ಸಿರಿಯ ಎನಗೆ ಬೇರೆಯುಂಟೇ
ಕರುಣವಲ್ಲದೆ ದೇವ ನಿನ್ನಯ?
ಶರಣ ರಕ್ಷಕ ನಿನ್ನ ನಂಬಿದೆ
ದುರಿತ ಭಯವನು ನೂಕೆಲೈ. ||೧೨೬||

ಅಮಲನೀಪರಿ ಪಾಡುತಲ್ಲಿರೆ,
ಕಮಲಮಿತ್ರನು ಪಶ್ವಿಮಾದ್ರಿಯ
ಕಮರಿ ಎಡೆಯಲಿ ತೊಳಗಿ ಬೆಳಗುತ
ಚಮರ ಕಿರಣದಿ ಎಸೆದನು! ||೧೨೭||

ಅಗಲಾಗಸದಿಂದ ಹೊರಡುವ,
ರಾಗದಿಂದಲಿ ಮನವ ಸೆಳೆಯುವ,
ನಾಗಶಯನನ ಕೊಳಲಿನಂದದ
ಕೂಗ ಹರುಷದಿ ಕೇಳಿದ: ||೧೨೮||

ಭಕ್ತ ಬೇಗದಿ ಮನೆಗೆ ಪೋಗಲೆ;
ಭಕ್ತಿ ನಿನ್ನದು ತಪಸ ಮೀರಿತು!
ಮುಕ್ತಿ ದಾಯಕನಾದೆ ನೀನು;
ಯುಕ್ತಿ ಮಾತಿದನಾಲಿಸು! ||೧೨೯||

ನುಡಿದ ವಾಣಿಯ ಕೇಳಿ ಅಮಲನು
ಕಡಲಶಯನನ ವಾಣಿ ಎನ್ನುತ
ಒಡನೆ ಬೇಗದಿ ಮನೆಯ ಕಡೆಗೆ
ಅಡವಿಯಿಂದಲಿ ಹೊರಟನು. ||೧೩೦||

ಇತ್ತಲಮಲನ ಮಡದಿ ಮಕ್ಕಳು
ಕತ್ತಲಾದರು ಅಮಲ ಬರದಿರೆ,
ಒತ್ತಿ ಬರುವಾ ದುಃಖದಿಂದಲಿ
ಅತ್ತು ಕರೆದರು ಅಮಲನ. ||೧೩೧||

ಅಮ್ಮ ಪೇಳೈ ತಂದೆ ಎಲ್ಲಿಹ:
ನಮ್ಮನೆಲ್ಲಿಗೆ ಅಗಲಿ ಪೋದನು?
ಸುಮ್ಮನೇತಕೆ ಮನದಿ ಚಿಂತಿಪೆ?
ತಮ್ಮ ಹುಡುಕಲು ಪೋಪನು. ||೧೩೨||

ಮಗಳೆ ಸಂಶಯವೆನ್ನ ಸುಡುತಿದೆ
ಅಗಲಲಿಲ್ಲಾ ನಮ್ಮನೆಂದಿಗು;
ಹಗಲ ಊಟಕೆ ಬರಲೆ ಇಲ್ಲವು;
ಬಗೆಯಲಾರೆನು ಕಷ್ಟವ! ||೧೩೩||

ಪತಿಯನರಸಲು ವನದಲೆಲ್ಲಿಯು
ಸುತನ ಕಳುಹಲು ಮನವು ಬಾರದು;
ಗತಿಯ ಕಾಣದೆ ಅಂಧಕಾರದಿ
ಸುತನೆ ಎಂತುಟು ಅರಸುವೆ? ||೧೩೪||

ಬೆದರೆ ಬೇಡಲೆ ತಾಯೆ ಆಲಿಸು,
ಚದುರತನದಲಿ ಹುಡುಕಿ ಬರುವೆನು;
ಬಿದಿರ ಬೆಳಕಲಿ ಪೋಪೆನೆನ್ನುತ
ಮಧುರನು ನುಡಿದನು. ||೧೩೫||

ಕಣ್ಣನೀರನು ಒರೆಸಿಕೊಳ್ಳುತ,
ಅಣ್ಣನಾಡಿದ ನುಡಿಯನಾಲಿಸಿ,
ಚಿಣ್ಣತಂಗಿಯು ಅಳುವ ದನಿಯಲಿ,
ಅಣ್ಣ ಪೋಗಲೊ ಎಂದಳು. ||೧೩೬||

ಎತ್ತಿ, ಅಳುವಾ ಮುದ್ದು ಬಾಲೆಯ,
ಮುತ್ತು ಕೊಡುತಲಿ ಸುಮ್ಮನಿರುಸುತ,
ಮುತ್ತಿನಂದದ ಕಣ್ಣ ನೀರನು
ಒತ್ತಿ ತೆಗೆದಳು ತಾಯಿಯು ||೧೩೭||

ಆಗ ಮಧುರನು ದೊಡ್ಡ ಬಿದಿರನು
ಭಾಗ ಮಾಡುತ ಪಂಜು ಹೊತ್ತಿಸಿ,
ಬಾಗಿ ನಮಿಸುತ ದೇವ ಮಾತೆಗೆ
ಬೇಗದಿಂ ತಾ ಹೊರಟನು! ||೧೩೮||

ಕಂದ ದಾರಿಯು ಹಾವು ಚೇಳುಗ
ಳಿಂದ ತುಂಬೀ ತುಳುಕುತಿರುವುದು;
ತಂದೆ ಎಲ್ಲಿಯು ಕಾಣದಿರ್ದೊಡೆ
ಬಂದು ಬಿಡುವುದು ಬೇಗನೆ. ||೧೩೯||

ಎಂದ ಮಾತನು ಕೇಳಿ ಮಧುರನು
ವಂದಿಸುತ ತಾ ದೇವ ಮಾತೆಗೆ
ಹಿಂದೆ ಮುಂದೆಯು ನೋಡಿ ಕೊಳ್ಳುತ
ಚಂದದಿಂ ತಾ ನಡೆದನು. ||೧೪೦||

ಪಸರಿಸಿರುತಿಹ ಹೊಲಗಳಲ್ಲಿಯು,
ಹಸುರು ಹುಲ್ಲಿನ ಬಯಲಿನಲ್ಲಿಯು,
ಕೆಸರು ಜೊಂಡಿನ ತಡಿಗಳಲ್ಲಿಯು,
ಉಸಿರು ಬಿಡದೇ ಹುಡುಕಿದ. ||೧೪೧||

ಚಿಕ್ಕತನದಿಂ ಮುದ್ದಿನಿಂದಲಿ
ಅಕ್ಕರಿಂದಾ ಬೆಳೆದ ಬಾಲನು
ಸೊಕ್ಕಿ ಬೆಳೆದಾ ಮುಳ್ಳು ಗಿಡದಲಿ
ಸಿಕ್ಕಿ ಕಷ್ಟದಿ ನಡೆದನು. ||೧೪೨||

ಆಗ ಗಾಲಿಯ ಬೀಸಿ ಬರುತಲಿ
ಆಗಸೆಲ್ಲವು ಮೋಡ ಕವಿಯುತ
ತಾಗಿ ಸಿಡಿಲಿನ ಶಬ್ದ ಮಾಡಲು
ಬೇಗದಿಂ ಮಳೆಸುರಿಯಿತು! ||೧೪೩||

ಬೆಟ್ಟ ಬೆಟ್ಟದ ನೀರು ಹರಿಯಲು
ಕಟ್ಟೆಯೆಲ್ಲವು ಭಾಗವಾಗುತ
ಬಟ್ಟೆ ಬಟ್ಟೆಯ ಅಡ್ಡಗಟ್ಟುತ
ಅಟ್ಟಿ ಬಂದುವು ಮಧುರನ ||೧೪೪||

ಬೆನ್ನನಟ್ಟೀ ಬರುವ ಜಲವನು
ರನ್ನ ಮಧುರನು ನೋಡಿ ಮನದಲಿ
ತನ್ನ ಜೀವವು ಪೋಪುದೆನುತಲಿ
ಚೆನ್ನ ದೇವನ ಪೊಗಳಿದ. ||೧೪೫||

ಕಾಲ ಪುರುಷನ ಕಾಲ ಪುರುಷನೆ
ಬಾಲ ರೂಪದ ರಾಕ್ಷಸಾರಿಯೆ
ಕಾಲರುದ್ರನೆ ಭಕ್ತ ವತ್ಸಲ
ಲೋಲ ರೂಪನೆ ಕಾವುದೈ. ||೧೪೬||

ವಸುಧೆಯಲ್ಲಿಹ ದೀನರೆಲ್ಲರ
ಹಸಿವನೀಗುವ ಕರುಣ ರೂಪನೆ,
ಎಸೆವ ಮುಕುಟದ ಮುಕ್ತಿಗೊಡೆಯನೆ
ಅಸಮ ಭುಜಭಲ ಕಾಯೆಲೈ. ||೧೪೭||

ಕೊಂದ ಪಾಪಗಳಮಿತವೆಲ್ಲವು,
ಹಿಂದೆ ಜನ್ಮದ ದುರಿತ ಕೋಟಿಯು,
ಒಂದು ನಿಮಿಶದಿ ನಿನ್ನ ನೆನೆದರೆ
ಬೆಂದು ಪೋಪವು ಬೇಗದಿ! ||೧೪೮||

ಕಾಮ ಪಿತನೇ ವಾಮ ದೇವನೆ,
ಭೂಮಿಯೆಲ್ಲವ ಪೊರೆಯುವಾತನೆ
ಪ್ರೇಮಮಯನೇ ಸತ್ಯರೂಪನೆ
ನಾಮ ನಿನ್ನದು ಭಾಗ್ಯವು. ||೧೪೯||

ಮೂರು ರೂಪದಿ ಎಸೆವ ದೇವನೆ,
ಮೂರು ಗುಣಗಳ ಮೂಲ ಕವಿಯೇ,
ಮೂರು ಲೋಕದ ಈಶರೀಶನೆ,
ದಾರಿ ಕಾಣೆನು ರಕ್ಷಿಸೈ! ||೧೫೦||