಾದದ ಧೂಳಿ ಪೂಜಿಪೆ;
ನಿನ್ನ ನೇಮವನೆಂದು ಮರೆಯೆನು;
ನಿನ್ನ ಭಜಿಸುವೆನೆಂದಿಗು. ||೧೧೯||

ಪಾಲನುಂಬುವ ಶಿಶುಗಳೆಲ್ಲರ
ಹಾಲನೀಯುವ ತಾಯಿ ನೀನಹೆ!
ಕಾಲಪಾಶಕೆ ಬೆದರಿ ಕೂಗುವ
ಬಾಲರನು ನೀ ಕಾಯ್ದಪೆ! ||೧೨೦||

ನಚ್ಚಿ ನಿನ್ನನು ಕೆಟ್ಟನಾವನು?
ಕೊಚ್ಚಿ ನಿನ್ನನು ಉಳಿದನಾವನು?
ಅಚ್ಯುತಾ ಸಲಹೆಂದು ಕೂಗಲು
ಮೆಚ್ಚಿ ಕಾಯ್ದಪೆ ಬೇಗದಿ! ||೧೨೧||

ಮಾಯ ರೂಪದಿ ಬಂದು ನೀನು,
ಮಾಯ ರೂಪದ ಹರಿಣನರಸುತ,
ಮಾಯಾವಾಗುತ ಬೇಗದಿಂದಲಿ,
ಮಾಯಬಲವನು ತೋರಿದೆ! ||೧೨೨||

ಹರಿಯ ವೇಗದಿ ಬರಲು ನೀನು
ಹರಿಯ ರೂಪೆಂದರಿಯಲಿಲ್ಲವು;
ಹರಿಣ ಜೀವನುಳುಹಲೋಸುಗ
ಹರಿಯ ರೋಷದಿ ತಡೆದೆನು. ||೧೨೩||

ದಿವಿಜ ವಂದಿತ ನಿನ್ನ ರೂಪವು
ರವಿಯ ತೇಜವ ಮೀರಿ ಬೆಳಗಿತು!
ಭವದ ಚಿಂತೆಯ ದೂರ ಮಾಡಿತು
ಭುವನದಾಶೆಯ ಬಿಡಿಸಿತು. ||೧೨೪||

ಇನ್ನು ನಾನೇ ಧನ್ಯ ಧನ್ಯನು
ಹೊನ್ನು ಎಂಬುದ ಮಣ್ಣು ಎನ್ನುವೆ;
ಮುನ್ನ ಗಳಿಸಿದ ಸಿರಿಯನೆಲ್ಲಂ
ಭಿನ್ನವಿಲ್ಲದೆ ನೂಕುವೆ! ||೧೨೫||